ಇಂದಿನ ಇತಿಹಾಸ
ಮೇ 19
ಖ್ಯಾತ ಪಿಟೀಲುವಾದಕ ಮತ್ತು ಹಿರಿಯ ಹಿರಿಯ ನಿರ್ದೇಶಕ ಎಲ್. ವೈದ್ಯನಾಥನ್ (61) ಅವರು ಹೃದಯಾಘಾತದಿಂದ ಚೆನ್ನೈಯಲ್ಲಿ ನಿಧನರಾದರು. ವೈದ್ಯನಾಥನ್ ಅವರು ಕನ್ನಡ ಮತ್ತು ತಮಿಳು ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಲ್ಲದೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.
2007: ಖ್ಯಾತ ಪಿಟೀಲುವಾದಕ ಮತ್ತು ಹಿರಿಯ ಹಿರಿಯ ನಿರ್ದೇಶಕ ಎಲ್. ವೈದ್ಯನಾಥನ್ (61) ಅವರು ಹೃದಯಾಘಾತದಿಂದ ಚೆನ್ನೈಯಲ್ಲಿ ನಿಧನರಾದರು. ವೈದ್ಯನಾಥನ್ ಅವರು ಕನ್ನಡ ಮತ್ತು ತಮಿಳು ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಲ್ಲದೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ತಮಿಳು ಚಿತ್ರ `ಎಜಾವತು ಮಣಿತನ್' ಚಿತ್ರಕ್ಕೆ ನೀಡಿದ್ದ ಸಂಗೀತದಿಂದ ಅವರು ಖ್ಯಾತಿ ಪಡೆದಿದ್ದರು. ನಮ್ಮೂರ ಮಂದಾರ ಹೂವೇ, ಇದು ಎಂಥಾ ಲೋಕವಯ್ಯಾ, ಒಲುಮೆ ಪೂಜೆಗೆಂಜೇ, ಸಂತಸ ಅರಳುವ ಸಮಯ, ಅಂತರಂಗದ ಹೂ ಬನಕೆ, ಏನೋ ಮಾಡಲು ಹೋಗಿ ಮತ್ತಿತರ ಜನಪ್ರಿಯ ಗೀತೆಗಳಿಗೆ ಅವರು ಸಂಗೀತ ನೀಡಿದ್ದರು.
2007: ಏಷ್ಯಾದಲ್ಲೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಮಿರರ್ ಡೋಂ ಪ್ಲಸ್' ತಾರಾ ಮಂಡಲ ವೀಕ್ಷಣೆಯ ಪ್ರೊಜೆಕ್ಟರಿಗೆ ಬೆಂಗಳೂರಿನ ಜವಾಹರ ಲಾಲ್ ನೆಹರೂ ತಾರಾಲಯದಲ್ಲಿ ರಾಜ್ಯಪಾಲ ಟಿ.ಎಸ್. ಚತುರ್ವೇದಿ ಚಾಲನೆ ನೀಡಿದರು. ಕಂಪ್ಯೂಟರ್, ಡಿ ಎಲ್ ಪಿ ಪ್ರೊಜೆಕ್ಟರ್ ಮತ್ತು ಅತಿ ಹೆಚ್ಚು ಪ್ರತಿಫಲನ ಶಕ್ತಿಯ ಉನ್ನತ ದರ್ಪಣವನ್ನು ಪ್ರೊಜೆಕ್ಟರ್ ಹೊಂದಿದೆ. ಆಸ್ಟ್ರೇಲಿಯಾದ ಸ್ವಿನ್ ಬರ್ನ್ ತಾಂತ್ರಿಕ ವಿಶ್ವ ವಿದ್ಯಾಲಯ ಸಿದ್ಧ ಪಡಿಸಿದ ಈ ಪ್ರತಿಫಲನ ಸಂಬಂಧಿತ ಸಾಫ್ಟ್ ವೇರನ್ನು ಕೂಡಾ ಈ ಪ್ರೊಜೆಕ್ಟರಿಗೆ ಅಳವಡಿಸಲಾಗಿದೆ.
2007: ದಕ್ಷಿಣ ನೈಜೀರಿಯಾದ ಬಂದರು ನಗರ ಹಾರ್ ಕೋರ್ಟಿನಲ್ಲಿ ತೈಲ ಕಂಪೆನಿಯೊಂದರ ಮೂವರು ಭಾರತೀಯ ಉದ್ಯೋಗಿಗಳನ್ನು ಬಂದೂಕುಧಾರಿ ಭಯೋತ್ಪಾದಕರು ಅಪಹರಿಸಿದರು.
2007: ಹುಕ್ಕೇರಿ ತಾಲ್ಲೂಕಿನ ರಕ್ಷಿ ಗ್ರಾಮದ 94 ವರ್ಷಗಳ ಹಿರಿಯಜ್ಜಿ ಗೌರವ್ವ ಚನ್ನಪ್ಪ ಕುರಬೇಟ ಅವರು ಈದಿನ ಬೆಳಗ್ಗೆ ಮೃತಳಾಗಿ ಸಂಜೆ ವೇಳೆಗೆ ಮತ್ತೆ ಬದುಕಿ ಬಂದಳು. ಬೆಳಗ್ಗೆ 11.30ರ ವೇಳೆಗೆ ಆಕೆ ಕಣ್ಮಿಚ್ಚಿದಾಗ ವೈದ್ಯರು ತಪಾಸಿಸಿ ಆಕೆ ಮೃತಳಾಗಿರುವುದಾಗಿ ಘೋಷಿಸಿದ್ದರು. ಎಲ್ಲ ಬಂಧುಗಳಿಗೂ ಕರೆ ಹೋಯಿತು. ಸಂಜೆ 4.30ರ ವೇಳೆಗೆ ಅಂತ್ಯ ಸಂಸ್ಕಾರ ವಿಧಿಗಳನ್ನು ನಡೆಸುತ್ತಿದ್ದಾಗ ಅಜ್ಜಿಯ ಮೂಗಿನ ಹೊಳ್ಳೆ, ಭುಜ ಅಲುಗಿತು. ಇದನ್ನು ಗಮನಿಸಿದ ಕುಟುಂಬ ಸದಸ್ಯರು ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರನ್ನು ಕರೆಸಿದರು. ನಂತರ ಅಜ್ಜಿ ಎದ್ದು ಕುಳಿತಳು.
2006: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಫೌಜ್ ನಲ್ಲಿ ಚಾಲಕ ಹಾಗೂ ಅಂಗರಕ್ಷಕರಾಗಿದ್ದರೆನ್ನಲಾದ ಉತ್ತರ ಪ್ರದೇಶದ ಅಜಂಗಢದ 102 ವರ್ಷ ವಯಸ್ಸಿನ ನಿಜಾಮುದ್ದೀನ್ ಎಂಬ ವ್ಯಕ್ತಿ, 1945ರಲ್ಲಿ ತೈಪೆಯಲ್ಲಿ ಅಪಘಾತಕ್ಕೆ ಈಡಾದ ವಿಮಾನದಲ್ಲಿ ನೇತಾಜಿ ಇರಲೇ ಇಲ್ಲ, ಅವರು ಕೆಲವು ವರ್ಷಗಳ ಹಿಂದೆ ಫೈಜಾಬಾದಿನಲ್ಲಿ ಗುಮ್ನಾಮಿ ಬಾಬಾ ಹೆಸರಿನಲ್ಲಿ ಮೃತರಾದರು ಎಂದು ಈದಿನ ಅಜಂಗಢದಲ್ಲಿ ಹೇಳಿದರು. 1946ರಲ್ಲಿ ಥಾಯ್ಲೆಂಡಿನ ನದಿಯ ಸೇತುವೆಯೊಂದರ ಮೇಲೆ ತಾನು ನೇತಾಜಿ ಮತ್ತು ಅವರ ಸಹೋದರ ಶರತ್ ಚಂದ್ರ ಬೋಸ್ ಅವರನ್ನು ಭೇಟಿ ಮಾಡಿದ್ದುದಾಗಿ ನಿಜಾಮುದ್ದೀನ್ ನುಡಿದರು.
1947: ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಮತ್ತು ಚಲನಚಿತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಖ್ಯಾತರಾಗಿದ್ದ ಲೋಕೇಶ್ (19-03-1947ರಿಂದ 14-10-2004) ಅವರು ಎಂ.ವಿ. ಸುಬ್ಬಯ್ಯನಾಯ್ಡು- ವೆಂಕಟಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.
1938: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ನಟ, ಸಾಹಿತಿ ಗಿರೀಶ್ ಕಾರ್ನಾಡ್ ಜನ್ಮದಿನ. ಗಿರೀಶ್ ಕಾರ್ನಾಡ್ ಅವರು ಈ ದಿನ ಮಹಾರಾಷ್ಟ್ರದ ಮ್ಯಾಥೆರಾನಿನಲ್ಲಿ ಡಾ. ರಘುನಾಥ ಕಾರ್ನಾಡ್ - ಕೃಷ್ಣಾಬಾಯಿ ಮಗನಾಗಿ ಜನಿಸಿದರು.
1919: ಕಲಾವಿದ ಭಾಗವತ ನೀಲಾವರ ರಾಮಕೃಷ್ಣಯ್ಯ ಜನನ.
1911: ಮಹಾತ್ಮ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆ ಹುಟ್ಟಿದ ದಿನ. ಗಾಂಧೀಜಿಯವರು ನವದೆಹಲಿಯ ಬಿರ್ಲಾ ಮಂದಿರದಲ್ಲಿ ಪ್ರಾರ್ಥನಾ ಸಭೆಯಲ್ಲಿದ್ದಾಗ ಅವರನ್ನು ಗೋಡ್ಸೆ ಗುಂಡು ಹೊಡೆದು ಕೊಂದ.
1890: ವಿಯೆಟ್ನಾಮಿನ ಧುರೀಣ ಹೊ.ಚಿ. ಮಿನ್ಹ್ (1890-1969) ಜನ್ಮದಿನ. ಮೂರು ದಶಕಗಳ ಕಾಲ ವಿಯೆಟ್ನಾಂ ರಾಷ್ಟ್ರೀಯ ಚಳವಳಿಯ ನೇತೃತ್ವ ವಹಿಸಿದ್ದ ಇವರು 1945ರಿಂದ 1969ರವರೆಗೆ ಉತ್ತರ ವಿಯೆಟ್ನಾಮಿನ ಅಧ್ಯಕ್ಷರಾಗಿದ್ದರು.
1795: ಜಾನ್ಸ್ ಹಾಪ್ ಕಿನ್ಸ್ (1795-1873) ಜನ್ಮದಿನ. ಅಮೆರಿಕದ ದಾನಿಗಳಲ್ಲೊಬ್ಬರಾದ ಇವರು ನೀಡಿದ 7 ದಶಲಕ್ಷ ಡಾಲರ್ ಹಣದಿಂದ ಜಾನ್ಸ್ ಹಾಪ್ ಕಿನ್ಸ್ ಆಸ್ಪತ್ರೆ ಹಾಗೂ ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.
1536: ಇಂಗ್ಲೆಂಡಿನ ದೊರೆ ಎಂಟನೇ ಹೆನ್ರಿಯ ದ್ವಿತೀಯ ಪತ್ನಿ, ರಾಣಿ ಮೊದಲನೇ ಎಲಿಜಬೆತ್ ಳ ತಾಯಿಯ ತಲೆಯನ್ನು ಎಂಟನೇ ಹೆನ್ರಿಯ ವಿವಾಹದ ಹಿಂದಿನ ದಿನ ಕಡಿಯಲಾಯಿತು. ಆಕೆ ವ್ಯಭಿಚಾರ ನಡೆಸಿದ ಆರೋಪಕ್ಕಾಗಿ ಈ ಶಿಕ್ಷೆ ವಿಧಿಸಲಾಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment