ಇಂದಿನ ಇತಿಹಾಸ
ಮೇ 27
ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಕ್ಯಾಲಿಫೋರ್ನಿಯಾದ ಮರೀನ್ ಕೌಂಟಿಯನ್ನು ಸಂಪರ್ಕಿಸಲು ಹೊಸದಾಗಿ ನಿರ್ಮಿಸಲಾದ ಗೋಲ್ಡನ್ ಗೇಟ್ ಬ್ರಿಜ್ಜನ್ನು ಸಾರ್ವಜನಿಕರಿಗೆ ಸಂಚಾರಕ್ಕಾಗಿ ತೆರೆಯಲಾಯಿತು. ಮೊದಲ ದಿನವೇ 2 ಲಕ್ಷ ಮಂದಿ ಸೇತುವೆಯನ್ನು ದಾಟಿದರು. ಈ ಸೇತುವೆಯನ್ನು ಪೂರ್ಣಗೊಳಿಸಲು 4 ವರ್ಷ, 4 ತಿಂಗಳು, 22 ದಿನಗಳು ಬೇಕಾದವು.
2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಸಿಬ್ಬಂದಿಯನ್ನು ಹೊತ್ತ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ಬಳಿಯ ಕೆರೆ ಅಂಗಳದಲ್ಲಿ ಇಳಿಯಿತು. ಆದರೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಿಬ್ಬಂದಿ ಅಪಾಯದಿಂದ ಪಾರಾದರು.
2007: ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಮ್ ಅವರ ಸಹೋದರ ಚಿತ್ರ ನಿರ್ಮಾಪಕ ಜಿ. ಶ್ರೀನಿವಾಸನ್ ಅವರು ಮನಾಲಿಯ ಹಾಲನ್ನಿನಲ್ಲಿ ಟ್ರೆಕ್ಕಿಂಗ್ ನಿರತರಾಗಿದ್ದಾಗ 50 ಅಡಿ ಆಳದ ಕಮರಿಗೆ ಬಿದ್ದು ಅಸು ನೀಗಿದರು. ಶ್ರೀನಿವಾಸನ್ ಅವರು ಗುರು ಚಿತ್ರದ ನಿರ್ಮಾಪಕರಾಗ್ದಿದು ಪತ್ನಿ ಸಂಧ್ಯಾ ಲಕ್ಮ್ಮಣ್, ಪುತ್ರಿ ಶ್ರೇಯಾ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಟ್ರೆಕ್ಕಿಂಗ್ ನಡೆಸುತ್ತಿದ್ದಾಗ ದುರಂತಕ್ಕೆ ತುತ್ತಾದರು.
2007: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 50ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದ ಸುಮಾರು 50,000 ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಾಲಕ್ಷ್ಮಿ ರೇಸ್ ಕೋರ್ಸಿನಲ್ಲಿ ಈ ಕಾರ್ಯಕ್ರಮ ನಡೆಯಿತು.
2007: ದೇಶದ ಪ್ರಮುಖ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಅವರು ಭಾರತದ ಏಕೈಕ ಒಂದು ಲಕ್ಷ ಕೋಟ್ಯಾಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2006: ಮಲಯಾಳಂ ಚಿತ್ರರಂಗದ ಖ್ಯಾತ ನಟ ಒಡವಿಲ್ ಉನ್ನಿಕೃಷ್ಣನ್ (62) ನಿಧನರಾದರು.
2006: ಸುನಾಮಿ ಏಟಿನಿಂದ ಇನ್ನೂ ಚೇತರಿಸದ ಇಂಡೋನೇಷ್ಯಕ್ಕೆ ಈದಿನ ನಸುಕಿನಲ್ಲಿ ಇನ್ನೊಂದು ಆಘಾತ. ಭಾರಿ ಜನಸಾಂದ್ರತೆ ಇರುವ ಜಾವಾ ಪ್ರಾಂತ್ಯದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿ ಒಟ್ಟು 5000ಕ್ಕೂ ಹೆಚ್ಚು ಮಂದಿ ಮೃತರಾದರು. ಸಹಸ್ರಾರು ಮಂದಿ ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.2ರಷ್ಟಿತ್ತು. ಆ ಬಳಿಕ ಭೂಮಿ ಸುಮಾರು 45 ಸಲ ಕಂಪಿಸಿತು.
1999: ಕರ್ನಾಟಕದ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ರಮ ಆರಂಭಿಸಿತು. ಕಂದಾಯ ಸಚಿವ ಸೋಮಶೇಖರ್ ಕಾಲದಲ್ಲಿ ಚಿತ್ರದುರ್ಗ ಹಾಗೂ ಗುಲ್ಬರ್ಗದಲ್ಲಿ ಪ್ರಾಯೋಗಿಕವಾಗಿ ಕೇಂದ್ರ ನೆರವಿನೊಂದಿಗೆ ಈ ಕಾರ್ಯಕ್ರಮ ಆರಂಭಗೊಂಡಿತು. ಸರ್ಕಾರ ಅವಧಿಗೆ ಮುನ್ನ ಬಿದ್ದ ಕಾರಣ ಅದು ಮುಂದುವರೆಯಲಿಲ್ಲ. 2001ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ `ಭೂಮಿ' ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಮತ್ತೆ ಅನುಷ್ಠಾನಗೊಳಿಸಿತು. ಪಾರದರ್ಶಕತೆಗೆ ಅವಕಾಶ ಮಾಡಿಕೊಟ್ಟ ಈ ಕಾರ್ಯಕ್ರಮ 2006ರಲ್ಲಿವಿಶ್ವಸಂಸ್ಥೆಯ `ಸಾರ್ವಜನಿಕ ಸೇವಾ ಪ್ರಶಸ್ತಿ'ಗೆ ಪಾತ್ರವಾಯಿತು.
1994: ಅಲೆಗ್ಸಾಂಡರ್ ಸೋಲ್ಜೆನಿತ್ಸಿನ್ 20 ವರ್ಷಗಳ ವಿದೇಶವಾಸದ ನಂತರ ರಷ್ಯಕ್ಕೆ ಹಿಂತಿರುಗಿದರು.
1964: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ನವದೆಹಲಿಯಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.
1937: ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಕ್ಯಾಲಿಫೋರ್ನಿಯಾದ ಮರೀನ್ ಕೌಂಟಿಯನ್ನು ಸಂಪರ್ಕಿಸಲು ಹೊಸದಾಗಿ ನಿರ್ಮಿಸಲಾದ ಗೋಲ್ಡನ್ ಗೇಟ್ ಬ್ರಿಜ್ಜನ್ನು ಸಾರ್ವಜನಿಕರಿಗೆ ಸಂಚಾರಕ್ಕಾಗಿ ತೆರೆಯಲಾಯಿತು. ಮೊದಲ ದಿನವೇ 2 ಲಕ್ಷ ಮಂದಿ ಸೇತುವೆಯನ್ನು ದಾಟಿದರು. ಈ ಸೇತುವೆಯನ್ನು ಪೂರ್ಣಗೊಳಿಸಲು 4 ವರ್ಷ, 4 ತಿಂಗಳು, 22 ದಿನಗಳು ಬೇಕಾದವು.
1914: ಅಗ್ರಗಣ್ಯ ಪಿಟೀಲು ವಿದ್ವಾಂಸರಲ್ಲಿ ಒಬ್ಬರಾದ ಆರ್. ಆರ್. ಕೇಶವ ಮೂರ್ತಿ (27-5-1914ರಿಂದ 23-10-2006ರ ವರೆಗೆ) ಅವರು ರಾಮಸ್ವಾಮಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಸಂಗೀತ ಕಾಶಿ ಎನಿಸಿದ್ದ ರುದ್ರಪಟ್ಟಣದಲ್ಲಿ ಜನಿಸಿದರು.
1902: ಕಲಾವಿದ ಹಾರಾಡಿ ರಾಮ ಗಾಣಿಗ ಜನನ.
1897: ಸಾಹಿತ್ಯ ಮತ್ತು ರಂಗಭೂಮಿ ಎರಡರಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದ ಬಿ. ಪುಟ್ಟಸ್ವಾಮಯ್ಯ (27-5-1897ರಿಂದ 25-1-1984) ಅವರು ಬಸಪ್ಪ - ಮಲ್ಲಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಹಲವಾರು ಪತ್ರಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ ಇವರು ಕಥೆ, ಕಾದಂಬರಿ ನಾಟಕಗಳನ್ನು ಬರೆದಿದ್ದು, ಇವರ ಜನಪ್ರಿಯ `ಮಲ್ಲಮ್ಮನ ಪವಾಡ' ಕಾದಂಬರಿ ಚಲನಚಿತ್ರವಾಗಿತ್ತು.
1703: ತ್ಸಾರ್ ದೊರೆ ಪೀಟರ್ ದಿ ಗ್ರೇಟ್ ರಷ್ಯದ ನೂತನ ರಾಜಧಾನಿ ಸೇಂಟ್ ಪೀಟರ್ಸ್ ಬರ್ಗನ್ನು ನಿರ್ಮಿಸಿದ. 1914ರಲ್ಲಿ ಅದನ್ನು ಪೆಟ್ರೋಗ್ರಾಡ್ ಎಂದು ಹೆಸರಿಸಲಾಯಿತು. 1924ರಲ್ಲಿ ಅದಕ್ಕೆ `ಲೆನಿನ್ ಗ್ರಾಡ್' ಎಂದು ಸೋವಿಯತ್ ನಾಯಕ ವ್ಲಾಡಿಮೀರ್ ಲೆನಿನ್ ಹೆಸರನ್ನು ಇಡಲಾಯಿತು. 1991ರಲ್ಲಿ ಮತ್ತೆ ಅದಕ್ಕೆ ಮೂಲ ಹೆಸರನ್ನೇ (ಸೇಂಟ್ ಪೀಟರ್ಸ್ ಬರ್ಗ್) ಇಡಲಾಯಿತು.
1679: ಇಂಗ್ಲೆಂಡಿನ ಸಂಸತ್ತು ಸಾರ್ವಜನಿಕರಿಗೆ ಅನಗತ್ಯ ಬಂಧನದಿಂದ ರಕ್ಷಣೆ ಒದಗಿಸುವ ಸಲುವಾಗಿ ಹೇಬಿಯಸ್ ಕಾರ್ಪಸ್ ಕಾನೂನನ್ನು ಅಂಗೀಕರಿಸಿತು. ಈ ಕಾನೂನಿನ ಮುಖ್ಯಾಂಶಗಳನ್ನು ನಂತರ ಅಮೆರಿಕದ ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment