ದಾನವನಾಗುವೆಯಾ ಇಲ್ಲಾ
ಮಾನವನಾಗುವೆಯಾ..?
ನವೆಂಬರ್ ತಿಂಗಳಿನಲ್ಲಿ ವಿಜಯದಶಮಿ, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಾನವರಿಂದ ಪೂಜಿಸಲ್ಪಡುವ ಗೋವುಗಳು, ಡಿಸೆಂಬರ್ ತಿಂಗಳಿನಲ್ಲಿ ಬಕ್ರೀದ್, ಕ್ರಿಸ್ಮಸ್ ಹಬ್ಬದ ಸಡಗರದಲ್ಲಿ ಕತ್ತರಿಸಲ್ಪಟ್ಟು ಮನುಷ್ಯರ ಹೊಟ್ಟೆ ಸೇರುತ್ತವೆ! ಇದೆಂತಹ ವಿಪರ್ಯಾಸ? ಮಾತು ಬರುತ್ತಿದ್ದರೆ ಗೋವುಗಳು ಏನು ಹೇಳುತ್ತಿದ್ದವು? ಇಲ್ಲಿದೆ ಓದಿ ಗೋವಿನ ಅಳಲು:
ನೆತ್ರಕೆರೆ ಉದಯಶಂಕರ
ಪ್ರೀತಿಯ ಮಾನವ,
ನನ್ನನ್ನು 'ಪುಣ್ಯಕೋಟಿ' ಎಂದಾದರೂ ಕರೆದುಕೊ ಅಥವಾ 'ಕಾಮಧೇನು' ಎಂದಾದರೂ ಕರೆದುಕೋ ಅಥವಾ 'ನಂದಿನಿ' ಎಂದಾದರೂ ಕರೆದುಕೋ. ಹೆಸರಿನಲ್ಲಿ ಏನಿದೆ? ಯಾವ ಹೆಸರು ಇದ್ದರೂ ನನ್ನ ಗುಣ ಸ್ವಭಾವದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ತಾನೆ? ಹೇಗಿದ್ದರೂ 'ನಂದಿನಿ' ಹೆಸರಿನಲ್ಲೇ ಪೊಟ್ಟಣದೊಳಗೆ ನನ್ನ ಸವಿಯಾದ ಹಾಲನ್ನು ನಿನ್ನ ಮನೆ ಮಂದಿಗೆ ಪ್ರತಿನಿತ್ಯವೂ ಒದಗಿಸುತ್ತಿದ್ದೇನಲ್ಲ!
ಮೊನ್ನೆ ಮೊನ್ನೆ ನವೆಂಬರ್ ತಿಂಗಳಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ. ಅರಮನೆ ಮೈದಾನದಲ್ಲಿ ಸಡಗರವೋ ಸಡಗರ. ನನ್ನ ಅನೇಕ ಒಡಹುಟ್ಟಿದ ಅಣ್ಣ ತಮ್ಮಂದಿರು, ಅಕ್ಕತಂಗಿಯರು ನೂರಾರು ಸಂಖ್ಯೆಯಲ್ಲಿ ಅಲ್ಲಿದ್ದರು. ಯಜಮಾನ ಸ್ವರೂಪಿಯಾದ ನಿನ್ನ ಅಣ್ಣತಮ್ಮಂದಿರು, ಅಕ್ಕತಂಗಿಯರೂ ಲಕ್ಷಾಂತರ ಮಂದಿ ಅಲ್ಲಿದ್ದರು.
ಅಂದು ಅಲ್ಲಿ 'ಗೋವಿಗೆ' ನಡೆದ ಕೋಟಿ ಆರತಿಯ ದೃಶ್ಯ, ಗೋವಿನ ಮಹತ್ವದ ಬಗ್ಗೆ ನಡೆದ ಪ್ರವಚನ, ನೃತ್ಯ ರೂಪಕಗಳ ದೃಶ್ಯಕಂಡು ನನ್ನ ಕಣ್ತುಂಬಿ ಬಂತು. ಮನುಷ್ಯರಿಗಾಗಿ ನಾನು ಮಾಡುವ ಸೇವೆ ವ್ಯರ್ಥವಲ್ಲ, ಇಂದಿಗೂ ನನ್ನನ್ನು, ನನ್ನ ಒಡಹುಟ್ಟಿದವರನ್ನು ಪೂಜಿಸುವ ಮಂದಿ, ನಮ್ಮ ರಕ್ಷಣೆಗಾಗಿ ಟೊಂಕ ಕಟ್ಟುವ ಮಂದಿ ಇದ್ದಾರೆಂದು ಖುಷಿಯಾಯಿತು.
ಅದೇ ಖುಷಿಯ ಗುಂಗಿನಲ್ಲಿ ಡಿಸೆಂಬರ್ ತಿಂಗಳಿನ ಈ ದಿನಗಳಲ್ಲಿ ನಾನು ಇದೇ ಬೆಂಗಳೂರಿಗೆ ಅಡ್ಡಾಡುತ್ತಾ ಬಂದೆ. ಆದರೆ ಅದೇ ಬೆಂಗಳೂರಿನಲ್ಲಿ ಅಬ್ಬಾ! ಇದೆಂಥ ದೃಶ್ಯ. ನನ್ನ ಸಹೋದರ ಸಹೋದರಿಯರನ್ನು ಇದೇ ಮಾನವರು ನೂರಾರು ಸಂಖ್ಯೆಯಲ್ಲಿ ವ್ಯಾನುಗಳಲ್ಲಿ ತುಂಬಿ ಸಾಗಿಸುತ್ತಿದ್ದಾರೆ. ಅವರ ಕೈ ಕಾಲುಗಳಿಗೆ ಹಗ್ಗ. ಕೆಲವರನ್ನು ಪಾದಯಾತ್ರೆ ಮಾಡಿಸುತ್ತಿದ್ದಾರೆ. ಅದರೆ ಎಂಟು ಹತ್ತು ಮಂದಿ ಸಹೋದರರನ್ನು ಒಂದೇ ಹಗ್ಗದಿಂದ ಬಿಗಿದಿದ್ದಾರೆ.
ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಂತೂ ಉತ್ತರ ಭಾರತದ ಕಡೆಯಿಂದ ತರಲಾದ ನನ್ನ ಅನೇಕಾನೇಕ ಸುಂದರ ಸಹೋದರರಿದ್ದಾರೆ. ಎಲ್ಲರ ಕೈಕಾಲುಗಳಿಗೂ ಹಗ್ಗದ ಬಂಧನ.
ಎಂದೂ ಹುಲ್ಲಿನ, ಹಿಂಡಿಯ ಅಂಗಡಿಯೇ ಇರದಿದ್ದ ಈ ರಸ್ತೆಯಲ್ಲಿ ಈಗ ಹತ್ತಾರು ಹಿಂಡಿ, ಹುಲ್ಲಿನ ಅಂಗಡಿಗಳು ರಾರಾಜಿಸುತ್ತಿವೆ. ಈ ಹಿಂಡಿ, ಹುಲ್ಲು ಈ ನನ್ನ ಸಹೋದರರಿಗೆ 'ಅಂತಿಮ ಸೇವೆ!'.
ನನ್ನ ಸಹೋದರ, ಸಹೋದರಿಯರಷ್ಟೇ ಅಲ್ಲ, ನಮ್ಮೊಂದಿಗೆ ಅಕ್ಕರೆಯಿಂದ ಒಡನಾಡುವ ಅದೆಷ್ಟೋ ಆಡಣ್ಣ, ಆಡಕ್ಕ, ಕುರಿಯಣ್ಣ, ಕುರಿಯಕ್ಕಗಳ ಮಂದೆಯೂ ಇದೆ. ಅವರ ಕೈಕಾಲುಗಳಿಗೂ ಹಗ್ಗದ ಬಂಧನ.
ನನಗೆ ಗೊತ್ತು. ಈ ರಸ್ತೆಯಲ್ಲಿಯೇ ಒಂದು ಕಸಾಯಿ ಖಾನೆ ಉಂಟು. ಮಾನವ, ನಿಮಗೆ ಸದಾ ಕಾಲ ಕಾನೂನು ರೀತಿ ನೀತಿಗಳನ್ನು ನೆನೆಪಿಸಿಕೊಡುವ ಹೈಕೋರ್ಟ್ ಉಂಟಲ್ಲ, ಅದು ಈ ಕಸಾಯಿ ಖಾನೆಯನ್ನು ಬೆಂಗಳೂರಿನಿಂದ ಹೊರಕ್ಕೆ ಸಾಗಿಸಬೇಕು ಎಂದು ಎಷ್ಟೋ ಸಮಯದ ಹಿಂದೆಯೇ ಆಜ್ಞಾಪಿಸಿತ್ತು. ಆದರೆ ಆ ಕೆಲಸ ಇನ್ನೂ ಆಗಿಲ್ಲ.
ಈ ಕಸಾಯಿ ಖಾನೆ ನನ್ನಂಥವರು, ಈಗ ಬಂದಿದ್ದಾರಲ್ಲ ನನ್ನ ಸಹೋದರ ಸಹೋದರಿಯರು, ಆಡಣ್ಣ, ಆಡಕ್ಕ, ಕುರಿಯಣ್ಣ, ಕುರಿಯಕ್ಕ ಇಂತಹರನ್ನೆಲ್ಲ ವಧಿಸಲಿಕ್ಕಾಗಿಯೇ ಇರುವ ಜಾಗ! ಈ ರಸ್ತೆಯಲ್ಲಿ ಅಡ್ಡಾಡಿದ ನನ್ನ ಹಲವಾರು ಮಂದಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಇಲ್ಲಿ ನಡೆಯುವ 'ಹತ್ಯಾಕಾಂಡ'ದ ಬಗ್ಗೆ ನನಗೆ ಹೇಳಿದ್ದಾರೆ. ಕತ್ತಿಗೆ ಕೊಡಲಿ ಬೀಳುವ ಹೊತ್ತಿನಲ್ಲಿ ಕೇಳುವ ಆರ್ತನಾದದ ದನಿಯಿಂದ ನೊಂದು ಬಸವಳಿದಿದ್ದಾರೆ.
ಮಾನವ, ನಿನಗೆ ಗೊತ್ತಿರಬೇಕಲ್ಲ, ಅಮೆರಿಕದಲ್ಲಿ ಒಂದು ಮಾಂಸ ಮಾರುವ ಕಂಪೆನಿ ಉಂಟಂತೆ. 'ಮೆಕ್ಡೊನಾಲ್ಡ್' ಎಂದೋ ಏನೋ ಅದರ ಹೆಸರಂತೆ. ದನ-ಕರು, ಕುರಿ-ಆಡು, ಹಂದಿಗಳನ್ನು ಕೊಂದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ 'ಮಾಂಸ' ಮಾರಾಟ ಮಾಡುವ ಪ್ರಪಂಚದ ಬಲುದೊಡ್ಡ ಕಂಪೆನಿ ಅದಂತೆ. ಈ ಕಂಪೆನಿಯವರು ಮಾಂಸ ತಯಾರಿಸುವ ಮುನ್ನ ಕಸಾಯಿ ಖಾನೆಯಲ್ಲಿ ದನ-ಕರು, ಆಡು-ಕುರಿ, ಹಂದಿಗಳನ್ನು ಹೇಗೆ ಕೊಲ್ಲುತ್ತಾರೆ ಅಂತ ವಿವರಿಸಿ ಎರಿಕ್ ಶ್ಲಾಸ್ಟರ್ ಎಂಬ ಅಲ್ಲಿನ ಪತ್ರಕರ್ತನೊಬ್ಬ 'ಫಾಸ್ಟ್ ಫುಡ್ ನೇಷನ್' ಎಂಬ ಪುಸ್ತಕವನ್ನೇ ಬರೆದಿದ್ದಾನಂತೆ.
ಪ್ರತಿದಿನ ಈ ಕಂಪೆನಿಯ ಕಸಾಯಿಖಾನೆಯೊಳಕ್ಕೆ ಹೋಗುವ 5000 ದನ, 20,000 ಹಂದಿಗಳು ಮಾಂಸದ ತುಕಡಿಗಳಾಗಿ ಲಕ್ಷಾಂತರ ಪೊಟ್ಟಣಗಳಲ್ಲಿ ಹೊರಬರುತ್ತವಂತೆ.
ಈ ಪತ್ರಕರ್ತ ಮಹಾಶಯ ಬಣ್ಣಿಸಿದ್ದನ್ನು ನೋಡಿ ನನಗೆ ಈ ಚಳಿಯಲ್ಲೂ ಬೆವರುತ್ತದೆ. 'ನೂರಾರು ದನಗಳು ಮಂದೆಯಲ್ಲಿ ಈ ಕಸಾಯಿಖಾನೆ ಒಳಕ್ಕೆ ಬರುತ್ತಿದ್ದಂತೆಯೇ ಸುಮಾರು ಐವತ್ತು ಮಂದಿಯ ಸಮೂಹ ಈ ದನಗಳ ಹಣೆಗೆ ಗುರಿಯಿಟ್ಟು ಗುಂಡು ಹಾರಿಸುತ್ತದೆ. ಈ ಗುಂಡೇಟಿಗೆ ದನಗಳು ಮೂರ್ಛೆ ಬೀಳುತ್ತವೆ. ಮೂರ್ಛೆ ಬಿದ್ದ ಈ ದನಗಳ ಕುತ್ತಿಗೆಗೆ ಸರಪಣಿ ಹಾಕಿ ಅದನ್ನು ಕ್ರೇನಿನಲ್ಲಿ ಇಟ್ಟು ಹದಿನೈದು ಇಪ್ಪತ್ತು ನಿಮಿಷ ಗಾಳಿಯಲ್ಲಿ ಎತ್ತಿ ಹಿಡಿದಿಡುತ್ತಾರೆ. ಕುತ್ತಿಗೆ ಮೃದುವಾಗಿ ನೀಳವಾಗಲಿ ಹಾಗೂ ಮಚ್ಚಿನಲ್ಲಿ ಸುಲಭ ಹೊಡೆತಕ್ಕೆ ಸಿಗಲಿ ಎಂದು ಈ ಕಸರತ್ತು. ದನವನ್ನು ಕ್ರೇನಿನಿಂದ ಇಳಿಸುತ್ತಿದ್ದಂತೆಯೇ ಮಚ್ಚಿನೇಟು! ರಕ್ತದ ಸಿಡಿತ. ಅನಂತರ ಕನ್ವೇಯರ್ ಬೆಲ್ಟ್ ಮೂಲಕ ಸಾಗಿಸಿ, ಮುಂದಿನ ಹಂತದಲ್ಲಿ ಮಾಂಸ, ಚರ್ಮ, ಮೂಳೆ ಬೇರ್ಪಡಿಸಲಾಗುತ್ತದೆ. ಬಳಿಕ ಮಾಂಸದ ಪರಿಷ್ಕರಣೆ. ಒಂದು ತಾಸಿಗೆ 600 ದನ, 800 ಹಂದಿಗಳ ರುಂಡ-ಮುಂಡ ಬೇರ್ಪಡಿಸುವ ಈ ಕಸಾಯಿಖಾನೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ..!'
ಅಬ್ಬಬ್ಬಾ..! ಮುಂದಕ್ಕೆ ಓದುವುದೇ ಬೇಡ. ಪ್ರತಿದಿನ ಉತ್ಕೃಷ್ಟ ಆಹಾರ ಎಂದು ಇದೇ ಮಾನವರು ಕಂಡು ಹಿಡಿದ ಹಾಲು, ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆ, ಇವರ ಕ್ಯಾನ್ಸರ್, ಚರ್ಮರೋಗ, ರಕ್ತದೊತ್ತಡವೇ ಮುಂತಾದ ನೂರಕ್ಕೂ ಹೆಚ್ಚು ರೋಗಗಳಿಗೆ ಔಷಧಿಯಾದ ಮೂತ್ರ, ಪ್ರತಿನಿತ್ಯ ಇವರು ಉಣ್ಣುವ ಅನ್ನ, ರಾಗಿ, ಗೋಧಿ, ಜೋಳ ಸೇರಿದಂತೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೆ ಅತ್ಯಂತ ಶ್ರೇಷ್ಠ ಎನ್ನಲಾಗಿರುವ ಸಾವಯವ ಗೊಬ್ಬರಕ್ಕೆ ಬೇಕಾದ ಮೂಲ ದ್ರವ್ಯ ಸಗಣಿಯನ್ನು ಕೊಟ್ಟದ್ದಕ್ಕೆ ನಮಗೆ ಮಾಡುವ ಪ್ರತಿ ಉಪಕಾರವೇ ಇದು!
ನಮ್ಮ ಸಹೋದರರು ಇವರ ಹೊಟ್ಟೆ ತುಂಬಿಸಲೆಂದು ಪ್ರತಿದಿನ ನೊಗ ಹೊತ್ತು ಗದ್ದೆಗಳಲ್ಲಿ ಉತ್ತದ್ದಕ್ಕಾಗಿ, ಅಂಗಡಿಗಳಿಂದ ನಿತ್ಯ ಸರಕನ್ನು ಬಂಡಿಯಲ್ಲಿ ಹೊತ್ತು ತಂದಕ್ಕಾಗಿ ಈ ವೇತನವೇ? ಈಚಿನ ದಿನಗಳಲ್ಲಿ ಇದೇ ಬಂಡಿಯ ಚಕ್ರಕ್ಕೆ 'ವಿದ್ಯುತ್ ಜನರೇಟರ್' ಅಳವಡಿಸಿ ಇಡೀ ದಿನ ಇವರ ಮನೆಗಳ ಒಳಗೆ ದೀಪ ಉರಿಯುವಂತೆ ಮಾಡುವ ವಿದ್ಯುತ್ತನ್ನೂ ಸಂಪಾದಿಸಬಹುದು ಎಂದೂ ಕಂಡು ಕೊಂಡಿದ್ದಾರೆ. ಹಿಂದೆ ನಮ್ಮ ಸಹೋದರರನ್ನೇ ಬಳಸಿ ಬೆಲ್ಲ ತೆಗೆಯಲು ಬಳಸುತ್ತಿದ್ದ ಗಾಣದಲ್ಲೂ ಈ ರೀತಿ ವಿದ್ಯುತ್ ಪಡೆಯಬಹುದಂತೆ.
ಹೇಳುತ್ತಾ ಹೋದಂತೆ ಇನ್ನೂ ನೆನಪಾಗುತ್ತದೆ. ನಮ್ಮ ಸೆಗಣಿಯಿಂದ ಶ್ರೇಷ್ಠ ಗೊಬ್ಬರ ಮಾಡಿಕೊಳ್ಳುವ ಮುನ್ನವೇ ಈ ಮಾನವರ ಅಡುಗೆಗೆ ಬೇಕಾದ 'ಗ್ಯಾಸ್' ತಯಾರಿಸಿಕೊಳ್ಳಲು ಬರುತ್ತದೆ. ಪೇಟೆಯಿಂದ ಬರುವ ಗ್ಯಾಸಿಗೆ ನೂರಾರು ರೂಪಾಯಿ ತೆರಬೇಕು. ನಮ್ಮ ಸೆಗಣಿಯಿಂದ ಬರುವುದು ವೆಚ್ಚವೇ ಇಲ್ಲದ ಗ್ಯಾಸ್. ಅಷ್ಟೇ ಅಲ್ಲ, ನಮ್ಮ ಸೆಗಣಿ, ಮೂತ್ರಗಳನ್ನು ಬಳಸಿಕೊಂಡು ಸೊಳ್ಳೆ ಓಡಿಸುವ ಬತ್ತಿಯಂತೆ, ಸೌಂದರ್ಯ ಹೆಚ್ಚಿಸಿಕೊಳ್ಳುವ ಸೌಂದರ್ಯ ಸಾಧನವಂತೆ, ಸಾಬೂನಂತೆ ಇನ್ನೂ ಏನೇನೋ ಸಾಮಗ್ರಿ ಮಾಡಿಕೊಳ್ಳುತ್ತಾರಂತೆ.....!
ಜೊತೆಗೇ ಸಾಲು ಸಾಲಾಗಿ ತಂದು ಕಟ್ಟಿ ಹಾಕಿದ್ದಾರಲ್ಲ, ಈ ಆಡಣ್ಣ, ಕುರಿಯಣ್ಣ.. ಇವರೆಲ್ಲ ಈ ಮಾನವರಿಗೆ ಮಾಡುವ ಉಪಕಾರವೇನು ಕಮ್ಮಿಯಲ್ಲ. ಈ ಆಡಕ್ಕ ಕೊಡುವ ಹಾಲು ಉಂಟಲ್ಲ ಅದು ಸರ್ವ ಶ್ರೇಷ್ಠ ಹಾಲು, ಅದನ್ನು ಕುಡಿದರೆ ಯಾವ ರೋಗವೂ ಬರುವುದಿಲ್ಲ ಎಂದು ಮಹಾತ್ಮಾ ಗಾಂಧಿ ಎಂಬ ಈ ಭಾರತದ ನೇತಾರ ಹೇಳಿದ್ದಾರಂತೆ. ಅದಕ್ಕಾಗಿಯೇ ಅವರು ಪ್ರತಿನಿತ್ಯ 'ಆಡಿನ' ಹಾಲು ಕುಡಿಯುತ್ತಿದ್ದರಂತೆ.
ಕುರಿಯಣ್ಣನ ಸೇವೆಯೂ ಅಷ್ಟೇ. ಚಳಿ, ಚಳಿ ಎಂದು ಸದಾ ಗಡ ಗಡ ನಡುಗುವ ಈ ಮನುಷ್ಯರಿಗೆ ಈ ಕುರಿಯಣ್ಣನ ಕೂದಲಿನಿಂದ ತಯಾರಾಗುವ ಸ್ವೆಟರ್, ಕಂಬಳಿಯಿಂದಲೇ ರಕ್ಷಣೆ. ಬೆಳಗಾದರೆ ತಾನೇ ಮೊದಲು ಎದ್ದುಕೊಂಡು ಮನುಷ್ಯರನ್ನು ಎಬ್ಬಿಸುವ ಕೋಳಿಯಕ್ಕನ ಕಥೆಯಂತೂ ಹೇಳುವುದೇ ಬೇಡ. ಈ ಟ್ಯಾನರಿ ರಸ್ತೆಯೇ ಅಲ್ಲ, ಯಾವ ರಸ್ತೆಯಲ್ಲೇ ಹೋಗಿ ನೋಡಿ ಕೋಳಿಯಣ್ಣ, ಕೋಳಿಯಕ್ಕಗಳೆಲ್ಲ ಗೂಡಿನೊಳಗೆ ಬಂಧಿ! ಪ್ರತಿನಿತ್ಯ ಕುಡಿಯುವ ನೀರನ್ನು ಶುದ್ಧವಾಗಿ ಇರಿಸುವ ಮೀನನ್ನೂ ಇವರು ಬಿಡುವುದಿಲ್ಲ. ಅದರ ಗಂಟಲಿಗೆ ಕೊಕ್ಕೆ ಹಾಕಿ, ನೀರಿನಿಂದ ಹೊರಕ್ಕೆ ಎಳೆದು ಉಸಿರು ಕಟ್ಟಿಸಿ ಕೊಂದು ತಿನ್ನುತ್ತಾರೆ.
ಈ ಮಾನವ ಸಂತಾನವನ್ನು ಯಾಕೆ 'ಮಾನವ' ಎಂದು ಕರೆಯುತ್ತಾರೋ ಏನೋ? ಮಾನವೀಯತೆ ಮನುಷ್ಯರ ಮೂಲದ್ರವ್ಯವಂತೆ. ಅದು ನಿಜವೇ ಆಗಿದ್ದರೆ ಇವರು ತಮ್ಮಂತೆಯೇ ಜೀವ ಇರುವ ಪ್ರಾಣಿಗಳನ್ನು ಪ್ರತಿನಿತ್ಯ ಅವು ತಮಗೆ ಮಾಡುವ ಸೇವೆಯನ್ನೂ ಲೆಕ್ಕಿಸದೆ ಕೊಲ್ಲಲು ಮನಸ್ಸು ಮಾಡುತ್ತಿದ್ದರೇ?
ಈ ಪ್ರಪಂಚದಲ್ಲಿ ಮಾಂಸಕ್ಕಾಗಿಯೇ ಪ್ರತಿವರ್ಷ 2500 ಕೋಟಿ ಪ್ರಾಣಿಗಳನ್ನು ಕೊಲ್ಲಲಾಗುತ್ತದೆಯಂತೆ. ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಪ್ರತಿವರ್ಷ 90 ಪ್ರಾಣಿಗಳನ್ನು ತಿನ್ನುತ್ತಾನಂತೆ. ಸ್ವಿಜರ್ ಲ್ಯಾಂಡಿನ ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ 8 ದನ, 2 ಮೇಕೆ, 33 ಹಂದಿ, 25 ಇಲಿ, 720 ಕೋಳಿ, 4 ಜಿಂಕೆ, 6 ಕುರಿ, 390 ಮೀನುಗಳನ್ನು ತಿನ್ನುತ್ತಾನಂತೆ.
ಅಬ್ಬಬ್ಬಾ, ಈ ಮನುಷ್ಯರ ಸಹವಾಸವೇ ಬೇಡ. ಬೇರಾವುದಾದರೂ ಮನುಷ್ಯ ಸಂತಾನ ಇಲ್ಲದ ಜಗತ್ತು ಇದ್ದರೆ ಅಲ್ಲಿಗೆ ಓಡಿ ಹೋಗಿ ಬಿಡೋಣ ಅನ್ನಿಸುತ್ತಿದೆ.
ಆದರೆ, ಪುಟ್ಟ ಪುಟ್ಟ ಮಕ್ಕಳನ್ನು ಕಂಡರೆ, ಕ್ಯಾನ್ಸರಿನಂತಹ ಭಯಾನಕ ರೋಗಕ್ಕೆ ತುತ್ತಾಗಿ ನರಳುವವರನ್ನು ಕಂಡರೆ ಇಂತಹವರಿಗೆ ಹಾಲಿನಂತಹ ಶ್ರೇಷ್ಠ ಆಹಾರ, ನಮ್ಮ ಶ್ರೇಷ್ಠ ಔಷಧಿಯಾದ ಮೂತ್ರ, ಶ್ರೇಷ್ಠ ಗೊಬ್ಬರವಾದ ಸೆಗಣಿಯನ್ನು ಕೊಡದೆ ಇರುವುದಾದರೂ ಹೇಗೆ ಎಂಬ ದ್ವಂದ್ವ ಕಾಡುತ್ತದೆ.
ಮಾನವ, ನಿಮ್ಮೆಲ್ಲರನ್ನೂ ಕಟುಕರು, ಹೃದಯ ಇಲ್ಲದವರು ಎಂದು ನಾನು ಖಂಡಿತ ದೂರಲಾರೆ. ಏಕೆಂದರೆ ನವೆಂಬರಿನಲ್ಲಿ ಬೆಂಗಳೂರಿಗೆ ಬಂದಾಗ ಕಂಡಿದ್ದೆನಲ್ಲ. ಇದೇ ಕರ್ನಾಟಕ ರಾಜ್ಯದ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ತಮ್ಮ ಜೀವಮಾನವನ್ನೇ ನಮ್ಮ ಗೋತಳಿಯ ಅದರಲ್ಲೂ ವಿಶೇಷವಾಗಿ ಭಾರತೀಯ ಗೋ ತಳಿಗಳ ಸಂರಕ್ಷಣೆಗಾಗಿ ಮುಡುಪಾಗಿ ಇಟ್ಟಿದ್ದಾರೆ. ನಮ್ಮ 27ಕ್ಕೂ ಅಧಿಕ ಗೋ ಜಾತಿಗಳನ್ನು ಸಾಕಿ ಸಲಹಿ ಸಂರಕ್ಷಿಸುತ್ತಿದ್ದಾರೆ. ಸಮಾಜದಲ್ಲಿ ಗೋ ಸಂರಕ್ಷಣೆ, ಸಂವರ್ಧನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಗೋವಿನಿಂದ ಹಾಲು ಮಾತ್ರವೇ ಅಲ್ಲ, ಅದಕ್ಕೂ ಹೆಚ್ಚಿನ ಆದಾಯ, ಆರೋಗ್ಯ ತರುವ ಮೂತ್ರ, ಸೆಗಣಿ ಲಭಿಸುತ್ತದೆ. ಅದಕ್ಕಾಗಿ ಅವುಗಳನ್ನು ಸಂರಕ್ಷಿಸಿ ಎಂದು ಹೇಳುತ್ತಾ ನಾಡಿನಾದ್ಯಂತ ಸಂಚರಿಸುತ್ತಿದ್ದಾರೆ. ಅವರೊಂದಿಗೆ ಹೆಜ್ಜೆ ಹಾಕಲೂ ಲಕ್ಷಾಂತರ ಮಂದಿ ಸಜ್ಜಾಗಿದ್ದಾರೆ.
ಮಾನವ, ನಿಮ್ಮೆಲ್ಲರಲ್ಲಿ ನನ್ನ ಕಡೆಯದೊಂದು ಪ್ರಾರ್ಥನೆ: ಕೇವಲ ನಮ್ಮ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅಲ್ಲ, ನಿಮ್ಮ ಆರೋಗ್ಯ, ಆದಾಯ, ಸಂಪತ್ತು ಸಮೃದ್ಧಿ ಸಲುವಾಗಿಯಾದರೂ, ನಮ್ಮ ಕತ್ತಿನ ಮೇಲೆ ಹಾಕಲು ಎತ್ತಿದ ಕೊಡಲಿಯನ್ನು ದೂರ ಬಿಸಾಡುವೆಯಾ? ಜಗತ್ತು ಇರುವುದು ಕೇವಲ ಮಾನವರಿಗಾಗಿ ಅಲ್ಲ, ಸಮಸ್ತ ಜೀವ ಸಂಕುಲಕ್ಕಾಗಿ, ಸಮಸ್ತ ಪ್ರಾಣಿ ಪಕ್ಷಿ, ಗಿಡಮರಗಳಿಗಾಗಿ ಎಂಬುದನ್ನು ಅರಿತುಕೊಂಡು ಕಾರ್ಯ ತತ್ಪರನಾಗುವೆಯಾ? ಈಗಾಗಲೇ ಈ ಕಾರ್ಯಕ್ಕಾಗಿ ಟೊಂಕ ಕಟ್ಟಿದವರ ಜೊತೆಗೆ ಕೈಜೋಡಿಸುವೆಯಾ? ತನ್ಮೂಲಕ 'ಮಾನವ' ಎಂಬ ಶ್ರೇಷ್ಠ ಹೆಸರನ್ನು ಸಾರ್ಥಕ ಪಡಿಸಿಕೊಳ್ಳುವೆಯಾ?
ನೀನು ನಿಜವಾಗಿಯೂ 'ದಾನವ'ನಲ್ಲದೆ, 'ಮಾನವ'ನೇ ಆಗಿದ್ದರೆ ನಿನಗೆ ಎದೆಹಾಲು ನೀಡಿ ಜೀವ ರಕ್ಷಿಸಿದ ಮಾತೆ ಸ್ವರೂಪಳಾದ ನನ್ನನ್ನು ಕೇವಲ ನಾಲಿಗೆಯ ಚಪಲಕ್ಕಾಗಿ ಬಲಿಗೊಡಬೇಡ ಎಂದು ಕೋರುವೆ.
ಇತಿ ಸದಾ ನಿನ್ನನ್ನು ಆಶೀರ್ವದಿಸುವ,
ಪುಣ್ಯಕೋಟಿ/ ಕಾಮಧೇನು/ ನಂದಿನಿ
1 comment:
Dear Nethrakere,
Article is indeed thought provoking. But there are some other issues as well, that you might had known if you are into cow rearing...
The managemnet of "unproductive" animals itself is a big issue with small farmers. Some times it accounts for heavy loss rather than profits...
When you say about nature..natural living and all,one should live as per the laws of nature and all...
More precisely according to me rearing cow is itself agaist nature.Coz you just do not have right to tie ropes to these innocent animals in a shed and...using them for our own personal needs...and indeed You must have to drink milk only if cow gives it to you..!!!
Is this practicable?
Similarly,What you are saying is also impractical. it's just ideal kind of situation which doesn't exist at all...
What do you say?
-Jayakishore
Post a Comment