'ಇಂಡಿಯಾ' ಆಗಬೇಕು 'ಭಾರತ'...
ಹಿಂದುಸ್ಥಾನ್ ಸಮಾಚಾರದ ಕನ್ನಡ ಸುದ್ದಿ ಸೇವೆ ಚಾಲನಾ ಸಮಾರಂಭದಲ್ಲಿ ಚಿದಾನಂದ ಮೂರ್ತಿಯವರು ಕರ್ನಾಟಕದ ಎರಡು ಭಾಗಗಳ ಹೆಸರು ಮತ್ತು ಇಂಡಿಯಾದ ಹೆಸರು ಬದಲಾಗಿ ಸ್ಥಳೀಯ ಹಾಗೂ ರಾಷ್ಟ್ರೀಯ ವಾಸನೆ ಹೊಡೆಯಬೇಕೆನ್ನುವ ಚಿಂತನೆಗೂ ಚಾಲನೆ ನೀಡಿದ್ದಾರೆ. ಈ ಚಿಂತನೆ ಇನ್ನಷ್ಟು ವ್ಯಾಪಕಗೊಳ್ಳಲಿ ಎಂಬ ಹಾರೈಕೆ ನನ್ನದು.
ನೆತ್ರಕೆರೆ ಉದಯಶಂಕರ
'ಇಂಡಿಯಾ ಎಂಬ ಹೆಸರಿನಲ್ಲಿ ವಿದೇಶೀ ವಾಸನೆ ಹೊಡೆಯುತ್ತಿದೆ. ಇದು ಸರಿಯಲ್ಲ ಎಂದು ನನಗೆ ಅನ್ನಿಸುತ್ತಿದೆ. ನಮ್ಮ ದೇಶದ ಹೆಸರು 'ಇಂಡಿಯಾ' ಎಂದು ಅಲ್ಲ 'ಭಾರತ' ಎಂದಾಗಬೇಕು. ಈ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಅಗತ್ಯ ಇದೆ.'
'ಹಾಗೆಯೇ ಕರ್ನಾಟಕದಲ್ಲಿ ವಿಲೀನವಾಗಿರುವ ಭಾಗಗಳನ್ನು ಕರೆಯುವಾಗ ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಎಂದೇಕೆ ಕರೆಯಬೇಕು? ಇದು ಸ್ವತಂತ್ರವಾಗಿರುವ ಭಾರತವನ್ನು ಬ್ರಿಟಿಷ್ ಭಾರತ ಎಂದು ಕರೆದಂತೆ ಅಲ್ಲವೇ?
ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಎಂದು ಕರೆದಾಗ ಕರ್ನಾಟಕದ ಯಾವುದೋ ಒಂದು ಭಾಗ ಹೈದರಾಬಾದ್ ನಗರದಲ್ಲೋ, ಬಾಂಬೆ ನಗರದಲ್ಲಿ ಇದೆ ಎಂದಂತೆ ಭಾಸವಾಗುತ್ತದೆ'.
'ಬರ್ಮಾ ಮ್ಯಾನ್ಮಾರ್ ಆಗಬಹುದಾದರೆ, ಕಲ್ಕತ್ತ ಕೋಲ್ಕತ್ತ ಆಗಬಹುದಾದರೆ, ಮದ್ರಾಸ್ ಚೆನ್ನೈ ಆಗಬಹುದಾದರೆ ಕರ್ನಾಟಕದ ಈ ಭಾಗಗಳ ಹೆಸರು ಏಕೆ ಬದಲಾಗಬಾರದು?'
'ಕರ್ನಾಟಕದ ಈ ಭಾಗಗಳನ್ನು ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಎಂಬುದಾಗಿ ಕರೆಯುವ ಬದಲಿಗೆ 'ಕಲ್ಯಾಣ ಕರ್ನಾಟಕ' 'ಕಿತ್ತೂರು ಕರ್ನಾಟಕ' ಎಂಬುದಾಗಿ ಕರೆಯುವುದು ಚೆನ್ನ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಮನ ಹರಿಸಬೇಕು. ಈ ಬಗ್ಗೆ ಗಮನ ಸೆಳೆದು ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಕೊಟ್ಟಿದ್ದೇನೆ.'
ಖ್ಯಾತ ಸಂಶೋಧಕ, ಸಾಹಿತಿ ಚಿದಾನಂದ ಮೂರ್ತಿ ಅವರ ಯೋಚನಾ ಲಹರಿ ಇದು. ಚಿಂತನಾರ್ಹವಾದ ಅವರ ಈ ಮಾತುಗಳಿಗೆ ಬೆಂಬಲವಾಗಿ ಅಲ್ಲಿ ಚಪ್ಪಾಳೆಗಳ ಸುರಿಮಳೆಯಾಗಿತ್ತು.
ಅದು ಬೆಂಗಳೂರಿನ ಚಾಮರಾಜ ಪೇಟೆ- ಕೆಂಪೇಗೌಡ ನಗರದಲ್ಲಿನ ರಾಷ್ಟ್ರೋತ್ಥಾನ ಪರಿಷತ್ ಆವರಣದ ಕೇಶವ ಶಿಲ್ಪ ಸಭಾಂಗಣ. ಸಂದರ್ಭ ಹಿಂದುಸ್ಥಾನ್ ಸಮಾಚಾರ್ ಬಹುಭಾಷಾ ಸುದ್ದಿ ಸಂಸ್ಥೆಯ 'ಕನ್ನಡ ಸುದ್ದಿ' ಸೇವಾ ಶುಭಾರಂಭ ಸಮಾರಂಭ. ನಡೆದದ್ದು 2008 ನವೆಂಬರ್ 6ರ ಗುರುವಾರ ಸಂಜೆ.
ಹಿಂದುಸ್ಥಾನ್ ಸಮಾಚಾರ್ ಸುದ್ದಿ ಸಂಸ್ಥೆ ಸ್ಥಾಪನೆಯಾದದ್ದು 1948ರಲ್ಲಿ. ಶ್ರೀ ಶಿವಶಂಕರ ಆಪ್ಟೆ ಅದರ ಸ್ಥಾಪಕರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬೆನ್ನಲ್ಲೇ ಭಾರತೀಯ ದೃಷ್ಟಿಕೋನದ ಹಿನ್ನೆಲೆಯಿಟ್ಟುಕೊಂಡು ಜಗತ್ತಿಗೆ ಭಾರತೀಯ ಭಾಷೆಗಳಲ್ಲಿ ಸುದ್ದಿಗಳನ್ನು ನೀಡಬೇಕು ಎಂಬುದು ಅದರ ಸ್ಥಾಪನೆಯ ಉದ್ದೇಶ. ವಿವಿಧ ಭಾರತೀಯ ಭಾಷೆಗಳಲ್ಲಿ ಸಮಾಚಾರ ವಿತರಿಸುವ ಏಕೈಕ ಸಂಸ್ಥೆ ಇದು. ಅಷ್ಟೇ ಅಲ್ಲ, ಸಮಾಚಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನರೇ ನಡೆಸುವ ವಿಶ್ವದಲ್ಲೇ ಏಕೈಕ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆ ಕೂಡಾ ಇದರದ್ದು.
ಕರ್ನಾಟಕದಲ್ಲೂ ಈ ಹಿಂದುಸ್ಥಾನ್ ಸಮಾಚಾರ್ ಸುದ್ದಿ ಸಂಸ್ಥೆ ಹಿಂದಿನಿಂದಲೇ ಕಾರ್ಯ ನಿರ್ವಹಿಸುತ್ತಿತ್ತು. ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆ ನಾನು ಬೆಂಗಳೂರಿಗೆ ಬಂದಾಗ ಇನ್ಫೆಂಟ್ರಿ ರಸ್ತೆಯಲ್ಲಿ ಹಿಂದುಸ್ಥಾನ ಸಮಾಚಾರದ ಕಚೇರಿ ಇತ್ತು. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಹವ್ಯಾಸ ಇದ್ದರೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯ ಎಸಗುವ ಬಗೆ ಬಗ್ಗೆ ನನಗೆ ಓಂನಾಮ ಹೇಳಿಕೊಟ್ಟದ್ದು ಆಗ ಈ ಕಚೇರಿಯಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೋಲಾರದ ಮಾಧವರಾವ್ ಮತ್ತು ಹಿರಣ್ಣಯ್ಯ. ಈಗ ಈ ಇಬ್ಬರೂ ನೆನಪು ಮಾತ್ರ. 1981-82ರ ಸುಮಾರಿನಲ್ಲಿ ನಾನು ಇವರ ಜೊತೆಗೆ ಕೆಲಸ ಮಾಡಿ ಪತ್ರಕರ್ತನ ಪಟ್ಟುಗಳನ್ನು ಕಲಿತದ್ದು ಮಾತ್ರ ಎಂದಿಗೂ ಮರೆಯಲಾಗದಂತಹುದು.
ದುರದೃಷ್ಟವೆಂದರೆ ಅವರ ಕಾಲದಲ್ಲೇ ಹಿಂದೂಸ್ಥಾನ್ ಸಮಾಚಾರ ಸ್ಥಗಿತಗೊಂಡಿತ್ತು. ಹಿರಿಯ ಸಾಹಿತಿ - ಕರ್ಮವೀರದ ಸಂಪಾದಕ ಬಾಬು ಕೃಷ್ಣಮೂರ್ತಿ ನೆನಪಿಸುತ್ತಾರೆ: 'ಆ ಸಮಯದಲ್ಲಿ ಮಾಧವರಾವ್ ಒಂದು ದಿನ ಹೇಳಿದರಂತೆ. ನಾನೀಗ ಹಿಂದೂಸ್ಥಾನ್ ಸಮಾಚಾರದ ಅಧ್ಯಕ್ಷನಾಗಿದ್ದೇನೆ ಏಕೆ ಗೊತ್ತಾ? ಟು ಲಿಕ್ವಿಡೇಟ್ ದ ಕಂಪೆನಿ.' ಆ ವೇಳೆಗೆ ಸ್ವತಃ ಮಾಧವರಾಯರೇ 'ಜನವಾಣಿ' ಸಂಜೆ ಪತ್ರಿಕೆಗೆ ನನ್ನನ್ನು ದಾಟಿಸಿದ್ದರು!
ಹಾಗೆ ನಿಂತು ಹೋಗಿದ್ದ 'ಹಿಂದೂಸ್ಥಾನ್ ಸಮಾಚಾರ್' ಈಚಿನ ದಿನಗಳಲ್ಲಿ ಮರುಜನ್ಮ ಪಡೆದು ಸಂಸ್ಕೃತವೂ ಸೇರಿದಂತೆ ಭಾರತದ ಹಲವಾರು ಭಾಷೆಗಳಲ್ಲಿ ಸುದ್ದಿ ಸೇವೆ ಒದಗಿಸುತ್ತಿದೆ. ಕನ್ನಡದಲ್ಲಿ ಅದರ ಸುದ್ದಿ ಸೇವೆ ಇನ್ನೂ ಆರಂಭವಾಗಿರಲಿಲ್ಲ.
ನವೆಂಬರ್ 6ರ ಗುರುವಾರ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದುಸ್ಥಾನ್ ಸಮಾಚಾರದ ಕನ್ನಡ ಸುದ್ದಿ ಸೇವೆಗೆ ಚಾಲನೆ ನೀಡಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂದರ್ಭದಲ್ಲೇ ಕನ್ನಡದಲ್ಲಿ ಸಂಸ್ಥೆಯ ಸುದ್ದಿ ಸೇವೆ ಆರಂಭವಾಗುತ್ತಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿದ ಮುಖ್ಯಮಂತ್ರಿ ಸಂಸ್ಥೆಗೆ ಸಕಲ ನೆರವಿನ ಭರವಸೆ ಇತ್ತರು.
ರಾಷ್ಟ್ರೀಯತೆಯ ಹಿನ್ನೆಲೆ ಇಟ್ಟುಕೊಂಡೇ ಹುಟ್ಟಿದ ಹಿಂದುಸ್ಥಾನ್ ಸಮಾಚಾರ ಸಂಸ್ಥೆಯ ಸ್ಥಾಪನೆಯ ಉದ್ದೇಶ ಸತ್ಯ ಸಮಾಚಾರದ ಪ್ರಸಾರ ಎಂಬುದಾಗಿ ಈ ಸಂದರ್ಭದಲ್ಲಿ ಸ್ಷಷ್ಟ ಪಡಿಸಿದವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೃ. ಸೂರ್ಯ ನಾರಾಯಣರಾವ್. ಸ್ಥಳೀಯ ಪತ್ರಿಕೆಗಳಲ್ಲಿ ಸತ್ಯ ಸುದ್ದಿ ಪ್ರಕಟವಾದರೂ ಇಂಗ್ಲಿಷ್ ಪತ್ರಿಕೆಗಳ ಮೂಲಕ ಬಣ್ಣ ಕಟ್ಟಿದ ಸುದ್ದಿ ಹೇಗೆ ಪ್ರಸಾರವಾಗುತ್ತಿದೆ ಎಂಬುದನ್ನು ಅಯೋಧ್ಯಾ, ಒರಿಸ್ಸಾ, ಕಾಶ್ಮೀರದ ಅಮರನಾಥ ವಿವಾದಗಳ ಬಗ್ಗೆ ಗಮನ ಸೆಳೆಯುವ ಮೂಲಕ ಅವರು ವಿವರಿಸಿದರು. ಹಿಂದುಸ್ಥಾನ್ ಸಮಾಚಾರ್ ಸಂಸ್ಥೆಯ ರಾಷ್ಟ್ರೀಯ ಪ್ರಮುಖ, ಶ್ರೀಕಾಂತ ಜೋಶಿ, ಕನ್ನಡ ಸುದ್ದಿ ಸೇವಾ ಶುಭಾರಂಭ ಸಮಿತಿಯ ಅಧ್ಯಕ್ಷ ಕೃ. ನರಹರಿ, ಸಂಸ್ಥೆಯ ಕರ್ನಾಟಕ ಕೇಂದ್ರದ ಪ್ರಮುಖ ಶ್ರೀಕಾಂತ್ ಕುಲಕರ್ಣಿ ಮತ್ತಿತರರು ಹಾಜರಿದ್ದರು. ಕರ್ನಾಟಕ ವಾರ್ತಾ ಇಲಾಖಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಧ್ಯಕ್ಷತೆ ವಹಿಸಿದ್ದರು.
ಹಿಂದುಸ್ಥಾನ್ ಸಮಾಚಾರ್ ಇಂದು ವಿವಿಧ ಭಾರತೀಯ ಭಾಷೆಗಳಲ್ಲಿ ನೀಡುತ್ತಿರುವ ಸಮಾಚಾರಗಳನ್ನು 940ಕ್ಕಿಂತ ಹೆಚ್ಚು ದಿನಪತ್ರಿಕೆಗಳು, ವೃತ್ತ ಪತ್ರಿಕೆಗಳು, ವೃತ್ತ ಪತ್ರಿಕಾ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಇತ್ತೀಚೆಗೆ ಸಂಸ್ಥೆ ವಿವಿಧ ವಿಷಯಗಳ ಮೇಲೆ ಲೇಖನ ಒದಗಿಸುವ ಸೇವೆಯನ್ನೂ ಆರಂಭಿಸಿದೆ. ತಜ್ಞರ ಲೇಖನಗಳನ್ನು ಸಂಸ್ಥೆ ಪ್ರಸಾರ ಮಾಡುತ್ತಿದೆ.
ಸಂಸ್ಥೆಯು ಈಗ ವೆಬ್ ಸೈಟ್ನ್ನೂ ಹೊಂದಿದೆ. ಆಸಕ್ತರು: www.hindusthansamachar.com ವೀಕ್ಷಿಸಬಹುದು. ಇಲ್ಲವೇ hsbangalore@hindusthansamachar.com ಇದಕ್ಕೆ ಮಿಂಚಂಚೆ (ಇ-ಮೇಲ್) ಕಳುಹಿಸುವ ಮೂಲಕವೂ ಸಂಪರ್ಕಿಸಬಹುದು.
ಹಿಂದುಸ್ಥಾನ್ ಸಮಾಚಾರದ ಕನ್ನಡ ಸುದ್ದಿ ಸೇವೆ ಚಾಲನಾ ಸಮಾರಂಭದಲ್ಲಿ ಚಿದಾನಂದ ಮೂರ್ತಿಯವರು ಕರ್ನಾಟಕದ ಎರಡು ಭಾಗಗಳ ಹೆಸರು ಮತ್ತು ಇಂಡಿಯಾದ ಹೆಸರು ಬದಲಾಗಿ ಸ್ಥಳೀಯ ಹಾಗೂ ರಾಷ್ಟ್ರೀಯ ವಾಸನೆ ಹೊಡೆಯಬೇಕೆನ್ನುವ ಚಿಂತನೆಗೂ ಚಾಲನೆ ನೀಡಿದ್ದಾರೆ. ಈ ಚಿಂತನೆ ಇನ್ನಷ್ಟು ವ್ಯಾಪಕಗೊಳ್ಳಲಿ ಎಂಬ ಹಾರೈಕೆ ನನ್ನದು.
No comments:
Post a Comment