ಇಂದಿನ ಇತಿಹಾಸ
ಮೇ 1
ಸುಮಾರು 760 ಕಿ.ಮೀ. ಉದ್ದದ ಕೊಂಕಣ ರೈಲ್ವೇಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದಿನ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗವು ರತ್ನಗಿರಿಯಿಂದ ಮುಂದಕ್ಕೆ ವಿಸ್ತರಣೆಯಾಗಿದ್ದು, ನಿತ್ಯ ಹರಿದ್ವರ್ಣದ ಕಾಡುಗಳ ಮಧ್ಯೆ ಸಾಗುವುದು.
2007: ಕರ್ನಾಟಕದಾದ್ಯಂತ ಒಟ್ಟು 1400ಕ್ಕೂ ಹೆಚ್ಚು ಆನ್ ಲೈನ್ ಲಾಟರಿ ಅಂಗಡಿಗಳು ತಮ್ಮ ಆನ್ ಲೈನ್ ಲಾಟರಿ ವಹಿವಾಟು ಪುನರಾರಂಭಿಸಿದವು. ಏಪ್ರಿಲ್ 30ರಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕೇವಲ 750 ಮಾರಾಟಗಾರರು ತಮ್ಮ ಚಟುವಟಿಕೆ ಪುನರಾರಂಭಿಸಿದ್ದರು. ಈದಿನ ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜೆಲ್ಲೆಗಳಲ್ಲಿಯೂ ಆನ್ ಲೈನ್ ಲಾಟರಿ ವಹಿವಾಟು ಪುನರಾರಂಭಗೊಂಡಿತು.
2007: ಐಟಿ, ಬಿಟಿ ಕಂಪೆನಿಗಳನ್ನು ಹೊರತುಪಡಿಸಿ ಉಳಿದ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಜುಲೈ ತಿಂಗಳಿನಿಂದ `ರಾತ್ರಿ ಪಾಳಿ' ನಿರ್ವಹಿಸುವಂತಿಲ್ಲ. ಈ ಸಂಬಂಧ ಜುಲೈ ತಿಂಗಳಿನಲ್ಲಿ ರಾಜ್ಯ ಸರ್ಕಾರವು ಕಾನೂನು ಜಾರಿಗೊಳಿಸುವುದು ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಪ್ರಕಟಿಸಿದರು.
2006: ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯಿಬಾ ಉಗ್ರಗಾಮಿ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಕಡೆ ನಡೆಸಿದ ಪ್ರತ್ಯೇಕ ಹತ್ಯಾಕಾಂಡಗಳಲ್ಲಿ ಒಟ್ಟು 35 ಜನ ಹಿಂದೂಗಳನ್ನು ಕೊಂದು ಹಾಕಿತು. ದೋಡಾ ಜಿಲ್ಲೆಯ ಕುಲ್ಹುಂಡ್ ಗ್ರಾಮದ ಪಚೋಲಿ ಮತ್ತು ಥಾವಾ ಎಂಬ 2 ಕಾಲೋನಿಗಳಲ್ಲಿ ಬೆಳಗಿನ ಜಾವ 10 ಜನ ಉಗ್ರಗಾಮಿಗಳ ತಂಡವು ವಿಚಾರಣೆಯ ನೆಪದಲ್ಲಿ ಗ್ರಾಮಸ್ಥರನ್ನು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಕೊಂದು ಹಾಕಿತು.
2006: ಖ್ಯಾತ ರಾಸಾಯನಿಕ ವಿಜ್ಞಾನಿ ಸಿ. ಎನ್. ಆರ್. ರಾವ್, ಜೈವಿಕ ವಿಜ್ಞಾನಿ ಒಬೈದ್ ಸಿದ್ದಿಕಿ ಮತ್ತು ಗಣಿತ ತಜ್ಞ ಸಿ.ಎಸ್. ಶೇಷಾದ್ರಿ ಅವರನ್ನು ತಮ್ಮ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ `ರಾಷ್ಟ್ರೀಯ ಸಂಶೋಧನಾ ಪ್ರೊಫೆಸರುಗಳು' ಎಂಬುದಾಗಿ ಹೆಸರಿಸಿ ಗೌರವಿಸಲಾಯಿತು. ಸಿ.ವಿ. ರಾಮನ್, ಎಸ್. ಎನ್. ಬೋಸ್, ಸತ್ಯಜಿತ್ ರೇ, ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಪಂಡಿತ್ ರವಿಶಂಕರ್, ತೀರಾ ಇತ್ತೀಚೆಗೆ ಮಹಾಶ್ವೇತಾದೇವಿ ಹಾಗೂ ಹಬೀಬ್ ತನ್ವರ್ ಈ ರಾಷ್ಟ್ರೀಯ ಗೌರವಕ್ಕೆ ಪಾತ್ರರಾದ ಪ್ರಮುಖರಲ್ಲಿ ಸೇರಿದ್ದಾರೆ.
1998: ಸುಮಾರು 760 ಕಿ.ಮೀ. ಉದ್ದದ ಕೊಂಕಣ ರೈಲ್ವೇಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದಿನ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗವು ರತ್ನಗಿರಿಯಿಂದ ಮುಂದಕ್ಕೆ ವಿಸ್ತರಣೆಯಾಗಿದ್ದು, ನಿತ್ಯ ಹರಿದ್ವರ್ಣದ ಕಾಡುಗಳ ಮಧ್ಯೆ ಸಾಗುವುದು.
1960: ಮುಂಬೈ ಪ್ರಾಂತವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ವಿಂಗಡನೆಗೊಂಡಿತು.
1948: ಕವಯಿತ್ರಿ ಶಶಿಕಲಾ ವೀರಯ್ಯ ಸ್ವಾಮಿ ಹುಟ್ಟಿದ ದಿನ. ವಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಸಿದ್ದಲಿಂಗಯ್ಯ - ಅನ್ನಪೂರ್ಣಾ ದೇವಿ ದಂಪತಿಯ ಪುತ್ರಿಯಾಗಿ ಜನಿಸಿದ ಶಶಿಕಲಾ ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದವರು.
1933: ಇಂಗ್ಲೆಂಡ್ - ಭಾರತ ದೂರವಾಣಿ ಸೇವೆ ಆರಂಭವಾಯಿತು. ಭಾರತದ ರಾಜ್ಯ ಕಾರ್ಯದರ್ಶಿ ಸರ್ ಸ್ಯಾಮ್ಯುಯೆಲ್ ಹೋರ್ ಮತ್ತು ಮುಂಬೈಯ ಗವರ್ನರ್ ಸರ್ ಫ್ರೆಡರಿಕ್ ಸೈಕ್ಸ್ ಅವರ ಮಧ್ಯೆ ಮೊತ್ತ ಮೊದಲ ದೂರವಾಣಿ ಸಂಭಾಷಣೆ ನಡೆಯಿತು.
1897: ಸ್ವಾಮಿ ವಿವೇಕಾನಂದರು ಕೊಲ್ಕತ್ತಾದಲ್ಲಿ (ಅಂದಿನ ಕಲಕತ್ತ) ರಾಮಕೃಷ್ಣ ಮಿಷನ್ ಸ್ಥಾಪಿಸಿದರು.
1851: ಲಂಡನ್ನಿನ ಹೈಡ್ ಪಾರ್ಕಿನ ಕ್ರಿಸ್ಟಲ್ ಪ್ಯಾಲೇಸಿನಲ್ಲಿ ಎಲ್ಲ ರಾಷ್ಟ್ರಗಳ ಕೈಗಾರಿಕಾ ವಸ್ತುಗಳ ಬೃಹತ್ ಪ್ರದರ್ಶನ ಉದ್ಘಾಟನೆಗೊಂಡಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮೊತ್ತ ಮೊದಲ ಪ್ರದರ್ಶನ . ಸಹಸ್ರಾರು ಸಂಶೋಧನೆಗಳಿಗೆ ಪ್ರದರ್ಶನಾವಕಾಶವನ್ನು ಇದು ಕಲ್ಪಿಸಿಕೊಟ್ಟಿತು.
1700: ಇಂಗ್ಲಿಷ್ ಕವಿ, ನಾಟಕಕಾರ ಮತ್ತು ವಿಮರ್ಶಕ ಜಾನ್ ಡ್ರೈಡೆನ್ ಮೃತನಾದ. ಲಾರೇಟ್ ಹುದ್ದೆಗೆ ಅಧಿಕೃತವಾಗಿ ನೇಮಕಗೊಂಡ ಮೊದಲ ಇಂಗ್ಲಿಷ್ ಕವಿ ಈತ. ಆದರೆ ನೂತನ ದೊರೆ ಮೂರನೇ ವಿಲಿಯಂಗೆ ಪ್ರಮಾಣವಚನ ಬೋಧಿಸಲು ನಿರಾಕರಿಸಿದ್ದಕ್ಕಾಗಿ ಈ ಹುದ್ದೆಯಿಂದ ಈತ ವಜಾಗೊಂಡ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment