Thursday, September 11, 2008

ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ

ಸಮುದ್ರ ಮಥನ

ದೇವ ದಾನವರ ಸಮುದ್ರ ಮಥನದಿಂದ ಹಲವಾರು ವಸ್ತುಗಳೊಂದಿಗೆ ಅಮರತ್ವ ನೀಡುವ ಅಮೃತದಂತಹ ಶ್ರೇಷ್ಠ ಪಾನೀಯ ಹೊರಬಂದಿತು. ಮಾನವ ಮೆದುಳಿನಲ್ಲಿ ಮಥನ ನಡೆದಾಗಲೂ ಇದೇ ರೀತಿ ಉತ್ಕೃಷ್ಠ ವಿಚಾರಗಳು ಮೈದಾಳುತ್ತವೆ. ಸದಾ ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿದ ಸಂತರು, ಸ್ವಾಮೀಜಿಗಳ ಮನ ಮಂಥನ ನಡೆದರೆ? 'ಪರ್ಯಾಯ' ಪ್ರತೀ ವಾರ ಸಾದರ ಪಡಿಸಲಿದೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮನಸ್ಸೆಂಬ ಸಮುದ್ರದಲ್ಲಿ ನಡೆಯುವ ಮಂಥನದ ಸಾರವನ್ನು.

ಏಳು, ಏಳೆನ್ನುವ ಶ್ರೀರಾಮ

ಭಾರತೀಯರ ಆರಾಧ್ಯ ದೈವ ಶ್ರೀರಾಮ ಜಾಗೃತಾವಸ್ಥೆಯ ಪ್ರತೀಕ. ಆತನ ಹೆಸರೇ ಮನುಕುಲವನ್ನು ಎಚ್ಚರಿಸುತ್ತದೆ. ಹೇಗೆನ್ನುವಿರಾ ? ನೋಡಿ, ಶ್ರೀ ರಾಮನಿಗೂ ಏಳಕ್ಕೂ ವಿಶೇಷ ಸಂಬಂಧವಿದೆ.

ರಾಮಾಯಣದಲ್ಲಿ ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿವೆ. ಐದುನೂರು ಅಧ್ಯಾಯಗಳಿವೆ. ಏಳು ಕಾಂಡಗಳಿವೆ. ರಾಮಾವತಾರ ವಿಷ್ಣವಿನ ಏಳನೆಯ ಅವತಾರ, ಏಳುಕಾಂಡಗಳ ರಾಮಾಯಣದ ನಾಯಕ ಶ್ರೀರಾಮ ಜನಿಸಿದ್ದು ಪುನರ್ವಸು ನಕ್ಷತ್ರದಲ್ಲಿ.

ನಕ್ಷತ್ರಗಳ ರಾಶಿಯಲ್ಲಿ, ನಕ್ಷತ್ರಗಳ ಗುಂಪಿನಲ್ಲಿ ಪುನರ್ವಸು ಏಳನೆಯದು. ರಾಮ ಶಬ್ದಕ್ಕೆ ಸಂಖ್ಯಾಶಾಸ್ತ್ರದ ಸ್ಥಾನ ಕೂಡ ಏಳು. ಅವರ್ಗೀಯ ವ್ಯಂಜನಗಳಲ್ಲಿ 'ರ' ಎಂದರೆ ಎರಡನೆಯದು. ಯ,ರ,ಲ,ವ ಅದರಲ್ಲಿ ಎರಡನೆಯದು 'ರ'. ಪವರ್ಗದಲ್ಲ್ಲಿ ಐದನೇ ಅಕ್ಷರ 'ಮ'. ಪ,ಫ,ಬ,ಭ,ಮ. ಹೀಗೆ `ರಾ' ಮತ್ತು `ಮ' ಅವೆರಡೂ ಸೇರಿದರೆ ಏಳಾಯ್ತು. ಅದಕ್ಕೇ ಹೇಳಿದ್ದು ರಾಮನಿಗೂ ಏಳಕ್ಕೂ ವಿಶೇಷ ಸಂಬಂಧವಿದೆಯೆಂದು.

ಅಂದರೆ ಮನುಷ್ಯನಿಗೆ ಏಳು, ಏಳು ಎನ್ನುತ್ತಿದ್ದಾನೆಯೇ ರಾಮ ? ತನ್ನನ್ನು ಕಾಣಬೇಕು ಅಂದ್ರೆ ನೀನು ಮಲಗಿದ್ದರೆ ಸಾಧ್ಯ ಇಲ್ಲ. ಏಳಬೇಕು ಎಂಬುದು ಸಂದೇಶ. ತಮೋಗುಣದಲ್ಲಿದ್ದರೆ ಶ್ರೀರಾಮ ಸಾನ್ನಿಧ್ಯ ಸಾಧ್ಯವಿಲ್ಲ. ನಿದ್ದೆ ಅನ್ನುವುದು ತಮೋಗುಣ. ಎಚ್ಚೆತ್ತುಕೊಳ್ಳಬೇಕು. ಅಜಾಡ್ಯನಿದ್ರೆಯನ್ನು ಮಾಡಬೇಕು ಎಂಬುದನ್ನು ಹೆಸರಿನಲ್ಲೇ ಸಾರಿದ್ದಾನೆ ಶ್ರೀ ರಾಮ.

ನಿದ್ರೆಯಲ್ಲಿ ಎರಡು ವಿಧ. ಮೊದಲನೆಯದು ಜಾಡ್ಯನಿದ್ರೆ, ಇನ್ನೊಂದು ಅಜಾಡ್ಯನಿದ್ರೆ. ಜಡತೆಯಿಂದ ಬರುವ ನಿದ್ರೆ ನಾವೆಲ್ಲ ನಿತ್ಯ ಅನುಭವಿಸುವಂಥದ್ದು. ಆದರೆ, ಇನ್ನೊಂದು ರೀತಿ ನಿದ್ದೆ ಇದೆಯಂತೆ. ಅದು ಅಜಾಡ್ಯನಿದ್ರೆ. ಅಂದರೆ ಜಾಡ್ಯವಲ್ಲ, ಆದರೆ ನಿದ್ರೆ ಹೌದು. ಆ ನಿದ್ರೆಯಲ್ಲಿ ತಮಸ್ಸಿಲ್ಲ. ಆನಂದ ಇದೆ. ನಮ್ಮ ನಿತ್ಯದ ನಿದ್ದೆಯಲ್ಲಿ ಆನಂದ ಇದೆ ಸ್ವಲ್ಪಮಟ್ಟಿಗೆ, ಜೊತೆಗೇ ತಮಸ್ಸಿದೆ. ಕತ್ತಲೆ ಇದೆ. ಅಜ್ಞಾನ ಇದೆ. ಮೈಮರೆವಿದೆ. ಆದರೆ ಜ್ಞಾನಪೂರ್ವಕವಾಗಿರುವ ಆನಂದ ಅಜಾಡ್ಯನಿದ್ರೆಯಲ್ಲಿರುತ್ತದೆ. ಅಂಥ ನಿದ್ರೆಯಲ್ಲಿ ಗೋಚರ ಆಗುವವನು ಶ್ರೀರಾಮ.

ಶ್ರೀ ರಾಮ ನಾಮಸ್ಮರಣೆಯಿಂದಲೇ ನಾವು ನಮ್ಮನ್ನು ಕವಿದಿರಬಹುದಾದ ಜಾಡ್ಯ ನಿದ್ರೆಯಿಂದ ಹೊರಬರಲು ಸಾಧ್ಯ. ಜಾಗೃತಾವಸ್ಥೆಯತ್ತ ಸಾಗಲು ಇದುವೇ ಸುಲಭ ಮಾರ್ಗ.

-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ,
ಶ್ರೀ ರಾಮಚಂದ್ರಾಪುರ ಮಠ

No comments:

Advertisement