
ಚಿದು ಬಜೆಟ್: ರೈತಮಿತ್ರ ಅಲ್ಲ...!
ವಾಸ್ತವವಾಗಿ ಕೃಷಿ ರಂಗಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಮುಂಗಡಪತ್ರವು ಮುಟ್ಟಿ ಕೂಡಾ ನೋಡಿಲ್ಲ. ಮೂಲ ಸವಲತ್ತು ಒದಗಿಸುವ ಬಗೆಗೆ ಅಥವಾ ರೈತರ ಆದಾಯ ಏರಿಕೆಗೆ ಅಗತ್ಯವಾದ ಕ್ರಮ, ಇಲ್ಲವೇ ಕೃಷಿ ವೆಚ್ಚ ತಗ್ಗಿಸುವ ಬಗ್ಗೆ ಚಿಂತಿಸಿಯೂ ಇಲ್ಲ.
ನೆತ್ರಕೆರೆ ಉದಯಶಂಕರ
ಪ್ರಸ್ತುತ ಸಾಲಿನ ಮುಂಗಡಪತ್ರವು ರೈತ ಮಿತ್ರ ಎಂದು ಕಾಂಗ್ರೆಸ್ಸಿಗರು ಕುಣಿದಾಡುವಾಗ ಅವರ ಉತ್ಸಾಹಕ್ಕೆ ಮುಂಬರುವ ಚುನಾವಣೆ, ಈ ಬಜೆಟ್ ಚುನಾವಣೆಯಲ್ಲಿ ಪಕ್ಷದ ಭವಿಷ್ಯವನ್ನು ಉಜ್ವಲಗೊಳಿಸಬಹುದು ಎಂಬ ಲೆಕ್ಕಾಚಾರ ಕಾರಣ ಎಂಬುದನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು.
ಆದರೆ ವಿಚಾರವಂತರಿಗೆ ಅರ್ಥವಾಗದ ವಿಚಾರ ಏನು ಎಂದರೆ ಖ್ಯಾತ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಅವರು ಕೂಡಾ ಸಣ್ಣ ಮತ್ತು ಮಧ್ಯಮ ದರ್ಜೆಯ ರೈತರಿಗಾಗಿ ಘೋಷಿಸಿರುವ 60,000 ಕೋಟಿ ರೂಪಾಯಿಗಳ ಬೃಹತ್ ಸಾಲ ಮನ್ನಾ ಕೊಡುಗೆಯು ರೈತರನ್ನು ಆರ್ಥಿಕವಾಗಿ ಸುಸ್ಥಿರ ಕೃಷಿಯ ಹಾದಿಗೆ ಮರಳಿಸಬಲ್ಲುದು ಎಂದು ಬೆನ್ನು ತಟ್ಟಿರುವುದು.
ಸ್ವಾಮಿನಾಥನ್ ಅವರಂತಹ ಭಾರತೀಯ ಕೃಷಿ ಸಂಶೋಧನಾ ರಂಗದ ಭೀಷ್ಮ ಪಿತಾಮಹರನ್ನು ಈ ವಿಚಾರವಾಗಿ

ಸಣ್ಣ ಮತ್ತು ಮಧ್ಯಮ ದರ್ಜೆಯ ರೈತ ಇಂದು ಎದುರಿಸುತ್ತಿರುವ ಮೂಲಭೂತ ಸಮಸ್ಯೆ ಏನೆಂದರೆ ಹೂಡಿಕೆಗೆ ಬರುತ್ತಿರುವ ನಕಾರಾತ್ಮಕ ಪ್ರತಿಫಲ. ಚಿದಂಬರಂ ಅವರು ಈ ಸಲದ ಮಟ್ಟಿಗೆ ರೈತರನ್ನು ಸಾಲದ ಕೂಪದಿಂದ ರಕ್ಷಿಸಬಹುದು. ಆದರೆ ಮುಂದಿನ ವರ್ಷ, ಅದರ ನಂತರದ ವರ್ಷಗಳ ಗತಿ ಏನಾಗುತ್ತದೆ?
ಎಲ್ಲಾದರೂ ಎರಡು ವರ್ಷ ಒಳ್ಳೆಯ ಮಳೆ ಸುರಿದು, ಉತ್ತಮ ಫಸಲು ಬಂದು ಒಂದಷ್ಟು ಉಳಿತಾಯ ಆಗಿದ್ದರೆ ಅದನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಲು ಒಂದೇ ಒಂದು ವರ್ಷದ ಬರಗಾಲ ಸಾಕು.
ಇಂತಹ ಸಂದರ್ಭಗಳಲ್ಲಿ ರೈತರನ್ನು ಕಾಪಾಡಲು ಸರ್ಕಾರ 'ಕಾಯಂ ಬರ ಪರಿಹಾರ ನಿಧಿ'ಯನ್ನು ಸ್ಥಾಪಿಸುತ್ತದೆಯೇ?
ಹೊಟ್ಟೆಪಾಡಿನ ಕೃಷಿ: ಕಳೆದ ಕೆಲವು ದಶಕಗಳಲ್ಲಿ ಕೃಷಿ ಉತ್ಪನ್ನ ದರ ಕುಗ್ಗುತ್ತಾ ಇದ್ದರೆ, ಈ ಸಮಸ್ಯೆಗೆ ಮೂಲಕಾರಣ ಕೃಷಿಯಲ್ಲಿ ಬಂಡವಾಳ ಹೂಡಿಕೆ ಕುಗ್ಗುತ್ತಾ ನಡೆದಿರುವುದು ಹೊರತು ಬೇರೇನಲ್ಲ. ಇದಕ್ಕೆ ಕಾರಣ: ಕಳೆದ ಕೆಲವು ದಶಕಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗಿರುವ ಜನಸಂಖ್ಯೆ ಹೆಚ್ಚಳದಿಂದ ಭೂ ಹಿಡುಗಳಿಗಳು ವಿಭಜನೆಯಾಗುತ್ತಾ ಬಂಡವಾಳ ಹೂಡಿಕೆ ಅಸಮರ್ಥನೀಯವಾಗುವಷ್ಟು ಕಿರಿದಾಗಿರುವುದು. ಜೊತೆಗೆ ಯುವ ಜನಾಂಗ ನಗರಗಳತ್ತ ಆಕರ್ಷಿತರಾಗಿರುವುದು.
ಈಗ ಹೆಚ್ಚು ಕಡಿಮೆ ನಮ್ಮಲ್ಲಿ ಬಹುತೇಕ ಉಳಿದಿರುವುದು ಹೊಟ್ಟೆ ಪಾಡಿನ ವ್ಯವಸಾಯ ಮಾತ್ರ. ಈ ವ್ಯವಸಾಯದಲ್ಲಿ ಹೆಚ್ಚುವರಿ ಬೆಳೆ ಸಾಧ್ಯವಿಲ್ಲ. ಹೀಗಾಗಿ ಅನಿರೀಕ್ಷಿತ ಬಿರುಗಾಳಿಯಂತಹ ಏಕೈಕ ಪ್ರತಿಕೂಲ ಪರಿಸ್ಥಿತಿಯಿಂದ ಸಂಭವಿಸುವ ಭಾಗಶಃ ಬೆಳೆನಾಶ ಅಥವಾ ಮಕ್ಕಳ ಮದುವೆಯಂತಹ ಸಮಾರಂಭದ ವೆಚ್ಚವು ರೈತನ ಸೂಕ್ಷ್ಮ ಆದಾಯ- ವೆಚ್ಚ ಸಮತೋಲನವನ್ನು ಬುಡಮೇಲು ಮಾಡಿ ಸಾಲದ ಮಾರ್ಗಕ್ಕೆ ತಳ್ಳಿ ಬಿಡಬಲ್ಲುದು.
ಸಣ್ಣ ರೈತನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸುವುದು ಆತ ಮಾರುಕಟ್ಟೆಗೆ ಒಯ್ದ ಉತ್ಪನ್ನಕ್ಕೆ ಲಭಿಸುವ ಕನಿಷ್ಠ ನ್ಯಾಯೋಚಿತ ಬೆಲೆ ಮಾತ್ರ.
ಆದರೆ ಇಲ್ಲಿ ಕೂಡಾ ಇಡೀ ವ್ಯವಸ್ಥೆಯೇ ರೈತನಿಗೆ ವಿರುದ್ಧವಾಗಿದೆ. ಆಹಾರ ದಾಸ್ತಾನು ಇಲ್ಲವೇ ಸಾಗಣೆ ಮೂಲಸವಲತ್ತು ಇಲ್ಲ. ಅದರಲ್ಲೂ ಬೇಗನೇ ಕೆಡುವಂತಹ ಉತ್ಪನ್ನಗಳ ದಾಸ್ತಾನು, ಸಾಗಣೆ ವ್ಯವಸ್ಥೆಯ ಸ್ಥಿತಿ ಚಿಂತಾಜನಕ. ಮಾರುಕಟ್ಟೆಗೆ ತಂದರೆ ನಿಯಂತ್ರಿತ ಸಗಟು ಮಾರುಕಟ್ಟೆಯಲ್ಲಿ ಸಿಕ್ಕಿದ ದರಕ್ಕೆ ಮಾರಿ ಕೈ ತೊಳೆದುಕೊಳ್ಳಬೇಕು.
ಕಟಾವು ಸಮಯದಲ್ಲಿ ಈ ಉತ್ಪನ್ನಗಳ ಬೆಲೆ ಪಾತಾಳಕ್ಕೆ ಕುಸಿಯುತ್ತದೆ ಏಕೆಂದರೆ ಬೇಡಿಕೆಗಿಂತ ಹೆಚ್ಚು ಉತ್ಪನ್ನ ಮಾರುಕಟ್ಟೆಗೆ ಬಂದಿರುತ್ತದೆ. ಇದು ಎಂದೋ ಒಂದು ದಿನದ ಕಥೆ ಅಲ್ಲ, ರೈತನ ಪಾಲಿನ ಪ್ರತಿ ವರ್ಷದ ಗೋಳಿನ ವ್ಯಥೆ.
ಕರ್ನಾಟಕದಲ್ಲಿ ಟೊಮೆಟೊ, ಮಹಾರಾಷ್ಟ್ರದಲ್ಲಿ ಈರುಳ್ಳಿ, ಪಂಜಾಬಿನಲ್ಲಿ ಗೋಧಿ - ಇವೆಲ್ಲ ರೈತರೊಂದಿಗೆ ಮಾರುಕಟ್ಟೆಗೆ ಬಂದು ಬೆಲೆ ಸಿಗದೆ ಪ್ರತಿವರ್ಷವೂ ರಸ್ತೆಯಲ್ಲಿ ಬಿದ್ದು ಕೊಳೆತು ಹೋಗುವುದು ಇದೇ ಕಾರಣಕ್ಕೆ.
ರೈ

ಹೆಚ್ಚು ಕಡಿಮೆ ಈ ದೇಶದ ಎಲ್ಲ ಕೃಷಿ ಉತ್ಪನ್ನಗಳ ಗತಿ ಹೀಗೆಯೇ. ರೈತನಿಗೆ ಸಿಗುವುದು ಅತ್ಯಂತ ನಿಕೃಷ್ಟ ಪ್ರತಿಫಲ. ಸಗಟು ಮಾರಾಟಗಾರರು ಹಾಗೂ ಇತರ ವರ್ತಕರು ಲಾಭದ ಬಹುಪಾಲು ನುಂಗುತ್ತಾರೆ. ಕೊನೆಗೆ ಗ್ರಾಹಕ ಮೂಗಿನಲ್ಲಿ ನೀರಿಳಿಸಿಕೊಂಡು ದುಬಾರಿ ದರ ತೆರುತ್ತಾನೆ.
ಈ ವರ್ಷದ ವಿತ್ತ ಸಚಿವರ ಮುಂಗಡಪತ್ರ ನಿಜವಾಗಿಯೂ ಕೃಷಿ ಮಿತ್ರ ಬಜೆಟ್ ಆಗಿದ್ದಿದ್ದರೆ ಅದು ಕೃಷಿ ಉತ್ಪನ್ನ ದಾಸ್ತಾನು ವ್ಯವಸ್ಥೆಗೆ ದೊಡ್ಡ ಪ್ರಮಾಣದ ನಿಧಿ ಒದಗಿಸಬೇಕಾಗಿತ್ತು.
ಸವಲತ್ತುಗಳ ಕೊರತೆ: ವಾಸ್ತವವಾಗಿ ಮೂಲ ಸವಲತ್ತಿನ ಕೊರತೆ ಭಾರತೀಯ ರೈತರು ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಹಳ್ಳಿಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುವ ರಸ್ತೆಗಳು ಕಡಿಮೆ ಸಂಖ್ಯೆಯಲ್ಲಿ ಇರುವುದಷ್ಟೇ ಅಲ್ಲ, ಅವುಗಳ ಗುಣಮಟ್ಟವೂ ಅಷ್ಟೇ ನಿಕೃಷ್ಟ.
ವಿದ್ಯುದೀಕೃತ ಎಂದು ಹೇಳಿಕೊಳ್ಳಲಾಗುವ ಹಳ್ಳಿಗಳಲ್ಲಿ ಕೂಡಾ ವಿದ್ಯುತ್ ಲಭಿಸುವುದು ಕೆಲವು ತಾಸುಗಳಷ್ಟು ಮಾತ್ರ. ಆ ವಿದ್ಯುತ್ತಿನ ವೋಲ್ಟೇಜ್ ಕೂಡಾ ಎಷ್ಟು ಕಡಿಮೆ ಎಂದರೆ ಪಂಪ್ ನೀರಾವರಿ ಮಾಡುವ ರೈತರು ಸದಾ ಪಂಪ್ ಸುಟ್ಟು ಕೊಳ್ಳುವ ಭೀತಿಯಲ್ಲೇ ಗದ್ದೆ, ತೋಟಗಳಿಗೆ ನೀರು ಹಾಕಬೇಕು, ಅದೂ ರಾತ್ರಿ ವೇಳೆಯಲ್ಲಿ!
ಇವೆಲ್ಲ ಸಮಸ್ಯೆಗಳು ಒಟ್ಟಾರೆಯಾಗಿ ರೈತರ ಕಾರ್ಯದಕ್ಷತೆಯನ್ನೇ ಕುಗ್ಗಿಸುತ್ತಿವೆ. ಜೊತೆಗೆ ಕೃಷಿಯ ಸುಸ್ಥಿರತೆಯನ್ನು ಅಸ್ಥಿರತೆಯತ್ತ ತಳ್ಳಿದೆ.
ಈ ಯಾವುದೇ ಒಂದು ಸಮಸ್ಯೆ ಬಗ್ಗೆ ಕೂಡಾ 'ರೈತ ಸ್ನೇಹಿ' ಎಂದು ಹೇಳಿಕೊಳ್ಳುವ ಪ್ರಸ್ತುತ ಸಾಲಿನ ಮುಂಗಡಪತ್ರದಲ್ಲಿ ಚಕಾರ ಇಲ್ಲ.
ಕೃಷಿಗೆ ನೆರವಾಗುವುದಾಗಿ ಹೇಳಿಕೊಳ್ಳುವ ಎರಡೇ ಎರಡು ಪ್ರಸ್ತಾವಗಳು ಮುಂಗಡಪತ್ರದಲ್ಲಿ ಇವೆ. ಅವು ಯಾವುವು ಗೊತ್ತೆ?
ಒಂದು: ಎಲ್ಲ 596 ಗ್ರಾಮೀಣ ಜಿಲ್ಲೆಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿಗೆ ತರಲು

ಎರಡನೆಯದು: ಪ್ರಸ್ತಾವಿತ ನೀರಾವರಿ ಮತ್ತು ಜಲ ಸಂಪನ್ಮೂಲ ನಿಗಮ. ನೀರಾವರಿ ಖಾತರಿ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡಲು ಈ ನಿಗಮಕ್ಕೆ ಸಾಕಷ್ಟು ನಿಧಿ ಒದಗಿಸಲಾಗಿದೆ. ಆದರೆ ಈಗಾಗಲೇ ಈ ಉದ್ದೇಶಕ್ಕಾಗಿಯೇ ನಿರ್ದಿಷ್ಟ ಇಲಾಖೆ ಇರುವಾಗ ಪ್ರತ್ಯೇಕ ನಿಗಮ ಸ್ಥಾಪನೆಯ ಅಗತ್ಯ ಏನಿತ್ತು ಎಂಬುದು ಅರ್ಥವಾಗದಂತಹ ವಿಚಾರ. ಕೇಂದ್ರ ಮತ್ತು ರಾಜ್ಯದಲ್ಲಿ ನೀರಾವರಿ ಸಲುವಾಗಿಯೇ ಪ್ರತ್ಯೇಕ ಇಲಾಖೆಗಳು, ಸಚಿವಾಲಯಗಳನ್ನೇ ನಾವು ಹೊಂದಿರುವಾಗ ಈ ಹೊಸ ನಿಗಮದ ಅಗತ್ಯ ಬಗ್ಗೆ ಏನೆಂದು ಅರ್ಥೈಸಿಕೊಳ್ಳಬಹುದು?
ತಗ್ಗುತ್ತಿರುವ ಹೂಡಿಕೆ: ಕೃಷಿ ಕ್ಷೇತ್ರದಲ್ಲಿನ ಹೂಡಿಕೆ ಕೂಡಾ 1999-2000ನೇ ಸಾಲಿನಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇಕಡಾ 2.2ರಿಂದ 2005-06ರ ಸಾಲಿನಲ್ಲಿ ಶೇಕಡಾ 1.9ಕ್ಕೆ ಕುಸಿದಿದೆ. ಇದು ಕೃಷಿ ಬೆಳವಣಿಗೆ ದರದ ಕುಸಿತದಲ್ಲ್ಲೂ ಪ್ರತಿಫಲಿಸಿದೆ. ಅಖಿಲ ಭಾರತ ಮಟ್ಟದಲ್ಲಿ 2005-06ರಲ್ಲಿ ಕೃಷಿ ಬೆಳವಣಿಗೆ ದರ ವಾರ್ಷಿಕ ಶೇಕಡಾ 2.2ರಷ್ಟು ಕುಸಿದಿದೆ.
ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆ ವಿಸ್ತರಣೆಗೆ ಒತ್ತು ನೀಡಬೇಕಿತ್ತು. ಆದರೆ ಅಂತಹ ಯಾವುದೇ ಪ್ರಯತ್ನವನ್ನೂ ಕೈಗೊಳ್ಳಲಾಗಿಲ್ಲ.
ಹೋಗಲಿ, ರೈತರ ಕೃಷಿ ಆದಾಯ ಹೆಚ್ಚಳಕ್ಕಾಗಲೀ, ಗೋ ಆಧಾರಿತ ಸಾವಯವ ಇಲ್ಲವೇ ನೈಸರ್ಗಿಕ ಕೃಷಿಯಂತಹ ಸುಸ್ಥಿರ ಸ್ವಾವಲಂಬಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವ, ಮಾರ್ಗದರ್ಶನ ಮಾಡುವ ಯಾವುದಾದರೂ ಕ್ರಮವಾದರೂ ಮುಂಗಡಪತ್ರದಲ್ಲಿ ಇದೆಯೇ? ಅದು ಕೂಡಾ ಇಲ್ಲ.
ನಮ್ಮ ನೀತಿ ನಿರೂಪಕರು ಕೇವಲ ರಾಜಕಾರಣವನ್ನಷ್ಟೇ ಮಾಡುವುದನ್ನು ಬಿಟ್ಟು ಒಂದಷ್ಟು ಮುತ್ಸದ್ದಿಗಳಾಗಿ ವರ್ತಿಸುವುದು ಯಾವಾಗ?
ಕೃಪೆ: ಪ್ರಜಾವಾಣಿ (ಮಾಹಿತಿ ಆಧಾರ: ಡೆಕ್ಕನ್ ಹೆರಾಲ್ಡ್)
No comments:
Post a Comment