Saturday, December 13, 2008

ಕೇಳಿದ್ದು ಜೈನ ಆಹಾರ, ಕೊಟ್ಟದ್ದು ಮೀನು ಸಾರು..!

ಕೇಳಿದ್ದು ಜೈನ ಆಹಾರ,

ಕೊಟ್ಟದ್ದು ಮೀನು ಸಾರು..!



ಜೈನರೆಂದರೆ ಅಹಿಂಸಾವಾದಿಗಳು ಎಂಬುದು ಜಗತ್ತಿಗೆಲ್ಲ ಗೊತ್ತು. ಆದರೆ ವಿಮಾನಯಾನ ಸಂಸ್ಥೆಯೊಂದರ ಪ್ರಕಾರ ಜೈನ ಊಟದಲ್ಲಿ ಮೀನು, ಮೊಟ್ಟೆ ಸೇರಬಹುದಂತೆ! ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ವಿಮಾನ ಪಯಣಿಗನಿಗೆ 10,000 ರೂಪಾಯಿಗಳ ಪರಿಹಾರ ನೀಡಲು ವಿಮಾನಯಾನ ಸಂಸ್ಥೆಗೆ ಆಜ್ಞಾಪಿಸಿತು.

ನೆತ್ರಕೆರೆ ಉದಯಶಂಕರ 

ವಿಮಾನದಲ್ಲಿ ಪಯಾಣ ಮಾಡುವಾಗ ವಿಮಾನಯಾನ ಸಂಸ್ಥೆಗಳೇ ಪಯಣಿಗರಿಗೆ ಆಹಾರವನ್ನೂ ಒದಗಿಸುತ್ತವೆ. ಪ್ರಯಾಣಿಕರು ಅಪೇಕ್ಷೆ ಪಟ್ಟ ಆಹಾರವನ್ನು ಒದಗಿಸುವುದು ಸಾಮಾನ್ಯವಾದ ಕ್ರಮ. ಆದರೆ ಪ್ರಯಾಣಿಕರು ಅಪೇಕ್ಷೆ ಪಟ್ಟದ್ದನ್ನು ಬಿಟ್ಟು ಬೇರೆ ಆಹಾರ ಒದಗಿಸಿ, ಪಯಣಿಗನಿಗೆ ಇರಿಸು- ಮುರಿಸು ಆಗುವಂತೆ ಮಾಡಿದರೆ?

ಗ್ರಾಹಕ ಸಂರಕ್ಷಣಾ ಕಾಯ್ದೆ ನೆರವಿಗೆ ಬರುತ್ತದೆ. ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ನ್ಯಾಯ ಒದಗಿಸಿದ ಪ್ರಕರಣ ಇದು.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಮಲ್ಲೇಶ್ವರಂ ನಿವಾಸಿ ಆರ್. ಕೃಷ್ಣ ಸ್ವಾಮಿ ಅವರ ಪುತ್ರ ಕೆ. ಅನಂತ ಪದ್ಮನಾಭನ್.  ಪ್ರತಿವಾದಿಗಳು: ಮ್ಯಾನೇಜರ್, ಮಲೇಷ್ಯನ್ ಏರ್ ಲೈನ್ಸ್ , ರೆಸಿಡೆನ್ಸಿ ರಸ್ತೆ, ಬೆಂಗಳೂರು. ಅರ್ಜಿದಾರ ಅನಂತ ಪದ್ಮನಾಭನ್ ಅವರು ವರ್ತಕರಾಗಿದ್ದು ಆಗಾಗ ವಿದೇಶ ಯಾನ ಮಾಡಬೇಕಾಗುತ್ತಿತ್ತು.

ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಪಾನಿಗೆ ಹೋಗಿ ಬರುವ ಸಲುವಾಗಿ ಅವರು ಪ್ರತಿವಾದಿ ಮಲೇಷ್ಯನ್ ಏರ್ ಲೈನ್ಸಿನಲ್ಲಿ ಪಯಣ ಹಾಗೂ ಮರುಪಯಣದ ಟಿಕೆಟ್ ಕಾಯ್ದಿರಿಸಿದರು. ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲೇ ಅವರು ತಾನು ಸಸ್ಯಾಹಾರಿ ಎಂಬುದಾಗಿ ಹೇಳಿ, ಪಯಣ ಕಾಲದಲ್ಲಿ ಹೋಗುವಾಗ ಮತ್ತು ವಾಪಸ್ ಬರುವಾಗ ಜೈನ ಊಟವನ್ನು ಬಯಸುವುದಾಗಿ ಸ್ಪಷ್ಟ ಪಡಿಸಿದರು. ಟಿಕೆಟ್ ಕಾಯ್ದಿರಿಸಿದ ಏಜೆಂಟರು ಜೈನ ಆಹಾರ ಒದಗಿಸುವ ಬಗೆಗೆ ಖಾತರಿ ನೀಡಿದರು.

2008ರ ಫೆಬ್ರುವರಿ 28ರಂದು ಅನಂತ ಪದ್ಮನಾಭನ್ ಅವರು ಪ್ರತಿವಾದಿ ಏರ್ ಲೈನ್ಸಿನ ವಿಮಾನದಲ್ಲಿ ನರಿಟಾದಿಂದ ಕ್ವಾಲಾಲಂಪುರಕ್ಕೆ ವಾಪಸಾದರು. ಈ ಸಂದರ್ಭದಲ್ಲಿ ಅವರಿಗೆ ಮೀನಿನ ಸಾರು ಸಹಿತವಾದ ಊಟವನ್ನು ಒದಗಿಸಲಾಯಿತು.

ಇದನ್ನು ತತ್ ಕ್ಷಣ ಗಮನಿಸಿದ ಅನಂತ ಪದ್ಮನಾಭನ್ ಅವರು ಊಟ ನೀಡಿದ ವಿಮಾನ ಸಿಬ್ಬಂದಿಯನ್ನು ಕರೆದು ಮೊದಲೇ ತಿಳಿಸಿದ್ದಂತೆ ಜೈನ ಊಟ ನೀಡುವಂತೆ ಹೇಳಿದರು. ಆದರೆ ಆತ ಅದಕ್ಕೆ ಸ್ಪಂದಿಸಲಿಲ್ಲ. 

ಬದಲಾಗಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ ಎಂಬುದು ಪದ್ಮನಾಭನ್ ಅವರ ಆರೋಪ. ಮೊದಲೇ ಸೂಚಿಸಿದ್ದ ಆಹಾರ ಸಿಗದೇ ಹೋದುದರಿಂದ ಅರ್ಜಿದಾರರು 8 ಗಂಟೆಗಳ ಕಾಲ ಹಸಿದುಕೊಂಡೇ ವಿಮಾನಯಾನ ಮುಂದುವರಿಸಬೇಕಾಯಿತು.

ತಮಗೆ ಒದಗಿಸಲಾದ ಪೂರಕ ಮಾಹಿತಿ ಹಾಳೆಯಲ್ಲಿ ಈ ಬಗ್ಗೆ ತಮ್ಮ ದೂರು ದಾಖಲಿಸಿದ ಅನಂತ ಪದ್ಮನಾಭನ್ ಅವರು, ನಂತರ ತಮಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಲೀಗಲ್ ನೋಟಿಸನ್ನೂ ಕಳುಹಿಸಿದರು. ಆದರೆ ಅವರ ಪ್ರಯತ್ನಗಳೆಲ್ಲ ನೀರ ಮೇಲಣ ಹೋಮದಂತಾದವು. ಯಾವ ಪರಿಹಾರವೂ ಅವರಿಗೆ ಲಭಿಸಲಿಲ್ಲ.
ಪಟ್ಟು ಬಿಡದ ಪದ್ಮನಾಭನ್ ತಮ್ಮ ಅನಂತ ಯತ್ನ ಮುಂದುವರೆಸಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು.

ಅಧ್ಯಕ್ಷ ಎ.ಎಂ. ಬೆನ್ನೂರ ಮತ್ತು ಸದಸ್ಯ ಸೈಯದ್ ಉಸ್ಮಾನ್ ರಜ್ವಿ ಅವರನ್ನು ಒಳಗೊಂಡ ಬೆಂಗಳೂರು ಜಿಲ್ಲಾ ಗ್ರಾಹಕ ನ್ಯಾಯಾಲಯ (ನಗರ) ಪೀಠವು ಅರ್ಜಿದಾರ ಅನಂತ ಪದ್ಮನಾಭನ್ ಮತ್ತು ಪ್ರತಿವಾದಿ ಮಲೇಷ್ಯನ್ ಏರ್ ಲೈನ್ಸ್ ಪರ ವಕೀಲ ರಮಾಕಾಂತ ವಿ. ಶಿಂಧೆ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ನ್ಯಾಯಾಲಯದಲ್ಲಿ ಹಾಜರಾದ ಪ್ರತಿವಾದಿ ಮಲೇಷ್ಯನ್ ಏರ್ ಲೈನ್ಸ್ ಸಂಸ್ಥೆಯು ಅರ್ಜಿದಾರ ಅನಂತ ಪದ್ಮನಾಭನ್ ಮಾಡಿದ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿತು. ತಾವು ಅರ್ಜಿದಾರರಿಗೆ ನೀಡಿದ್ದು ಜೈನ ಊಟವನ್ನೇ ಎಂಬುದಾಗಿ ಪ್ರತಿಪಾದಿಸಿದ ಪ್ರತಿವಾದಿಗಳು ಅರ್ಜಿದಾರರು ತಪ್ಪು ಭಾವಿಸಿಕೊಂಡು ವಿನಾಕಾರಣ ಖಟ್ಲೆ ಹೂಡಿದ್ದಾರೆ ಎಂದು ವಾದಿಸಿದರು.

ತಮ್ಮ ಪ್ರಕಾರ ಜೈನ ಊಟ ಅಂದರೆ ಬೇರು ರಹಿತ ಆಹಾರ, ಆದರೆ ಮೀನು ಅದರಲ್ಲಿ ಒಳಪಡುತ್ತದೆ ಎಂಬುದು ಪ್ರತಿವಾದಿಗಳ ಪ್ರತಿಪಾದನೆ. ಈ ವಿಚಾರವನ್ನು ವಿವರಿಸಿದರೂ ಕೇಳಲು ಅರ್ಜಿದಾರರು ಸಿದ್ಧರಿರಲಿಲ್ಲ, ಹೀಗಾಗಿ ಅವರಿಗೆ ಬೇರೆ ಊಟ ಒದಗಿಸಲಾಯಿತು, ಅದನ್ನು ಅವರು ಸ್ವೀಕರಿಸಿದರು. ಹಸಿದುಕೊಂಡೇ ಪ್ರಯಾಣ ಮಾಡಿದೆನೆಂಬ ಅರ್ಜಿದಾರರ ಹೇಳಿಕೆ ತಪ್ಪು. ಸಿಟ್ಟಿನ ಭರದಲ್ಲೇ ಅವರು ಪೂರಕ ಮಾಹಿತಿ ಹಾಳೆಯನ್ನು ಭರ್ತಿ ಮಾಡಿ ಹಿಂದಿರುಗಿಸಿದ್ದಲ್ಲದೆ ಕೆಲವು ಆರೋಪಗಳನ್ನೂ ಮಾಡಿದರು. ಅನಾನುಕೂಲವಾದುದಕ್ಕಾಗಿ ಕ್ಷಮಾಯಾಚನೆ ಮಾಡಿದರೂ ಒಪ್ಪಲು ಸಿದ್ಧರಾಗದ ಅರ್ಜಿದಾರರು ಈ ಸುಳ್ಳು ಖಟ್ಲೆ ಹೂಡಿದರು ಎಂದು ಪ್ರತಿವಾದಿಗಳು ಪ್ರತಿಪಾದಿಸಿದರು.

ತಮ್ಮಿಂದ ಯಾವುದೇ ಸೇವಾಲೋಪವೂ ಆಗಿಲ್ಲವಾದ್ದರಿಂದ ಪ್ರಕರಣವನ್ನು ವಜಾ ಮಾಡಬೇಕು ಎಂದು ಅವರು ಕೋರಿದರು.

ಉಭಯ ಕಡೆಗಳಿಂದಲೂ ಮಂಡನೆಯಾದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯ ಪೀಠವು ಅರ್ಜಿದಾರರು ಪರಿಹಾರ ನೀಡುವಂತೆ ಒತ್ತಾಯಿಸಿ ಲೀಗಲ್ ನೋಟಿಸ್ ಕಳುಹಿಸಿದ್ದನ್ನು ಮತ್ತು ಅದಕ್ಕೆ ಪ್ರತಿವಾದಿ ಸಮರ್ಪಕ ಉತ್ತರ ನೀಡದೇ ಇದ್ದುದನ್ನು ಗಮನಕ್ಕೆ ತೆಗೆದುಕೊಂಡಿತು.

ಪ್ರತಿವಾದಿಗಳು ತಾವು ಜೈನ ಊಟ ನೀಡಿರುವುದಾಗಿ ಪ್ರತಿಪಾದಿಸಿ ತಮ್ಮ ಪ್ರಕಾರ ಜೈನ ಊಟದಲ್ಲಿ ಬೇರುಗಳು ವರ್ಜ್ಯ, ಮೀನು ವರ್ಜ್ಯವಲ್ಲ ಎಂಬುದಾಗಿ ಹೇಳಿದ್ದು ಸ್ವೀಕಾರ ಯೋಗ್ಯ ಹೇಳಿಕೆಯಲ್ಲ ಎಂದು ನ್ಯಾಯಾಲಯ ಭಾವಿಸಿತು. 

ಜೈನ ಆಹಾರವೆಂದರೆ ಬೇರು ಮಾತ್ರ ಬಳಸುವಂತಿಲ್ಲ, ಮಾಂಸ ಮತ್ತು ಮೊಟ್ಟೆ ಸೇರುತ್ತದೆ ಎಂಬ ವಾದವನ್ನು ಪ್ರತಿವಾದಿ ಮಂಡಿಸಿದ್ದನ್ನೂ ನ್ಯಾಯಾಲಯ ಗಮನಿಸಿತು. ಅದರರ್ಥ ಈಗಲೂ ಪ್ರತಿವಾದಿಯ ಪ್ರಕಾರ ಮೀನು ಜೈನ ಆಹಾರದ ಭಾಗ ಎಂದೇ ಆಗುತ್ತದೆ ಎಂದು ನ್ಯಾಯಾಲಯ ಭಾವಿಸಿತು.

ಪ್ರತಿವಾದಿಯ ಇಂತಹ ವರ್ತನೆ ಸಹಜವಾಗಿಯೇ ಪ್ರತಿವಾದಿಗೆ ಮಾನಸಿಕ ಕ್ಲೇಶ ಉಂಟು ಮಾಡುವಂತಹುದು ಹಾಗೂ ತನ್ನದಲ್ಲದ ತಪ್ಪಿಗಾಗಿ ನಷ್ಟ ಉಂಟಾಗುವಂತೆ ಮಾಡುವಂತಹುದು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

ಪ್ರತಿವಾದಿ ಒದಗಿಸಿದ ಸಾಕ್ಷ್ಯಾಧಾರಗಳಲ್ಲಿ ಮುಖ್ಯವಾಗಿದ್ದ ದಾಖಲೆ ಊಟದ ಮೆನು. ಪ್ರತಿವಾದಿಯ ಈ ದಾಖಲೆ ಪ್ರಕಾರವೇ ಜೈನ ಊಟದಲ್ಲಿ ಅಪೆಟೈಸರ್- ಕುಕಂಬರ್ (ಹಸಿವು ವರ್ಧಕ ಸೌತೆಕಾಯಿ), ಅನನಾಸು ಸಲಾಡ್, ನಿಂಬೆ ಹಣ್ಣಿನ ಚಟ್ನಿ, ಪುದಿನ ಪಲಾವ್, ಬೆಂಡೆ ಕೊಳುಂಬೆ (ಕೊಳಂಬೊ), ಎಳೆಜೋಳ ದಪ್ಪ ಮೆಣಸು ಪೋರಿಯಲ್, ಕುಂಬಳಕಾಯಿ ಹಲ್ವಾ, ಸ್ಪೈನಾಚ್ ನಾನ್, ಮಿನರಲ್ ವಾಟರ್ ಇರುತ್ತದೆ. ಅವರದೇ ಆದ ಈ ದಾಖಲೆಯಲ್ಲಿ ಎಲ್ಲೂ ಮೀನಿನ ಪ್ರಸ್ತಾಪವೇ ಇಲ್ಲ. ಆದ್ದರಿಂದ ಅರ್ಜಿದಾರರು ಜೈನ ಊಟಕ್ಕೆ ಆದೇಶ ನೀಡಿದಾಗ ಮೀನು ಸಹಿತವಾದ ಊಟ ನೀಡುವುದು ಖಚಿತವಾಗಿ ಸೇವಾ ಲೋಪವಾಗುತ್ತದೆ. ಇಂತಹ ನಿರ್ಲಕ್ಷ್ಯದ ವರ್ತನೆಯಿಂದ ಅರ್ಜಿದಾರರಿಗೆ ಮಾನಸಿಕ ಕ್ಲೇಶ ಉಂಟಾದರೆ ಅದು ಸಹಜವೇ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬಂದಿತು.

ಅರ್ಜಿದಾರರ ಸಾಕ್ಷ್ಯಾಧಾರಗಳು ಅತ್ಯಂತ ಸಹಜವಾಗಿ ಕಂಡು ಬಂದರೆ ಪ್ರತಿವಾದಿಗಳ ಸಾಕ್ಷ್ಯಾಧಾರ ಹಾಗೂ ವಾದ ಮಂಡನೆ ಸ್ವರಕ್ಷಣೆಗಾಗಿ ಮಾಡಿದ ಕೇವಲ ರಕ್ಷಣಾತ್ಮಕ ಯತ್ನ ಎಂಬುದು ಸ್ಪಷ್ಟವಾಗುತ್ತದೆ. ಅನಾನುಕೂಲವಾದುದಕ್ಕಾಗಿ ಕ್ಷಮೆ ಕೇಳಿದರೂ ಅರ್ಜಿದಾರರಿಗೆ ಯಾವುದೇ ಪರಿಹಾರವನ್ನು ಪ್ರತಿವಾದಿ ನೀಡಿಲ್ಲ. ಆದ್ದರಿಂದ ಪ್ರಕರಣದಲ್ಲಿ ಸೇವಾಲೋಪ ಆದುದನ್ನು ಅರ್ಜಿದಾರರು ಋಜುವಾತು ಪಡಿಸಿದ್ದಾರೆ ಎಂಬ ನಿಲುವಿಗೆ ಗ್ರಾಹಕ ನ್ಯಾಯಾಲಯ ಬಂದಿತು.

ಈ ಹಿನ್ನೆಲೆಯಲ್ಲಿ 10,000  ರೂಪಾಯಿಗಳ ಪರಿಹಾರವನ್ನು 1000 ರೂಪಾಯಿ ಖಟ್ಲೆ ವೆಚ್ಚ ಸೇರಿಸಿ ಅರ್ಜಿದಾರರಿಗೆ ಪಾವತಿ ಮಾಡುವಂತೆ ಪ್ರತಿವಾದಿ ಮಲೇಷ್ಯನ್ ಏರ್ ಲೈನ್ಸ್ ಸಂಸ್ಥೆಗೆ ನ್ಯಾಯಾಲಯ ಆದೇಶ ನೀಡಿತು.
   

No comments:

Advertisement