Friday, May 30, 2008

ಬತ್ತದ ಚಿಂತನೆಗಾಗಿ 'ಭತ್ತ ಉತ್ಸವ..!' / Bhatta Utsava (Rice Utsav)!

Bhatta Utsava

(Rice Utsav)!


Prices of Rice are touching sky. Reason to this is attraction towards commercial crops, IT, BT and conversion of agricultural land for non agricultural purposes. As result of all these, traditional Rice seeds and their varities are in the verge of vanishing. Sahaja Samrudda with co operation of several organisations has organised two days Rice Utsav at Banavasi, Sirsi Taluk to think on these aspects.

Rice is Asia's most deeply revered treasure. It is central to the Asian way of life; its culture, spirituality, traditions and norms. The staple food of three billion Asians, half the world's population, Rice is Life to the people of Asia.

In the last five decades the rice heritage has been eroded and is under grave danger of being lost completely. The introduction of hybrid rice serves as a springboard to genetically engineered (GE) rice. Rice seed varieties are moving from the hands of farmers, particularly women, and indigenous communities to those of seed companies and privatized agencies.

Pesticide Action Network Asia and the Pacific (PAN AP) launched Save our Rice Campaign. Peoples' movements and NGO's across Asia have joined in this Campaign to protect our rice culture and wisdom.

Sahaja Samrudha in collaboration with Thanal, Kerala has initiated Save Our Rice Campaign in Karnataka and in this context is conducting a 'Rice Utsav ' on 7th and 8 th June 2008 at Banavasi, Sirsi Taluk, Karnatka.

Interested can contact: Krishna Prasad Director, Sahaja Samrudha http://www.sahajasamrudha.org/
Mobile: 9880862058

ಬತ್ತದ ಚಿಂತನೆಗಾಗಿ

'ಭತ್ತ ಉತ್ಸವ..!'


ಸಮಸ್ತರ ಅನ್ನದ ಬಟ್ಟಲು ತುಂಬುವ ಭತ್ತ ಅವಸಾನದತ್ತ ಸಾಗುತ್ತಿದೆ. ಭತ್ತದ ತೆನೆಗಳು ತುಂಬಿ ತುಳುಕಾಡಬೇಕಾಗಿದ್ದ ಹೊಲ ಗದ್ದೆಗಳು, ವಾಣಿಜ್ಯ ಬೆಳೆಗಳ ತೋಟಗಳಾಗಿಯೋ, ಐಟಿ - ಬಿಟಿ ಉದ್ಯಮಗಳ ಆಡುಂಬೊಲವಾಗಿಯೋ, ವಸತಿ, ವಾಣಿಜ್ಯ ಕಟ್ಟಡಗಳ ಸಂತೆಗಳಾಗಿಯೋ ಮಾರ್ಪಡುತ್ತಿವೆ. ಪರಿಣಾಮ: ಅಕ್ಕಿಯ ಬೆಲೆ ಗಗನಕ್ಕೆ ಏರುತ್ತಿದೆ. ಹಸಿವು ಇಂಗಿಸುವ ಅಕ್ಕಿ ಬೇಕೆಂದರೆ ಭತ್ತದ ಸಂತಾನ ಉಳಿಸಬೇಕು. ಈ ನಿಟ್ಟಿನ ಚಿಂತನೆಗಾಗಿ ಬನವಾಸಿಯಲ್ಲಿ ನಡೆಯಲಿದೆ 'ಭತ್ತ ಉತ್ಸವ...!'

ನೆತ್ರಕೆರೆ ಉದಯಶಂಕರ

ಎಲ್ಲಾದರೂ ಸರಿ, ದಿನಸಿ ಅಂಗಡಿಗೆ ಹೋಗಿ ಅಕ್ಕಿಯ ಬೆಲೆ ಕೇಳಿ. ತಲೆ ತಿರುಗುತ್ತದೆ. ಏಕೆಂದರೆ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಹೀಗೇಕೆ ಎಂದು ಒಂದು ದಿನವಾದರೂ ಕೂತು ಚಿಂತಿಸಿದ್ದೀರಾ?

ಪ್ರಶ್ನೆಗೆ ಬರಬಹುದಾದ ಉತ್ತರ ಇಲ್ಲ ಎಂದೇ. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ನಮ್ಮ ಗಮನವೆಲ್ಲ ಹಣ ಮಾಡುವ ಕಡೆಗೆ, ಐಟಿ, ಬಿಟಿಯ ಕಡೆಗೆ, ಸುಲಭವಾಗಿ ಗಳಿಸುವ ದಾರಿಯ ಕಡೆಗೆ. ಬೆಳೆದ ಬೆಲೆಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ರೈತರೂ ಭತ್ತದ ಕೃಷಿಯಿಂದ ದೂರವಾಗುತ್ತಿದ್ದಾರೆ. ಸಾಂಪ್ರದಾಯಿಕ ಭತ್ತದ ತಳಿಗಳು ಅವಸಾನದ ಅಂಚಿನತ್ತ ಸಾಗುತ್ತಿವೆ. ವಾಣಿಜ್ಯ ಉತ್ಪನ್ನಗಳೇ ಎಲ್ಲರ ಮಂತ್ರವಾಗುತ್ತಿವೆ.

ಇದರ ಪರಿಣಾಮ: ಅಕ್ಕಿಯ ಬೆಲೆ ಗಗನಮುಖಿ ಆಗುತ್ತಿದೆ. ಅಕ್ಕಿಯಷ್ಟೇ ಅಲ್ಲ, ಇತರ ಕೃಷಿ ಉತ್ಪನ್ನಗಳ ಬೆಲೆಗಳೂ ಇದೇ ದಾರಿ ಹಿಡಿದಿವೆ ಎನ್ನಿ. ಹಾಗಂತ ಈ ಏರಿದ ಬೆಲೆಗಳು ರೈತರಿಗೆ ವರದಾನವೇನೂ ಆಗಿಲ್ಲ ಎಂಬುದು ಬೇರೆಯೇ ವಿಚಾರ.

ಎಲ್ಲಕ್ಕಿಂತ ಮುಖ್ಯ ವಿಚಾರ ಮಾತ್ರ ಎಲ್ಲರ ಹೊಟ್ಟೆ ತುಂಬಿಸುವ ಅಕ್ಕಿಯ ಗತಿ ಹೀಗಾದರೆ ಹೇಗೆ ಎಂಬುದು.

ಕೋಟ್ಯಂತರ ಜನರ ಅನ್ನದ ಬಟ್ಟಲು ತುಂಬುವ ಭತ್ತ ಏಷ್ಯಾದ ಪ್ರಮುಖ ಬೆಳೆ. ಭಾರತದ ರೈತರು ಏಳು ಸಾವಿರ ವರ್ಷಗಳಿಂದ ಭತ್ತದ ಕೃಷಿ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿದ್ದಾರೆ.

ಆಯಾ ಪ್ರದೇಶ, ವಾತಾವರಣ, ಆಹಾರ ಪದ್ಧತಿಗೆ ಸೂಕ್ತವಾಗಬಲ್ಲ ವಿವಿಧ ಬಗೆಯ ಭತ್ತದ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಅವುಗಳನ್ನು ಸಾಗಿಸಿ ತಂದಿದ್ದಾರೆ.

ಆದರೆ ಹಸಿರುಕ್ರಾಂತಿಯ ಹೆಸರಿನಲ್ಲಿ ಭತ್ತಕ್ಕೆ ಕುತ್ತಿನ ಆಗಮನವಾಯಿತು. ರಾಸಾಯನಿಕ ಕೃಷಿ ಭತ್ತದ ಗದ್ದೆಗಳಿಗೆ ಕಾಲಿಟ್ಟಿತು.

ಆಹಾರದ ರುಚಿ, ಮೇವಿನ ಗುಣಮಟ್ಟದಂತಹ ಆದ್ಯತೆಯ ಗುಣಗಳು ಮೂಲೆಗುಂಪಾಗಿ ಅಧಿಕ ಇಳುವರಿ ಮಂತ್ರವಾಯಿತು. ಇದ್ದಬದ್ದ ನಾಡುತಳಿಗಳು ನಾಶವಾದವು.

ಇದು ಸಾಲದೆಂಬಂತೆ ಭತ್ತದ ಕೃಷಿಗೆ ಈಗ ಹೊಸ ಗಂಡಾಂತರ ಎದುರಾಗಿದೆ. ಜೀನ್ ಕ್ರಾಂತಿಯ ಹೆಸರಲ್ಲಿ ಜೈವಿಕವಾಗಿ ಮಾರ್ಪಡಿಸಿದ ಭತ್ತದ ತಳಿಗಳು ಬರುತ್ತಿವೆ.

ಮಾನ್ಸಂಟೋ, ಸಿಂಜಂಟಾದಂತ ಬಹುರಾಷ್ರೀಯ ಬೀಜ ಕಂಪೆನಿಗಳ ಕೈಯಲ್ಲಿ ಭತ್ತ ಬಂಧಿಯಾಗುತ್ತಿದೆ.

ಭತ್ತದ ಕೃಷಿ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಡುವ ಉದ್ದೇಶದಿಂದ 'ಸಹಜ ಸಮೃದ್ಧ' ವಿವಿಧ ಸಂಸ್ಥೆಗಳ ಜೊತೆಗೂಡಿ ಜೂನ್ 7 ಮತ್ತು 8 ರಂದು ಭತ್ತ ಉತ್ಸವವನ್ನು ಏರ್ಪಡಿಸಿದೆ. ಶಿರಸಿಯಿಂದ 22 ಕಿ.ಮೀ. ದೂರದ ಬನವಾಸಿಯ ರಮ್ಯ ತಾಣದಲ್ಲಿ ಈ ಭತ್ತ ಉತ್ಸವ ನಡೆಯಲಿದೆ.

ಭತ್ತದ ತಳಿ ಸಂರಕ್ಷಕರು, ವಿಜ್ಞಾನಿಗಳು, ಅಕ್ಕಿ ಗಿರಣಿಯ ಮಾಲೀಕರು, ಸಾವಯವ ಭತ್ತ ಖರೀದಿದಾರರು, ಸಾವಯವ ಕೃಷಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮಾಧ್ಯಮ ಗೆಳೆಯರು ಭತ್ತ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಭತ್ತದ ತಳಿಗಳ ಪ್ರದರ್ಶನ, ಅಕ್ಕಿಯ ವಿವಿಧ ಬಗೆಯ ಅಡುಗೆಗಳು, ಭತ್ತದ ತಳಿ ಅಭಿವೃದ್ಧಿ, ಭತ್ತದ ಸಾವಯವ ಮಾರುಕಟ್ಟೆ, ಭತ್ತದ ಸಂಸ್ಕೃತಿಯ ಪರಿಚಯದ ಮೂಲಕ ಭತ್ತ ಸಂರಕ್ಷಣೆಯ ಬೇರುಗಳನ್ನ ಗಟ್ಟಿಗೊಳಿಸಲಿದ್ದಾರೆ.

ಆಸಕ್ತರು, ಕೃಷಿಕರು, ರೈತ ಹಿತಾಕಾಂಕ್ಷಿಗಳು ಭತ್ತದ ಬೀಜ, ತೋರಣ, ತೆನೆ ಹಿಡಿದು ಈ ಉತ್ಸವಕ್ಕೆ ಬರಬೇಕು ಎಂದು 'ಸಹಜ ಸಮೃದ್ಧ' ಆಶಿಸಿದೆ.

ಈ ಭತ್ತ ಉತ್ಸವ ಸಂಘಟಿಸುವಲ್ಲಿ ಸಹಜ ಸಮೃದ್ಧದ ಜೊತೆಗೆ ಶ್ರೀ ಮಾತೋಬರ ಮಧುಕೇಶ್ವರ ದೇವಸ್ಥಾನ ಸಮಿತಿ, ಗ್ರಾಮ ಪಂಚಾಯಿತಿ, ಬನವಾಸಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ವಿಶ್ವೋದಯ ಗ್ರಾಮೀಣ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ವಲಯ ಅಭ್ಯುದಯ ಸಮಿತಿ, ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶ್ರೀ ಜಯಂತಿ ವಿದ್ಯಾವರ್ಧಕ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಸಮುದಾಯ ದಳ, ನಾಮದೇವ ಕಲ್ಯಾಣ ಮಂಟಪ ಸಮಿತಿ, ಗ್ರಾಮವಿಕಾಸ್, ಮುಳಬಾಗಿಲು, ಕೃಷಿ ಸಂಶೋಧನ ಕೇಂದ್ರ (ಭತ್ತ), ಶಿರಸಿ, ಪರಿಸರ ಸಂರಕ್ಷಣಾ ಕೇಂದ್ರ, ಶಿರಸಿ ಇತ್ಯಾದಿ ಸಂಘಟನೆಗಳೂ ಜೊತೆಯಾಗಿವೆ.

ಬನವಾಸಿಯ ಜಯಂತಿ ಪ್ರೌಢಶಾಲೆ ಆವರಣದಲ್ಲಿ ನಡೆಯುವ ಉತ್ಸವವನ್ನು ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ನಿರ್ದೇಶಕ ಡಾ. ಎ. ರಾಜಣ್ಣ ಉದ್ಘಾಟಿಸುತ್ತಾರೆ. ಶಿರಸಿ ತೋಟಗಾರ್ ಸೊಸೈಟಿ ಅಧ್ಯಕ್ಷ ಶಾಂತಾರಾಮ್ ಹೆಗಡೆ ಶೀಗೇ ಹಳ್ಳಿ ಅಧ್ಯಕ್ಷತೆ ವಹಿಸುತ್ತಾರೆ. ಕೇರಳದ ಭತ್ತ ಉಳಿಸಿ ಆಂದೋಲನದ ಶ್ರೀಮತಿ ಉಷಾ ಪುಸ್ತಕ ಬಿಡುಗಡೆ ಮಾಡುತ್ತಾರೆ.

ಸಿರಿವಂತೆ ಚಂದ್ರಶೇಖರ್ ಅವರ 1000 ಅಡಿ ಉದ್ದದ ದಾಖಲೆಯ ಭತ್ತದ ತೋರಣದ ಉದ್ಘಾಟನೆ ಈ ಸಮಾರಂಭದ ವಿಶೇಷ.
ಶಿರಸಿ ಎಪಿಎಂಸಿ ಅಧ್ಯಕ್ಷ ಎನ್.ಎಸ್. ಹೆಗಡೆ ಕೋಟೆಕೊಪ್ಪ, ಜಂಟಿ ಕೃಷಿ ನಿರ್ದೇಶಕ ಡಾ. ಅಮಾನ್ ಶೇಕಬ್, ಸ್ವದೇಶೀ ಜಾಗರಣ ಮಂಚ್ನ ಪ್ರೊ. ಬಿ.ಎಂ. ಕುಮಾರಸ್ವಾಮಿ, ರಾಷ್ಟ್ರಪ್ರಶಸ್ತಿ ವಿಜೇತ ರೈತ ವಿಜ್ಞಾನಿ ಲಿಂಗಮಾದಯ್ಯ ಮತ್ತಿತರರು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳು.

ಎರಡು ದಿನಗಳ ಉತ್ಸವದಲ್ಲಿ ಭತ್ತದ ವೈವಿಧ್ಯಮಯ ತಿಂಡಿ ತಿನಸು- ಸವಿ ಭೋಜನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಹಬ್ಬ ನಡೆಯಲಿದೆ. ಇವೆಲ್ಲಕ್ಕೂ ಮಿಗಿಲಾಗಿ ಭತ್ತಕ್ಕೆ ಸಂಬಂಧಿಸಿದಂತೆ ನಾಡಿನ ವಿವಿಧ ಕ್ಷೇತ್ರಗಳ ಚಿಂತಕರು, ಪತ್ರಕರ್ತರು, ಭತ್ತದ ಮೂಲ ತಳಿ ಉಳಿಸಿದ, ಹೊಸ ಹೊಸ ಪ್ರಯೋಗ ನಡೆಸಿದ, ಸಾವಯವ ಕೃಷಿ ಮಾಡಿ ಗೆದ್ದ ರೈತ ಸಾಹಸಿಗಳು ತಮ್ಮ ಅನುಭವ ಚಿಂತನೆಗಳ ಮಹಾಪೂರ ಹರಿಸಲಿದ್ದಾರೆ. ಭತ್ತ ತಳಿ ಅಭಿವೃದ್ಧಿಯ ತಂತ್ರಗಳು, ಭತ್ತ ಕೃಷಿಯ ಹೊಸ ಸಾಧ್ಯತೆಗಳು, ಭತ್ತದ ಕೃಷಿಗೆ ಎದುರಾಗಿರುವ ಹೊಸ ಸವಾಲುಗಳು, ಭತ್ತದ ಮಾರುಕಟ್ಟೆ - ಮೌಲ್ಯ ವರ್ಧನೆ ಇತ್ಯಾದಿಗಳ ಬಗ್ಗೆ ಕೂಲಂಕಷ ಚರ್ಚೆ- ಗುಂಪು ಸಮಾಲೋಚನೆ ನಡೆಸಲಿದ್ದಾರೆ.

ಭತ್ತದ ಬಗ್ಗೆ ತಿಳಿಯಬೇಕಾದ ವಿಚಾರಗಳು ಇಷ್ಟೊಂದು ಉಂಟಾ ಎಂಬ ಪ್ರಶ್ನೆ ತಲೆಕೊರೆಯುವಂತೆ ಮಾಡಬಲ್ಲ ಈ 'ಭತ್ತ ಉತ್ಸವ' ಎಂದೂ ಬತ್ತದ ವಿಚಾರಗಳನ್ನು ನಿಮ್ಮ ಮೆದುಳಿನಲ್ಲಿ ಬಿತ್ತುವುದು ಖಂಡಿತ.

ಭತ್ತ ಬೆಳೆಯುವವರಿಗಷ್ಟೇ ಅಲ್ಲ, ನಿತ್ಯ ಅದನ್ನು ಉಣ್ಣುವವರೂ ತಿಳಿದುಕೊಳ್ಳಬೇಕಾದ ವಿಚಾರಗಳನ್ನು ಈ ಉತ್ಸವ ಉಣ ಬಡಿಸಲಿದೆ.

ಆಸಕ್ತರು ಖುದ್ದಾಗಿ ಈ ಮೇಳದಲ್ಲಿ ಹಾಜರಾಗಬಹುದು. ಸಂಪರ್ಕಿಸಬಯಸುವವರು ಶಾಂತಕುಮಾರ್- 9731275656, ಅಣೆಕಟ್ಟೆ ವಿಶ್ವನಾಥ- 9449769743, ಹಾಲಪ್ಪ ಎಸ್.ಕೆರೂಡಿ- 9448694226 ಇವರನ್ನು ಸಂಪರ್ಕಿಸಬಹುದು ಎಂದು 'ಸಹಜ ಸಮೃದ್ಧ'ದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಬನವಾಸಿಗೆ ಬರುವವರಿಗೆ: ರಾಜ್ಯದ ಎಲ್ಲ ಮುಖ್ಯ ಸ್ಥಳಗಳಿಂದ ಶಿರಸಿಗೆ ಬಸ್ ಸೌಕರ್ಯವಿದೆ. ಶಿರಸಿಯಿಂದ ಬನವಾಸಿ 22 ಕಿ.ಮಿ. ದೂರದಲ್ಲಿದೆ. ಪ್ರತಿ ಅರ್ಧ ಘಂಟೆಗೊಂದು ಬಸ್ ಇದೆ ಟೆಂಪೋ ಕೂಡ ಸಿಗುತ್ತವೆ.

No comments:

Advertisement