Sunday, December 7, 2008

ಇಂದಿನ ಇತಿಹಾಸ History Today ಡಿಸೆಂಬರ್ 07

ಇಂದಿನ ಇತಿಹಾಸ

ಡಿಸೆಂಬರ್ 7

ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಡಂಬನೆಗೆ ಹೊಸ ಆಯಾಮವನ್ನು ಸೃಷ್ಟಿಸಿದ ಬಿಚ್ಚು ಮನಸ್ಸಿನ ಧೀಮಂತ ಸಾಹಿತಿ ಬಳ್ಳಾರಿಯ ಬೀಚಿ ಬೆಂಗಳೂರಿನಲ್ಲಿ ನಿಧನರಾದರು. 

2007:  ಹವ್ಯಾಸಿ ಸಿನಿಮಾ ನಿರ್ದೇಶಕಿ ಜಿ.ಡಿ.ಜಯಲಕ್ಷ್ಮಿ ಅವರ `ಪೇಪರ್! ಪೇಪರ್!' ಚಿತ್ರ 2007ನೇ ಸಾಲಿನ ಕಾಮನ್ ವೆಲ್ತ್ ಪ್ರಶಸ್ತಿಯ ಪ್ರಮುಖ ಬಹುಮಾನ ಗಳಿಸಿಕೊಂಡಿತು. ಕಾಗದದ ಪುನರ್ ಬಳಕೆ ಕುರಿತು 90 ನಿಮಿಷಗಳ ಈ ಚಿತ್ರವನ್ನು ನಿರ್ಮಿಸಲಾಗಿದೆ. `ಯಾವುದೇ ವಸ್ತುವನ್ನು ವ್ಯರ್ಥ ಮಾಡಬಾರದು, ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ರಕ್ಷಿಸಬೇಕು ಎಂಬ ಭಾರತದ ಸಾಂಪ್ರದಾಯಿಕ ಮೌಲ್ಯಗಳಿಗೆ ಸಂಕೇತವಾಗಿ ಈ ಚಿತ್ರ ನಿಲ್ಲುತ್ತದೆ. ಹನ್ನೊಂದು ವರ್ಷ ಇಂಗ್ಲೆಂಡಿನ ಬಿಬಿಸಿಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಏಳು ವರ್ಷಗಳಿಂದ ಹವ್ಯಾಸಿ ಚಲನಚಿತ್ರ ನಿರ್ಮಾಪಕಿಯಾಗಿರುವ  ಜಯಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ ಮತ್ತು ನಿರ್ದೇಶಕಿ ಕೂಡ ಆಗಿದ್ದಾರೆ. 

2007: ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿಕ್ ವಿಧಾನದ ಮೂಲಕ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಕಸಿ ಮಾಡಲಾಯಿತು. `ಲ್ಯಾಪ್ರೊಸ್ಕೋಪಿ' ಎಂದರೆ ಶರೀರದಲ್ಲಿ ಚಿಕ್ಕ ರಂಧ್ರ ಕೊರೆದು, ಅದರ ಮೂಲಕ ಶಸ್ತ್ರಚಿಕಿತ್ಸೆ ನಡೆಸುವ ವಿಧಾನ. ಅರ್ಧ ಇಂಚೂ ಇಲ್ಲದ ಚಿಕ್ಕ ಉಪಕರಣವನ್ನು ರಂಧ್ರದ ಮೂಲಕ ಹಾಯಿಸಿ, ರಕ್ತನಾಳಗಳನ್ನು ಬಿಡಿಸಿ ಕಿಡ್ನಿಯನ್ನು ತೆಗೆಯಲಾಗುತ್ತದೆ.  ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ಟಿ.ಮನೋಹರ್ ಅವರು ಈ ವಿಧಾನವನ್ನು ಬಳಸಿ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಈದಿನ ಪ್ರಕಟಿಸಿತು. ಸಾಮಾನ್ಯವಾಗಿ, ತೆರೆದ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿಯನ್ನು ತೆಗೆದು ಅವಶ್ಯವಿರುವ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. ಆದರೆ ಇದು ಕ್ಲಿಷ್ಟಕರವಾದ ಕಾರಣ ಕಿಡ್ನಿ ದಾನಕ್ಕೆ ಹೆಚ್ಚಿನವರು ಹಿಂದೇಟು ಹಾಕುತ್ತಿದ್ದರು. ಈಗ ಈ ಹೊಸ ವಿಧಾನ ಮೂತ್ರಪಿಂಡ ರೋಗಿಗಳಿಗೆ ಆಶಾಕಿರಣವಾಗಿದ್ದು, ರಾಜ್ಯದ ಮಟ್ಟಿಗೆ ಇದು ಅಪರೂಪದ ಸಾಧನೆ ಎಂದು ಎನ್ನಲಾಗಿದೆ. ಈ ವಿಧಾನದಲ್ಲಿ ಉದರದ ಭಿತ್ತಿಯ ಮೂಲಕ ಪುಟ್ಟ ನಳಿಕೆಯನ್ನು ಹಾಯಿಸಲಾಗುತ್ತದೆ. ಇದರಿಂದ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಉಪಕರಣಗಳ ಚಲನೆಗೆ ಅನುಕೂಲವಾಗುತ್ತದೆ. ಲ್ಯಾಪ್ರೊಸ್ಕೋಪ್ ಜತೆಗೆ ಹೊಂದಿಕೊಂಡಿರುವ ವಿಡಿಯೋ ಕ್ಯಾಮೆರಾದ ಮೂಲಕ ಉದರದೊಳಗೆ ನಡೆಯುವ ಚಟುವಟಿಕೆಗಳನ್ನು ಪರದೆಯಲ್ಲಿ ವೀಕ್ಷಿಸಬಹುದು. ಹೊಟ್ಟೆಯ ಇನ್ನೊಂದು ಬದಿ ಮಾಡಲಾಗಿರುವ ಎರಡೂವರೆ ಇಂಚಿನ ತೂತಿನ ಮೂಲಕ ಕಿಡ್ನಿಯನ್ನು ತೆಗೆಯಲಾಗುತ್ತದೆ. ಈ ವಿಧಾನದಲ್ಲಿ ಕಿಡ್ನಿಯ ದಾನಿ ಕೇವಲ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರೆ ಸಾಕು. ಒಂದೆರಡು ವಾರಗಳಲ್ಲಿಯೇ ಅವರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬಹುದು ಎಂಬುದು ಆಸ್ಪತ್ರೆಯ ವಿವರಣೆ.

 2007: ಕಂಪ್ಯೂಟರ್ ಕಲಿಕೆಗೆ, ಕಾರ್ಯನಿರ್ವಹಣೆಗೆ ಇಂಗ್ಲಿಷ್ ಜ್ಞಾನ ಕಡ್ಡಾಯ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ, ಇಂಗ್ಲಿಷ್ ಗಂಧಗಾಳಿಯಿಲ್ಲದ ಭಾರತೀಯರು ಕಂಪ್ಯೂಟರಿನಲ್ಲಿ ಕೆಲಸ ಮಾಡಬಲ್ಲ ಸಾಫ್ಟವೇರನ್ನು ಇಸ್ರೇಲಿ ಕಂಪೆನಿಯ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಥೆಯೊಂದು ಸಿದ್ಧಪಡಿಸಿತು. ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಸಿ-ಡಾಕ್ (ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ) ಹಾಗೂ ಇಸ್ರೇಲಿನ `ಎಫ್ ಟಿ ಕೆ ಟೆಕ್ನಾಲಜೀಸ್' ಜೊತೆಯಾಗಿ ಈ ಹೊಸ ಸಾಫ್ಟವೇರ್ ಸಿದ್ಧಪಡಿಸಿವೆ. ಇಸ್ರೇಲ್ ರಾಜಧಾನಿ ಟೆಲ್ ಅವೀವಿನಲ್ಲಿ ಈದಿನ ಈ ಸಾಫ್ಟವೇರನ್ನು ವಿಧ್ಯುಕ್ತವಾಗಿ ಬಿಡುಗಡೆ ಮಾಡಲಾಯಿತು. ಸಾಫ್ಟವೇರಿನ ಮೊದಲ ಪ್ರತಿಯನ್ನು ಇಸ್ರೇಲಿನಲ್ಲಿ ಭಾರತದ ರಾಯಭಾರಿಯಾಗಿರುವ ಅರುಣ್ ಕುಮಾರ್ ಸಿಂಗ್ ಅವರಿಗೆ ನೀಡಲಾಯಿತು. ಭಾರತದಲ್ಲಿ ಇಂಗ್ಲಿಷ್ ತಿಳಿದವರು ಕೇವಲ ಶೇ 10 ಜನ ಮಾತ್ರ. ಉಳಿದ ಶೇ 90 ಜನರಿಗೆ ಮಾಹಿತಿ ತಂತ್ರಜ್ಞಾನದ ಲಾಭ ಮುಟ್ಟಿಸಲು ಈ ಸಾಫ್ಟವೇರ್ ನೆರವಾಗಲಿದೆ ಎಂಬುದು `ಎಫ್ ಟಿ ಕೆ ಟೆಕ್ನಾಲಜೀಸ್' ಮುಖ್ಯಸ್ಥ ಹಾರೆಲ್ ಕೊಹೆನ್ ಅಭಿಪ್ರಾಯ. ಈ ಹೊಸ ಸಾಫ್ಟವೇರ್ 3,000 ರೂಪಾಯಿಗೆ ಲಭ್ಯವಾಗಲಿದೆ. ಸದ್ಯಕ್ಕೆ ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು ಹಾಗೂ ಪಂಜಾಬಿ ಭಾಷೆಯ ಜನ ಈ ಸಾಫ್ಟವೇರ್ ಬಳಸಬಹುದು. 2009ರ ಹೊತ್ತಿಗೆ ಭಾರತದಲ್ಲಿ ಅಧಿಕೃತವಾಗಿ ಮನ್ನಣೆ ಪಡೆದ ಎಲ್ಲ ಭಾಷೆಗಳಲ್ಲೂ ಈ ಸಾಫ್ಟವೇರ್ ಲಭ್ಯವಾಗಲಿದೆ  ಎಂದು ಅವರು ತಿಳಿಸಿದರು.

2007: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು 64 ಆರೋಪಿಗಳಿಗೆ ಶಿಕ್ಷೆ ವಿಧಿಸಿತು. 24 ಆರೋಪಿಗಳಿಗೆ 3ರಿಂದ 6 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ರಾಂಚಿಯಲ್ಲಿ ತೀರ್ಪು ನೀಡಿತು. ಉಳಿದ ಆರೋಪಿಗಳಿಗೆ ಡಿಸೆಂಬರ್ 12 ರಂದು ಶಿಕ್ಷೆಯ  ಪ್ರಮಾಣವನ್ನು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತು. ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು 53 ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥವಾದವು.

2007: ಇರಾಕಿನ ದಯಾಲ್ ಪ್ರಾಂತ್ಯದ ಮುಕದ್ದಿಯಾ ಅಲ್ ಖೈದಾ ಸಂಘಟನೆ ವಿರುದ್ಧ ರಚಿಸಲಾದ ಜಾಗೃತ ಗುಂಪಿನ ಕಚೇರಿಯ ಮೇಲೆ ಆತ್ಮಾಹುತಿ ದಳದ ಮಹಿಳೆಯೊಬ್ಬಳು ದಾಳಿ ನಡೆಸಿದ್ದರಿಂದ 16 ಮಂದಿ ಮೃತರಾಗಿ, 27 ಜನ ಗಾಯಗೊಂಡರು. ಕಚೇರಿಗೆ ಬಂದ ಆತ್ಮಾಹುತಿ ದಳದ ಈ ಮಹಿಳೆ ತನ್ನ ಕೋಟಿನಲ್ಲಿ ಇಟ್ಟಿದ್ದ ಬಾಂಬನ್ನು ಸ್ಪೋಟಿಸಿದಳು.

2007:  ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದ ಮಹಾತ್ಮ ಗಾಂಧಿ ರಸ್ತೆಯ ಬಿ. ಆರ್. ವಿ. ಪೆರೇಡ್ ಮೈದಾನದಿಂದ ಎತ್ತರಿಸಿದ (ಎಲಿವೆಟೆಡ್) ರೈಲುಮಾರ್ಗ ನಿರ್ಮಿಸುವುದರಿಂದ ಎಂ.ಜಿ.ರಸ್ತೆಯಲ್ಲಿ ಆಗುವ ಸಂಚಾರ ದಟ್ಟಣೆ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರವು ನಗರ ಸಂಚಾರ ಪೊಲೀಸರಿಗೆ ಸೂಚನೆ ನೀಡಿತು.

2006: ಉತ್ತರಾಂಚಲವನ್ನು ಉತ್ತರ ಖಂಡ ಎಂಬುದಾಗಿ ಪುನರ್ ನಾಮಕರಣ ಮಾಡುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿತು. ಮಸೂದೆಗೆ ಲೋಕಸಭೆ ಡಿಸೆಂಬರ್ 5ರಂದು ಒಪ್ಪಿಗೆ ನೀಡಿತ್ತು. ಲೋಕಸಭೆ ಈದಿನ ಮಸೂದೆಗೆ ಅಂಗೀಕಾರ ನೀಡಿತು.

2006: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಸ್ಥಾಪಕ ದಿವಂಗತ ಎಂ.ಜಿ. ರಾಮಚಂದ್ರನ್ ಪ್ರತಿಮೆಯನ್ನು ಸಂಸತ್ ಭವನದ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿಯ ನೇತಾರರಾಗಿದ್ದ ಭೂಪೇಶ್ ಗುಪ್ತಾ ಪ್ರತಿಮೆಯನ್ನೂ ಇದೇ ಸಂದರ್ಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅನಾವರಣಗೊಳಿಸಿದರು.

2006: ಕರ್ನಾಟಕದಲ್ಲಿ ವಿಧಾನಸಭೆಗೆ ಈವರೆಗೆ ನಡೆದ ಮರು ಚುನಾವಣೆಗಳಲ್ಲಿ ಅತೀ ಕಡಿಮೆ ಮತಗಳ ಅಂತರದಲ್ಲಿ (257 ಮತಗಳು) ಗೆಲುವು ಸಾಧಿಸಿದ ಕೀರ್ತಿಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಭಾಜನರಾದರು. ಪ್ರತಿಷ್ಠಿತ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಜೆಡಿಎಸ್ ನ ಶಿವಬಸಪ್ಪ ಅವರನ್ನು ಸಿದ್ದರಾಮಯ್ಯ ಪರಾಭವಗೊಳಿಸಿದರು. 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ 24,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದುದು ಒಂದು ದಾಖಲೆಯಾಗಿತ್ತು.

 2005: ಚೀನಾದ ತಂಗ್ಷಾನ್ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ 74 ಕಾರ್ಮಿಕರು ಮೃತರಾಗಿ ಹಲವರು ಗಾಯಗೊಂಡರು. ಸುಮಾರು 30 ಮಂದಿ ಕಣ್ಮರೆಯಾದರು.

1981: ನ್ಯಾಟೋ ಕೂಟದ ಸದಸ್ಯನಾಗಿ ಸ್ಪೇನ್ ದೇಶವು ಸೇರ್ಪಡೆಗೊಂಡಿತು.

1980: ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಡಂಬನೆಗೆ ಹೊಸ ಆಯಾಮವನ್ನು ಸೃಷ್ಟಿಸಿದ ಬಿಚ್ಚು ಮನಸ್ಸಿನ ಧೀಮಂತ ಸಾಹಿತಿ ಬಳ್ಳಾರಿಯ ಬೀಚಿ ಬೆಂಗಳೂರಿನಲ್ಲಿ ನಿಧನರಾದರು. 

1955: ಬ್ರಿಟನ್ನಿನ ಲೇಬರ್ ಪಾರ್ಟಿ ನಾಯಕತ್ವಕ್ಕೆ ಕ್ಲೆಮೆಂಟ್ ಅಟ್ಲಿ ರಾಜೀನಾಮೆ ನೀಡಿದರು. ಕಳೆದ 20 ವರ್ಷಗಳಿಂದ ಅಟ್ಲಿ ಲೇಬರ್ ಪಾರ್ಟಿಯ ನಾಯಕರಾಗಿದ್ದರು.

1946: ಸಾಹಿತಿ ಡಾ. ಕೆ.ಎಂ. ರಾಘವ ನಂಬಿಯಾರ್ ಜನನ.

1945: ಸಾಹಿತಿ, ಚಿತ್ರ ಕಲಾವಿದ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯ ಪಿ.ಆರ್. ಆಚಾರ್ಯ (ಆರ್ಯ) ಅವರು ಪಿ. ವಿಠಲಾಚಾರ್ಯ- ರುಕ್ಮಿಣಿ ದಂಪತಿಯ ಮಗನಾಗಿ ಉಡುಪಿಯಲ್ಲಿ ಜನಿಸಿದರು.

1941: ಜಪಾನಿನ ಯುದ್ಧ ವಿಮಾನಗಳು ಪರ್ಲ್ ಬಂದರಿನಲ್ಲಿ ಅಮೆರಿಕಾದ ಪೆಸಿಫಿಕ್ ಪಡೆ ಮೇಲೆ ದಾಳಿ ನಡೆಸಿದವು. ಈ ಕೃತ್ಯವು ಎರಡನೇ ವಿಶ್ವಸಮರಕ್ಕೆ ಪ್ರವೇಶಿಸಲು ಅಮೆರಿಕಾಕ್ಕೆ ಪ್ರೇರಣೆ ನೀಡಿತು.

1937: ಸರ್ ರೋಗರ್ ಲ್ಯೂಮ್ ಲೇ ಅವರು ಅಧಿಕೃತವಾಗಿ ಬಾಂಬೆಯಲ್ಲಿ (ಈಗಿನ ಮುಂಬೈ) ಬ್ರಾಬೋರ್ನ್ ಸ್ಟೇಡಿಯಮ್ಮನ್ನು ಉದ್ಘಾಟಿಸಿದರು. (ಲಾರ್ಡ್ ಬ್ರಾಬೋರ್ನ್ ಅವರು ಈ ವೇಳೆಗೆ ಮುಂಬೈ ಬಿಟ್ಟಿದ್ದರು. ಹಾಗೂ ಬಂಗಾಳದ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಹೆಸರಿನಲ್ಲೇ ಈ ಸ್ಟೇಡಿಯಮ್ಮನ್ನು ಸ್ಥಾಪಿಸಲಾಯಿತು).

1935: ಸಾಹಿತಿ ಇಂದಿರಾಕೃಷ್ಣ ಜನನ.

1856: ಈಶ್ವರಚಂದ್ರ ವಿದ್ಯಾಸಾಗರ ಅವರು ಮೊತ್ತ ಮೊದಲ ವಿಧವಾ ಪುನರ್ ವಿವಾಹವನ್ನು ಏರ್ಪಡಿಸಿದರು. ಬಾಲವಿಧವೆ ಕಾಳಿಮತಿ ದೇವಿ ಮತ್ತು ಸಿರಿಸ್ ಚಂದ್ರ ವಿದ್ಯಾರತ್ನ ಅವರ ಮದುವೆ ನಡೆಯಿತು. (1856ರ ಹಿಂದು ಪುನರ್ ವಿವಾಹ ಕಾಯ್ದೆಯ ಅಡಿಯಲ್ಲಿಹಿಂದು ವಿಧವೆಯರ ಮರು ಮದುವೆಗೆ ಅವಕಾಶ ಕಲ್ಪಿಸುವ ಕಾನೂನನ್ನು ಲಾರ್ಡ್ ಕ್ಯಾನಿಂಗ್ 1856ರ ಜುಲೈ ತಿಂಗಳಲ್ಲಿ ಜಾರಿಗೆ ತಂದಿದ್ದ.).

1783: ವಿಲಿಯಂ ಪಿಟ್ ಅವರು ಬ್ರಿಟನ್ನಿನ ಪ್ರಧಾನಿಯಾದರು. 24 ವರ್ಷ ವಯಸ್ಸಿನ ಅವರು ಬ್ರಿಟನ್ನಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾದರು.

1782: ಮುಸ್ಲಿಂ ದೊರೆ ಮೈಸೂರಿನ ಹೈದರಾಲಿ ಚಿತ್ತೂರು ಸಮೀಪದ ಶಿಬಿರವೊಂದರಲ್ಲಿ ಅಸು ನೀಗಿದ. ಫಿರಂಗಿ ಹಾಗೂ ಬಯೋನೆಟ್ಟುಗಳನ್ನು ಹೊಂದಿದ ಮೊತ್ತ ಮೊದಲ ಭಾರತೀಯ ಸೇನಾಪಡೆ ಕಟ್ಟಿದ ಹೆಗ್ಗಳಿಕೆ ಈತನದು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement