ಸಮುದ್ರ ಮಥನ 15:
ಶರಣರನ್ನು ಮರಣದಲ್ಲಿ ಕಾಣು
ಶರಣರನ್ನು ಮರಣದಲ್ಲಿ ಕಾಣು
ಪರೀಕ್ಷಿತನ ಜಾಗದ ಲ್ಲಿ ನಾವಿದ್ದಿದ್ದರೆ ಅಯ್ಯೋ! ಇನ್ನೊಂದೇ ವಾರದಲ್ಲಿ ಸಾವೇ! ಛೇ! ಎಷ್ಟೊಂದು ಸಾಧಿಸಲು ಬಾಕಿಯಿತ್ತು. ಏನೇನೆಲ್ಲ ಆಗಬೇಕಿತ್ತು. ಸಾಧ್ಯವಾದಷ್ಟನ್ನೆಲ್ಲ ಈ ಒಂದು ವಾರದಲ್ಲಿಯೇ ಮಾಡುತ್ತೇನೆ. ಹೆಚ್ಚೆಚ್ಚು ಸಿನೆಮಾ ನೋಡುತ್ತೇನೆ, ತಿಂಡಿ ತಿನ್ನುತ್ತೇನೆ. ಎಂಬೆಲ್ಲ ಹಪಹಪಿಯ ಹೇಳತೀರದ ಆತಂಕದೊಂದಿಗೆ ಸಾವಿಗೆ ಶರಣಾಗುತ್ತೀರೋ? ಒಮ್ಮೆ ಯೋಚಿಸಿ ನೋಡಿ.
ಕಳೆದ ಸಂಚಿಕೆಯಲ್ಲಿ 'ಬದುಕಿನ ಸತ್ಯಂ ಶಿವಂ ಸುಂದರಂ...'ನ ಬಗೆಗೆ ಹೇಳಿದ್ದೆವು. ಅಲ್ಲಿ ಸಾರ್ಥಕ ಬದುಕಿನ ಬಗೆಗೆ ಒಂದಷ್ಟನ್ನ ಹಂಚಿಕೊಂಡಿದ್ದೆವು. ಅದು ಪೂರ್ವಾರ್ಧ. ಉತ್ತರಾರ್ಧದ ಅನುಸಂಧಾನ ಮಾಡಬೇಕಿದೆ.
ಹೌದು, ನಾವೀಗ ಹೇಳಹೊರಟಿರುವುದು ಸಾವಿನ ಬಗೆಗೆ. ಮೊದಲು ಮಹಾಭಾರತದ ಕಥೆಯೊಂದನ್ನು ನೋಡೋಣ.
ಅಲ್ಲೊಬ್ಬ ಚಕ್ರವರ್ತಿ. ಪರೀಕ್ಷಿತ. ಎಲ್ಲವೂ ಕುಶಲವಾಗಿಯೇ ನಡೆದುಕೊಂಡು ಹೋಗುತ್ತಿದ್ದಾಗಲೇ ಹಠಾತ್ತನೆ ಶಾಪವೊಂದು ಅವನ ಮೇಲೆ ಬಂದೆರಗಿತು. ಇನ್ನೊಂದು ವಾರದೊಳಗೆ ತಕ್ಷಕನೆಂಬ ಸರ್ಪ ಕಚ್ಚಿ ಅವನು ಸಾಯಲಿದ್ದಾನೆಂದಾಯಿತು.
ಸರಿ. ಎಲ್ಲವೂ ಈ ಒಂದು ವಾರದೊಳಗೇ ಮುಗಿದು ಹೋಗುವುದಾದರೆ ನೆಮ್ಮದಿಯ ತಂಪಿನೊಂದಿಗೆ ಸಾಯಲು ಸಿದ್ಧಗೊಳ್ಳಬೇಕೆಂದು ಪರೀಕ್ಷಿತ ತೀರ್ಮಾನಿಸಿದ. ಹಾಗೆ ಭಾಗವತದ ಅನುಸಂಧಾನ ಪ್ರಾರಂಭವಾಯಿತು.
ಗಹನವಾದ ಪ್ರಕೃತಿಯ ರಹಸ್ಯ ಅವನ ಹೃದಯಂಗಳದಲ್ಲಿ ಗೋಚರಿಸಲು ಪ್ರಾರಂಭವಾಯಿತು. ಏಳು ದಿನಗಳು ಮುಗಿಯುವುದರೊಳಗಾಗಿ ಅವನು ಆ ಗೂಢ ತತ್ತ್ವದೊಳಗೆ ಒಂದಾದ. ಸಮಾಧಿ (ಸ್ಥಿತಿ) ಏರ್ಪಟ್ಟಿತು.
ಪ್ರಾಣಪಕ್ಷಿ ಸೇರಬೇಕಾದ ಜಾಗದಲ್ಲಿ ಸೇರಿತು. ಆ ನಂತರದಲ್ಲಿ ತಕ್ಷಕ ಬಂದು ಅವನನ್ನು ಕಚ್ಚಿದ. ಆಗ ಪರೀಕ್ಷಿತ ನೋವಿನಿಂದ ನರಳಲಿಲ್ಲ,
ಸಾವಿನ ಭೀತಿಯಿಂದ ಅಳಲಿಲ್ಲ. ಆಗಬೇಕಾದದ್ದೆಲ್ಲವೂ ಮುಂಚೆಯೇ ಆಗಿಹೋಗಿತ್ತು. ತಕ್ಷಕ ಕಚ್ಚಿದ್ದು ನೆಪಮಾತ್ರಕ್ಕೆ ಎಂಬಷ್ಟಕ್ಕೇ ಸೀಮಿತವಾಗಿತ್ತು.
ನಮ್ಮಗಳ ಸಾವನ್ನೂ ನಾವು ಇಷ್ಟು ಸಂಯಮದಿಂದ, ಪ್ರೀತ್ಯಾದರಗಳಿಂದ ಬರಮಾಡಿಕೊಳ್ಳಲು ಸಾಧ್ಯವೇ? ಅಥವಾ ಅಕಸ್ಮಾತ್ ಪರೀಕ್ಷಿತನ ಜಾಗದಲ್ಲಿ ನಾವಿದ್ದಿದ್ದರೆ ಅಯ್ಯೋ! ಇನ್ನೊಂದೇ ವಾರದಲ್ಲಿ ಸಾವೇ! ಛೇ! ಎಷ್ಟೊಂದು ಸಾಧಿಸಲು ಬಾಕಿಯಿತ್ತು. ಏನೇನೆಲ್ಲ ಆಗಬೇಕಿತ್ತು. ಸಾಧ್ಯವಾದಷ್ಟನ್ನೆಲ್ಲ ಈ ಒಂದು ವಾರದಲ್ಲಿಯೇ ಮಾಡುತ್ತೇನೆ. ಹೆಚ್ಚೆಚ್ಚು ಸಿನೆಮಾ ನೋಡುತ್ತೇನೆ, ತಿಂಡಿ ತಿನ್ನುತ್ತೇನೆ. ಎಂಬೆಲ್ಲ ಹಪಹಪಿಯ ಹೇಳತೀರದ ಆತಂಕದೊಂದಿಗೆ ಸಾವಿಗೆ ಶರಣಾಗುತ್ತೀರೋ? ಒಮ್ಮೆ ಯೋಚಿಸಿ ನೋಡಿ.
ತುಂಬು ಬದುಕನ್ನು ಬದುಕಿದವರಿಗೆ ಸಾವೆಂಬುದು ಸಮಸ್ಯೆಯಾಗಿ ಕಾಡಲಿಕ್ಕಿಲ್ಲ. ಹುಟ್ಟಿನಷ್ಟೇ ಸಹಜವಾಗಿ ತೋರುತ್ತದೆ. ಶಂಕರಾಚಾರ್ಯರು ಒಂದು ಕಡೆ ಉಲ್ಲೇಖಿಸುತ್ತಾರೆ. ನದಿಯ ದಂಡೆಯಲ್ಲಿರುವ ವೃಕ್ಷ, ಪ್ರವಾಹದ ಹೊಡೆತಕ್ಕೆ ಸಿಕ್ಕಿ ಕೆಳಕ್ಕುರುಳುತ್ತದೆ. ಅದು ಅದರ ಇಚ್ಛೆಯಾಗಿರುವುದಿಲ್ಲ. ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿರುತ್ತದೆ. ಆದರೆ, ಮರದ ಮೇಲೆ ಕುಳಿತ ಪಕ್ಷಿ ಕೊಂಬೆಯನ್ನು ಬಿಟ್ಟು ಮೇಲಕ್ಕೆ ಸ್ವಚ್ಛಂದವಾಗಿ ಹಾರಿಹೋಗುವುದು ಹಾಗಲ್ಲ. ಅಲ್ಲಿ ಆ ಹಕ್ಕಿಯ ಸ್ವ-ಇಚ್ಛೆಯ ಹೊರತಾಗಿ ಮತ್ತೇನೂ ಕೆಲಸ ಮಾಡಿರುವುದಿಲ್ಲ.
ಹಾಗಾಗಿ, ಹುಟ್ಟು-ಜೀವನ-ಸಾವನ್ನು ಹೂವನ್ನೆತ್ತಿದಷ್ಟು ಹಗುರಾಗಿ ನಿರ್ವಹಿಸುವ ಕೌಶಲವನ್ನು ಕರಗತ ಮಾಡಿಕೊಳ್ಳಬೇಕು. ಅಲ್ಲಿ ಒಂದು ಹೆಚ್ಚು, ಮತ್ತೊಂದು ಕಡಿಮೆ ಎಂದೆಲ್ಲ ಭಾವಿಸಲು ಆಸ್ಪದವಿಲ್ಲ. ಭ್ರಮೆಯನ್ನು ಆವಾಹಿಸಿಕೊಳ್ಳಲು ಹೇಳುತ್ತಿದ್ದೇವೆ ಎಂದು ಭಾವಿಸುವುದು ಬೇಡ. ಅವೆಲ್ಲ ಬಟ್ಟೆ ಬದಲಾಯಿಸಿದಷ್ಟು ಸಲೀಸಾಗಿ ಸಾಗುವ ಪ್ರಕ್ರಿಯೆಗಳು. ಅದಕ್ಕಾಗಿ ಈ ಮಾತನ್ನು ಹೇಳುತ್ತಿದ್ದೇವೆ.
'ಶರಣರನ್ನು ಮರಣದಲ್ಲಿ ಕಾಣು...' ಎಂಬ ಮಾತು ಮತ್ತೆ-ಮತ್ತೆ ನೆನಪಿಗೆ ಬರುತ್ತದೆ.
-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
1 comment:
Hi Da Its wonder Ful Blog.Why u convert tis to one .com?
Post a Comment