ಇಂದಿನ ಇತಿಹಾಸ
ಏಪ್ರಿಲ್ 27
ಗಂಗೊಳ್ಳಿಯಿಂದ ಮಂಗಳೂರಿನವರೆಗೆ ಅರಬ್ಬಿ ಸಮುದ್ರದಲ್ಲಿ 150 ಕಿ.ಮೀ. ದೂರವನ್ನು ಸತತ 24 ಗಂಟೆಗಳ ಕಾಲ ಈಜಿ ಕ್ರಮಿಸುವ ಮೂಲಕ ಬೆಂಗರೆ ದಯಾನಂದ ಖಾರ್ವಿ ಹೊಸ ದಾಖಲೆ ನಿರ್ಮಿಸಿದರು.
2007: ಗಾಲಿ ಕುರ್ಚಿಗೆ ಅಂಟಿಕೊಂಡೇ ಜೀವಿಸುತ್ತಿರುವ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಅವರು `ಬಾಹ್ಯಾಕಾಶದಲ್ಲಿ ತೂಕರಹಿತ ಅನುಭವ'ದ ತಮ್ಮ ಕನಸನ್ನು ನನಸಾಗಿಸಿಕೊಂಡರು. ಫ್ಲಾರಿಡಾ ಮೂಲದ ಜೀರೋ ಗ್ರಾವಿಟಿ ಕಾರ್ಪೊರೇಷನ್ ಬೋಯಿಂಗ್ 747 ವಿಮಾನದಲ್ಲಿ ಶೂನ್ಯ ಗುರುತ್ವಾಕರ್ಷಣೆ ನಿರ್ಮಿಸಿ ಸ್ಟೀಫನ್ ಅವರಿಗೆ ಈ ವಿಶಿಷ್ಟ ಅನುಭವ ದಕ್ಕುವಂತೆ ಮಾಡಿತು. `ವೊರ್ಮಿಟ್ ಕಾಮೆಟ್' ಹೆಸರಿನ ಪರಿವರ್ತಿತ ವಿಮಾನದಲ್ಲಿ ಅಟ್ಲಾಂಟಿಕ್ ಸಾಗರದ ಮೇಲೆ ಸಾಗುವಾಗ ಈ ಅನುಭವವನ್ನು ಹಾಕಿನ್ಸ್ ಪಡೆದರು. 9,754 ಮೀಟರ್ (32,000 ಅಡಿ ಎತ್ತರಕ್ಕೆ ಏರಿ 7315 ಮೀಟರಿನಷ್ಟು ಕೆಳಕ್ಕೆ ವಿಶಿಷ್ಟ ರೀತಿಯಲ್ಲಿ ಬರುವಾಗ ಹಾಕಿನ್ಸ್ ಜೊತೆಗಿದ್ದ ವೈದ್ಯರು ಮತ್ತು ದಾದಿಯರೂ ಈ ತೂಕರಹಿತ ಅನುಭವ ಪಡೆದರು.
2007: ಬ್ರಿಟಿಷರ ಒಡೆದು ಆಳುವ ಕುಟಿಲ ನೀತಿಯಿಂದಾಗಿಯೇ ಗೋಹತ್ಯೆ ಕಾಯ್ದೆ ಜಾರಿಗೆ ಬಂತು ಎಂದು ಸ್ವದೇಶೀ ಬಚಾವೋ ಆಂದೋಲನದ ನೇತಾರ ರಾಜೀವ ದೀಕ್ಷಿತ್ ಶಿವಮೊಗ್ಗದ ಹೊಸನಗರದಲ್ಲಿ ಶ್ರೀರಾಮಚಂದ್ರಾಪುರ ಮಠ ಸಂಘಟಿಸಿದ ವಿಶ್ವ ಗೋ ಸಮ್ಮೇಳನದಲ್ಲಿ ಅಭಿಪ್ರಾಯ ಪಟ್ಟರು. ಸಮ್ಮೇಳನದ ಏಳನೇ ದಿನ ಅವರು ಗೋ ಮಹಿಮಾ ಗೋಷ್ಠಿಯಲ್ಲಿ ಪಾಲ್ಗೊಂಡರು.
2007: ನಕಲಿ ಪಾಸ್ಪೋರ್ಟ್ ಬಳಸಿ ಮಾನವ ಕಳ್ಳಸಾಗಣೆ ನಡೆಸಿದ ಆರೋಪಕ್ಕೆ ಒಳಗಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿ ಆರ್ ಎಸ್) ಶಾಸಕ ಕೆ. ಲಿಂಗಯ್ಯ ಅವರು ಹೈದರಾಬಾದಿನ 7ನೇ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಶರಣಾಗತರಾದರು.
2007: ಕೃಷ್ಣಾ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಆಂಧ್ರಪ್ರದೇಶ ಸಲ್ಲಿಸಿದ್ದ ಅರ್ಜಿಯನ್ನು ಕೃಷ್ಣಾ ಜಲ ನ್ಯಾಯ ಮಂಡಳಿಯು ವಜಾ ಮಾಡಿತು.
2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬಹಿರಂಗವಾಗಿ ಚುಂಬಿಸಿ ವಿವಾದಕ್ಕೆ ಗುರಿಯಾಗಿದ್ದ ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಶುಕ್ರವಾರ ಈ ಘಟನೆಗೆ ಕ್ಷಮೆ ಯಾಚಿಸಿದರು. ಯಾವುದೇ ಮನ ನೋಯಿಸುವಂತಹ ತಪ್ಪು ಮಾಡ್ದಿದರೆ ದಯವಿಟ್ಟು ಕ್ಷಮಿಸಿ ಎಂಬುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದರು.
2007: ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿ ಇ ಟಿ) ತಮಿಳುನಾಡಿನಲ್ಲಿ ರದ್ದು ಪಡಿಸಿದ ತಮಿಳುನಾಡು ಸರ್ಕಾರದ ನಿರ್ಣಯವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿಯಿತು. ತಮಿಳುನಾಡು ಸರ್ಕಾರವು ಅಂಗೀಕರಿಸಿದ ತಮಿಳುನಾಡು (ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ) ಕಾಯ್ದೆಯ (2006) ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ರಿಟ್ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತು.
2006: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 6000 ಕೋಟಿ ರೂಪಾಯಿ ಅಂದಾಜು ವೆಚ್ಚದ ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಮಂಜೂರಾತಿ ನೀಡಿತು. ಇದರೊಂದಿಗೆ 33 ಕಿ.ಮೀ. ಉದ್ದದ ಮೆಟ್ರೊ ರೈಲು ಯೋಜನೆಗೆ ಇದ್ದ ಕೊನೆಯ ಅಡ್ಡಿ ನಿವಾರಣೆ ಆಯಿತು. ಈ ಯೋಜನೆ 2011ಕ್ಕೆ ಪೂರ್ಣಗೊಳ್ಳಬೇಕು.
2006: ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಎಲ್. ಬಸವರಾಜು ಅವರಿಗೆ ರಾಜ್ಯ ಸರ್ಕಾರದ 2005ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.
2006: ನೇಪಾಳದ ಹಿರಿಯ ಮುಖಂಡ ಗಿರಿಜಾ ಪ್ರಸಾದ್ ಕೊಯಿರಾಲ ಅವರು ನೇಪಾಳ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು. ಇದೇ ವೇಳೆಯಲ್ಲಿ ಬಾಲಿವುಡ್ ನಟಿ ಮನಿಶಾ ಕೊಯಿರಾಲ ಅವರ ತಂದೆ, ಪ್ರಕಾಶ ಕೊಯಿರಾಲ ಅವರನ್ನು ನೇಪಾಳ ಕಾಂಗ್ರೆಸ್ಸಿನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು. ಈ ಇಬ್ಬರೂ ಧುರೀಣರು ಸಮೀಪ ಸಂಬಂಧಿಗಳು.
2006: ಹಿರಿಯ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಪ್ರತಿಷ್ಠಿತ 2006ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಆಯ್ಕೆಯಾದರು.
2006: ಜಮ್ಮುವಿನ ಭದೇವ್ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆದ ಉಪ ಚುನಾವಣೆಯಲ್ಲಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ದಾಖಲೆ ಜಯ ಸಾಧಿಸಿದರು. ಎದುರಾಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ಅವರು 66,129 ಮತಗಳ ಪೈಕಿ 62,072 ಮತಗಳನ್ನು ಬಗಲಿಗೆ ಹಾಕಿಕೊಂಡರು.
2006: ಗಂಗೊಳ್ಳಿಯಿಂದ ಮಂಗಳೂರಿನವರೆಗೆ ಅರಬ್ಬಿ ಸಮುದ್ರದಲ್ಲಿ 150 ಕಿ.ಮೀ. ದೂರವನ್ನು ಸತತ 24 ಗಂಟೆಗಳ ಕಾಲ ಈಜಿ ಕ್ರಮಿಸುವ ಮೂಲಕ ಬೆಂಗರೆ ದಯಾನಂದ ಖಾರ್ವಿ ಹೊಸ ದಾಖಲೆ ನಿರ್ಮಿಸಿದರು.
2006: ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) 9069 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಖಾಸಗಿ ಕ್ಷೇತ್ರದಲ್ಲಿನ ಭಾರತೀಯ ಕಂಪೆನಿಯೊಂದು ಗಳಿಸಿದ ಅತ್ಯಧಿಕ ಲಾಭ ಇದು ಎಂದು ಆರ್ಐಎಲ್ ಅಧ್ಯಕ್ಷ , ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಮುಂಬೈಯಲ್ಲಿ ಪ್ರಕಟಿಸಿದರು.
1960: ರಕ್ಷಣಾ ಪಡೆಗಳ ಉನ್ನತಾಧಿಕಾರಿಗಳಿಗೆ ತರಬೇತಿ ನೀಡುವ ಸಲುವಾಗಿ ನವದೆಹಲಿಯಲ್ಲಿ ನ್ಯಾಷನಲ್ ಡಿಫೆನ್ಸ್ ಕಾಲೇಜನ್ನು ಆರಂಭಿಸಲಾಯಿತು.
1959: ಕಮಾಂಡರ್ ಕವಾಸ್ ಮಣೇಕ್ ಶಾ ನಾನಾವತಿ ತನ್ನ ಬ್ರಿಟಿಷ್ ಪತ್ನಿ ಸಿಲ್ವಿಯಾಳ ಪ್ರಿಯಕರ ಪ್ರೇಮ್ ಅಹುಜಾನನ್ನು ಗುಂಡಿಟ್ಟು ಕೊಂದ. ಈ ಪ್ರಕರಣ ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿತು. ಇದೊಂದು ಅಪಘಾತ ಎಂದು ಬಿಂಬಿಸಿದ ಪರಿಣಾಮವಾಗಿ ಆತನ ಪರ ಅನುಕಂಪದ ಹೊಳೆ ಹರಿಯಿತು. ಮುಂಬೈ ಸೆಷನ್ಸ್ ಕೋರ್ಟ್ ಆತ ನಿರಪರಾಧಿ ಎಂದೂ ತೀರ್ಪಿತ್ತಿತು. ನಂತರ ಸುಪ್ರೀಂಕೋರ್ಟ್ ಅದನ್ನು ತಳ್ಳಿಹಾಕಿ ನಾನಾವತಿ ಅಪರಾಧಿ ಎಂದು ತೀರ್ಪು ನೀಡಿತು. ಈ ಘಟನೆ ನಡೆಯದೇ ಇರುತ್ತಿದ್ದರೆ ನಾನಾವತಿ ಭಾರತದ ಮೊದಲ ಏರ್ ಕ್ರಾಫ್ಟ್ ಕ್ಯಾರಿಯರ್ ಐಎನ್ಎಸ್ ವಿಕ್ರಾಂತ್ ನ ಮೊದಲ ಕಮಾಂಡರ್ ಆಗುತ್ತಿದ್ದ.
1897: ಅಮೋಘ ಭಾಷಣಕಾರ, ಸಾಹಿತ್ಯ, ಪತ್ರಿಕಾರಂಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ ತಿರುಮಲೆ ತಾತಾಚಾರ್ಯ ಶರ್ಮ (ತಿ.ತಾ. ಶರ್ಮ) (27-4-1897 ರಿಂದ 20-10-1973) ಅವರು ಚಿಕ್ಕಬಳ್ಳಾಪುರದ ರಾಜಗುರು ಮನೆತನದಲ್ಲಿ ಶ್ರೀನಿವಾಸ ತಾತಾಚಾರ್ಯ- ಜಾನಕಿಯಮ್ಮ ತಿರುಮಲ ದಂಪತಿಯ ಪುತ್ರರಾಗಿ ಈ ದಿನ ಜನಿಸಿದರು.
1896: ನೈಲಾನ್ ಕಂಡು ಹಿಡಿದ ವ್ಯಾಲೇಸ್ ಹ್ಯೂಂ ಕ್ಯಾರೂತರ್ಸ್ ಈ ದಿನ ಜನಿಸಿದರು.
1882: ಅಮೆರಿಕದ ತತ್ವಜ್ಞಾನಿ, ಕವಿ, ಪ್ರಬಂಧಕಾರ ರಾಲ್ಫ್ ವಾಲ್ಡೊ ಎಮರ್ಸನ್ 78ನೇ ವಯಸ್ಸಿನಲ್ಲಿ ಮೆಸಾಚ್ಯುಸೆಟ್ಸಿನ ಕಾಂಕಾರ್ಡಿನಲ್ಲಿ ಮೃತನಾದ.
1857: ಆಧುನಿಕ ಸಂಖ್ಯಾಶಾಸ್ತ್ರದ ಹರಿಕಾರ ಕಾರ್ಲ್ ಪಿಯರ್ ಸನ್ ಜನನ.
1521: ಪೋರ್ಚುಗೀಸ್ ಸಂಶೋಧಕ ಫರ್ಡಿನಾಂಡ್ ಮೆಗೆಲ್ಲನ್ ವಿಶ್ವ ಪರ್ಯಟನೆಗಾಗಿ ಹೊರಟಿದ್ದಾಗ ಫಿಲಿಪ್ಪೀನ್ಸ್ ಜನರಿಂದ ಹತನಾದ. ಫಿಲಿಪ್ಪೀನ್ಸಿನಲ್ಲೇ ಆತ ಹತನಾದರೂ ಆತನ ನೌಕೆ ಬಾಸ್ಕಿನ ಜುವಾನ್ ಸೆಬಾಸ್ಟಿಯನ್ ಡೆಲ್ ಕ್ಯಾನೊ ನೇತೃತ್ವದಲ್ಲಿ ಪಶ್ಚಿಮಾಭಿಮುಖವಾಗಿ ಸ್ಪೇನಿನತ್ತ ಯಾನ ಮುಂದುವರಿಸಿ ಜಗತ್ತಿಗೆ ಸುತ್ತು ಹಾಕಿದ ಮೊದಲ ನೌಕೆ ಎಂಬ ಹೆಗ್ಗಳಿಕೆಯನ್ನು ಪಡೆಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment