ಇಂದಿನ ಇತಿಹಾಸ
ನವೆಂಬರ್ 19
ದಕ್ಷಿಣ ಆಫ್ರಿಕಾದ ಜೊಹಾನ್ನೆಸ್ ಬರ್ಗಿನ ಸನ್ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯ ರೈ ಅವರು `ವಿಶ್ವ ಸುಂದರಿ' ಕಿರೀಟ ಧರಿಸಿದರು. ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.
2007: ಪಾಕಿಸ್ಥಾನದ ಅಧ್ಯಕ್ಷರಾಗಿ ಪರ್ವೇಜ್ ಮುಷರಫ್ ಅವರ ಪುನರಾಯ್ಕೆಯನ್ನು ಪ್ರಶ್ನಿಸಿದ್ದ ಆರು ಅರ್ಜಿಗಳ ಪೈಕಿ ಐದನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಒಂದು ಅರ್ಜಿಯ ವಿಚಾರಣೆಗೆ ಮಾತ್ರ ದಿನ ನಿಗದಿ ಪಡಿಸಿತು. ಈ ಮೊದಲು 11 ಸದಸ್ಯರಿದ್ದ ಪೀಠ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆದರೆ ನ. 3 ರಂದು ತುರ್ತು ಪರಿಸ್ಥಿತಿ ಹೇರಿದ ಮುಷರಫ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಪೀಠದಲ್ಲಿದ್ದ ಬಹುತೇಕ ನ್ಯಾಯಮೂರ್ತಿಗಳನ್ನು ವಜಾ ಮಾಡಿದ್ದರು. ಪ್ರಸ್ತುತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ಡೋಗರ್ ನೇತೃತ್ವದ 10 ಸದಸ್ಯರ ಪೂರ್ಣಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ವಜಾಗೊಂಡ 5 ಅರ್ಜಿಗಳಲ್ಲಿ ನಿವೃತ್ತ ನ್ಯಾಯಮೂರ್ತಿ ವಾಜಿಹ್ದುದೀನ್ ಅಹ್ಮದ್ ಹಾಗೂ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ನಾಯಕ ಮಕ್ದೂಮ್ ಅಮಿನ್ ಫಹಿನ್ ಅವರು ಸಲ್ಲಿಸಿದ್ದ ಅರ್ಜಿಗಳೂ ಸೇರಿದ್ದವು.
2007: 65 ವರ್ಷ ವಯಸ್ಸಿಗೂ ಹೆಚ್ಚು ವಯೋಮಾನದ ಹಿರಿಯ ನಾಗರಿಕರ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. ಇದರಿಂದ ಸುಮಾರು 16 ದಶಲಕ್ಷ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಬೊಕ್ಕಸಕ್ಕೆ ವಾರ್ಷಿಕ 3,772 ಕೋಟಿ ರೂಪಾಯಿಗಳಷ್ಟು ಹೊರೆಯಾಗಲಿದೆ. `ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧರ ಪಿಂಚಣಿ' ಯೋಜನೆಯ ಪ್ರಕಾರ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 200 ರೂಪಾಯಿಗಳನ್ನು ನೀಡುತ್ತದೆ. ರಾಜ್ಯ ಸರ್ಕಾರಗಳು ಈ ಮೊತ್ತಕ್ಕೆ 200 ರೂಪಾಯಿಗಳನ್ನು ಸೇರಿಸಿ ಒಟ್ಟು ರೂ 400 ಕೊಡಬೇಕಾಗುತ್ತದೆ. ಈ ಪಿಂಚಣಿ ಯೋಜನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ನವದೆಹಲಿಯಲ್ಲಿ ಉದ್ಘಾಟಿಸಿದರು.
2007: ಅಂಪೈರ್ ತೀರ್ಪಿಗೆ ಗೌರವ ನೀಡದ ಭಾರತ ತಂಡದ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫರಿ ರೋಷನ್ ಮಹಾನಾಮಾ ಅವರು ಪಂದ್ಯ ಶುಲ್ಕದ ಶೇಕಡಾ ಇಪ್ಪತ್ತರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದರು. ಉಮರ್ ಗುಲ್ ಬೌಲಿಂಗಿನಲ್ಲಿ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಚೆಂಡನ್ನು ಹಿಡಿತಕ್ಕೆ ಪಡೆದಾಗ ಅಂಪೈರ್ ಸುರೇಶ್ ಶಾಸ್ತ್ರಿ ಅವರು ಯುವರಾಜ್ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನು ಆಗ ಯುವರಾಜ್ ಆಕ್ಷೇಪಿಸಿದ್ದರು.
2006: ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗೆ ನೀಡಲಾಗುವ 2005ನೇ ಸಾಲಿನ `ಇಂದಿರಾಗಾಂಧಿ ಶಾಂತಿ ಪ್ರಶಸ್ತಿ'ಯನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಅವರಿಗೆ ಪ್ರದಾನ ಮಾಡಿದರು.
2006: ಮುಂಬೈ ಕನ್ನಡಿಗರಲ್ಲಿ ಮನೆ ಮಾತಾಗಿರುವ ರಂಗ ನಿರ್ದೇಶಕ ಭರತ್ ಕುಮಾರ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯು `ಕೆ. ಮಾಸ್ಟರ್ ಹಿರಣ್ಣಯ್ಯ ಶತಮಾನೋತ್ಸವ ದತ್ತಿ ನಿಧಿ' ಪ್ರಶಸ್ತಿ ನೀಡಿ ಗೌರವಿಸಿತು.
2006: ತಲಕಾಡಿನಲ್ಲಿ ಸಹಸ್ರಮಾನದ ಮೊತ್ತ ಮೊದಲ ಪಂಚಲಿಂಗ ದರ್ಶನದ ಪೂಜಾ ವಿಧಿ ವಿಧಾನಗಳು ಮಧ್ಯರಾತ್ರಿ ಬಳಿಕ ಸಡಗರದೊಂದಿಗೆ ಆರಂಭವಾಯಿತು. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಪಂಚಲಿಂಗ ದರ್ಶನಾಕಾಂಕ್ಷಿಗಳಾಗಿ ತಲಕಾಡಿಗೆ ಬಂದಿದ್ದರು.
2006: ತಾತ್ಕಾಲಿಕ ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥ ಪಡಿಸುವಾಗ ಭಾವನೆಗಳು ಮತ್ತು ಅನುಕಂಪ ಮಾನದಂಡ ಆಗಬಾರದು ಎಂದು ಸುಪ್ರೀಂ ಕೋರ್ಟ್ ಕೆಳಹಂತದ ನ್ಯಾಯಾಲಯಗಳಿಗೆ ಸೂಚಿಸಿತು. ತಾತ್ಕಾಲಿಕ ನೌಕರರಿಗೆ ಖಾಯಂ ಹುದ್ದೆಗಳ ಮೇಲೆ ಹಕ್ಕಿಲ್ಲ. ತಾತ್ಕಾಲಿಕ ನೌಕರರಿಗೆ ಸಂಬಂಧಿಸಿದ ಪ್ರಕರಣಗಳನ್ನು ಕಾನೂನು ಮಿತಿಯಲ್ಲೇ ಇತ್ಯರ್ಥಪಡಿಸಬೇಕು ಎಂದೂ ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ ಮತ್ತು ಮಾರ್ಕಾಂಡೇಯ ಕಟ್ಜು ಅವರ ಪೀಠ ಹೇಳಿತು. ತಾತ್ಕಾಲಿಕ ಮತ್ತು ಕಾಯಂ ನೌಕರರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಕಾಯಂ ನೌಕರರಿಗೆ ಹುದ್ದೆಯ ಮೇಲೆ ಹಕ್ಕಿದೆ; ತಾತ್ಕಾಲಿಕ ನೌಕರರಿಗೆ ಇಲ್ಲ. ತನ್ನ ಸೇವಾವಧಿ ಇರುವವರೆಗೆ (ವಜಾ ಆಗದ್ದಿದರೆ) ನೌಕರಿಯಲ್ಲಿ ಮುಂದುವರಿವ ಹಕ್ಕು ಕಾಯಂ ನೌಕರರಿಗೆ ಮಾತ್ರವೇ ಇದೆ ಎಂದು ಪೀಠವು ಸ್ಪಷ್ಟಪಡಿಸಿತು. ಸರ್ಕಾರಿ ಅಧೀನದ ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ಕೆಲ ತಾತ್ಕಾಲಿಕ ನೌಕರರು ಸೇವಾ ಅವಧಿಯವರೆಗೂ ನೌಕರಿಯಲ್ಲಿ ಮುಂದುವರಿಯಬಹುದು ಎಂಬುದಾಗಿ ಉತ್ತರಾಂಚಲ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಮಾನವನ್ನು ಪ್ರಕಟಿಸಿತು. ಕಾಯಂ ನೌಕರರಿಗೆ ನೀಡುವ ವೇತನ ಸೌಲಭ್ಯವನ್ನೇ ತಾತ್ಕಾಲಿಕ ನೌಕರರಿಗೂ ನೀಡಬೇಕು ಎಂದು ಉತ್ತರಾಂಚಲ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪೀಠವು ತಳ್ಳಿಹಾಕಿ, `ಈ ಆದೇಶ ಜಾರಿಯಲ್ಲಿರುವ ನಿಯಮಗಳಿಗೆ ವಿರುದ್ಧವಾಗಿದೆ. ತಾತ್ಕಾಲಿಕ ನೌಕರರನ್ನೂ ಸೇವೆಯಲ್ಲಿಮುಂದುವರಿಸಲು ಕೋರ್ಟುಗಳು ನಿರ್ದೇಶಿಸಲಾಗದು' ಎಂದು ಹೇಳಿತು.
2006: ನೆಲದಿಂದ ನೆಲಕ್ಕೆ ಚಿಮ್ಮುವ ಭಾರತದ ಅತ್ಯಾಧುನಿಕ ಮಧ್ಯಂತರಗಾಮೀ ಕ್ಷಿಪಣಿ `ಪೃಥ್ವಿ'ಯ ಪರೀಕ್ಷಾರ್ಥ ಉಡಾವಣೆಯನ್ನು ಒರಿಸ್ಸಾದ ಬಾಲಸೋರಿಗೆ 15 ಕಿ.ಮೀ. ದೂರದಲ್ಲಿರುವ ಚಂಡೀಪುರ ಸಮೀಪದ ಸಮುದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸಂಚಾರಿ ಉಡಾವಣಾ ವಾಹನದಲ್ಲಿ ಇರಿಸಲಾಗಿದ್ದ ದೇಶೀ ನಿರ್ಮಿತ ಏಕಹಂತದ ಕ್ಷಿಪಣಿಯನ್ನು ಬೆಳಗ್ಗೆ 9.55ರ ವೇಳೆಗೆ ಚಂಡೀಪುರದ ಸಮೀಪ ಸಮುದ್ರದಲ್ಲಿನ ಸಮಗ್ರ ಪರೀಕ್ಷಾ ವಲಯದಿಂದ ಹಾರಿಸಲಾಯಿತು. ಈ ಕ್ಷಿಪಣಿಯು 150ರಿಂದ 250 ಕಿ.ಮೀ. ದೂರಕ್ಕೆ ನೆಗೆಯುವ ಸಾಮರ್ಥ್ಯ ಹೊಂದಿದೆ. ಸ್ಫೋಟಕ ವಸ್ತುವಿನ ಸಿಡಿತಲೆ ತೂಕ ಕಡಿಮೆಗೊಳಿಸುವ ಮೂಲಕ ಇದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿದೆ. 8.65 ಮೀಟರ್ ಎತ್ತರ ಹಾಗೂ 1 ಮೀಟರ್ ದಪ್ಪ ಇರುವ ಕ್ಷಿಪಣಿಯನ್ನು ಈಗಾಗಲೇ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಒಂದು ಟನ್ ತೂಕದ ಸ್ಫೋಟಕ ಸಿಡಿತಲೆಯೂ ಸೇರಿದಂತೆ 4.6 ಟನ್ ತೂಕದ `ಪೃಥ್ವಿ' ಕ್ಷಿಪಣಿಯು ಘನ ಹಾಗೂ ದ್ರವ ರೂಪದ `ಪ್ರೊಪಲ್ಲೆಂಟ್' ಬಳಸಬಲ್ಲುದು. 150 ಕಿ.ಮೀ. ದೂರದಾಚೆಯ ನಿರ್ದಿಷ್ಟ ಗುರಿಯನ್ನು ಕ್ಷಿಪಣಿಯು 300 ಸೆಕೆಂಡುಗಳಲ್ಲಿ ತಲುಪಬಲ್ಲುದು. ಸಮರ ಕಾಲದ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ನಿರ್ಮಿಸಲಾದ ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಅಭಿವೃದ್ಧಿ ಪಡಿಸಿದೆ. 700 ಕಿ.ಗ್ರಾಂ. ತೂಕದ ಸಿಡಿತಲೆಯೊಂದಿಗೆ 250 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಈ ಕ್ಷಿಪಣಿಗೆ ಇದೆ. ಸಿಡಿತಲೆ ತೂಕವನ್ನು 1000 ಕಿ.ಗ್ರಾಂ,ಗೆ ಹೆಚ್ಚಿಸಬಹುದು.
2005: ದಿವಂಗತ ಇಂದಿರಾಗಾಂಧಿ ಅವರ ಸ್ಮರಣಾರ್ಥ ನೀಡಲಾಗುವ 2004ರ ಸಾಲಿನ 'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ'ಯನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಥಾಯ್ಲೆಂಡಿನ ರಾಜಕುಮಾರಿ ಮಹಾ ಚಕ್ರಿ ಸಿರಿಂಧೋರ್ನ್ ಅವರಿಗೆ ನವದೆಹಲಿಯಲ್ಲಿ ಪ್ರದಾನ ಮಾಡಿದರು.
1997: ಬಾಹ್ಯಾಕಾಶಕ್ಕೆ ತೆರಳಿದ ಮೊತ್ತ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಕಲ್ಪನಾ ಚಾವ್ಲಾ ಪಾತ್ರರಾದರು. ಚಾವ್ಲಾ ಮತ್ತು ಇತರ ಐವರು ಇದ್ದ ಶಟಲ್ ನೌಕೆ 16 ದಿನಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಹಾರಿತು.
1994: ದಕ್ಷಿಣ ಆಫ್ರಿಕಾದ ಜೊಹಾನ್ನೆಸ್ ಬರ್ಗಿನ ಸನ್ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯ ರೈ ಅವರು `ವಿಶ್ವ ಸುಂದರಿ' ಕಿರೀಟ ಧರಿಸಿದರು. ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.
1992: ಕರ್ನಾಟಕದ ಮುಖ್ಯಮಂತ್ರಿಯಾಗಿ ಎಂ. ವೀರಪ್ಪ ಮೊಯಿಲಿ ಅಧಿಕಾರ ಸ್ವೀಕರಿಸಿದರು.
1975: ಸುಶ್ಮಿತಾ ಸೇನ್ ಹುಟ್ಟಿದ ದಿನ. 1994ರಲ್ಲಿ ನಡೆದ `ಭುವನಸುಂದರಿ' ಸ್ಪರ್ಧೆಯಲ್ಲಿ ಇವರು `ಮಿಸ್ ಯುನಿವರ್ಸ್' ಕಿರೀಟ ಧರಿಸುವ ಮೂಲಕ `ಭುವನ ಸುಂದರಿ' ಎನಿಸಿದ ಭಾರತದ ಮೊದಲ ಮಹಿಳೆಯಾದರು.
1951: ಚಿತ್ರನಟಿ ಝೀನತ್ ಅಮಾನ್ ಹುಟ್ಟಿದ ದಿನ.
1947: ಸಾಹಿತಿ ತಿಲಕನಾಥ ಮಂಜೇಶ್ವರ ಜನನ.
1946: ಸಾಹಿತಿ, ಪ್ರಾಧ್ಯಾಪಕ ಸಿದ್ಧರಾಮಯ್ಯ ಅವರು ಗುರುಭಕ್ತಯ್ಯ- ರೇವಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ ಜನಿಸಿದರು.
1945: ಸಾಹಿತಿ ಲೋಕನಾಥ ದೀಕ್ಷಿತ್ ಜನನ.
1928: ರಕ್ಷಾಪುಟದಲ್ಲಿ ಜಪಾನಿನ ಚಕ್ರವರ್ತಿ ಹಿರೊಹಿತೊ ಅವರ ಚಿತ್ರವನ್ನು ಹಾಕುವ ಮೂಲಕ `ಟೈಮ್' ಪತ್ರಿಕೆ ಮೊತ್ತ ಮೊದಲ ಬಾರಿಗೆ ವ್ಯಕ್ತಿಯೊಬ್ಬರ ಭಾವಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿತು.
1917: ಇಂದಿರಾ ಗಾಂಧಿ (1917-1984) ಹುಟ್ಟಿದ ದಿನ. ಭಾರತದ ಪ್ರಧಾನಿಯಾಗಿದ್ದ ಇವರು 1984ರ ಅಕ್ಟೋಬರ್ 31ರಂದು ತಮ್ಮ ಸಿಖ್ ಅಂಗರಕ್ಷಕರಿಂದಲೇ ಹತರಾದರು.
1910: ಖ್ಯಾತ ಚಿತ್ರನಟಿ ಗೋಹರ್ ಜನನ.
1893: ನಾಲ್ಕು ಪುಟಗಳ ಮೊತ್ತ ಮೊದಲ ವರ್ಣರಂಜಿತ ಪುರವಣಿ `ನ್ಯೂಯಾರ್ಕ್ ವರ್ಲ್ಡ್' ನಲ್ಲಿ ಪ್ರಕಟಗೊಂಡಿತು.
1877: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ಬ್ಯಾನರ್ಜಿ ಜನನ.
1863: ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗೆಟ್ಟೀಸ್ಬರ್ಗ್ ಸಮರಭೂಮಿಯಲ್ಲಿ ರಾಷ್ಟ್ರೀಯ ಸಮಾಧಿಯನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಕೆಲವೇ ತಿಂಗಳುಗಳ ಹಿಂದೆ ಇದೇ ಸ್ಥಳದಲ್ಲಿ 7000 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.
1852: ಕೆನರಾಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದರು.
1838: ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಕೇಶವ ಚಂದರ್ ಸೇನ್ (1838-1884) ಹುಟ್ಟಿದ ದಿನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment