Tuesday, October 28, 2008

ಇಂದಿನ ಇತಿಹಾಸ History Today ಅಕ್ಟೋಬರ್ 28

ಇಂದಿನ ಇತಿಹಾಸ

ಅಕ್ಟೋಬರ್ 28

ಕರ್ನಾಟಕದ ಕೈಗಾ ಅಣುವಿದ್ಯುತ್ ಸ್ಥಾವರದ ಎರಡನೇ ಘಟಕವು ಸತತ 436 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವದಾಖಲೆಗೆ ಅರ್ಹವಾಯಿತು. 
 
2007: ಕರ್ನಾಟಕದ ಕೈಗಾ ಅಣುವಿದ್ಯುತ್ ಸ್ಥಾವರದ ಎರಡನೇ ಘಟಕವು ಸತತ 436 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವದಾಖಲೆಗೆ ಅರ್ಹವಾಯಿತು. 2006ರ ಆಗಸ್ಟ್ 19ರಂದು ಆರಂಭವಾದ ಕೈಗಾದ ಎರಡನೇ ಘಟಕ ಒಂದೇ ಒಂದು ದಿನವೂ ಸಹ ವಿದ್ಯುತ್ ಉತ್ಪಾದನೆ ನಿಲ್ಲಿಸದೆಯೇ ಕಾರ್ಯ ನಿರ್ವಹಿಸುವ ಮೂಲಕ ಅಮೆರಿಕಾದ ಅಣುವಿದ್ಯುತ್ ಘಟಕ ಸ್ಥಾಪಿಸಿದ್ದ ಸತತ 406 ದಿನಗಳ ವಿದ್ಯುತ್ ಉತ್ಪಾದನೆಯ ದಾಖಲೆಯನ್ನು ಮುರಿಯಿತು. ದೇಶದಲ್ಲಿರುವ ಒಟ್ಟು 18 ಅಣುವಿದ್ಯುತ್ ಘಟಕಗಳಲ್ಲಿ ಈ ಘಟಕ ಮಾತ್ರ ಈ ಸಾಧನೆಗೆ ಅರ್ಹವಾಗಿದ್ದು, ವಿಶ್ವದಲ್ಲಿಯೇ ಈ ಸಾಧನೆ ಮಾಡಿದ ಮೊದಲ ಘಟಕ ಎಂಬ ಹೆಗ್ಗಳಿಕೆಯನ್ನೂ ಪಡೆಯಿತು.

2007: ವಿಶೇಷ ಆರ್ಥಿಕ ವಲಯಕ್ಕಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ನಂದಿಗ್ರಾಮದಲ್ಲಿ ನಡೆದ ಸಂಗ್ರಾಮ ಮತ್ತೊಮ್ಮೆ ಉಗ್ರ ಸ್ವರೂಪ ಪಡೆಯಿತು. ಈದಿನ ಇಲ್ಲಿ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಸಿಪಿಎಂನ ನಾಲ್ವರು ಕಾರ್ಯಕರ್ತರು ಮೃತರಾಗಿ, ಐವರು ಗಾಯಗೊಂಡರು. ನಂದಿಗ್ರಾಮಕ್ಕೆ ಸಮೀಪದ ಖೆಜೂರಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್ಖನ್ ಚಕ್ ಎಂಬಲ್ಲಿ ಈ ದುರಂತ ಸಂಭವಿಸಿತು. ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ರೈತರ ತೀವ್ರ ವಿರೋಧದ ಮಧ್ಯೆ ವಿಶೇಷ ವಿತ್ತ ವಲಯಕ್ಕಾಗಿ ಬಲವಂತದಿಂದ ಭೂಮಿ ಸ್ವಾಧೀನ ಪಡೆಯಲು ಸರ್ಕಾರ ಮುಂದಾದುದರ ವಿರುದ್ಧ ಹೋರಾಟದ ನೇತೃತ್ವ ವಹಿಸಿದ ಭೂಮಿ ಉಚೇಡ್ ಪ್ರತಿರೋಧ ಕಮಿಟಿ (ಬಿಯುಪಿಸಿ)ಯು ಹಿಂದಿನ ದಿನ ನಡೆದ ಘರ್ಷಣೆಯನ್ನು ಖಂಡಿಸಿ ನೀಡಿದ್ದ 12 ಗಂಟೆಗಳ ಬಂದ್ ಸಂದರ್ಭದಲ್ಲಿ ಈ ಘಟನೆ ನಡೆಯಿತು.

2007: ಭಾರತದ ಮೊದಲ 500 ಮೆಗಾ ವಾಟ್ ಸಾಮರ್ಥ್ಯದ ಅಣು ಸ್ಥಾವರದ (ಫಾಸ್ಟ್ ಬ್ರೀಡರ್ ರಿಯಾಕ್ಟರ್) ನಿರ್ಮಾಣ ನಿರ್ಣಾಯಕ ಹಂತ ತಲುಪಿದ್ದು, ಸುಮಾರು 165 ಟನ್ ಭಾರದ ಸುರಕ್ಷಾ ಕವಾಟವನ್ನು ಅಳವಡಿಸಲು ಸಿದ್ಧತೆಗಳು ನಡೆದವು. ಸುಮಾರು ರೂ.3,492 ಕೋಟಿ ವೆಚ್ಚದಲ್ಲಿ ತಮಿಳುನಾಡಿನ ಕಲ್ಪಾಕಮ್ಮಿನಲ್ಲಿ ನಿರ್ಮಿಸಲಾಗುತ್ತಿರುವ ಈ ಪ್ರಾಯೋಗಿಕ ಅಣು ವಿದ್ಯುತ್ ಸ್ಥಾವರ ಹಲವಾರು ದಾಖಲೆಗಳನ್ನು ಹೊಂದಿದೆ. ಈಗ ಇದಕ್ಕೆ ಅಳವಡಿಸಲಾದ ಸುರಕ್ಷಾ ಕವಾಟ ಕೂಡ ಇದೇ ಮೊದಲನೆಯದು ಎನ್ನಲಾಗಿದೆ. ಅಣು ಸ್ಥಾವರ 2010ರ ವೇಳೆಗೆ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲಿದ್ದು, 2020ರ ವೇಳೆಗೆ ಇಂತಹ ಇನ್ನೂ ನಾಲ್ಕು ಸ್ಥಾವರಗಳು ಕಾರ್ಯಾರಂಭ ಮಾಡುವುವು.

2007: ಆಫ್ಘಾನಿಸ್ಥಾನದಲ್ಲಿ ಉಗ್ರಗಾಮಿಗಳ ಹಠಾತ್ ದಾಳಿಗೆ ಪ್ರತಿಯಾಗಿ ಅಮೆರಿಕ ನೇತೃತ್ವದ ಸೇನೆ ಮತ್ತು ಆಫ್ಘನ್ ಸೇನೆ ಜಂಟಿಯಾಗಿ ಆರು ಗಂಟೆಗಳ ಕಾಲ ಹೋರಾಟ ನಡೆಸಿ, ಸುಮಾರು 80 ಮಂದಿ ತಾಲಿಬಾನ್ ಉಗ್ರರನ್ನು ಕೊಂದವು ಎಂದು ಅಮೆರಿಕ ಸೇನೆ ಪ್ರಕಟಿಸಿತು. ಹೆಲ್ಮಾಂಡ್ ಪ್ರಾಂತ್ಯದ ಸೇನಾ ಶಿಬಿರದ ಮೇಲೆ ತಾಲಿಬಾನ್ ಉಗ್ರರು ಸ್ವಯಂಚಾಲಿತ ಕೋವಿ ಮತ್ತು ರಾಕೆಟ್ ಇರುವ ಗ್ರೆನೇಡುಗಳಿಂದ ದಾಳಿ ನಡೆಸಿದರು. ತತ್ ಕ್ಷಣ ಇದಕ್ಕೆ ಪ್ರತಿಯಾಗಿ ಸೇನೆ ದಾಳಿ ನಡೆಸಿತು. ಸೆಪ್ಟೆಂಬರ್ 1ರಿಂದ ಇಲ್ಲಿ ನಡೆದ ದಾಳಿಗಳಲ್ಲಿ ಸುಮಾರು 250 ತಾಲಿಬಾನ್ ಉಗ್ರರನ್ನು ಕೊಲ್ಲಲಾಯಿತು.

2007: ಕರ್ನಾಟಕದಲ್ಲಿ ಮರುಮೈತ್ರಿಗೆ ಮುಂದಾದ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಮತ್ತೊಮ್ಮೆ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತ್ವತ್ವದಲ್ಲಿ ಕಾಂಗ್ರೆಸ್ ನಾಯಕರ ದಂಡೊಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಆಗ್ರಹಿಸಿತು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಚ್. ಕೆ. ಪಾಟೀಲ್ ಜೊತೆಗಿದ್ದರು.

 2007: ಸಿಟ್ಟಿನ ಭರದಲ್ಲಿ ಹೆಂಡತಿಗೆ ಗಂಡ ಮೂರು ಬಾರಿ ತಲಾಖ್ ಹೇಳಿದರೆ ಅಥವಾ ನಿಗದಿತ ಅವಧಿಯೊಳಗೆ ಆಕೆಗೆ ಅದನ್ನು ತಿಳಿಸದೇ ಹೋದರೆ ಅಂಥ `ತಲಾಖ್' ಗೆ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ತೀವ್ರ ಕೋಪದಿಂದ ಸ್ವಯಂ ನಿಯಂತ್ರಣ ಕಳೆದುಕೊಂಡ ಪತಿ, `ತಲಾಖ್, ತಲಾಖ್, ತಲಾಖ್' ಎಂದು ಹೇಳಿದರೆ ಅದನ್ನು ಒಪ್ಪಲಾಗದು. ಅಷ್ಟೇ ಅಲ್ಲದೆ ಪತ್ನಿಯ ಅನುಪಸ್ಥಿತಿಯಲ್ಲಿ ಕೊಟ್ಟ ತಲಾಖ್ ಪತ್ನಿಗೆ ತಿಳಿಸದ್ದಿದರೆ ಅದು ಸಹ ಕ್ರಮಬದ್ಧವಾಗದು ಎಂದು ನ್ಯಾಯಮೂರ್ತಿ ಬಿ.ಡಿ.ಅಹ್ಮದ್ ಹೇಳಿದರು. ಆಯೇಷಾ ಅಂಜುಂ ಅವರು ತಮ್ಮಿಂದ ದೂರವಾದ ಪತಿ ಮಸೂರ್ ಅಹ್ಮದ್ ವಿರುದ್ಧ ಮಾಡಿರುವ ಅತ್ಯಾಚಾರದ ಆರೋಪವನ್ನೂ ತಿರಸ್ಕರಿಸಿದ ನ್ಯಾಯಾಲಯ, 2005ರ ಅಕ್ಟೋಬರಿನಲ್ಲಿ ಸಾರಲಾದ ತಲಾಖ್ ಕ್ರಮಬದ್ಧವಲ್ಲ, ಆದ್ದರಿಂದ ಅತ್ಯಾಚಾರದ ಆರೋಪ ಮಾಡಿದ ಸಂದರ್ಭದಲ್ಲಿಯೂ ೂ ಅವರು ಪತಿ-ಪತ್ನಿಯಾಗಿಯೇ ಇದ್ದರು ಎಂದು ಹೇಳಿತು. ತಲಾಖ್ ಕ್ರಮಬದ್ಧವಲ್ಲದ ಕಾರಣ ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯೊಂದಿಗೆ ಪತಿ ಹೊಂದುವ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು. 'ಅಕ್ಟೋಬರ್ 2005 ರಂದು ನನಗೆ ತಲಾಖ್ ನೀಡಿದ್ದರೂ ಮಸೂರ್ ಅಹ್ಮದ್ 2006ರ ಏಪ್ರಿಲ್ 13 ರಿಂದ 19ರವರೆಗೆ ತವರು ಮನೆಯಲ್ಲಿದ್ದ ನನ್ನ ಮೇಲೆ ಅತ್ಯಾಚಾರವೆಸಗಿದ' ಎಂಬುದು ಆಯೆಷಾ ಅಂಜುಂ ನೀಡಿದ ದೂರಿನ ಸಾರಾಂಶವಾಗಿತ್ತು. 

2006: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಹಸನ್ ತೀವ್ರ ಅನಾರೋಗ್ಯಕ್ಕೆ ಈಡಾಗಿ ಅಧಿಕಾರ ಸ್ವೀಕರಿಸಲು ಅಶಕ್ತರಾಗಿದ್ದಾರೆ ಎಂಬ ಕಾರಣ ನೀಡಿ ರಾಷ್ಟ್ರಪತಿ ಇಯಾಜ್ದುದೀನ್ ಅಹ್ಮದ್ ಅವರು ಹಂಗಾಮಿ ಮುಖ್ಯಸ್ಥರ ಪ್ರಮಾಣವಚನ ಸಮಾರಂಭವನ್ನು ಮುಂದೂಡಿದರು.

2006: ಭಾರತದಲ್ಲಿ ಹೊಸದಾಗಿ ಜಾರಿಯಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ತಿರುನಲ್ವೇಲಿ ಸಮೀಪದ ಮೆಲಪಾಳ್ಯಂನಲ್ಲಿ ಸರ್ಕಾರಿ ನೌಕರ ಜೋಸೆಫ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದರು. ಈ ಕಾಯ್ದೆಯ ಅಡಿಯಲ್ಲಿ ಬಂಧಿತನಾದ ಮೊತ್ತ ಮೊದಲ ವ್ಯಕ್ತಿ ಈತ. ಅಕ್ಟೋಬರ್ 25ರಂದು ತನ್ನ ಪತ್ನಿ ಬೆನೆಡಿಕ್ಟ್ ಮೇರಿಯನ್ನು ಈತ ಛತ್ರಿಯ ಮೊನೆಯಿಂದ ತಿವಿದು ಹಿಂಸಿಸಿದ್ದ. ಕತ್ತು ಹಾಗೂ ಮೂಗಿಗೆ ಗಾಯಗಳಾಗಿ ರಕ್ತ ಸೋರುತ್ತ್ದಿದ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2005: ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ಕರ್ನಾಟಕದ ಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ ಅವರು 2005ನೇ ಸಾಲಿನ ಆದಿತ್ಯ ವಿಕ್ರಮ್ ಬಿರ್ಲಾ ಕಲಾ ಪುರಸ್ಕಾರಕ್ಕೆ ಆಯ್ಕೆಯಾದರು. ಈ ಪ್ರಶಸ್ತಿಯ ಮೊತ್ತ 1.50 ಲಕ್ಷ ರೂಪಾಯಿಗಳು.

1997: ಮೈಸೂರು ಸಂಪ್ರದಾಯದ ಸಂಗೀತ ಸುಧೆಯನ್ನು ಹರಡಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ವೈಣಿಕ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್ (77) ಬೆಂಗಳೂರಿನಲ್ಲಿ ನಿಧನರಾದರು.

1965: ಅಮೆರಿಕದ ಮಿಸ್ಸೌರಿಯ ಸೈಂಟ್ ಲೂಯಿಯಲ್ಲಿ ಜಗತ್ತಿನ ಅತ್ಯಂತ ಎತ್ತರದ ಸ್ಮಾರಕ ಸ್ಟೆಯಿನ್ ಲೆಸ್ ಸ್ಟೀಲಿನ `ಗೇಟ್ ವೇ ಟು ದಿ ವೆಸ್ಟ್' (ಜೆಫರ್ಸನ್ ನ್ಯಾಷನಲ್ ಎಕ್ಸ್ ಪಾನ್ಶನ್ ಮೆಮೋರಿಯಲ್) ನಿರ್ಮಾಣ ಕಾರ್ಯ ಪೂರ್ಣಗೊಂಡಿತು. 1803ರಲ್ಲಿ ಲೂಸಿಯಾನಾ ಖರೀದಿಯ ಬಳಿಕ ಪಶ್ಚಿಮದೆಡೆಗಿನ ವಿಸ್ತರಣೆಯ ನೆನಪಿಗಾಗಿ ಇದನ್ನು ನಿರ್ಮಿಸಲಾಯಿತು. ಫಿನ್ನಿಶ್- ಅಮೆರಿಕನ್ ಶಿಲ್ಪಿ ಎರೋ ಸಾರಿನೆನ್ ಅವರ ವಿನ್ಯಾಸ ಮಾಡಿದ ಈ ಸ್ಮಾರಕ 630 ಅಡಿಗಳಷ್ಟು ವಿಸ್ತಾರ ಹಾಗೂ ಅಷ್ಟೇ ಎತ್ತರವಾಗಿದೆ.

1955: ಅಮೆರಿಕದ ಕಂಪ್ಯೂಟರ್ ತಜ್ಞ, ಉದ್ಯಮಿ ಮೂರನೆಯ ವಿಲಿಯಂ ಹೆನ್ರಿ `ಬಿಲ್' ಗೇಟ್ಸ್ ಜನ್ಮದಿನ. ಜಗತ್ತಿನ ಪ್ರಪ್ರಥಮ ಪರ್ಸನಲ್ ಕಂಪ್ಯೂಟರ್ ಸಾಫ್ಟ್ ವೇರ್ ಕಂಪೆನಿ `ಮೈಕ್ರೋಸಾಫ್ಟ'ನ್ನು ಸ್ಥಾಪಿಸಿದ ಇವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

1935: ಕನ್ನಡ ಸಾಹಿತಿ ಬೆಂಗಳೂರು ಜಿಲ್ಲೆ ದೇವನಹಳ್ಳಿಯ ಕಮಲಾ ಹಂಪನಾ ಹುಟ್ಟಿದ ದಿನ. `ಅತ್ತಿಮಬ್ಬೆ' ಪ್ರಶಸ್ತಿ ವಿಜೇತರಾದ ವಿವರು `ನಕ್ಕಿತು ಹಾಲಿನ ಬಟ್ಟಲು', `ಬಿಂದಲಿ', `ಬುಗುಡಿ' ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

1933: ಸಾಹಿತಿ ಕೆ. ಶಾಂತಾ ಜನನ.

1926: ಸಾಹಿತಿ ವೈ.ಎಂ.ಎನ್. ಮೂರ್ತಿ ಜನನ.

1898: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಊಧಮ್ ಸಿಂಗ್ (1898-1940) ಜನ್ಮದಿನ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಮೈಕೆಲ್ ಒ' ಡೈಯರನನ್ನು ಕೊಲೆಗೈದುದಕ್ಕಾಗಿ 1940ರಲ್ಲಿ ಊಧಮ್ಸಿಂಗ್ ಅವರನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು.

1886: ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವ ಸಂದರ್ಭದಲ್ಲಿ ಫ್ರಾನ್ಸ್ ನೀಡಿದ ಕೊಡುಗೆಯಾದ `ಸ್ಟಾಚ್ಯೂ ಆಫ್ ಲಿಬರ್ಟಿಯನ್ನು ಅಧ್ಯಕ್ಷ ಗ್ರೋವರ್ ಕ್ಲೆವ್ ಲ್ಯಾಂಡ್ ಅನಾವರಣ ಮಾಡಿದರು. 

1881: ಕನ್ನಡ ಸಾಹಿತಿ ಧಾರವಾಡದ ಉತ್ತಂಗಿ ಚನ್ನಪ್ಪ (28/10/1881-8/5/1971) ಜನ್ಮದಿನ. `ಹಿಂದೂ ಸಮಾಜದ ಹಿತಚಿಂತಕ', `ಮಕ್ಕಳ ಶಿಕ್ಷಣಪಟ' ಇತ್ಯಾದಿ ಕೃತಿಗಳನ್ನು ರಚಿಸಿದ ಇವರು 1949ರಲ್ಲಿ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1867: ಸ್ವಾಮಿ ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ (1867-1911) ಜನ್ಮದಿನ. ಇಂಗ್ಲೆಂಡಿನಲ್ಲಿ ಹುಟ್ಟಿದ ಮಾರ್ಗರೆಟ್ ಎಲಿಜಬೆತ್ ನೊಬಲ್ ಅವರು ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿ ಅವರ ಶಿಷ್ಯೆಯಾಗಿ ಸಿಸ್ಟರ್ ನಿವೇದಿತಾ ಎಂಬುದಾಗಿ ಹೆಸರು ಇಟ್ಟುಕೊಂಡದ್ದಷ್ಟೇ ಅಲ್ಲ, ತಮ್ಮ ಸಾಮಾಜಿಕ, ರಾಜಕೀಯ ಸುಧಾರಣಾ ಕಾರ್ಯಗಳಿಗೆ ಭಾರತವನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು

1636: ಮೆಸಾಚ್ಯುಸೆಟ್ಸಿನ ಕೇಂಬ್ರಿಜಿನಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇಂಗ್ಲಿಷ್ ಸಂಜಾತ ಪ್ಯುರಿಟನ್ ಸಚಿವ ಜಾನ್ ಹಾರ್ವರ್ಡ್ ಅವರ ಗೌರವಾರ್ಥ ಅದಕ್ಕೆ ಹಾರ್ವರ್ಡ್ ವಿಶ್ವ ವಿದ್ಯಾಲಯ ಎಂಬ ಹೆಸರು ಇಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement