Monday, May 5, 2008

ಇಂದಿನ ಇತಿಹಾಸ History Today ಮೇ 5

ಇಂದಿನ ಇತಿಹಾಸ

ಮೇ 5

ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ, ಭಾರತೀಯ ಚಿತ್ರ ಸಂಗೀತಕ್ಕೆ ಹೊಸ ಆಯಾಮ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ನೌಷಾದ್ ಅಲಿ (86) ಅವರು ಮುಂಬೈಯ ನಾನಾವತಿ ಆಸ್ಪತ್ರೆಯಲ್ಲಿ ಬೆಳಗ್ಗೆ ಹೃದಯ ಸ್ಥಂಭನದಿಂದ ಅಸು ನೀಗಿದರು.

2007: ತಮಿಳುನಾಡಿನ ರಣಜಿ ಆಟಗಾರ ಶ್ರೀಧರನ್ ಶರತ್ ಅವರು ಚೆನ್ನೈಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಟಿಗೆ ವಿದಾಯ ಘೋಷಿಸಿದರು. ಕಳೆದ 15 ವರ್ಷಗಳಿಂದ ಅವರು ದೇಸೀ ಕ್ರಿಕೆಟ್ಟಿನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು.

2007: ಕರ್ನಾಟಕದ ಮಾಜಿ ಶಾಸಕ, ಹಿರಿಯ ವಕೀಲ ಕೆ.ಪಿ. ನಾಡಗೌಡ ಮುಧೋಳದಲ್ಲಿ ನಿಧನರಾದರು. ಮುಧೋಳ ಕ್ಷೇತ್ರದಲ್ಲಿ 1965-1976ರ ನಡುವಣ ಅವಧಿಯಲ್ಲಿ ಅವರು ಎರಡು ಸಲ ಚುನಾಯಿತರಾಗಿದ್ದರು. ಅವರು ಕಡಿದಾಳ್ ಮಂಜಪ್ಪ ಮತ್ತು ದೇವರಾಜ ಅರಸು ಅವರ ನಿಕಟವರ್ತಿಗಳಾಗಿದ್ದರು.

2007: ನಾಸಿಕ್ ಸಮೀಪದ ಸಿನ್ಹಾರಿನಲ್ಲಿ ನಡುರಾತ್ರಿ ವೇಳೆಯಲ್ಲಿ ಸಂಭವಿಸಿದ ರಾಸಾಯನಿಕ ಕಾರ್ಖಾನೆ ಸ್ಫೋಟದಲ್ಲಿ 20 ಮಂದಿ ಮೃತರಾಗಿ ಇತರ 10 ಮಂದಿ ಗಾಯಗೊಂಡರು.

2007: ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದ ಮುಂಬೈ ಅಪಘಾತ ಪ್ರಕರಣದಲ್ಲಿ ಅಲಿಸ್ಟರ್ ಪೆರೇರಾ ಎಂಬ ಯುವ ಉದ್ಯಮಿಗೆ ಆರು ತಿಂಗಳ ಲಘು ಸಜೆ ವಿಧಿಸಿ ತೀರ್ಪು ನೀಡಿದ್ದ ನ್ಯಾಯಾಧೀಶ ಅಜಿತ್ ಮಿಶ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಮುಂಬೈಯ ಬಾಂದ್ರಾದ ಫುಟ್ ಪಾತಿನಲ್ಲಿ ಮಲಗಿದ್ದವರ ಮೇಲೆ ಕಾರು ಹತ್ತಿಸಿದ ಅಲಿಸ್ಟರ್ 7 ಜನರ ಸಾವಿಗೆ ಕಾರಣನಾಗಿದ್ದ.

2007: ಸರಳ ಸಾಮೂಹಿಕ ವಿವಾಹ ಜನಪ್ರಿಯಗೊಳಿಸಲು ರಾಜ್ಯ ಸರ್ಕಾರವು ಮುಂಗಡಪತ್ರದಲ್ಲಿ ಪ್ರಕಟಿಸಿದ `ಆದರ್ಶ ವಿವಾಹ' ಯೋಜನೆಯ ಅಧಿಕೃತ ಆದೇಶ ಹೊರಬಿದ್ದಿತು.

2007: ಝೀ ಟಿವಿ ಚಾನೆಲ್ಲಿನ ಸಾಹಸಗಳ ಸರಮಾಲೆ `ಶಹಬ್ಬಾಸ್ ಇಂಡಿಯಾ' ಮಾಲಿಕೆಯ ಬುಕ್ ಆಫ್ ರೆಕಾರ್ಡಿನಲ್ಲಿ ಕುಂದಾಪುರದ ಬಾಲ ಈಜುಪಟು ಹರ್ಷಿತ್ ಎನ್ ಖಾರ್ವಿ (12) ದಾಖಲಾದನು. ಈತ ಗಂಗೊಳ್ಳಿ ಲೈಟ್ಹೌಸ್ ಸಮುದ್ರ ಕಿನಾರೆಯಿಂದ ಪಂಚಗಂಗಾವಳಿ ನದಿಯವರೆಗಿನ ಸುಮಾರು 25 ಕಿ.ಮೀ. ದೂರವನ್ನು ಸಂಕೋಲೆ ತೊಟ್ಟು ಈಜುವ ಮೂಲಕ ದಾಖಲೆ ನಿರ್ಮಿಸಿದ.

2007: ದಕ್ಷಿಣ ಕ್ಯಾಮರೂನಿನಲ್ಲಿ ಕೀನ್ಯಾ ಏರ್ ವೇಸ್ ವಿಮಾನ ಅಪಘಾತಕ್ಕೆ ಈಡಾಗಿ 15 ಭಾರತೀಯರ ಸಹಿತ 115 ಜನ ಮೃತರಾದರು. ಈ ವಿಮಾನ ಹೊರಟ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗಿ ನಂತರ ಅಪಘಾತಕ್ಕೆ ಈಡಾಗಿರುವುದು ಪತ್ತೆಯಾಯಿತು.

2006: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ, ಭಾರತೀಯ ಚಿತ್ರ ಸಂಗೀತಕ್ಕೆ ಹೊಸ ಆಯಾಮ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ನೌಷಾದ್ ಅಲಿ (86) ಅವರು ಮುಂಬೈಯ ನಾನಾವತಿ ಆಸ್ಪತ್ರೆಯಲ್ಲಿ ಬೆಳಗ್ಗೆ ಹೃದಯ ಸ್ಥಂಭನದಿಂದ ಅಸು ನೀಗಿದರು.

2006: ಖ್ಯಾತ ಕೊಳಲುವಾದಕ ವಿದ್ವಾನ್ ಎಂ.ಆರ್. ದೊರೆಸ್ವಾಮಿ (84) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಚಿಕ್ಕಮಗಳೂರಿನವರಾದ ದೊರೆಸ್ವಾಮಿ 10ನೇ ವಯಸ್ಸಿನಲ್ಲೇ ಕೊಳಲುವಾದನ ಆರಂಭಿಸಿದ್ದರು.

2006: ಕಲ್ಪನಾ ಚಾವ್ಲಾ ಅವರ ಬಳಿಕ ಇದೀಗ ಭಾರತೀಯ ಮೂಲದ ಎರಡನೇ ಮಹಿಳಾ ಗಗನಯಾನಿಯಾಗಿ ಅಮೆರಿಕ ಬಾಹ್ಯಾಕಾಶ ಯೋಜನಾ ಇಲಾಖೆಯು ಸುನೀತಾ ವಿಲಿಯಮ್ಸ್ ಅವರನ್ನು ಆಯ್ಕೆ ಮಾಡಿತು. ಮೂಲತಃ ಸುನೀತಾ ಪಾಂಡ್ಯ ಆಗಿದ್ದ ಈಕೆ ಪ್ರಸ್ತುತ ಸುನೀತಾ ವಿಲಿಯಮ್ಸ್ ಎಂದೇ ಖ್ಯಾತಳಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಗಗನಕ್ಕೆ ಏರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಒಬ್ಬ ಗಗನಯಾನಿಯನ್ನು ಭೂಮಿಗೆ ಕಳುಹಿಸಿ, ತಾವು ಆರು ತಿಂಗಳ ಕಾಲ ಅಲ್ಲೇ ಉಳಿದರು.

1992: ಮಹಿಳೆಯರಿಗೆ ಮೀಸಲಾದ ಸಬರ್ಬನ್ ರೈಲ್ವೇಸೇವೆಯನ್ನು ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಮುಂಬೈಯ ಪಶ್ಚಿಮ ರೈಲ್ವೇ ವಿಭಾಗವು ಆರಂಭಿಸಿತು.

1965: ಕಲಾವಿದ ಗುರುದತ್ ಎಂ.ಎಸ್. ಜನನ.

1957: ಮೈಸೂರು ಸಂಸ್ಥಾನದ ಗೇಣಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿಗಳು ತಮ್ಮ ಅಂಗೀಕಾರವನ್ನಿತ್ತರು. ಏಕರೀತಿಯ ಶಾಸನ ಜಾರಿಗೆ ಬರುವ ತನಕ, ಮೈಸೂರು ರಾಜ್ಯದ ವಿವಿಧ ಭಾಗಗಳಲ್ಲಿ ಜಾರಿಯಲ್ಲಿರುವ ವಿವಿಧ ಗೇಣಿ ಶಾಸನಗಳನ್ನು ಯಥಾಸ್ಥಿತಿಯಲ್ಲಿ ಇಡುವ ಬಗ್ಗೆ ಮೊದಲೇ ತರಲಾಗಿದ್ದ ತುರ್ತು ಶಾಸನಕ್ಕೆ ಬದಲು ಈ ಮಸೂದೆಗಳನ್ನು ಮಂಡಿಸಲಾಗಿತ್ತು.

1956: ಕೊಣನೂರಿನ ಸಂಗೀತ ಹಾಗೂ ಹರಿಕಥಾ ವಿದ್ವಾಂಸರ ಮನೆತನದಿಂದ ಬಂದ ಕರ್ನಾಟಕ ಸಂಗೀತ ಕಲಾವಿದೆ ಗೀತಾ ಬಾಲಸುಬ್ರಹ್ಮಣ್ಯಂ ಅವರು ಸಂಗೀತ ವಿದ್ವಾಂಸ ರಾಮಕೃಷ್ಣ ಶಾಸ್ತ್ರಿ- ಲೇಖಕಿ ವಾಗೀಶ್ವರಿ ಶಾಸ್ತ್ರಿ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜನಿಸಿದರು.

1948: ಕಲಾವಿದ ಶಿವರಾಜ ಗವಾಯಿ ಜನನ.

1945: ಕಲಾವಿದೆ ಧನಲಕ್ಷ್ಮಿ ಎಸ್. ಜನನ.

1938: ಕಲಾವಿದ ಕೃಷ್ಣರಾವ್ ಇನಾಂದಾರ್ ಜನನ.

1916: ಗಿಯಾನಿ ಜೈಲ್ಸಿಂಗ್ (1916-94) ಜನ್ಮದಿನ. 1982-1987 ರವರೆಗೆ ಇವರು ಭಾರತದ ರಾಷ್ಟ್ರಪತಿಯಾಗಿದ್ದರು.

1821: ನೆಪೋಲಿಯನ್ ಬೋನಪಾರ್ಟೆ ಸೈಂಟ್ ಹೆಲೆನಾ ದ್ವೀಪದಲ್ಲಿ ಅಸುನೀಗಿದ. ವಿಷಸೇವನೆಯಿಂದ ಆತ ಮೃತನಾದ ಎಂದು ನಂಬಲಾಗಿದೆ. ಆದರೂ ಆತನ ಸಾವಿಗೆ ಕಾರಣ ಏನೆಂಬುದು ಇಂದಿನವರೆಗೂ ಚರ್ಚೆಯ ವಿಷಯವಾಗಿಯೇ ಉಳಿದಿದೆ.

1818: ಜರ್ಮನ್ ತತ್ವಜ್ಞಾನಿ, ಕಮ್ಯೂನಿಸಂ ಸ್ಥಾಪಕ ಕಾರ್ಲ್ ಮಾರ್ಕ್ಸ್ ಜರ್ಮನಿಯ ಟ್ರೈಯರಿನಲ್ಲಿ ಹುಟ್ಟಿದ.

1760: ಅರ್ಲ್ ಫೆರ್ರೆರ್ಸ್ನಿಗೆ ಮರಣದಂಡನೆ ವಿಧಿಸಲು `ಹ್ಯಾಂಗ್ಮನ್ಸ್ ಡ್ರಾಪ್'ನ್ನು ಮೊತ್ತ ಮೊದಲ ಬಾರಿಗೆ ಲಂಡನ್ನ ಟೈಬರ್ನಿನಲ್ಲಿ ಬಳಸಲಾಯಿತು.

1766: ಭಾರತದಲ್ಲಿ ಬ್ರಿಟಿಷರೊಡನೆ ನಡೆದ 7 ವರ್ಷಗಳ ಯುದ್ಧದಲ್ಲಿ ಶರಣಾಗತನಾದುದಕ್ಕಾಗಿ ಆಗ ಭಾರತದಲ್ಲಿ ಫ್ರೆಂಚ್ ಪಡೆಗಳ ನಾಯಕನಾಗಿದ್ದ ಜನರಲ್ ಕಾಮ್ಟೆ ಡೆ ಲಾಲ್ಲಿಗೆ ಪ್ಯಾರಿಸ್ಸಿನಲ್ಲಿಮರಣದಂಡನೆ ವಿಧಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement