ಇಂದಿನ ಇತಿಹಾಸ
ಜುಲೈ 29
ಜಾನಪದ ಗಾರುಡಿಗ, ಸ್ವಾತಂತ್ರ್ಯ ಯೋಧ, ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಎಸ್.ಕೆ. ಕರೀಂಖಾನ್ ಅವರು ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು.
ಜುಲೈ 29
ಜಾನಪದ ಗಾರುಡಿಗ, ಸ್ವಾತಂತ್ರ್ಯ ಯೋಧ, ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಎಸ್.ಕೆ. ಕರೀಂಖಾನ್ ಅವರು ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು.
2007: ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕ ಎಂಬ ಹಣೆಪಟ್ಟಿ ಬಿದ್ದು ಬಂಧಿತನಾಗಿ ಅಲ್ಲಿನ ಪೊಲೀಸರಿಂದ ಚಿತ್ರಹಿಂಸೆಗೆ ಒಳಗಾದ ಬೆಂಗಳೂರಿನ ವೈದ್ಯ ಹನೀಫ್ ಆರೋಪಮುಕ್ತರಾಗಿ ತಮ್ಮ ವಕೀಲ ಪೀಟರ್ ರುಸ್ಸೊ ಜೊತೆಗೆ ಬೆಂಗಳೂರಿಗೆ ಬಂದಿಳಿದರು. ಹನೀಫ್ ಮಾವ ಅಶ್ಫಾಕ್ ಅಹಮದ್, ಸಹೋದರ ಮಹಮದ್ ಶಫಿ ಮೊದಲಾದ ಸಂಬಂಧಿಕರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದರು.
2007: ಉಡುಪಿಯಲ್ಲಿ ನಡೆಯುವ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಆಯ್ಕೆಯಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯು, ಶೇಷಗಿರಿರಾವ್ ಅವರನ್ನು ಮುಂದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿತು.
2007: ಸರಕು ಸಾಗಣೆ ವಿಮಾನವೊಂದು ಈದಿನ ಮಾಸ್ಕೊದ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೆ ಈಡಾಯಿತು. ಪರಿಣಾಮವಾಗಿ ಐವರು ಸಿಬ್ಬಂದಿ ಸೇರಿ ಎಂಟು ಮಂದಿ ಮೃತರಾದರು. ಸೈಬೀರಿಯಾ ಮೂಲದ ಅತ್ರಾನ್ ಏರ್ ಲೈನ್ಸಿನ ಅಂತೊನಾವ್ ಎನ್-12 ವಿಮಾನವು ಭಾರತೀಯ ಕಾಲಮಾನ ಬೆಳಿಗ್ಗೆ 6.46ರ ಸುಮಾರಿಗೆ ಮಾಸ್ಕೊ ಡಾಮೊದೆಡೊವೊ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿ, ರನ್ ವೇಯಿಂದ ಹಾರಿ ಕೇವಲ ನಾಲ್ಕು ಕಿ.ಮೀ. ದೂರ ಸಾಗುವಷ್ಟರಲ್ಲಿ ಬೆಂಕಿಗೆ ಆಹುತಿಯಾಯಿತು.
2007: ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಒಡೆತನದ ಕಪಾರೊ ಸಮೂಹವು ಸ್ಕೈ ಕಂಪೆನಿಯ `ಚಾನೆಲ್ 158'ನ್ನು ಖರೀದಿಸಿತು. ಈ ಚಾನೆಲ್ ಮೂಲಕ ಕಪಾರೊ ಸಮೂಹ ತನ್ನ `ಫಿಲ್ಮ್ 24' ಉದ್ಯಮವನ್ನು ವಿಸ್ತರಿಸುವುದು ಕಪಾರೋ ಸಮೂಹದ ಗುರಿ.
2007: ಉಡುಪಿ ನಗರದ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ಈದಿನ ಸಂಜೆ ಯಕ್ಷಗಾನ ಕ್ಷೇತ್ರದಲ್ಲಿ ನೂತನ ದಾಖಲೆಯೊಂದು ನಿರ್ಮಾಣವಾಯಿತು. ಒಂದಲ್ಲ, ಎರಡಲ್ಲ, ಹತ್ತಕ್ಕಿಂತ ಹೆಚ್ಚು ರಾಕ್ಷಸ ವೇಷಧಾರಿಗಳ ಸಂಗಮ ಇಲ್ಲಿ ಏರ್ಪಟ್ಟಿತು. ಯಕ್ಷಗಾನ ಅಭಿಮಾನಿಗಳು ಈ ಹಿಂದೆಂದೂ ಕಂಡಿರದ ಅಪೂರ್ವ ಸಂಗಮ ಅದಾಗಿತ್ತು. ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಬಡಗುತಿಟ್ಟು ಬಣ್ಣದ ವೇಷ (ರಾಕ್ಷಸ ವೇಷ) ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಈ ರಾಕ್ಷಸರ ದಂಡೇ ರಂಗಸ್ಥಳಕ್ಕೆ ಆಗಮಿಸಿತು. ತೆಂಕುತಿಟ್ಟಿನ ಒಂಬತ್ತು ಮಂದಿ ರಾಕ್ಷಸರು ಹಾಗೂ ಬಡಗುತಿಟ್ಟಿನ ಇಬ್ಬರು ರಾಕ್ಷಸರು ಸಂಗಮದಿಂದ ಇಡೀ ವೇದಿಕೆ ಭರ್ತಿಯಾಯಿತು. ಅಲ್ಲಿ ಬರೀ ರಾಕ್ಷಸರಿರಲಿಲ್ಲ, ರಾಕ್ಷಸಿಯರೂ ಇದ್ದರು. ಬಣ್ಣದ ವೇಷಧಾರಿಗಳ ಕಲ್ಪನೆಯೂ ವಿನಿಮಯ ಇತ್ತು. ತಜ್ಞರ ಸಲಹೆ ಇತ್ತು. ಹೀಗಾಗಿ ರಾಕ್ಷಸ ವೇಷ ಕಮ್ಮಟ ಹೆಚ್ಚು ಕಲಾತ್ಮಕವಾಗಿ ಮೂಡಿ ಬಂತು. ಆ ಕಾರಣದಿಂದ ಯಕ್ಷಗಾನದ ಇತಿಹಾಸದಲ್ಲೇ ಈ ಕಮ್ಮಟ ನೂತನ ದಾಖಲೆ ನಿರ್ಮಿಸಿತು. ಯಕ್ಷಗಾನದ ಇತಿಹಾಸದಲ್ಲೇ ಈ ಕಮ್ಮಟ ನೂತನ ದಾಖಲೆ ನಿರ್ಮಿಸಿತು.
2007: ಜೋರ್ಡಾ ಅಮ್ಮಾನಿನಲ್ಲಿ ನಡೆದ 17ನೇ ಆಸಿಯಾನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಪಿನ ಮುಕ್ತಾಯ ದಿನವಾದ ಈದಿನ ಭಾರತವು ಮೂರು ಬಂಗಾರದ ಪದಕಗಳನ್ನು ಗಳಿಸುವುದರೊಂದಿಗೆ ಎರಡನೇ ಸ್ಥಾನ ಪಡೆಯಿತು. ರಂಜಿತ್ ಮಹೇಶ್ವರಿ ಪುರುಷರ ಟ್ರಿಪಲ್ ಜಿಗಿತದಲ್ಲಿ 17.19 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದುಕೊಂಡರು. ಸಿನಿಮೋಲ್ ಪೌಲೋಸ್ ಮಹಿಳೆಯರ ವಿಭಾಗದಲ್ಲಿ ಚಿನ್ನ ಗಳಿಸಿದರು. ಮಹಿಳೆಯರ ರಿಲೆ ತಂಡ ಮೊದಲ ಸ್ಥಾನ ಗಳಿಸಿತು. ಇದರಿಂದಾಗಿ ಭಾರತ ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಒಟ್ಟು ಐದು ಪದಕಗಳನ್ನು ತನ್ನದಾಗಿಸಿಕೊಂಡಿತು.
2006: ಜಾನಪದ ಗಾರುಡಿಗ, ಸ್ವಾತಂತ್ರ್ಯ ಯೋಧ, ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಎಸ್.ಕೆ. ಕರೀಂಖಾನ್ ಅವರು ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು. (ಇನ್ನೊಂದು ಮೂಲದ ಪ್ರಕಾರ 98 ವರ್ಷ ವಯಸ್ಸು). ಮೂರು ತಿಂಗಳುಗಳಿಂದ ಅಸ್ವಸ್ಥರಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
2006: ಶ್ರೀಲಂಕಾ ನಾಯಕ ಜಯವರ್ಧನೆ (374) ಮತ್ತು ಸಂಗಕ್ಕಾರ (287) ಅವರು ದಕ್ಷಿಣ ಆಫ್ರಿಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಮೊದಲ ಟೆಸ್ಟಿನಲ್ಲಿ ಜೊತೆಯಾಟ `ವಿಶ್ವದಾಖಲೆ' (ಒಟ್ಟು 624 ರನ್) ಸ್ಥಾಪಿಸಿದರು. 1997ರಲ್ಲಿ ಭಾರತದ ವಿರುದ್ಧ ಕೊಲಂಬೋದಲ್ಲೇ ನಡೆದ ಪಂದ್ಯದಲ್ಲಿ ಮಹಾನಾಮಾ ಮತ್ತು ಜಯಸೂರ್ಯ 2ನೇ ವಿಕೆಟ್ ಜೊತೆಯಾಟಕ್ಕೆ 576 ರನ್ ಗಳಿಸ್ದಿದೇ ಜೊತೆಯಾಟದ ವಿಶ್ವದಾಖಲೆಯಾಗಿತ್ತು.
2006: ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಪ್ರಸಾಧನ ಕಲೆಯ ಹಿರಿಯ ಕಲಾವಿದ ಸದಾನಂದ ಶಾನಭಾಗ (65) ನಿಧನರಾದರು. `ಪುತ್ರಣ್ಣ' ಎಂದೇ ಖ್ಯಾತರಾಗಿದ್ದ ಅವರು ಚಿತ್ರ ಕಲಾವಿದರಾಗಿ, ಮುಖವಾಡ ತಯಾರಿಕೆಗಳಲ್ಲಿ ಮತ್ತು ತೆರೆಯ ಹಿಂದಿನಪ್ರಸಾಧನ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು.
2004: ಮಾಜಿ ಮಿಸ್ ಇಂಡಿಯಾ ಖ್ಯಾತಿಯ ರೂಪದರ್ಶಿ ಬೆಂಗಳೂರು ಮೂಲದ ನಫೀಸಾ ಜೋಸೆಫ್ ಮುಂಬೈಯ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.
2003: ಎಬಿಪಿಜೆಡಿ ನಾಯಕ ಸಿ. ಭೈರೇಗೌಡ ನಿಧನ.
1963: ಸಾಹಿತಿ ವಿಜಯಾ ಜಿ.ಎಸ್. ಜನನ.
1958: ಸಾಹಿತಿ ಪಿ. ಬಸವಲಿಂಗಯ್ಯ ಜನನ.
1957: ವಿಶ್ವ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಅಸ್ತಿತ್ವಕ್ಕೆ.
1925: ಸಾಹಿತಿ ಗೋವಿಂದ ರಾಜುಲು ಜನನ.
1904: ಸಾಹಿತಿ ಜಿ.ಬಿ. ಜೋಶಿ ಜನನ.
1904: ಭಾರತೀಯ ಕೈಗಾರಿಕೋದ್ಯಮದ ಜನಕ ಜೆಹಾಂಗೀರ್ ರತನ್ ಜಿ ದಾದಾಭಾಯಿ ಟಾಟಾ (29-7-1904ರಿಂದ 29-11-1993) ಅವರು ಈದಿನ ಪ್ಯಾರಿಸ್ಸಿನಲ್ಲಿ ಜನಿಸಿದರು. ಜೆ. ಆರ್. ಡಿ. ಟಾಟಾ ಎಂದೇ ಖ್ಯಾತರಾದ ಅವರು ನಾಲ್ಕು ಮಕ್ಕಳ ಪೈಕಿ ಎರಡನೆಯವರು. ಫ್ರಾನ್ಸ್, ಜಪಾನ್ ಮತ್ತು ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆದ ಅವರು 1938ರಲ್ಲಿ 34ನೇ ವಯಸ್ಸಿನವರಾಗಿದ್ದಾಗ ಸಹೋದರರ ಜೊತೆ ಸೇರಿ ಭಾರತದಲ್ಲಿ ಅತಿದೊಡ್ಡ ಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿದರು. ಮಾನವೀಯ ವ್ಯಕ್ತಿತ್ವಕ್ಕಾಗಿ 1992ರಲ್ಲಿ ಟಾಟಾ ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತದಲ್ಲಿ ಕುಟುಂಬಯೋಜನೆ ಯಶಸ್ವಿಯಾಗುವಂತೆ ಮಾಡಿದ್ದಕ್ಕಾಗಿ ಅವರಿಗೆ ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಪ್ರಶಸ್ತಿ ಲಭಿಸಿತ್ತು. 1993ರ ನವೆಂಬರ್ 29ರಂದು ತವರು ರಾಜ್ಯವಾದ ಮಹಾರಾಷ್ಟ್ರದಲ್ಲಿ ಅವರು ನಿಧನರಾದರು.
1891: ಖ್ಯಾತ ಶಿಕ್ಷಣ ತಜ್ಞ, ಸಮಾಜ ಸುಧಾರಕ, ಸಾಹಿತಿ ಈಶ್ವರ ಚಂದ್ರ ವಿದ್ಯಾಸಾಗರ ನಿಧನ.
1884: ನಾಟಕದ ಮೂಲಕ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿದ ಖ್ಯಾತ ನಾಟಕಕಾರ ತಂಜಾವೂರು ಪರಮಶಿವ ಕೈಲಾಸಂ (ಟಿ.ಪಿ. ಕೈಲಾಸಂ) (29-7-1884ರಿಂದ 23-11-1946) ನ್ಯಾಯಾಧೀಶ ಪರಮಶಿವ ಅಯ್ಯರ್- ಕಮಲಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿ ಈದಿನ ಜನಿಸಿದರು.
1835: ಹವಾಯಿಯಲ್ಲಿ ಮೊದಲ ಬಾರಿಗೆ ಕಬ್ಬು ಕೃಷಿ ಆರಂಭ.
No comments:
Post a Comment