Monday, April 28, 2008

ಇಂದಿನ ಇತಿಹಾಸ History Today ಏಪ್ರಿಲ್ 28

ಇಂದಿನ ಇತಿಹಾಸ

ಏಪ್ರಿಲ್ 28

ಇಟೆಲಿಯ ಸರ್ವಾಧಿಕಾರಿ ಬೆನಿಟೋ ಮುಸ್ಸೋಲಿನಿ ಮತ್ತು ಆತನ ಪ್ರೇಯಸಿ ಕ್ಲಾರಾ ಪೆಟಾಸ್ಸಿಯನ್ನು ಅವರು ರಾಷ್ಟ್ರದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕ್ಲೊಲಲಾಯಿತು. ತಲೆಕೆಳಗಾಗಿ ನೇತಾಡುತ್ತಿದ್ದ ಅವರ ಶವಗಳು ಮಿಲಾನ್ನ ಪಿಯಾಝಾ ಲೊರೆಟೊದಲ್ಲಿ ಪತ್ತೆಯಾದವು.

2006: ಎಚ್.ಟಿ. ಮೀಡಿಯಾ ಲಿಮಿಟೆಡ್ ಉಪಾಧ್ಯಕ್ಷೆ ಶೋಭನಾ ಭಾರ್ತಿಯಾ ಮತ್ತು ಪಯೋನೀರ್ ಸಂಪಾದಕ ಚಂದನ್ ಮಿತ್ರ ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಕೇಂದ್ರ (ಸಿಪಿಐಎಲ್) ತನ್ನ ಅರ್ಜಿಯಲ್ಲಿ ಮೇಲ್ಮನೆಗೆ ಮಾಡಲಾದ ಇವರಿಬ್ಬರ ನಾಮಕರಣ ಸಂವಿಧಾನದ 80 (3) ವಿಧಿಯಡಿಯಲ್ಲಿ ಸೂಚಿತವಾಗಿರುವ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆ ಈ ವರ್ಗಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪೀಠವು ಸಮಾಜ ಸೇವೆ ಶಬ್ಧದ ಅರ್ಥವ್ಯಾಪ್ತಿ ಇಂತಹ ಪ್ರಕರಣಗಳು ಒಳಗೊಳ್ಳುವಷ್ಟು ವಿಶಾಲವಾಗಿದೆ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದರು.

2006: ಯುತ್ ಐಕಾನ್ ಹೆಸರಿನ ಮೊಹರು ಮಾಡಲಾದ ಸ್ಪೈಟ್ ಬಾಟಲಿಯೊಳಗೆ ಸತ್ತ ಕೀಟಗಳು ಇದ್ದುದುದಕ್ಕಾಗಿ 1.20 ಲಕ್ಷ ರೂಪಾಯಿಗಳ ಪರಿಹಾರವನ್ನು ಗ್ರಾಹಕನಿಗೆ ನೀಡುವಂತೆ ದೆಹಲಿಯ ಗ್ರಾಹಕ ನ್ಯಾಯಾಲಯವೊಂದು ಕೋಕಾ-ಕೋಲಾ ಕಂಪೆನಿಗೆ ಆದೇಶಿಸಿತು.

2006: ಹೌ ಓಪಲ್ ಮೆಹ್ತಾ ಗಾಟ್ ಕಿಸ್ಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್ ಕಾದಂಬರಿ ಕರ್ತೃ ಭಾರತೀಯ ಮೂಲದ ಲೇಖಕಿ ಕಾವ್ಯ ವಿಶ್ವನಾಥನ್ ಕೃತಿಚೌರ್ಯ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕಾದಂಬರಿ ಪ್ರಕಟಿಸಿದ ಪ್ರಕಾಶನ ಸಂಸ್ಥೆಯ ಲಿಟ್ಲ್ ಬ್ರೌನ್ ಕಾದಂಬರಿಯೆಲ್ಲ ಪ್ರತಿಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ನಿರ್ಧರಿಸಿತು.

2006: ಪಣಜಿ ಸಮೀಪದ ವಾಸೊದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಅತ್ಯಂತ ದೊಡ್ಡದಾದ ಅತ್ಯಾಧುನಿಕ ಕರಾವಳಿ ಕಡಲು ಪಹರೆ ನೌಕೆ 105 ಮೀಟರ್ ಉದ್ದದ ಐಜಿಜಿಎಸ್ ಸಂಕಲ್ಪ ಸೇರ್ಪಡೆಗೊಂಡಿತು.

2006: ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವಂತಿಲ್ಲ ಎಂದು ಭಾರತದ ಸುಪ್ರೀಂಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠವು 1986ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿ ಈ ತೀರ್ಪನ್ನು ನೀಡಿತು. ಲಾಟರಿ ಟಿಕೆಟ್ಟುಗಳ ಮಾರಾಟವನ್ನು ವಸ್ತುಗಳ ಮಾರಾಟಕ್ಕೆ ಸಮಾನವಾಗಿ ನೋಡಲಾಗದು. ಆದ್ದರಿಂದ ಅದರ ಮೇಲೆ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಹೇಳಿತು. ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ತೆರಿಗೆ ವಿಧಿಸಬಹುದು ಎಂದು 1986ರಲ್ಲಿ ನೀಡಲಾಗಿದ್ದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.

1946: ಭಾಷೆ ಹಾಗೂ ಕೋಶ ವಿಜ್ಞಾನಿ, ಸಂಶೋಧಕ ಪ್ರೊ. ಎ.ವಿ. ನಾವಡ ಅವರು ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ- ಪಾರ್ವತಿ ದಂಪತಿಯ ಪುತ್ರರಾಗಿ ಜನಿಸಿದರು.

1945: ಇಟೆಲಿಯ ಸರ್ವಾಧಿಕಾರಿ ಬೆನಿಟೋ ಮುಸ್ಸೋಲಿನಿ ಮತ್ತು ಆತನ ಪ್ರೇಯಸಿ ಕ್ಲಾರಾ ಪೆಟಾಸ್ಸಿಯನ್ನು ಅವರು ರಾಷ್ಟ್ರದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕ್ಲೊಲಲಾಯಿತು. ತಲೆಕೆಳಗಾಗಿ ನೇತಾಡುತ್ತಿದ್ದ ಅವರ ಶವಗಳು ಮಿಲಾನ್ನ ಪಿಯಾಝಾ ಲೊರೆಟೊದಲ್ಲಿ ಪತ್ತೆಯಾದವು.

1937: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಜನ್ಮದಿನ. 1979ರಿಂದ ಇತ್ತೀಚೆಗೆ ಅಮೆರಿಕ ಪಡೆಗಳು ದಾಳಿ ನಡೆಸುವವರೆಗೂ ಈತ ಇರಾಕಿನ ಅಧ್ಯಕ್ಷನಾಗಿದ್ದ.

1928: ಇ.ಎಂ. ಶೂಮೇಕರ್ (1928-97) ಹುಟ್ಟಿದ ದಿನ. ಅಮೆರಿಕದ ಖಭೌತ ತಜ್ಞನಾದ ಈತ ಚಂದ್ರನ ಮಣ್ಣಿನ ಪದರ ಹಾಗೂ ಒಡೆದ ಕಲ್ಲುಗಳಿಗೆ `ರಿಗೋಲಿತ್' ಎಂದು ಹೆಸರಿಟ್ಟ. 1994ರಲ್ಲಿ ಗುರುಗ್ರಹಕ್ಕೆ ಡಿಕ್ಕಿ ಹೊಡೆದ ಪಿ/ಶೂಮೇಕರ್-ಲೆವಿ 9 ಧೂಮಕೇತುವನ್ನೂ ಈತ ಸಂಶೋಧಿಸಿದ.

1924: ಕೆನ್ನೆತ್ ಕೌಂಡಾ ಜನ್ಮದಿನ. 1961ರಲ್ಲಿ ಜಾಂಬಿಯಾಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಈತ 1991ರವರೆಗೂ ಅಲ್ಲಿನ ಅಧ್ಯಕ್ಷನಾಗಿದ್ದ.

1865: ಸ್ಯಾಮುಯೆಲ್ ಕ್ಯುನಾರ್ಡ್ 77ನೇ ವಯಸಿನಲ್ಲಿ ಮೃತನಾದ. ಬ್ರಿಟಿಷ್ ವರ್ತಕನಾದ ಈತ ಬ್ರಿಟಿಷ್ ಸ್ಟೀಮ್ ಶಿಪ್ ಕಂಪೆನಿಯ ಸ್ಥಾಪಕ. ಈ ಕಂಪೆನಿಗೆ ಆತನ ಹೆಸರನ್ನೇ ಇಡಲಾಗಿತ್ತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement