Sunday, February 24, 2008

Global Warming: Will Kangaroo help Cows?

Australian scientists recently claimed that some special bacteria in the stomach of Kangaroo, national animal of their nation, cuts the methane content and they believe that by transferring these bacteria to Cows and Sheep, 14 percent of the harmful emissions released from them could be eliminated. This may be helpful to reduce the global warming, but won't it further disturb the natural living of Cows and Sheep? PARYAYA continues its discussion on Cow and Global Warming..

ಗೋವಿನ ಮಿಥೇನಿಗೆ ಕಾಂಗರೂ ಮದ್ದು?

ಆಸ್ಟ್ರೇಲಿಯಾದ ವಿಜ್ಞಾನಿಗಳು ಗೋವುಗಳ ಜಠರದಿಂದ ಹೊರಬರುವ ಮಿಥೇನ್ ನಿವಾರಣೆಗೆ ಕಾಂಗರೂಗಳ ಜಠರದ ಬ್ಯಾಕ್ಟೀರಿಯಾ ಸೇರ್ಪಡೆ ಮದ್ದು ಎಂದು ಹೇಳುತ್ತಿದ್ದಾರೆ. ಇಂತಹ ಪ್ರಯೋಗದಿಂದ ಗೋವುಗಳ ಶೋಷಣೆಗೆ ಇನ್ನೊಂದು ಕಾಣಿಕೆ ಕೊಟ್ಟಂತಾಗಲಾರದೇ?

ನೆತ್ರಕೆರೆ ಉದಯಶಂಕರ

ಜಾಗತಿಕ ತಾಪಮಾನದ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿಸರ್ಗದ ಮೇಲೆ, ನದಿಗಳ ಮೇಲೆ, ಜೀವಿಗಳ ಬದುಕಿನ ವ್ಯವಸ್ಥೆಯ ಮೇಲೆ ಘೋರ ಪರಿಣಾಮಗಳಾಗುತ್ತಿವೆ. ನಿಸರ್ಗ ನಿಯಮಗಳಿಗೆ ವಿರುದ್ಧವಾದ ಮಾನವನ ಅತಿ ಚಟುವಟಿಕೆಗಳಿಂದಲೇ ಜಾಗತಿಕ ತಾಪಮಾನ ಏರುತ್ತಿದ್ದರೂ ಮನುಷ್ಯ ಇವುಗಳ ಹೊಣೆಗಾರಿಕೆಯನ್ನು ಗೋವಿನಂತಹ ಬಡಪಾಯಿ ಪ್ರಾಣಿಗಳ ಮೇಲೆ ಜಾರಿಸುವ ಜಾಯಮಾನ ಮಾತ್ರ ಬಿಟ್ಟಿಲ್ಲ.

ಗೋವಿನ ಜಠರದಿಂದ ಹೊರಬರುವ ಮಿಥೇನ್ ವಿಶ್ವದಲ್ಲಿ ಜಾಗತಿಕ ತಾಪಮಾನ ಏರಿಕೆಗೆ ಭಾರಿ ಕಾಣಿಕೆ ಕೊಡುತ್ತಿದೆ ಎಂಬುದು ಬಹುದೊಡ್ಡ ಆರೋಪ. ಈ ಮಿಥೇನನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡರೆ ಪರಿಸರಕ್ಕೆ ಹಾನಿಕರವಾಗದ ರೀತಿಯಲ್ಲಿ ಬಹುಜನರಿಗೆ ಬೇಕಾದ ಇಂಧನ ಪಡೆಯಬಹುದು ಎಂಬುದು ಗೊತ್ತಿದ್ದರೂ, ಈ ಮಿಥೇನ್ ಸಮಸ್ಯೆಯನ್ನು ಭೂತಾಕಾರವಾಗಿ ಮಾಡುತ್ತಿರುವುದಂತೂ ಹೌದು.

ಅಂದಮೇಲೆ ಗೋವಿನ ಜಠರದಲ್ಲಿ ಈ ಮಿಥೇನ್ ಉತ್ಪಾದನೆ ಆಗುವುದನ್ನೇ ಕಡಿಮೆ ಮಾಡಿದರೆ ಹೇಗೆ ಎಂಬ ಚಿಂತನೆಯೂ ವಿಜ್ಞಾನಿಗಳ ತಲೆಗೆ ಹೊಕ್ಕಿದೆ. ಈ ನಿಟ್ಟಿನಲ್ಲಿ ಹಲವು ವಿಜ್ಞಾನಿಗಳು ಸಂಶೋಧನೆ ನಿರತರೂ ಆಗಿದ್ದಾರೆ.

ಗೋವುಗಳ ಜಠರದಲ್ಲಿ ಮಿಥೇನ್ ಉತ್ಪಾದನೆಯನ್ನೇ ಕಡಿಮೆಗೊಳಿಸುವ ಉಪಾಯವನ್ನು ತಾವು ಕಂಡು ಹಿಡಿದಿರುವುದಾಗಿ ಇತ್ತೀಚೆಗೆ ಆಸ್ಟ್ರೇಲಿಯಾದ ವಿಜ್ಞಾನಿಗಳು ಬಹಿರಂಗ ಪಡಿಸಿದ್ದಾರೆ.

ಗೋವುಗಳ ಜಠರದಿಂದ ಹೊರಬರುವ ಶೇಕಡಾ 14 ರಷ್ಟು ಮಿಥೇನನ್ನು ಕಡಿಮೆಗೊಳಿಸುವ ಮದ್ದು ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಯಾದ ಕಾಂಗರೂ ಹೊಟ್ಟೆಯಲ್ಲಿದೆ ಎಂಬುದೇ ಅವರ ಸಂಶೋಧನೆ.

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸರ್ಕಾರದ ಹಿರಿಯ ಸಂಶೋಧನಾ ವಿಜ್ಞಾನಿ ಅಥೋಲ್ ಕ್ಲೀವ್ ಅವರ ಪ್ರಕಾರ ಕಾಂಗರೂವಿನ ಜಠರದಲ್ಲಿರುವ ವಿಶೇಷ ಬ್ಯಾಕ್ಟೀರಿಯಾಗಳನ್ನು ಗೋವುಗಳು ಮತ್ತು ಕುರಿಗಳ ಜಠರಕ್ಕೆ ಸೇರಿಸಿದರೆ, ಈ ಗೋವು ಮತ್ತು ಕುರಿಗಳ ಜಠರದಿಂದ ಬರುವ ಮಿಥೇನನ್ನು ಶೂನ್ಯ ಮಟ್ಟಕ್ಕೆ ಇಳಿಸಬಹುದಂತೆ.

'ದಿ ಏಜ್' ಪತ್ರಿಕೆಯು, ಸಂಶೋಧಕ ಅಥೋಲ್ ಕ್ಲೀವ್ ಅವರನ್ನು ಉಲ್ಲೇಖಿಸಿ ಈ ಸಂಶೋಧನೆ ಕುರಿತು ಇತ್ತೀಚೆಗೆ ವರದಿ ಮಾಡಿತ್ತು. ಕಾಂಗರೂ ಜಠರದ ಈ ವಿಶೇಷ ಬ್ಯಾಕ್ಟೀರಿಯಾಗಳು ದನಗಳ ಜೀರ್ಣಾಂಗ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡುವ ಮೂಲಕ ಅವುಗಳಿಗೆ ನೀಡಬೇಕಾದ ಆಹಾರದ ಮೇಲಿನ ಲಕ್ಷಾಂತರ ರೂಪಾಯಿ ವೆಚ್ಚವನ್ನು ಇಳಿಸುತ್ತವೆ ಎಂಬುದು ಈ ವಿಜ್ಞಾನಿಯ ಹೇಳಿಕೆ.

ಕಾಂಗರೂ ಜಠರದ ವಿಶೇಷ ಬ್ಯಾಕ್ಟೀರಿಯಾಗಳ ಸೇರ್ಪಡೆಯಿಂದ ಗೋವುಗಳು ಮತ್ತು ಕುರಿಗಳು ಮಿಥೇನ್ ಉತ್ಪಾದನೆ ನಿಲ್ಲಿಸುವುದು ಮಾತ್ರವೇ ಅಲ್ಲ, ತಾವು ತಿನ್ನುವ ತಿನಸಿನಿಂದ ಶೇಕಡಾ 10ರಿಂದ 15ರಷ್ಟು ಅಧಿಕ ಶಕ್ತಿಯನ್ನೂ ಪಡೆಯುತ್ತವೆ ಎಂಬುದೂ ಕ್ಲೀವ್ ಉವಾಚ.

ಆಸ್ಟ್ರೇಲಿಯಾದ ರೈತರಿಗೆ ಈ 'ಪರಿಹಾರ' ಇದೀಗ ಅಪ್ಯಾಯಮಾನವಾಗಿ ಕಂಡಿದೆಯಂತೆ. ಸಾಕಣೆ ವೆಚ್ಚ ಕಡಿಮೆ ಆಗುವುದರ ಜೊತೆಗೆ ಜಾಗತಿಕ ತಾಪಮಾನ ಏರಿಕೆಯ ಆರೋಪದಿಂದಲೂ 'ಗೋವು'ಗಳು ಬಚಾವಾಗುತ್ತವಲ್ಲ! ಅವರಿಗೆ ಈ ಸಂಶೋಧನೆ ಇನ್ನಷ್ಟು ಅಪ್ಯಾಯಮಾನ ಎನ್ನಿಸಲು ಇನ್ನೊಂದು ಕಾರಣ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ಬರಗಾಲ.

ಏನಿದ್ದರೂ ಸಂಶೋಧಕರ ಪ್ರಕಾರ ಕಾಂಗರೂ ಜಠರದಲ್ಲಿರುವ ಈ ವಿಶೇಷ ಬ್ಯಾಕ್ಟೀರಿಯಾಗಳನ್ನು ಪ್ರತ್ಯೇಕಿಸಲು ಇನ್ನೂ ಕನಿಷ್ಠ ಮೂರು ವರ್ಷ ಬೇಕು. ಆ ಬಳಿಕವಷ್ಟೇ ಅವುಗಳನ್ನು ಗೋವುಗಳು ಮತ್ತು ಕುರಿಗಳ ಜಠರಕ್ಕೆ ವರ್ಗಾಯಿಸುವ ಕೆಲಸ ಮಾಡಬಹುದು.

ಬಹುಷ: ಆಸ್ಟ್ರೇಲಿಯಾದ ಜನಕ್ಕೆ ಮಾತ್ರವೇ ಅಲ್ಲ, ಜಗತ್ತಿನ ಇತರೆಡೆಗಳಲ್ಲೂ ಈ 'ಸಂಶೋಧನೆ'ಗೆ ಬೆಂಬಲ ವ್ಯಕ್ತವಾಗಬಹುದೇನೋ?

ಆದರೆ ಇದು ನಿಸರ್ಗದತ್ತ ಪ್ರಕ್ರಿಯೆಗೆ ವಿರುದ್ಧವಾದ ಇನ್ನೊಂದು ಕ್ರಿಯೆ ಆಗಲಾರದೇ ಎಂಬುದು ಯೋಚಿಸಬೇಕಾದ ಪ್ರಶ್ನೆ.

ಈಗಾಗಲೇ ಗೋವುಗಳನ್ನು ನಾವು 'ಹಾಲಿನ ಯಂತ್ರ'ಗಳನ್ನಾಗಿ ಮಾಡಿಕೊಂಡಿದ್ದೇವೆ. ಸಹಜವಾಗಿ ಜನಿಸುವ, ಸಹಜವಾಗಿ ಬೆಳೆಯುವ, ಸಹಜವಾಗಿ ಸಾಯುವ ಹಕ್ಕುಗಳನ್ನು ಅವುಗಳಿಂದ ಕಿತ್ತುಕೊಂಡಿದ್ದೇವೆ.

ಗೋಮಾಳದಲ್ಲಿ ಅಡ್ಡಾಡುತ್ತಾ ತಮಗಿಷ್ಟವಾದ ಹುಲ್ಲು ತಿನ್ನುವ ಸ್ವಾತಂತ್ರ್ಯವನ್ನು ಗೋವುಗಳಿಗೆ ನಿರಾಕರಿಸಿದ್ದೇವೆ. ಹೆಚ್ಚು ಹಾಲು ಕೊಡುವಂತಾಗಲಿ ಎಂದು ಗರ್ಭ ಧರಿಸಲು ಸಂಕರ ತಳಿಗಳ ಇಂಜೆಕ್ಷನ್ ನೀಡುತ್ತಿದ್ದೇವೆ. ನೈಸರ್ಗಿಕ ಆಹಾರದ ಬದಲು ಕೃತಕವಾಗಿ ಸೃಷ್ಟಿಸುವ ಪಶು ಆಹಾರಗಳನ್ನು ನೀಡುತ್ತಿದ್ದೇವೆ.

ಇಷ್ಟೆಲ್ಲ ಆದ ಮೇಲೂ ಇವುಗಳ ಸಾಕಣೆವೆಚ್ಚ ದುಬಾರಿ ಎಂಬ ಚಿಂತೆ ನಮ್ಮನ್ನು ಕಾಡುತ್ತಿತ್ತು. ಇದಕ್ಕೆ ಒಂದು ಪರಿಹಾರ ಸಿಕ್ಕಿಬಿಟ್ಟರೆ, ಮಾನವನಷ್ಟು ಖುಷಿ ಪಡುವ ಇನ್ನೊಂದು 'ಪ್ರಾಣಿ' ಈ ಜಗತ್ತಿನಲ್ಲಿ ಇರಲಾರದೇನೋ?

ಆಸ್ಟ್ರೇಲಿಯಾದ ವಿಜ್ಞಾನಿಗಳು ಈಗ ಇದಕ್ಕೂ ಪರಿಹಾರ ಕಂಡು ಹಿಡಿದಂತಾಗಿದೆ! ಆದರೆ ಒಂದು ಪ್ರಾಣಿಯ ಜಠರದ ಬ್ಯಾಕ್ಟೀರಿಯಾಗಳನ್ನು ಇನ್ನೊಂದು ಪ್ರಾಣಿಯ ಜಠರಕ್ಕೆ ಸೇರಿಸುವುದರಿಂದ ಆಗಬಹುದಾದ ಅಡ್ಡ ಪರಿಣಾಮ ಏನು ಎಂಬುದರ ಅರಿವು ನಮಗಿಲ್ಲ!

ಕಾಡು ಮೇಡಿನಲ್ಲಿ ಅಲೆದು ಹುಲ್ಲು, ಸೊಪ್ಪುಸದೆ ತಿಂದು ಬರುತ್ತಿದ್ದ ಗೋವುಗಳ ಹಾಲು ಪುಷ್ಟಿಕರ ಮಾತ್ರವೇ ಅಲ್ಲ, ಮೂತ್ರ ಮತ್ತು ಸೆಗಣಿ ಕೂಡಾ ಔಷಧೀಯವಾಗಿಯೂ, ಉತ್ತಮ ಗೊಬ್ಬರವಾಗಿಯೂ ಮಾನವನಿಗೆ ಅತ್ಯಂತ ಹೆಚ್ಚು ಉಪಯುಕ್ತವಾಗಿ ಇರುತ್ತಿದ್ದವು.

ಈಗ ಗೋವುಗಳ 'ಮೆಲುಕಾಟ'ಕ್ಕೆ ಮಂಗಳ ಹಾಡಬಹುದಾದ, ಜಠರದ ಸ್ವರೂಪವನ್ನೇ ಬದಲಿಸಬಹುದಾದ ಇಂತಹ 'ಪ್ರಯೋಗ'ದ ಬಳಿಕವೂ ನಮಗೆ ಇಂತಹ ಪುಷ್ಟಿಕರ ಹಾಲು, ಔಷಧಿ ಹಾಗೂ ಉತ್ತಮ ಪೋಷಕಾಂಶಯುಕ್ತ ಗೋಮೂತ್ರ, ಸೆಗಣಿ ಲಭಿಸಬಹುದೇ?

ಮೆಲುಕಾಡುವ ಗೋವುಗಳ ಜಠರದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಸೂಕ್ಷ್ಮಜೀವಿಗಳಿದ್ದು, ಸೆಗಣಿಯ ಮೂಲಕ ಅವುಗಳನ್ನು ಪಡೆದು ರೈತರು ಸ್ವಾವಲಂಬಿ ಕೃಷಿ ಮಾಡಬಹುದು. ಗೋವಿನ ಜಠರದ ಸ್ವರೂಪ ಬದಲಾದರೆ, ಸೆಗಣಿ, ಗೋಮೂತ್ರ ಆಧಾರಿತವಾದ ರೈತರ ಸ್ವಾವಲಂಬಿ ಕೃಷಿಗೆ ಪೆಟ್ಟು ಬೀಳಲಾರದೇ?

ಗೋವುಗಳಿಂದ ಬರುವ ಮಿಥೇನ್ ಸ್ಥಗಿತಗೊಂಡರೆ ನಿಸರ್ಗದತ್ತ ಪರ್ಯಾಯ ಇಂಧನದ ಮೂಲವೊಂದನ್ನು ನಾವೇ ಕೈಯಾರೆ ಕಿತ್ತುಕೊಂಡಂತೆ ಆಗದೇ?

ಎಲ್ಲಕ್ಕಿಂತ ಹೆಚ್ಚಾಗಿ ಮಾನವರ ಶೋಷಣೆಯಿಂದ ನರಳುತ್ತಿರುವ ಗೋವುಗಳ ಶೋಷಣೆ ಇನ್ನಷ್ಟು ಪರಾಕಾಷ್ಠೆಗೆ ಏರಲಾರದೇ?

ಈ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?

No comments:

Advertisement