ಇಂದಿನ ಇತಿಹಾಸ
ಆಗಸ್ಟ್ 7
ಎಂ.ಎಸ್. ಸ್ವಾಮಿನಾಥನ್ ಜನ್ಮದಿನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕೃಷಿ ತಜ್ಞ ಹಾಗೂ ಆಡಳಿತಗಾರರಾದ ಇವರು ಭಾರತದ `ಹಸಿರು ಕ್ರಾಂತಿ'ಯಲ್ಲಿ ಮಹತ್ವದ ಪಾತ್ರ ವಹಿಸಿದವರು.
2007: ವಿವಾದದ ಸುಳಿಗೆ ಸಿಕ್ಕಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ 2005ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೊನೆಗೂ ಪ್ರಕಟಿಸಲಾಯಿತು. ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ `ತಾಯಿ' ಕನ್ನಡದ ಅತ್ಯುತ್ತಮ ಚಿತ್ರ, ಪಿ.ಶೇಷಾದ್ರಿ ನಿರ್ದೇಶನದ `ತುತ್ತೂರಿ' ಪರಿಸರ ಸಂರಕ್ಷಣೆಯ ವಿಭಾಗದಲ್ಲಿ ಅತ್ಯುತ್ತಮ ರಾಷ್ಟ್ರೀಯ ಚಿತ್ರ ಪ್ರಶಸ್ತಿಗೆ ಪಾತ್ರವಾದವು. `ತಾಯಿ' ಚಿತ್ರದ ಗೀತೆ ರಚನೆಗಾಗಿ ಬರಗೂರು ರಾಮಚಂದ್ರಪ್ಪ ಅವರಿಗೆ ಅತ್ಯುತ್ತಮ ಗೀತರಚನೆಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಬುದ್ದದೇವ ದಾಸಗುಪ್ತಾ ನಿರ್ದೇಶನದ ಬಂಗಾಳಿ ಚಿತ್ರ `ಕಾಲಪುರುಷ್' ಅತ್ಯುತ್ತಮ ಚಿತ್ರಕ್ಕೆ ನೀಡಲಾಗುವ ಸ್ವರ್ಣಕಮಲ ಪ್ರಶಸ್ತಿಗೆ ಪಾತ್ರವಾಯಿತು. ಅತ್ಯುತ್ತಮ ನಿರ್ದೇಶಕನ ಸ್ವರ್ಣಕಮಲ ಪ್ರಶಸ್ತಿಯನ್ನು `ಪರ್ಜಾನಿಯಾ' ಚಿತ್ರದ ನಿರ್ದೇಶಕ ರಾಮ್ ದೋಲಾಕಿಯಾ ಗಳಿಸಿದರು. `ಬ್ಲ್ಯಾಕ್' ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದ ಅಮಿತಾಭ್ ಬಚ್ಚನ್ ಅತ್ಯುತ್ತಮ ನಟ, `ಪರ್ಜಾನಿಯಾ' ಇಂಗ್ಲಿಷ್ ಚಿತ್ರದ ಮೂಲಕ ಮರಳಿ ನಟನೆಗೆ ಮರಳಿದ ಸಾರಿಕಾ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾದರು. ಕನ್ನಡದ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಪಡೆದ `ತಾಯಿ' ಮ್ಯಾಕ್ಸಿಮ್ ಗಾರ್ಕಿ ಅವರ `ಮದರ್' ಕಾದಂಬರಿ ಆಧಾರಿತ ಚಿತ್ರ. ನಟಿ ಪ್ರಮೀಳಾ ಜೋಷಾಯ್ ಇದರ ನಿರ್ಮಾಪಕರು. ಪರಿಸರ ಸಂರಕ್ಷಣೆ ವಿಭಾಗದ ಪ್ರಶಸ್ತಿ ವಿಜೇತ `ತುತ್ತೂರಿ'ಯ ನಿರ್ಮಾಪಕರು ಇನ್ನೊಬ್ಬ ನಟಿ ಜಯಮಾಲಾ ರಾಮಚಂದ್ರ. ನಗರದ ಪರಿಸರ ರಕ್ಷಣೆಗೆ ಮಕ್ಕಳು ನಡೆಸುವ ಹೋರಾಟದ ಕತೆಯನ್ನು ಇದು ಒಳಗೊಂಡಿದೆ. `ತಾಯಿ' ಚಿತ್ರದ `ಬರುತ್ತೇವೆ ನಾವು ಬರುತ್ತೇವೆ' ಹಾಡಿನ ಸಾಹಿತ್ಯಕ್ಕಾಗಿ ಪ್ರೊ.ಬರಗೂರು ರಾಮಚಂದ್ರಪ್ಪ ಗೀತರಚನೆ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದರು. ಚೊಚ್ಚಲ ನಿರ್ದೇಶನಕ್ಕಾಗಿ ನೀಡುವ ಇಂದಿರಾಗಾಂಧಿ ಪ್ರಶಸ್ತಿಯನ್ನು `ಪರಿಣಿತಾ' ಹಿಂದಿ ಚಿತ್ರದ ನಿರ್ದೇಶಕ ಪ್ರದೀಪ್ ಸರ್ಕಾರ್, ರಾಷ್ಟ್ರ್ರೀಯ ಭಾವೈಕ್ಯಕ್ಕೆ ನೀಡಿದ ಕೊಡುಗೆಗಾಗಿ ನೀಡುವ ನರ್ಗಿಸ್ ದತ್ ಪ್ರಶಸ್ತಿಯನ್ನು ತಮಿಳು ಚಿತ್ರ ದೈವನಮಿತಲ್ ಮತ್ತು ಸಾಮಾಜಿಕ ವಿಷಯಗಳನ್ನು ಆಧಾರಿತ ಚಿತ್ರಗಳಿಗೆ ನೀಡುವ ಪ್ರಶಸ್ತಿಯನ್ನು ಹಿಂದಿ ಚಿತ್ರ `ಇಕ್ಬಾಲ್' ಪಡೆದವು. ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಯನ್ನು `ರಂಗ್ ದೇ ಬಸಂತಿ' ಗಳಿಸಿತು. ವರ್ಷದ ಹಿಂದೆಯೇ ಪ್ರಕಟವಾಗಬೇಕಾಗಿದ್ದ 53ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾನೂನಿನ ಸಮರದಲ್ಲಿ ಸಿಲುಕಿಹಾಕಿಕೊಂಡಿತ್ತು. ಸೆನ್ಸಾರ್ ಆಗದ ಡಾಕ್ಯುಮೆಂಟರಿ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲು ನಿರ್ದೇಶನ ನೀಡಬೇಕೆಂದು ಕೋರಿ ಚಿತ್ರ ನಿರ್ದೇಶಕರಾದ ಆನಂದ್ ಪಟವರ್ಧನ್, ಗೌರವ್ ಜಾನಿ ಮತ್ತು ಸೀಮಂತಿನಿ ದುರು ಮುಂಬೈ ಹೈಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯಿಂದಾಗಿ ಪ್ರಶಸ್ತಿ ಘೋಷಣೆಯನ್ನು ಮುಂದೂಡಲಾಗಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳೆರಡೂ ಈ ಕೋರಿಕೆಯನ್ನು ತಿರಸ್ಕರಿಸಿದ್ದವು. ಅದರ ನಂತರ ಪ್ರಶಸ್ತಿ ವಿತರಣೆಯಲ್ಲಿ ಕೆಲವು ತೀರ್ಪುಗಾರರು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿ ತೀರ್ಪುಗಾರರಲ್ಲಿ ಒಬ್ಬರಾದ ಶ್ಯಾಮಲಿ ಬ್ಯಾನರ್ಜಿ ದೆಹಲಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಜುಲೈ 31ರಂದು ಹೈಕೋರ್ಟ್ ವಜಾಗೊಳಿಸಿದ ನಂತರ ಪ್ರಶಸ್ತಿ ಘೋಷಣೆಯ ದಾರಿ ಸುಗಮವಾಯಿತು.
2007: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗುಜರ್ ಮಲ್ ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಗೋವರ್ಧನ್ ಮೆಹ್ತಾ ಆಯ್ಕೆಯಾದರು. ಹೈದರಾಬಾದಿನ ಇನ್ ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸ್ ನ ಪ್ರಮುಖ ಪ್ರೊಫೆಸರ್ ಮೆಹ್ತಾ ಅವರು ರಸಾಯನ ಶಾಸ್ತ್ರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೊಸ ಸಾವಯವ ಸಮನ್ವಯ ಸಿದ್ದಾಂತ ವಿಧಾನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಅಸಾಧಾರಣ ಯಶಸ್ಸು ಗಳಿಸಿದ ಹಿನ್ನೆಲೆಯಲ್ಲಿ ಮೆಹ್ತಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗುಜರ್ ಮಲ್ ಮೋದಿ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಕುಮಾರ್ ಪ್ರಕಟಿಸಿದರು. ಈ ಹಿಂದೆ ಪ್ರೊ. ಸತೀಶ್ ಧವನ್, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಪ್ರೊ.ಯು.ಆರ್. ರಾವ್ ಅವರು ಜಿ.ಎಂ. ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿಯು ಎರಡು ಲಕ್ಷ ರೂಪಾಯಿ ನಗದು ಹಾಗೂ ರಜತ ಫಲಕವನ್ನು ಒಳಗೊಂಡಿದೆ. ಗೋವರ್ಧನ್ ಮೆಹ್ತಾ ಅವರು 400ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದು, ವಿಶ್ವದಾದ್ಯಂತ 200ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಮೆಹ್ತಾ ಅವರಿಗೆ ಭಾರತ ಸರ್ಕಾರ `ಪದ್ಮಶ್ರೀ ಪ್ರಶಸ್ತಿ' ಹಾಗೂ ಫ್ರಾನ್ಸ್ ಸರ್ಕಾರ `ಚೆವಾಲೈರ್ ಡೆ ಲ ಲೀಜನ್ ಡಿ ಹಾನರ್' ಪ್ರಶಸ್ತಿ ನೀಡಿ ಸನ್ಮಾನಿಸಿವೆ.
2007: ಮೆಕ್ಸಿಕೋದ ದೂರಸಂಪರ್ಕ ಕ್ಷೇತ್ರದ ಉದ್ಯಮಿ ಕಾರ್ಲೋಸ್ ಸ್ಲಿಮ್ ವಿಶ್ವದ ನಂ.1 ಶತ ಕೋಟ್ಯಾಧಿಪತಿಯಾಗಿ ಸ್ಥಾನ ಗಿಟ್ಟಿಸಿಕೊಂಡರು. ಇದುವರೆಗೆ ಈ ಸ್ಥಾನ ಅಲಂಕರಿಸಿದ್ದ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ 2ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 5900 ಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ಕಾರ್ಲೋಸ್ ತನ್ನ ಆಸ್ತಿಯನ್ನು ಈ ವರ್ಷ ಜುಲೈ ಅಂತ್ಯದಲ್ಲಿ 1200 ಕೋಟಿ ಡಾಲರಿನಷ್ಟು ಹೆಚ್ಚಿಸಿಕೊಂಡರು ಎಂದು `ಫಾರ್ಚೂನ್' ನಿಯತಕಾಲಿಕ ವರದಿ ಮಾಡಿತು. 67 ವರ್ಷದ ಸ್ಲಿಮ್ ಲೆಬನಾನ್ ಮೂಲದವರಾಗಿದ್ದು ಲ್ಯಾಟಿನ್ ಅಮೆರಿಕದ ಅತ್ಯಂತ ದೊಡ್ಡ ಮೊಬೈಲ್ ದೂರವಾಣಿ ಕಂಪೆನಿ `ಅಮೆರಿಕ ಮೊವಿಲ್'ನ ಮಾಲೀಕ. ಉಪಹಾರಗೃಹದಿಂದ ಹಿಡಿದು ಬ್ಯಾಂಕಿನವರೆಗೂ ವಹಿವಾಟು ವಿಸ್ತರಿಸಿರುವ ಸ್ಲಿಮ್ ಅವರ ಕಂಪೆನಿ ಷೇರುಗಳು ಮೆಕ್ಸಿಕೊ ಷೇರು ಮಾರುಕಟ್ಟೆಯಲ್ಲಿ ಮೂರನೇ ಒಂದು ಪಾಲನ್ನು ಹೊಂದಿವೆ.
2007: ವಿಪ್ರೊ ಲಿಮಿಟೆಡ್ ನ ಜಾಗತಿಕ ಐಟಿ ಸೇವಾ ವಹಿವಾಟು ನಡೆಸುವ ವಿಪ್ರೊ ಟೆಕ್ನಾಲಜೀಸ್, ಅಮೆರಿಕದ ಇನ್ಫೊಕ್ರಾಸಿಂಗ್ ಇಂಕ್ ಅನ್ನು 60 ಕೋಟಿ ಡಾಲರಿಗೆ (ಅಂದಾಜು ರೂ 2400 ಕೋಟಿಗಳಿಗೆ) ಸ್ವಾಧೀನಪಡಿಸಿಕೊಂಡಿತು. ಐ.ಟಿ ಮೂಲಸೌಕರ್ಯ ನಿರ್ವಹಣೆ, ಉದ್ದಿಮೆ ಸಂಸ್ಥೆಗಳಿಗೆ ಸೇವೆ ಒದಗಿಸುವ ಮತ್ತು ಹೊರಗುತ್ತಿಗೆ ಸೇವೆ ನಿರ್ವಹಿಸುತ್ತಿರುವ ಇನ್ಫೊಕ್ರಾಸಿಂಗ್ ಇಂಕ್ ನ್ನು ಪ್ರತಿ ಷೇರಿಗೆ 18.70 ಡಾಲರ್ ದರದಲ್ಲಿ ಖರೀದಿಸಿತು. ಈ ಸ್ವಾಧೀನ ಪ್ರಕ್ರಿಯೆಯು ಡಿಸೆಂಬರ್ ತಿಂಗಳ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ವಿಪ್ರೊದ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ ಒ) ಸುರೇಶ್ ಸೇನಾಪತಿ ಪ್ರಕಟಿಸಿದರು. ಕಳೆದ ಎರಡು ವರ್ಷಗಳಲ್ಲಿ ವಿಪ್ರೊ ಸ್ವಾಧೀನಪಡಿಸಿಕೊಂಡ 9ನೇ ಕಂಪೆನಿ ಇದು. ಅವುಗಳ ಪೈಕಿ ಇನ್ಫೊಕ್ರಾಸಿಂಗ್ ಇಂಕ್ ಅತಿ ದೊಡ್ಡ ಕಂಪೆನಿ.
2007: ಕರ್ನಾಟಕ ಲಲಿತಕಲಾ ಅಕಾಡೆಮಿಯ ಆಶ್ರಯದಲ್ಲಿ ಗುಲ್ಬರ್ಗದಲ್ಲಿ ನಡೆದ ಸಮಾರಂಭದಲ್ಲಿ 2006ನೇ ಸಾಲಿನ ಗೌರವ ಪ್ರಶಸ್ತಿಯನ್ನು ಬೆಂಗಳೂರಿನ ಎಚ್. ಎನ್. ಸುರೇಶ ಅವರಿಗೆ ಪ್ರದಾನ ಮಾಡಲಾಯಿತು.
2007: ಜಪಾನಿನ ದಕ್ಷಿಣ ಭಾಗದ ಒಕಿನೊವಾ ದ್ವೀಪ ಪ್ರದೇಶದಲ್ಲಿ ಈದಿನ ಬೆಳಗ್ಗೆ 9 ಗಂಟೆ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿತು. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4 ರಷ್ಟಿತ್ತು.
2007: ವಯಾಗ್ರಾ ಮಾತ್ರೆ ತಯಾರಿಸಿ ಖ್ಯಾತಿಗೆ ಬಂದ ಫಿಟ್ಜರ್ ಅಂತಾರಾಷ್ಟ್ರೀಯ ಔಷಧ ಕಂಪೆನಿ ಎಚ್ ಐವಿ ನಿಯಂತ್ರಣಕ್ಕೆ ತಯಾರಿಸಿದ ಔಷಧಕ್ಕೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ಅಂಗೀಕಾರ ನೀಡಿತು. ಎಚ್ಐವಿ ಸೋಂಕು ಪೀಡಿತರ ಆರೋಗ್ಯಕರ ಜೀವಕೋಶಗಳಲ್ಲಿ ಎಚ್ ಐವಿ ವೈರಸ್ ಪ್ರವೇಶಿಸುವುದನ್ನು ಸೆಲ್ ಝೆಂಟ್ರಿ ಎಂಬ ಈ ಹೊಸ ಔಷಧ ತಡೆಯುತ್ತದೆ. ಇದನ್ನು ಬಾಯಿಯ ಮೂಲಕ ಸೇವಿಸಬಹುದು. ಈ ಮೊದಲು ತಯಾರಿಸಲಾದ ಔಷಧ ವೈರಸ್ ಮೇಲೆ ದಾಳಿ ನಡೆಸುತ್ತಿತ್ತು. ಮಾರ್ವಿರೋಕ್ ಎಂದೂ ಕರೆ ಯಲ್ಪಡುವ ಈ ಔಷಧ ಎಚ್ ಐವಿ ವೈರಸ್ ಪ್ರವೇಶಿಸುವ ಆರೋಗ್ಯಕರ ಕೋಶದಲ್ಲಿನ ಸಿಸಿಆರ್-5 ಎಂಬ ಪ್ರವೇಶ ದ್ವಾರವನ್ನು ಮುಚ್ಚುತ್ತದೆ. ಆದರೆ ಈ ಔಷಧ ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು. ಹೃದಯಾಘಾತವಾಗುವ ಸಂಭವವೂ ಇದೆ ಎಂಬ ಎಚ್ಚರಿಕೆಯನ್ನು ಔಷಧದ ಮೇಲೆ ಮುದ್ರಿಸಲಾಗಿದೆ. ಈ ಔಷಧದ ಮೇಲೆ ಅಧ್ಯಯನ ನಡೆಸುವಾಗ ಕೆಲವು ರೋಗಿಗಳು ಕೆಮ್ಮು, ಜ್ವರ, ಶ್ವಾಸಕೋಶ ಸೋಂಕು, ಹೊಟ್ಟೆ ನೋವು ಅನುಭವಿಸಿದರು. ಔಷಧ ಸೇವಿಸಿದ ರೋಗಿಗಳಲ್ಲಿ ಶೇ 45ರಷ್ಟು ಮಂದಿಗೆ ಏಡ್ಸ್ ರೋಗ ಪತ್ತೆ ಮಾಡಲು ಸಾಧ್ಯವಾಗದಷ್ಟು ನಿಯಂತ್ರ ಣಕ್ಕೆ ಬಂದಿತು.
2007: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ತಿದ್ದುಪಡಿ ವಿರೋಧಿಸಿ ಏಳು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟ ಅವಧಿಯ ಬಂದ್ ನ್ನು ಹಿಂತೆಗೆದು ಕೊಳ್ಳಲಾಯಿತು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಬಳಿಕ ಮುಷ್ಕರ ಹಿಂತೆಗೆದುಕೊಳ್ಳಲು ನಿರ್ಧರಿಸಲಾಯಿತು.
2006: ತಂಪು ಪಾನೀಯಗಳಲ್ಲಿ ಹೆಚ್ಚಿನ ಮಟ್ಟದ ಕೀಟನಾಶಕ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಮತ್ತು ರಾಜ್ಯ ಸಚಿವಾಲಯ ಸೇರಿದಂತೆ ಛತ್ತೀಸ್ ಗಢ ರಾಜ್ಯದ ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಕೋಕ-ಕೋಲಾ ಮತ್ತು ಪೆಪ್ಸಿ ಬಳಕೆಯನ್ನು ಸರ್ಕಾರ ನಿಷೇಧಿಸಿತು.
2006: ರಷ್ಯಾದ ಮರಿಯಾ ಶರ್ಪೋವಾ ಅವರು ಸ್ಯಾನ್ ಡಿಯಾಗೊದಲ್ಲಿ ಮುಕ್ತಾಯವಾದ ಅಕ್ಯುರಾ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಅವರು ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ಅವರನ್ನು ಪರಾಭವಗೊಳಿಸಿದರು.
2006: ಇರಾಕಿನ ಆಹಾರಕ್ಕಾಗಿ ತೈಲ ಹಗರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಆರ್. ಎಸ್. ಪಾಠಕ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿತು. ಪ್ರಧಾನಿ ವಿರುದ್ಧದ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ನಡೆದ ಭಾರಿ ಕೋಲಾಹಲದ ಮಧ್ಯೆ ವರದಿ ಹಾಗೂ ಕ್ರಮ ಕೈಗೊಂಡ ವರದಿಯನ್ನು ಮಂಡಿಸಿ ಅಂಗೀಕರಿಸಲಾಯಿತು.
1998: ಟಾಂಜಾನಿಯಾದ ದಾರ್-ಎ-ಸಲಾಮ್, ಹಾಗೂ ಕೀನ್ಯಾದ ನೈರೋಬಿಯ ಅಮೆರಿಕನ್ ರಾಜತಾಂತ್ರಿಕ ಕಚೇರಿಗಳಲ್ಲಿ ಟ್ರಕ್ ಬಾಂಬುಗಳು ಸ್ಫೋಟಗೊಂಡವು. ದಾರ್ ಎಸ್ ಸಲಾಮಿನಲ್ಲಿ 10, ನೈರೋಬಿಯಲ್ಲಿ 12 ಮಂದಿ ಅಮೆರಿಕನ್ನರು ಸೇರಿ ಒಟ್ಟು 247 ಮಂದಿ ಮೃತರಾದರು. ಮುಲ್ಲಾ ಒಮರ್ ಮತ್ತು ಒಸಾಮಾ ಬಿನ್ ಲಾಡೆನ್ ಈ ದಾಳಿಗಳನ್ನು ಯೋಜಿಸಿದ್ದರು.
1985: ಗೀತ್ ಸೇಥಿ ಅವರು ನವದೆಹಲಿಯಲ್ಲಿ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. ಆಗ ಇವರಿಗೆ 24 ವರ್ಷ. ಅತ್ಯಂತ ಕಿರಿಯ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಎಂಬ ಹೆಗ್ಗಳಿಕೆ ಇವರದಾಯಿತು.
1956: ಮಹಾರಾಷ್ಟ್ರ, ಗುಜರಾತ್, ಸೌರಾಷ್ಟ್ರ, ಮರಾಠಾವಾಡ, ವಿದರ್ಭ, ಕಛ್ ಮತ್ತು ಮುಂಬೈ ನಗರಗಳನ್ನು ಒಳಗೊಂಡ ಬೃಹತ್ ದ್ವಿಭಾಷಾ ಮುಂಬೈ ಪ್ರಾಂತ್ಯ ರಚನೆ ಸಲಹೆಯನ್ನು ಒಪ್ಪಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಪಂಡಿತ ಪಂತ್ ಲೋಕಸಭೆಯಲ್ಲಿ ಪ್ರಕಟಿಸಿದರು.
1956: ಕರ್ನಾಟಕ, ಕೇರಳ ಮತ್ತು ಕೊಡಗನ್ನು ಒಳಗೊಂಡ ದ್ವಿಭಾಷಾ ಪ್ರಾಂತ್ಯ ರಚಿಸುವಂತೆ ಸಂಸತ್ ಸದಸ್ಯರಾದ ಸಿ.ಪಿ. ಮ್ಯಾಥೆನ್ ಮತ್ತು ಶಿವರಾವ್ ಅವರು ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಸಂಧಿಸಿ ಒತ್ತಾಯಿಸಿದರು.
1954: ಸಾಹಿತಿ ಗಾಯತ್ರಿ ನಾವಡ ಜನನ.
1949: ಸಾಹಿತಿ ಆನೇಕಲ್ ಕೃಷ್ಣಮೂರ್ತಿ ಜನನ.
1941: ರಬೀಂದ್ರನಾಥ ಟ್ಯಾಗೋರ್ ಅವರು ಉತ್ತರ ಕಲ್ಕತ್ತದ (ಈಗಿನ ಕೋಲ್ಕತ್ತಾ) ಜೊರಾಸಂಕೊದ ದ್ವಾರಕಾನಾಥ ಟ್ಯಾಗೋರ್ ಗಲ್ಲಿಯ ನಂಬರ್ 6ರ ಮನೆಯಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ಅದೇ ಮನೆಯಲ್ಲಿ ಅವರು ಜನಿಸಿದ್ದರು.
1940: ರಬೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವ ಸಲುವಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಶಾಂತಿನಿಕೇತನದಲ್ಲಿ ವಿಶೇಷ ಪದವೀದಾನ ಸಮಾರಂಭವನ್ನು ಏರ್ಪಡಿಸಿತು.
1938: ಸಾಹಿತಿ ಹ.ಕ. ರಾಜೇಗೌಡ ಜನನ.
1925: ಎಂ.ಎಸ್. ಸ್ವಾಮಿನಾಥನ್ ಜನ್ಮದಿನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕೃಷಿ ತಜ್ಞ ಹಾಗೂ ಆಡಳಿತಗಾರರಾದ ಇವರು ಭಾರತದ `ಹಸಿರು ಕ್ರಾಂತಿ'ಯಲ್ಲಿ ಮಹತ್ವದ ಪಾತ್ರ ವಹಿಸಿದವರು.
1924: ಶಿಕ್ಷಣ ಕ್ಷೇತ್ರದಲ್ಲಿ ದಕ್ಷ ಆಡಳಿತಾಧಿಕಾರಿ ಎಂದು ಹೆಸರು ಪಡೆದಿದ್ದ ಕರ್ನಾಟಕ ವಿವಿ ಕುಲ ಸಚಿವ ಸಾಹಿತಿ ಸದಾಶಿವ ಒಡೆಯರ್ (7-8-1924ರಿಂದ 11-9-1996) ಅವರು ಶಿವದೇವ ಒಡೆಯರ್- ಗಿರಿಜಾದೇವಿ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಮರೇವಾಡ ಗ್ರಾಮದಲ್ಲಿ ಜನಿಸಿದರು. ಆಡಳಿತ, ಶಿಕ್ಷಣ, ಸಾಹಿತ್ಯ ಈ ಮೂರೂ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮೆರೆದ ವ್ಯಕ್ತಿ ಇವರು.
1914: ಗಮಕಿ ರಾಘವೇಂದ್ರರಾವ್ ಜನನ.
1905: ವಿದೇಶೀ ವಸ್ತುಗಳ ಬಹಿಷ್ಕಾರ ಚಳವಳಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಆರಂಭಗೊಂಡಿತು.
1905 ಅಕ್ಟೋಬರ್ 16ರ ಪಶ್ಚಿಮ ಬಂಗಾಳ ವಿಭಜನೆ ದಿನದಂತೆಯೇ ಬಹು ವರ್ಷಗಳವರೆಗೆ ಈ ದಿನವನ್ನು ವಿದೇಶೀ ವಸ್ತುಗಳ ಬಹಿಷ್ಕಾರ ದಿನವಾಗಿ ಆಚರಿಸಲಾಯಿತು.
1887: ರಾಜಕಾರಣಿ, ಪತ್ರಕರ್ತೆ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್ ಜನನ.
1868: ಆಧುನಿಕ ಬಂಗಾಳಿ ಕವಿ, ವಿಮರ್ಶಕ ಪ್ರಥಮ್ ಚೌಧರಿ ಜನನ.
1702: ಮೊಘಲ್ ಚಕ್ರವರ್ತಿ ಮಹಮ್ಮದ್ ಶಹ (1702-48) ಜನ್ಮದಿನ. ಈತ ಶಹಜಹಾನನ ಮಗ.
No comments:
Post a Comment