Wednesday, September 3, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 03

ಇಂದಿನ ಇತಿಹಾಸ

ಸೆಪ್ಟೆಂಬರ್ 3

ಪ್ರಸಿದ್ಧ ಪರಿಸರವಾದಿ ಡಾ. ಉಲ್ಲಾಸ ಕಾರಂತ ಅವರು ಪರಿಸರ ಸಂರಕ್ಷಣಾ ನಾಯಕತ್ವಕ್ಕೆ ನೀಡಲಾಗುವ `ವಿಶ್ವ ವನ್ಯಮೃಗ ನಿಧಿ' (ಡಬ್ಲ್ಯುಡಬ್ಲ್ಯುಎಫ್)ಯ ಪ್ರತಿಷ್ಠಿತ `ಜೆ. ಪೌಲ್ ಗ್ರೆಟ್ಟಿ ಪ್ರಶಸ್ತಿ'ಗೆ ಪಾತ್ರರಾದರು. ಪ್ರಶಸ್ತಿಯ ಜತೆ ನೀಡಲಾಗುವ ಎರಡು ಲಕ್ಷ ಡಾಲರ್ (ಸುಮಾರು 82 ಲಕ್ಷ ರೂ) ಹಣವನ್ನು ತಮ್ಮ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ವಿಷಯಗಳ ಅಧ್ಯಯನಕ್ಕಾಗಿ ಫೆಲೋಶಿಪ್ ಕಾರ್ಯಕ್ರಮ ಪ್ರಾರಂಭಿಸಲು ಡಾ.ಕಾರಂತರು ಬಳಸಬಹುದು.

2007: ಪ್ರಸಿದ್ಧ ಪರಿಸರವಾದಿ ಡಾ. ಉಲ್ಲಾಸ ಕಾರಂತ ಅವರು ಪರಿಸರ ಸಂರಕ್ಷಣಾ ನಾಯಕತ್ವಕ್ಕೆ ನೀಡಲಾಗುವ `ವಿಶ್ವ ವನ್ಯಮೃಗ ನಿಧಿ' (ಡಬ್ಲ್ಯುಡಬ್ಲ್ಯುಎಫ್)ಯ ಪ್ರತಿಷ್ಠಿತ `ಜೆ. ಪೌಲ್ ಗ್ರೆಟ್ಟಿ ಪ್ರಶಸ್ತಿ'ಗೆ ಪಾತ್ರರಾದರು. ಪ್ರಶಸ್ತಿಯ ಜತೆ ನೀಡಲಾಗುವ ಎರಡು ಲಕ್ಷ ಡಾಲರ್ (ಸುಮಾರು 82 ಲಕ್ಷ ರೂ) ಹಣವನ್ನು ತಮ್ಮ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ವಿಷಯಗಳ ಅಧ್ಯಯನಕ್ಕಾಗಿ ಫೆಲೋಶಿಪ್ ಕಾರ್ಯಕ್ರಮ ಪ್ರಾರಂಭಿಸಲು ಡಾ.ಕಾರಂತರು ಬಳಸಬಹುದು. ಸಂಶೋಧನೆ, ಪ್ರಕಟಣೆ ಮತ್ತು ಹೋರಾಟದ ಮೂಲಕ ವನ್ಯಮೃಗ ಸಂರಕ್ಷಣೆಯ ಕ್ಷೇತ್ರದಲ್ಲಿ ಮಾಡಿದ ಸುದೀರ್ಘ ಕಾಲದ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಪಶ್ಚಿಮಘಟ್ಟದ ಮೂರು ಕಡೆಗಳಲ್ಲಿ ಅಭಿವೃದ್ಧಿಪಡಿಸಿರುವ ಏಷ್ಯಾದ ಆನೆ ಮತ್ತು ಹುಲಿಗಳ ಸಂರಕ್ಷಣಾಧಾಮಗಳು ಹಾಗೂ ಜನತೆ ಮತ್ತು ವನ್ಯಮೃಗಗಳಿಗೆ ಅನೂಕೂಲವಾಗುವ ರೀತಿಯಲ್ಲಿ ರೂಪಿಸಲಾಗಿರುವ ಸ್ವಇಚ್ಛೆಯ ಪುನರ್ವಸತಿ ಕಾರ್ಯಕ್ರಮಗಳನ್ನು ವಿಶ್ವ ವನ್ಯಮೃಗ ನಿಧಿ ವಿಶೇಷವಾಗಿ ಉಲ್ಲೇಖಿಸಿತು. ಜೀವವೈವಿಧ್ಯತೆಯ ಸಂರಕ್ಷಣೆಯೂ ಸೇರಿದಂತೆ ಭಾರತದ ಪರಿಸರ ನೀತಿ ರಚನೆ ಮತ್ತು ಭಾರತೀಯ ಪರಿಸರ ವಿಜ್ಞಾನಿಗಳ ಶಿಕ್ಷಣದ ಮೇಲೆ ಡಾ.ಕಾರಂತರು ಅಪಾರ ಪ್ರಭಾವ ಬೀರಿದ್ದಾರೆ ಎಂದು ಅದು ಹೇಳಿತು.

2007: ಹೈದರಾಬಾದ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ರಿಜ್ವಾನನನು ಕರ್ನಾಟಕ ಮತ್ತು ಹೈದರಾಬಾದ್ ಪೊಲೀಸರು ಬೆಂಗಳೂರಿನಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡರು. ಸಿಸಿಬಿ ಭಯೋತ್ಪಾದಕ ನಿಗ್ರಹ ದಳ ಮತ್ತು ಹೈದರಾಬಾದ್ ವಿಶೇಷ ತನಿಖಾ ತಂಡದ (ಎಸ್ಐಟಿ) ಸದಸ್ಯರು ಜಂಟಿ ಕಾರ್ಯಾಚರಣೆ ನಡೆಸಿ, ಮೈಕೋ ಲೇಔಟ್ ಸಮೀಪದ ಹಳೆಗುರಪ್ಪನಪಾಳ್ಯದ ಮನೆಯೊಂದರಲ್ಲಿ ವಾಸವಾಗಿದ್ದ ರಿಜ್ವಾನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ರಿಜ್ವಾನನೊಂದಿಗೆ ಇದ್ದ ಬಾಂಗ್ಲಾದೇಶ ಮೂಲದ ಶಿಯಾಕ್ ಎಂಬ ಮಹಿಳೆಯನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು.

2007: ಜನತಾದಳ(ಎಸ್) ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಮೆರಾಜ್ದುದೀನ್ ಪಟೇಲ್ ಹಾಗೂ ಯುವ ಘಟಕದ ಅಧ್ಯಕ್ಷರಾಗಿ ಅರವಿಂದ ದಳವಾಯಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.

2007: `ತನಿಖೆ' ಚಿತ್ರದ ಮೂಲಕ ಸುದ್ದಿಯಾಗಿದ್ದ ನಟ ಗುಲ್ಜಾರ್ ಖಾನ್ (55) ಈದಿನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 15 ದಿನದ ಹಿಂದೆ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದರು. 1988ರಲ್ಲಿ `ಅಪ್ಪಿಕೋ ನನ್ನ' ಎಂಬ ಚಿತ್ರ ನಿರ್ಮಿಸುವ ಪ್ರಯತ್ನಕ್ಕೆ ಕೈಹಾಕಿದ್ದ ಗುಲ್ಜಾರ್ ಖಾನ್ ಅದನ್ನು ಪೂರ್ಣವಾಗಿಸಲಾರದೆ ದುಬೈಗೆ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಿನಿಮಾ ಪ್ರೀತಿಯನ್ನೂ ಬೆಳೆಸಿಕೊಂಡರು. ಅದರ ಪರಿಣಾಮವಾಗಿ ಸಿದ್ಧಗೊಂಡದ್ದು `ತನಿಖೆ'. ಈ ಚಿತ್ರದ ನಿರ್ಮಾಣ, ನಿರ್ದೇಶನ, ಹಾಡುಗಾರಿಕೆ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರು ಕೈಯಾಡಿಸಿದ್ದರು. ನಂತರ `ಸಾರಥಿ' ಎಂಬ ಚಿತ್ರ ನಿರ್ಮಿಸುವುದು ಅವರ ಕನಸಾಗಿತ್ತು. ಆದರೆ, ಹಾಡುಗಳ ಧ್ವನಿಮುದ್ರಣದ ನಂತರ ಅವರು ಕೊಲೆ ಪ್ರಕರಣವೊಂದರ ಆರೋಪಿಯಾದರು. ಆ ಚಿತ್ರಕ್ಕೆ ಡಾ. ರಾಜ್ ಕುಮಾರ್ ಕೂಡಾ ಒಂದು ಹಾಡು ಹಾಡಿದ್ದರು. 1994ರಲ್ಲಿ ಇಬ್ಬರು ಸಹಚರರೊಂದಿಗೆ ಸೇರಿ ತಿಮ್ಮರಾಜು ಎಂಬ ವ್ಯಕ್ತಿಯನ್ನು ಗುಲ್ಜಾರ್ ಕೊಲೆ ಮಾಡಿದ್ದಾರೆಂದು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದು ವರ್ಷದ ಹಿಂದೆ ಈ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಈ ಹಿಂದೆ ಸಹ ಒಮ್ಮೆ ಪೆರೋಲ್ ಮೇಲೆ ಹೊರಬಂದು ಚಿಕಿತ್ಸೆ ಪಡೆದಿದ್ದರು.

2007: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ಸಿನ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆ `ಸಿಎಂಸಿ ಲಿಮಿಟೆಡ್' ನ ಪ್ರಥಮ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಆರ್. ನರಸಿಂಹನ್ (82) ಈದಿನ ಬೆಂಗಳೂರಿನಲ್ಲಿ ನಿಧನರಾದರು. ಟಾಟಾ ಮೂಲಭೂತ ಸಂಶೋಧನಾ ಕೇಂದ್ರ (ಟಿಐಎಫ್ಆರ್) ಪ್ರಾಧ್ಯಾಪಕರಾಗಿದ್ದ ನರಸಿಂಹನ್, 1990ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಭಾರತದ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ `ಟಿಐಎಫ್ ಆರ್ ಎಸಿ'ನ ನಿರ್ಮಾಣ ತಂಡದಲ್ಲೂ ಕಾರ್ಯ ನಿರ್ವಹಿಸಿದ್ದರು. 1976ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ನರಸಿಂಹನ್, ಜವಾಹರಲಾಲ್ ನೆಹರು ಫೆಲೋಶಿಪ್, ಹೋಮಿ ಜಹಾಂಗೀರ್ ಭಾಭಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಅವರು ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ(ಸಿಎಸ್ಐ)ದ ಮೊದಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋಶಿಪ್ ಪಡೆದಿದ್ದ ನರಸಿಂಹನ್, ಕೃತಕ ಜ್ಞಾನ ಮತ್ತು ಭಾಷಾ ವಿಜ್ಞಾನದ ವಿಷಯಗಳಲ್ಲಿ ನಾಲ್ಕು ಕೃತಿಗಳನ್ನು ರಚಿಸಿದ್ದರು. ಕ್ಯಾಲಿಫೋರ್ನಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಅಧ್ಯಯನ ಮಾಡಿದ್ದ ಅವರು, ಗಣಿತ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದರು.

2007: ಖ್ಯಾತ ವಿಜ್ಞಾನಿ ಹಾಗೂ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ ಐಆರ್) ಮಾಜಿ ಪ್ರಧಾನ ನಿರ್ದೇಶಕ ಎ.ಪಿ.ಮಿತ್ರಾ ನವದೆಹಲಿಯಲ್ಲಿ ನಿಧನರಾದರು. ಕಾಸ್ಮಿಕ್ ಕಿರಣ, ವಾತಾವರಣ ಹಾಗೂ ಉಷ್ಣಾಂಶ ಕುರಿತು ಅವರು ನಡೆಸಿದ ಸಂಶೋಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದವು. ಅವರ ಸಂಶೋಧನೆಯನ್ನು ರೇಡಿಯೋ ಪ್ರಸಾರ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪದ್ಮಭೂಷಣ, ಎಸ್. ಎಸ್. ಭಟ್ನಾಗರ್ ಪ್ರಶಸ್ತಿ, ಸಿ.ವಿ.ರಾಮನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಅವರು ಪಡೆದಿದ್ದರು.

2007: ಮಂಜೇಶ್ವರದ ಹೊಸಂಗಡಿಯಲ್ಲಿ ಈದಿನ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ತುಳು ಅಕಾಡೆಮಿಯನ್ನು ಉದ್ಘಾಟಿಸಿದರು. ದಿನೇ ದಿನೇ ಮೂಲ ಬೇರಿನಿಂದ ದೂರ ಸರಿಯುವ ಅಸಹಾಯಕತೆಯಲ್ಲಿರುವ ಮಂಜೇಶ್ವರದ ಬಹುಸಂಖ್ಯಾತ `ತುಳು' ಭಾಷಿಗರ ಸಾಂಸ್ಕೃತಿಕ ಕನಸಿಗೆ `ಅಕಾಡೆಮಿ' ಎಂಬ ಸೌಧ ಕಟ್ಟಿದ ಕೇರಳ ಸರ್ಕಾರ, ತುಳು ಭಾಷಾ ಸಂಸ್ಕೃತಿಯ ಉಳಿವಿಗೆ ಪಣತೊಟ್ಟಿತು. ಆ ಮೂಲಕ ಮಲೆಯಾಳೀಕರಣದ ಪ್ರಭಾವದಿಂದ ಕನ್ನಡ ಮಾಯವಾಗುತ್ತಿರುವ ಈ `ಗಡಿಕನ್ನಡ'ದ ನಾಡಿನಲ್ಲಿ ಮೂಲತಃ ಕನ್ನಡಿಗರೇ ಆಗಿರುವ ತುಳುಭಾಷಿಗರಿಗೆ `ಸರ್ಕಾರಿ ಮಾನ್ಯತೆ' ನೀಡಿ ಪ್ರೋತ್ಸಾಹಿಸುವ ಭರವಸೆ ನೀಡಿತು. ಕೇವಲ ಒಬ್ಬ ಶಾಸಕನ (ಮಂಜೇಶ್ವರ ಶಾಸಕ- ಸಿ.ಎಚ್. ಕುಂಞಂಬು) ಹಠ, ಹೋರಾಟದ ಫಲಶ್ರುತಿಯಾಗಿ 20 ಲಕ್ಷ ರೂ. ಮಂಜೂರಾತಿಯೊಂದಿಗೆ ತುಳು ಅಕಾಡೆಮಿಗೆ ರೂಪು ಬಂದಿತು. ಕಳೆದ ಬಜೆಟ್ ಅಧಿವೇಶನದಲ್ಲಿ ಈ ಶಾಸಕ ಮುಂದಿಟ್ಟ ಬೇಡಿಕೆಗೆ ಎಡರಂಗ ಸರ್ಕಾರ ಹಸಿರು ನಿಶಾನೆ ತೋರಿತು. ಅಷ್ಟೇ ಅಲ್ಲ, ಅಕಾಡೆಮಿ ರಚನೆಯನ್ನು ಘೋಷಿಸಿ, ವರ್ಷ ಪೂರ್ತಿಯಾಗುವ ಮೊದಲೇ ಅಧಿಕೃತವಾಗಿ ಚಾಲನೆಯನ್ನೂ ನೀಡಿತು. ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವುದು ಅಕಾಡೆಮಿಯ ಕಾರ್ಯತಂತ್ರ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎನ್ನುವುದು ಅಚ್ಯುತಾನಂದನ್ ಅವರ ಗಟ್ಟಿ ಮಾತು. ತುಳು ಭಾಷೆಯ ಸಾಹಿತ್ಯ ಕೃತಿಗಳು ಈಗ ಕನ್ನಡ ಲಿಪಿಯಲ್ಲಿ ಲಭ್ಯವಿವೆ. ಆದರೆ ತುಳು ಭಾಷೆಗೂ ಈಗ ಲಿಪಿ ಪತ್ತೆಯಾಗಿದೆ. ಹೀಗಾಗಿ ತುಳು ಲಿಪಿಯನ್ನು ಜನಪ್ರಿಯಗೊಳಿಸುವ ಕೆಲಸವಾಗಬೇಕು. ತುಳು ಸಾಹಿತ್ಯದ ಪ್ರಧಾನ ಕೃತಿಗಳು ತುಳು ಲಿಪಿಯಲ್ಲೇ ಮರುಮುದ್ರಣಗೊಳ್ಳಬೇಕು. ಅಲ್ಪಸಂಖ್ಯಾತರ ಭಾಷೆ ಎಂಬ ಕಾರಣಕ್ಕೆ ತುಳು ಭಾಷೆಯನ್ನು ಶಾಲೆಗಳಲ್ಲಿ ಕಲಿಸುವ ಬಗ್ಗೆ ಚಿಂತನೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ತುಳು ಅಕಾಡೆಮಿಯ ಜತೆ ಸೇರಿ ಕೇರಳ ತುಳು ಅಕಾಡೆಮಿ ಕಾರ್ಯಕ್ರಮ ರೂಪಿಸಲಿದೆ ಎಂದು ಅವರು ಹೇಳಿದರು. ಕೇರಳದ ಶಿಕ್ಷಣ ಮತ್ತು ಸಾಂಸ್ಕೃತಿಕ ಸಚಿವ ಎಂ.ಎ. ಬೇಬಿ ಅಧ್ಯಕ್ಷತೆ ವಹಿಸಿದ್ದರು.. ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗರಾಜ ಶೆಟ್ಟಿ, ಕಾಸರಗೋಡು ಸಂಸದ ಪಿ.ಕರುಣಾಕರನ್ ಹಾಜರಿದ್ದರು.

2006: ಎರಡು ಬಾರಿ ಒಲಿಂಪಿಕ್ ಡೆಕಾತ್ಲಾನ್ ಚಾಂಪಿಯನ್ ಆಗಿದ್ದ ಅಮೆರಿಕದ ಬಾಬ್ ಮಥಾಯಿಸ್ (75) ಕ್ಯಾಲಿಫೋರ್ನಿಯಾದಲ್ಲಿ ನಿಧನರಾದರು. 1948ರ ಲಂಡನ್ ಒಲಿಂಪಿಕ್ಸಿನಲ್ಲಿ ಮಥಾಯಿಸ್ ತಮ್ಮ ಮೊದಲ ಚಿನ್ನ ಗೆದ್ದಿದ್ದರು. 17ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. 1952ರ ಹೆಲ್ಸಿಂಕಿ ಒಲಿಂಪಿಕ್ಸಿನಲ್ಲೂ ಮಥಾಯಿಸ್ ಡೆಕಾತ್ಲಾನ್ ಸ್ವರ್ಣವನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದರು.

2006: ನ್ಯೂಯಾರ್ಕಿನಲ್ಲಿ ನಡೆದ ಅಮೆರಿಕ ಓಪನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಸಿಂಗಲ್ಸಿನ ಮೂರನೇ ಸುತ್ತಿನ ಪಂದ್ಯದದಲ್ಲಿ ಜರ್ಮನಿಯ ಬೆಂಜಮಿನ್ ಬೆಕ್ಕರ್ ಎದುರಿನಲ್ಲಿ ಪರಾಭವ ಅನುಭವಿಸುವುದರೊಂದಿಗೆ ಅಮೆರಿಕದ ಅಪ್ರತಿಮ ಟೆನಿಸ್ ಆಟಗಾರ ಆ್ಯಂಡ್ರೆ ಅಗಾಸ್ಸಿ ಟೆನಿಸ್ ರಂಗಕ್ಕೆ ವಿದಾಯ ಹೇಳಿದರು.

2006: ಅಮೆರಿಕದ ಬಾಲ್ಟಿಮೋರ್ಸಿನಲ್ಲಿ ನಡೆದ ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರೆಬಿತ್ತು.

2006: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮವಂತ್ರಿ ಸಿದ್ದರಾಮಯ್ಯ ನೇತೃತ್ವದ ಅಖಿಲ ಭಾರತ ಪ್ರಗತಿಪರ ಜನತಾದಳವು ಕಾಂಗ್ರೆಸ್ ಪಕ್ಷದಲ್ಲಿ ವಿಧ್ಯುಕ್ತವಾಗಿ ವಿಲೀನಗೊಂಡಿತು.

2006: ವೋಲ್ಕರ್ ಸಮಿತಿ ಬಹಿರಂಗಪಡಿಸಿದ ಇರಾಕಿನ ಆಹಾರಕ್ಕಾಗಿ ತೈಲ ಹಗರಣ ಕುರಿತು ತನಿಖೆ ಆರಂಭಿಸಿದ 10 ತಿಂಗಳ ಬಳಿಕ ಕೊನೆಗೂ ಜಾರಿ ನಿರ್ದೇಶನಾಲವವು ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್, ಪುತ್ರ ಜಗತ್ ಮತ್ತಿತರರಿಗೆ ನೋಟಿಸ್ ಜಾರಿ ಮಾಡಿತು.

1994: ಇಪ್ಪತ್ತೊಂದು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆಯಲು ಕೇಂದ್ರ ಸರ್ಕಾರದ ನಿರ್ಧಾರ.

1976: ಅಮೆರಿಕದ ಪ್ರಪ್ರಥಮ ಮಾನವ ರಹಿತ ಬಾಹ್ಯಾಕಾಶ ನೌಕೆ ವೈಕಿಂಗ್ 2 ಮಂಗಳ ಗ್ರಹದಲ್ಲಿ ಇಳಿಯಿತು. ಭೂಮಿಯಿಂದ ಹೊರಟು ಹೆಚ್ಚು ಕಡಿಮೆ ಒಂದು ವರ್ಷ ಕಾಲ ಪ್ರಯಾಣ ನಡೆಸಿದ ಬಳಿಕ ಮಂಗಳ ಗ್ರಹ ತಲುಪಿದ ಈ ಬಾಹ್ಯಾಕಾಶ ನೌಕೆ ಮೊತ್ತ ಮೊದಲ ಬಾರಿಗೆ ಈ ಗ್ರಹದ ಸಮೀಪದಿಂದ ವರ್ಣ ಛಾಯಾಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿತು. ಗ್ರಹದ ಮೇಲಿನ ವಾತಾವರಣ, ಮೇಲ್ಮೈ ಬಗೆಗಿನ ವಿವರಗಳನ್ನೂ ಸಂಗ್ರಹಿಸಿತು.

1967: ರಸ್ತೆಯ ಬಲಬದಿಯಲ್ಲಿ ವಾಹನ ಚಲಿಸಲು ಸ್ವೀಡನ್ನಿನಲ್ಲಿ ಒಪ್ಪಿಗೆ.

1947: ಸಾಹಿತಿ ಎನ್.ಎಸ್. ತಿಮ್ಮೇಗೌಡ ಜನನ.

1939: ಬ್ರಿಟನ್, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಮತ್ತು ಫ್ರಾನ್ಸ್ ಜರ್ಮನಿಯ ವಿರುದ್ಧ ಸಮರ ಘೋಷಣೆ ಮಾಡಿದವು. ಅದೇ ದಿನ ಮಹಿಳೆಯರು ಮತ್ತು ಮಕ್ಕಳನ್ನು ಅಮೆರಿಕಕ್ಕೆ ಒಯ್ಯುತ್ತಿದ್ದ ಅಥೇನಿಯಾ ನೌಕೆಯನ್ನು ಯು-ಬೋಟ್ ಮೂಲಕ ನೀರೊಳಗಿಂದ ಬಾಂಬ್ ಸ್ಫೋಟಿಸಿ ಮುಳುಗಿಸಲಾಯಿತು. ನೌಕೆಯಲ್ಲಿದ್ದ 112 ಜನ ಮೃತರಾದರು.

1929: ಸಾಹಿತಿ ಗೋಪಾಲಕೃಷ್ಣ ಪಿ. ನಾಯಕ್ ಜನನ.

1899: ಸಾಹಿತಿ ಹಾಗೂ ತತ್ವಶಾಸ್ತ್ರದ ಪ್ರಖ್ಯಾತ ಪ್ರಾಧ್ಯಾಪಕರಾಗಿದ್ದ ಯಮುನಾಚಾರ್ಯ (3-9-1899ರಿಂದ 4-1-1970) ಅವರು ನಾರಾಯಣ ಅಯ್ಯಂಗಾರ್- ಮಾಣಿಕ್ಕಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ತತ್ವಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಕೃತಿಗಳನ್ನು ರಚಿಸಿದ ಯಮುನಾಚಾರ್ಯ ಅವರು ತಮ್ಮ ಸಂಪಾದಕತ್ವದಲ್ಲಿ ಪ್ರಕಟಿಸಿದ 20 ಸಂಪುಟಗಳ ಗಾಂಧಿ ಸಾಹಿತ್ಯವು ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ. ದೆಹಲಿಯ ಗಾಂಧಿ ಪೀಸ್ ಪೌಂಡೇಷನ್ ಅಧ್ಯಕ್ಷರಾಗಿಯೂ ಹಲವಾರು ವರ್ಷಗಳ ಸೇವೆ ಸಲ್ಲಿಸಿದ್ದರು.

1783: ಸ್ವತಂತ್ರ ಅಮೆರಿಕದ ಜನ್ಮದಿನವಿದು. ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ನಡುವಣ `ಪ್ಯಾರಿಸ್ ಒಪ್ಪಂದ'ವು (ಟ್ರೀಟಿ ಆಫ್ ಪ್ಯಾರಿಸ್) ಕ್ರಾಂತಿಕಾರಿ ಯುದ್ಧಕ್ಕೆ ಮಂಗಳ ಹಾಡಿ ಅಮೆರಿಕವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಸ್ಥಾಪನೆ ಮಾಡಿತು. ಬೆಂಜಮಿನ್ ಫ್ರಾಂಕ್ಲಿನ್, ಜಾನ್ ಆಡಮ್ಸ್ ಮತ್ತು ಜಾನ್ ಜೇ ಅವರು ಮಾತುಕತೆಯಲ್ಲಿ ಅಮೆರಿಕನ್ನರನ್ನು ಪ್ರತಿನಿಧಿಸಿದ್ದರು.

1658: ಇಂಗ್ಲೆಂಡಿನ ಲಾರ್ಡ್ ಪ್ರೊಟೆಕ್ಟರ್ ಒಲಿವರ್ ಕ್ರಾಮ್ ವೆಲ್ ಲಂಡನ್ನಿನ ವೈಟ್ ಹಾಲಿನಲ್ಲಿ ಮೃತರಾದರು. ಅವರ ಪುತ್ರ ರಿಚರ್ಡ್ ಇಂಗ್ಲೆಂಡಿನ ನೂತನ ಪ್ರೊಟೆಕ್ಟರ್ ಆದರು.

No comments:

Advertisement