ಇಂದಿನ ಇತಿಹಾಸ
ಏಪ್ರಿಲ್ 23
ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಸಾರ್ವಭೌಮ ವೇದಿಕೆಯಲ್ಲಿ ದೇವ ದೇವೋತ್ತಮ ಸೀತಾಮಾತಾ ಸಹಿತ ಶ್ರೀರಾಮಚಂದ್ರನಿಗೆ ಮಂತ್ರ , ವೇದಘೋಷಗಳ ಮಧ್ಯೆ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ರಾಮಾಯಣ ಕಾಲದ ವೈಭವವನ್ನು ಆಧುನಿಕ ಯುಗದಲ್ಲಿ ಪ್ರತ್ಯಕ್ಷೀಕರಿಸುವ ಪ್ರಯತ್ನವಾಗಿ ನಡೆದ ರಾಮಾಯಣ ಮಹಾಸತ್ರದ ಪ್ರಧಾನ ಅಂಗವಾದ ಈ ಕಾರ್ಯಕ್ರಮ ಈ ದಿನ ಬೆಳಗ್ಗೆ ಕರ್ಕಾಟಕ ಲಗ್ನದಲ್ಲಿ ನೆರವೇರಿತು. ದೇಶದ 500 ನದಿಗಳಿಂದ ಸಂಗ್ರಹಿಸಲಾಗಿದ್ದ ಜಲದಿಂದ ಶ್ರೀರಾಮಚಂದ್ರ ಸೀತಾಮಾತೆಯ ವಿಗ್ರಹಗಳಿಗೆ ಅಭಿಷೇಕ ನಡೆಸಲಾಯಿತು.
ಇಂದು ವಿಶ್ವ ಪುಸ್ತಕ ದಿನ.
2007: ಸೋವಿಯತ್ ಒಕ್ಕೂಟದ ವಿಭಜನೆಯ ನಂತರದ ರಷ್ಯಾದ ಪ್ರಥಮ ಚುನಾಯಿತ ಅಧ್ಯಕ್ಷ ಬೋರಿಸ್ ಯೆಲ್ಸಿನ್ (76) ನಿಧನರಾದರು. ರಷ್ಯಾ ಕಂಡ ಅಪರೂಪದ ನಾಯಕ, ಯೆಲ್ಸಿನ್ ಜನಪ್ರಿಯತೆಯ ಉತ್ತುಂಗ, ವಿರೋಧದ ಅಲೆ ಎರಡನ್ನೂ ಎದುರಿಸಿದ ಮುಖಂಡ. ಅತ್ಯಂತ ಪರಿಣಾಮಕಾರಿ ಸುಧಾರಕನಾಗಿ 1991ರಲ್ಲಿ ಗೊರ್ಬಚೇವ್ ವಿರುದ್ಧ ಸ್ಪರ್ಧಿಸಿ ಗೆದ್ದು, ಅಧಿಕಾರಕ್ಕೆ ಬಂದ ಯೆಲ್ಸಿನ್ ನಂತರದ ದಿನಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಆರ್ಥಿಕತೆಯ ಕುಸಿತ ಹಾಗೂ ಅಪಾರ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣರಾದರು.
2007: ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆಗಸಕ್ಕೆ ಚಿಮ್ಮಿದ ಪಿಎಸ್ಎಲ್ವಿ -ಸಿ8 ಗಗನನೌಕೆಯು ಇಟಲಿಯ ಉಪಗ್ರಹ `ಅಗೈಲ್'ನ್ನು ಕಕ್ಷೆಯ್ಲಲಿ ಯಶಸ್ವಿಯಾಗಿ ಕೂರಿಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಇತಿಹಾಸದಲ್ಲಿ ಪ್ರಮುಖ ಸಾಧನೆ ಮಾಡಿತು. ಇದೇ ಮೊದಲ ಬಾರಿಗೆ ಇಸ್ರೊ ವಾಣಿಜ್ಯಿಕ ಉದ್ದೇಶಕ್ಕಾಗಿ ವಿದೇಶೀ ಉಪಗ್ರಹವನ್ನು ಉಡಾವಣೆ ಮಾಡಿದ್ದು, ಈ ಯಶಸ್ಸು ಜಾಗತಿಕ ಉಪಗ್ರಹ ಉಡಾವಣೆ ಕ್ಷೇತ್ರದಲ್ಲಿ ಭಾರತಕ್ಕೆ ಮಹತ್ವದ ಸ್ಥಾನವನ್ನು ದೊರಕಿಸಿಕೊಟ್ಟಿತು. ಮಧ್ಯಾಹ್ನ 3.30ಕ್ಕೆ ಗಗನಕ್ಕೆ ಚಿಮ್ಮಿದ ಪಿ.ಎಸ್.ಎಲ್.ವಿ-ಸಿ 8' 22 ನಿಮಿಷಗಳ ನಂತರ 352 ಕೆ.ಜಿ. ತೂಕದ ಇಟಲಿಯ `ಅಗೈಲ್'ನ್ನು ಭೂಮಿಯಿಂದ 550 ಕಿ.ಮೀ. ಎತ್ತರದಲ್ಲಿ ಕಕ್ಷೆಯಲ್ಲಿ ಕೂರಿಸಿತು.
2007: ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡಲಾದ ಶೇಕಡಾ 27ರ ಮೀಸಲಾತಿ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ಐಐಎಂ, ಐಐಟಿಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶೇಕಡಾ 27 ಒಬಿಸಿ ಮೀಸಲಾತಿ ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ನ್ಯಾಯಾಲಯ ತಿಳಿಸಿತು.
2007: ಗೋ ಸಂರಕ್ಷಣೆಗಾಗಿ ಸಂತ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲು ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರಿ ರಾಮಚಂದ್ರಾಪುರ ಮಠದ ಆವರಣದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಸಂತ ಸಮಾವೇಶವು ನಿರ್ಧರಿಸಿತು. ಈ ನಿಟ್ಟಿನ್ಲಲಿ ನಿರ್ಣಯವೊಂದನ್ನು ಮಂಡಿಸಿ ಅಂಗೀಕರಿಸಲಾಯಿತು.
2007: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಪೊಲೀಸ್ ಠಾಣೆಯ್ಲಲಿ ದಾಖಲಾದ ಪ್ರಕರಣದ ವಿಚಾರಣೆ ಪೂರೈಸಿದ ಬೆಂಗಳೂರು ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯವು ಪ್ರಮುಖ ಅಪರಾಧಿ ಅಬ್ದುಲ್ ಕರೀಂ ತೆಲಗಿ ಸೇರಿದಂತೆ ಐವರಿಗೆ ತಲಾ 10 ವರ್ಷಗಳ ಸೆರೆವಾಸ ಮತ್ತು 70,000 ರೂಪಾಯಿಗಳ ದಂಡ ವಿಧಿಸಿತು. ನ್ಯಾಯಾಧೀಶ ವಿಶ್ವನಾಥ ವಿರೂಪಾಕ್ಷ ಅಂಗಡಿ ಅವರು ಸಂಜೆ ನಾಲ್ಕು ಗಂಟೆಗೆ ತೀರ್ಪನ್ನು ಪ್ರಕಟಿಸಿದರು.
2007: ಭಾರತೀಯ ಮೂಲದ ಪತ್ರಕರ್ತ ಐಜಾಜ್ ಝೂಕ ಸೈಯದ್ ಅವರಿಗೆ 2006ರ ಸಾಲಿನ ಪ್ರತಿಷ್ಠಿತ ಲಾರೆಂಜೊ ನಟಾಲಿ ಪ್ರಶಸ್ತಿ ಲಭಿಸಿತು. ಅವರು ಬರೆದ ಸೂಡಾನ್ ದೇಶದ ದಾರ್ ಪುರದಲ್ಲಿನ ಶೋಚನೀಯ ಸ್ಥಿತಿಗತಿಗಳ ಕುರಿತ ಬರಹಕ್ಕೆ ಈ ಬರಹ ಬಂದಿತು. ಪ್ರಶಸ್ತಿಯನ್ನು ಯುರೋಪಿಯನ್ ಯೂನಿಯನ್ 1992ರಲ್ಲಿ ಸ್ಥಾಪಿಸಿದ್ದು, ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶ್ರೇಷ್ಠ ಪತ್ರಿಕೋದ್ಯಮಕ್ಕೆ ನೀಡಲಾಗುತ್ತದೆ.
2007: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೃಷಿ, ಆರ್ಥಿಕ ತಜ್ಞ ಡಾ. ಪಿ.ಜಿ. ಚೆಂಗಪ್ಪ ಅವರನ್ನು ರಾಜ್ಯಪಾಲ ಚತುರ್ವೇದಿ ನೇಮಕ ಮಾಡಿದರು.
2006: ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಸಾರ್ವಭೌಮ ವೇದಿಕೆಯಲ್ಲಿ ದೇವ ದೇವೋತ್ತಮ ಸೀತಾಮಾತಾ ಸಹಿತ ಶ್ರೀರಾಮಚಂದ್ರನಿಗೆ ಮಂತ್ರ , ವೇದಘೋಷಗಳ ಮಧ್ಯೆ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ರಾಮಾಯಣ ಕಾಲದ ವೈಭವವನ್ನು ಆಧುನಿಕ ಯುಗದಲ್ಲಿ ಪ್ರತ್ಯಕ್ಷೀಕರಿಸುವ ಪ್ರಯತ್ನವಾಗಿ ನಡೆದ ರಾಮಾಯಣ ಮಹಾಸತ್ರದ ಪ್ರಧಾನ ಅಂಗವಾದ ಈ ಕಾರ್ಯಕ್ರಮ ಈ ದಿನ ಬೆಳಗ್ಗೆ ಕರ್ಕಾಟಕ ಲಗ್ನದಲ್ಲಿ ನೆರವೇರಿತು. ದೇಶದ 500 ನದಿಗಳಿಂದ ಸಂಗ್ರಹಿಸಲಾಗಿದ್ದ ಜಲದಿಂದ ಶ್ರೀರಾಮಚಂದ್ರ ಸೀತಾಮಾತೆಯ ವಿಗ್ರಹಗಳಿಗೆ ಅಭಿಷೇಕ ನಡೆಸಲಾಯಿತು. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ 10 ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿದ್ದರು. ದೇಶಾದ್ಯಂತದ ಮೂರು ಲಕ್ಷಕ್ಕೂ ಅಧಿಕ ಮಂದಿ 10 ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಮ್ಮ ಜೀವನದ ಸರ್ವಸ್ವವನ್ನೂ ಇನ್ನು ಮುಂದೆ ಗೋ ಸಂರಕ್ಷಣೆಗೆ ಸಮರ್ಪಿಸುವುದಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಘೋಷಿಸಿದರು.
2006: ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ ಸಿಂಗ್ (ವಿ.ಪಿ. ಸಿಂಗ್) ಅವರು ಜನ ಮೋರ್ಚಾ ಹೆಸರಿನ ಹೊಸ ಪಕ್ಷ ಸ್ಥಾಪನೆಯನ್ನು ಪ್ರಕಟಿಸಿದರು ಮತ್ತು ಖ್ಯಾತ ಹಿಂದಿ ಚಿತ್ರನಟ ಹಾಗೂ ಸಮಾಜವಾದಿ ಪಕ್ಷದಿಂದ ಉಚ್ಚಾಟನೆಗೊಂಡ ರಾಜ್ ಬಬ್ಬರ್ ಅವರನ್ನು ಈ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.
1992: ಭಾರತದ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರು ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೂರು ವಾರಗಳ ಬಳಿಕ ಕೋಲ್ಕತ್ತಾದಲ್ಲಿ ಮೃತರಾದರು.
1990: ಚಿತ್ರನಟಿ ಹಾಗೂ ನಟ ಚಾರ್ಲಿ ಚಾಪ್ಲಿನ್ ಅವರ ಮಾಜಿ ಪತ್ನಿ ಪೌಲೆಟ್ ಗೊಡ್ಡಾರ್ಡ್ ಮೃತರಾದರು. ಅಕೆ ಚಾರ್ಲಿ ಚಾಪ್ಲಿನ್ ಜೊತೆಗೆ `ಮಾಡರ್ನ್ ಟೈಮ್ಸ್' ಹಾಗೂ `ದಿ ಗ್ರೇಟ್ ಡಿಕ್ಟೇಟರ್' ಚಿತ್ರಗಳಲ್ಲಿ ನಟಿಸಿದ್ದರು.
1985: ಶಾ ಬಾನೊ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಬಡ, ಅನಕ್ಷರಸ್ಥ ಮುಸ್ಲಿಂ ಮಹಿಳೆ ಶಾ ಬಾನೊ ತನ್ನ ವಿಚ್ಛೇದಿತ ಪತಿ ಮಹಮ್ಮದ್ ಅಹ್ಮದನಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಳು. ಆಕೆಯ ಪರವಾಗಿ ತೀರ್ಪು ನೀಡಿದ ಮಧ್ಯಪ್ರದೇಶ ಹೈಕೋರ್ಟ್, ವಿಚ್ಛೇದಿತ ಮಹಿಳೆಗೆ ಬದುಕಿಗೆ ಯಾವುದೇ ಆದಾಯ ಇಲ್ಲದಿದ್ದರೆ ಆಕೆಯ ಮರುಮದುವೆ ಅಥವಾ ಮರಣದವರೆಗೆ ಯಾವುದೇ ಧರ್ಮದ ಭೇದವಿಲ್ಲದೆ ಜೀವನಾಂಶ ನೀಡಬೇಕು ಎಂದು ಹೇಳಿತ್ತು.
1985: ಕೊಕಾ ಕೋಲ ಕಂಪೆನಿಯು ತಾನು ಕೋಕ್ ನ ರಹಸ್ಯ ಫಾರ್ಮುಲಾವನ್ನು ಬದಲಾಯಿಸುತ್ತಿರುವುದಾಗಿ ಪ್ರಕಟಿಸಿತು. ಆದರೆ ಸಾರ್ವಜನಿಕರಿಂದ ವ್ಯಕ್ತವಾದ ಪ್ರತಿಭಟನೆಯನ್ನು ಅನುಸರಿಸಿ ನಂತರ ತನ್ನ ಮೊದಲಿನ ಫಾರ್ಮುಲಾವನ್ನೇ ಉಳಿಸಿಕೊಂಡಿತು.
1978: ಕಲಾವಿದೆ ಪೂರ್ಣಿಮಾ ಡಿ. ಸಾಗರ ಜನನ.
1967: ರಷ್ಯದ ಸೋಯುಜ್ 1 ಬಾಹ್ಯಾಕಾಶ ನೌಕೆಯ ಉಡ್ಡಯನ ನಡೆಯಿತು. ಅದು 17 ಸುತ್ತುಗಳನ್ನು ಮುಗಿಸಿ ಭೂಕಕ್ಷೆಗೆ ಮರಳುವಾಗ ಸ್ಫೋಟಗೊಂಡು ಗಗನಯಾನಿ ವ್ಲಾಡಿಮೀರ್ ಕೊಮಾರೋವ್ ಅಸುನೀಗಿದರು.
1964: ಕಲಾವಿದೆ ಮಾಲಿನಿ ಜನನ.
1958: ಕಲಾವಿದ ಎಂ. ರಾಘವೇಂದ್ರ ಜನನ.
1956: ಬೀದಿ ನಾಟಕಗಳ ಮೂಲಕ ಧಾರವಾಡ ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನ ಕೈಗೊಂಡ ಕಲಾವಿದ ವೀರೇಶ ಗುತ್ತಲ ಅವರು ಕೃಷ್ಣಪ್ಪ ಗುತ್ತಲ- ಶಾರದಾಬಾಯಿ ದಂಪತಿಯ ಮಗನಾಗಿ ಹಾವೇರಿ ತಾಲ್ಲೂಕಿನ ಕಿತ್ತೂರ ಗ್ರಾಮದಲ್ಲಿ ಜನಿಸಿದರು.
1949: ಕಲಾವಿದೆ ಟಿ.ಎನ್. ಪದ್ಮಾ ಜನನ.
1913: ಹಾಸ್ಯಬ್ರಹ್ಮ ಎಂದೇ ಖ್ಯಾತರಾಗಿದ್ದ ರಾಯಸದ ಭೀಮಸೇನರಾವ್ 'ಬೀಚಿ'(23-4-1913 ರಿಂದ 7-12-1980) ಹುಟ್ಟಿದ ದಿನ. ಶ್ರೀನಿವಾಸರಾವ್- ಭಾರತಮ್ಮ ದಂಪತಿಯ ಪುತ್ರರಾಗಿ ಬಳ್ಳಾರಿ ಜಿಲ್ಲೆಯ ಹರಪನಹಳಿಯಲ್ಲಿ ಜನಿಸಿದ ಅವರು ಅ.ನ.ಕೃ. ಅವರ ಸಂಧ್ಯಾರಾಗ ಓದಿ ಕನ್ನಡ ದೀಕ್ಷೆ ಸ್ವೀಕರಿಸಿ ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಕನ್ನಡ ಹಾಸ್ಯ ಸಾಹಿತ್ಯದಲ್ಲಿ ಅಮರರಾದ ಅವರ ತಿಂಮ ಪಾತ್ರ ಖ್ಯಾತ ಹಾಸ್ಯ ಬರಹಗಾರ ಪಿ.ಜಿ. ಓಡ್ಹೌಸ್ ಅವರ ಜೀವ್ಸ್ ಪಾತ್ರವನ್ನೇ ಹೋಲುವ ಕನ್ನಡದ ಸೃಷ್ಟಿ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment