ಇಂದಿನ ಇತಿಹಾಸ
ಡಿಸೆಂಬರ್ 3
ಇಂಗ್ಲೆಂಡ್ ತಂಡದ ವಿರುದ್ಧ ಕ್ಯಾಂಡಿಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಪಾಲ್ ಕಾಲಿಂಗ್ ವುಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 709ನೇ ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಹಿರಿಮೆಯೊಂದಿಗೆ 'ವಿಶ್ವದಾಖಲೆ' ನಿರ್ಮಿಸಿದರು. ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೆಸರಿನಲ್ಲಿ ಇದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.
2007: ಇಂಗ್ಲೆಂಡ್ ತಂಡದ ವಿರುದ್ಧ ಕ್ಯಾಂಡಿಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಪಾಲ್ ಕಾಲಿಂಗ್ ವುಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 709ನೇ ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಹಿರಿಮೆಯೊಂದಿಗೆ 'ವಿಶ್ವದಾಖಲೆ' ನಿರ್ಮಿಸಿದರು. ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೆಸರಿನಲ್ಲಿ ಇದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. 35ರ ಹರೆಯದ ಮುರಳಿ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸಿನ 89ನೇ ಓವರಿನ (ದಿನದ 10ನೇ ಓವರ್) ನಾಲ್ಕನೇ ಎಸೆತದಲ್ಲಿ ತಮ್ಮ ಫೇವರಿಟ್ ದೂಸ್ರಾ ಎಸೆತ ಪ್ರಯೋಗಿಸಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಪಾಲ್ ಕಾಲಿಂಗ್ ವುಡ್ ಅವರನ್ನು ಬೌಲ್ಡ್ ಮಾಡಿ ಚರಿತ್ರೆಯೆಡೆಗೆ ಹೆಜ್ಜೆಯಿಟ್ಟರು. ವಿಶ್ವದಾಖಲೆ ಸ್ಥಾಪಿಸಿದ ಬಳಿಕ ಮ್ಯಾಥ್ಯೂ ಹೊಗಾರ್ಡ್ ಅವರನ್ನು ಔಟ್ ಮಾಡಿದ ಮುರಳಿ ಒಟ್ಟು ವಿಕೆಟ್ಟುಗಳ ಸಂಖ್ಯೆಯನ್ನು 710ಕ್ಕೆ ಹೆಚ್ಚಿಸಿದರು. ಲಂಕಾ ಬೌಲರಿಗೆ ಇದು 116ನೇ ಟೆಸ್ಟ್ ಪಂದ್ಯ. ಶೇನ್ ವಾರ್ನ್ ಅವರು 709 ವಿಕೆಟ್ ಪಡೆಯಲು 145 ಟೆಸ್ಟುಗಳನ್ನು ಆಡಿದ್ದರು. ಇಂಗ್ಲೆಂಡಿನ ಮೊದಲ ಇನಿಂಗ್ಸಿನಲ್ಲಿ 55 ರನ್ನುಗಳಿಗೆ 6 ವಿಕೆಟ್ ಪಡೆದ ಮುರಳಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು 61ನೇ ಬಾರಿ ಮಾಡಿದರು. ಅದೇ ರೀತಿ ಟೆಸ್ಟ್ ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಅವರು 20 ಬಾರಿ ಮಾಡಿದರು. ಕಳೆದ 15 ವರ್ಷಗಳಿಂದ ಬ್ಯಾಟ್ಸ್ ಮನ್ನರ ನಿದ್ದೆಗೆಡಿಸುತ್ತಿರುವ ಮುರಳಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿ. 2004ರಲ್ಲಿ ಮೊದಲ ಬಾರಿ ವೆಸ್ಟ್ ಇಂಡೀಸಿನ ವೇಗದ ಬೌಲರ್ ಕರ್ಟ್ನಿ ವಾಲ್ಷ್ ಅವರನ್ನು ಹಿಂದಿಕ್ಕಿ ವಿಶ್ವದ ಅತಿಹೆಚ್ಚು ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾಗಿದ್ದರು. ಆ ಬಳಿಕ ವಾರ್ನ್, ಮುರಳಿಯನ್ನು ಹಿಂದಿಕ್ಕಿ ಮುನ್ನಡೆದಿದ್ದರು. ವಾರ್ನ್ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಹೊಂದಿರುವ ಕಾರಣ ಮುರಳಿಯ ದಾಖಲೆಯನ್ನು ಮುರಿಯಲು ಇನ್ನು ಯಾರಿಗೂ ಸುಲಭದಲ್ಲಿ ಸಾಧ್ಯವಿಲ್ಲ. ಚೆಂಡನ್ನು ಮಾರಕ ರೀತಿಯಲ್ಲಿ ತಿರುಗುವಂತೆ ಮಾಡುವ ತಮ್ಮ ಸಾಮರ್ಥ್ಯದಿಂದ ಸ್ಪಿನ್ ಬೌಲಿಂಗಿಗೆ ಹೊಸ ರೂಪವನ್ನೇ ನೀಡಿದ ಮುರಳಿ ಈ ಹಿಂದೆ `ಚಕ್ಕಿಂಗ್' ಆರೋಪಕ್ಕೂ ಗುರಿಯಾಗಿದ್ದರು. 1995ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೌಲಿಂಗ್ ವೇಳೆ ಚೆಂಡನ್ನು ಥ್ರೋ ಮಾಡುತ್ತಿದ್ದಾರೆ ಎಂದು ಅಂಪೈರ್ ಡೆರೆಲ್ ಹೇರ್ ಏಳು ಬಾರಿ ಮುರಳಿಗೆ ನೋಬಾಲ್ ನೀಡಿದ್ದರು. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜಾನ್ ಹೊವಾರ್ಡ್ ಮುರಳಿಯನ್ನು `ಚಕ್ಕರ್' ಎಂದೂ ಕರೆದಿದ್ದರು. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಮುರಳಿ ತಮ್ಮ ವಿಕೆಟ್ `ಬೇಟೆ'ಯ ಕಾಯಕ ಮುಂದುವರೆಸಿದ್ದರು.
2007: ತೈವಾನಿನ `ದಿ ವಾಲ್' ಚಿತ್ರಕ್ಕೆ ಪಣಜಿಯಲ್ಲಿ ನಡೆದ 38ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ವರ್ಣ ಮಯೂರ ಪ್ರಶಸ್ತಿ ಲಭಿಸಿತು. ಪಣಜಿಯ ಕಲಾ ಅಕಾಡೆಮಿ ಸಭಾಂಗಣದಲ್ಲಿ ಜರುಗಿದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಹಂಗೇರಿಯ ಮಾರ್ತಾ ಮಿಜಾರೋಸ್ ಅಧ್ಯಕ್ಷತೆಯ ತೀರ್ಪುಗಾರರ ಮಂಡಳಿ (ಜ್ಯೂರಿ) ಪ್ರಶಸ್ತಿ ವಿಜೇತ ಚಿತ್ರಗಳ ಹೆಸರು ಪ್ರಕಟಿಸಿತು. ಹಿಂದಿನ ವರ್ಷ ಚೀನಾದ `ದಿ ಓಲ್ಡ್ ಬಾರ್ಬರ್' ಚಿತ್ರ ಸ್ವರ್ಣ ಮಯೂರ ಪಡೆದಿತ್ತು.
2007: ಬೆಂಗಳೂರಿನ `ನಮ್ಮ ಮೆಟ್ರೊ' ಯೋಜನೆಗಾಗಿ ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡುವ ಕಾರ್ಯವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸದ್ದಿಲ್ಲದೆ ಆರಂಭಿಸಿತು. ಇಂದಿರಾನಗರದ 100 ಅಡಿ ರಸ್ತೆಯ ನಿವಾಸಿ ನಿವೃತ್ತ ಕಂದಾಯ ಆಯುಕ್ತ ಎಸ್. ವೆಂಕಟೇಶ್ ಅವರು ಪರಿಹಾರ ಪಡೆದ ಮೊದಲ ಭೂಮಾಲೀಕರೆನಿಸಿದರು. ಅವರಿಗೆ ಕೆಐಎಡಿಬಿ 2.69 ಕೋಟಿ ರೂಪಾಯಿ ಚೆಕ್ ನೀಡಿತು. ವೆಂಕಟೇಶ್ ಅವರ 2009 ಚದರ ಅಡಿ ಜಾಗವನ್ನು ಮೆಟ್ರೊ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.
2007: ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ್) ನಿರ್ದೇಶಕ ಪಿ. ವೇಣುಗೋಪಾಲ್ ಅವರನ್ನು ಆ ಸ್ಥಾನದಿಂದ ಕಿತ್ತೊಗೆದ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಮೂರ್ತಿ ತರುಣ್ ಚಟರ್ಜಿ ಮತ್ತು ದಲ್ವೀರ್ ಭಂಡಾರಿ ಅವರಿದ್ದ ಪೀಠವು `ವೇಣುಗೋಪಾಲ್ ಅವರಂತಹ ಗಣ್ಯ ವ್ಯಕ್ತಿಯನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುವ ಅಗತ್ಯವಿತ್ತೇ' ಎಂದೂ ಪ್ರಶ್ನಿಸಿತು. `ಮುಂದಿನ ಆರು ತಿಂಗಳ ಒಳಗೆ ವೇಣುಗೋಪಾಲ್ ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿತ್ತು. ವಾಸ್ತವ ಹೀಗಿರುವಾಗ ಅವರನ್ನು ತತ್ ಕ್ಷಣವೇ ಆ ಹುದ್ದೆಯಿಂದ ಕಿತ್ತೊಗೆಯಲಿಕ್ಕಾಗಿಯೇ `ಏಮ್ಸ್' ಮಸೂದೆಗೇ ತಿದ್ದುಪಡಿ ತಂದದ್ದು ಎಷ್ಟು ಸರಿ ಎಂದೂ ಪೀಠವು ಪ್ರಶ್ನಿಸಿತು.
2007: ಲೇಬರ್ ಪಕ್ಷದ ನಾಯಕ ಕೆವಿನ್ ರುಡ್ ಆಸ್ಟ್ರೇಲಿಯಾದ 26ನೇ ಪ್ರಧಾನಿಯಾಗಿ ಮೆಲ್ಬೋರ್ನಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಂಬತ್ತು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ, ಜಾನ್ ಹೊವರ್ಡ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವನ್ನು ಸಂಪೂರ್ಣವಾಗಿ ನೆಲ ಕಚ್ಚಿಸಿತ್ತು. ಹನ್ನೊಂದುವರೆ ವರ್ಷಗಳ ನಂತರ ಲೇಬರ್ ಪಕ್ಷ ಆಸ್ಟ್ರೇಲಿಯಾದಲ್ಲಿ ಅಧಿಕಾರಕ್ಕೆ ಬಂದಿತು. ಕ್ಯಾನ್ ಬೆರಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗವರ್ನರ್ ಜನರಲ್ ಮೈಕೆಲ್ ಜೆಫ್ರಿ ಅವರ ಸಮ್ಮುಖದಲ್ಲಿ ಕೆವಿನ್ ರುಡ್ ಹಾಗೂ ಉಪ ಪ್ರಧಾನಿ ಜುಲಿಯಾ ಗಿಲಾರ್ಡ್ ಪ್ರಮಾಣ ವಚನ ಸ್ವೀಕರಿಸಿದರು.
2007: ಚುನಾವಣಾ ಅಧಿಕಾರಿಯೂ ಆದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಮರ್ ಉಝ್ ಜಮಾನ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನಾಮಪತ್ರವನ್ನು ತಿರಸ್ಕರಿಸಿದರು. 2000ನೇ ಇಸ್ವಿಯ ಹೈಜಾಕ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದ್ದು ಷರೀಫ್ ನಾಮಪತ್ರ ತಿರಸ್ಕರಿಸಲು ಕಾರಣ ಎಂದು ಹೇಳಲಾಯಿತು. ಹಿಂದಿನ ವಾರ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಕಾರಣ ನೀಡಿ ನವಾಜ್ ಷರೀಫ್ ಸಹೋದರನ ನಾಮಪತ್ರವನ್ನೂ ತಿರಸ್ಕರಿಸಲಾಗಿತ್ತು.
2007: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ `ಯುನೈಟೆಡ್ ರಷ್ಯಾ ಪಾರ್ಟಿ' ಸಂಸದೀಯ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿತು. ರಷ್ಯಾ ರಾಜಕೀಯದಲ್ಲಿ `ಕಿಂಗ್ ಮೇಕರ್' ಎಂಬ ಬಿರುದು ಪಡೆದ ಪುಟಿನ್ ಈ ಸ್ಥಾನ ಉಳಿಸಿಕೊಂಡರು. ಚುನಾವಣೆಯಲ್ಲಿ ಯುನೈಟೆಡ್ ರಷ್ಯಾ ಪಾರ್ಟಿ, ಸಂಸತ್ತಿನ ಕೆಳಮನೆ (ಡ್ಯೂಮಾ) 450 ಸ್ಥಾನಗಳಲ್ಲಿ 313 ಸ್ಥಾನಗಳನ್ನು ಗೆದ್ದು, ಶೇ 64.1ರಷ್ಟು ಮತಗಳನ್ನು ಪಡೆಯಿತು. ಕಮ್ಯುನಿಸ್ಟ್ ಪಾರ್ಟಿ ಕೇವಲ ಶೇ 11.6ರಷ್ಟು ಮತಗಳನ್ನು ಪಡೆದು, ಅರ್ಧದಷ್ಟು ಸ್ಥಾನಗಳಲ್ಲಿ ಸೋಲನ್ನಪ್ಪಿತು.
2007: ತಾತ್ಕಾಲಿಕ ಸಂಚಾರಿ ಪೀಠ ಸ್ಥಾಪನೆಗೆ ಧಾರವಾಡದ ಕಲಾಭವನದ ಸಮೀಪ ಇರುವ ಜಿಲ್ಲಾ ನ್ಯಾಯಾಲಯವು ಪ್ರಶಸ್ತವಾಗಿದೆ ಎಂದು `ತಾತ್ಕಾಲಿಕ ಪೀಠ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳ ಸಮಿತಿ'ಯು ಮುಖ್ಯ ನ್ಯಾಯಮೂರ್ತಿ ಅವರಿಗೆ ವರದಿ ಸಲ್ಲಿಸಿತು. ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಜನತೆಗೆ `ಮರೀಚಿಕೆ'ಯಾಗಿದ್ದ ತಾತ್ಕಾಲಿಕ ಸಂಚಾರಿ ಪೀಠದ ಕನಸು ಬಹುತೇಕ ನನಸಾದಂತಾಯಿತು.
2006: ದೋಹಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಮಹಿಳಾ ಆಥ್ಲೀಟ್ ಸೀಮಾ ಅಂಟಿಲ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಾ ಕಣದಲ್ಲಿ ಕಾಣಿಸಿಕೊಳ್ಳುವ ಮೊದಲೇ ಉದ್ದೀಪನ ಮದ್ದು ತೆಗೆದುಕೊಂಡದ್ದು ಸಾಬೀತಾಗಿದ್ದು, ಆಕೆಯನ್ನು ಕೂಟದಿಂದಲೇ ವಾಪಸ್ ಕಳುಹಿಸಲು ತಂಡದ ಆಡಳಿತ ತೀರ್ಮಾನಿಸಿತು.
2006: ಭಾರತದ ಖ್ಯಾತ ಚಿತ್ರಕಾರ ರಾಜಾ ರವಿವರ್ಮ ನಿಧನದ ಶತಮಾನದ ಬಳಿಕ ಅವರ ಅಪರೂಪದ ಚಿತ್ರಪಟ (ಸ್ಕೆಚ್ ಬುಕ್) ತಿರುವನಂತಪುರದಲ್ಲಿ ಪತ್ತೆಯಾಯಿತು. ಹಿಂದೂ ದೇವಾನುದೇವತೆಗಳು ಹಾಗೂ ಪೌರಾಣಿಕ ಪ್ರಸಂಗಗಳ ಬಗ್ಗೆ ರವಿವರ್ಮ ಬರೆದ ಚಿತ್ರಗಳು ಇಂದಿಗೂ ಅತ್ಯುತ್ತಮ ಎಂಬ ಹೆಗ್ಗಳಿಕೆಯನ್ನು ಹೊಂದಿವೆ.
2005: ಅಂತಾರಾಷ್ಟ್ರೀಯ ಖ್ಯಾತಿಯ ಪೊಗೊ ಟಿವಿ ಚಾನೆಲಿನ ಪ್ರತಿಷ್ಠಿತ `ಅಮೇಜಿಂಗ್ ಕಿಡ್ಸ್ ಪ್ರಶಸ್ತಿ'ಗೆ ಕನ್ನಡಿಗ ಬಾಲಕ ಶಶಾಂಕ ಎಂ. ಕಾಶಿ ಆಯ್ಕೆಯಾದ. ಬೆಂಗಳೂರಿನ ನಂದಿನಿ ಬಡಾವಣೆಯ ಪ್ರೆಸಿಡೆನ್ಸಿ ಶಾಲೆಯ 4ನೇ ತರಗತಿ ವಿದ್ಯಾಥರ್ಿ ಶಶಾಂಕ ಮೂಲತಃ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದವನು. ಪೊಗೊ ಚಾನೆಲ್ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಪೈಕಿ ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಿ ಶಶಾಂಕ್ ಈ ಪ್ರಶಸ್ತಿಯನ್ನು ಗೆದ್ದುಕೊಂಡ.
2005: ಹಿರಿಯ ರಾಜಕಾರಣಿ, ಮಾಜಿ ಸಂಸದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ವಿ. ಕೃಷ್ಣರಾವ್ (82) ಬೆಂಗಳೂರಿನಲ್ಲಿ ನಿಧನರಾದರು. 1972ರಲ್ಲಿ ಗೌರಿ ಬಿದನೂರು ಕ್ಷೇತ್ರದಿಂದ ವಿಧಾನಸಭೆಗೆ ಗೆದ್ದ ಅವರು ನಂತರ ಲೋಕಸಭೆಗೆ
1984-1996ರ ನಡುವಣ ಅವಧಿಯಲ್ಲಿ ಸತತ ಮೂರುಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ನಿಕಟವರ್ತಿ. 1992-95ರ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆರ್. ಎಲ್. ಜಾಲಪ್ಪ ಅವರನ್ನು ಎರಡು ಬಾರಿ ಪರಾಭವಗೊಳಿಸಿದ್ದರು. 1941-1976ರವರೆಗಿನ ಅವಧಿಯಲ್ಲಿ 35 ವರ್ಷ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷರಾಗಿ, ಬಳಿಕ ಎಪಿಎಂಸಿ ಅಧ್ಯಕ್ಷರಾಗಿ, ಭೂ ಬ್ಯಾಂಕ್ ನಿರ್ದೇಶಕರಾಗಿ, ಗೌರಿಬಿದನೂರು ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2005: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರು ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಹಾಗೂ ಏಷ್ಯಾ ಕ್ರಿಕೆಟ್ ಕಾರ್ಪೊರೇಷನ್ನಿಗೆ (ಎಎಪಿಸಿ) ರಾಜೀನಾಮೆ ನೀಡಿದರು.
2005: ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರು ವಿಜಯ ಕರ್ನಾಟಕ ಪತ್ರಿಕೆಯ ಅತಿಥಿ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗ ಒಂದಕ್ಕೆ ನಾಂದಿ ಹಾಡಿದರು. ಬ್ರಿಟಿಷ್ ಪತ್ರಿಕೋದ್ಯಮದಲ್ಲಿ ಇಂತಹ ಪ್ರಯೋಗ ನೂರಾರು ವರ್ಷಗಳಿಂದ ಇದ್ದರೂ ಭಾರತದಲ್ಲಿ ಜಾರಿಗೆ ಬಂದದ್ದು ಕಡಿಮೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಸಾನಿಯಾ ಮಿರ್ಜಾ, ಕಾದಂಬರಿಕಾರ ವಿಕ್ರಂ ಸೇಠ್. ಇನ್ಫೋಸಿಸ್ಸಿನ ನಾರಾಯಣಮೂರ್ತಿ ಅವರನ್ನು ಅತಿಥಿ ಸಂಪಾದಕರನ್ನಾಗಿ ಕರೆಸಿ ಅವರಿಂದ ಆಯಾ ದಿನದ ಸಂಚಿಕೆಗಳನ್ನು ಮಾಡಿಸಿತ್ತು. ಎಕನಾಮಿಕ್ ಟೈಮ್ಸ್ ನಂತರ ಹಣಕಾಸು ಸಚಿವ ಚಿದಂಬರಂ ಅವರನ್ನು ಅತಿಥಿ ಸಂಪಾದಕರನ್ನಾಗಿ ಆಹ್ವಾನಿಸಿತ್ತು.
1999: ಅಮೆರಿಕಾದ ಟೋರಿ ಮರ್ಡನ್ ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾದರು. ಆಫ್ರಿಕಾ ಸಮೀಪದ ಕ್ಯಾನರಿ ದ್ವೀಪಗಳಿಂದ ಹೊರಟು 81 ದಿನಗಳ ಬಳಿಕ ಆಕೆ ಫ್ರೆಂಚ್ ಕ್ಯಾರಿಬಿಯನ್ ದ್ವೀಪವಾದ ಗುವಾಡೆಲೊಪ್ ನ್ನು ತಲುಪಿದರು.
1984: ಈದಿನ ಭಾರತದ ಪಾಲಿಗೆ ಹೃದಯ ವಿದ್ರಾವಕ ದುರಂತದ ದಿನ. ಭೋಪಾಲಿನ ಯೂನಿಯನ್ ಕಾರ್ಬೈಡ್ ಕೀಟನಾಶಕ ತಯಾರಿ ಕಾರ್ಖಾನೆಯ ಘಟಕದಿಂದ ಮಿಥೈಲ್- ಐಸೊಸಯನೇಟ್ ವಿಷಾನಿಲ ಸೋರಿಕೆಯಾಯಿತು. ಸೋರಿಕೆಯಾದ 40 ಟನ್ನಿಗೂ ಹೆಚ್ಚಿನ ವಿಷಾನಿಲ 40 ಚದರ ಕಿ.ಮೀ.ವರೆಗೆ ವ್ಯಾಪಿಸಿತು. 4000 ಮಂದಿ ಅದನ್ನು ಸೇವಿಸಿ ತತ್ ಕ್ಷಣವೇ ಅಸು ನೀಗಿದರು. ಇತರ 5 ಲಕ್ಷ ಮಂದಿ ವಿವಿಧ ಕಾಯಿಲೆಗಳಿಗೆ ತುತ್ತಾಗಿ ನರಳಿದರು. 1989ರಲ್ಲಿ ಯೂನಿಯನ್ ಕಾರ್ಬೈಡ್ 47ಕೋಟಿ ಡಾಲರುಗಳನ್ನು ಭಾರತ ಸರ್ಕಾರಕ್ಕೆ ಪರಿಹಾರ ರೂಪದಲ್ಲಿ ನೀಡುವುದಾಗಿ ಒಪ್ಪಿತು. ಇದಕ್ಕೆ ಪ್ರತಿಯಾಗಿ ಸರ್ಕಾರವು ಕಂಪೆನಿ ಹಾಗೂ ಅದರ ಅಧ್ಯಕ್ಷರ ವಿರುದ್ಧ ಹೂಡಲಾಗಿದ್ದ ಎಲ್ಲ ಕ್ರಿಮಿನಲ್ ಖಟ್ಲೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿತು.
1967: ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ಡಾ. ಕ್ರಿಸ್ಟಿಯನ್ ಬರ್ನಾರ್ಡ್ ನೇತೃತ್ವದಲ್ಲಿ ಸರ್ಜನ್ ಗಳು ಮೊತ್ತ ಮೊದಲ ಮಾನವ ಹೃದಯ ಕಸಿ ಮಾಡಿದರು. ಹೃದಯ ಕಸಿ ಮಾಡಿಸಿಕೊಂಡ ಲೂಯಿ ವಾಶ್ಖನ್ ಸ್ಕಿ ಹೊಸ ಹೃದಯದೊಂದಿಗೆ 18 ದಿನಗಳ ಕಾಲ ಬದುಕಿದರು. ಅಪಘಾತದಲ್ಲಿ ಮೃತರಾದ ಡೆನಿಸ್ ದರ್ವಾಲಿ ಎಂಬವರ ಹೃದಯವನ್ನು ಈ ಕಸಿಗಾಗಿ ಪಡೆದುಕೊಳ್ಳಲಾಗಿತ್ತು.
1936: ಸಾಹಿತಿ ಲೀಲಾವತಿ ತೋರಣಗಟ್ಟಿ ಜನನ.
1934: ಸಾಹಿತಿ ಸೋಮಶೇಖರರಾವ್ ಎಚ್. ಜಿ. ಜನನ.
1934: ನಟ, ನಾಟಕಕಾರ, ಕಾದಂಬರಿಕಾರ ನವರತ್ನರಾಂ (3-12-1934ರಿಂದ 17-101991) ಅವರು ನವರತ್ನ ರಾಮರಾವ್ ಮತ್ತು ಪುಟ್ಟಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.
1926: ಅಗಾಥಾ ಕ್ರಿಸ್ಟೀ ತಮ್ಮ ಬೆರ್ಕ್ಷೈರಿನ ನಿವಾಸದಿಂದ ನಾಪತ್ತೆಯಾದರು. 10 ದಿನಗಳ ಬಳಿಕ ಯಾರ್ಕ್ ಷೈರಿನ ಆರೋಗ್ಯ ಕೇಂದ್ರವೊಂದರಲ್ಲಿ ಬೇರೆ ಹೆಸರಿನಲ್ಲಿ ಆಕೆ ಪತ್ತೆಯಾದರು. ತಾನು ಮರೆವಿಗೆ ಒಳಗಾದುದಾಗಿ ಆಕೆ ಹೇಳಿಕೊಂಡರು. ಆದರೆ ತನ್ನ ಪತಿ ಬೇರೊಬ್ಬ ಮಹಿಳೆಯ ಮನೆಗೆ ಆಗಾಗ ಹೋಗುತ್ತಿದ್ದುದನ್ನು ಗಮನಿಸಿ ಪ್ರತೀಕಾರ ತೀರಿಸಿಕೊಳ್ಳಲು ಆಕೆ ನಾಪತ್ತೆಯಾದಳು ಎಂದು ಶಂಕಿಸಲಾಯಿತು. ಈ ಘಟನೆಗೆ ಸಮರ್ಪಕ ವಿವರಣೆ ಲಭಿಸಲೇ ಇಲ್ಲ.
1923: ಸಾಹಿತಿ ವಿ.ಜಿ. ಭಟ್ಟ ಜನನ.
1889: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಖುದೀರಾಮ್ ಬೋಸ್ (1889-1908) ಅವರು 1889ರ ಈ ದಿನ ಜನಿಸಿದರು. ಮ್ಯಾಜಿಸ್ಟ್ರೇಟ್ ಕಿಂಗ್ಸ್ ಫೋರ್ಡ್ ಮೇಲೆ ಬಾಂಬ್ ದಾಳಿ ನಡೆಸಿದ್ದಕ್ಕಾಗಿ ಬೋಸ್ ಅವರನ್ನು 1908ರಲ್ಲಿ ಗಲ್ಲಿಗೇರಿಸಲಾಯಿತು.
1884: ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ (1884-1963) ಹುಟ್ಟಿದ ದಿನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment