ಇಂದಿನ ಇತಿಹಾಸ
ಸೆಪ್ಟೆಂಬರ್ 28
ಭಾರತದ ಸಂಗೀತ ಕ್ಷೇತ್ರದ ಕೋಗಿಲೆ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಜನನ. ಸುಮಾರು 50,000 ಗೀತೆಗಳನ್ನು ಹಾಡಿರುವ ಲತಾ ಸಂಗೀತ ಕ್ಷೇತ್ರದಲ್ಲಿ ಐದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ಛಾಪನ್ನು ಒತ್ತಿದ್ದಲ್ಲದೆ ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮುಡುಪಿಟ್ಟವರು.
ಭಾರತದ ಸಂಗೀತ ಕ್ಷೇತ್ರದ ಕೋಗಿಲೆ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಜನನ. ಸುಮಾರು 50,000 ಗೀತೆಗಳನ್ನು ಹಾಡಿರುವ ಲತಾ ಸಂಗೀತ ಕ್ಷೇತ್ರದಲ್ಲಿ ಐದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ಛಾಪನ್ನು ಒತ್ತಿದ್ದಲ್ಲದೆ ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮುಡುಪಿಟ್ಟವರು.
2007: ಬೆಂಗಳೂರಿನಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ 2006ನೇ ಸಾಲಿನ 'ಬಸವ ಪುರಸ್ಕಾರ' ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
2007: ಕರ್ನಾಟಕದ 209 ನಗರ ಸ್ಥಳೀಯ ಸಂಸ್ಥೆ, ನಗರಸಭೆ, ನಗರಪಾಲಿಕೆಗಳಿಗೆ ಚುನಾವಣೆ ನಡೆಯಿತು.
2007: ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ ರಾಮಸೇತು ಒಡೆದು ಹಾಕುವುದರಿಂದ ಜೀವ ವೈವಿಧ್ಯತೆಗೆ ಹಾಗೂ ಪರಿಸರಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ರಾಮಸೇತು ಕೇವಲ ಒಂದು ಮರಳಿನ ದಿಬ್ಬವಷ್ಟೇ ಅಲ್ಲ, ಅದು ಸಮುದ್ರದ ಆಳದಲ್ಲಿ ಉಷ್ಣತೆಯ ಹರಿವಿಗೆ ಸಾಕಷ್ಟು ತಡೆ ಒಡ್ಡುತ್ತಿದೆ. ಕಡಲಾಳದಲ್ಲಿ ಸಂಭವಿಸುವ ಭೂ ಕಂಪನಕ್ಕೂ ತಡೆ ನೀಡುತ್ತದೆ. ಅಲ್ಲದೇ ಪರಿಸರಕ್ಕೆ ಸಾಕಷ್ಟು ಅನುಕೂಲಗಳಿವೆ. ವ್ಯಾವಹಾರಿಕ ಲಾಭಕ್ಕಾಗಿ ಅದನ್ನು ಒಡೆದು ಹಾಕಿದರೆ ಮುಂದೊಂದು ದಿನ ಅಪಾಯ ಖಚಿತ. ರಾಮಸೇತು ಸಮುದ್ರದ ಒಳಗೆ ಭೂಕುಸಿತದಿಂದ ಜಲಾಂತರ್ಗಾಮಿಗಳು ಮುಳುಗದಂತೆಯೂ ಕಡಿವಾಣ ಹಾಕುತ್ತಿದೆ. ಕೆಲವು ಅಧ್ಯಯನಗಳು ಇದನ್ನು ದೃಢಪಡಿಸಿವೆ ಎಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ಗೋಪಾಲಕೃಷ್ಣನ್ ಹೇಳಿದರು. `ವೈಜ್ಞಾನಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿರುವ ಈ ಯೋಜನೆ ಅನುಷ್ಠಾನದ ಕುರಿತು ಕೇಂದ್ರ ಸರ್ಕಾರ ಪ್ರಾಮಾಣಿಕ ಚರ್ಚೆ ನಡೆಸುತ್ತಿಲ್ಲ. ಹಾಗಾಗಿ ಸರ್ಕಾರ ಇದರ ಸಮಗ್ರ ಅಧ್ಯಯನಕ್ಕೆ ಸಮಿತಿ ರಚಿಸಬೇಕು' ಎಂದು ಗೋಪಾಲಕೃಷ್ಣನ್ ಆಗ್ರಹಿಸಿದರು.
2007: ಅಂತರ್ ಗ್ರಹ ಸಾರಿಗೆಗೆ ಮಾದರಿ ಎಂದು ಹೇಳಲಾದ ಗಗನನೌಕೆಯೊಂದನ್ನು ಕೇಪ್ ಕೆನವರಾಲಿನಿಂದ ಹಾರಿ ಬಿಡಲಾಯಿತು. 'ಡಾನ್' ಎಂದು ಕರೆಯಲಾಗುವ ಈ ಮಾನವ ರಹಿತ ನೌಕೆ ಮಂಗಳ ಮತ್ತು ಗುರು ಗ್ರಹದ ನಡುವೆ ಸಂಚರಿಸಲಿದೆ. ಕಡಿಮೆ ಇಂಧನದಲ್ಲಿ ಹೆಚ್ಚು ದೂರ ಕ್ರಮಿಸುವ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ನಾಸಾ ಪ್ರಕಟಿಸಿತು. ಭೂ ಕಕ್ಷೆಯನ್ನು ಬಿಟ್ಟ ನಂತರ ಡಾನ್ ತನ್ನ ರೆಕ್ಕೆಗಳನ್ನು ಬಿಡಿಸಿಕೊಂಡು ಸೌರಶಕ್ತಿಯೊಂದಿಗೆ ಮುಂದಿನ ಪ್ರಯಾಣ ಬೆಳೆಸುವುದು. ಪ್ರಯಾಣದ ಅವಧಿಯಲ್ಲಿ ಡಾನ್, ಮಂಗಳ ಮತ್ತು ಗುರು ಗ್ರಹಗಳ ಲಕ್ಷಣಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲುವುದು. ನಾಲ್ಕು ವರ್ಷಗಳ ಬಳಿಕ ನೌಕೆ ಈ ಎರಡು ಗ್ರಹಗಳ ನಡುವೆ ಇರುವ ಭೂಮಿಯ ಉಪಗ್ರಹ ಚಂದ್ರನನ್ನು ಹೋಲುವ ವೆಸ್ಟಾ ಆಕಾಶಕಾಯದ ಮೇಲೆ ಇಳಿದು ಆರು ತಿಂಗಳ ಕಾಲ ಅಲ್ಲಿ ಶೋಧ ನಡೆಸಲಿದೆ. ನಂತರ ಕಿರು ಆಕಾಶಕಾಯ ಸೆರೆಸ್ ನತ್ತ ಪಯಣ ಬೆಳೆಸುವುದು.
2007: 1998ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ ಆರೋಪಗಳಿಂದ ಕೇರಳ ಮೂಲದ ಪಿಡಿಪಿ ನಾಯಕ ಅಬ್ಬುಲ್ ನಾಸಿರ್ ಮದನಿ ಸೇರಿ ಎಂಟು ಮಂದಿ ಖುಲಾಸೆಗೊಂಡರು. ಪ್ರಕರಣದಲ್ಲಿ ಷಾಮೀಲಾದ ಆರೋಪ ಸಾಬೀತಾಗದ ಕಾರಣ ಎಂಟು ಮಂದಿಯನ್ನು ಖುಲಾಸೆ ಮಾಡಲಾಗಿದೆ ಎಂದು ಸ್ಫೋಟ ಪ್ರಕರಣದ ವಿಶೇಷ ನ್ಯಾಯಾಧೀಶ ಕೆ. ಉಥಿರಪತಿ ಅವರು ಕೊಯಮತ್ತೂರಿನಲ್ಲಿ ತೀರ್ಪು ನೀಡಿದರು. 1998ರ ಫೆಬ್ರುವರಿ 14ರಂದು ಕೊಯಮತ್ತೂರಿನಲ್ಲಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟಗಳಿಗೆ 58ಮಂದಿ ಬಲಿಯಾಗಿ, ಸುಮಾರು 250 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿ ಸೇರಿ 166 ಜನರನ್ನು ಒಳಸಂಚು ಹಾಗೂ ಕೊಲೆ ಆರೋಪದ ಮೇಲೆ ಬಂಧಿಸಲಾಗಿತ್ತು.
2007: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್ ವಿರುದ್ಧ ಅವಹೇಳನಕಾರಿ ವರದಿ ಪ್ರಕಟಿಸಿದ ಆರೋಪದಲ್ಲಿ `ಮಿಡ್ ಡೇ' ಪತ್ರಿಕೆ ನಾಲ್ವರು ಪತ್ರಕರ್ತರಿಗೆ ದೆಹಲಿ ಹೈಕೋರ್ಟ್ ವಿಧಿಸಿದ ನಾಲ್ಕು ತಿಂಗಳು ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿತು. ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಹಾಗೂ ಪಿ.ಸದಾಶಿವಂ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 21 ರಂದು ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಪತ್ರಿಕೆಯು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಿತು.
2007: ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಕಾಯ್ದೆಯನ್ನು ಅನುಷ್ಠಾನಕ್ಕೆ ತರದಂತೆ ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರಕ್ಕೆ ತಡೆಯಾಜ್ಞೆ ನೀಡಿತು. ಧರ್ಮದ ಆಧಾರದ ಮೇರೆಗೆ ಹಿಂದುಳಿದ ವರ್ಗಗಳನ್ನು ಗುರುತಿಸುವುದು ಸಂವಿಧಾನ ವಿರೋಧಿ ಎಂದು ಹೇಳಿ ಟಿ. ಮುರಳೀಧರ ರಾವ್ ಹಾಗೂ ಕೆ. ಶ್ರೀತೇಜಾ ಅವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಆಂಧ್ರ ಪ್ರದೇಶ ಸರ್ಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ಕುರಿತು 2007ರ ಜುಲೈ 6ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಸುಗ್ರೀವಾಜ್ಞೆಗೆ ತಡೆ ನೀಡುವಂತೆ ಕೋರಿ ಈ ಮೊದಲು ಸಲ್ಲಿಸಿದ್ದ ಅರ್ಜಿಯನ್ನು ಆಂಧ್ರ ಹೈಕೋರ್ಟ್ ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟಿಗೆ ಮೊರೆಹೋಗಿದ್ದರು.
2007: ಪಾಕಿಸ್ಥಾನದ ಮಾಜಿ ಪ್ರಧಾನಿ ಮತ್ತು ಮುಸ್ಲಿಂ ಲೀಗ್-ಎನ್ ಪಕ್ಷದ ಮುಖಂಡ ನವಾಜ್ ಷರೀಫ್ ಅವರನ್ನು ಸೆ.10ರಂದು ಪುನಃ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಿದ ಬಗ್ಗೆ ವಿವರಣೆ ನೀಡುವಂತೆ ಪ್ರಧಾನಿ ಶೌಕತ್ ಅಜೀಜ್ ಸೇರಿ ಹಲವು ಉನ್ನತ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆೆ ಎಂದೂ ನ್ಯಾಯಾಲಯ ಹೇಳಿತು.ನ್ಯಾಯಾಲಯದ ಆದೇಶದ ಹೊರತಾಗಿಯೂ ಷರೀಫ್ ಅವರನ್ನು ದೇಶದೊಳಗೆ ಪ್ರವೇಶಿಸದಂತೆ ತಡೆದು ಸರ್ಕಾರ ಪುನಃ ಗಡೀಪಾರು ಮಾಡಿತು ಎಂದು ಆಪಾದಿಸಿದ ಷರೀಫ್ ಸಂಬಂಧಿ ಹಮ್ಜಾ ಷರೀಫ್ ನ್ಯಾಯಾಲಯದ ಮೊರೆ ಹೋಗಿದ್ದರು.
2007: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ರವಿ ಶಾಸ್ತ್ರಿ ಅವರನ್ನು ಬಿಸಿಸಿಐ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಬಂಡಾಯ ಕ್ರಿಕೆಟ್ ಲೀಗ್ (ಐಸಿಎಲ್) ಜೊತೆಗೆ ಸೇರಿಕೊಂಡದ್ದಕ್ಕಾಗಿ ಕಪಿಲ್ ದೇವ್ ಅವರನ್ನು ಅಧ್ಯಕ್ಷಸ್ಥಾನದಿಂದ ವಜಾ ಮಾಡಿದ ಬಳಿಕ ಉಸ್ತುವಾರಿ ಅಧ್ಯಕ್ಷರಾಗಿ ನೇಮಕಗೊಂಡ ಅಜಯ್ ಶಿರ್ಕೆ ಅವರಿಂದ ರವಿ ಶಾಸ್ತ್ರಿ ಅಧಿಕಾರ ವಹಿಸಿಕೊಳ್ಳುವರು.
2007: ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಪಾಕಿಸ್ಥಾನಿ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಮುಷರಫ್ ಪುನರಾಯ್ಕೆಗೊಳ್ಳುವುದನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಗಳನ್ನು ಕೋರ್ಟ್ ತಳ್ಳಿ ಹಾಕಿತು. 9 ಸದಸ್ಯರ ಪೀಠದ 6 ಮಂದಿ ನ್ಯಾಯಮೂರ್ತಿಗಳು ತಮ್ಮ ನಾಮಪತ್ರ ಸಲ್ಲಿಸಿದ ಜನರಲ್ ಮುಷರಫ್ ಅವರು ಅಕ್ಟೋಬರ್ 6ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದರು. ಆದರೆ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಸೇರಿದಂತೆ ಮೂವರು ನ್ಯಾಯಮೂರ್ತಿಗಳು ಮುಷರಫ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳ ಪರವಾಗಿ ತೀರ್ಪು ನೀಡಿದರು.
2006: ದಲಿತರು ಮತ್ತು ಕೊಳೆಗೇರಿ ಮಹಿಳೆಯರ ಕಲ್ಯಾಣ ಹಾಗೂ ಹಕ್ಕುಗಳ ಹೋರಾಟಗಾರ್ತಿ ಬೆಂಗಳೂರಿನ ರೂತ್ ಮನೋರಮಾ ಅವರು ಪರ್ಯಾಯ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿ ಪಡೆದಿರುವ `ರೈಟ್ ಲೈವ್ಲಿಹುಡ್' ಪ್ರಶಸ್ತಿಗೆ ಆಯ್ಕೆಯಾದರು. ಬ್ರೆಜಿಲಿನ ಚಿಕೋ ವಿಟೇಕರ್ ಫೆರೀರಾ, ಅಮೆರಿಕದ ಡೇನಿಯಲ್ ಎಲ್ಸ್ ಬರ್ಗ್ ಅವರೂ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದರು.
2006: ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಭಾಷಣ ಮಾಡಿದರು. ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಆಡಳಿತವನ್ನು ಚುರುಕುಗೊಳಿಸುವಂತೆ ಅವರು ಸಲಹೆ ಮಾಡಿದರು.
2006: ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜೈಕರ್ ಜೆರೋಮ್ ಅವರಿಗೆ 10,000 ರೂಪಾಯಿ ದಂಡ ವಿಧಿಸಲಾಯಿತು.
1989: ಫಿಲಿಪ್ಪೀನ್ಸಿನ ಪದಚ್ಯುತ ಅಧ್ಯಕ್ಷ ಫರ್ಡಿನಾಂಡ್ ಇ ಮಾರ್ಕೋಸ್ ಅವರು ಗಡೀಪಾರಾಗಿದ್ದಾಗ ಹವಾಯಿಯಲ್ಲಿ ತಮ್ಮ 72ನೇ ವಯಸಿನಲ್ಲಿ ಮೃತರಾದರು.
1978: ಪೋಪ್ ಒಂದನೆಯ ಜಾನ್ ಪಾಲ್ ಅವರು ಪೋಪ್ ಗುರುಗಳಾದ 34 ದಿನಗಳಲ್ಲೇ ನಿಧನರಾದರು. ಇವರು ಪೋಪ್ ಗುರುಗಳಾಗಿದ್ದ ಅವಧಿ ಆಧುನಿಕ ಕಾಲದಲ್ಲಿಯೇ ಅತ್ಯಂತ ಸಂಕ್ಷಿಪ್ತವಾದುದು. ಎರಡು ಹೆಸರುಗಳನ್ನು ಇಟ್ಟುಕೊಂಡ ಮೊದಲ ಪೋಪ್ ಇವರಾಗಿದ್ದರು. ತಮ್ಮ ಹಿಂದಿನ ಪೋಪ್ ಗುರುಗಳಾಗಿದ್ದ 23ನೆಯ ಜಾನ್ ಮತ್ತು 6ನೆಯ ಪಾಲ್ ಅವರ ನೆನಪಿಗಾಗಿ ಎರಡು ಹೆಸರುಗಳನ್ನು ಇವರು ಇಟ್ಟುಕೊಂಡಿದ್ದರು. ಗ್ರಾಮೀಣ ಹಿನ್ನೆಲೆಯಿಂದ ಬಂದು ಈ ಪದವಿಗೆ ಏರಿದ ಮೊದಲ ವ್ಯಕ್ತಿ ಕೂಡಾ ಇವರಾಗಿದ್ದರು.
1970: ಈಜಿಪ್ಟಿನ ಅಧ್ಯಕ್ಷರಾಗಿದ್ದ ಗಮೆಲ್ ಅಬ್ದುಲ್ ನಾಸ್ಸೇರ್ ಅವರು ತಮ್ಮ 52ನೇ ವಯಸಿನಲ್ಲಿ ಮೃತರಾದರು. ಅವರು 1956ರಿಂದ ಈಜಿಪ್ಟಿನ ಅಧ್ಯಕ್ಷರಾಗಿದ್ದರು.
1960: ಸಾಹಿತಿ ಶಾರದಾ ಗೋಪಾಲ ಜನನ.
1959: ಭಾರತದ ಆರತಿ ಸಹಾ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊದಲ ಏಷ್ಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಫ್ರಾನ್ಸಿನಿಂದ ಇಂಗ್ಲೆಂಡ್ವರೆಗಿನ ದೂರವನ್ನು 16 ಗಂಟೆ 20 ನಿಮಿಷಗಳಲ್ಲಿ ಕ್ರಮಿಸಿದರು.
1942: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯನ್ನು (ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ -ಸಿಎಸ್ ಐ ಆರ್) ಭಾರತದಲ್ಲಿ ಸ್ಥಾಪಿಸಲಾಯಿತು. ಶಾಂತಿ ಸ್ವರೂಪ್ ಭಟ್ನಾಗರ್ ಅವರು ಅದರ ಮೊದಲ ನಿರ್ದೇಶಕರಾದರು. ಅವರ ಪ್ರಯತ್ನದ ಫಲವಾಗಿ ಸಿಎಸ್ ಐಆರ್ ವಿವಿಧ ರಂಗಗಳಿಗೆ ಸಂಬಂಧಿಸಿದಂತೆ ಐದು ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಿತು.
1936: ಖ್ಯಾತ ಕಥೆಗಾರ ಎನ್.ಎಸ್. ಚಿದಂಬರರಾವ್ (28-9-1936ರಿಂದ 6-1-2002) ಅವರು ಎನ್. ಶಂಕರಪ್ಪ ಮಾಲೇನೂರು- ಸೀತಮ್ಮ ದಂಪತಿಯ ಮಗನಾಗಿ ದಾವಣಗೆರೆ ಬಳಿಯ ಹದಡಿಯಲ್ಲಿ ಜನಿಸಿದರು. ಸಾಹಿತ್ಯದ ಅಭಿರುಚಿಯಿಂದ ಅವರು ಬರೆದ ಮೊದಲ ಕಥೆ `ಶಾಂತಿ' ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಸ್ಫೂರ್ತಿಯಿಂದ ಕತೆಗಳನ್ನು ಬರೆಯಲಾರಂಭಿಸಿದ ಅವರು ಬರೆದ ಸಣ್ಣ ಕಥೆಗಳ ಸಂಖ್ಯೆ 512. ಸಣ್ಣ ಕಥಾ ಕ್ಷೇತ್ರದಲ್ಲಿ ಇದೊಂದು ದಾಖಲೆ. ಗಮಕ ವಾಚನ, ಗಾಯನ, ನಾಟಕಾಭಿನಯ ಇತ್ಯಾದಿ ಕಲೆಗಳಲ್ಲೂ ಅವರು ಖ್ಯಾತರಾಗಿದ್ದರು.
1934: ಸಾಹಿತಿ ಪಾ.ಶ. ಶ್ರೀನಿವಾಸ ಜನನ.
1929: ಭಾರತದ ಸಂಗೀತ ಕ್ಷೇತ್ರದ ಕೋಗಿಲೆ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಜನನ. ಸುಮಾರು 50,000 ಗೀತೆಗಳನ್ನು ಹಾಡಿರುವ ಲತಾ ಸಂಗೀತ ಕ್ಷೇತ್ರದಲ್ಲಿ ಐದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ಛಾಪನ್ನು ಒತ್ತಿದ್ದಲ್ಲದೆ ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮುಡುಪಿಟ್ಟವರು. 1962ರಲ್ಲಿ ಭಾರತ - ಚೀನಾ ಸಮರದ ಸಂದರ್ಭದಲ್ಲಿ ಲತಾ ಅವರು ಹಾಡಿದ `ಆಯ್ ಮೇರೆ ವತನ್ ಕೇ ಲಗಾನ್', `ಜರಾ ಆಂಖ್ ಮೇ ಭರ್ ಲೋ ಪಾನಿ' ಕವನಗಳನ್ನು ಕೇಳಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಣ್ಣುಗಳಲ್ಲಿ ನೀರು ತುಂಬಿತ್ತು. 2001ರಲ್ಲಿ ಲತಾಗೆ ಭಾರತ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು.
1901: ಇದು ರೇಜರ್ ಹಾಗೂ ಬ್ಲೇಡುಗಳು ಹುಟ್ಟಿದ ದಿನ. ಕಿಂಗ್ ಕ್ಯಾಂಪ್ ಗಿಲ್ಲೆಟ್ ಅವರು ಅಮೆರಿಕನ್ ಸೇಫ್ಟಿ ರೇಜರ್ ಕಂಪೆನಿಯನ್ನು ಸ್ಥಾಪಿಸಿದರು. ಮೆಸಾಚ್ಯುಸೆಟ್ಸ್ ಬೋಸ್ಟನ್ನಿನಲ್ಲಿ ಮೀನಿನ ಅಂಗಡಿಯೊಂದರಲ್ಲಿ ಈ ಕಂಪೆನಿಯ ವ್ಯವಹಾರ ಆರಂಭವಾಯಿತು. 1902ರಲ್ಲಿ ಇದು ಗಿಲ್ಲೆಟ್ ಸೇಫ್ಟಿ ರೇಜರ್ ಕಂಪೆನಿ ಎಂಬ ಹೆಸರು ಪಡೆಯಿತು. 1903ರ ವೇಳೆಗೆ 51 ರೇಜರುಗಳು ಮತ್ತು 168 ಬ್ಲೇಡುಗಳು ಮಾರಾಟವಾದವು. 1904ರ ವೇಳೆಗೆ ಮಾರಾಟ 10 ಲಕ್ಷದ ಗಡಿ ದಾಟಿತು. 1973ರಲ್ಲಿ
ಅದರ ಮಾರಾಟ ಮೊತ್ತ ಮೊದಲ ಬಾರಿಗೆ 100 ಕೋಟಿ ಡಾಲರುಗಳನ್ನು ದಾಟಿತು.
ಅದರ ಮಾರಾಟ ಮೊತ್ತ ಮೊದಲ ಬಾರಿಗೆ 100 ಕೋಟಿ ಡಾಲರುಗಳನ್ನು ದಾಟಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment