ಸಮುದ್ರ ಮಥನ 8:
ಗುಣಗಳಿದ್ದರೆ ಹೇಗಿರಬೇಕು?
ದೋಷ ಮಾತ್ರವಲ್ಲ. ಮುಚ್ಚಿಟ್ಟ ಗುಣವೂ ಹೀಗೇ. ವ್ಯತ್ಯಾಸವಿಷ್ಟೆ. ದೋಷ ಕಿತ್ತು ಹೊರಬಂದಾಗ ಅಸಹ್ಯವೆನಿಸುತ್ತದೆ. ಪೂರ್ವದಲ್ಲಿ ತಳೆದಿದ್ದ ಸದಭಿಪ್ರಾಯ ನುಚ್ಚುನೂರಾಗುತ್ತದೆ. ಗುಣ ಪ್ರಕಟಗೊಂಡಾಗ ಹಾಗಲ್ಲ. ಕಸ್ತೂರಿಯ ಪರಿಮಳದಂತೆ, ಏಲಕ್ಕಿಯ ಸ್ವಾದದಂತೆ ನಾಲ್ಕೂ ಕಡೆಗೂ ವ್ಯಾಪಿಸುತ್ತದೆ. ಮೆಚ್ಚುಗೆ ಮೂಡುತ್ತದೆ. ಅಭಿಪ್ರಾಯ
ಗಟ್ಟಿಗೊಳ್ಳಲು ಶುರುವಿಟ್ಟುಕೊಳ್ಳುತ್ತದೆ.
ಗುಣಗಳ ಬಗ್ಗೆ ಚಿಂತನೆ ನಡೆಸಲು ಒಂದು ಉತ್ತಮ ಉದಾಹರಣೆಯುಂಟು. ಅದು 'ಬೀಜವೃಕ್ಷ ನ್ಯಾಯ'. ಬೀಜದಲ್ಲಿ ಸುಪ್ತವಾಗಿರುವುದು ಮರದಲ್ಲಿ ಪ್ರಕಟವಾಗಿರುತ್ತದೆ. ಬೀಜದಲ್ಲಿಲ್ಲದ್ದು ಮರದಲ್ಲಿರುವುದಿಲ್ಲ. ಮಾವಿನ ಗೊರಟೆಯಿಂದ ಮಾವಿನಮರ, ಹಲಸಿನ ಬೀಜದಿಂದ ಹಲಸಿನಮರ. ಹಾಗಾಗದೇ ಮಾವಿನಲ್ಲಿ ಹಲಸು, ಹಲಸಿನಲ್ಲಿ ಮಾವು ಹೀಗೆಲ್ಲ ಶುರುವಾದರೆ ಹೊಲಸಾಗುತ್ತದೆ.
ಗುಣಗಳ ಕತೆಯೂ ಹಾಗೇ. ನಮ್ಮಲ್ಲಿ ಗುಣಗಳಿಗೆ ಆತ್ಮಗುಣಗಳು ಎಂದು ವಿಶೇಷವಾಗಿ ಹೇಳುತ್ತಾರೆ. ಒಳಗಿನಿಂದ ಸ್ವಾಭಾವಿಕವಾಗಿ ಹೊರಟಿರುವುದು ಮಾತ್ರ ಗುಣ ಎಂಬ ಭಾವದಲ್ಲಿ. ಹಾಗಿರುವ ಗುಣಗಳಿಗೆ ಇತರರಿಂದ ತಮ್ಮನ್ನು ರಕ್ಷಸಿಕೊಳ್ಳುವ ಸಲುವಾಗಿ ಮಾತ್ರ ಎಂಬ ಮಿತಿ ಇರುವುದಿಲ್ಲ.
ಪ್ರದರ್ಶನಕ್ಕೆ ಗುಣಗಳನ್ನು ಲೇಪಿಸಿಕೊಂಡಾಗ ಹಾಗಿರುವುದಿಲ್ಲ. ಸತ್ಯಸಂಧರ ಕತೆ ನೋಡಿ. ಅವರು ಸತ್ಯವಾಡುತ್ತಾರೆ. ಉಳಿದವರು ಸುಳ್ಳಾಡಿ, ತಮ್ಮನ್ನು ಮೋಸಗೊಳಿಸದಿರಲಿ ಎಂಬ ಏಕೈಕ ಉದ್ದೇಶದಿಂದ ಹೊರತು ಮತ್ತೇನಕ್ಕೂ ಅಲ್ಲ. ಹಲವು ಪ್ರಾಮಾಣಿಕರು ಹೇಳುವುದುಂಟು 'ಕೈಯ್ಯನ್ನು ಎಷ್ಟು ಶುದ್ಧವಾಗಿಟ್ಟುಕೊಂಡು ಏನು ಪ್ರಯೋಜನ? ಅವರು ಕೈಯ್ಯನ್ನು ಹೇಗೇ ಇಟ್ಟುಕೊಂಡ್ರೂ ಬೆಳೆಯುತ್ತಿರುವ ರೀತಿ ನೋಡ್ರೀ'.
ಇನ್ನು ಕಳ್ಳತನ ಮಾಡದಿರುವವರು. ಅವರು ಕದಿಯುವುದಿಲ್ಲ. ಏಕೆಂದರೆ ಅದನ್ನು ನೋಡಿ ಇನ್ನೊಬ್ಬರು ತಮ್ಮದನ್ನು ಕದ್ದರೆ ಕಷ್ಟ ಅಂತ.
ಆಡು ಮಾತಿನಲ್ಲಿ ಹೇಳುವುದುಂಟು. ಒಳಗಡೆ ದೋಷ ಇಟ್ಟುಕೊಂಡು ರಾಶಿರಾಶಿ ಒಳ್ಳೆಯ ಬಟ್ಟೆಹಾಕಿ, ಒಳ್ಳೆಯ ಸ್ನೋ, ಪೌಡರ್ ಉಪಯೋಗಿಸಿ, ಒಳ್ಳೆಯ ಕೇಶವಿನ್ಯಾಸ ಮಾಡಿಕೊಂಡು, ಉತ್ತಮೋತ್ತಮವಾದ ವಸ್ತುವಾಹನಗಳನ್ನು ಬಳಸಿದರೆ ಏನು ಬಂತು. ಅದು ಎಲ್ಲೋ ಒಂದು ಕಡೆ ತನ್ನ ಸಣ್ಣ ಬುದ್ಧಿಯನ್ನು ತೋರಿಸದೇ ಬಿಡುವುದಿಲ್ಲ. ಒಳಗಿನ ಒತ್ತಡ ತೀವ್ರವಾದಾಗ ಅದು ಉಕ್ಕುಕ್ಕಿ ಹರಿಯದೇ ಬೇರೆ ಗತಿಯೇ ಇರುವುದಿಲ್ಲ. ಆಗದು ಮೇಲಿಂದ ಮಾಡಿದ ಪಾಲೀಷು, ಸೋಫೆಷ್ಟಿಕೇಷನ್ ಯಾವುದನ್ನೂ ಲೆಕ್ಕಿಸುವುದಿಲ್ಲ.
ದೋಷ ಮಾತ್ರವಲ್ಲ. ಮುಚ್ಚಿಟ್ಟ ಗುಣವೂ ಹೀಗೇ. ವ್ಯತ್ಯಾಸವಿಷ್ಟೆ. ದೋಷ ಕಿತ್ತು ಹೊರಬಂದಾಗ ಅಸಹ್ಯವೆನಿಸುತ್ತದೆ. ಪೂರ್ವದಲ್ಲಿ ತಳೆದಿದ್ದ ಸದಭಿಪ್ರಾಯ ನುಚ್ಚುನೂರಾಗುತ್ತದೆ. ಗುಣ ಪ್ರಕಟಗೊಂಡಾಗ ಹಾಗಲ್ಲ. ಕಸ್ತೂರಿಯ ಪರಿಮಳದಂತೆ, ಏಲಕ್ಕಿಯ ಸ್ವಾದದಂತೆ ನಾಲ್ಕೂ ಕಡೆಗೂ ವ್ಯಾಪಿಸುತ್ತದೆ. ಮೆಚ್ಚುಗೆ ಮೂಡುತ್ತದೆ. ಅಭಿಪ್ರಾಯ ಗಟ್ಟಿಗೊಳ್ಳಲು ಶುರುವಿಟ್ಟುಕೊಳ್ಳುತ್ತದೆ.
ಹಾಗೆ ರಾಮಾಯಣ ಒಂದೊಂದು ಪಾತ್ರವನ್ನೂ ಮುಂದಿಟ್ಟು, ಮಥಿಸಲು ಅವಕಾಶ ಮಾಡಿಕೊಡುತ್ತದೆ. ಒಂದೊಂದು ಘಟ್ಟ ಸವೆದಂತೆಯೂ ರಾಮನ ಗಟ್ಟಿತನ ಪ್ರಕಟಗೊಳ್ಳುತ್ತಾ ಹೋಗುತ್ತದೆ. ಎಲ್ಲೂ ಸೋಲುವುದು, ಸಹಿಸುವುದು ಎನ್ನುವ ವಿಷಯವೇ ಬರುವುದಿಲ್ಲ. ಇದ್ದದ್ದನ್ನು ಇದ್ದಂತೆಯೇ ಪ್ರಕಟಿಸುವವರಿಗೆ ಯಾತರ ಭಯ, ಸೋಲು?
No comments:
Post a Comment