Yes, after six months, blessings of Gou Matha clicked and Mr. B.S. Yeddyurappa, who identified himself as favorite of farmers and his party BJP won the legislative assembly elections in Karnataka. In Koti Neerajana Programme held at Bangalore in last November Sri Raghaveshwara Bharati Swamiji of Sri Ramachandrapur Mutt said that those who involve themselves in the task of Gou Samrakshne, will be definitely blessed by Gou Matha.
ಗೋಮಾತೆಯ ಆಶೀರ್ವಾದ ಫಲಿಸಿತು..!
ಬಿಜೆಪಿ ಧುರೀಣ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೋಮಾತೆಯ ಸೇವೆಯಲ್ಲಿ ಕಾಯಾ, ವಾಚಾ, ಮನಸಾ ತೊಡಗಿಸಿಕೊಂಡದ್ದರ ಫಲ ಲಭಿಸಿದೆ. ಬಹುಶಃ ಇದೇ ಮೊದಲ ಬಾರಿಗೆ ರೈತ ಪರ ಹೋರಾಟಗಾರ ಎಂದು ಸ್ವತಃ ಗುರುತಿಸಿಕೊಂಡ ವ್ಯಕ್ತಿ ಕರ್ನಾಟಕದ 25ನೇ ಮುಖ್ಯಮಂತ್ರಿ ಆಗುತ್ತಿದ್ದಾರೆ. ಎಚ್.ಡಿ. ದೇವೇಗೌಡರು ಈಗ ಕಾಂಗ್ರೆಸ್ ಜೊತೆಗೆ ಕೈಜೋಡಿಸದೇ ಇರುವ ಮೂಲಕ 'ಪಾಪ ಪರಿಮಾರ್ಜನೆ' ಮಾಡಿಕೊಳ್ಳಬೇಕಾಗಿದೆ.
ನೆತ್ರಕೆರೆ ಉದಯಶಂಕರ
ಕರ್ನಾಟಕ ಕಡೆಗೂ ಇತಿಹಾಸ ನಿರ್ಮಿಸಿತು. ಉತ್ತರ ಭಾರತದಲ್ಲಷ್ಟೇ ಗಟ್ಟಿ ನೆಲೆ ಹೊಂದಿದ್ದ ಬಿಜೆಪಿಗೆ 224 ಸದಸ್ಯಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 110 ಸ್ಥಾನಗಳನ್ನು ಒದಗಿಸಿಕೊಡುವ ಮೂಲಕ ದಕ್ಷಿಣ ಭಾರತದಲ್ಲಿ ಅಧಿಕಾರದತ್ತ ಸಾಗಲು ಹೆಬ್ಬಾಗಿಲನ್ನು ತೆರೆಯಿತು.
ಆದರೆ ಮುಖ್ಯವಾದ ವಿಚಾರ ಇದಲ್ಲ. ಬಹುಶಃ ಕರ್ನಾಟಕದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ತನ್ನನ್ನು ರೈತ ಪರ ಹೋರಾಗಾರನೆಂದೇ ಗುರುತಿಸಿಕೊಂಡು ಬಂದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿ ಗದ್ದುಗೆಯೆಡೆಗೆ ಈ ಚುನಾವಣೆ ತಂದಿರುವುದು ಇದಕ್ಕಿಂತ ಮುಖ್ಯವಾದ ವಿಚಾರ.
ಬಿ.ಎಸ್. ಯಡಿಯೂರಪ್ಪ ಮೊದಲಿನಿಂದಲೇ ರೈತಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ವ್ಯಕ್ತಿ. ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ರೈತರಿಗೆ ತೊಂದರೆಯಾದ ಸುದ್ದಿ ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ತತ್ ಕ್ಷಣ ಅಲ್ಲಿಗೆ ನುಗ್ಗಿ ಮಾಹಿತಿ ಸಂಗ್ರಹಿಸಿಕೊಂಡು ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಹೋರಾಟಗಾರ.
ಬಿಜೆಪಿ- ಜನತಾದಳ ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಸಚಿವರಾದಾಗ, ರೈತರ ಸಾಲಮನ್ನಾ ಯೋಜನೆ ರೂಪಿಸಿದ್ದಕ್ಕಿಂತಲೂ ಹೆಚ್ಚಾಗಿ ರಾಷ್ಟ್ರದಲ್ಲೇ ಮೊತ್ತ ಮೊದಲ ಬಾರಿಗೆ ರೈತರಿಗೆ ಶೇಕಡಾ 4ರ ಬಡ್ಡಿ ದರದಲ್ಲಿ ಸಾಲ ಒದಗಿಸುವ ಚಾರಿತ್ರಿಕ ನಿರ್ಣಯ ಕೈಗೊಂಡು ತಮ್ಮ ಮಾತುಗಳು ಹೋರಾಟ ಕೇವಲ ಬೊಗಳೆ ಅಲ್ಲ ಎಂಬುದಾಗಿ ತೋರಿಸಿಕೊಟ್ಟವರು ಈ ಯಡಿಯೂರಪ್ಪ.
ಅವರ ಬಗ್ಗೆ ಪ್ರಸ್ತಾಪಿಸಲೇ ಬೇಕಾದ ಇನ್ನೊಂದು ಮುಖ್ಯ ವಿಚಾರ: ಗೋವುಗಳ ಬಗೆಗಿನ ಅವರ ಪ್ರೀತಿ. ಅನಾದಿ ಕಾಲದಿಂದಲೇ ರೈತರಿಗೆ ಆಪ್ತವಾದವುಗಳೆಂದರೆ ಗೋವುಗಳು ಮತ್ತು ಎತ್ತುಗಳು. ಗೋವುಗಳು ರೈತರಿಗೆ ಹಾಲು, ಬೆಣ್ಣೆ, ತುಪ್ಪ ಮೊಸರು ಒದಗಿಸುತ್ತಿದ್ದುದು ಅಷ್ಟೇ ಅಲ್ಲ, ಅವರ ವ್ಯವಸಾಯಕ್ಕೆ ಬೇಕಾದ ಸಮೃದ್ಧ ಸಾವಯವ ಗೊಬ್ಬರವನ್ನು ತಮ್ಮ ಸೆಗಣಿ- ಮೂತ್ರಗಳ ಮೂಲಕ ಒದಗಿಸಿಕೊಡುತ್ತಿದ್ದಂತಹ ಪರೋಪಜೀವಿಗಳು.
ಇಂತಹ ಗೋವುಗಳು- ಎತ್ತುಗಳು ಇತ್ತೀಚಿನ ದಿನಗಳಲ್ಲಿ ಕಸಾಯಿಖಾನೆ ತಲುಪಿ ನಶಿಸುತ್ತಾ ಬರುತ್ತಿದ್ದುದನ್ನು ಗಮನಿಸಿದ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಭಾರತೀಯ ಗೋತಳಿಯ ಸಂರಕ್ಷಣೆಗಾಗಿ ಆಂದೋಲನವನ್ನೇ ಸಂಘಟಿಸಿದ್ದು ಎಲ್ಲರಿಗೂ ಗೊತ್ತು.
ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ ಚುನಾವಣೆಗೆ ಮೊದಲೇ ಬಿಂಬಿತರಾದ ಯಡಿಯೂರಪ್ಪ ಅವರು ಈ ಚಳವಳಿಗೆ ಆಸರೆಯಾಗಿ ನಿಂತ ವ್ಯಕ್ತಿ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಕರ್ನಾಟಕದ ಸರ್ಕಾರಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅವರು ಗೋ ಸಂರಕ್ಷಣೆಯ ಕಾರ್ಯಕ್ಕೆ ಮುಂಗಡಪತ್ರದಲ್ಲೇ ನಿಧಿ ಒದಗಿಸಿದರು.
ಶ್ರೀಗಳು ಗೋ ಸಂರಕ್ಷಣೆಯ ಸಂಬಂಧ ಜಾಗೃತಿ ಮೂಡಿಸುವ ಸಲುವಾಗಿ ಗೋ ರಥಯಾತ್ರೆ ಸಂಘಟಿಸಿದಾಗ ಸ್ವತಃ ಅಲ್ಲಿಗೆ ಆಗಮಿಸಿ ಬೆಂಬಲವಿತ್ತ ಏಕೈಕ ರಾಜಕಾರಣಿ, ಅಷ್ಟೇ ಏಕೆ ಹೊಸನಗರದಲ್ಲಿ ವಿಶ್ವ ಗೋ ಸಮ್ಮೇಳನವನ್ನು ಸಂಘಟಿಸಿದಾಗ, ಹತ್ತಾರು ಮಂದಿಯ ಕೆಂಗಣ್ಣು- ಟೀಕೆಗಳ ವಾಕ್ಬಾಣಕ್ಕೆ ಜಗ್ಗದೆ ಈ ಸಮ್ಮೇಳನಕ್ಕೂ ಹಣಕಾಸಿನ ನೆರವು ಒದಗಿಸಿದ ವ್ಯಕ್ತಿ ಇದೇ ಯಡಿಯೂರಪ್ಪ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರು ತಿಂಗಳ ಹಿಂದೆ ಗೋವಿಗೆ ಕೋಟಿ ಆರತಿ ಬೆಳಗುವ 'ಕೋಟಿ ನೀರಾಜನ' ಕಾರ್ಯಕ್ರಮ ನಡೆದಾಗ ಈ ವಿಚಾರಗಳನ್ನೆಲ್ಲ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರೇ ಸ್ವತಃ ಲಕ್ಷಾಂತರ ಮಂದಿಯ ಎದುರು ಬಹಿರಂಗ ಪಡಿಸಿದ್ದರು.
ಆ ಹೊತ್ತಿನಲ್ಲೂ ಯಡಿಯೂರಪ್ಪ ಸಮಾರಂಭದಲ್ಲಿ ಹಾಜರಿದ್ದರು. ಆ ವೇಳೆಗೆ ಅವರು ಮುಖ್ಯಮಂತ್ರಿಯಾಗಿದ್ದರು. ಮರುದಿನ ಸದನದಲ್ಲಿ ವಿಶ್ವಾಸಮತ ಪಡೆಯಬೇಕಿತ್ತು. ಅವರು ವಿಶ್ವಾಸ ಮತ್ತ ಗೆಲ್ಲುವ ಬಗ್ಗೆ ಭಾರೀ ಆನುಮಾನಗಳಿದ್ದ ಹೊತ್ತು ಅದಾಗಿತ್ತು. ಅಂತಹ ಹೊತ್ತಿನಲ್ಲೂ ಗೋ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕಾರ ಸಮಾರಂಭದಲ್ಲಿ ಅವರು ಹಾಜರಿದ್ದರು!
ಗೋವುಗಳ ಬಗೆಗಿನ ಪ್ರೀತಿಯ ಬಗ್ಗೆ ಮಾತನಾಡಿದ ಶ್ರೀಗಳು ಆ ದಿನ ಹೇಳಿದ್ದರು: 'ಗೋಮಾತೆಯ ಸಂರಕ್ಷಣೆಗಾಗಿ ದುಡಿಯುವವರನ್ನು ಗೋಮಾತೆ ಕೈಬಿಡುವುದಿಲ್ಲ. ರಕ್ಷಿಸುತ್ತಾಳೆ' ಎಂದು!
ನಿಜ. ಮರುದಿನ ನಡೆದ ವಿಶ್ವಾತ ಮತ ಯಾಚನೆಯಲ್ಲಿ ಯಡಿಯೂರಪ್ಪ ಗೆಲ್ಲಲಿಲ್ಲ, ಆದರೆ ಗೋಮಾತೆಯ ಆಶೀರ್ವಾದ ಅವರ ಕೈಬಿಡಲಿಲ್ಲ. ಆರು ತಿಂಗಳುಗಳ ಬಳಿಕ ನಡೆದ ಮಹಾಚುನಾವಣೆಯಲ್ಲಿ ಬಿಜೆಪಿ ವಿಜಯಗಳಿಸಿದೆ. ಯಡಿಯೂರಪ್ಪ ಅವರು ಮುಂದಿನ ಪೂರ್ತಿ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ.
ಹಾಗೆ ನೋಡುವುದಿದ್ದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಮುಖ್ಯಮಂತ್ರಿಯಾದಾಗ ಶ್ರೀಗಳ ಸಮ್ಮುಖದಲ್ಲಿ ಗೋವುಗಳನ್ನು ತಮ್ಮ ಮನೆ ಒಳಕ್ಕೆ ಕರೆಸಿಕೊಳ್ಳುವ ಮೂಲಕವೇ 'ಕೃಷ್ಣಾ' ಪ್ರವೇಶಿಸಿದ್ದರು.
ಆದರೆ ವಚನಗಳು ಕೇವಲ ವಚನಗಳಾಗಿ ಉಳಿಯಬಾರದು, ಕೃತಿಯಲ್ಲಿ ಬಿಂಬಿತವಾಗಬೇಕು. ಯಡಿಯೂರಪ್ಪ ಜೊತೆಗೆ ಅಧಿಕಾರ ಹಂಚಿಕೆಯ 'ಸಜ್ಜನ' ಒಪ್ಪಂದ ಮಾಡಿಕೊಂಡು ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಮಾತು ತಪ್ಪಿದರು. ಒಪ್ಪಂದದಂತೆ ಅಧಿಕಾರ ಬಿಟ್ಟುಕೊಡಲು ಇನ್ನಿಲ್ಲದ ತಕರಾರು ತೆಗೆದರು. 'ಮಣ್ಣನ ಮಗ' ದೇವೇಗೌಡರು ಬಿಜೆಪಿ ವಿರುದ್ಧ ಇನ್ನಿಲ್ಲದ ಫಿತೂರಿ ಹೂಡಿದರು..!
ಇವೆಲ್ಲದರ ಪರಿಣಾಮವಾಗಿ ಒಪ್ಪಂದದಂತೆ ಮುಖ್ಯಮಂತ್ರಿ ಆಗಿ ಮುಂದುವರೆಯಬೇಕಾಗಿದ್ದ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆಯಲಾಗದೆ ಬೀದಿ ಬೀದಿ ಸುತ್ತುವಂತಾಯಿತು.
ರಾಜಕೀಯದ ಹಾವು ಏಣಿಯಾಟದಲ್ಲಿ ತಾವು ಮಾತ್ರವೇ ಏಣಿಯನ್ನು ಬಳಸಿಕೊಂಡು, ಒಂದೆಡೆಯಿಂದ ಕಾಂಗ್ರೆಸ್, ಮತ್ತೊಂದೆಡೆಯಿಂದ ಬಿಜೆಪಿಯನ್ನು ಹಾವಿನ ಬಾಯಿಗೆ ಬೀಳಿಸಿದ ಜನತಾದಳ (ಎಸ್) ಧುರೀಣ ಎಚ್.ಡಿ. ದೇವೇಗೌಡ ಮತ್ತು ಮಗ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮತದಾರರು ಇದೀಗ ತಕ್ಕ ಉತ್ತರ ಕೊಟ್ಟಿದ್ದಾರೆ.
ವಚನಭಂಗದ ಲೋಪ ಎಸಗಿ, ಅವಧಿಗೆ ಮುನ್ನವೇ ರಾಜ್ಯವನ್ನು 'ಚುನಾವಣಾ ಸಮರಾಂಗಣ'ವನ್ನಾಗಿ ಪರಿವರ್ತಿಸಿದ್ದಕ್ಕಾಗಿ ಜನತಾದಳ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಜನ ಮಣ್ಣು ಮುಕ್ಕಿಸಿದ್ದಾರೆ.
80 ಸ್ಥಾನಗಳನ್ನು ಗೆದ್ದುಕೊಂಡು ತನ್ನ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಲು ಕಾಂಗ್ರೆಸ್ಸಿಗೆ ಸಾಧ್ಯವಾದರೂ, ಅದಕ್ಕಾಗಿ ಅದು ತೆತ್ತ ಬೆಲೆ? ದಳದ ಜೊತೆ ಸೇರಿ ಮುಖ್ಯಮಂತ್ರಿ ಹುದ್ದೆಯ ಖುಷಿ ಅನುಭವಿಸಿದ 'ಅಜಾತಶತ್ರು', ಧರ್ಮಸಿಂಗ್, ಎರಡೂ ಸರ್ಕಾರಗಳಲ್ಲಿ ಅಧಿಕಾರದ ಖುಷಿ ಅನುಭವಿಸಿ ನಂತರ ಕಾಂಗ್ರೆಸ್ಸಿಗೆ ಓಡಿದ ಎಂ.ಪಿ. ಪ್ರಕಾಶ್, ಸಜ್ಜನ ಧುರೀಣರೆಂದೇ ಹೆಸರಾಗಿದ್ದ ಎಚ್.ಕೆ. ಪಾಟೀಲ, ಆರ್.ವಿ. ದೇಶಪಾಂಡೆ, ಚಿತ್ರ ನಟ ಅಂಬರೀಷರಂತಹ ಅತಿರಥ ಮಹಾರಥರೆಲ್ಲ ದೂಳಿಪಟವಾದರು!
ಜನತಾದಳದ ಅಧ್ಯಕ್ಷರೇ ನೆಲಕಚ್ಚಿದರೆ ಅದರ ಒಟ್ಟು ಸ್ಥಾನಗಳು ಕಳೆದ ಸಲಕ್ಕಿಂತ ಕೆಳಕ್ಕೆ ಕುಸಿದು 28ರ ಅಂಚಿಗೆ ಬಂದು ನಿಂತವು.
ಕಾಂಗ್ರೆಸ್ಸು, ಜನತಾದಳಗಳ ಒಳಬೆಂಬಲದೊಂದಿಗೆ ಯಡಿಯೂರಪ್ಪನವರಿಗೇ ಸೆಡ್ಡು ಹೊಡೆದು ತೊಡೆ ತಟ್ಟಿದ ಸಮಾಜವಾದಿ ಪಕ್ಷದ ಎಸ್. ಬಂಗಾರಪ್ಪ ಶಿಕಾರಿಪುರ, ಸೊರಬ ಎರಡೂ ಕಡೆ ಸೋತು ಸುಣ್ಣವಾದರು. ಅವರ ಪುತ್ರರಾದ ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪ ಅವರನ್ನೂ ಜನ ಮೂಲೆಗೆ ತಳ್ಳಿದರು.
ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಸುವರ್ಣಯುಗ, ಸಿಪಿಐ, ಸಿಪಿಎಂ, ಸಂಯುಕ್ತ ಜನತಾದಳ, ವಾಟಾಳ್ ನಾಗರಾಜರ ಕನ್ನಡ ಪಕ್ಷ, ಚಂದ್ರಶೇಖರ ಪಾಟೀಲರ ಪಕ್ಷ ಸೇರಿದಂತೆ ಇತರೆಲ್ಲ ಪಕ್ಷಗಳೂ ಖಾತೆ ತೆರೆಯಲೂ ವಿಫಲವಾದವು.
ನಿಜ, ಗೆದ್ದ ಖುಷಿಯ ಜೊತೆಗೇ ಬಿಜೆಪಿಗೆ ಸರಳ ಬಹುಮತಕ್ಕೆ ಮೂರು ಮತಗಳ ಕೊರತೆಯ ಆತಂಕ ಉಂಟಾದರೂ
ಆರು ಮಂದಿ ಪಕ್ಷೇತರರ ಬೆಂಬಲದೊಂದಿಗೆ ಆ ಆತಂಕದ ಕಾರ್ಮೋಡ ಕರಗಿದೆ.
ಇದರ ನಡುವೆಯೂ ಕಾಂಗ್ರೆಸ್- ಮತ್ತು ಜನತಾದಳ ಒಟ್ಟಾಗಿ ಪಕ್ಷೇತರರನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಅಡ್ಡಗಾಲಾಗಲು ಯತ್ನ ನಡೆದ ವರದಿಗಳಿವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅದಕ್ಕೆ ಒಪ್ಪದ ಕಾರಣ ಈ ಯತ್ನ ಮೂಲೆ ಪಾಲಾದ ವರದಿಯೂ ಬಂದಿದೆ.
ಮೇ 30ರ ಶುಕ್ರವಾರ ಯಡಿಯೂರಪ್ಪ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸೂತ್ರ ಹಿಡಿಯಲು ಸಜ್ಜಾಗಿದ್ದಾರೆ.
ಇಂತಹ ಹೊತ್ತಿನಲ್ಲಿ ಮಣ್ಣಿನ ಮಗನೆಂದುಕೊಳ್ಳುವ ಎಚ್.ಡಿ. ದೇವೇಗೌಡ ಮತ್ತು ಅವರ ಪುತ್ರ ಕುಮಾರ ಸ್ವಾಮಿ ಅವರಿಗೆ 'ವಚನದ್ರೋಹ'ದಿಂದ ಅಂಟಿಕೊಂಡ 'ಪಾಪ ಪರಿಮಾರ್ಜನೆ'ಗೆ ಒಂದು ಸರಳ ದಾರಿ ಇದೆ.
ಇದಕ್ಕಾಗಿ ಅವರು ಬಿಜೆಪಿ ಜೊತೆಗೆ ಕೈಜೋಡಿಸ ಬೇಕಾದ ಅಗತ್ಯ ಏನಿಲ್ಲ, ಆದರೆ ಕಾಂಗ್ರೆಸ್ಸಿನ ಜೊತೆಗೆ ಕೈಜೋಡಿಸಿ ಮತ್ತೆ ಹೊಸ 'ಷಡ್ಯಂತ್ರ' ಹೆಣೆಯದಿದ್ದರೆ ಸಾಕು, ಅವರ ಪಾಪ ಕರಗಿ ಹೋಗಬಹುದು. ಕರ್ನಾಟಕದ ಮತದಾರರ ಅಪೇಕ್ಷೆಯಂತೆ ಬಿಜೆಪಿಗೆ ಸರ್ಕಾರವನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗಬಹುದು. ಏಕೆಂದರೆ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿ ಆದಾಗಲೂ ಅವರಿಗೆ ಬಹುಮತ ಇರಲಿಲ್ಲ. ಆದರೂ ಅವರ ಸರ್ಕಾರ ಐದು ವರ್ಷ ಸುಸೂತ್ರವಾಗಿ ಸಾಗಿತ್ತಲ್ಲ? ಹಾಗೆಯೇ.
ಅಧಿಕಾರಕ್ಕೆ ಬಂದೊಡನೆಯೇ ಮತ ನೀಡಿದ ಜನರನ್ನು ಮರೆಯುವವರು ಬಹಳ ಮಂದಿ. ಯಡಿಯೂರಪ್ಪ ಹಾಗೂ ಅವರ ಪಕ್ಷವಾದ ಬಿಜೆಪಿ ತಾವು ಅಂತಹ ವರ್ಗಕ್ಕೆ ಸೇರುವವರಲ್ಲ ಎಂಬುದನ್ನು ಸಾಬೀತು ಪಡಿಸಬೇಕಾದ ದೊಡ್ಡ ಹೊಣೆಗಾರಿಕೆ ಇದೆ. ರೈತರ ಆತ್ಮಹತ್ಯೆ ಇಂದೂ ಮುಂದುವರೆದಿದೆ, ಅವರ ಜೀವನ ಹಸನಾಗಬೇಕು. ರೈತರ ಜೀವನ ಹಸನಾಗಬೇಕು ಎಂದರೆ ಅವರ ಕೃಷಿ ವೆಚ್ಚ ತಗ್ಗಬೇಕು.
ಗೋವು ಆಧಾರಿತ ಸಾವಯವ ಕೃಷಿ, ದುಬಾರಿ ನೀರಾವರಿ ಯೋಜನೆಗಳ ಬದಲು ಮಳೆನೀರು ಕೊಯ್ಲು ಹಾಗೂ ಹಾಗೂ ಸರಳವಾಗಿ ನೀರಿಂಗಿಸಿ ಭೂಮಿಯನ್ನು ಸಮೃದ್ಧಗೊಳಿಸುವ ಯೋಜನೆಗಳಿಗೆ ಒತ್ತು ಸಿಗಬೇಕು. ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಬೆಲೆ ಸಿಗಬೇಕು. ರೈತರಿಗೆ ಪಂಪ್ ಚಲಾಯಿಸಲು ವಿದ್ಯುತ್ ಮಾತ್ರವೇ ಅಲ್ಲ, ಸೀಮೆಎಣ್ಣೆ ಡೀಸೆಲ್ ಪಂಪ್ ಬಳಸುವ ರೈತರಿಗೆ ಸಾಕಷ್ಟು ಸೀಮೆ ಎಣ್ಣೆ, ಡೀಸೆಲ್ ಗ್ರಾಮಾಂತರ ಪ್ರದೇಶಗಳಲ್ಲಿ ಸಿಗುವಂತಾಗಬೇಕು.
ರೈತ ಯುವಕರಿಗೆ ಹಳ್ಳಿಗಳಲ್ಲೇ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಬೇಕಾದ ಕಿರು ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅವಕಾಶ ಪ್ರೋತ್ಸಾಹ ಲಭಿಸಬೇಕು. ತನ್ಮೂಲಕ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಯ ಅವಕಾಶಗಳು ಹೆಚ್ಚಬೇಕು. ಗೋವು ಸಂರಕ್ಷಣೆಯ ಕಾರ್ಯ, ಅವುಗಳಿಂದ ರೈತರಿಗೆ ಮಾತ್ರವೇ ಅಲ್ಲ, ಸಕಲರಿಗೂ ಲಭಿಸುವ ಅನುಕೂಲಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡುವಂತಾಗಬೇಕು.
ಗೋಮಾತೆ ಆಶೀರ್ವದಿಸಿದರೆ ಭೂಮಿ ನಂದನವನವಾಗುತ್ತದೆ, ಬದುಕು ಸಮೃದ್ಧವಾಗುತ್ತದೆ, ಸಕಲರ ಆರೋಗ್ಯ ಸುಧಾರಿಸುತ್ತದೆ ಎಂಬ ಮಾತು ಸುಳ್ಳಲ್ಲ. ಇದೀಗ ಯಡಿಯೂರಪ್ಪ ಅವರಿಗೆ ಗೋಮಾತೆಯ ಆಶೀರ್ವಾದ ಲಭಿಸಿದೆ. ಅವರಿಂದ ಈ ಮಾತು ದಿಟ ಎಂಬುದು ಸಾಬೀತಾಗಲಿ ಎಂದು ಹಾರೈಸೋಣವೇ?
1 comment:
ನೀವು ಬರೆದಿದ್ದು ಸತ್ಯ
-ಪವನಜ
Post a Comment