Monday, July 7, 2008

ಇಂದಿನ ಇತಿಹಾಸ History Today ಜುಲೈ 7

ಇಂದಿನ ಇತಿಹಾಸ

ಜುಲೈ 7

ದಕ್ಷಿಣ ಕನ್ನಡದ ಯುವ ನಿರ್ದೇಶಕ ರಾಮಚಂದ್ರ ಪಿ.ಎನ್. ಅವರ ಚೊಚ್ಚಲ ತುಳು ಚಿತ್ರ `ಸುದ್ದ' (ತಿಥಿ) ಓಷಿಯಾನ್ ಸಿನೆಫ್ಯಾನ್ ಆಯೋಜಿಸಿದ ಎಂಟನೇ ಏಷ್ಯಾ ಚಲನಚಿತ್ರೋತ್ಸವದಲ್ಲಿ ಜಾಗತಿಕ ಪ್ರೀಮಿಯರಿನ ಗೌರವ ಪಡೆಯಿತು.

2007: ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಶೃಂಗಾರ್ ವಾಣಿಜ್ಯ ಮಳಿಗೆ ಸಂಕೀರ್ಣದಲ್ಲಿ ಈದಿನ ರಾತ್ರಿ ದಿಢೀರನೆ ಬೆಂಕಿ ಅನಾಹುತ ಸಂಭವಿಸಿತು. ಸಂಕೀರ್ಣದ ಜಂಗಲ್ ಲಾಜಸ್ ಅಂಡ್ ರೆಸಾರ್ಟ್ಸ್ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹತ್ತಿಕೊಂಡಿತು.

2007: ಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ರಾವಲ್ಪಿಂಡಿಯ್ಲಲಿ ಪ್ರಯಾಣಿಸುತ್ತಿದ್ದ ವಿಮಾನದತ್ತ ಉಗ್ರಗಾಮಿಗಳು ರಾಕೆಟ್ ಮತ್ತು ಗುಂಡಿನ ದಾಳಿ ನಡೆಸಿದರು. ಆದರೆ ಮುಷರಫ್ ಪ್ರಾಣಾಪಾಯದಿಂದ ಪಾರಾದರು. ರನ್ ವೇಗೆ ಹತ್ತಿರದಲ್ಲೇ ಇರುವ ಮನೆಯೊಂದರಿಂದ ಈ ದಾಳಿ ನಡೆಸಲಾಯಿತು.

2007: ಪೊಲೀಸರು ದೂರು ದಾಖಲಿಸಿಕೊಳ್ಳದೇ ಇರುವುದರಿಂದ ರೋಸಿದ ಪೂಜಾ ಚೌಹಾಣ್ ಎಂಬ ಮಹಿಳೆಯೊಬ್ಬರು ಗುಜರಾತಿನ ರಾಜಕೋಟದಲ್ಲಿ ಅರೆ ನಗ್ನಾವಸ್ಥೆ ನಡಿಗೆ ನಡೆಸಿ ಪ್ರತಿಭಟಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಸೂಚಿಸಿತು. ವರದಕ್ಷಿಣೆ ಹಿಂಸೆ ಪ್ರಕರಣವನ್ನು ದಾಖಲಿಸಲು ಪೊಲೀಸರು ನಿರಾಕರಿಸಿದ್ದನ್ನು ವಿರೋಧಿಸಿ ಪೂಜಾ ಚೌಹಾಣ್ ಅರೆನಗ್ನರಾಗಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು.

2007: ತುಮಕೂರಿನ `ಅನನ್ಯ ಪ್ರಕಾಶನ' ಸಂಸ್ಥೆಯು ಪ್ರಸಕ್ತ ಸಾಲಿನ `ಕೆ.ಸಾಂಬಶಿವಪ್ಪ' ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಗೆ ಪತ್ರಕರ್ತ ರಘುನಾಥ ಚ.ಹ ಅವರ `ಹೊರಗೂ ಮಳೆ, ಒಳಗೂ ಮಳೆ' ಕಥಾ ಸಂಕಲವನ್ನು ಆಯ್ಕೆ ಮಾಡಿತು.

2007: ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ಸ್ಥಾಪಿಸಿದ್ದ ಪ್ರತಿಭಾ ಮಹಿಳಾ ಬ್ಯಾಂಕ್ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕ್ ಒಕ್ಕೂಟದ ನಿರ್ದೇಶಕ ಕೆ.ಡಿ.ವೋರಾ ಸ್ಪಷ್ಟಪಡಿಸಿದರು. 2001- 2004ರ ಅವಧಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟಿನಿಂದಾಗಿ ಸುಮಾರು 150 ಸಹಕಾರ ಬ್ಯಾಂಕುಗಳು ದಿವಾಳಿ ಎದ್ದವು. ಇವುಗಳಲ್ಲಿ ಪ್ರತಿಭಾ ಮಹಿಳಾ ಬ್ಯಾಂಕ್ ಕೂಡ ಒಂದು ಎಂದು ಅವರು ಹೇಳಿದರು.

2007: ಪ್ರತಿ ಚುನಾವಣೆಯ ನಂತರ ಮೀಸಲು ಕ್ಷೇತ್ರಗಳನ್ನು ಬದಲಾವಣೆ ಮಾಡಲು ಕ್ಷೇತ್ರ ಮರುವಿಂಗಡಣೆ ಆಯೋಗಕ್ಕೆ ಆದೇಶ ನೀಡಬೇಕೆಂದು ಪರಿಶಿಷ್ಟ ಪಂಗಡಕ್ಕೆ ಸೇರಿದ ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶಾಂತವ್ವ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದರು. ಸ್ವಾತಂತ್ರ್ಯ ಸಿಕ್ಕಿದ ನಂತರ ಕೇವಲ ಎರಡು ಬಾರಿ ಮೊದಲು 1952ರಲ್ಲಿ ನಂತರ 1972ರಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದಿದೆ. ಮೂರನೆಯ ಆಯೋಗ 30 ವರ್ಷಗಳ ನಂತರ ರಚನೆಯಾಗಿದೆ. ಮೀಸಲು ಕ್ಷೇತ್ರಗಳನ್ನು ಚುನಾವಣೆಯ ನಂತರ ಬದಲಾಯಿಸದೆ ಹೋದರೆ ಈಗಿನ ಮೀಸಲು ಕ್ಷೇತ್ರಗಳು ಮುಂದಿನ 25-30 ವರ್ಷಗಳ ಕಾಲ ಮುಂದುವರಿಯಲಿವೆ. ಇದರಿಂದ ಬೇರೆ ಕ್ಷೇತ್ರಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ರಾಜಕೀಯ ಮೀಸಲು ಸೌಲಭ್ಯದಿಂದ ವಂಚಿತವಾಗಲಿವೆ ಎಂದು ಶಾಂತವ್ವ ಪ್ರತಿಪಾದಿಸಿದರು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಳಸಲು ರಷ್ಯಾ ನಿರ್ಮಿತ ಶೌಚಗೃಹವೊಂದನ್ನು ನಾಸಾ ಖರೀದಿಸಿತು. ಅದಕ್ಕಾಗಿ 19 ಮಿಲಿಯನ್ ಯುರೋ ನೀಡಲು ಅದು ಒಪ್ಪಿಕೊಂಡಿತು. ಇದು ಭೂಮಿಯ ಮೇಲಿನ ಪಾಯಿಖಾನೆಗಿಂತ ಅತ್ಯಂತ ದುಬಾರಿ. ಆದರೆ, ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮದೇ ಸ್ವಂತ ಶೌಚಗೃಹ ನಿರ್ಮಿಸಲು ತಗಲುವ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಇದು ಲಭಿಸಿತು ಎಂದು ನಾಸಾ ಹೇಳಿತು. ಅಮೆರಿಕ ಸ್ವಾಮ್ಯದ ಬಾಹ್ಯಾಕಾಶ ನಿಲ್ದಾಣಕ್ಕಾಗಿ 2008ರ ವೇಳೆಗೆ ರಷ್ಯಾವು ಈ ಶೌಚಗೃಹವನ್ನು ನಿರ್ಮಿಸಿ ಕೊಡುವುದು.

2007: ಕಳೆದ ಫೆಬ್ರುವರಿಯಲ್ಲಿ ಸಂಭವಿಸಿದ ಸಮ್ ಜೌತ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ ಸಾವನ್ನಪ್ಪಿದ 34 ಮಂದಿ ಪಾಕಿಸ್ಥಾನಿ ನಾಗರಿಕರ ಸಂಬಂಧಿಕರಿಗೆ ಹತ್ತು ಲಕ್ಷ ಪಾಕಿಸ್ಥಾನಿ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ಭಾರತವು ಇಸ್ಲಾಮಾಬಾದಿನಲ್ಲಿ ನಡೆದ ಸಮಾರಂಭದಲ್ಲಿ ಈದಿನ ನೀಡಿತು. ಸಮ್ ಜೌತ ಎಕ್ಸ್ಪ್ರೆಸ್ ಬಾಂಬ್ ಸ್ಫೋಟದಲ್ಲಿ ಭಾರತ ಮತ್ತು ಪಾಕಿಸ್ಥಾನ ಸೇರಿದಂತೆ ಒಟ್ಟು 69 ಮಂದಿ ಮೃತರಾಗಿದ್ದರು.

2007: ಹರಿಹರ ತಾಲ್ಲೂಕಿನ ರೈತ ಸಂಘದ ಮುಖಂಡ ಗೋಪಾಲರಾವ್ ಅವರ ತೆಂಗಿನ ತೋಟದಲ್ಲಿ ಈದಿನ ಸಾರ್ವಜನಿಕರಿಗೆ ನೀರಾ ನೀಡಿ 'ಸಾರಾಯಿ ಬದಲು ನೀರಾ ಕುಡಿಯಿರಿ, ಆರೋಗ್ಯ ರಕ್ಷಿಸಿಕೊಳ್ಳಿ' ಪ್ರಚಾರ ಆಂದೋಲನವನ್ನು ಹರಿಹರ ತಾಲ್ಲೂಕು ರೈತಸಂಘ ಆರಂಭಿಸಿತು. ನೀರಾ ರಾಸಾಯನಿಕ ಮುಕ್ತ, ನಿರಪಾಯಕಾರಿ, ಜೊತೆಗೆ ನುಸಿ ರೋಗದಿಂದ ತೆಂಗಿನ ಮರಗಳನ್ನೂ ಪಾರುಮಾಡುತ್ತದೆ ಎಂಬುದು ಅವರ ವಿವರಣೆ.

2007: ಮುಂಬೈ ಷೇರು ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಷೇರು ಪೇಟೆ ಸಂವೇದಿ ಸೂಚ್ಯಂಕ 15,000ರ ಗಡಿ ಸ್ಪರ್ಶಿಸಿತು.

2006: ದಕ್ಷಿಣ ಕನ್ನಡದ ಯುವ ನಿರ್ದೇಶಕ ರಾಮಚಂದ್ರ ಪಿ.ಎನ್. ಅವರ ಚೊಚ್ಚಲ ತುಳು ಚಿತ್ರ `ಸುದ್ದ' (ತಿಥಿ) ಓಷಿಯಾನ್ ಸಿನೆಫ್ಯಾನ್ ಆಯೋಜಿಸಿದ ಎಂಟನೇ ಏಷ್ಯಾ ಚಲನಚಿತ್ರೋತ್ಸವದಲ್ಲಿ ಜಾಗತಿಕ ಪ್ರೀಮಿಯರಿನ ಗೌರವ ಪಡೆಯಿತು. ಇದೇ ವಿಭಾಗದಲ್ಲಿ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಸಂತೋಷ ಶಿವನ್ ಅವರ ಮಲಯಾಳಿ ಚಿತ್ರ `ಆನಂದಭದ್ರಂ', ಸುಮಿತ್ರಾ ಭಾವೆ ಮತ್ತು ಆನಂದ ಸುಕತಂಕರ್ ಅವರ ಮರಾಠಿ ಚಿತ್ರ `ನಿಶಾಲ್' ಕೂಡಾ ಸ್ಪರ್ಧೆಗೆ ಆಯ್ಕೆಯಾದವು.

2006: ಬೆಂಗಳೂರು - ಮೈಸೂರು ಕಾರಿಡಾರ್ ರಸ್ತೆಗೆ ಮೈಸೂರು ಕಡೆಯಿಂದ ಕಾಮಗಾರಿ ಆರಂಭಿಸಲು ನಂದಿ ಇನ್ ಫ್ರಾಸ್ಟ್ರಕ್ಚರ್ ಎಂಟರ್ ಪ್ರೈಸಸ್ (ನೈಸ್) ನಿರ್ದೇಶಕ ಅಶೋಕ ಖೇಣಿ ಅವರು ನಡೆಸಿದ ಭಗೀರಥ ಯತ್ನ ಕೈಗೂಡಲಿಲ್ಲ. ಮುಡಾ ಅಧಿಕಾರಿಗಳು ಪೊಲೀಸ್ ಸರ್ಪಗಾವಲು ಹಾಕಿ ಖೇಣಿ ಅವರ ಎಲ್ಲ ಯತ್ನಗಳನ್ನು ವಿಫಲಗೊಳಿಸಿದರು.

2006: ಮಾಜಿ ಸಚಿವ, ಚಿತ್ರ ನಿರ್ಮಾಪಕ ಎಸ್. ರಮೇಶ್ (53) ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

1981: `ಮೃತ್ಯುಪಾನೀಯ' ಕಳ್ಳಬಟ್ಟಿ ಸಾರಾಯಿಗೆ ಬೆಂಗಳೂರು ನಗರದಲ್ಲಿ 132 ಮಂದಿ ಆಹುತಿ. ವಿವಿಧ ಆಸ್ಪತ್ರೆಗಳ್ಲಲಿ ಇತರ 200 ಮಂದಿಯ ಜೀವನ್ಮರಣ ಹೋರಾಟ. ರಾಜ್ಯದ ಇತಿಹಾಸದಲ್ಲೇ ಭೀಕರ ಎನಿಸಿದ ದುರಂತದಲ್ಲಿ ಸತ್ತವರಲ್ಲಿ 40 ಮಂದಿ ಮಹಿಳೆಯರು.

1970: ಪೆಂಗ್ವಿನ್ ಬುಕ್ ಸ್ಥಾಪಕ ಸರ್. ಅಲನ್ ಲೇನ್ ನಿಧನರಾದರು. 1902ರ ಸೆಪ್ಟೆಂಬರ್ 21ರಂದು ಬ್ರಿಸ್ಟಲ್ ನಲ್ಲಿ ಜನಿಸಿದ ಇವರು ಪುಸ್ತಕ ಪ್ರಕಾಶನದಲ್ಲಿ ಹಿರಿಮೆ ಸಾಧಿಸಿದವರು.

1928: ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ವೈದ್ಯ ಸಾಹಿತಿ ಅನ್ನಪೂರ್ಣಮ್ಮ ಅವರು ವೇದ ಪಾರಂಗತ ಚನ್ನಕೇಶವ ಶಾಸ್ತ್ರಿಗಳು-ಮೀನಾಕ್ಷಮ್ಮ ದಂಪತಿಯ ಪುತ್ರಿಯಾಗಿ ಸಂಸ್ಕೃತ ಗ್ರಾಮ ಮತ್ತೂರಿನಲ್ಲಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement