ಇಂದಿನ ಇತಿಹಾಸ
ನವೆಂಬರ್ 21
ಭಾರತೀಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ (ಸಿವಿ ರಾಮನ್) ಅವರು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಬೆಳಕಿನ ವರ್ತನೆ ಬಗ್ಗೆ ನಡೆಸಿದ ಸಂಶೋಧನೆಗಾಗಿ 1930ರಲ್ಲಿ ಅವರು ಭೌತ ವಿಜ್ಞಾನಕ್ಕೆ ನೀಡಲಾಗುವ `ನೊಬೆಲ್ ಪ್ರಶಸ್ತಿ'ಯನ್ನು ಪಡೆದಿದ್ದರು. ಅವರ ಈ ಸಂಶೋಧನೆ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆದಿದೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಜವಾಬ್ದಾರಿಯನ್ನು ಸೇನೆಗೆ ವಹಿಸಲಾಯಿತು. ಇದರೊಂದಿಗೆ `ನಂದಿಗ್ರಾಮ ಪ್ರಕರಣ'ವು ಹೊಸ ತಿರುವು ಪಡೆದುಕೊಂಡಿತು. ಕೇಂದ್ರ ಕೋಲ್ಕತ್ತದ ವಿವಿಧ ಕಡೆ ಹಿಂಸಾಚಾರವನ್ನು ತಡೆಗಟ್ಟುವುದಕ್ಕಾಗಿ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಕರ್ಫ್ಯೂ ಹೇರಲಾಯಿತು. ಗಲಭೆಕೋರರು ನೂರಾರು ವಾಹನಗಳಿಗೆ ಬೆಂಕಿ ಹಚ್ಚಿದರು. ಸುಮಾರು 70ಕ್ಕೂ ಹೆಚ್ಚು ಮಂದಿ ಹಿಂಸಾತ್ಮಕ ಘಟನೆಗಳಲ್ಲಿ ಗಾಯಗೊಂಡರು.
2007: ಚಿತ್ರನಟ ವಿಜಯ್ ಮೇಲೆ ಹೇರಿದ್ದ ಒಂದು ವರ್ಷದ ನಿಷೇಧವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಗೆದುಹಾಕಿತು. `ಚಂಡ' ಚಿತ್ರದ ಡಬ್ಬಿಂಗ್ ವಿವಾದದ ಕಾರಣಕ್ಕೆ ವಿಜಯ್ ಮೇಲೆ ಈ ಮೊದಲು ಮಂಡಳಿ 1 ವರ್ಷ ನಿಷೇಧ ಹೇರಿತ್ತು. ನಂತರ ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆಯಲ್ಲಿ ಇನ್ನೊಂದು ಸಭೆ ನಡೆಸಿ, ನವೆಂಬರ್ 7ರಂದು ಡಬ್ಬಿಂಗ್ ಮಾಡಿಕೊಡುವಂತೆ ವಿಜಯ್ ಅವರಿಗೆ ಸೂಚಿಸಲಾಗಿತ್ತು. ಆದರೆ ಆ ಹೊತ್ತಿಗೆ ಚಿತ್ರದ ಡಿಟಿಎಸ್ ಪ್ರಕ್ರಿಯೆ ಮುಗಿದಿದ್ದ ಕಾರಣ ವಿಜಯ್ ಕೈಲಿ ಡಬ್ಬಿಂಗ್ ಮಾಡಿಸುವುದು ಸಾಧ್ಯವಿಲ್ಲ ಎಂದು `ಚಂಡ' ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಎಸ್.ನಾರಾಯಣ್ ಹೇಳಿದ್ದರು. ಈದಿನ ಮಂಡಳಿಯ ಸಂಧಾನ ಸಮಿತಿ ಸಭೆ ನಡೆಸಿ, ವಿಜಯ್ ಮೇಲಿನ ನಿಷೇಧ ತೆಗೆದುಹಾಕಿತು. ವಿಜಯ್ ಗೆ ತಮ್ಮ ತಪ್ಪುಗಳ ಅರಿವಾಗಿರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಮಂಡಳಿಯ ಗೌರವ ಕಾರ್ಯದರ್ಶಿ ಕೆ.ವಿ. ವಿಜಯ್ ಕುಮಾರ್ ತಿಳಿಸಿದರು.
2007: ಮಲೇಷ್ಯಾದಲ್ಲಿರುವ ಬಡ ಭಾರತೀಯರ ದುಃಸ್ಥಿತಿಗೆ ಬ್ರಿಟಿಷ್ ವಸಾಹತುಶಾಹಿ ಆಡಳಿತವೇ ಕಾರಣ, ಅಂಥ ಭಾರತೀಯರ ಸಂಕಷ್ಟಗಳಿಗೆ 4 ಸಾವಿರ ಶತಕೋಟಿ ಡಾಲರ್ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕ್ವಾಲಾಲಂಪುರದ ಭಾರತೀಯ ಸಮುದಾಯಕ್ಕೆ ಸೇರಿದ ವೈತ ಮೂರ್ತಿ ಎಂಬ ವ್ಯಕ್ತಿ ಬ್ರಿಟಿಷರ ವಿರುದ್ಧ ಹೋರಾಡಲು ಮುಂದಾದರು. ಮಲೇಷ್ಯಾ ಸರ್ಕಾರ ಇದು ಆಧಾರರಹಿತ ಪ್ರಕರಣವೆಂದು ಆತನ ಆರೋಪಗಳನ್ನು ತಳ್ಳಿಹಾಕಿತು. ಆದರೆ ಪಟ್ಟು ಬಿಡದ, ವೃತ್ತಿಯಲ್ಲಿ ವಕೀಲರಾಗಿರುವ ವೈತ ಮೂರ್ತಿ, ಈ ಮೊದಲು ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಬಡ ಭಾರತೀಯರು ಶೋಷಣೆ ಒಳಪಟ್ಟಿದ್ದರು, ಈಗ ಸ್ವತಂತ್ರ ಮಲೇಷ್ಯಾದಲ್ಲಿ ಮಲೇಷ್ಯ ಮೂಲದ ಜನರಿಂದ ಶೋಷಣೆಗೆ ಒಳಪಟ್ಟಿದ್ದಾರೆ ಎಂದು ಆಪಾದಿಸಿದರು. ಪರಿಹಾರಕ್ಕಾಗಿ ಬ್ರಿಟನ್ ರಾಣಿಯವರಿಗೂ ಪ್ರಕರಣವನ್ನು ಒಯ್ಯುವುದಾಗಿ ಮೂರ್ತಿ ಪ್ರಕಟಿಸಿದರು.
2007: ಬ್ರಿಟನ್ನಿನ ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈದಿನ ಡೈನೊಸಾರಾಸ್ಸಿಗಿಂತಲೂ ಮುಂಚಿನ ಸಮುದ್ರ ಚೇಳಿನ ಪಳೆಯುಳಿಕೆಯ ಚಿತ್ರವನ್ನು ಬಿಡುಗಡೆ ಮಾಡಿದರು. ಇದು 390 ಮಿಲಿಯನ್ ವರ್ಷಗಳಷ್ಟು ಹಿಂದೆ ಅಸ್ತಿತ್ವದಲ್ಲಿತ್ತು ಎನ್ನಲಾಗಿದೆ. ಈ ಚೇಳಿನ ಕೊಂಡಿ 2.5 ಮೀಟರಿನಷ್ಟು ಉದ್ದವಾಗಿತ್ತು ಎಂಬುದು ವಿಜ್ಞಾನಿಗಳ ಹೇಳಿಕೆ.
2006: ಕಾಂಚೀಪುರಂ ಜಿಲ್ಲೆಯ ವಲ್ಲಕೊಟ್ಟಾಯಿಯಲ್ಲಿನ ಮುರುಘಾ ದೇವಸ್ಥಾನದ ತಳಭಾಗದಲ್ಲಿ ಭೂಗರ್ಭ ಸುರಂಗವೊಂದು ಪತ್ತೆಯಾಗಿದ್ದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಅದರ ಅಧ್ಯಯನ ನಡೆಸುತ್ತಿರುವುದಾಗಿ ಇಲಾಖೆಯ ಸಂಶೋಧನಾ ವಿಶ್ಲೇಷಕ ಜಿ. ತಿರುಮೂರ್ತಿ ಪ್ರಕಟಿಸಿದರು. ದೇವಾಲಯವನ್ನು 1200 ವರ್ಷಗಳಷ್ಟು ಹಿಂದೆಯೇ ಮುಚ್ಚಲಾಗಿತ್ತು. ಯಾವುದೇ ದೇವಸ್ಥಾನದ ತಳಭಾಗದಲ್ಲಿ ಇಂತಹ ಸುರಂಗ ಇರುವುದು ಈವರೆಗೆ ಬೆಳಕಿಗೆ ಬಂದಿಲ್ಲ. ದೇವಾಲಯದ ಅಧಿಕಾರಿಗಳು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಮಂಟಪ ನಿರ್ಮಿಸಲು ಅಗೆಯುತ್ತಿದ್ದಾಗ ಈ ಸುರಂಗ ಪತ್ತೆಯಾಯಿತು. ಅರ್ಚಕರಿಗೆ ದೇವಸ್ಥಾನದ ಗರ್ಭಗುಡಿಗೆ ಕ್ಷಿಪ್ರವಾಗಿ ತಲುಪಲು ಸಾಧ್ಯವಾಗುವಂತೆ ಈ ಸುರಂಗವನ್ನು ನಿರ್ಮಿಸಲಾಗಿದೆ.
2006: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಹಾಗೂ ಉಭಯಕಡೆಗಳಲ್ಲಿ ಬಂಡವಾಳ ಹರಿಯುವಿಕೆಗೆ ಪ್ರೋತ್ಸಾಹ ನೀಡುವ ಸುಮಾರು 13 ಒಪ್ಪಂದಗಳಿಗೆ ಭಾರತ ಮತ್ತು ಚೀನಾ ನವದೆಹಲಿಯಲ್ಲಿ ಸಹಿ ಹಾಕಿದವು. ಇದರ ಪ್ರಕಾರ 2010ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ವಹಿವಾಟನ್ನು ದುಪ್ಪಟ್ಟುಗೊಳಿಸಿ, 4000 ಕೋಟಿ ಡಾಲರುಗಳಿಗೆ ಏರಿಸಿಕೊಳ್ಳಲು ತೀರ್ಮಾನಿಸಿದವು. ಈ ಕುರಿತ ಜಂಟಿ ಘೋಷಣೆಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಚೀನಾದ ಅಧ್ಯಕ್ಷ ಹು ಜಿಂಟಾವೊ ಸಹಿ ಹಾಕಿದರು.
2006: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಬ್ರಯನ್ ಲಾರಾ ಅವರು ಮುಲ್ತಾನಿನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 34ನೇ ಶತಕ ದಾಖಲಿಸಿ, ಭಾರತದ ಸುನಿಲ್ ಗಾವಸ್ಕರ್ ಅವರ 34 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಸಚಿನ್ ತೆಂಡೂಲ್ಕರ್ ಮಾತ್ರ 35 ಶತಕಗಳೊಂದಿಗೆ ಲಾರಾ - ಸುನಿಲ್ ಗಾವಸ್ಕರ್ ಅವರಿಗಿಂತ ಮುಂದಿದ್ದಾರೆ. ಪಾಕ್ ವಿರುದ್ಧ ಅವರು ಬಾರಿಸಿದ ಸತತ 4ನೇ ಶತಕ ಇದಾಗಿದ್ದು, ಒಂದೇ ಅವಧಿಯಲ್ಲಿ ಶತಕ ಗಳಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಯೂ ಲಾರಾಗೆ ದಕ್ಕಿತು. ಈವರೆಗೆ ಲಾರಾ ಟೆಸ್ಟ್ ಕ್ರಿಕೆಟಿನಲ್ಲಿ ಗಳಿಸಿದ ಒಟ್ಟು ರನ್ನುಗಳ ಸಂಖ್ಯೆ 11,884.
2005: `ವಿಕ್ಟೋರಿಯಾ ಕ್ರಾಸ್' ಗೌರವ ಪಡೆದ 40 ಭಾರತೀಯರ ಪೈಕಿ ಈವರೆಗೆ ಜೀವಿಸಿದ್ದ ಏಕೈಕ ವ್ಯಕ್ತಿ ಸುಬೇದಾರ್ ಮೇಜರ್ ಹಾಗೂ ಗೌರವ ಕ್ಯಾಪ್ಟನ್ ಉಮ್ರಾವೋ ಸಿಂಗ್ (85) ನಿಧನರಾದರು. ಹರಿಯಾಣದ ರೋಹ್ಟಕ್ ನಿವಾಸಿ ಸಿಂಗ್ 1944ರ ಡಿಸೆಂಬರಿನಲ್ಲಿ ಬರ್ಮಾದ (ಈಗ ಮ್ಯಾನ್ಮಾರ್) ಕಲದನ್ ಕಣಿವೆಯಲ್ಲಿ ಜಪಾನೀಯರ ನಾಲ್ಕು ಆಕ್ರಮಣಗಳನ್ನು ಹಿಮ್ಮೆಟ್ಟಿಸಿದ್ದರು. ಗಾಯಗೊಂಡು ಬೀಳುವ ಮುನ್ನ 10 ಜಪಾನ್ ಸೈನಿಕರನ್ನು ನೆಲಕ್ಕೆ ಉರುಳಿಸಿದ್ದರು. ಇದಕ್ಕಾಗಿ ಬ್ರಿಟಿಷರು ಅವರಿಗೆ ಅತ್ಯುಚ್ಚ ಪರಾಕ್ರಮ ಪ್ರಶಸ್ತಿ ನೀಡಿದ್ದರು.
2005: ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ವಿವಾದಾಸ್ಪದ ನಿರ್ಣಯ ಕೈಗೊಂಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತು.
2005: ರತ್ನಸಿರಿ ವಿಕ್ರಮ ನಾಯಕೆ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ 2000 ಹಾಗೂ 2001ರಲ್ಲಿ ರತ್ನಸಿರಿ ಪ್ರಧಾನಿಯಾಗಿದ್ದರು.
1985: ಮೈಕ್ರೋಸಾಫ್ಟ್ ಕಾರ್ಪೊರೇಷನ್ `ವಿಂಡೋಸ್ 1.03'ನ್ನು ಬಿಡುಗಡೆ ಮಾಡಿತು. 80 ಮಾನವ ವರ್ಷಗಳ ಯತ್ನದ ಬಳಿಕ ಬಿಡುಗಡೆಯಾದ ಇದು `ವಿಂಡೋಸ್' ನ ಮೊತ್ತ ಮೊದಲ ಆವೃತ್ತಿ. ಮೈಕ್ರೋಸಾಫ್ಟ್ ಇತಿಹಾಸದಲ್ಲಿ ಇದು ಅತ್ಯಂತ ಸುದೀರ್ಘ ಅಭಿವೃದ್ಧಿ. ಇದನ್ನು ನಿರ್ಮಿಸಲು 1.10 ಲಕ್ಷ ಪ್ರೊಗ್ರಾಮಿಂಗ್ ಗಂಟೆಗಳು ಬೇಕಾದವು.
1970: ಭಾರತೀಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ (ಸಿವಿ ರಾಮನ್) ಅವರು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಬೆಳಕಿನ ವರ್ತನೆ ಬಗ್ಗೆ ನಡೆಸಿದ ಸಂಶೋಧನೆಗಾಗಿ 1930ರಲ್ಲಿ ಅವರು ಭೌತ ವಿಜ್ಞಾನಕ್ಕೆ ನೀಡಲಾಗುವ `ನೊಬೆಲ್ ಪ್ರಶಸ್ತಿ'ಯನ್ನು ಪಡೆದಿದ್ದರು. ಅವರ ಈ ಸಂಶೋಧನೆ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆದಿದೆ.
1964: ನ್ಯೂಯಾರ್ಕಿನ ವೆರ್ರಾಂಝಾನೊ ನ್ಯಾರೋಸ್ ಸೇತುವೆ ಸಾರ್ವಜನಿಕ ಸಂಚಾರಕ್ಕಾಗಿ ತೆರವುಗೊಂಡಿತು. ಹಂಬರ್ ಸೇತುವೆ ಆಗುವವರೆಗೆ ಈ ಸೇತುವೆಯೇ ಜಗತ್ತಿನ ಅತ್ಯಂತ ದೊಡ್ಡ `ಏಕ ಕಮಾನಿನ' (ಸಿಂಗಲ್ ಸ್ಪಾನ್) (Single span bridge) ಸೇತುವೆ ಆಗಿತ್ತು.
1963: ಥುಂಬಾ ಉಡಾವಣಾ ಕೇಂದ್ರದಿಂದ ಮೊತ್ತ ಮೊದಲ `ನಿರ್ದೇಶನ ರಹಿತ ರಾಕೆಟ್' (ಅನ್ ಗೈಡೆಡ್ ರಾಕೆಟ್) ಉಡ್ಡಯನದೊಂದಿಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಆರಂಭಗೊಂಡಿತು.
1950: ಸಾಹಿತಿ ಚಂದ್ರಕಲಾ ನಂದಾವರ ಜನನ.
1947: `ಜೈಹಿಂದ್' ಬರಹ ಹೊತ್ತ ಸ್ವತಂತ್ರ ಭಾರತದ ಮೊತ್ತ ಮೊದಲ ಅಂಚೆ ಚೀಟಿ ಬಿಡುಗಡೆಗೊಂಡಿತು.
1928: ಸಾಹಿತಿ ಎಸ್. ನಾಗರಾಜ್ ಜನನ.
1909: ಭಾರತದ ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ ರಾಜಾ ರಾವ್ ಹುಟ್ಟಿದ ದಿನ.
1877: ಸಂಶೋಧಕ ಥಾಮಸ್ ಆಲ್ವ ಎಡಿಸನ್ ಅವರು ಫೋನೋಗ್ರಾಫ್ ಸಂಶೋಧನೆಯನ್ನು ಪ್ರಕಟಿಸಿದರು.
1854: ಹೊಸಗನ್ನಡದ ಆರಂಭಿಕ ಕಾಲದ ಸಾಹಿತಿ ಎಂ.ಎಸ್. ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ) (21-11-1854ರಿಂದ 11-4-1930ರವರೆಗೆ) ಅವರು ಸೂರ್ಯನಾರಾಯಣ ಭಟ್ಟ- ಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.
1785: ಅಮೆರಿಕದ ಸೇನಾ ಸರ್ಜನ್ ವಿಲಿಯಮ್ ಬಿಯಾಮೊಂಟ್ (1785-1853) ಹುಟ್ಟಿದ ದಿನ. ಮಾನವನ ಹೊಟ್ಟೆಯ ಒಳಗೆ ಪಚನಕ್ರಿಯೆ ಹೇಗೆ ನಡೆಯುತ್ತದೆ ಎಂದು ಮೊತ್ತ ಮೊದಲಿಗೆ ಅಧ್ಯಯನ ಮಾಡಿದ ಸಂಶೋಧಕ ಈತ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment