ಇಂದಿನ ಇತಿಹಾಸ
ಏಪ್ರಿಲ್ 25
ಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ತೈವಾನ್ ಸಾಂಸ್ಕತಿಕ ಮತ್ತು ಮಾನವ ಜೀವನ ಶಿಕ್ಷಣ ಸಂಸ್ಥೆಯು ಫರ್ವೆಂಟ್ ಗ್ಲೋಬಲ್ ಲವ್ ಆಫ್ ಲೈಫ್-2006 ಪ್ರಶಸ್ತಿಯನ್ನು ನೀಡಿತು.
2007; ಸೌರವ್ಯೂಹದಿಂದ 20 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಒಂದು ಗ್ರಹವನ್ನು ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದು ಅದರಲ್ಲಿ ಜೈವಿಕಾಂಶ ಇರಬಹುದು ಎಂದು ಪ್ರಕಟಿಸಿದರು. ಹೊಸ ಗ್ರಹವು ಭೂಗ್ರಹಕ್ಕಿಂತ ಐದು ಪಟ್ಟು ದೊಡ್ಡದಾಗಿದ್ದು, ಸೌರವ್ಯೂಹಕ್ಕೆ ಸನಿಹದಲ್ಲಿರುವ ಕೆಂಪು ಕುಬ್ಜ ತಾರೆ ಗ್ಲೆಸೆ-581ನ್ನು ಸುತ್ತುತ್ತಿದೆ, ಇದು ತುಲಾ ನಕ್ಷತ್ರ ರಾಶಿಯಲ್ಲಿದೆ ಎಂದು ಹೊಸ ಗ್ರಹವನ್ನು ಪತ್ತೆ ಹಚ್ಚಿದ ಸ್ವಿಜರ್ ಲೆಂಡಿನ ಜಿನೀವಾ ಖಗೋಳಾಲಯದ ವಿಜ್ಞಾನಿಗಳಾದ ಸಿಫೈನ್ ಉಡ್ರಿ ಮತ್ತು ಸಹೋದ್ಯೋಗಿಗಳು ಹೇಳಿದರು.
2006: ಡಕಾಯತಿಯಿಂದ ರಾಜಕೀಯಕ್ಕೆ ಸೇರಿದ್ದ ಚಂಬಲ್ ರಾಣಿ ಕುಖ್ಯಾತಿಯ ಫೂಲನ್ ದೇವಿಯನ್ನು ಹತ್ಯೆಗೈದ ಪ್ರಮುಖ ಆರೋಪಿ ಶೇರ್ ಸಿಂಗ್ ರಾಣಾನನ್ನು ದೆಹಲಿ ಪೊಲೀಸರ ತನಿಖಾ ತಂಡವು ದೆಹಲಿಯಲ್ಲಿ ಬಂಧಿಸಿತು. ತಿಹಾರ್ ಸೆರೆಮನೆಯಿಂದ ಪರಾರಿಯಾಗಿ, ಎರಡು ವರ್ಷಗಳ ಬಳಿಕ ಆರೋಪಿ ಸೆರೆ ಸಿಕ್ಕಿದ. ಫೂಲನ್ ದೇವಿಯನ್ನು ದೆಹಲಿಯಲ್ಲಿ ಅವರ ಮನೆ ಎದುರಲ್ಲಿ 2001ರ ಜುಲೈಯಲ್ಲಿ ಹತ್ಯೆ ಮಾಡಲಾಗಿತ್ತು ಹತ್ಯೆಯಾದ ಎರಡೇ ದಿನದಲ್ಲಿ ಶೇರ್ ಸಿಂಗ್ ನನ್ನು ಡೆಹರಾಡೂನಿನಲ್ಲಿ ಪೊಲೀಸರು ಬಂದಿಸಿದ್ದರು. 2004ರಲ್ಲಿ ಆತ ತಿಹಾರ್ ಸೆರೆಮನೆಯಿಂದ ಪರಾರಿಯಾಗಿದ್ದ.
2006: ನೇಪಾಳದ ನೂತನ ಪ್ರಧಾನಿ ಸ್ಥಾನಕ್ಕೆ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ , ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ (84) ಅವರನ್ನು ಪ್ರಸ್ತಾಪಿಸಿ ಸಪ್ತಪಕ್ಷ ಮೈತ್ರಿಕೂಟ ನಿರ್ಣಯ ಅಂಗೀಕರಿಸಿತು. 19 ದಿನಗಳ ಪ್ರಜಾಪ್ರಭುತ್ವ ಪರ ಚಳವಳಿಯನ್ನೂ ಹಿಂತೆಗೆದುಕೊಂಡ ಮೈತ್ರಿಕೂಟ, ಸಂಸತ್ತಿಗೆ ಮರುಜೀವ ನೀಡುವುದಾಗಿ ದೊರೆ ಜ್ಞಾನೇಂದ್ರ ಅವರು ನೀಡಿದ ಆಹ್ವಾನಕ್ಕೆ ಒಪ್ಪಿ ಸರ್ಕಾರ ರಚನೆಗೆ ಮುಂದಾಯಿತು.
2006: ಗರ್ಭಿಣಿಯ ಪೋಷಾಕಿನಲ್ಲಿ ಶ್ರೀಲಂಕಾ ಸೇನೆಯ ಕೊಲಂಬೊ ಕೇಂದ್ರ ಕಚೇರಿ ಆವರಣದೊಳಕ್ಕೆ ಪ್ರವೇಶಿಸಿದ ಎಲ್ ಟಿಟಿಇ ಸಂಘಟನೆಯ ಮಹಿಳಾ ಮಾನವ ಬಾಂಬ್ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹತ್ತು ಮಂದಿ ಸೈನಿಕರು ಮೃತರಾಗಿ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಶರತ್ ಫಾನ್ಸೆಕಾ ತೀವ್ರವಾಗಿ ಗಾಯಗೊಂಡರು.
2006: ಲಾಭದ ಹುದ್ದೆ ಹೊಂದಿರುವ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಪಂಜಾಬ್, ಮಧ್ಯಪ್ರದೇಶ, ಒರಿಸ್ಸಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಛತ್ತೀಸ್ ಗಢ ಈ 6 ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಪ್ರಣಬ್ ಮುಖರ್ಜಿ, ಶರದ್ ಪವಾರ್ ಮತ್ತು ಮೀರಾಕುಮಾರ್ ಸೇರಿದಂತೆ ಒಟ್ಟು 43 ಲೋಕಸಭೆ ಸದಸ್ಯರು ಮತ್ತು 200ಕ್ಕೂ ಹೆಚ್ಚು ಶಾಸಕರ ಹೆಸರನ್ನು ಚುನಾವಣಾ ಆಯೋಗವು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿತು.
2006: ಬಸವ ವೇದಿಕೆಯು ಪ್ರತಿವರ್ಷ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಈ ವರ್ಷ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ವಿ.ಎಸ್. ಮಳಿಮಠ ಆಯ್ಕೆಯಾದರು. ವಚನ ಸಾಹಿತ್ಯ ಶ್ರೀ ಪ್ರಶಸ್ತಿಗೆ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಅಜಯಕುಮಾರ್ ಸಿಂಗ್ ಆಯ್ಕೆಯಾದರು.
2006: ಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ತೈವಾನ್ ಸಾಂಸ್ಕತಿಕ ಮತ್ತು ಮಾನವ ಜೀವನ ಶಿಕ್ಷಣ ಸಂಸ್ಥೆಯು ಫರ್ವೆಂಟ್ ಗ್ಲೋಬಲ್ ಲವ್ ಆಫ್ ಲೈಫ್-2006 ಪ್ರಶಸ್ತಿಯನ್ನು ನೀಡಿತು.
2005: ಜಪಾನಿನ ಆಮ್ ಅಗಾಸಾಕಿ ನಿಲ್ದಾಣದ ಬಳಿ ಪ್ರಯಾಣಿಕ ರೈಲು ದುರಂತದಲ್ಲಿ 107 ಜನರ ಸಾವು.
1982: ಸತ್ಯಜಿತ್ ರೇ ಅವರ `ಶತ್ ರಂಜ್ ಕಿ ಖಿಲಾಡಿ' ಸಿನಿಮಾ ಪ್ರಸಾರದೊಂದಿಗೆ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ವರ್ಣರಂಜಿತ ರಾಷ್ಟ್ರೀಯ ಪ್ರಸಾರ ಆರಂಭವಾಯಿತು.
1973: ಕಲಾವಿದ ರಮೇಶ ಕುಲಕರ್ಣಿ ಜನನ.
1968: ಭಾರತದ ಶಾಸ್ತ್ರೀಯ ಸಂಗೀತಗಾರ ಬಡೇ ಗುಲಾಂ ಅಲಿ ಅವರು ತಮ್ಮ 66ನೇ ವಯಸ್ಸಿನಲ್ಲಿ ಮೃತರಾದರು. ಪಾಟಿಯಾಲ ಘರಾಣಾ ಮತ್ತು ಖಯಾಲ್ ಹಾಡುಗಾರಿಕೆಯನ್ನು ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
1945: ವಿಶ್ವಸಂಸ್ಥೆಯ ಸಂಘಟನೆಗಾಗಿ ಸುಮಾರು 50 ರಾಷ್ಟ್ರಗಳ ಪ್ರತಿನಿಧಿಗಳು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಭೆ ಸೇರಿದರು.
1926: ಕಲಾವಿದ ಅಂಬಳೆ ಸುಬ್ಬರಾವ್ ಜನನ.
1924: ಕಲಾವಿದ ಎಸ್. ರಾಘವೇಂದ್ರರಾವ್ ಕದಿರೆ ಜನನ.
1922: ಕಲಾವಿದ ಎಂ.ಆರ್. ದೊರೆಸ್ವಾಮಿ ಜನನ.
1916: ಗಮಕ ಗಂಧರ್ವರೆನಿಸಿದ್ದ ಬಿ.ಎಸ್.ಎಸ್. ಕೌಶಿಕ್ ಅವರು ಸುಬ್ಬಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಕೃಷ್ಣರಾಜಪೇಟೆ ತಾಲ್ಲೂಕು ಹೇಮಗಿರಿ ಕುಪ್ಪಹಳ್ಳಿಯಲ್ಲಿ ಜನಿಸಿದರು.
1859: ಸುಯೆಜ್ ಕಾಲುವೆಗಾಗಿ ಅದರ ಯೋಜಕ ಫರ್ಡಿನಾಂಡ್ ಡಿ ಲೆಸ್ಸೆಪ್ಸ್ ಮಾರ್ಗದರ್ಶನದಲ್ಲಿ ನೆಲ ಅಗೆಯಲು ಆರಂಭಿಸಲಾಯಿತು. ಸರಿಯಾಗಿ 100 ವರ್ಷಗಳ ಬಳಿಕ 1959ರಲ್ಲಿ ಅಟ್ಲಾಂಟಿಕ್ ಸಾಗರಕ್ಕೆ ಗ್ರೇಟ್ ಲೇಕ್ಸ್ ನ್ನು ಸಂಪರ್ಕಿಸುವ ಸೇಂಟ್ ಲಾರೆನ್ಸ್ ಸಮುದ್ರಮಾರ್ಗವನ್ನು (ಸೀವೇ) ರಾಣಿ ಎರಡನೇ ಎಲಿಜಬೆತ್ ಹಾಗೂ ಅಧ್ಯಕ್ಷ ಐಸೆನ್ ಹೊವರ್ ಜಂಟಿಯಾಗಿ ಉದ್ಘಾಟಿಸಿದರು
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment