Monday, September 1, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 1

ಇಂದಿನ ಇತಿಹಾಸ

ಸೆಪ್ಟೆಂಬರ್ 1

ಸ್ವಾಮಿ ಪ್ರಭುಪಾದ ಎಂದೇ ಖ್ಯಾತರಾದ ಭಾರತದ ಧಾರ್ಮಿಕ ಧುರೀಣ ಎ.ಸಿ. ಭಕ್ತಿವೇದಾಂತ (1-9-1896ರಿಂದ 14-11-1977) ಜನ್ಮದಿನ. ಕೋಲ್ಕತಾದಲ್ಲಿ ಜನಿಸಿದ ಇವರು 54 ವರ್ಷಗಳ ಸಾಂಸಾರಿಕ ಜೀವನದ ನಂತರ ಸನ್ಯಾಸ ಸ್ವೀಕರಿಸಿದರು. ಆಧ್ಯಾತ್ಮಿಕ ಗುರು, ಭಕ್ತಿ ಸಿದ್ಧಾಂತ ಸರಸ್ವತಿ ಗೋಸ್ವಾಮಿ ಪ್ರಭುಪಾದರ ಗುರು. ಇವರು 1965ರಲ್ಲಿ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ ನೆಸ್ (ಇಸ್ಕಾನ್) ಸ್ಥಾಪಿಸಿದರು.

2007: ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕವಾಗಿ ಶಿಕ್ಷಿಸುವ ಹಾಗೂ ಅವಮಾನ ಮಾಡುವ ಅಧಿಕಾರ ಶಿಕ್ಷಕರಿಗಿಲ್ಲ. ಒಂದು ವೇಳೆ ಶಿಕ್ಷಕರು ಈ ಸಾಹಸಕ್ಕೆ ಕೈಹಾಕಿದರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ಸುತ್ತೋಲೆ ಹೊರಡಿಸಿ, ಎಲ್ಲ ಜಿಲ್ಲಾ ಉಪನಿರ್ದೇಶಕರ ಕಚೇರಿಗಳಿಗೆ ಕಳುಹಿಸಿತು. ಬೆಂಗಳೂರಿನಲ್ಲಿ ಆರನೇ ತರಗತಿಯ ಕೆ. ಸಂಗೀತಾ ಎಂಬ ಬಾಲಕಿಯ ಮೇಲೆ ಶಾಲಾ ಶಿಕ್ಷಕಿಯರು ನಡೆಸಿದ ಹಲ್ಲೆ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿದ ನಿರ್ದೇಶನಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಸುತ್ತೋಲೆ ಹೊರಡಿಸಿತು. ಸುತ್ತೋಲೆಯ ಪ್ರಕಾರ ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಡೆಯುವ, ಜಿಗುಟುವ, ಶಾಲೆಯ ಸುತ್ತ ಓಡಿಸುವ, ಒಂಟಿ ಕಾಲಿನಲ್ಲಿ ಮತ್ತು ಬೆಂಚಿನ ಮೇಲೆ ನಿಲ್ಲಿಸುವ ಶಿಕ್ಷೆಗಳನ್ನು ನೀಡಿದರೆ ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷೆ ಎದುರಿಸಬೇಕಾಗುತ್ತದೆ.

2007: ಸಂಗಪಲ್ಲಿ ಬಳಿ ಆಗಸ್ಟ್ 24ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಸಾರ್ವಜನಿಕ ಸಂಪರ್ಕ ನಿರ್ದೇಶಕ ಎಸ್. ಕೃಷ್ಣಮೂರ್ತಿ ತಿರುಪತಿಯ ಆಸ್ಪತ್ರೆಯಲ್ಲಿ ಮೃತರಾದರು. ಈ ಅಪಘಾತದಲ್ಲಿ ಇಸ್ರೊ ಹಿರಿಯ ವಿಜ್ಞಾನಿ ರಾಜೀವ ಲೋಚನ ಸ್ಥಳದಲ್ಲಿಯೇ ಅಸು ನೀಗಿದ್ದರು.

2007: ಬೆಂಗಳೂರು ನಗರದ ಭಗವಾನ್ ಮಹಾವೀರ ಜೈನ್ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಜಿ. ಎನ್. ನಿಶ್ಚಲ್ ತನ್ನ ಮೂಗಿನ ಮೇಲೆ ಕ್ರಿಕೆಟ್ ಬ್ಯಾಟ್ ನೆಟ್ಟಗೆ ಇರಿಸಿಕೊಂಡು ಸಮತೋಲನ ಮಾಡುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ಹೆಸರು ದಾಖಲಿಸಲು ಯತ್ನಿಸಿದ. ಪ್ರೆಸ್ ಕ್ಲಬ್ ಆವರಣದಲ್ಲಿ ಮೂಗಿನ ಮೇಲೆ ಸುಮಾರು 1.25 ಕೆ.ಜಿ. ತೂಕವಿರುವ ಕ್ರಿಕೆಟ್ ಬ್ಯಾಟನ್ನು ನೆಟ್ಟಗೆ ನಿಲ್ಲಿಸಿಕೊಂಡು ಸಮತೋಲನ ಕಾಯ್ದುಕೊಳ್ಳುವಲ್ಲಿ ಈತ ಯಶಸ್ವಿಯಾದ. ``ಈ ಅಭ್ಯಾಸವನ್ನು ಗಿನ್ನೆಸ್ ಪುಸ್ತಕದಲ್ಲಿ ದಾಖಲಿಸಲು ಪ್ರಾಥಮಿಕ ಹಂತದಲ್ಲಿ ಪ್ರಯತ್ನ ನಡೆಸಿರುವೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡಿಸಿನಿಂದ ಅನುಮತಿಗೆ ಕಾಯುತ್ತಿರುವೆ. ನಂತರ ಲಿಮ್ಕಾದಲ್ಲೂ ದಾಖಲೆ ಮಾಡುವೆ'' ಎಂದು ಆತ ಹೇಳಿದ. ಈತ ಗಿರಿನಗರದ ನಿವಾಸಿಗಳಾದ ಜಿ. ನೇತ್ರಾನಂದ್ ಮತ್ತು ಲತಾ ನೇತ್ರಾನಂದ್ ದಂಪತಿಯ ಪುತ್ರ.

2006: ಪೆಪ್ಸಿ ಕಂಪೆನಿಯ ನಿಯೋಜಿತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಂದ್ರಾ ನೂಯಿ ಅವರು ನಾಲ್ಕನೇ ಜಗತ್ತಿನ ಪ್ರಭಾವಶಾಲಿ ಮಹಿಳೆಯಾಗಿದ್ದು, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ 13ನೇ ಪ್ರಭಾವಶಾಲಿ ಮಹಿಳೆ ಎಂದು ಫೋರ್ಬ್ ನಿಯತಕಾಲಿಕದ ವಾರ್ಷಿಕ ಸಮೀಕ್ಷೆ ಪ್ರಕಟಿಸಿತು. 2005ರಲ್ಲಿ ಇಂದ್ರಾ ನೂಯಿ ಅವರು ಈ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದ್ದರು. ಈ ಸಲ 4ನೇ ಸ್ಥಾನಕ್ಕೆ ಬಡ್ತಿ ಪಡೆದರು. ಪಟ್ಟಿಗೆ ಸೋನಿಯಾಗಾಂಧಿ ಹೆಸರು ಇದೇ ಮೊದಲ ಬಾರಿಗೆ ಸೇರ್ಪಡೆಗೊಂಡಿತು.

2006: ಇರಾನ್ ಏರ್ ಲೈನ್ಸ್ ಸಂಸ್ಥೆಗೆ ಸೇರಿದ ಪ್ರಯಾಣಿಕರ ವಿಮಾನವೊಂದು ಮಶಾದ್ ವಿಮಾನ ನಿಲ್ದಾಣದಲ್ಲಿ ಕೆಳಗೆ ಇಳಿಯುವಾಗ ಅಪಘಾತಕ್ಕೆ ಈಡಾಗಿ ಕನಿಷ್ಠ 80 ಮಂದಿ ಪ್ರಯಾಣಿಕರು ಅಸು ನೀಗಿದರು. ಅಂತರಿಕ್ಷ ಯಾನಕ್ಕೆ ಬಳಕೆಯಾಗುತ್ತಿದ್ದ ರಷ್ಯ ನಿರ್ಮಿತ `ತುಪಲೊವ್' ವಿಮಾನವು ಬಂದರು ಅಬ್ಬಾಸ್ ನಗರದಿಂದ ಮಶಾದ್ ನಗರಕ್ಕೆ ಆಗಮಿಸಿ ಇಳಿಯಲು ಅಣಿಯಾಗುತ್ತಿದ್ದಾಗ ವಿಮಾನದ ಚಕ್ರಗಳು ಸಿಡಿದು ಬೆಂಕಿ ಹೊತ್ತಿಕೊಂಡಿತು. ವಿಮಾನದಲ್ಲಿ 140 ಮಂದಿ ಪ್ರಯಾಣಿಕರಿದ್ದರು.

2006: ಖ್ಯಾತ ಸರೋದ್ ವಾದಕ ಅಲಿ ಅಕ್ಬರ್ ಖಾನ್ ಅವರ ಪುತ್ರ, ದಂತಕಥೆಯಾಗಿದ್ದ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಮೊಮ್ಮಗ ಅಶೀಶ್ಖಾನ್ ಹಿಂದು ಧರ್ಮಕ್ಕೆ ಮತಾಂತರ ಮಾಡಿದರು. ತ್ರಿಪುರ ಮೂಲದ ತಮ್ಮ ಪೂರ್ವಜರು ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಅದರಿಂದ ಪಾರಾಗಲು ಇಸ್ಲಾಮಿಗೆ ಮತಾಂತರ ಮಾಡಿದ್ದು, ಈಗ ಪ್ರಜ್ಞಾಪೂರ್ವಕವಾಗಿಯೇ ತಾನು ಹಿಂದು ಧರ್ಮಕ್ಕೆ ಮರಳಿದ್ದೇನೆ ಎಂದು ಅಶೀಶ್ ಖಾನ್ ಕೋಲ್ಕತಾದಲ್ಲಿ ಪ್ರಕಟಿಸಿದರು.

2006: ವೈಸ್ ಅಡ್ಮಿರಲ್ ಸುರೇಶ ಮೆಹ್ತಾ ಅವರು ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ನೇಮಕಗೊಂಡರು.
2006: ಆಂಧ್ರಪ್ರದೇಶದ ತೆಲಂಗಾಣ ರಾಷ್ಟ್ರಸಮಿತಿ (ಟಿಆರ್ಎಸ್) ಕೇಂದ್ರದ ಯುಪಿಎ ಸರ್ಕಾರಕ್ಕೆನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು.

2006: ಅಮೆರಿಕದ ಬಾಲ್ಟಿಮೋರಿನಲ್ಲಿ ನಾಲ್ಕನೇ `ಅಕ್ಕ' ವಿಶ್ವ ಕನ್ನಡ ಸಮ್ಮೇಳನವು ಡಾ. ರಾಜ್ ಕುಮಾರ್ ನೆನಪಿನಲ್ಲಿ ಸಜ್ಜುಗೊಂಡ ಸಭಾಗಣದಲ್ಲಿ ಆರಂಭವಾಯಿತು. ಜಗತ್ತಿನ ವಿವಿಧೆಡೆಗಳಿಂದ 4000 ಕನ್ನಡಿಗರು ಈ ಸಮ್ಮೇಳನಕ್ಕೆ ಆಗಮಿಸಿದ್ದರು. ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ಶ್ರೀ ಶ್ರೀ ರವಿ ಶಂಕರ ಅವರ ಆಧ್ಯಾತ್ಮಿಕ ಗೋಷ್ಠಿಯೊಂದಿಗೆ ಸಮ್ಮೇಳನ ವಿಧ್ಯುಕ್ತವಾಗಿ ಆರಂಭಗೊಂಡಿತು.

2006: ಪಾಕಿಸ್ತಾನಿ ವಾಯುಪಡೆಯ ಬಾಂಬ್ ದಾಳಿಗೆ ವಾರದ ಹಿಂದೆ ಬಲಿಯಾದ ಬಲೂಚಿಸ್ಥಾನದ ಬುಡಕಟ್ಟು ಹೋರಾಟದ ಹಾಗೂ ಬಲೂಚಿಸ್ಥಾನ್ ಲಿಬರೇಶನ್ ಆರ್ಮಿಯ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ತಿ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬ ಸದಸ್ಯರಿಗೂ ತೋರಿಸದೆ, ರಹಸ್ಯವಾಗಿ ಅವರ ಹಿರಿಯರಿಗೆ ಸೇರಿದ ದೇರಾ ಬುಗ್ತಿ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಪಾಕಿಸ್ಥಾನಿ ಸೇನಾ ಕಾರ್ಯಾಚರಣೆಯಲ್ಲಿ ಹತರಾದ ಬುಗ್ತಿ ಅವರ ಶವವನ್ನು ಐದು ದಿನಗಳ ಬಳಿಕ ಒಂದು ದಿನ ಹಿಂದೆಯಷ್ಟೇ ಬಲೂಚಿಸ್ಥಾನದ ಕೊಹ್ಲು ಜಿಲ್ಲೆಯ ತಾರ್ತಾನಿ ಪ್ರದೇಶದ ಗುಹೆಯೊಂದರಲ್ಲಿ ಪತ್ತೆ ಹಚ್ಚಿ ಗುರುತಿಸಲಾಗಿತ್ತು.

1999: ಬಾಹ್ಯಾಕಾಶ ವಿಜ್ಞಾನಿ ಡಾ. ಎಸ್. ಶ್ರೀನಿವಾಸನ್ ನಿಧನ.

1985: ನ್ಯೂಫೌಂಡ್ ಲ್ಯಾಂಡಿನ ಕರಾವಳಿ ಸಮೀಪ ಸಮುದ್ರದಲ್ಲಿ ಮುಳುಗಿದ ಟೈಟಾನಿಕ್ ನೌಕೆಯ ಅವಶೇಷ ಪತ್ತೆಯಾಯಿತು. ಫ್ರಾನ್ಸ್ ಹಾಗೂ ಅಮೆರಿಕ ಕೈಗೊಂಡ ಜಂಟಿ ಯತ್ನದ ಭಾಗವಾಗಿ ರಾಬರ್ಟ್ ಬಲ್ಲಾರ್ಡ್ ಹಾಗೂ ಜೀನ್ ಲೂಯಿ ಮಿಚೆಲ್ ಅವರು ಟೈಟಾನಿಕ್ ಅವಶೇಷ ಪತ್ತೆಗೆ ಯತ್ನಿಸಿ ಸಫಲರಾದರು. ನೌಕೆ ನ್ಯೂಫೌಂಡ್ ಲ್ಯಾಂಡಿನ ಸೇಂಟ್ ಜಾನ್ಸ್ ಗೆ ಆಗ್ನೇಯಭಾಗದಲ್ಲಿ 375 ಕಿಮೀ ದೂರದಲ್ಲಿ ಸಮುದ್ರಮಟ್ಟಕ್ಕಿಂತ 12,460 ಅಡಿ ಕೆಳಗೆ ಇತ್ತು.

1972: ಅಮೆರಿಕದ ರಾಬರ್ಟ್ `ಬಾಬ್ಬಿ' ಫಿಶರ್ ಅವರು ಐಸ್ ಲ್ಯಾಂಡಿನ ರೇಕ್ಯಾವಿಕ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಸೋವಿಯತ್ ಯೂನಿಯನ್ನಿನ ಬೋರಿಸ್ ಸ್ಪಾಸ್ಕಿ ಅವರನ್ನು ಪರಾಭವಗೊಳಿಸಿ ವಿಶ್ವ ಚೆಸ್ ಕಿರೀಟವನ್ನು ಗೆದ್ದುಕೊಂಡರು. ಈ ಪ್ರಶಸ್ತಿಯನ್ನು ಗೆದ್ದುಕೊಂಡ ಮೊದಲ ರಷ್ಯೇತರ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. 20 ವರ್ಷಗಳ ಬಳಿಕ 50 ಲಕ್ಷ ಡಾಲರುಗಳ ಬಹುಮಾನದ ಮೊತ್ತಕ್ಕಾಗಿ ನಿಗದಿಯಾದ ಸ್ಪರ್ಧೆಯಲ್ಲಿ ಬೋರಿಸ್ ಸ್ಪಾಸ್ಕಿ ಅವರ ಜತೆಗೆ ಮರುಸ್ಪರ್ಧೆಗೆ ಇಳಿಯುವ ಹಿಂದಿನ ದಿನ ರಾಬರ್ಟ್ ಅವರು ಬೋಸ್ನಿಯಾದ ಸ್ವೇತಿ ಸ್ಟೆಫಾನಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಯುಗೋಸ್ಲಾವಿಯಾ ವಿರುದ್ಧ ವಿಶ್ವಸಂಸ್ಥೆಯ ದಿಗ್ಭಂಧನ ಹಾಗೂ ಅಮೆರಿಕದ ಹಣಕಾಸು ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಾವು ನಿರ್ಧರಿಸಿದ್ದಾಗಿ ಅವರು ಹೇಳಿದರು. ಮರುದಿನ ನಡೆದ ಸ್ಪರ್ಧೆಯಲ್ಲಿ ರಾಬರ್ಟ್ ಅವರು ಸ್ಪಾಸ್ಕಿ ಅವರನ್ನು ಪರಾಭವಗೊಳಿಸಿದರು.

1962: ಸಾಹಿತಿ ಹಂಸ ಆರ್. ಜನನ.

1957: ಸಾಹಿತಿ ಪ್ರೀತಿ ಶುಭ ಚಂದ್ರ ಜನನ.

1956: ಕುಮಾರಿ ಸರಳಾ ಖನ್ನಾ ಐ.ಪಿ.ಎಸ್. ಅವರು ಸಿಮ್ಲಾ ಜಿಲ್ಲಾಧಿಕಾರಿಯಾಗಿ ಈದಿನ ಅಧಿಕಾರ ವಹಿಸಿಕೊಂಡರು. ಭಾರತದ ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆ ಇವರದಾಯಿತು.

1956: ಭಾರತೀಯ ಜೀವ ವಿಮಾ ನಿಗಮ (ಎಲ್ಲೈಸಿ) ಅಸ್ತಿತ್ವಕ್ಕೆ ಬಂತು.

1948: ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ.

1948: ಸಾಹಿತಿ ಉಮಾರಾವ್ ಜನನ.

1948: ಕಥೆಗಾರ್ತಿ ಗಂಗಾ ಪಾದೇಕಲ್ ಜನನ.

1947: ಇಂಡಿಯನ್ ಸ್ಟಾಂಡರ್ಡ್ ಟೈಮ್ (ಐಎಸ್ಟಿ) ಅನುಷ್ಠಾನಗೊಂಡಿತು. ಭಾರತದಾದ್ಯಂತ ಎ್ಲಲ ಗಡಿಯಾರಗಳಲ್ಲಿ ಐಎಸ್ಟಿ ಪ್ರಕಾರವೇ ಗಂಟೆ ನಿಗದಿಯಾಯಿತು.

1947: ಹಿಂದುಗಳು ಮತ್ತು ಮುಸ್ಲಿಮರ ನಡುವೆ ಒಗ್ಗಟ್ಟು ಮೂಡಿಸುವ ಸಲುವಾಗಿ ಮಹಾತ್ಮ ಗಾಂಧಿ ಅವರಿಂದ ಉಪವಾಸ.

1942: ರಾಸ್ ಬಿಹಾರಿ ಬೋಸ್ ಅವರು 50,000 ಸೈನಿಕರನ್ನು ಒಳಗೊಂಡ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸಂಘಟಿಸಿದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು 1943ರ ಆಗಸ್ಟ್ 25ರಂದು ಸೇನೆಯ ಪರಮೋಚ್ಚ ನಾಯಕರಾಗಿ (ಸುಪ್ರೀಮ್ ಕಮಾಂಡ್) ಅಧಿಕಾರ ವಹಿಸಿಕೊಂಡರು.

1939: ನಾಝಿ ಜರ್ಮನಿಯ ಪೋಲಂಡ್ ಮೇಲೆ ಆಕ್ರಮಣ ನಡೆಸುವುದರೊಂದಿಗೆ ಎರಡನೇ ಜಾಗತಿಕ ಸಮರ ಆರಂಭಗೊಂಡಿತು.

1938: ಹಾಸ್ಯ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಸಾಹಿತಿ ಎಂ.ಪಿ. ಮನೋಹರ ಚಂದ್ರನ್ ಅವರು ಪುಟ್ಟಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಜನಿಸಿದರು. ಮಾಸಿಕ ಒಂದರಲ್ಲಿ ಕಂಡ ಅಪೂರ್ಣ ಕಥೆಯನ್ನು ಪೂರ್ಣಗೊಳಿಸುವ ಮೂಲಕ ಅಚಾನಕ್ ಆಗಿ ಸಾಹಿತ್ಯ ಲೋಕ ಪ್ರವೇಶಿಸಿದ ಮನೋಹರ ಚಂದ್ರನ್ ಆಯ್ದುಕೊಂಡದ್ದು ಹಾಸ್ಯ ಸಾಹಿತ್ಯ. ಅವರ ಹಾಸ್ಯ ಲೇಖನಗಳು ಪ್ರಮುಖ ಪತ್ರಿಕೆ, ವಿಶೇಷಾಂಕಗಳಲ್ಲಿ ಪ್ರಕಟವಾಗಿವೆ. ಹಲವಾರು ಹಾಸ್ಯ ಸಂಕಲನ ರೂಪದಲ್ಲೂ ಬಂದಿವೆ. 20ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.

1928: ಖ್ಯಾತ ಸಾಹಿತಿ ತ್ರಿವೇಣಿ ಜನನ.

1928: ಸಾಹಿತಿ ಎಸ್.ಎಂ. ವೃಷಭೇಂದ್ರಸ್ವಾಮಿ ಜನನ.

1923: ಟೋಕಿಯೋ ಮತ್ತು ಯೋಕೋಹೋಮಾದಲ್ಲಿ ಭೂಕಂಪ. 1,06,000 ಮಂದಿ ಬಲಿ.

1896: ಸ್ವಾಮಿ ಪ್ರಭುಪಾದ ಎಂದೇ ಖ್ಯಾತರಾದ ಭಾರತದ ಧಾರ್ಮಿಕ ಧುರೀಣ ಎ.ಸಿ. ಭಕ್ತಿವೇದಾಂತ (1-9-1896ರಿಂದ 14-11-1977) ಜನ್ಮದಿನ. ಕೋಲ್ಕತಾದಲ್ಲಿ ಜನಿಸಿದ ಇವರು 54 ವರ್ಷಗಳ ಸಾಂಸಾರಿಕ ಜೀವನದ ನಂತರ ಸನ್ಯಾಸ ಸ್ವೀಕರಿಸಿದರು. ಆಧ್ಯಾತ್ಮಿಕ ಗುರು, ಭಕ್ತಿ ಸಿದ್ಧಾಂತ ಸರಸ್ವತಿ ಗೋಸ್ವಾಮಿ ಪ್ರಭುಪಾದರ ಗುರು. ಇವರು 1965ರಲ್ಲಿ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ ನೆಸ್ (ಇಸ್ಕಾನ್) ಸ್ಥಾಪಿಸಿದರು. ಹರೇ ಕೃಷ್ಣ ಚಳವಳಿ ಎಂದೇ ಇದು ಖ್ಯಾತಿ ಪಡೆಯಿತು. 1977ರ ನವೆಂಬರ್ 14ರಂದು ಇಹಲೋಕ ತ್ಯಜಿಸಿದರು.

No comments:

Advertisement