Monday, April 14, 2008

'ಯುಗಾವತಾರ': ಇದು ಹೊಸ ವರ್ಷದ ಆರಂಭ..!

'ಯುಗಾವತಾರ': ಇದು

ಹೊಸ ವರ್ಷದ ಆರಂಭ..!


ಈ ವರ್ಷ ಸೌರ ಯುಗಾದಿಯೊಂದಿಗೆ ಶ್ರೀರಾಮ ನವಮಿಯೂ ಒಗ್ಗೂಡಿಕೊಂಡು ಹೊಸ ಯುಗಕ್ಕೆ ನಾಂದಿ ಹಾಡಿದೆ. ಈ ಶುಭ ಸಂದರ್ಭದಲ್ಲಿ ಹೊಸನಗರದ ರಾಮಚಂದ್ರಾಪುರ ಮಠದ ಆವರಣದಲ್ಲಿ 'ಯುಗಾವತಾರ' ಹೆಸರಿನಲ್ಲಿ 'ತ್ರೇತಾಯುಗ' ಸಾಕಾರಗೊಳ್ಳುತ್ತಿದೆ...!

ನೆತ್ರಕೆರೆ ಉದಯಶಂಕರ

ಇಂದು ಶ್ರೀರಾಮ ನವಮಿ. ಸೌರ ಯುಗಾದಿಯೂ ಹೌದು. ಚಾಂದ್ರಮಾನ ಯುಗಾದಿಯಂತೆಯೇ ತುಳುವರು, ಮಲೆಯಾಳಿಗಳು, ತಮಿಳರು ಸೇರಿದಂತೆ ದೇಶದಲ್ಲಿ ಬಹಳಷ್ಟು ಮಂದಿಗೆ ಸೌರ ಯುಗಾದಿಯೊಂದಿಗೇ (ವಿಶು-ಕಣಿ) ಹೊಸವರ್ಷ ಆರಂಭದ ಸಡಗರ.
ಶ್ರೀರಾಮ ನವಮಿಯ ಈ ಶುಭ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರವು ಇನ್ನೊಂದು ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇಲ್ಲಿನ ಶ್ರೀ ರಾಮಚಂದ್ರಾಪುರ ಮಠದಲ್ಲಿ ಏಪ್ರಿಲ್ 14 ಮತ್ತು 15ರಂದು ಶ್ರೀರಾಮ ಚಂದ್ರನ ಉಪಾಸನೆಯ ಇನ್ನೊಂದು ಸತ್ರದ ಅಧ್ಯಾಯ ಆರಂಭವಾಗಿದೆ.

'ಶ್ರೀರಾಮ ಸತ್ರ' ಹೆಸರಿನಲ್ಲೇ ನಡೆಯುತ್ತಿರುವ ಈ ಮಾದರಿಯ ಎರಡನೇ ಧಾರ್ಮಿಕ ಕಾರ್ಯಕ್ರಮವು ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮವನ್ನೂ ಪಡೆದುಕೊಂಡು ದೊಡ್ಡ ಪ್ರಮಾಣದಲ್ಲಿ ಜನರನ್ನು ಆಕರ್ಷಿಸುತ್ತಿದೆ.

2006ರಲ್ಲಿ ನಡೆದ ವಿಶ್ವದ ಇತಿಹಾಸದಲ್ಲೇ ಮೊತ್ತ ಮೊದಲನೆಯದಾದ ರಾಮಾಯಣ ಮಹಾಸತ್ರವನ್ನು ಇದೇ ದಿನ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ನ್ಯಾಸ ಸಮಿತಿ ಅಧ್ಯಕ್ಷ ಮಹಂತ ನೃತ್ಯ ಗೋಪಾಲದಾಸ್ ಉದ್ಘಾಟಿಸಿದ್ದರು. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಮೊತ್ತ ಮೊದಲ 'ಪುರುಷೋತ್ತಮ ಪ್ರಶಸ್ತಿ' ಪ್ರದಾನ ಮಾಡಿದ್ದರು. ವಾಲ್ಮೀಕಿ ರಾಮಾಯಣದ ಸಾರವನ್ನು ಶ್ರೀಸಾಮಾನ್ಯರಿಗೆ ತಿಳಿಯಪಡಿಸುವುದು ಈ ಕಾರ್ಯಕ್ರಮದ ಉದ್ಧೇಶವಾಗಿತ್ತು.

ಈ ರಾಮಾಯಣ ಮಹಾಸತ್ರದಲ್ಲೇ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ತಮ್ಮ ಜೀವಮಾನವನ್ನು ಗೋಮಾತೆಯ ಸಂರಕ್ಷಣೆಯ ಕಾರ್ಯಕ್ಕಾಗಿ ಮುಡುಪಾಗಿಡುವ ಪ್ರತಿಜ್ಞೆ ತೊಟ್ಟಿದ್ದರು.

ಆ ಬಳಿಕ ಗೋಮಾತೆಯ ಸಂರಕ್ಷಣೆ ನಿಟ್ಟಿನಲ್ಲಿ ವ್ಯಾಪಕ ಜನ ಜಾಗರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಸ್ವಾಮೀಜಿ ಈ ವರ್ಷ ಮತ್ತೊಮ್ಮ ರಾಮಚಂದ್ರಾಪುರ ಮಠದ ಆವರಣದಲ್ಲಿ ಶ್ರೀರಾಮ ಸತ್ರದ ಮೂಲಕ ಗೋಮಾತೆಯ ಸಂರಕ್ಷಣೆಯ ಕಾರ್ಯಕ್ಕೆ ಶ್ರೀರಾಮಚಂದ್ರನ ಆಶೀರ್ವಾದ ಪಡೆಯುವ ಲಗುಬಗೆಯಲ್ಲಿದ್ದಾರೆ.

ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಈ ಸಲ ಹೊಸ ನಗರದಲ್ಲಿ ತ್ರೇತಾಯುಗದ ಮರುಸೃಷ್ಟಿಯಾಗುತ್ತಿದೆ.

ಆಯುತ, ಕುಂಭಸ್ವಾಗತ, ರಾಮಾಯಣ ಕಾಲಘಟ್ಟದ ಸನ್ನಿವೇಶಗಳನ್ನು ದೃಶ್ಯದೊಂದಿಗೆ ಬಿಂಬಿಸಲಿರುವ ಈ ಸತ್ರವು ಹೊಸನಗರ ತಾಲ್ಲೂಕಿನ ಎಲ್ಲ ಮಹಿಳಾ ಸ್ವ ಸಹಾಯ ಸಂಘದ ಸದಸ್ಯೆಯರನ್ನು ಒಗ್ಗೂಡಿಸಿ ಇದೇ ಪ್ರಪ್ರಥಮ ಬಾರಿಗೆ ವಿಶಿಷ್ಟ ರೀತಿಯ ಪೂರ್ಣಕುಂಭ ಸ್ವಾಗತ ನೀಡುತ್ತಿದೆ.

ಏಪ್ರಿಲ್ 15ರಂದು ನಡೆಯುವ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಹತ್ತು ಸಹಸ್ರಕ್ಕೂ ಹೆಚ್ಚು ಮಹಿಳೆಯುರು ಈ ಪೂರ್ಣಕುಂಭ ಸ್ವಾಗತದಲ್ಲಿ ಪಾಲ್ಗೊಳ್ಳುವರು.

ಇಡೀ ಶ್ರೀರಾಮ ಸತ್ರಕ್ಕೆ ಈ ಬಾರಿ ಗಾಯನ ಕಳೆಗಟ್ಟಲಿದೆ. ಕಾರ್ಯಕ್ರಮ ಪೂರ್ತಿಯಾಗಿ ಗಾಯನಮಯವಾಗುವುದರ ಜೊತೆಗೆ ಯುದ್ಧ ಕಲೆಯ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಲಿದೆ.

ತ್ರೇತಾಯುಗವೇ ಮರುಕಳಿಸಲಿರುವ ಈ ಬಾರಿಯ ಕಾರ್ಯಕ್ರಮಕ್ಕೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ನೀಡಿರುವ ಹೆಸರು 'ಯುಗಾವತಾರ'. ತ್ರೇತಾಯುಗದ ಪರಿಕಲ್ಪನೆಯನ್ನು ಮೂಡಿಸುವುದೇ ಈ ಕಾರ್ಯಕ್ರಮ ಜೀವಾಳ ಎನ್ನುತ್ತಾರೆ ಸ್ವಾಮೀಜಿ.

'ಯುಗಾವತಾರ ವೇದಿಕೆಗೆ ಅತಿಥಿ ಅಭ್ಯಾಗತರಾರಿಗೂ ಪ್ರವೇಶವಿಲ್ಲ. ಅಲ್ಲಿ ರಾಮಾಯಣ ಕಾಲದ ವ್ಯಕ್ತಿತ್ವಗಳಿಗೆ ಮಾತ್ರವೇ ಪ್ರವೇಶ' ಇದೇ ಈ ಕಾರ್ಯಕ್ರಮದ ವೈಶಿಷ್ಟ್ಯ.

ರಾಮಚಂದ್ರಾಪುರ ಮಠದ ಸಮೀಪ ಇರುವ ಶರಾವತಿ ನದಿಯ ಪಕ್ಕದಲ್ಲಿ ರಾವಣ, ಕುಂಭಕರ್ಣ, ಇಂದ್ರಜಿತು ಮತ್ತಿತರ ರಾಮಾಯಣ ಕಾಲದ ವ್ಯಕ್ತಿತ್ವಗಳ ಬೃಹತ್ ಆಕೃತಿಗಳು ಎದ್ದು ನಿಂತಿವೆ. ಮಠದ ಬದಿಯಿಂದ ಆ ಬದಿಗೆ ಹೋಗುವ ವಾನರ ಸೇನೆಯು ರಾವಣನನ್ನು ಯುದ್ಧದಲ್ಲಿ ಸದೆ ಬಡಿಯುವ ದೃಶ್ಯ ಇಲ್ಲಿ ಸಾಕಾರಗೊಳ್ಳಲಿದೆ.

ಈ ಕಾರ್ಯಕ್ರಮಕ್ಕಾಗಿಯೇ ವಿಶಿಷ್ಟವಾಗಿ ಬಾಣಪ್ರಯೋಗಿಸುವ ಕಲೆಯನ್ನು ಕರಗತ ಮಾಡಿಕೊಂಡ ಆಂಧ್ರ ಪ್ರದೇಶದ ಗುಂಟೂರಿನ ಶ್ರೀಕಿ ಗಂಗುಟ್ಲ ಸುಬ್ಬರಾವ್ ಹೊಸನಗರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಅವರು ಶಬ್ಧವೇಧಿ, ಕಾಲುಗಳಿಂದ ಹಾಗೂ ತಲೆಕೆಳಗಾಗಿ ನಿಂತು ಬಾಣ ಪ್ರಯೋಗಿಸುವ ತ್ರೇತಾಯುಗದ ಕಲ್ಪನೆಯನ್ನು ಸಾಕಾರಗೊಳಿಸಲಿದ್ದಾರೆ.

ದೇಶದ ಎಲ್ಲ ಪುಣ್ಯ ತೀರ್ಥಗಳಿಂದ ಶ್ರೀರಾಮನಿಗೆ ಪಟ್ಟಾಭಿಷೇಕ ನಡೆಯಲಿದೆ. ದೇಶದಲ್ಲೇ ಮೊದಲ ಬಾರಿಗೆ ಬೃಹತ್ ರಾಮಪಾದುಕೆಯ ನಿರ್ಮಾಣ ನಡೆದಿದೆ.

ದೆಹಲಿಯಲ್ಲಿ ನಡೆಯುವ 'ದಶಹರ' ಕಾರ್ಯಕ್ರಮದಲ್ಲಿ ನಡೆಯುವ'ರಾವಣ ಕುಂಭಕರ್ಣರ ಸಂಹಾರ'ದ ನೆನಪು ವರ್ಷಪೂರ್ತಿ ಜನರ ಮನಸ್ಸಿನಲ್ಲಿ ಇರುತ್ತದೆ. ಇನ್ನು ಮುಂದೆ ಹೊಸನಗರದ 'ಶ್ರೀರಾಮ ಸತ್ರ' ಕೂಡಾ ಹೀಗೆಯೇ ಜನ ಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಲಿದೆ - ಏಕೆಂದರೆ ಹೊಸನಗರದಲ್ಲಿ ಈಗ ರಾಮನ ಹುಟ್ಟಿದ ದಿನದಂದೇ ತ್ರೇತಾಯುಗ ಸಾಕಾರಗೊಂಡಿದೆ .

No comments:

Advertisement