Sunday, October 5, 2008

ಇಂದಿನ ಇತಿಹಾಸ History Today ಅಕ್ಟೋಬರ್ 05

ಇಂದಿನ ಇತಿಹಾಸ

ಅಕ್ಟೋಬರ್ 5

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಲಾಹೋರಿನಲ್ಲಿ ನಡೆಯುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿಯಾಗುವುದಾಗಿ ಪಾಕಿಸ್ಥಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಕರಾಚಿಯಲ್ಲಿ ಪ್ರಕಟಿಸಿದರು. ಲಾಹೋರಿನಲ್ಲಿ ನಡೆವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ ಮುಲ್ತಾನಿನ 37ರ ಹರೆಯದ ಈ ಬ್ಯಾಟಿಗನ ಕೊನೆಯ ಪಂದ್ಯವಾಗಲಿದೆ. ಇಂಜಿ ಅವರು ಕೆರಿಬಿಯನ್ನಿನಲ್ಲಿ ನಡೆದ ವಿಶ್ವಕಪ್ ಟೂರ್ನಿಯೊಂದಿಗೆ ಏಕದಿನ ಕ್ರಿಕೆಟಿಗೆ ವಿದಾಯ ಹೇಳಿದ್ದರು. 

2007: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಮೂಲಕ ಜೆಡಿಎಸ್ ನೇತೃತ್ವದ ಸರ್ಕಾರ ಸೇಡಿನ ರಾಜಕೀಯ ಆರಂಭಿಸಿತು. ಬಿಜೆಪಿಯು ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಒಂದೆರಡು ದಿನದಲ್ಲಿ ಹಿಂದೆಗೆದುಕೊಳ್ಳುವ ಸೂಚನೆ ಲಭಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆಯಿತು. ಬಿಜೆಪಿಗೆ ಅಂಕುಶ ಹಾಕುವ ಪ್ರಯತ್ನವಾಗಿ ಇದು ನಡೆದಿದ್ದು, ಜೆಡಿಎಸ್ ನ ಮಹಮ್ಮದ್ ಆಸಿಫ್ ನಿಗಮದ ನೂತನ ಅಧ್ಯಕ್ಷರಾದರು.

2007: ಭಾರತದ ಮೊದಲ ಮಧ್ಯಗಾಮಿ ಕ್ಷಿಪಣಿ `ಅಗ್ನಿ-1'ನ್ನು ಒರಿಸ್ಸಾದ ಬಾಲಸೋರ್ ಬಳಿ ಕಡಲ ತೀರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಕ್ಷಿಪಣಿಗೆ 1000 ಕೆಜಿ ಭಾರದ ಸಿಡಿತಲೆಯನ್ನು ಸೆಕೆಂಡಿಗೆ 2.5 ಕಿಮೀ ವೇಗದಲ್ಲಿ 700 ಕಿಮೀ ದೂರ ಹೊತ್ತೊಯ್ಯುವ ಸಾಮರ್ಥ್ಯವಿದೆ. ಇದು 15 ಮೀಟರ್ ಉದ್ದವಿದ್ದು, 12 ಟನ್ ಭಾರವಿದೆ. ಇದು ಈ ಕ್ಷಿಪಣಿಯ ನಾಲ್ಕನೇ ಪರಿಕ್ಷಾ ಉಡಾವಣೆ. 25 ಜನವರಿ 2002, 9 ಜನವರಿ 2003 ಮತ್ತು 4 ಜುಲೈ 2004ರಲ್ಲಿ ಈ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾಯಿಸಲಾಗಿತ್ತು.

2007: ಸ್ಥಳೀಯರಿಂದ ಪ್ರಬಲ ವಿರೋಧ ವ್ಯಕ್ತವಾಗಿದ್ದರೂ ಹೊಸಕೋಟೆಯ ನಂದಗುಡಿಯಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಮುಂದಾಗಿರುವ `ಸ್ಕಿಲ್' ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರ ಪ್ರಥಮ ಹೆಜ್ಜೆ ಇರಿಸಿತು. ಸಚಿವ ಸಂಪುಟ ನಿರ್ಧಾರ ಹಾಗೂ ಉನ್ನತ ಅನುಮೋದನಾ ಸಮಿತಿಯ ತೀರ್ಮಾನದಂತೆ ಒಪ್ಪಂದ ಪರಿಶೀಲನೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸಚಿವ ಸಂಪುಟ ನಿರ್ಧರಿಸಿತು. ಬಿಜೆಪಿ ಸಚಿವರ ಅನುಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೊ ಜತೆ ಅಧಿಕಾರ ಹಂಚಿಕೆಗೆ ಅನುವು ಮಾಡಿಕೊಳ್ಳುವ ಉದ್ದೇಶದಿಂದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು `ರಾಷ್ಟ್ರೀಯ ರಾಜಿ' ಸುಗ್ರೀವಾಜ್ಞೆಗೆ ಸಹಿ ಹಾಕಿದರು. ಈ ಆಜ್ಞೆಯ ಪ್ರಕಾರ ಬೆನಜಿರ್ ಭುಟ್ಟೊ ಮತ್ತಿತರ ರಾಜಕೀಯ ಧುರೀಣರಿಗೆ ದೇಶದ ವಿವಿಧ ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರ ಮತ್ತಿತರ ಪ್ರಕರಣಗಳಲ್ಲಿ ಕ್ಷಮಾದಾನ ದೊರೆಯಲಿದೆ. ಮತ್ತೊಬ್ಬ ಮಾಜಿ, ಮುಷರಫ್ ಕಡುವಿರೋಧಿ ಪ್ರಧಾನಿ ನವಾಜ್ ಷರೀಫ್ ಹೊರತುಪಡಿಸಿ ಉಳಿದ ರಾಜಕೀಯ ಧುರೀಣರಿಗೆ ಈ ಸುಗ್ರೀವಾಜ್ಞೆ ಅನ್ವಯವಾಗುತ್ತದೆ.

2007: ಸಿಡ್ನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐದು ಪದಕ ಗೆದ್ದ ಸಂದರ್ಭದಲ್ಲಿಯೇ ವಿಶ್ವ ಖ್ಯಾತ ಮಹಿಳಾ ಅಥ್ಲೆಟ್ ಮೇರಿಯನ್ ಜೋನ್ಸ್ ಉದ್ದೀಪನ ಮದ್ದು ಸೇವಿಸಿದ್ದರೆಂಬುದು ಖಚಿತಗೊಂಡಿತು. ದೀರ್ಘ ಕಾಲದ ವಿಚಾರಣೆಯ ನಂತರ ಆರೋಪ ಸಾಬೀತಾಗಿ, ಇಷ್ಟೊಂದು ಸಮಯ ಸತ್ಯವನ್ನು ಮುಚ್ಚಿಟ್ಟ ಅಥ್ಲೆಟ್ ವರ್ತನೆಯನ್ನೂ ವಿಚಾರಣಾ ಸಮಿತಿಯು ಗಂಭೀರವಾಗಿ ಪರಿಗಣಿಸಿತು. ಈ ಹಿನ್ನೆಲೆಯಲ್ಲಿ ಅವರು ಸಿಡ್ನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆದ್ದಿದ್ದ ಪದಕಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಹೆಚ್ಚಿದವು.

2007: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಲಾಹೋರಿನಲ್ಲಿ ನಡೆಯುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿಯಾಗುವುದಾಗಿ ಪಾಕಿಸ್ಥಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಕರಾಚಿಯಲ್ಲಿ ಪ್ರಕಟಿಸಿದರು. ಲಾಹೋರಿನಲ್ಲಿ ನಡೆವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ ಮುಲ್ತಾನಿನ 37ರ ಹರೆಯದ ಈ ಬ್ಯಾಟಿಗನ ಕೊನೆಯ ಪಂದ್ಯವಾಗಲಿದೆ. ಇಂಜಿ ಅವರು ಕೆರಿಬಿಯನ್ನಿನಲ್ಲಿ ನಡೆದ ವಿಶ್ವಕಪ್ ಟೂರ್ನಿಯೊಂದಿಗೆ ಏಕದಿನ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಇದೀಗ ಟೆಸ್ಟ್ನಿಂದಲೂ ಅವರು ವಿರಮಿಸುವುದರೊಂದಿಗೆ ಪಾಕಿಸ್ಥಾನ ಕ್ರಿಕೆಟಿನ ಒಂದು ಯುಗ ಅಂತ್ಯವಾಗುವುದು. ಇಂಜಮಾಮ್ ಅವರು ಇದುವರೆಗೆ ಒಟ್ಟು 119 ಟೆಸ್ಟ್  ಪಂದ್ಯಗಳಲ್ಲಿ ಪಾಕಿಸ್ಥಾನ ತಂಡವನ್ನು  ಪ್ರತಿನಿಧಿಸಿದ್ದಾರೆ.

2006: ಭಜರಂಗದಳವು ಕರೆ ನೀಡಿದ್ದ ಮಂಗಳೂರು ಬಂದ್ ಕಾಲದಲ್ಲಿ ವ್ಯಾಪಕ ಹಿಂಸಾಚಾರ ನಡೆದು ಮಂಗಳೂರು, ಬಿ.ಸಿ.ರೋಡ್, ಸುರತ್ಕಲ್ಲಿನಲ್ಲಿ 3 ದಿನ ಕರ್ಫ್ಯೂ ಜಾರಿಗೊಳಿಸಲಾಯಿತು. ದನಗಳನ್ನು ಸಾಗಿಸುತ್ತ್ದಿದ ವಾಹನವೊಂದು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಾರಿಯಾದಾಗ ಅದನ್ನು ಬೆನ್ನತ್ತಿದವರ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿದ್ದು, ಭಜರಂಗದಳ ಮಂಗಳೂರು ಬಂದ್ ಗೆ ಕರೆ ನೀಡಿತ್ತು. 

1991: ಪತ್ರಕರ್ತ, ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪಿನ ಸಂಸ್ಥಾಪಕ ಅಧ್ಯಕ್ಷ ರಾಮನಾಥ ಗೋಯೆಂಕಾ (87) ನಿಧನ.

1989: ಮೀರಾ ಸಾಹಿಬ್ ಫಾತಿಮಾ ಬೀವಿ ಅವರು ಭಾರತದ ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರಾದರು.

1957: ಸಾಹಿತಿ ಭಾರತಿ ಪಾಟೀಲ ಜನನ.

1951: ಭಾರತದ ಮೊದಲ ಮಹಾ ಚುನಾವಣೆ ಆರಂಭವಾಯಿತು. ಅದು 1952ರ ಫೆಬ್ರುವರಿ 21ರಂದು ಅದು ಅಂತ್ಯಗೊಂಡಿತು.

1949: ಸಮಾಜ ಸುಧಾರಕ, ರಾಜಕಾರಣಿ ಎ.ಕೆ. ಪಿಳ್ಳೈ ನಿಧನ.

1935: ಸಾಹಿತಿ ಎನ್.ಎಸ್. ಸೋಮಪ್ಪ ಜನನ.

1932: ಕ್ರಿಕೆಟಿಗ ಮಾಧವರಾವ್ ಲಕ್ಷ್ಮಣ ರಾವ್ ಆಪ್ಟೆ ಜನನ.

1930: ಸಾಹಿತಿ ಎಚ್. ಆರ್. ಭಸ್ಮೆ ಜನನ.

1919: ಖ್ಯಾತ ಸಾಹಿತಿ ಬಸವರಾಜ ಕಟ್ಟೀಮನಿ (5-10-1919ರಿಂದ 23-10-1989ರವರೆಗೆ) ಅವರು ಅಪ್ಪಯ್ಯ- ಬಾಳವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಾಲಮರಡಿಯಲ್ಲಿ ಜನಿಸಿದರು.

1919: ಸಾಹಿತಿ ಎಲ್. ಬಸವರಾಜು ಜನನ.

1882: ರಾಬರ್ಟ್ ಹಚಿಂಗ್ಸ್ ಗೊಡ್ಡಾರ್ಡ್ (1882-1945) ಜನ್ಮದಿನ. ಅಮೆರಿಕನ್ ಪ್ರೊಫೆಸರ್ ಹಾಗೂ ಸಂಶೋಧಕನಾಗಿದ್ದ ಈತ `ಆಧುನಿಕ ರಾಕೆಟ್ ತಂತ್ರಜ್ಞಾನದ ಜನಕ' ಎಂದೇ ಖ್ಯಾತ.

1864: ಫ್ರೆಂಚ್ ಸಂಶೋಧಕ ಆಗಸ್ಟ್ ಲ್ಯುಮಿರೆ (1864-1948) ಜನ್ಮದಿನ. ತಮ್ಮ ಸಹೋದರ ಲೂಯಿ ಜೊತೆ ಸೇರಿ ಪ್ರಾರಂಭದ ದಿನಗಳ ಚಲನಚಿತ್ರ ಕ್ಯಾಮರಾ ಹಾಗೂ `ಸಿನಿಮಾಟೋಗ್ರಾಫ್' ಹೆಸರಿನ ಪ್ರೊಜೆಕ್ಟರ್ ಉಪಕರಣವನ್ನು ಇವರು ನಿರ್ಮಿಸಿದ್ದರು. ಇವರು ಸಂಶೋಧಿಸಿದ ಈ ಫೊಟೋಗ್ರಾಫಿಕ್ ಉಪಕರಣದಿಂದಾಗಿಯೇ `ಸಿನಿಮಾ' ಶಬ್ದ ಹುಟ್ಟಿತು. 

1864: ಭಾರತದ ಕಲ್ಕತ್ತ (ಈಗಿನ ಕೋಲ್ಕತ್ತ್ತ) ನಗರ ಭೀಕರ ಚಂಡಮಾರುತದ ಪರಿಣಾಮವಾಗಿ ಬಹುತೇಕ ನಾಶಗೊಂಡಿತು. 60,000 ಜನ ಅಸು ನೀಗಿದರು.

1805: ಚಾರ್ಲ್ಸ್ ಕಾರ್ನವಾಲಿಸ್ ತನ್ನ 66ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಘಾಜಿಪುರದಲ್ಲಿ ಮೃತನಾದ. ಬ್ರಿಟಿಷ್ ಸೈನಿಕ ಹಾಗೂ ರಾಜಕಾರಣಿಯಾಗಿದ್ದ ಈತ 1786-1793ರ ಅವಧಿಯಲ್ಲಿ ಭಾರತದ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದ.

1713: `ಎನ್ ಸೈಕ್ಲೋಪೀಡೀ' ಮುಖ್ಯ ಸಂಪಾದಕ, ಫ್ರೆಂಚ್ ವಿದ್ವಾಂಸ ಹಾಗೂ ತತ್ವಜ್ಞಾನಿ ಡೇನಿಸ್ ಡಿಡೆರೊಟ್ (1713-1784) ಜನ್ಮದಿನ. 1745ರಿಂದ 1772ರವರೆಗೆ `ಎನ್ ಸೈಕ್ಲೋಪೀಡೀ' ಮುಖ್ಯಸಂಪಾದಕನಾಗಿ ಆತ ಸೇವೆ ಸಲ್ಲಿಸಿದ್ದ.

1676: ಬಾಂಬಯಲ್ಲಿ (ಈಗಿನ ಮುಂಬೈ) ರೂಪಾಯಿ ಮತ್ತು ಪೈಸೆ ಹೆಸರಿನ ನಾಣ್ಯಗಳನ್ನು ಟಂಕಿಸಲು ಈಸ್ಟ್ ಇಂಡಿಯಾ ಕಂಪೆನಿಗೆ ಇಂಗ್ಲೆಂಡಿನ ದೊರೆ ಅಧಿಕಾರ ನೀಡಿದ.

No comments:

Advertisement