ಇಂದಿನ ಇತಿಹಾಸ
ಜೂನ್ 11
ಭಾರತೀಯ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿಯಾಗಿದ್ದ ಘನಶ್ಯಾಮದಾಸ್ ಬಿರ್ಲಾ ತಮ್ಮ 89ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಮೃತರಾದರು.
2007: ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿ 77 ಮಂದಿ ಜೀವಂತ ಸಮಾಧಿಯಾದರು. ದೇಶಾದ್ಯಂತ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಈ ದುರಂತ ಸಂಭವಿಸಿತು. ಮೃತರಲ್ಲಿ 12 ಮಂದಿ ಬಾಲಕರು.
2007: ಅಮೆರಿಕದ ನಾಸಾ ಕಳುಹಿಸಿದ `ರೋವರ್' ಬಾಹ್ಯಾಕಾಶ ಶೋಧ ನೌಕೆಯು ತೆಗೆದಿರುವ ಮಂಗಳ ಗ್ರಹದ ಚಿತ್ರಗಳಲ್ಲಿ `ನೀರಿನ ಹೊಂಡಗಳು' ಪತ್ತೆಯಾಗಿರುವುದಾಗಿ ವಿಜ್ಞಾನಿಗಳು ಬಹಿರಂಗಪಡಿಸಿದರು. ಎರಡು ವರ್ಷಗಳ ಹಿಂದೆ ಈ ಹೊಂಡಗಳಲ್ಲಿ ನೀರು ಇತ್ತು ಎಂಬುದು ಅವರ ಹೇಳಿಕೆ.
2007: ಮಣಿಕಟ್ಟಿನ ಗಾಯಗಳು ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಾಗಿ ಮಾಡಿಕೊಂಡದ್ದಲ್ಲ ಎಂದು ಮಾಜಿ ಕ್ರಿಕೆಟಿಗ ಮಣಿಂದರ್ ಸಿಂಗ್ ಪೊಲೀಸರಿಗೆ ಸ್ಪಷ್ಟ ಪಡಿಸಿದರು.
2006: ನೇಪಾಳದ ದೊರೆ ಜ್ಞಾನೇಂದ್ರ ಅವರಿಗೆ ಇದ್ದ ವ್ಹೀಟೊ ಚಲಾವಣೆ ಅಧಿಕಾರ ಮೊಟಕುಗೊಳಿಸುವ ಕಾನೂನನ್ನು ನೇಪಾಳಿ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತು.
2005: ಮಾಜಿ ಪೋರ್ಚುಗೀಸ್ ಪ್ರಧಾನಿ ಜನರಲ್ ವಾಸ್ಕೊ ಗೋನ್ಸಾಲ್ವೆಸ್ (83) ನಿಧನರಾದರು. 1974ರಲ್ಲಿ ನಡೆದ ಎಡಪಂಥೀಯ ಕ್ರಾಂತಿಯ ಬಳಿಕ ನಾಲ್ಕು ಪ್ರಾಂತೀಯ ಸರ್ಕಾರಗಳ ನೇತೃತ್ವವನ್ನು ಅವರು ವಹಿಸಿದ್ದರು.
2001: ಓಕ್ಲಾಹಾಮಾ ಬಾಂಬರ್ ತಿಮೋತಿ ಮೆಕ್ ವೀಗ್ ನನ್ನು ವಿಷದ ಇಂಜೆಕ್ಷನ್ ನೀಡಿ ಮರಣದಂಡನೆಗೆ ಗುರಿಪಡಿಸಲಾಯಿತು. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಯುವವರೆಗೆ 168 ಜನರನ್ನು ಬಲಿ ತೆಗೆದುಕೊಂಡ ಓಕ್ಲಾಹಾಮಾ ಬಾಂಬ್ ದಾಳಿ ಘಟನೆಯನ್ನೇ ಅಮೆರಿಕ ನೆಲದಲ್ಲಿ ನಡೆದ ಅತಿ ಭೀಕರ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿತ್ತು.
2000: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ರಾಜೇಶ್ ಪೈಲಟ್ ನಿಧನರಾದರು.
1999: ಭಾರತೀಯ ಸೇನೆಯು ಕಾರ್ಗಿಲ್ ಪ್ರದೇಶದಲ್ಲಿ ಒಳನುಸುಳುತ್ತಿದ್ದ 23 ಜನರನ್ನು ಕೊಂದು ಹಾಕಿತು.
1996: ಜೆ.ಎಂ.ಎಂ. ಹಗರಣದ ಹೊಸ ತನಿಖಾ ವರದಿಯ ಪ್ರಕಾರ ನರಸಿಂಹರಾವ್ ಅವರ ಹೆಸರು ಪ್ರಕರಣದಲ್ಲಿ ಸೇರ್ಪಡೆಯಾಯಿತು.
1987: ಇಂಗ್ಲೆಂಡಿನ 160 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿಗೆ ಸತತವಾಗಿ ಗೆದ್ದ ಮೊದಲ ಬ್ರಿಟಿಷ್ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮಾರ್ಗರೆಟ್ ಥ್ಯಾಚರ್ ಪಾತ್ರರಾದರು.
1983: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿಯಾಗಿದ್ದ ಘನಶ್ಯಾಮದಾಸ್ ಬಿರ್ಲಾ ತಮ್ಮ 89ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಮೃತರಾದರು.
1970: ರಷ್ಯದ ರಾಜಕೀಯ ನಾಯಕ ಅಲೆಗ್ಸಾಂಡರ್ ಕೆರೆನ್ ಸ್ಕಿ ನ್ಯೂಯಾರ್ಕ್ ನಗರದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ಮೃತರಾದರು. 1917ರಲ್ಲಿ ಬೋಲ್ಷೆವಿಕ್ ಗಳು ಅವರನ್ನು ಧುರೀಣತ್ವದಿಂದ ಪದಚ್ಯುತಿಗೊಳಿಸಿದ್ದರು.
1964: ಪಂಡಿತ್ ಜವಾಹರಲಾಲ್ ನೆಹರೂ ಅವರ ಚಿತಾಭಸ್ಮವನ್ನು ಅವರ ಆಶಯದಂತೆ ದೇಶದಾದ್ಯಂತ ಚೆಲ್ಲಲಾಯಿತು.
1932: ಹಿಂದುಸ್ಥಾನಿ ಸಂಗೀತಗಾರ ಸುರೇಂದ್ರ ಸಾ ನಾಕೋಡ್ ಅವರು ವೆಂಕೂ ಸಾ ನಾಕೋಡ್- ನಾಗೂಬಾಯಿ ದಂಪತಿಯ ಮಗನಾಗಿ ಗದಗ ಬೆಟಗೇರಿಯಲ್ಲಿ ಜನಿಸಿದರು.
1907: ಖ್ಯಾತ ಹಿಂದಿ ಕವಿ ಶಾಂತಿಲಾಲ್ ಜೀವನಲಾಲ್ ಜನನ.
1903: ಸರ್ಬಿಯಾದ ದೊರೆ ಮೊದಲನೆಯ ಅಲೆಗ್ಸಾಂಡರ್ ಮತ್ತು ರಾಣಿ ಡ್ರ್ಯಾಗಾ ಅವರನು ದಂಗೆಯೊಂದರಲ್ಲಿ ಹತ್ಯೆಗೈಯಲಾಯಿತು.
1847: ಆರ್ಕ್ಟಿಕ್ ನ್ನು ಕಂಡು ಹಿಡಿದ ಸರ್ ಜಾನ್ ಫ್ರಾಂಕ್ಲಿನ್ ಅಮೆರಿಕ ಖಂಡದ ಉತ್ತರ ಭಾಗದಲ್ಲಿ ಪೂರ್ವದ ಕಡೆಗೆ ವಾಯುವ್ಯ ಕಣಿವೆ ಮಾರ್ಗ ಕಂಡು ಹಿಡಿಯುವ ಯತ್ನದಲ್ಲಿದ್ದಾಗ ಅಸುನೀಗಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment