ಇಂದಿನ ಇತಿಹಾಸ
ಅಕ್ಟೋಬರ್ 3
ಕರಾಚಿಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಚಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ಬ್ಯಾಟ್ಸ್ ಮನ್ನರನ್ನು ಬಲಿ ಪಡೆದು (369) ವಿಶ್ವದಾಖಲೆ ಸ್ಥಾಪಿಸಿದರು. ಪಾಕಿಸ್ಥಾನದ ಉಮರ್ ಗುಲ್ ಅವರನ್ನು ಸ್ಟಂಪ್ ಮಾಡುವ ಮೂಲಕ ಅವರು ಆಸ್ಟ್ರೇಲಿಯಾದ ಇಯಾನ್ ಹೀಲಿ ಅವರ ದಾಖಲೆ (395) ಮುರಿದರು.
ಸೊಳ್ಳೆಗಳಿಂದಾಗಿ ಖ್ಯಾತಿ ಪಡೆದ ಇಬ್ಬರು ಗಣ್ಯರ ಜನ್ಮದಿನವಿದು. 1844ರ ಈದಿನ ಸರ್ ಪ್ಯಾಟ್ರಿಕ್ ಮ್ಯಾನ್ಸನ್ (1844-1922) ಜನ್ಮದಿನ. ಫೈಲೇರಿಯಾಸಿಸ್ಸಿಗೆ ಕಾರಣವಾಗುವ ಪರಾವಲಂಬಿ ಸೂಕ್ಷ್ಮಾಣುಗಳನ್ನು ಹರಡಲು ಸೊಳ್ಳೆಗಳು ನೆರವಾಗುತ್ತವೆ ಎಂಬುದನ್ನು ಮೊದಲ ಬಾರಿಗೆ ಕಂಡು ಹಿಡಿದ ಬ್ರಿಟಿಷ್ ಸಂಶೋಧಕನೀತ. ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತದೆ ಎಂದು ಹೇಳಿದ ಸರ್ ರೊನಾಲ್ಡ್ ರೋಸ್ ಅವರ ಶೋಧನೆಗೆ ಪ್ಯಾಟ್ರಿಕ್ ಮ್ಯಾನ್ಸನ್ ಅವರ ಈ ಸಂಶೋಧನೆಯೇ ಮೂಲ. ಹಳದಿ ಜ್ವರ ಮತ್ತು ಮಲೇರಿಯಾವನ್ನು ತಡೆಯಲು ಸೊಳ್ಳೆ ನಿಯಂತ್ರಣವನ್ನು ಅನುಷ್ಠಾನಕ್ಕೆ ತರುವ ಮೂಲಕ ಪನಾಮಾ ಕಾಲುವೆ ನಿರ್ಮಾಣಕ್ಕೆ ಮಹಾನ್ ಕಾಣಿಕೆ ಸಲ್ಲಿಸಿದ ಅಮೆರಿಕದ ಸೇನಾ ಸರ್ಜನ್ ವಿಲಿಯಂ ಕ್ರಾಫರ್ಡ್ ಗಾರ್ಗಸ್ (1854-1920) ಅವರ ಜನ್ಮದಿನ ಕೂಡಾ ಅಕ್ಟೋಬರ್ 3.
2007: ಫ್ರೆಂಚ್ ಕಲಾವಿದ ಲೂಯಿಸ್ ಬೋರ್ಜಿಯಾಸ್ ಅವರು ಹಿತ್ತಾಳೆ, ಉಕ್ಕು ಮತ್ತು ಅಮೃತಶಿಲೆಯಿಂದ ನಿರ್ಮಿಸಿದ 9 ಮೀಟರ್ ಎತ್ತರದ ಬೃಹತ್ ಜೇಡ ಕಲಾಕೃತಿಯನ್ನು ಲಂಡನ್ನಿನ ಸೇಂಟ್ ಪಾಲ್ ಇಗರ್ಜಿ (ಚರ್ಚ್) ಮುಂಭಾಗದಲ್ಲಿ ಸ್ಥಾಪಿಸಲಾಯಿತು.
2007: ಸುಮಾರು 13 ವರ್ಷಗಳ ಹಿಂದೆ ಸಂಭವಿಸಿದ ಗೋಪಾಲಗಂಜ್ ಜಿಲ್ಲಾಧಿಕಾರಿ ಎಂ.ಜಿ.ಕೃಷ್ಣಯ್ಯ ಕೊಲೆ ಪ್ರಕರಣದ ತೀರ್ಪು ಕೊನೆಗೂ ಹೊರಬಿದ್ದಿತು. ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಂಸದ ಆನಂದ ಮೋಹನ್ ಮತ್ತು ಆತನ ಇಬ್ಬರು ಸಹವರ್ತಿಗಳಾದ ಅಖ್ಲಾಖ್ ಅಹ್ಮದ್ ಮತ್ತು ಅರುಣ್ ಕುಮಾರ್ ಅವರಿಗೆ ಪಟ್ನಾ ನ್ಯಾಯಾಲಯವು ಮರಣ ದಂಡನೆ ವಿಧಿಸಿತು. ಇದೇ ಪ್ರಕರಣದಲ್ಲಿ ಆನಂದ ಮೋಹನನ ಅರ್ಧಾಂಗಿ ಲವ್ಲಿ ಆನಂದ್ (ಇವರೂ ಸಂಸತ್ ಸದಸ್ಯರಾಗಿದ್ದರು), ಆಡಳಿತಾರೂಢ ಜೆಡಿ(ಯು) ಶಾಸಕ ಮುನ್ನಾ ಶುಕ್ಲಾ ಮತ್ತು ಇನ್ನಿಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಎಲ್ಲ ಏಳೂ ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ 302, 307, 147, 427ರ ಅನ್ವಯ ಶಿಕ್ಷೆ ವಿಧಿಸಿರುವುದಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್. ಎಸ್. ರಾಯ್ ಹೇಳಿದರು. ಇದೇ ಪ್ರಕರಣದ ಆರೋಪಿಗಳಾಗಿದ್ದ ಇತರ 29 ಮಂದಿಯನ್ನು ನ್ಯಾಯಾಲಯವು ಈ ಮೊದಲು ಖುಲಾಸೆಗೊಳಿಸಿತ್ತು. ಆನಂದ ಮೋಹನ್ ಅವರ ಬಿಹಾರ ಪೀಟಲ್ಸ್ ಪಾರ್ಟಿಯ ಮುಖಂಡನಾಗಿದ್ದ ಭೂಗತ ಲೋಕದ ಪಾತಕಿ ಚೋಟನ್ ಶುಕ್ಲನ ಶವಯಾತ್ರೆ ವೇಳೆ ಜನರ ಗುಂಪೊಂದು ಹಾಜಿಪುರದಲ್ಲಿ ಸಭೆಯೊಂದನ್ನು ಮುಗಿಸಿ ಆ ಮಾರ್ಗವಾಗಿ ಬರುತ್ತಿದ್ದ ಕೃಷ್ಣಯ್ಯ ಅವರನ್ನು ಕಾರಿನಿಂದ ಹೊರಗೆಳೆದು ಕೊಲೆ ಮಾಡಿತ್ತು.
2007: ಕರಾಚಿಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಚಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ಬ್ಯಾಟ್ಸ್ ಮನ್ನರನ್ನು ಬಲಿ ಪಡೆದು (369) ವಿಶ್ವದಾಖಲೆ ಸ್ಥಾಪಿಸಿದರು. ಪಾಕಿಸ್ಥಾನದ ಉಮರ್ ಗುಲ್ ಅವರನ್ನು ಸ್ಟಂಪ್ ಮಾಡುವ ಮೂಲಕ ಅವರು ಆಸ್ಟ್ರೇಲಿಯಾದ ಇಯಾನ್ ಹೀಲಿ ಅವರ ದಾಖಲೆ (395) ಮುರಿದರು.
2007: ಉತ್ತರ ಪ್ರದೇಶದ ಮೊಘಲ್ ಸರಾಯಿಯ ರೈಲು ನಿಲ್ದಾಣದಲ್ಲಿ ಒಂದೇ ಕಾಲಕ್ಕೆ ಮೂರು ರೈಲುಗಳ ಬಂದ ಪರಿಣಾಮವಾಗಿ ಮೇಲ್ಸೇತುವೆಯಲ್ಲಿ ಜನದಟ್ಟಣೆ ಉಂಟಾಗಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಕ್ಕಿ ಕನಿಷ್ಠ 13 ಮಹಿಳೆಯರು ಮೃತರಾಗಿ 48 ಜನ ಗಾಯಗೊಂಡರು. ಇವರಲ್ಲಿ ಹೆಚ್ಚಿನವರು ಬಿಹಾರದ ಭೋಜಪುರ ಹಾಗೂ ಹುಕ್ಸಾರ್ ಜಿಲ್ಲೆಯವರು. ಇವರೆಲ್ಲರೂ `ಜೂಟಿಯಾ' ಮಹೋತ್ಸವ ವೀಕ್ಷಿಸಲು ವಾರಣಾಸಿಗೆ ಹೊರಟಿದ್ದರು.
2007: ಎಡಪಂಥೀಯ ಬರಹಗಾರ ಎಂ.ಎನ್. ವಿಜಯನ್ (77) ಕೇರಳದ ತ್ರಿಶ್ಶೂರಿನ ಪ್ರೆಸ್ ಕ್ಲಬ್ಬಿನಲ್ಲಿ ಪ್ರಜ್ಞೆತಪ್ಪಿ ಬಿದ್ದು ಮೃತರಾದರು. ಕೆಲ ವರ್ಷಗಳ ಹಿಂದೆ ವಿದೇಶಿ ನಿಧಿ ಹೆಸರಿನಲ್ಲಿ ಸಿಪಿಎಂ ಹಿರಿಯ ನಾಯಕರು ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದ ಅವರು ನಂತರ ಪಕ್ಷದ ಸಂಪರ್ಕದಿಂದ ದೂರ ಉಳಿದಿದ್ದರು. ಹಲವು ವರ್ಷಗಳ ಕಾಲ ಕಾಲ ಸಿಪಿಎಂನ ವಾರಪತ್ರಿಕೆ `ದೇಶಾಭಿಮಾನಿ'ಯ ಸಂಪಾದಕರಾಗಿದ್ದ ವಿಜಯನ್, ತಾವು ಬರೆದ ಲೇಖನವೊಂದರ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಖುಲಾಸೆಯಾಗಿದ್ದರು.
2007: ವೈವಿಧ್ಯಮಯ ಸರಕುಗಳ ಬೃಹತ್ ಮಾರಾಟ ಮಳಿಗೆಯ (ಶಾಪಿಂಗ್ ಮಾಲ್) ಸಹಯೋಗದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಗೆ ತರುವ, ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯತ್ನಕ್ಕೆ ಬೆಂಗಳೂರಿನ ಫೋರಮ್ ಮಾಲ್ ವೇದಿಕೆಯಾಯಿತು. ಫೋರಮ್ ಮಾಲ್ ಪ್ರವರ್ತಕ ಸಂಸ್ಥೆ ಪ್ರೆಸ್ಟೀಜ್ ಗ್ರೂಪ್, ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ಜಾರಿಗೆ ತಂದ `ಐಸಿಐಸಿಐ ಬ್ಯಾಂಕ್ ಫೋರಮ್ ಕ್ರೆಡಿಟ್ ಕಾರ್ಡಿಗೆ' ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು.
2007: ತೆಂಗಿನ ನಾರು ಉತ್ಪನ್ನಗಳ ದೇಶಿ ಮಾರುಕಟ್ಟೆ ಅಭಿವೃದ್ಧಿ ಮತ್ತು ರಫ್ತಿನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಕ್ಕಾಗಿ ಕರ್ಲಾನ್ ಲಿಮಿಟೆಡ್ ಸಂಸ್ಥೆಗೆ ಕೇಂದ್ರ ಸರ್ಕಾರದ ತೆಂಗಿನ ನಾರು ಮಂಡಳಿಯು ಎರಡು ಪ್ರಶಸ್ತಿಗಳನು ನೀಡಿತು. ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮಹಾವೀರ ಪ್ರಸಾದ್ ಅವರು ನವದೆಹಲಿಯಲ್ಲಿ ನಡೆದ ತೆಂಗಿನ ನಾರು ಮಂಡಳಿ ಉತ್ಸವದಲ್ಲಿ ಈ ಪ್ರಶಸ್ತಿ ವಿತರಿಸಿದರು. ದೇಶದ ಅತಿದೊಡ್ಡ ಹಾಸಿಗೆ ತಯಾರಿಕೆ ಸಂಸ್ಥೆ ಎಂದೇ ಜನಪ್ರಿಯಗೊಂಡಿರುವ ಕರ್ಲಾನ್, ಈಗ ಮೆತ್ತನೆಯ ಪೀಠೋಪಕರಣ, ಬೆಡ್ ಶೀಟುಗಳು, ಟವೆಲ್, ಪರದೆ ಮತ್ತಿತರ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದೆ.
2007: ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕೇಂದ್ರ ಭೂ ಸಾರಿಗೆ ಮತ್ತು ನೌಕಾಯಾನ ಸಚಿವ ಟಿ.ಆರ್. ಬಾಲು ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟಿಗೆ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು. ವಕೀಲ ಆರ್. ಬಾಲಸುಬ್ರಮಣಿಯನ್ ಅವರು ಸಲ್ಲಿಸಿದ ಈ ಮನವಿಗಳ ಪೈಕಿ ಒಂದರಲ್ಲಿ ಸೇತುಸಮುದ್ರಂ ಯೋಜನೆಗೆ ಸಂಬಂಧಿಸಿದಂತೆ ಉಪವಾಸ ಸತ್ಯಾಗ್ರಹ ನಡೆಸಿದ ಟಿ.ಆರ್.ಬಾಲು ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಲು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬೇಕೆಂದು ಪ್ರಧಾನಿಗೆ ಸೂಚಿಸುವಂತೆ ಕೋರಲಾಯಿತು. ಮತ್ತೊಂದರಲ್ಲಿ ಉಪವಾಸ ಸತ್ಯಾಗ್ರಹದ ವೇಳೆ ನ್ಯಾಯಾಂಗ ನಿಂದನೆ ಮಾಡಿರುವ ಬಾಲು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬಾಲಸುಬ್ರ್ರಮಣಿಯನ್ ಕೋರಿದರು.
2006: ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಬಾನ್ ಕಿ-ಮೂನ್ ಅವರು ನಾಲ್ಕನೇ ಸುತ್ತಿನ ಅನೌಪಚಾರಿಕ ಮತದಾನದಲ್ಲಿ ವಿಜೇತರಾದರು. ಭಾರತದ ಅಭ್ಯರ್ಥಿ ಶಶಿ ತರೂರ್ ಅವರು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಯ ಸ್ಪರ್ಧಾ ಕಣದಿಂದ ಹಿಂದೆ ಸರಿದರು. ಇದರೊಂದಿಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಪಡೆದುಕೊಳ್ಳುವ ಭಾರತದ ಕನಸು ಭಗ್ನಗೊಂಡಿತು.
2006: ಅಮೆರಿಕದ ಜಾನ್ ಸಿ. ಮ್ಯಾಥೆರ್ ಮತ್ತು ಜಾರ್ಜ್ ಎಫ್. ಸ್ಮೂಟ್ ಅವರು ನಡೆಸಿರುವ ಬ್ರಹ್ಮಾಂಡದ ಉಗಮದ ಹಿಂದಿನ ನಿಗೂಢವನ್ನು ಒಡೆಯುವ ಸಂಶೋಧನೆಗೆ ಮನ್ನಣೆ ನೀಡಿ ಈ ಇಬ್ಬರನ್ನೂ ಪ್ರಸಕ್ತ ವರ್ಷದ `ಭೌತ ಶಾಸ್ತ್ರದ ನೊಬೆಲ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು.
2006: ಪರಸ್ಪರ ಪ್ರತಿಸ್ಪರ್ಧಿಗಳಾದ ಎಚ್ ಟಿ ಮೀಡಿಯಾ ಮತ್ತು ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಒಟ್ಟಾಗಿ ನವದೆಹಲಿಯಿಂದ ಹೊಸ ಪತ್ರಿಕೆಯೊಂದನ್ನು ಹೊರತರಲು ಒಪ್ಪಂದ ಮಾಡಿಕೊಂಡವು. ಇದೇ ವೇಳೆಗೆ ಮುಂಬೈಯಿಂದ `ದಿ ಸಂಡೆ ಇಂಡಿಯನ್' ಎಂಬ ಹೊಸ ಫೀಚರ್ ಮ್ಯಾಗಜಿನ್ನನ್ನು ಪ್ಲಾನ್ ಮನ್ ಮೀಡಿಯಾ ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಏಕಕಾಲದಲ್ಲಿ 5 ಭಾಷೆಗಳಲ್ಲಿ ಭಾರತದಾದ್ಯಂತ ಪ್ರಕಟಿಸಿದೆ. ಇಂಗ್ಲಿಷ್, ಹಿಂದಿ, ಗುಜರಾಥಿ, ಬಂಗಾಳಿ ಮತ್ತು ತಮಿಳು ಭಾಷೆಗಳಲ್ಲಿ ಈ ಪತ್ರಿಕೆ ಅಕ್ಟೋಬರ್ 1ರಂದೇ ಮಾರುಕಟ್ಟೆಗಳಿಗೆ ಬಂದಿತು. ಹಿಂದುಸ್ತಾನ್ ಟೈಮ್ಸ್ ಇಂಗ್ಲಿಷ್ ಪತ್ರಿಕೆ, ಹಿಂದುಸ್ಥಾನ್ ಹಿಂದಿ ಪತ್ರಿಕೆ ಹೊಂದಿರುವ ಎಚ್ ಟಿ ಮೀಡಿಯಾ ಎಫ್ ಎಂ ರೇಡಿಯೊ ಕೇಂದ್ರಗಳು ಹಾಗೂ ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ವಾಣಿಜ್ಯ ದೈನಿಕ ಆರಂಭಿಸುವ ಗುರಿ ಹೊಂದಿರುವ ದೊಡ್ಡ ಸಂಸ್ಥೆಯಾಗಿದ್ದರೆ, ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗಳು, ನಿಯತಕಾಲಿಕಗಳು, ಇಂಟರ್ನೆಟ್, ಟೆಲಿವಿಷನ್ ಇತ್ಯಾದಿಗಳನ್ನು ಹೊಂದಿರುವ ಭಾರತದ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆ.
2006: ಅಲ್ಬೇನಿಯಾದ ರಾಜಧಾನಿ ತಿರಾನಾದಿಂದ ಇಸ್ಲಾಂಬುಲ್ ಗೆ ತೆರಳುತ್ತಿದ್ದ ಟರ್ಕಿಶ್ ಏರ್ ಲೈನ್ಸಿಗೆ ಸೇರಿದ ವಿಮಾನದ ಅಪಹರಣ ಪ್ರಕರಣ ಸುಖಾಂತ್ಯಗೊಂಡಿತು. ಪೋಪ್ ಬೆನೆಡಿಕ್ಟ್ ಅವರ ಟರ್ಕಿ ಭೇಟಿಯನ್ನು ವಿರೋಧಿಸಿ ಈ ವಿಮಾನ ಅಪಹರಿಸಿದ್ದ ಟರ್ಕಿಯ ಇಬ್ಬರು ಅಪಹರಣಕಾರರನ್ನು ಇಟಲಿ ಪೊಲೀಸರು ವಶಕ್ಕೆ ಪಡೆದುಕೊಂಡರು.
2006: ದುಬೈಯಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುವ ಮೂಲಕ ಕರ್ನಾಟಕದ ಮಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಇರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಮಂಗಳೂರು ನಗರ ಪಾತ್ರವಾಯಿತು. ಸಂಜೆ 6 ಗಂಟೆಗೆ ಸರಿಯಾಗಿ ಮೊತ್ತ ಮೊದಲ ಬಾರಿಗೆ ದುಬೈಯಿಂದ ಬಂದ ಈ ವಿಮಾನದ ಪ್ರಯಾಣಿಕರನ್ನು ಸ್ವತಃ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ರಾಜ್ಯಸಭಾ ಸದಸ್ಯ ಜನಾರ್ದನ ಪೂಜಾರಿ, ಸಚಿವರಾದ ವಿ.ಎಸ್. ಆಚಾರ್ಯ, ನಾಗರಾಜ ಶೆಟ್ಟಿ, ಡಿ.ಎಚ್. ಶಂಕರ ಮೂರ್ತಿ ಮತ್ತಿತರರು ಸ್ವಾಗತಿಸಿದರು.
2006: ಮುರುಘಾ ಮಠದ ಪ್ರತಿಷ್ಠಿತ `ಬಸವಶ್ರೀ' ಪ್ರಶಸ್ತಿಯನ್ನು ಹಿಂದಿ ಚಿತ್ರನಟಿ ಶಬಾನಾ ಆಜ್ಮಿ ಅವರಿಗೆ ಚಿತ್ರದುರ್ಗದಲ್ಲಿ ಪ್ರದಾನ ಮಾಡಲಾಯಿತು.
2006: ಪ್ರಸಕ್ತ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ ಬಿಷಪ್ ಡೆಸ್ಮೆಂಡ್ ಟುಟು ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನಿ ಮನಮೋಹನ್ ಸಿಂಗ್ ಅವರು ಆಫ್ರಿಕಾದ ಪ್ರಿಟೋರಿಯಾದಲ್ಲಿ ಸ್ವದೇಶಕ್ಕೆ ವಾಪಸಾಗುವ ಮುನ್ನ ಈ ಘೋಷಣೆ ಮಾಡಿದರು.
2006: ಮುಂಬೈ ಉಪನಗರ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರಗಾಮಿ ಅಸಿಫ್ ಖಾನ್ ಜುನೈದನನ್ನು ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಬೆಳಗಾವಿಯಲ್ಲಿ ಬಂಧಿಸಿತು.
1999: ಉದ್ಯಮಿ ಹಾಗೂ ಎಂಜಿನಿಯರ್ ಸೋನಿ ಸಂಸ್ಥೆಯ ಸಹ ಸ್ಥಾಪಕ ಅಕಿಯೊ ಮೊರಿಟಾ ತಮ್ಮ 78ನೆಯ ವಯಸ್ಸಿನಲ್ಲಿ ಟೋಕಿಯೊದಲ್ಲಿ ನಿಧನರಾದರು.
1990: ವಿಭಜನೆಗೊಂಡ 45 ವರ್ಷಗಳ ಬಳಿಕ ಈ ದಿನ ಪಶ್ಚಿಮ ಜರ್ಮನಿ ಮತ್ತು ಪೂರ್ವ ಜರ್ಮನಿ ಒಂದಾಗಿ ಹೊಸ ಏಕೀಕೃತ ರಾಷ್ಟ್ರ ಅಸ್ತಿತ್ವಕ್ಕೆ ಬಂದಿತು.
1940: ಹಾಸ್ಯ ಬರಹಗಾರ ಪ್ರೊ.ವಿ.ಎ. ಜೋಶಿ ಅವರು ಆಬಾಜಿ- ಇಂದಿರಾ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ಈದಿನ ಜನಿಸಿದರು.
1929: ಕಿಂಗ್ಡಮ್ ಆಫ್ ಸರ್ಬ್ಸ್, ಕ್ರೊಯೆಟ್ಸ್ ಮತ್ತು ಸ್ಲೊವೆನ್ಸ್ ತನ್ನ ಹೆಸರನ್ನು ಅಧಿಕೃತವಾಗಿ `ಕಿಂಗ್ಡಮ್ ಆಫ್ ಯುಗೋಸ್ಲಾವಿಯಾ' ಎಂಬುದಾಗಿ ಬದಲಿಸಿಕೊಂಡಿತು. ಹಲವು ವರ್ಷಗಳ ಬಳಿಕ ಇವು ಮೂರೂ ರಾಷ್ಟ್ರಗಳು ಪ್ರತ್ಯೇಕಗೊಂಡವು.
1906: ಸಂಸ್ಕೃತ ನಿಘಂಟು ಕತೃ ಗೋವಿಂದ ವಿನಾಯಕ ದೇವಸ್ಥಳಿ ಜನನ.
1896: ಇಂಗ್ಲಿಷ್ ವಿನ್ಯಾಸಗಾರ, ಕುಶಲಕರ್ಮಿ, ಕವಿ ವಿಲಿಯಂ ಮೋರಿಸ್ ಅವರು ಲಂಡನ್ ಸಮೀಪ ತಮ್ಮ 62ನೆಯ ವಯಸ್ಸಿನಲ್ಲಿ ಮೃತರಾದರು. ಪೀಠೋಪಕರಣ, ಬಟ್ಟೆ, ಸ್ಟೆಯಿನ್ಡ್ ಗ್ಲಾಸ್, ವಾಲ್ ಪೇಪರ್ ಮತ್ತಿತರ ಅಲಂಕಾರಿಕ ಉತ್ಪನ್ನಗಳಿಗೆ ಇವರು ರೂಪಿಸಿದ ವಿನ್ಯಾಸಗಳು ಇಂಗ್ಲೆಂಡಿನಲ್ಲಿ ಕಲೆ ಮತ್ತು ಕುಶಲಕಲೆಗಳ ಚಳವಳಿಯನ್ನೇ ಹುಟ್ಟು ಹಾಕಿದವು.
1863: ಅಮೆರಿಕದಲ್ಲಿ ನವೆಂಬರ್ ತಿಂಗಳ ಕೊನೆಯ ಗುರುವಾರವನ್ನು ಥ್ಯಾಂಕ್ಸ್ ಗೀವಿಂಗ್ ಡೇ ಆಗಿ ಆಚರಿಸಲು
ನಿರ್ಧರಿಸಲಾಯಿತು.
No comments:
Post a Comment