Saturday, May 3, 2008

ಇಂದಿನ ಇತಿಹಾಸ History Today ಮೇ 3

ಇಂದಿನ ಇತಿಹಾಸ

ಮೇ 3

ಖ್ಯಾತ ಶಹನಾಯಿ ವಾದಕ ದಿವಂಗತ ಉಸ್ತಾದ್ ಬಿಸ್ಮ್ಲಿಲಾ ಖಾನ್ ಅವರ ಸಮಾಧಿ ನಿರ್ಮಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದನ್ನು ಪ್ರತಿಭಟಿಸಿ ಅವರ ಕುಟುಂಬದ ಸದಸ್ಯರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದರು.



2007: ಖ್ಯಾತ ಶಹನಾಯಿ ವಾದಕ ದಿವಂಗತ ಉಸ್ತಾದ್ ಬಿಸ್ಮ್ಲಿಲಾ ಖಾನ್ ಅವರ ಸಮಾಧಿ ನಿರ್ಮಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದನ್ನು ಪ್ರತಿಭಟಿಸಿ ಅವರ ಕುಟುಂಬದ ಸದಸ್ಯರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದರು. ವಾರಣಾಸಿ ಪಟ್ಟಣದ ದಕ್ಷಿಣ ಭಾಗದ ವಿಧಾನಸಭೆ ಕ್ಷೇತ್ರದ ಸಾರೈ ಹರ್ಹಾ ಪ್ರದೇಶದಲ್ಲಿ ವಾಸಿಸುತ್ತಿರುವ ಬಿಸ್ಮ್ಲಿಲಾ ಖಾನ್ ಕುಟುಂಬದಲ್ಲಿನ ಮತದಾರರ ಸಂಖ್ಯೆ 60. ಇವರ ಪೈಕಿ ಯಾರೊಬ್ಬರೂ ಮತದಾನ ಮಾಡಲು ಬರಲಿಲ್ಲ.

2007: ತಮಿಳುನಾಡಿಗೆ ವರ್ಷಕ್ಕೆ 192 ಟಿಎಂಸಿ ಅಡಿಗಳಷ್ಟು ನೀರು ಬಿಡಬೇಕಾದರೆ ಅಂತಾರಾಜ್ಯ ಗಡಿಯಲ್ಲಿ ಜಲಾಶಯ ನಿರ್ಮಿಸಬೇಕಾಗುತ್ತದೆ ಎಂದು ಕರ್ನಾಟಕವು ಕಾವೇರಿ ನದಿನೀರು ವಿವಾದ ನ್ಯಾಯಮಂಡಳಿಗೆ ತಿಳಿಸಿತು.

2006: ಸೋದರ ಪ್ರವೀಣ್ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು 12 ದಿನಗಳ ಕಾಲ ಮುಂಬೈಯ ಹಿಂದೂಜಾ ಆಸ್ಪತೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ (56) ಈ ದಿನ ಸಂಜೆ 4.10ಕ್ಕೆ ಕೊನೆ ಉಸಿರೆಳೆದರು. ಆಂಧ್ರಪ್ರದೇಶದ ಮೆಹಬೂಬ್ನಗರದಲ್ಲಿ 1949ರ ಅಕ್ಟೋಬರ್ 30ರಂದು ಜನಿಸಿದ ಮಹಾಜನ್ 1974ರಲ್ಲಿ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾದರು. 1979ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದ ಅವರು 1983ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದರು. 1986ರಲ್ಲಿ ರಾಜ್ಯಸಭೆ ಪ್ರವೇಶಿಸಿದರು. 1990ರಲ್ಲಿ ಎಲ್.ಕೆ. ಆಡ್ವಾಣಿ ಅವರ ರಥಯಾತ್ರೆಯ ಹೊಣೆ ಹೊತ್ತಿದ್ದರು. 1996ರಲ್ಲಿ ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. 2001ರಲ್ಲಿ ದೂರಸಂಪರ್ಕ ಸಚಿವರಾದರು. 2004ರಲ್ಲಿ ಭಾರತ ಪ್ರಕಾಶಿಸುತ್ತಿದೆ ಜಾಹೀರಾತಿನ ರೂವಾರಿ. 2005ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ `ಲಕ್ಷ್ಮಣ' ಬಿರುದು. 2006ರ ಏಪ್ರಿಲ್ 22ರಂದು ಮುಂಬೈಯ ವರ್ಲಿಯ ಸ್ವಂತ ಮನೆಯಲ್ಲಿ ಕಿರಿಯ ಸಹೋದರ ಪ್ರವೀಣ್ ಮಹಾಜನ್ ರಿಂದ ಗುಂಡೇಟು.

2006: ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ ನೀಡಲಾಗುವ ಕೀರಿಕ್ಕಾಡು ಮಾಸ್ಟರ್ ವಿಷ್ಣುಭಟ್ ಪ್ರಶಸ್ತಿಯನ್ನು ಹಿರಿಯ ಕಲಾವಿದ, ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರಿಗೆ ಘೋಷಿಸಲಾಯಿತು.

2006: ರಷ್ಯದ ಕಪ್ಪು ಸಮುದ್ರ ತೀರದಲ್ಲಿ ಈದಿನ ನಸುಕಿನ ವೇಳೆಯಲ್ಲಿ ಆರ್ಮೇನಿಯಾದ ನಾಗರಿಕ ವಿಮಾನವೊಂದು ಅಪಘಾತಕ್ಕೆ ಈಡಾಗಿ ಅದರಲ್ಲಿದ್ದ ಎಲ್ಲ 113 ಮಂದಿ ಪ್ರಯಾಣಿಕರು ಅಸು ನೀಗಿದರು. ಅರ್ಮೇನಿಯಾ ಏರ್ ಲೈನ್ಸ್ ಅವರ್ಮೇನಿಯಾಕ್ಕ್ಕೆ ಸೇರಿದ ಏರ್ ಬಸ್-320 ಯೆರವಾನ್ನಿಂದ ದಕ್ಷಿಣ ರಷ್ಯದ ಕಪ್ಪು ಸಮುದ್ರದ ಪ್ರವಾಸಿ ನಗರ ಸೋಚಿಗೆ ತೆರಳುತ್ತ್ದಿದಾಗ ಮುಂಜಾನೆ 7ರ ವೇಳೆಗೆ (ಭಾರತೀಯ ಕಾಲಮಾನ 8.30) ಈ ದುರಂತ ಸಂಭವಿಸಿತು.

2006: ಸಾಹಿತ್ಯ ಕೃತಿ ಚೌರ್ಯ ಆರೋಪ ಹೊತ್ತಿರುವ ಭಾರತೀಯ ಮೂಲದ ಕಾವ್ಯಾ ವಿಶ್ವನಾಥನ್ ಅವರ ವಿವಾದಿಕ ಕೃತಿಯನ್ನು ಶಾಶ್ವತವಾಗಿ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಯಿತು. ಕಾವ್ಯಾ ಅವರು ಬರೆದಿರುವ ಇತರ ಎರಡು ಪುಸ್ತಕಗಳ ಪ್ರಕಟಣೆಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನೂ ಪ್ರಕಾಶನ ಸಂಸ್ಥೆ `ಲಿಟಲ್ , ಬ್ರೌನ್ ಅಂಡ್ ಕಂಪೆನಿ' ರದ್ದು ಪಡಿಸಿತು.

2006: ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಕೇಂದ್ರದ (ಪಿಎಸಿ) ಸ್ಥಾಪಕ ಅಧ್ಯಕ್ಷ ಡಾ. ಸ್ಯಾಮ್ಯುಯೆಲ್ ಪೌಲ್ ಅವರಿಗೆ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿತು.

1915: ಬೆಂಗಳೂರಿನ ಶಂಕರಪುರಂನ ಪುಟ್ಟ ಬಾಡಿಗೆ ಕೋಣೆಯೊಂದರಲ್ಲಿ ಕನ್ನಡಿಗರ ಬಹುದಿನಗಳ ಆಶಯದ `ಕರ್ನಾಟಕ ಸಾಹಿತ್ಯ ಪರಿಷತ್ತು' (ಈಗಿನ ಕನ್ನಡ ಸಾಹಿತ್ಯ ಪರಿಷತ್ತು) ಆರಂಭಗೊಂಡಿತು. ನಂತರ 1933ರಲ್ಲಿ ಪರಿಷತ್ತು ಚಾಮರಾಜಪೇಟೆಯ ಈಗಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ದೆಹಲಿ, ಮುಂಬೈ, ಚೆನ್ನೈ ಮತ್ತಿತರ ಕಡೆಗಳಲ್ಲಿಯೂ ಪರಿಷತ್ತು ತನ್ನ ಶಾಖೆಗಳನ್ನು ಹೊಂದಿದ್ದು, ಪ್ರತಿ ಶಾಖೆಗೂ ಪ್ರತ್ಯೇಕ ಕಾರ್ಯಕಾರಿ ಸಮಿತಿಯನ್ನು ಹೊಂದಿರುತ್ತದೆ.

1939: ನೇತಾಜಿ ಸುಭಾಶ್ ಚಂದ್ರ ಬೋಸ್ ಕಾಂಗ್ರೆಸ್ ಪಕ್ಷದಲ್ಲೇ ಹೊಸ ವಿಭಾಗವೊಂದರ ರಚನೆಯನ್ನು ಕಲಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಪ್ರಕಟಿಸಿದರು. ಅದನ್ನು `ಫಾರ್ವರ್ಡ್ ಬ್ಲಾಕ್' ಎಂದು ಅವರು ಕರೆದರು. ರಾಷ್ಟ್ರದಲ್ಲಿನ ಎಲ್ಲ ಕ್ರಾಂತಿಕಾರಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಪ್ರಗತಿಪರ ಶಕ್ತಿಗಳನ್ನು ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ಒಗ್ಗೂಡಿಸುವ ಉದ್ದೇಶ ಇದರದ್ದಾಗಿತ್ತು.

1916: ಐರಿಷ್ ರಾಷ್ಟ್ರೀಯವಾದಿ, ಕವಿ, ಶಿಕ್ಷಣತಜ್ಞ ಪ್ಯಾಟ್ರಿಕ್ ಹೆನ್ರಿ ಪಿಯರ್ಸ್ ಮತ್ತು ಇತರ ಇಬ್ಬರನ್ನು ಬ್ರಿಟಿಷ್ ಸರ್ಕಾರ ಈಸ್ಟರ್ ದಂಗೆಯಲ್ಲಿ ವಹಿಸಿದ ಪಾತ್ರಕ್ಕಾಗಿ ಗಲ್ಲಿಗೇರಿಸಿತು. 1916ರ ಏಪ್ರಿಲ್ 24ರಂದು ಆರಂಭವಾದ ಬ್ರಿಟಿಷ್ ವಿರೋಧಿ ದಂಗೆಯಲ್ಲಿ ಪಿಯರ್ಸ್ ಐರಿಷ್ ಪಡೆಗಳ ಮಹಾದಂಡನಾಯಕನಾಗಿದ್ದ.

1898: ಗೋಲ್ಡಾ ಮೀಯರ್ (1898-1978) ಹುಟ್ಟಿದ ದಿನ. ಈಕೆ ಇಸ್ರೇಲಿನ ನಾಲ್ಕನೇ ಪ್ರಧಾನಿ ಹಾಗೂ ಅಲ್ಲಿನ ಪ್ರಥಮ ಮಹಿಳಾ ಪ್ರಧಾನಿ.

1897: ವಿ.ಕೆ. ಕೃಷ್ಣ ಮೆನನ್ (1897-1974) ಜನ್ಮದಿನ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು 1962ರಲ್ಲಿ ಭಾರತದ ಮೇಲೆ ಚೀನ ದಾಳಿ ನಡೆಸಿದಾಗ ಭಾರತದ ರಕ್ಷಣಾ ಸಚಿವರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement