Thursday, October 16, 2008

ಇಂದಿನ ಇತಿಹಾಸ History Today ಅಕ್ಟೋಬರ್ 16

ಇಂದಿನ ಇತಿಹಾಸ

ಅಕ್ಟೋಬರ್ 16

ತಮಿಳುನಾಡಿನ ಜನಪ್ರಿಯ ಚಿತ್ರ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು `ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ' (ಎಐಎಡಿಎಂಕೆ) ಸ್ಥಾಪನೆ ಮಾಡಿದರು. ಅಣ್ಣಾದುರೈ ಅವರು ಸ್ಥಾಪಿಸಿದ್ದ `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷದಿಂದ ಹೊರಬಂದು ಅವರು ಈ ಪಕ್ಷವನ್ನು ಕಟ್ಟಿದರು.

2007: ಪ್ರಸ್ತತ ಸಾಲಿನ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿಯನ್ನು ಪಟಿಯಾಲಾದ ಯಶಪಾಲ್ ಮಿತ್ತಲ್ (ರಚನಾತ್ಮಕ ಸೇವೆ), ಪುಣೆಯ ಆನಂದ ಕರ್ವೆ (ಗ್ರಾಮೀಣ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆ) ಮತ್ತು ಕ್ಯಾಲಿಫೋರ್ನಿಯಾದ ಮೈಕೆಲ್ ನಗ್ಲರ್ (ಭಾರತದ ಹೊರಗೆ ಗಾಂಧಿ ತತ್ವ ಪ್ರಚಾರ) ಅವರಿಗೆ ಘೋಷಿಸಲಾಯಿತು. ಜಾನಕಿದೇವಿ ಬಜಾಜ್ ಪ್ರಶಸ್ತಿಗೆ ಕೋಲ್ಕತ್ತದ ಅಶೋಕ್ ಗುಪ್ತಾ (ಮಹಿಳೆ ಮತ್ತು ಮಕ್ಕಳ ಕಲ್ಯಾಣ) ಆಯ್ಕೆಯಾದರು ಎಂದು ಮುಂಬೈಯಲ್ಲಿ ಪ್ರಕಟಿಸಲಾಯಿತು.

2007: ಒಟ್ಟು 80 ಲಕ್ಷ ರೂಪಾಯಿ ಕೊಟ್ಟರೆ ಬಾಹ್ಯಾಕಾಶಕ್ಕೆ ಹೋಗಿ ಬರುವ, ಗಗನಯಾನಿಯಾಗಿ ಭೂಮಿ ಸುತ್ತುವ ಅವಕಾಶ ಕಲ್ಪಿಸಿರುವುದಾಗಿ ಬ್ರಿಟಿಷ್ ಕಂಪೆನಿ ವರ್ಜಿನ್ ಗ್ಯಾಲಕ್ಟಿಕ್ ಪ್ರಕಟಿಸಿತು. ನಾಲ್ವರು ಅನಿವಾಸಿ ಭಾರತೀಯರೂ ಸೇರಿ ಸುಮಾರು 470 ಜನ ಈ ಬಾಹ್ಯಾಕಾಶ ಪ್ರವಾಸಕ್ಕೆ ಸ್ಥಳ ಕಾಯ್ದಿರಿಸಿದ್ದಾರೆ ಎಂದೂ ಸಂಸ್ಥೆ ಹೇಳಿತು.

2007: ಉದ್ಯೋಗಿಯೊಬ್ಬ ಮಾತೃ ಸಂಸ್ಥೆಯಲ್ಲಿ ಹೊಂದಿರುವ ಸೇವಾ ಹಿರಿತನವೇ ಎರವಲು ಸೇವೆಗೆ ಹೋದ ಸಂಸ್ಥೆಯಲ್ಲಿಯೂ ಮುಂದುವರಿಯಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.

2007: ಕೇಂದ್ರದ ಯುಪಿಎ ಸರ್ಕಾರದಲ್ಲಿನ ಬಿಹಾರದ ಲಾಲು ಪ್ರಸಾದ್ ಅವರ ಆರ್ ಜೆ ಡಿ ಗೆ ಸೇರಿದ ಮಾನವ ಸಂಪನ್ಮೂಲ ಖಾತೆಯ ಸಹಾಯಕ ಸಚಿವ ಮೊಹಮ್ಮದ್ ಅಲಿ ಅಶ್ರಫ್ ಫಾತ್ಮಿ  ಅವರು ಜೆಡಿ (ಯು) ಬೆಂಬಲಿತ ದರ್ಭಾಂಗದ ಉಪ ಮೇಯರ್ ಬಾಬ್ಬಿ ಖಾನ್ ಅವರನ್ನು ಈದ್-ಉಲ್- ಫಿತರ್ ಹಬ್ಬದ ದಿನವೇ ಹತ್ಯೆ ಮಾಡುವಂತೆ ಈ ಮಂತ್ರಿ ತನ್ನ ಪರಮಾಪ್ತ ಶಿಷ್ಯ,  ಬಾಡಿಗೆ ಹಂತಕ ಅಲ್ಲಾ ಮಿಯಾ ಅಲಿಯಾಸ್ ಅಲ್ಲಾ ಖಾನ್ ಗೆ 5 ಲಕ್ಷ ರೂಪಾಯಿ `ಸುಪಾರಿ' ನೀಡಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದರು.

2007: `ನರಭಕ್ಷಣೆಗೆ ಪ್ರೇರಣೆಗಳು' ಎಂಬ ಪುಸ್ತಕ ಬರೆಯುತ್ತಿದ್ದ ಮೆಕ್ಸಿಕೊ ಲೇಖಕ ಜೋಸ್ ಲೂಯಿಸ್ ಕಾಲ್ವಾ ತನ್ನ ಮಾಜಿ ಪ್ರೇಯಸಿಯನ್ನೇ ಕೊಂದು ತಿಂದು ಪೊಲೀಸರ ಅತಿಥಿಯಾದ. 'ನನ್ನ ಮಗಳು ಕಾಣೆಯಾಗಿದ್ದಾಳೆ. ನಮಗೆ ಅವಳ ಪ್ರಿಯಕರ ಜೋಸ್ ಮೇಲೆ ಅನುಮಾನವಿದೆ' ಎಂದು ಅಲೆಜಾಡ್ರಾ ಗಾಲಿಯಾನಳ (32) ತಾಯಿ ಪೊಲೀಸರಿಗೆ ದೂರು ನೀಡಿದ್ದಳು. ತನಿಖೆಗೆಂದು ಬಂದ ಪೊಲೀಸರು ಜೋಸ್ ಮನೆ ಬಾಗಿಲು ತಟ್ಟಿದರೆ ಆಸಾಮಿ ಹಿಂಬಾಗಿಲಿನಿಂದ ಓಡಲು ಹೋಗಿ ಕೆಳಗೆ ಬಿದ್ದು ಕಾಲು ಮುರಿದುಕೊಂಡ. ಪೊಲೀಸರಿಗೆ ಊಟದ ಮೇಜಿನ ಮೇಲೆ ನರಮಾಂಸದ ತುಣುಕುಗಳು ಸಿಕ್ಕಿದವು. ಫ್ರಿಜ್ಜಿನಲ್ಲಿಯೂ ಡಬ್ಬಿಗಟ್ಟಲೆ ಮಾಂಸವಾಗಿ ಗಾಲಿಯಾನ ತಣ್ಣಗಾಗಿದ್ದಳು. ಮತ್ತಷ್ಟು ತಡಕಾಡಿದಾಗ ಮಲಗುವ ಕೋಣೆ ಬದಿಯಲ್ಲೇ ಅವಳ ಅಳಿದುಳಿದ ಶರೀರ ಸಿಕ್ಕಿತು. ಎರಡು ವರ್ಷಗಳಿಂದ ಇವನು ಇನ್ನೂ ಇಬ್ಬರು ಹೆಂಗಳೆಯರನ್ನು ಕೊಂದು ತಿಂದಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದರು. ಸಂಪುಟಗಟ್ಟಲೇ ಪದ್ಯ ಬರೆದಿರುವ ಜೋಸ್ ಮೆಕ್ಸಿಕೊದಲ್ಲಿ ಜನಪ್ರಿಯ ಕವಿ. ಮಾಟದ ಬಗ್ಗೆ ಅಪಾರ ಒಲವು ಹೊಂದಿದ್ದ ಅವನು ಹೊಟ್ಟೆಕಿಚ್ಚಿನ ಅನುಮಾನದ ಪಿಶಾಚಿ ಎಂದು ಅವನ ಇನ್ನೊಬ್ಬ ಮಾಜಿ ಪ್ರಿಯತಮೆ ಸಾರ್ವಜನಿಕ ಹೇಳಿಕೆ ನೀಡಿದಳು.

2007: ತಮಿಳುನಾಡಿನಾದ್ಯಂತ ಶಾಲಾ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿತು. ಇದಕ್ಕೆ ಮೊದಲು ಕರ್ನಾಟಕ ಸರ್ಕಾರ ಕೂಡಾ ರಾಜ್ಯದಲ್ಲಿ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಮತ್ತು ಪಿಯು ವರೆಗಿನ ಶಿಕ್ಷಕರು ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದರ ಮೇಲೆ ಎರಡು ವಾರಗಳ ಹಿಂದೆ ನಿಷೇಧವನ್ನು ಹೇರಿತ್ತು.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಜಾರಿಗೊಳಿಸುವ ಬಗ್ಗೆ ಆಕ್ಷೇಪಿಸಿದ ಸುಪ್ರೀಂಕೋರ್ಟ್ ಸಂಸದೀಯ ಸ್ಥಾಯಿ ಸಮಿತಿಯ ವರದಿಯ ಪ್ರತಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. ಕೆನೆಪದರವನ್ನು ಮೀಸಲಾತಿಯಿಂದ ಹೊರಗಿಡುವಂತೆ  ಮಂಡಲ್ ಪ್ರಕರಣದ ಇಂದ್ರ ಸಾಹ್ನಿ ತೀರ್ಪಿನಲ್ಲಿ ಸೂಚಿಸಿದ್ದುದು ಸೇರಿದಂತೆ ನ್ಯಾಯಾಲಯವು ಹಿಂದೆ ನೀಡಿದ್ದ ತೀರ್ಪುಗಳನ್ನೂ ಸರ್ಕಾರ ಲಕ್ಷಿಸಿಲ್ಲ ಎಂದೂ ನ್ಯಾಯಾಲಯ ಅಸಮಾಧಾನ ಸೂಚಿಸಿತು. ಐಐಟಿ, ಐಐಎಂ, ಮತ್ತು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಗೆ ಒಬಿಸಿ ಮೀಸಲಾತಿ ವಿಸ್ತರಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

2006: ಉದ್ದೀಪನ ಮದ್ದು ಸೇವನೆ ಪರೀಕೆಯಲ್ಲಿ ಸಿಕ್ಕಿ ಬಿದ್ದ ಕಾರಣಕ್ಕಾಗಿ ಪಾಕಿಸ್ಥಾನದ ಕ್ರಿಕೆಟ್ ಆಟಗಾರ ಖ್ಯಾತ ಬೌಲರ್ ಶೋಯಬ್ ಅಖ್ತರ್ ಮತ್ತು ಬಲಗೈ ವೇಗಿ ಮೊಹಮ್ಮದ್ ಅಸಿಫ್ ಅವರನ್ನು ಪಾಕ್ ತಂಡದಿಂದ ವಜಾ ಮಾಡಲಾಯಿತು. ಕೆಲವೇ ದಿನಗಳ ಹಿಂದೆ ನಾಯಕ ಇಂಜಮಾಮ್ ಉಲ್ ಹಕ್ ನಾಲ್ಕು ಪಂದ್ಯಗಳ ಮಟ್ಟಿಗೆ ನಿಷೇಧಕ್ಕೆ ಒಳಗಾದ ಬೆನ್ನ್ಲಲೇ ಶೋಯಬ್ ಅಖ್ತರ್ ಪ್ರಕರಣ ಘಟಿಸಿತು.

2006: ಕರ್ನಾಟಕದ ವೈಣಿಕ ವಿದ್ವಾನ್ ಎನ್ ಕಾರ್ತಿಕ್ ಅವರು ಸತತ 24 ಗಂಟೆಗಳಲ್ಲಿ 50 ಸಂಗೀತ ಕಛೇರಿ ನೀಡುವ ಮೂಲಕ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದರು. ಈವರೆಗೆ ದಕ್ಷಿಣ ಆಫ್ರಿಕದ ಆ್ಯಡಮ್ ಟಾಸ್ ನೇತೃತ್ವದ ತಂಡವೊಂದು 24 ಗಂಟೆಗಳಲ್ಲಿ 41 ಕಛೇರಿಗಳನ್ನು ನೀಡಿದ ದಾಖಲೆ ಹೊಂದಿತ್ತು. 2005ರ ನವೆಂಬರ್ 29 ಮತ್ತು 30ರಂದು ಬೆಂಗಳೂರಿನ ಸುತ್ತಮುತ್ತ 50 ವೀಣಾ ಕಛೇರಿಗಳನ್ನು ಅವರು ನೀಡಿದ್ದರು.

 1999: ಖ್ಯಾತ ಪತ್ರಕರ್ತ ವೈ ಎನ್ ಕೆ ನಿಧನರಾದರು.

1999: ಸಾಹಿತಿ ಉ.ಕಾ. ಸುಬ್ಬರಾಯಾಚಾರ್ ಜನನ.

1998: ಚಿಲಿಯ ಮಾಜಿ ಸರ್ವಾಧಿಕಾರಿ ಆಗಸ್ಟೋ ಪಿನೋಕ್ಷಿ ಅವರನ್ನು ಬ್ರಿಟಿಷ್ ಪೊಲೀಸರು ಲಂಡನ್ನಿನಲ್ಲಿ ಬಂಧಿಸಿದರು. ತಾವು ಅಧಿಕಾರದಲ್ಲಿದ್ದ ಅವಧಿಯಲ್ಲಿ ಸ್ಪೇನಿನ ನಾಗರಿಕರನ್ನು ಹತ್ಯೆಗೈದರೆಂಬುದಾಗಿ ಪಿನೋಕ್ಷಿ ವಿರುದ್ಧ ಬಂದ ಆಪಾದನೆಗಳ ಸಂಬಂಧ ಪ್ರಶ್ನಿಸುವ ಸಲುವಾಗಿ ಬ್ರಿಟಿಷ್ ಪೊಲೀಸರು ಈ ಕ್ರಮ ಕೈಗೊಂಡರು.

1992: ಆಜಾದ್ ಹಿಂದ್ ಫೌಜಿನ ಕ್ಯಾಪ್ಟನ್ ಆಗಿದ್ದ ಪಿ.ಕೆ. ಸೆಹಗಲ್ ನಿಧನ.

1978: ರೋಮನ್ ಕ್ಯಾಥೋಲಿಕ್ ಇಗರ್ಜಿಯ (ಚರ್ಚ್) ಕಾಲೇಜ್ ಆಫ್ ಕಾರ್ಡಿನಲ್ಸ್ ನೂತನ ಪೋಪ್ ಆಗಿ ಕಾರ್ಡಿನಲ್ ಕರೋಲ್ ವೊಜೆಯಾಲ ಅವರನ್ನು ಆಯ್ಕೆ ಮಾಡಿತು. ಅವರು ಎರಡನೇ ಜಾನ್ ಪಾಲ್ ಎಂಬ ಹೆಸರನ್ನು ಇಟ್ಟುಕೊಂಡರು. 1522ರಿಂದ ಇಟಲಿಯೇತರ ವ್ಯಕ್ತಿಯೊಬ್ಬರು ಪೋಪ್ ಹುದ್ದೆಗೆ ಏರಿದ್ದು ಇದೇ ಮೊದಲು.

1972: ತಮಿಳುನಾಡಿನ ಜನಪ್ರಿಯ ಚಿತ್ರ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು `ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ' (ಎಐಎಡಿಎಂಕೆ) ಸ್ಥಾಪನೆ ಮಾಡಿದರು. ಅಣ್ಣಾದುರೈ ಅವರು ಸ್ಥಾಪಿಸಿದ್ದ `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷದಿಂದ ಹೊರಬಂದು ಅವರು ಈ ಪಕ್ಷವನ್ನು ಕಟ್ಟಿದರು.

1950: ಸಾಹಿತಿ ಜ್ಯೋತಿ ಶಶಿಕುಮಾರ್ ಜನನ.

1949: ಸಾಹಿತಿ ಡಾ. ಜೆ.ಕೆ. ರಮೇಶ್ ಜನನ.

1948: ಚಿತ್ರ ನಟಿ ಹೇಮಮಾಲಿನಿ ಜನ್ಮದಿನ.

1945: ಅಮೆರಿಕದಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯನ್ನು (ಎಫ್ಎಓ) ಈದಿನ ಅಸ್ತಿತ್ವಕ್ಕೆ ತರಲಾಯಿತು. ಅದರ ಸ್ಮರಣೆಗಾಗಿ ಈದಿನವನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತದೆ. 1981ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು.

1941: ಸಾಹಿತ್ಯ ಮತ್ತು ಆಡಳಿತ ಎರಡನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋದ ಖ್ಯಾತ ಸಾಹಿತಿ ಪಿ.ಎಸ್. ರಾಮಾನುಜಂ ಅವರು ಸಂಪತ್ ಕುಮಾರ್ ಆಚಾರ್ಯ- ಇಂದಿರಮ್ಮ ದಂಪತಿಯ ಮಗನಾಗಿ ಚಾಮರಾಜನಗರ ಜಿಲ್ಲೆಯ ಬೇಡಮೂಡಲುನಲ್ಲಿ ಜನಿಸಿದರು.

1931: ಸಾಹಿತಿ ಕ.ಮ.ಶಿ. ಚಂದ್ರಶೇಖರಯ್ಯ ಜನನ.

1916: ಮಾರ್ಗರೆಟ್ ಸ್ಯಾಂಗರ್ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ನಿನಲ್ಲ್ಲಿ `ಜನನ ನಿಯಂತ್ರಣ ಕ್ಲಿನಿಕ್' ತೆರೆದರು. ಅವರನ್ನು ಒಂಬತ್ತು ದಿನಗಳ ಬಳಿಕ ಬಂಧಿಸಿ ಒಂದು ತಿಂಗಳ ಕಾಲ ಸೆರೆಮನೆಯಲ್ಲಿ ಇಡಲಾಯಿತು. ಜನನ ನಿಯಂತ್ರಣ ಚಳವಳಿಯ ಸ್ಥಾಪಕಿ ಎಂದೇ ಈಕೆಯನ್ನು ಪರಿಗಣಿಸಲಾಗಿದೆ.

1905: ಬಂಗಾಳದಲ್ಲಿ ವ್ಯಾಪಕವಾಗಿದ್ದ ರಾಷ್ಟ್ರೀಯತೆಯ ಭಾವನೆಯ ಪ್ರಭಾವ ಭಾರತದ ಇತರ ಭಾಗಗಳ ಮೇಲೆ ಆಗದಂತೆ ತಡೆಯಲು ಲಾರ್ಡ್ ಕರ್ಝನ್ ಬಂಗಾಳವನ್ನು ವಿಭಜಿಸಿದ. ಹಲವಾರು ಆಡಳಿತಾತ್ಮಕ ಸಮಸ್ಯೆಗಳಿಗೆ ಇದು ಪರಿಹಾರ ಆಗಬಹುದು ಎಂದು ಆತ ಭಾವಿಸಿದ್ದ. ಬಂಗಾಳದ ಏಳು ಪೂರ್ವ ಜಿಲ್ಲೆಗಳು ಮತ್ತು ನಾಲ್ಕು ಗುಡ್ಡಗಾಡು ಜಿಲ್ಲೆಗಳನ್ನು `ಪೂರ್ವ ಬಂಗಾಳ' ಎಂಬ ಹೊಸ ಪ್ರಾಂತ ರಚಿಸಿ ಅದಕ್ಕೆ ವರ್ಗಾಯಿಸಲಾಯಿತು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement