Tuesday, September 16, 2008

ಗೋಕರ್ಣ ಸಂಭ್ರಮ, ಪುನರುತ್ಥಾನ ಮಹಾಸಂಕಲ್ಪ
ಕೇರಳದ ಚಂಡೆ, ಪಂಚವಾದ್ಯದ ಜೊತೆಗೆ ಮರ ಕುಣಿತ ಹಾಗೂ ಸುಗ್ಗಿ ಕುಣಿತದ ಸಂಭ್ರಮ. ಜೊತೆಗರ್ಷೀ ಸಡಗರಕ್ಕೆ ಸಾಕ್ಷಿಯಾದ ವರ್ಷಧಾರೆಯ ಸಿಂಚನದ ಮಧ್ಯೆ ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರದ ಪುನರುತ್ಥಾನ ಮಹಾಸಂಕಲ್ಪದೊಂದಿಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು 2008 ಸೆಪ್ಟೆಂಬರ್ 15ರ ಸೋಮವಾರದಂದು ಗೋಕರ್ಣದಲ್ಲಿ ಚಾತುರ್ಮಾಸ್ಯ ಸೀಮೋಲ್ಲಂಘನ ಮಾಡಿ ಪುರ ಪ್ರವೇಶ ಮಾಡಿದರು.
ಕರ್ನಾಟಕ ಸರ್ಕಾರವು ಗೋಕರ್ಣ ಶ್ರೀ ಮಹಾಬಲೇಶ್ವರ ಹಾಗೂ ಪರಿವಾರ ದೇವರನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ಬಳಿಕ ಶ್ರೀಗಳು ಇದೇ ಪ್ರಪ್ರಥಮ ಬಾರಿಗೆ ಗೋಕರ್ಣಕ್ಕೆ ಆಗಮಿಸಿದರು.
ಸೋಮವಾರ ಗೋಧೂಳಿ ಲಗ್ನದಲ್ಲಿ ಆಗಮಿಸಿದ ಸ್ವಾಮೀಜಿ ಅವರನ್ನು ದೇವಸ್ಥಾನದ ಪರವಾಗಿ ಗೋಕರ್ಣ ಉಪಾಧಿವಂತ ಮಂಡಳದ ಅಧ್ಯಕ್ಷ ಗಣೇಶ ಹಿರೇಗಂಗೆ ಸ್ವಾಗತಿಸಿದರು, ನಂತರ ಮಹಾಬಲೇಶ್ವರ ದೇವಸ್ಥಾನದವರೆಗೆ ಪುಷ್ಪರಥದಲ್ಲಿ ಸ್ವಾಮೀಜಿ ಅವರನ್ನು ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು.
ದಾರಿಯುದ್ಧಕ್ಕೂ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ರಾಮಾನಂದ ಸ್ವಾಮೀಜಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಶಿವಾನಂದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 15-20 ಸಹಸ್ರಕ್ಕೂ ಹೆಚ್ಚಿನ ಜನ ಸಂಭ್ರಮೋತ್ಸಾಹದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸುಮಾರು ಒಂದು ಗಂಟೆ ಕಾಲ ನಡೆದ ಮೆರವಣಿಗೆಯ ವೇಳೆ ಅಮೃತಸಿಂಚನದಂತೆ ಸುರಿದ ಮಳೆ ಗೋಕರ್ಣ ಪುನರುತ್ಥಾನದ ಮಹಾ ಸಂಕಲ್ಪದಲ್ಲಿ ತಾನೂ ಪಾಲ್ಗೊಂಡಿತು.
ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಸ್ವಾಮೀಜಿಯವರು ಮಹಾಬಲೇಶ್ವರನ ಪೂಜೆ ನೆರವೇರಿಸಿದರು.

 

No comments:

Advertisement