ಇಂದಿನ ಇತಿಹಾಸ
ಅಕ್ಟೋಬರ್ 27
ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಸಹಿ ಹಾಕಿದರು. ಪಾಕಿಸ್ಥಾನಿ ದಾಳಿಗಳ ವಿರುದ್ಧ ನೆರವು ನೀಡುವಂತೆ ಮನವಿ ಮಾಡಿದ ಅವರು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಕೊಡುಗೆಯನ್ನು ಮುಂದಿಟ್ಟರು. ಭಾರತ ಸರ್ಕಾರ ಮಹಾರಾಜ ಹರಿಸಿಂಗ್ ಅವರ ಈ ಕೊಡುಗೆಯನ್ನು ಅಂಗೀಕರಿಸಿ ಕಾಶ್ಮೀರಕ್ಕೆ ತನ್ನ ಸೇನೆಯನ್ನು ಕಳುಹಿಸಿತು.
2007: ಅತ್ಯಂತ ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ಕೈಜೋಡಿಸಿದ ಬಿಜೆಪಿ ಮತ್ತು ಜನತಾದಳ (ಎಸ್) ಜಂಟಿಯಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ಕೋರುವ ಪತ್ರಗಳನ್ನು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಸಲ್ಲಿಸಿದವು. ಸಂವಿಧಾನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಇದಕ್ಕೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದರು. ಇದರಿಂದಾಗಿ ಕಾಂಗ್ರೆಸ್ ಜೊತೆಗೆ ಸಖ್ಯ ಬೆಳೆಸುವ ಯತ್ನದಲ್ಲಿ ಜನತಾದಳದಲ್ಲಿ ಪರ್ಯಾಯ ನಾಯಕರಾಗಲು ಹೊರಟಿದ್ದ ಎಂ.ಪಿ.ಪ್ರಕಾಶ್ ಅವರ ಆಸೆಗೆ ಆರಂಭದಲ್ಲೇ ವಿಘ್ನ ಉಂಟಾಯಿತು.
2007: ಅತ್ಯಂತ ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ಕೈಜೋಡಿಸಿದ ಬಿಜೆಪಿ ಮತ್ತು ಜನತಾದಳ (ಎಸ್) ಜಂಟಿಯಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ಕೋರುವ ಪತ್ರಗಳನ್ನು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಸಲ್ಲಿಸಿದವು. ಸಂವಿಧಾನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಇದಕ್ಕೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದರು. ಇದರಿಂದಾಗಿ ಕಾಂಗ್ರೆಸ್ ಜೊತೆಗೆ ಸಖ್ಯ ಬೆಳೆಸುವ ಯತ್ನದಲ್ಲಿ ಜನತಾದಳದಲ್ಲಿ ಪರ್ಯಾಯ ನಾಯಕರಾಗಲು ಹೊರಟಿದ್ದ ಎಂ.ಪಿ.ಪ್ರಕಾಶ್ ಅವರ ಆಸೆಗೆ ಆರಂಭದಲ್ಲೇ ವಿಘ್ನ ಉಂಟಾಯಿತು.
2007: ಮಾಜಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರನ್ನು 'ಬಿ.ಎಸ್. ಯಡ್ಯೂರಪ್ಪ' ಎಂಬುದಾಗಿ ಬದಲಾಯಿಸಿಕೊಂಡರು. ಅಕ್ಟೋಬರ್ 11ರಂದೇ ಪ್ರಮಾಣಪತ್ರ ಸಲ್ಲಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಅವರ ಪತ್ರಿಕಾ ಪ್ರಕಟಣೆ ತಿಳಿಸಿತು. ಕೆಲವೇ ದಿನಗಳಲ್ಲಿ ಇನ್ನೊಂದು ಪ್ರಕಟಣೆ ನೀಡಿದ ಅವರು ಇಂಗ್ಲಿಷಿನಲ್ಲಿ ಮಾತ್ರ 'ಯಡಿಯೂರಪ್ಪ' ಬದಲಿಗೆ 'ಯಡ್ಯೂರಪ್ಪ' ಎಂದು ಬದಲಿಸಲಾಗಿದ್ದು, ಕನ್ನಡದಲ್ಲಿ ಉಚ್ಚಾರಣೆ ಹಿಂದಿನಂತೆಯೇ ಇರುತ್ತದೆ ಎಂದು ಸ್ಷಷ್ಟ ಪಡಿಸಿದರು.
2007: ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ, ಸಂಸದ ಬಾಬುಲಾಲ್ ಮರಾಂಡಿ ಅವರ ಪುತ್ರ ಪುತ್ರ ಅನೂಪ್ ಸೇರಿದಂತೆ 18 ಜನರನ್ನು ಬಿಹಾರ ಗಡಿಗೆ ಹೊಂದಿಕೊಂಡಿರುವ ಗಿರಿದಿಹ್ ಜಿಲ್ಲೆಯ ಚಿಲ್ಖಾಡಿಯಾ ಗ್ರಾಮದಲ್ಲಿ ಮಾವೋವಾದಿ ಉಗ್ರರು ಹತ್ಯೆ ಮಾಡಿದರು. ರಾತ್ರಿ 1 ಗಂಟೆಗೆ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ದಾಳಿ ನಡೆಸಿದ 25ರಿಂದ 30 ಜನ ಮಾವೋವಾದಿ ಉಗ್ರರು ಗುಂಡಿನ ಮಳೆಗರೆಯುವುದರೊಂದಿಗೆ ಬಾಂಬ್ಗಳನ್ನು ಸಿಡಿಸಿದರು. ಘಟನಾ ಸ್ಥಳದಲ್ಲಿ 14 ಜನರು ಸಾವಿಗೀಡಾದರು. ನಂತರ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಮೃತರಾದರು.
2007: ಉತ್ತರ ಚೀನಾದ ಕೆಲವು ಭಾಗಗಳಲ್ಲಿ ನಶಿಸಿವೆ ಎಂದು ನಂಬಲಾಗಿದ್ದ ಅಪಾಯಕಾರಿ ಹುಲಿಗಳು ಇನ್ನೂ ಅಸ್ತಿತ್ವದಲ್ಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹುಲಿ ಬೇಟೆಯನ್ನು ನಿಷೇಧಿಸಲಾಯಿತು. ಈ ಪ್ರದೇಶದಲ್ಲಿ ಕಂಡು ಬಂದ ಹುಲಿಗಳು ನಶಿಸಿಹೋಗುತ್ತಿರುವ ಪ್ರಾಣಿ ಸಂಕುಲಕ್ಕೆ ಸೇರಿವೆ ಎಂದು ತಜ್ಞರು ದೃಢಪಡಿಸಿದ್ದಾರೆ. ಈ ಪ್ರಾಂತ್ಯದಲ್ಲಿ 1950ರಲ್ಲಿ ಇಂತಹ 4000 ಹುಲಿಗಳು ಇದ್ದವು.
2007: 'ಕರ್ನಾಟಕ ರಾಜ್ಯದಲ್ಲಿ ಗೋ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ದುಂಡು ಮೇಜಿನ ಸಭೆಯೊಂದನ್ನು ನಡೆಸುವ ಮೂಲಕ, ಗೋ ಸಂರಕ್ಷಣೆ ಕುರಿತ ಕೆಲ ನಿರ್ಣಯಗಳನ್ನು ಕೈಗೊಳ್ಳುವ ಅಗತ್ಯವಿದೆ' ಎಂದು ಸಂಸತ್ ಸದಸ್ಯ ಅನಂತಕುಮಾರ್ ಬೆಂಗಳೂರಿನಲ್ಲಿ ಅಭಿಪ್ರಾಯ ಪಟ್ಟರು. ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗಿರಿನಗರದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ವ ಸಾರುವ `ಗೋಸಂಧ್ಯಾ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗೋ ಸಂಪತ್ತಿನಿಂದ ಪರಿಸರಕ್ಕೆ ಆಗುವ ಅನುಕೂಲ, ಗ್ರಾಮೀಣ ಪ್ರದೇಶದ ಆರ್ಥಿಕತೆ ಹಾಗೂ ಗೋ ಸಂಪತ್ತಿಗೆ ಇರುವ ಸಂಬಂಧವನ್ನು ಗಮನದಲ್ಲಿ ಇಟ್ಟುಕೊಂಡು ಸಭೆಯಲ್ಲಿ ಚರ್ಚೆ ನಡೆಯಬೇಕು. ಆ ಮೂಲಕ ರಾಷ್ಟ್ರೀಯ ಗೋ ನೀತಿ ಜಾರಿಗೆ ತರುವ ಅವಶ್ಯಕತೆ ಇದೆ' ಎಂದು ಅವರು ಪ್ರತಿಪಾದಿಸಿದರು. ರಾಜ್ಯದಲ್ಲಿ 300ರಷ್ಟಿದ್ದ ಕಸಾಯಿಖಾನೆಗಳು ಇದೀಗ 36 ಸಾವಿರಕ್ಕೆ ಏರಿದೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅಲ್ಲದೆ ಮನೆಗೊಂದು ಮರದಂತೆ ಮನೆಗೊಂದು ದೇಶಿ ತಳಿಯ ಗೋವು ಸಾಕುವ ಸಂಕಲ್ಪವನ್ನು ತೊಡಬೇಕು' ಎಂದು ಅವರು ಆಗ್ರಹಿಸಿದರು. ಹಿರಿಯ ರಂಗ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಮಾತನಾಡಿ, ನವಿಲನ್ನು ಕೊಂದವರಿಗೆ ಶಿಕ್ಷೆ ನೀಡುವ ಕಾನೂನು ನಮ್ಮ ದೇಶದಲ್ಲಿದೆ. ಆದರೆ ಗೋವನ್ನು ಕೊಂದು ತಿನ್ನುವವರಿಗೆ ಯಾವ ಶಿಕ್ಷೆಯಿಲ್ಲ. ಗೋವನ್ನು ತಿನ್ನುವುದು ನಮ್ಮ ಸಂಸ್ಕೃತಿಯೇ?' ಎಂದು ಪ್ರಶ್ನಿಸಿದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಶ್ವಭಾರತಿ ಗೃಹನಿರ್ಮಾಣ ಸಂಘದ ಅಧ್ಯಕ್ಷ ಬಿ.ಕೃಷ್ಣ ಭಟ್, ಬಿಜೆಪಿ ನಗರ ಉಪಾಧ್ಯಕ್ಷ ರವಿ ಸುಬ್ರಹ್ಮಣ್ಯ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಹಾಜರಿದ್ದರು.
2006: ರಜಪೂತ ವಂಶಜ ಮಹಾರಾಜ ಎರಡನೆಯ ಗಜಸಿಂಗ್ ಅವರಿಗೆ ನ್ಯೂಯಾರ್ಕಿನಲ್ಲಿ ಈ ಸಾಲಿನ ಅಮೆರಿಕದ ಪ್ರತಿಷ್ಠಿತ ಹಾಡ್ರಿಯನ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಪ್ರಾಚೀನ ವಾಸ್ತುಶಿಲ್ಪ ಸಂರಕ್ಷಣೆಗೆ ವಹಿಸಿರುವ ಆಸ್ಥೆಯನ್ನು ಪರಿಗಣಿಸಿ ಅವರಿಗೆ ಈ ಪುರಸ್ಕಾರ ನೀಡಲಾಯಿತು. ಅಮೆರಿಕದಲ್ಲಿರುವ ಭಾರತದ ರಾಯಭಾರಿ ರೊನೆನ್ ಸೇನ್ ಅವರು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಿ ಮಹಾರಾಜ ಗಜಸಿಂಗ್ ಅವರನ್ನು ಸನ್ಮಾನಿಸಿದರು. ಶತಮಾನಗಳಷ್ಟು ಹಳೆಯದಾದ ವಾಸ್ತುಶಿಲ್ಪ ಹಾಗೂ ಅವುಗಳ ಸಂರಕ್ಷಣೆಗೆ ನೀಡುವ ಮಹತ್ತರ ನೆರವು ಆಧರಿಸಿ ಅಮೆರಿಕದ `ವಿಶ್ವ ಸ್ಮಾರಕ ನಿಧಿ' (ವರ್ಲ್ಡ್ ಮಾನ್ಯುಮೆಂಟ್ ಫಂಡ್) ಸೇವಾ ಸಂಸ್ಥೆಯು ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುತ್ತದೆ.
2006: ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ವರನಟ ಡಾ. ಡಾ. ರಾಜಕುಮಾರ್ ಅವರ ಪಂಚಲೋಹದ ಪುತ್ಥಳಿಯನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅನಾವರಣ ಮಾಡಿದರು.
2006: ಹಿರಿಯ ತಬಲಾ ವಾದಕ ಪ್ರೊ. ಕರವೀರಪ್ಪ ಶಿವಪ್ಪ ಹಡಪದ (ಕೆ. ಎಸ್. ಹಡಪದ) (76) ಗುಲ್ಬರ್ಗದಲ್ಲಿ ನಿಧನರಾದರು.
2006: ಅತ್ಯಾಚಾರ, ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಕೃತ ಕಾಮಿ ಉಮೇಶ ರೆಡ್ಡಿಗೆ ಬೆಂಗಳೂರು ನಗರದ ಏಳನೇ ತ್ವರಿತ ನ್ಯಾಯಾಲಯ ಮರಣದಂಡನೆ ವಿಧಿಸಿತು. ನ್ಯಾಯಾಧೀಶರಾದ ಕೆ. ಸುಕನ್ಯಾ ಈ ತೀರ್ಪು ನೀಡಿದರು. 1998ರ ಫೆಬ್ರುವರಿ 28ರ ಮಧ್ಯಾಹ್ನ ಉಮೇಶ ರೆಡ್ಡಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಜಯಶ್ರೀ ಮರಡಿ ಸುಬ್ಬಯ್ಯ (37) ಮನೆಗೆ ನುಗ್ಗಿ ಅವರ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹತ್ಯೆಗೈದು ಮನಯಲ್ಲಿದ್ದ ನಗನಾಣ್ಯ ದರೋಡೆ ಮಾಡಿ ಪರಾರಿಯಾಗಿದ್ದ.
2000: ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರಿಂದ ವಿಶ್ವದಾಖಲೆ. ಭಾರತದ ವಿರುದ್ಧ ಶಾರ್ಜಾದಲ್ಲಿ ನಡೆದ ಕೋಕಾಕೋಲಾ ಏಕದಿನ ಪಂದ್ಯದಲ್ಲಿ 30 ರನ್ನುಗಳಿಗೆ 7 ವಿಕೆಟ್ ಉರುಳಿಸುವ ಮೂಲಕ ಅವರಿಂದ ಈ ದಾಖಲೆ ಸ್ಥಾಪನೆಯಾಯಿತು.
1999: ಲೋಕಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಪಿ.ಎಂ. ಸಯೀದ್ ಪುನರಾಯ್ಕೆಯಾದರು.
1992: ಕರ್ನಾಟಕದಲ್ಲಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಂಪುಟದ ಸಂಸದೀಯ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ ರಾಜೀನಾಮೆ ನೀಡಿದರು.
1969: ಚಂಡೀಗಢವನ್ನು ಪಂಜಾಬ್ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸಿ ಆಮರಣ ನಿರಶನ ನಡೆಸಿದ ಸಿಖ್ ಧುರೀಣ ದರ್ಶನ್ ಸಿಂಗ್ ಫೆರುಮಾನ್ ಅವರು ತಮ್ಮ ನಿರಶನದ 74ನೇ ದಿನವಾದ ಈದಿನ ಮೃತರಾದರು.
1947: ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಸಹಿ ಹಾಕಿದರು. ಪಾಕಿಸ್ಥಾನಿ ದಾಳಿಗಳ ವಿರುದ್ಧ ನೆರವು ನೀಡುವಂತೆ ಮನವಿ ಮಾಡಿದ ಅವರು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಕೊಡುಗೆಯನ್ನು ಮುಂದಿಟ್ಟರು. ಭಾರತ ಸರ್ಕಾರ ಮಹಾರಾಜ ಹರಿಸಿಂಗ್ ಅವರ ಈ ಕೊಡುಗೆಯನ್ನು ಅಂಗೀಕರಿಸಿ ಕಾಶ್ಮೀರಕ್ಕೆ ತನ್ನ ಸೇನೆಯನ್ನು ಕಳುಹಿಸಿತು. ಪಾಕಿಸ್ಥಾನಿ ಸರ್ಕಾರವು ಪಠಾಣರ ದಾಳಿಗಳಿಗೆ ಕಾಶ್ಮೀರವನ್ನು ದೂರಿತು ಹಾಗೂ ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸಿದದನ್ನು ಮಾನ್ಯ ಮಾಡಲು ನಿರಾಕರಿಸಿತು.
1940: ಆರತಿ ಸಹಾ (1940-1994) ಜನ್ಮದಿನ. ಇವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿನ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1920: ಭಾರತದ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಜನ್ಮದಿನ. ಇವರು 1997-2002ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.
1911: ಸಿಖ್ ಧಾರ್ಮಿಕ ನಾಯಕ ಸಂತ ಫತೇಸಿಂಗ್ (1911-72) ಜನ್ಮದಿನ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಂಜಾಬಿ ಮಾತನಾಡುವ ಜನರಿಗಾಗಿ ಪ್ರತ್ಯೇಕ ರಾಜ್ಯ ಸ್ಥಾಪಿಸುವಂತೆ ಮಾಸ್ಟರ್ ತಾರಾಸಿಂಗ್ ಅವರ ಜೊತೆಗೂಡಿ ತೀವ್ರ ಪ್ರಚಾರ ಅಭಿಯಾನ ಕೈಗೊಂಡ ವ್ಯಕ್ತಿ ಫತೇಸಿಂಗ್.
1907: ಹರಿವಂಶರಾಯ್ ಬಚ್ಚನ್ ಜನ್ಮದಿನ. ಭಾರತೀಯ ಸಾಹಿತಿ, ಕವಿಯಾದ ಇವರು ಚಿತ್ರನಟ ಅಮಿತಾಭ್ ಬಚ್ಚನ್ ಅವರ ತಂದೆ.
1906: ಕನ್ನಡ ಸಾಹಿತಿ ದೊಡ್ಡಬೆಲೆಯ ಡಿ.ಎಲ್.ಎನ್. (27/10/1906-8/5/1971) ಜನ್ಮದಿನ. ಸಂಶೋಧನೆ, ವಿಮರ್ಷಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಇವರು `ವಡ್ಡಾರಾಧನೆ', `ಪಂಪರಾಮಾಯಣ ಸಂಗ್ರಹ', `ಭೀಷ್ಮಪರ್ವ' ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.
1904: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ (1904-1929) ಜನ್ಮದಿನ. ಅವರು ಲಾಹೋರ್ ಜೈಲಿನಲ್ಲಿ ತಮ್ಮ ಆಮರಣ ನಿರಶನದ 63ನೇ ದಿನ ಮೃತರಾದರು.
1858: ಥಿಯೋಡೋರ್ ರೂಸ್ ವೆಲ್ಟ್ (1858-1919) ಜನ್ಮದಿನ. ಇವರು 1901-1909ರ ಅವಧಿಯಲ್ಲಿ ಅಮೆರಿಕದ 26ನೇ ಅಧ್ಯಕ್ಷರಾಗಿದ್ದರು.
1811: ಅಮೆರಿಕದ ಸಂಶೋಧಕ ಐಸಾಕ್ ಮೆರ್ರಿಟ್ ಸಿಂಗರ್ (1811-75) ಜನ್ಮದಿನ. ಗೃಹ ಬಳಕೆಗೆ ಬಳಸುವಂತಹ ಮೊತ್ತ ಮೊದಲ ಹೊಲಿಗೆ ಯಂತ್ರವನ್ನು ಇವರು ಅಭಿವೃದ್ಧಿ ಪಡಿಸಿದರು. ಕಂತು ಸಾಲ ಯೋಜನೆಯನ್ನು ಜಾರಿಗೆ ತಂದವರೂ ಇವರೇ. ಇವರ ಕಂತು ಸಾಲ ಯೋಜನೆ ಆಧುನಿಕ ಸಮಾಜದಲ್ಲಿ ವ್ಯಾಪಕ ಪ್ರಭಾವ ಬೀರಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment