Sunday, August 17, 2008

ಇಂದಿನ ಇತಿಹಾಸ History Today ಆಗಸ್ಟ್ 17

ಇಂದಿನ ಇತಿಹಾಸ

ಆಗಸ್ಟ್ 17

ಭಾರತೀಯ ಈಜುಗಾರ್ತಿ ಅನಿತಾ ಸೂದ್ ಇಂಗ್ಲಿಷ್ ಕಡಲ್ಗಾಲುವೆಯನ್ನು ಅತಿವೇಗವಾಗಿ ಈಜಿ ದಾಟಿದ ಮೊತ್ತ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ಪೆಪ್ಸಿ ಹಾಗೂ ಕೋಕಾ ಕೋಲಾ ಕಂಪೆನಿಗಳು ತಮ್ಮ ತಂಪು ಪಾನೀಯಗಳಲ್ಲಿ ಬಳಸಿದ ಸಾಮಗ್ರಿಗಳ ವಿವರವನ್ನು ಬಾಟಲಿಗಳ ಮೇಲೆ ನಮೂದಿಸುವಂತೆ ಕಡ್ಡಾಯ ಮಾಡದೇ ಇದ್ದುದಕ್ಕಾಗಿ ಮತ್ತು ದಾರಿತಪ್ಪಿಸುವ ಜಾಹೀರಾತುಗಳ ನಿಯಂತ್ರಣಕ್ಕೆ ಕಾನೂನು ಅನುಷ್ಠಾನ ವೈಫಲ್ಯಕ್ಕಾಗಿಯೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಲೋಕಸಭೆಯ ಉಭಯ ಸದನಗಳಲ್ಲಿ ಅಂಗೀಕಾರ ದೊರೆತ ಆಹಾರ ಭದ್ರತೆ ಮತ್ತು ಗುಣಮಟ್ಟ ಮಸೂದೆಗೆ ರಾಷ್ಟ್ರಪತಿಗಳ ಅನುಮೋದನೆ ಕೂಡಾ ದೊರೆತಿದ್ದರೂ, ಈ ಮಸೂದೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸದಿರಲು ಕಾರಣಗಳನ್ನು ನೀಡಿ ವಿವರವಾದ ಪ್ರಮಾಣ ಪತ್ರ ಸಲ್ಲಿಸುವಂತೆ ನ್ಯಾಯಮೂರ್ತಿ ಎ.ಕೆ. ಮಾಥೂರ್ ಹಾಗೂ ದಳವೀರ್ ಭಂಡಾರಿ ಅವರನ್ನೊಳಗೊಂಡ ಪೀಠವು ಕೇಂದ್ರಕ್ಕೆ ನಿರ್ದೇಶನ ನೀಡಿತು.

2007: ಪೂರ್ವ ಇಂಡೋನೇಷ್ಯಾದ ಸಮುದ್ರ ತಳದಲ್ಲಿ ಭಾರಿ ಭೂಕಂಪ ಸಂಭವಿಸಿತು. ಪ್ರಾಣ ಹಾನಿ ಬಗ್ಗೆ ವರದಿ ಬಂದಿಲ್ಲ ಎಂದು ಅಮೆರಿಕದ ಭೂಗರ್ಭ ಇಲಾಖೆ ತಿಳಿಸಿತು. ಮಲುಕು ಪ್ರಾಂತ್ಯದ ರಾಜಧಾನಿ ಅಂಬೊನ್ ನ ಆಗ್ನೇಯ ಭಾಗದ ಸಮುದ್ರದಡಿ ರಿಕ್ಟರ್ ಮಾಪಕದಲ್ಲಿ 6.2 ಪ್ರಮಾಣದ ಭೂಕಂಪ ಸಂಭವಿಸಿ, ಸಮುದ್ರದಡಿಯ 230 ಕಿ.ಲೋ. ಮೀಟರಿನಷ್ಟು ಪ್ರದೇಶ ನಡುಗಿತು.

2007: ದಕ್ಷಿಣ ಪೆರುವಿನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 500ರಿಂದ 510ಕ್ಕೆ ಏರಿದ್ದು ಗಾಯಗೊಂಡವರ ಸಂಖ್ಯೆ 1600 ಮೀರಿತು.

2007: ಬೆಂಗಳೂರು ನಗರದಲ್ಲಿ ಬಾಂಬ್ ಸ್ಫೋಟಿಸಿ ಭಾರಿ ಅನಾಹುತ ಎಸಗಲು ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಮೇಲೆ ಕುಖ್ಯಾತ ರೌಡಿ ಅಸ್ಗರ್ ಪಾಷಾ ಮತ್ತು ಆತನ ನಾಲ್ವರು ಸಹಚರರನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದರು.

2007: ಡಾ. ಶ್ರೀನಿವಾಸ ವರಖೇಡಿ ಅವರಿಗೆ ಈ ಸಲ ರಾಷ್ಟ್ರಪತಿಗಳ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ ನೀಡಲಾಯಿತು. ಸಂಸ್ಕೃತ, ಪಾಲಿ, ಪ್ರಾಕೃತ, ಅರೇಬಿಕ್ ಹಾಗೂ ಪರ್ಶಿಯನ್ ಭಾಷೆಗಳಲ್ಲಿ ಸಾಧನೆ ಮಾಡಿದ 22 ವಿದ್ವಾಂಸರಿಗೆ ಗೌರವ ಪತ್ರ ನೀಡಲು ನಿರ್ಧರಿಸಲಾಯಿತು. ಇವರಲ್ಲಿ ಪಂಡಿತ್ ಬಾಲಚಂದ್ರ ಜೋಶಿ, ಡಾ. ಪಿ.ಎಸ್. ಅನಂತನಾರಾಯಣ ಸೋಮಯಾಜಿ ಸೇರಿದ್ದರು.

2007: ಬದನೆಕಾಯಿ, ಹತ್ತಿ ಸೇರಿದಂತೆ ಹತ್ತು ವಿವಿಧ ಕುಲಾಂತರಿ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಯಲು ಅನುಮತಿ ನೀಡಲಾಗಿದೆ ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ಪ್ರಕಟಿಸಿತು.

2007: ಆಫ್ಘಾನಿಸ್ಥಾನದ ಜಹ್ರಿ ಜಿಲ್ಲಾ ಗವರ್ನರ್ ಖೈರುದ್ದೀನ್ ಹಾಗೂ ಅವರ ಮೂವರು ಮಕ್ಕಳು ಕಂದಹಾರದಲ್ಲಿ ಆತ್ಮಾಹುತಿ ದಾಳಿಗೆ ಬಲಿಯಾದರು. ಬಡಜನರಿಗೆ ಆಹಾರ ಹಂಚಲು ಗವರ್ಮರ್ ಖೈರುದ್ದೀನ್ ತಮ್ಮ ಇಬ್ಬರು ಪುತ್ರರು ಹಾಗೂ ಒಬ್ಬಳು ಪುತ್ರಿಯೊಂದಿಗೆ ನಿವಾಸದಿಂದ ಹೊರಬರುತ್ತಿದ್ದಂತೆಯೇ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ಗವರ್ನರ್ ಸಹಿತ ಅವರ ಕುಟುಂಬವನ್ನು ಹತ್ಯೆಗೈದ.

2007: ಇಂಡೊನೇಷ್ಯಾ ಮೂಲದ ಹಾಂಕಾಂಗಿನ 9 ವರ್ಷ 3ತಿಂಗಳು ವಯಸ್ಸಿನ ಪೋರ ಮಾರ್ಚ್ ಬೋಡಿಹರ್ಜೊ ಸಾಮಾನ್ಯವಾಗಿ 17 ಅಥವಾ 18 ವಯಸ್ಸಿನ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ತೆಗೆದುಕೊಳ್ಳುವ ಬ್ರಿಟಿಷ್ `ಎ' ಮಟ್ಟದ ಪರೀಕ್ಷೆಯಲ್ಲಿ ಎರಡು `ಎ' ಶ್ರೇಣಿ ಪಡೆದು ದಾಖಲೆ ನಿರ್ಮಿಸಿದ.

2006: `ಲಾಭದಾಯಕ ಹುದ್ದೆಯ'ಯ ಅರ್ಥ ವಿವರಣೆ ರೂಪಿಸಲು 15 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು ರಚಿಸುವ ನಿರ್ಣಯಕ್ಕೆ ಲೋಕಸಭೆ ಅಂಗೀಕಾರ ನೀಡಿತು.

2006: ನೈಋತ್ಯ ಇಂಗ್ಲೆಂಡಿನಲ್ಲಿ ಏಕಕಾಲಕ್ಕೆ 56,645 ರಾಕೆಟ್ಟುಗಳನ್ನು ಐದು ಸೆಕೆಂಡುಗಳಲ್ಲಿ ಹಾರಿಸುವುದರ ಮೂಲಕ ವಿಶ್ವ ದಾಖಲೆ ಸ್ಥಾಪಿಸಲಾಯಿತು.

2006: ಬೇರೆ ಬೇರೆ ದೇಶಗಳ ಸಂಸ್ಕೃತಿ ಹೊಂದಿದ ಉದ್ಯೋಗಸ್ಥರು ಪರಸ್ಪರ ಗೌರವದಿಂದ ಕಾಣುವಂತೆ ಪ್ರೇರೇಪಿಸುವ ದೇಶದಲ್ಲೇ ಪ್ರಥಮ ಎನ್ನಲಾದ ಸೊಸೈಟಿ ಫಾರ್ ಇಂಟರ್ ಕಲ್ಚರಲ್ ಎಜುಕೇಷನ್, ಟ್ರೈನಿಂಗ್ ಅಂಡ್ ರೀಸರ್ಚ್(ಸೀತಾರ್) ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂತು.

1988: ಪಾಕಿಸ್ತಾನದ ಅಧ್ಯಕ್ಷ ಮಹಮ್ಮದ್ ಜಿಯಾ ಉಲ್ ಹಕ್ ಮತ್ತು ಅಮೆರಿಕದ ರಾಯಭಾರಿ ಅರ್ನಾಲ್ಡ್ ರಾಫೆಲ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು.

1987: ಭಾರತೀಯ ಈಜುಗಾರ್ತಿ ಅನಿತಾ ಸೂದ್ ಇಂಗ್ಲಿಷ್ ಕಡಲ್ಗಾಲುವೆಯನ್ನು ಅತಿವೇಗವಾಗಿ ಈಜಿ ದಾಟಿದ ಮೊತ್ತ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1987: ಅಡಾಲ್ಫ್ ಹಿಟ್ಲರನ ಆತ್ಮೀಯ ವಲಯದ ಕೊನೆಯ ವ್ಯಕ್ತಿ ರುಡಾಲ್ಫ್ ಹೆಸ್ 93ನೇ ವಯಸ್ಸಿನಲ್ಲಿ ಬರ್ಲಿನ್ ಆಸ್ಪತ್ರೆ ಸಮೀಪದ ಸ್ಪಂಡಾವು ಜೈಲಿನಲ್ಲಿ ಎಲೆಕ್ಟ್ರಿಕ್ ವಯರಿನಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ.

1978: ಅಮೆರಿಕದ ಮ್ಯಾಕ್ಸೀ ಆಂಡರ್ಸನ್, ಬೆನ್ ಅಬ್ರುಜ್ಜೊ ಮತ್ತು ಲಾರಿ ನ್ಯೂಮನ್ ಅವರು `ಡಬಲ್ ಈಗಲ್ 2' ಹೆಸರಿನ ತಮ್ಮ ಬಲೂನಿನಲ್ಲಿ 3,200 ಮೈಲು ದೂರದ ಐದು ದಿನಗಳ ಹಾರಾಟವನ್ನು ಮುಕ್ತಾಯಗೊಳಿಸಿ ಪ್ಯಾರಿಸ್ಸಿನ ಹೊರಭಾಗದಲ್ಲಿ ಇಳಿದರು. ಇದರೊಂದಿಗೆ ಮೊತ್ತ ಮೊದಲ ಯಶಸ್ವಿ ಟ್ರಾನ್ಸ್ - ಅಟ್ಲಾಂಟಿಕ್ ಬಲೂನ್ ಹಾರಾಟ ಮುಕ್ತಾಯಗೊಂಡಿತು.

1970: ಸಾಹಿತಿ ವಿರೂಪಾಕ್ಷ ಪೂಜಾರಯ್ಯ ಜನನ.

1948: ಸಾಹಿತಿ ಜೆ.ಕೆ. ಜಯಮ್ಮ ಜನನ.

1932: ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್. ನೈಪಾಲ್ ಜನ್ಮದಿನ.

1925: ಸಾಹಿತಿ, ಪತ್ರಕರ್ತ ಸುರೇಂದ್ರ ದಾನಿ ಅವರು ಭೀಮರಾವ್- ಗಂಗೂ ಬಾಯಿ ದಂಪತಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಹಲವು ಪತ್ರಿಕೆಗಳ ಸಂಪಾದಕರಾಗಿ ದುಡಿದ ಅವರು ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕತ್ವ ವಹಿಸಿದ್ದಲ್ಲದೆ ಜೀವನ ಚರಿತ್ರೆ, ಅನುವಾದ ಕೃತಿಗಳು ಪ್ರಬಂಧಗಳು ಸೇರಿ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಟಿಯೆಸ್ಸಾರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1909: ಭಾರತದ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಮದನ್ ಲಾಲ್ ಧಿಂಗ್ರಾ ಅವರನ್ನು ಬ್ರಿಟಿಷ್ ಸರ್ಕಾರವು ಈದಿನ ಗಲ್ಲಿಗೇರಿಸಿತು. 1887ರಲ್ಲಿ ಪಂಜಾಬ್ ಪ್ರಾಂತ್ಯದ ಶ್ರೀಮಂತ ಕುಟುಂಬ ಒಂದರಲ್ಲಿ ಜನಿಸಿದ ಧಿಂಗ್ರಾ 1906ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಸೇರಿದರು. ವಿನಾಯಕ ದಾಮೋದರ ಸಾವರ್ಕರ್ ಮತ್ತು ಶ್ಯಾಮಜಿ ಕೃಷ್ಣ ವರ್ಮ ಅವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ಜುಲೈ 23ರಂದು ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ವಿವಿಧ ಪತ್ರಿಕಾ ದಾಖಲೆಗಳ ಪ್ರಕಾರ ಧಿಂಗ್ರಾ ಅವರನ್ನು ಆಗಸ್ಟ್ 17ರಂದು ಗಲ್ಲಿಗೇರಿಸಲಾಯಿತು.

1906: ಇದು ಚುಂಬಿಸಿದರೂ ತುಟಿಯ ಬಣ್ಣ ಕುಂದದಂತಹ `ಕಿಸ್ಪ್ರೂಫ್ ಲಿಪ್ ಸ್ಟಿಕ್' ಸಂಶೋಧಕನ ಜನ್ಮದಿನ. ಈದಿನ ಹುಟ್ಟಿದ ಅಮೆರಿಕದ ರಾಸಾಯನಿಕ ತಜ್ಞ, ಸೌಂದರ್ಯ ಸಾಧನಗಳ ಎಕ್ಸಿಕ್ಯೂಟಿವ್ ಹಝೆಲ್ ಗ್ಲೇಡಿಸ್ ಬಿಷಪ್ (1906-98) `ಕಿಸ್ ಪ್ರೂಫ್ ಲಿಪ್ ಸ್ಟಿಕ್' ಸಂಶೋಧಿಸುವ ಮೂಲಕ `ಪ್ರಸಾಧನಗಳ' ಉದ್ಯಮಕ್ಕೆ ಮಹತ್ವದ ಕೊಡುಗೆ ನೀಡಿದರು.

1761: ವಿಲಿಯಂ ಕ್ಯಾರೀ (1761-1834) ಜನ್ಮದಿನ. ತಮ್ಮ ಜೀವಮಾನದ್ದುದಕ್ಕೂ ಭಾರತದಲ್ಲಿ ಮಿಷನರಿಯಾಗಿ ಕೆಲಸ ಮಾಡ್ದಿದ ಈ ಶಿಕ್ಷಣ ತಜ್ಞ `ಬಂಗಾಳಿ ಗದ್ಯ ಸಾಹಿತ್ಯದ ಜನಕ' ಎಂಬ ಹೆಸರು ಪಡೆದಿದ್ದಾರೆ. ಅವರು ರಚಿಸಿದ ವ್ಯಾಕರಣ, ಅರ್ಥಕೋಶ, ಮತ್ತು ಭಾಷಾಂತರ ಗ್ರಂಥಗಳು ಅವರಿಗೆ ಈ ಕೀರ್ತಿ ತಂದುಕೊಟ್ಟವು.

No comments:

Advertisement