ಇಂದಿನ ಇತಿಹಾಸ
ಡಿಸೆಂಬರ್ 1
2007: ಚೀನಾದ ಸನ್ಯಾದಲ್ಲಿ ನಡೆದ 2007ನೇ ಸಾಲಿನ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಚೀನಾದ ಝಂಗ್ ಜಲಿನ್ ಅವರು ವಿಶ್ವಸುಂದರಿಯಾಗಿ ಆಯ್ಕೆಯಾದರು.
2007: ಲಘು ಹೃದಯಾಘಾತ ಸಂಭವಿಸಿದಾಗ ಹೃದಯದ ಕೆಲವೊಂದು ಜೀವಕೋಶಗಳು ನಾಶವಾಗುತ್ತವೆ. ನಾಶವಾದ ಈ ಜೀವಕೋಶಗಳನ್ನು ಹೊಸ ಆಕರ ಕೋಶಗಳೊಂದಿಗೆ ಬದಲಾಯಿಸಿದರೆ ಗಂಭೀರ ಪ್ರಮಾಣದ ಹೃದಯಾಘಾತವನ್ನು ತಡೆಯಬಹುದು ಎಂದು ವಾಷಿಂಗ್ಟನ್ನಿನಲ್ಲಿ ಸಂಶೋಧಕರು ಪ್ರಕಟಿಸಿದರು. ಆಕರ ಕೋಶಗಳನ್ನು ದೇಹದೊಳಗೆ ತೂರಿಸಿದಾಗ ಹೃದಯದ ರಕ್ತನಾಳಗಳು ಬಲಿಷ್ಠಗೊಳ್ಳುತ್ತವೆ. ಇವು ಮುಂದೆ ಸಂಭವಿಸಬಹುದಾದ ಗಂಭೀರ ಆಘಾತವನ್ನು ತಡೆಯಲು ಸಹಾಯ ಮಾಡುತ್ತವೆ ಎಂದು ಲೆಡೆನ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ವಿಂಟರ್ ಅಭಿಪ್ರಾಯ ಪಟ್ಟಿತು.
2007: ಅಗ್ನಿಶಾಮಕದಳ ಹಾಗೂ ಹಗಲು-ರಾತ್ರಿ ಎರಡೂ ಪಾಳಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಕ್ಯಾನ್ಸರ್ ಬರುವ ಸಂಭವ ಸಾಮಾನ್ಯ ಜನರಿಗಿಂತಲೂ ಹೆಚ್ಚು ಎಂದು ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹೇಳಿತು. ಇಂತಹ ಅಪಾಯಕಾರಿ ಕೆಲಸಗಳನ್ನು ಕ್ಯಾನ್ಸರಿಗೆ ದಾರಿ ಮಾಡಿಕೊಡುವ ಕೆಲಸಗಳೆಂದು ಘೋಷಿಸಬೇಕೆಂದು ಸಂಸ್ಥೆಯು ಅಂತಾರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯ ಮಾಡಿತು. ಈ ಕುರಿತು ಲಾನ್ಸೆಟ್ ಓಂಕಾಲಜಿ ವೈದ್ಯಕೀಯ ನಿಯತಕಾಲಿಕದ ಡಿಸೆಂಬರ್ ಸಂಚಿಕೆಯಲ್ಲಿ ಸಂಪೂರ್ಣ ವಿವರವನ್ನು ಪ್ರಕಟಿಸಲಾಯಿತು.
2007: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಹಿಲೆರಿ ಕ್ಲಿಂಟನ್ ಅವರ ಚುನಾವಣಾ ಪ್ರಚಾರದ ಕಚೇರಿಯೊಳಗೆ ನುಗ್ಗಿ, ಅಲ್ಲಿನ ಸಿಬ್ಬಂದಿಯನ್ನು ಕೆಲಹೊತ್ತು ಒತ್ತೆಯಾಳುಗಳಾಗಿ ಇರಿಸಿಕೊಂಡು ಆತಂಕ ಸೃಷ್ಟಿಸಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿತು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 47 ವರ್ಷದ ಲೀ ಐಸೆನ್ ಬರ್ಗ್ ಎಂಬಾತ ರೊಕೆಸ್ಟರ್ ಪ್ರದೇಶದಲ್ಲಿನ ಚುನಾವಣಾ ಪ್ರಚಾರದ ಕಚೇರಿಗೆ ನುಗ್ಗಿ ಮೂವರು ಮಹಿಳೆಯರು, ಆರು ತಿಂಗಳ ಮಗು ಸೇರಿದಂತೆ ಐವರನ್ನು ಒತ್ತೆ ಸೆರೆ ಇಟ್ಟುಕೊಂಡು ತನ್ನ ಬಳಿ ಬಾಂಬ್ ಇರುವುದಾಗಿ ಬೆದರಿಕೆಯೊಡ್ಡಿದ. ನಂತರ ಸಿಬ್ಬಂದಿಯನ್ನು ತನ್ನ ವಶಕ್ಕೆ ತೆಗೆದುಕೊಂಡು ಮಗು ಮತ್ತು ಅದರ ತಾಯಿಯನ್ನು ಬಿಡುಗಡೆ ಮಾಡಿದ. ಆದರೆ ಕಚೇರಿಯಿಂದ ಹೊರಬಂದ ಈ ಮಹಿಳೆ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ, ಅವರು ಕಾರ್ಯ ಪ್ರವರ್ತರಾಗಿ ಐಸೆನ್ ಬರ್ಗನನ್ನು ಬಂಧಿಸಿದರು. ಆತನ ಬಳಿ ಯಾವುದೇ ಬಾಂಬ್ ಇರಲಿಲ್ಲ ಎಂದು ನಂತರ ಗೊತ್ತಾಯಿತು.
2007: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷವು ಭವಿಷ್ಯದ ಸವಾಲುಗಳನ್ನು ಎದುರಿಸುವುದಕ್ಕಾಗಿ ರಚಿಸಿದ ಉನ್ನತ ಮಟ್ಟದ ಸಮಿತಿಯಿಂದ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರನ್ನು ಕೈಬಿಟ್ಟಿತು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಪ್ತರೆನ್ನಲಾದ ರಮೇಶ್ ಈ ಹಿಂದೆ ಸಮಿತಿಯ ಸಂಚಾಲಕರಾಗಿದ್ದರು. ಆದರೆ, ವೀರಪ್ಪ ಮೊಯಿಲಿ ಅಧ್ಯಕ್ಷರಾಗಿರುವ ಈ ಸಮಿತಿ ಕೆಲ ದಿನಗಳ ಹಿಂದೆ ಮೊದಲ ಸಭೆ ನಡೆಸಿದ ನಂತರ ಜೈರಾಮ್ ರಮೇಶ್ ಅವರನ್ನು ಸಮಿತಿಯಿಂದ ಕೈಬಿಟ್ಟಿತು. ಆದರೆ ಇದಕ್ಕೆ ಕಾರಣ ನೀಡಿಲ್ಲ. ಸೇತು ಸಮುದ್ರಂ ಯೋಜನೆ ವಿಚಾರದಲ್ಲಿ ಸಂಸ್ಕೃತಿ ಸಚಿವಾಲಯದಿಂದ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ಪ್ರಮಾಣ ಪತ್ರದ ಹಿನ್ನೆಲೆಯಲ್ಲಿ ಸಚಿವೆ ಅಂಬಿಕಾ ಸೋನಿ ಅವರನ್ನು ಬಹಿರಂಗವಾಗಿ ಜೈರಾಮ್ ರಮೇಶ್ ಅವರು ಟೀಕಿಸಿದ್ದೇ ಈ ಕ್ರಮಕ್ಕೆ ಕಾರಣ ಎಂದು ರಾಜಕೀಯ ತಜ್ಞರು ಲೆಕ್ಕ ಹಾಕಿದರು.
2007: ಶ್ರೀಲಂಕಾದ ಉತ್ತರ ಭಾಗದಲ್ಲಿ ಸೈನಿಕರು ಹಾಗೂ ಎಲ್ಟಿಟಿಇ ಉಗ್ರರ ನಡುವೆ ನಡೆದ ಸಂಘರ್ಷದಲ್ಲಿ 19 ಉಗ್ರರು ಮತ್ತು ಮೂವರು ಯೋಧರು ಮೃತರಾದರು. 57 ಮಂದಿ ಗಾಯಗೊಂಡರು.
2007: ಇರಾಕಿನ ಷಿಯಾ ಮುಸ್ಲಿಮರು ಪ್ರಾಬಲ್ಯದಲ್ಲಿರುವ ಉತ್ತರ ಬಾಗ್ದಾದ್ ಹಳ್ಳಿಯನ್ನು ವಶಕ್ಕೆ ತಗೆದುಕೊಂಡ ಅಲ್ ಖೈದಾ ಉಗ್ರರು 12ಮಂದಿ ನಾಗರಿಕರನ್ನು ಹತ್ಯೆ ಮಾಡಿ, ಎಂಟು ಮಂದಿಯನ್ನು ಗಾಯಗೊಳಿಸಿದರು. ಜೊತೆಗೆ 35 ಜನರನ್ನು ಅಪಹರಿಸಿ ಎಂಟು ಮನೆಗಳಿಗೆ ಬೆಂಕಿ ಹಚ್ಚಿದರು.
2007: ಎಚ್ಐವಿ/ಏಡ್ಸ್ ನಿರ್ಮೂಲನೆ ಹಾಗೂ ಅದರಿಂದ ರಕ್ಷಣೆ ಪಡೆಯುವ ಬಗೆ ಹೇಗೆಂಬ ಮಾಹಿತಿ ಹೊತ್ತ ವಿಶೇಷ ವಿನ್ಯಾಸದ ಏಳು ಬೋಗಿಯ `ದಿ ರೆಡ್ ರಿಬ್ಬನ್ ಎಕ್ಸ್ ಪ್ರೆಸ್' ರೈಲಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಏಡ್ಸ್ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ಚಾಲನೆ ನೀಡಿದರು.
2007: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಕಲ್ಲಿನ ಮಾಧ್ಯಮದಲ್ಲಿ ಹೂವಿನಹಡಗಲಿಯ ಬಿ. ಶಿವಾನಂದಚಾರ್, ಬೆಂಗಳೂರಿನ ಸುರೇಂದ್ರ ಕಾಳಪ್ಪ ವಿಶ್ವಕರ್ಮ, ಮೈಸೂರಿನ ಗುರುರಾಜ ಎಸ್. ನಾಯಕ್ ಹಾಗೂ ಮರ, ಮಿಶ್ರ ಮಾಧ್ಯಮ ಮತ್ತು ಲೋಹ ಮಾಧ್ಯಮದಲ್ಲಿ ಬಿಡದಿಯ ರುಕ್ಕಪ್ಪ ಕುಂಬಾರ, ಮೈಸೂರಿನ ಆನಂದಬಾಬು ಎಂ. ಅಂಬರಖಾನೆ ಮತ್ತು ಶಿವಾರಪಟ್ಟಣದ ಎಸ್. ಶಶಿಧರ್ ಈ ಆರು ಕಲಾವಿದರನ್ನು ಶಿಲ್ಪಕಲಾ ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಿತು. ಗುಲ್ಬರ್ಗದ ಮಲ್ಲಿಕಾರ್ಜುನ ಕೆ. ಚಿಕನಹಳ್ಳಿ ಅವರಿಗೆ ಮೈಸೂರಿನ `ರಾಮ್ ಸನ್ಸ್ ಕಲಾ ಪ್ರತಿಷ್ಠಾನ ಪ್ರಶಸ್ತಿ'ಯನ್ನು ಪ್ರಕಟಿಸಿತು.
2006: ಹದಿನೆಂಟು ವರ್ಷಗಳ ಹಿಂದೆ ರಸ್ತೆ ಬದಿ ನಡೆದ ಜಗಳವೊಂದರಲ್ಲಿ ಗುರ್ನಾಮ್ ಸಿಂಗ್ ಎಂಬಾತನ ಸಾವಿಗೆ ಕಾರಣವಾಗಿದ್ದುದಕ್ಕಾಗಿ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಬಿಜೆಪಿಯ ಲೋಕಸಭಾ ಸದಸ್ಯ ನವಜೋತ್ ಸಿಂಗ್ ಸಿಧು ತಪ್ಪಿತಸ್ಥ ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಸಿಧು ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
2006: ಫಿಲಿಪ್ಪೀನ್ಸಿನಲ್ಲಿ ಭೀಕರ ಬಿರುಗಾಳಿ ಮಳೆ, ಭೂಕುಸಿತಗಳ ಪರಿಣಾಮವಾಗಿ 400ಕ್ಕೂ ಹೆಚ್ಚು ಜನ ಅಸು ನೀಗಿದರು.
2006: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ನಗರ ಪಂಚಾಯತ್ ಸದಸ್ಯ ಹಾಗೂ ಮೂಲ್ಕಿ- ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದಶಿರ್ಶಿ ಸುಖಾನಂದ ಶೆಟ್ಟಿ (32) ಅವರನ್ನು ಮಂಗಳೂರಿಗೆ ಸಮೀಪದ ಕುಳಾಯಿಯಲ್ಲಿ ಕೊಲೆಗೈಯಲಾಯಿತು. ಪರಿಣಾಮವಾಗಿ ಮೂಲ್ಕಿಯಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದು ಪೊಲೀಸ್ ಗೋಲಿಬಾರಿಗೆ ಇಬ್ಬರು ಬಲಿಯಾದರು.
2005: ಭಾರತದ ನಾಲ್ಕನೇ `ತೇಜಸ್' ಹಗುರ ಯುದ್ಧ ವಿಮಾನದ ಯಶಸ್ವೀ ಚೊಚ್ಚಲ ಹಾರಾಟ (ಪಿವಿ2) ಬೆಂಗಳೂರಿನಲ್ಲಿ ನಡೆಯಿತು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಯುದ್ಧ ವಿಮಾನದಲ್ಲಿ ಬಹುಪಾಲು ಕಾರ್ಯಗಳನ್ನು ಸಾಫ್ಟವೇರ್ ತಂತ್ರಜ್ಞಾನದ ಮೂಲಕವೇ ನಿಯಂತ್ರಿಸಬಹುದು. ಭಾರತದ ಯುದ್ಧ ವಿಮಾನಗಳ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿರುವ ಇದು ಯುದ್ಧ ವಿಮಾನಗಳ ಪಟ್ಟಿಗೆ ಇನ್ನೊಂದು ಮಹತ್ವದ ಸೇರ್ಪಡೆ.
2005: ಬಿಸಿನೆಸ್ ಇಂಡಿಯ ನಿಯತಕಾಲಿಕವು ನೀಡುವ `ಬಿಸಿನೆಸ್ ಮನ್ ಆಫ್ ದಿ ಈಯರ್ 2005' ಪ್ರಶಸ್ತಿಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಕೆ.ವಿ. ಕಾಮತ್ ಆಯ್ಕೆಯಾದರು.
2005: ಮೈಸೂರಿನ ರಮಣಶ್ರೀ ಪ್ರತಿಷ್ಠಾನವು ಹಾಸ್ಯ ಸಾಹಿತ್ಯದಲ್ಲಿ ಮಾಡಿದ ಸಾಧನೆಗಾಗಿ ನೀಡುವ ಪ್ರಸಕ್ತ ಸಾಲಿನ `ನಗೆರಾಜ' ಪ್ರಶಸ್ತಿಗೆ ಪತ್ರಕರ್ತ ಜಿ.ಎಚ್. ರಾಘವೇಂದ್ರ ಆಯ್ಕೆಯಾದರು.
2005: ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ಥಾನ ಮೂಲದ ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಐರೋಪ್ಯ ಸಮುದಾಯ ರಾಷ್ಟ್ರಗಳು ಕಪ್ಪು ಪಟ್ಟಿಗೆ ಸೇರಿಸಿದವು. 2001ರ ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದ ನಂತರ ಐರೋಪ್ಯ ರಾಷ್ಟ್ರಗಳು ಭಯೋತ್ಪಾದಕ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಆರಂಭಿಸಿದವು.
1990: ಬ್ರಿಟಿಷ್ ಮತ್ತು ಫ್ರಾನ್ಸ್ ಮಧ್ಯೆ ಸುರಂಗ ಕಾಲುವೆ ತೋಡುತ್ತಿದ್ದ ಕಾರ್ಮಿಕರು ಬಂಡೆಯ ಕೊನೆಯ ತುಂಡನ್ನು ತುಂಡರಿಸುವ ಮೂಲಕ ಪರಸ್ಪರ ಸಂಧಿಸಿ ಕೈ ಕುಲುಕಿದರು. ಇಂಗ್ಲೆಂಡಿನಿಂದ 22.3 ಕಿ.ಮೀ. ಹಾಗೂ ಫ್ರಾನ್ಸಿನಿಂದ 15.6 ಕಿ.ಮೀ. ದೂರದಲ್ಲಿ ಉಭಯ ದೇಶಗಳ ಕಡೆಗಳ ಈ ಸುರಂಗಗಳು ಪರಸ್ಪರ ಸಂಧಿಸಿದವು. ಬ್ರಿಟಿಷ್ ಕನ್ ಸ್ಟ್ರಕ್ಷನ್ ಕಾರ್ಮಿಕ ಗ್ರಹಾಂ ಫಾಗ್ ಹಾಗೂ ಫ್ರೆಂಚ್ ಕಾರ್ಮಿಕ ಫಿಲಿಪ್ ಕೊಝೆಟ್ಟ್ ಈ ಕೊನೆಯ ಬಂಡೆಯನ್ನು ತುಂಡರಿಸಿ ಉಭಯ ರಾಷ್ಟ್ರಗಳು ಮೊತ್ತ ಮೊದಲ ಬಾರಿಗೆ ಸುರಂಗ ಮೂಲಕ ಸಂಪರ್ಕಿಸುವಂತೆ ಮಾಡಿದರು. ಈ ಸುರಂಗ ತೋಡುವ ಕಾರ್ಯ ಮೂರು ವರ್ಷಗಳ ಹಿಂದೆ 1987ರಲ್ಲಿ ಇದೇ ದಿನ ಆರಂಭವಾಗಿತ್ತು.
1990: ಭಾರತದ ಪ್ರಥಮ ರಾಯಭಾರಿ ಮತ್ತು ರಾಜಕಾರಣಿ ವಿಜಯಲಕ್ಷ್ಮಿ ಪಂಡಿತ್ ನಿಧನ.
1989: ಪೋಪ್ ಎರಡನೇ ಜಾನ್ ಪಾಲ್ ಮತ್ತು ಸೋವಿಯತ್ ಒಕ್ಕೂಟದ ಧುರೀಣ ಮಿಖಾಯಿಲ್ ಗೊರ್ಬಚೆವ್ ಅವರ ಐತಿಹಾಸಿಕ ಭೇಟಿ ಹಾಗೂ ಮಾತುಕತೆಯು ಸೋವಿಯತ್ ಒಕ್ಕೂಟ ಮತ್ತು ವ್ಯಾಟಿಕನ್ ಮಧ್ಯೆ ಬೆಳೆದಿದ್ದ 70 ವರ್ಷಗಳ ವೈರತ್ವದ ಭಾವನೆಗಳಿಗೆ ತೆರೆ ಎಳೆಯಿತು.
1974: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಸುಚೇತಾ ಕೃಪಲಾನಿ ನಿಧನ.
1973: ಇಸ್ರೇಲಿನ ಪ್ರಥಮ ಪ್ರಧಾನಿ ಡೇವಿಡ್ ಬೆನ್- ಗುರಿಯನ್ ಅವರು ಟೆಲ್ ಅವೀವಿನಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.
1963: ಶ್ರೀಲಂಕಾದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಅರ್ಜುನ ರಣತುಂಗ ಹುಟ್ಟಿದ ದಿನ.
1957: ಸಾಹಿತಿ ಲೋಕಾಪುರ ಐ.ಎ. ಜನನ.
1955: ಕರಿಯ ಮಹಿಳೆ ರೋಸಾ ಪಾರ್ಕ್ಸ್ ಈದಿನ ಅಲಾಬಾಮಾದ ಮಾಂಟ್ಗೊಮೆರಿ ಪಟ್ಟಣದ ಬಸ್ ಪ್ರಯಾಣದಲ್ಲಿ ಬಿಳಿಯ ಪ್ರಯಾಣಿಕನಿಗೆ ಆಸನ ತೆರವುಗೊಳಿಸಲು ನಿರಾಕರಿಸಿದರು. ಆಕೆಯ ಬಂಧನ ಬಸ್ ಬಹಿಷ್ಕಾರ ಚಳವಳಿಗೆ ನಾಂದಿ ಹಾಡಿತು. ಮಾರ್ನಿನ್ ಲೂಥರ್ ಕಿಂಗ್ ಜ್ಯೂನಿಯರ್ ಈ ಚಳವಳಿಯ ನೇತೃತ್ವ ವಹಿಸಿದರು. ಇದು ಅಮೆರಿಕಾದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಯುಗಾರಂಭಕ್ಕೆ ಕಾರಣವಾಯಿತು.
1955: ಸಾಹಿತಿ ತುಳಸೀಪ್ರಿಯ ಜನನ.
1948: ಪಾಕಿಸ್ಥಾನದ ಮಾಜಿ ಬೌಲರ್ ಸರ್ ಫ್ರಾಜ್ ನವಾಜ್ ಹುಟ್ಟಿದ ದಿನ.
1939: `ಗಾನ್ ವಿದ್ ದಿ ವಿಂಡ್' ಚಲನಚಿತ್ರವು ಅಟ್ಲಾಂಟಾದಲ್ಲಿ ಪ್ರದರ್ಶನಗೊಂಡಿತು. ಅತ್ಯಂತ ಜನಪ್ರಿಯತೆ ಗಳಿಸುತ್ತಾ ಸಾಗಿದ ಈ ಚಿತ್ರ ಒಂಬತ್ತು ಪ್ರಮುಖ ಆಸ್ಕರ್ ಪ್ರಶಸ್ತಿಗಳನ್ನು, ಎರಡು ವಿಶೇಷ ಆಸ್ಕರ್ ಪ್ರಶಸ್ತಿಗಳನ್ನು ತನ್ನ ಬಗಲಿಗೆ ಏರಿಸಿಕೊಂಡಿತು. ಅಷ್ಟೇ ಅಲ್ಲ ಎರಡು ದಶಕಗಳ ಕಾಲ ಅತ್ಯಂತ ಹೆಚ್ಚು ಹಣ ಗಳಿಕೆಯ ಚಿತ್ರವಾಯಿತು.
1923: ನವೋದಯ, ಪ್ರಗತಿಶೀಲ, ನವ್ಯ ಹೀಗೆ ಸಾಹಿತ್ಯದ ಎಲ್ಲ ಮಜಲುಗಳಲ್ಲೂ ಹಾದು ಮಧ್ಯಮವರ್ಗದ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಯ ಮೂಲಕ ನಿರೂಪಿಸುವ ವ್ಯಾಸರಾಯ ಬಲ್ಲಾಳ ಅವರು ರಾಮದಾಸ- ಕಲ್ಯಾಣಿ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಜನಿಸಿದರು.
1918: ಸಾಹಿತಿ ಕೆ.ಟಿ. ಪಾಂಡುರಂಗಿ ಜನನ.
1918: ಸಾಹಿತಿ ಸುನಂದಾ ತುಂಕೂರು ಜನನ.
1878: ವಾಷಿಂಗ್ಟನ್ ಡಿಸಿಯಲ್ಲಿ ಇರುವ ಶ್ವೇತಭವನಕ್ಕೆ ಮೊತ್ತ ಮೊದಲ ಟೆಲಿಫೋನ್ ಸಂಪರ್ಕ ಕಲ್ಪಿಸಲಾಯಿತು. ಅಧ್ಯಕ್ಷ ರುತ್ ಫೋರ್ಡ್ ಬಿ. ಹೇಸ್ ಆಡಳಿತದ ಕಾಲದಲ್ಲಿ ಅಲೆಗ್ಸಾಂಡರ್ ಗ್ರಹಾಂಬೆಲ್ ಸ್ವತಃ ಈ ಕಾರ್ಯವನ್ನು ನೆರವೇರಿಸಿದ. ಶ್ವೇತಭವನದಿಂದ ಹೊರಹೋಗುವ ಮೊದಲ ಕರೆ 13 ಮೈಲುಗಳಷ್ಟು ದೂರದಲ್ಲಿದ್ದ ಗ್ರಹಾಂಬೆಲ್ ಗೆ ಹೋಯಿತು. `ನಿಧಾನವಾಗಿ ಮಾತನಾಡಪ್ಪಾ!' ಎಂಬುದಾಗಿ ಹೇಸ್ ಅವರು ಗ್ರಹಾಂಬೆಲ್ ಗೆ ಸೂಚಿಸಿದರು. ವಾಷಿಂಗ್ಟನ್ನಿನಲ್ಲಿ ಬೇರೆ ಯಾರಲ್ಲೂ ಟೆಲಿಫೋನುಗಳು ಇಲ್ಲದೇ ಇದ್ದುದರಿಂದ ಹೇಸ್ ಈ ಟೆಲಿಫೋನನ್ನು ಹೆಚ್ಚು ಬಳಸಲಾಗಲಿಲ್ಲ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment