Thursday, February 21, 2008

Consumer Awareness: L.P.G. Cylinder

Almost everyone will observe the negligence during transportation of L.P.G. Cylinders to homes or hotels. Throwing the cylinders from the van to the roads is very common. If some cracks developed while throwing them who will responsible for the possible dangers? Karnataka State Consumers Court, Bangalore has ruled that such attitude is punishable under Consumer Protection Act.

ದಢ ದಢನೆ ಉರುಳುವ

ಎಲ್.ಪಿ. ಜಿ ಸಿಲಿಂಡರ್..!


ಅಡುಗೆ ಅನಿಲ ವ್ಯಾಪಾರದಲ್ಲಿ ಇಂತಹ ಸೇವಾಲೋಪ ಮರುಕಳಿಸದಂತೆ ನೋಡಿಕೊಳ್ಳುವುದೇ ಈ ತೀರ್ಪಿನ ಉದ್ದೇಶ ಎಂದು ಸ್ಪಷ್ಟ ಪಡಿಸಿದ ನ್ಯಾಯಾಲಯವು ಗ್ರಾಹಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಅಡುಗೆ ಅನಿಲ ಸರಬರಾಜುದಾರರಿಗೂ ಸೂಚಿಸುವಂತೆಯೂ ಪ್ರತಿವಾದಿಗಳಿಗೆ ನಿರ್ದೇಶಿಸಿತು.

ನೆತ್ರಕೆರೆ ಉದಯಶಂಕರ

ಅಡುಗೆ ಅನಿಲದ ಸಿಲಿಂಡರುಗಳನ್ನು ದಢದಢನೆ ಕೆಳಕ್ಕೆ ಎಸೆಯುವುದು, ಕಾಲಕಾಲಕ್ಕೆ ಅದರ ಪರೀಕ್ಷೆ ಮಾಡಿಸದೇ ಇರುವುದು ಅನಿಲ ಸರಬರಾಜುದಾರರ ಪಾಲಿನ ಸೇವಾ ನ್ಯೂನತೆ ಆಗುತ್ತದೆ ಎಂಬುದು ನಿಮಗೆ ಗೊತ್ತೇ?

ಅಡುಗೆ ಅನಿಲ ನಿಮ್ಮ ಮನೆಗೆ ಬರುವ ರೀತಿಯನ್ನು ಗಮನಿಸಿದ್ದೀರಾ? ಅಡುಗೆ ಅನಿಲ ಸಿಲಿಂಡರುಗಳನ್ನು ವಾಹನದಿಂದ ಇಳಿಸುವಾಗ ದಢದಢನೆ ಕೆಳಕ್ಕೆ ಎಸೆಯುವ ಪರಿಯನ್ನು ಗಮನಿಸಿದ್ದೀರಾ?

ಈ ರೀತಿ ಎಸೆಯಲ್ಪಡುವ ಅಡುಗೆ ಅನಿಲದ ಸಿಲಿಂಡರಿನಲ್ಲಿ ಎಲ್ಲಾದರೂ ಬಿರುಕು ಉಂಟಾಗಿ ಸೋರಿಕೆ ಸಂಭವಿಸಿದರೆ, ಇಂತಹ ಸಿಲಿಂಡರುಗಳನ್ನು ಕಾಲಕಾಲಕ್ಕೆ ಪರೀಕ್ಷಿಸದೇ ಇದ್ದರೆ ಸೇವಾ ಲೋಪವಾಗುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ.

ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕರೊಬ್ಬರಿಗೆ ನ್ಯಾಯ ಒದಗಿಸಿದೆ.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಶಾಂತಿನಗರದ ಬಿ.ಪಿ. ಸುರೇಶರಾವ್ ಅವರ ಪತ್ನಿ ಕೆ.ಎನ್. ಯಶೋದಾ. ಪ್ರತಿವಾದಿಗಳು: (1) ಕಾರ್ತೀಕ್ ಏಜೆನ್ಸೀಸ್, ವಿ.ವಿ. ಪುರಂ ಬೆಂಗಳೂರು ಮತ್ತು (2) ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಮಹದೇವಪುರ ಪೋಸ್ಟ್ ಬೆಂಗಳೂರು.

ಅರ್ಜಿದಾರರಾದ ಯಶೋದಾ ಅವರು ತಮಗೆ ಸರಬರಾಜು ಮಾಡಲಾಗಿದ್ದ ಅಡುಗೆ ಅನಿಲ ಸಿಲಿಂಡರಿನಲ್ಲಿ ಅನಿಲ ಸೋರಿಕೆ ಆಗುತ್ತಿರುವುದನ್ನು 30-5-2005ರಂದು ಸಂಜೆ 4 ಗಂಟೆಗೆ ಗಮನಿಸಿದರು. ತತ್ಕ್ಷಣವೇ ತಮ್ಮ ಪ್ರದೇಶದ ಪೊಲೀಸ್ ಠಾಣೆಗೆ ಪ್ರತಿವಾದಿ ಸರಬರಾಜುದಾರರ ವಿರುದ್ಧ ದೂರು ನೀಡಿದರು.

ಗಮನಿಸದೇ ಹೋಗಿದ್ದರೆ ಈ ಅನಿಲ ಸೋರಿಕೆಯಿಂದ ಜೀವ ಹಾಗೂ ಆಸ್ತಿಪಾಸ್ತಿಗೆ ಆಗಬಹುದಾಗಿದ್ದ ಅಪಾರ ಹಾನಿ ಬಗ್ಗೆ ಪ್ರತಿವಾದಿ ಸರಬರಾಜುದಾರರ ಗಮನವನ್ನೂ ಸೆಳೆದರು. ಆದರೆ ಪ್ರತಿವಾದಿಗಳು ಅದನ್ನು ನಿರ್ಲಕ್ಷಿಸಿದರು.

ಯಶೋದಾ ಅವರು ಸರಬರಾಜುದಾರರಿಂದ ಸೇವಾಲೋಪ ಆಗಿದೆ ಎಂದು ಆಪಾದಿಸಿ, ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು.ಆದರೆ ಪ್ರತಿವಾದಿಗಳ ಆಕ್ಷೇಪವನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಯಶೋದಾ ಅವರ ದೂರನ್ನು ತಳ್ಳಿಹಾಕಿತು.

ಯಶೋದಾ ಅವರು ಈ ತೀರ್ಪಿನ ವಿರುದ್ಧ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಎಂ. ಶಾಮ ಭಟ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಕೆ.ಆರ್. ಅನಂತಮೂರ್ತಿ ಮತ್ತು ಪ್ರತಿವಾದಿಗಳ ಪರ ವಕೀಲರಾದ ಎ. ರಾಮಮೋಹನ್ ಮತ್ತು ಬಿ.ಕೆ. ಶ್ರೀಧರ್ ಅವರಿಂದ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಅರ್ಜಿದಾರರ ನಿರ್ಲಕ್ಷ್ಯದ ಪರಿಣಾಮವಾಗಿಯೇ ಸಿಲಿಂಡರಿಗೆ ಹಾನಿಯಾಗಿ ಅನಿಲ ಸೋರಿಕೆ ಆಗಿದೆ ಎಂದು ಪ್ರತಿವಾದಿಗಳು ವಾದಿಸಿದರು. ಆದರೆ ಅದನ್ನು ಸಮರ್ಥಿಸುವಂತಹ ಯಾವುದೇ ಪುರಾವೆಯನ್ನೂ ಅವರು ಸಲ್ಲಿಸಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಸೋರಿಕೆ ಆರೋಪಕ್ಕೆ ಗುರಿಯಾದ ಅಡುಗೆ ಅನಿಲದ ಸಿಲಿಂಡರನ್ನು ಚೆನ್ನೈಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ದಕ್ಷಿಣ ಪ್ರಾದೇಶಿಕ ಕಚೇರಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿಯು ಸಿಲಿಂಡರಿನ ತಳಭಾಗದ ರಿಂಗಿನ ಒಳಗೆ ಅನಿಲ ಸೋರಿಕೆ ಕಂಡು ಬಂದಿದೆ ಎಂದು ವರದಿ ನೀಡಿದ್ದುದನ್ನೂ ನ್ಯಾಯಾಲಯ ಗಮನಿಸಿತು.

ಸಿಲಿಂಡರಿನಿಂದ ಅನಿಲ ಸೋರಿಕೆ ಆಗಿಲ್ಲ ಎಂದುಕೊಂಡರೂ, ಸರಬರಾಜುದಾರರು ಸರಬರಾಜು ಮಾಡಲಾದ ಸಿಲಿಂಡರನ್ನು ಸ್ಫೋಟಕಗಳ ಮುಖ್ಯ ನಿಯಂತ್ರಣಾಧಿಕಾರಿಗಳು ನಿಗದಿ ಪಡಿಸಿದ ನಿಯಮಗಳಿಗೆ ಅನುಗುಣವಾಗಿ ಪರೀಕ್ಷೆ ಮಾಡಿಸಿದ್ದಾರೆಯೇ ಎಂಬ ಅಂಶವನ್ನು ನ್ಯಾಯಾಲಯ ಪರಿಶೀಲಿಸಿತು.

ಈ ಪ್ರಕರಣದಲ್ಲಿ ಬ್ಯೂರೋ ಆಫ್ ಸ್ಟ್ಯಾಂಡರ್ಡ್ಸ್ ಅಗತ್ಯ ಪರೀಕ್ಷೆ ನಡೆಸಿ ವರದಿ ಕೊಟ್ಟಿತ್ತು. ಅದರ ಪ್ರಕಾರ ಸಿಲಿಂಡರನ್ನು 2002ರ ಕೊನೆಯ ನಾಲ್ಕು ತಿಂಗಳುಗಳ ಒಳಗೆ ಮರು ಪರೀಕ್ಷೆ ಮಾಡಿಸಬೇಕಾಗಿತ್ತು. ಆದರೆ ಆ ರೀತಿ ಮರು ಪರೀಕ್ಷೆ ಮಾಡದೆಯೇ ಸಿಲಿಂಡರನ್ನು ನಿರಂತರವಾಗಿ ಬಳಸುತ್ತಾ ಬರಲಾಗಿದೆ ಎಂಬುದು ಸಿಲಿಂಡರಿನಲ್ಲಿ ಮಾಡಲಾಗಿರುವ ಮೊಹರಿನಿಂದ ಸ್ಪಷ್ಟವಾಗುತ್ತದೆ ಎಂದು ಈ ವರದಿ ಹೇಳಿದ್ದು ನ್ಯಾಯಾಲಯದ ಗಮನಕ್ಕೆ ಬಂತು.

ಬಳಕೆದಾರರ ಸುರಕ್ಷತೆಯ ಸಲುವಾಗಿ ಕಾಲಕಾಲಕ್ಕೆ ನಡೆಸಬೇಕಾಗಿದ್ದ ಇಂತಹ ಸಿಲಿಂಡರ್ ಮರುಪರೀಕ್ಷೆಯನ್ನು ನಡೆಸದೇ ಇದ್ದುದು ಸೇವಾಲೋಪ ಆಗುತ್ತದೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು.

ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಾಲಯವು 25,000 ರೂಪಾಯಿಗಳ ಪರಿಹಾರವನ್ನು 2 ತಿಂಗಳ ಒಳಗಾಗಿ ಅರ್ಜಿದಾರರಿಗೆ ಪಾವತಿ ಮಾಡುವಂತೆ ಪ್ರತಿವಾದಿ ಅನಿಲ ಸರಬರಾಜುದಾರರಿಗೆ ಆಜ್ಞಾಪಿಸಿತು.

ನಿಗದಿತ ಸಮಯದ ಒಳಗಾಗಿ ಪರಿಹಾರ ಪಾವತಿಗೆ ತಪ್ಪಿದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಅನ್ವಯವಾಗುವಂತೆ ಪಾವತಿ ಮಾಡುವವರೆಗೂ ಶೇಕಡಾ 6ರಷ್ಟು ಬಡ್ಡಿಯನ್ನೂ ತೆರಬೇಕು ಎಂದೂ ಪೀಠ ಆದೇಶಿಸಿತು.

ಅಡುಗೆ ಅನಿಲ ವ್ಯಾಪಾರದಲ್ಲಿ ಇಂತಹ ಸೇವಾಲೋಪ ಮರುಕಳಿಸದಂತೆ ನೋಡಿಕೊಳ್ಳುವುದೇ ಈ ತೀರ್ಪಿನ ಉದ್ದೇಶ ಎಂದು ಸ್ಪಷ್ಟ ಪಡಿಸಿದ ನ್ಯಾಯಾಲಯವು ಗ್ರಾಹಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಅಡುಗೆ ಅನಿಲ ಸರಬರಾಜುದಾರರಿಗೂ ಸೂಚಿಸುವಂತೆಯೂ ಪ್ರತಿವಾದಿಗಳಿಗೆ ನಿರ್ದೇಶಿಸಿತು.

No comments:

Advertisement