ಇಂದಿನ ಇತಿಹಾಸ
ಡಿಸೆಂಬರ್ 10
ಶ್ವಾಸಕೋಶ ಕ್ಯಾನ್ಸರಿಗೆ ಹಸಿರು ತರಕಾರಿ ಮಿಶ್ರಣ (ಪಚಡಿ ಅಥವಾ ಸಲಾಡ್) ಉತ್ತಮ ಮದ್ದು ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಕ್ಯಾನ್ಸರ್ ಸಂಶೋಧನಾ ಕೇಂದ್ರ ಪತ್ತೆ ಹಚ್ಚಿತು. ಹಸಿರು ತರಕಾರಿಗಳ ಸೇವನೆ ಜೊತೆಗೆ ಕೈತೋಟದಲ್ಲಿ ಕೆಲಸ ಮಾಡುವುದರಿಂದ ಶ್ವಾಸಕೋಶ ಕ್ಯಾನ್ಸರ್ ಬರುವ ಸಾಧ್ಯತೆ ತೀರಾ ಕಡಿಮೆ. ಧೂಮಪಾನಿಗಳಿಗೆ ಇದು ಉತ್ತಮ ಔಷಧ ಎಂದು ವರದಿ ಹೇಳಿತು.
2007: ಎಲ್. ಕೆ. ಅಡ್ವಾಣಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ನೇತೃತ್ವ ವಹಿಸಿ ಮುನ್ನಡೆಸಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಈದಿನ ಸಂಜೆ ನವದೆಹಲಿಯಲ್ಲಿ ಪ್ರಕಟಿಸಿದರು. ಗುಜರಾತ್ ವಿಧಾನಸಭೆಗೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿಯ ತುರ್ತು ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರನ್ನೇ ಮುಂದಿನ ಪ್ರಧಾನ ಮಂತ್ರಿ ಎಂದು ಬಿಂಬಿಸಲು ನಿರ್ಧರಿಸಲಾಯಿತು ಈ ತೀರ್ಮಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪೂರ್ಣ ಒಪ್ಪಿಗೆ ಇದೆ ಎಂದೂ ರಾಜನಾಥ್ ಸಿಂಗ್ ಹೇಳಿದರು.
2007: ಮಕ್ಕಳಿಲ್ಲದ ಕೊರಗಿದೆಯೇ? ಆಲೂಗಡ್ಡೆ ಬಿಡಿ, ಐಸ್ ಕ್ರೀಮ್ ತಿನ್ನಿ, ಅದರಿಂದ ಮಹಿಳೆಯರು ಗರ್ಭವತಿಯರಾಗುವ ಸಾಧ್ಯತೆ ಹೆಚ್ಚು ಎಂದು ಹಾರ್ವರ್ಡಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಶೋಧನೆ ತಿಳಿಸಿತು. ಕೆಲವೊಂದು ಆಹಾರ ಪದಾರ್ಥಗಳು ಹಾಗೂ ಜೀವನ ಪದ್ಧತಿ ಹಾರ್ಮೋನುಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಮೂಲಕ ಗರ್ಭಧಾರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ಬ್ರೆಡ್, ಸಿಹಿ ಲಘು ಪಾನೀಯ, ಆಲೂ ಪದಾರ್ಥಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ದಿಢೀರನೇ ಹೆಚ್ಚುವುದರಿಂದ ಹಾರ್ಮೋನುಗಳ ಮೇಲೆ ದುಷ್ಪರಿಣಾಮವಾಗುತ್ತದೆ. ಆದರೆ ಹಾಲು ಹಾಗೂ ಹೈನು ಉತ್ಪನ್ನಗಳ ಸೇವನೆ ಹಾಗೂ ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಕೆಲ ಬದಲಾವಣೆಗಳು ಅಂಡಾಣು ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ ಎಂದು ಸಂಶೋಧನೆ ಹೇಳಿತು.
2007: ಶ್ವಾಸಕೋಶ ಕ್ಯಾನ್ಸರಿಗೆ ಹಸಿರು ತರಕಾರಿ ಮಿಶ್ರಣ (ಪಚಡಿ ಅಥವಾ ಸಲಾಡ್) ಉತ್ತಮ ಮದ್ದು ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಕ್ಯಾನ್ಸರ್ ಸಂಶೋಧನಾ ಕೇಂದ್ರ ಪತ್ತೆ ಹಚ್ಚಿತು. ಹಸಿರು ತರಕಾರಿಗಳ ಸೇವನೆ ಜೊತೆಗೆ ಕೈತೋಟದಲ್ಲಿ ಕೆಲಸ ಮಾಡುವುದರಿಂದ ಶ್ವಾಸಕೋಶ ಕ್ಯಾನ್ಸರ್ ಬರುವ ಸಾಧ್ಯತೆ ತೀರಾ ಕಡಿಮೆ. ಧೂಮಪಾನಿಗಳಿಗೆ ಇದು ಉತ್ತಮ ಔಷಧ ಎಂದು ವರದಿ ಹೇಳಿತು.
2007: `ಬ್ಯಾಂಕಿನ ಸಾಲ ವಸೂಲಿ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತನ' ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಐಸಿಐಸಿಐ ಬ್ಯಾಂಕಿಗೆ ಮುತ್ತಿಗೆ ಹಾಕಿದ ರೈತರು ಹಾಗೂ ಪ್ರತಿಭಟನೆಕಾರರು ಜಿಲ್ಲಾಧಿಕಾರಿಯನ್ನು ಸ್ಥಳಕ್ಕೇ ಕರೆಸಿ, ಬ್ಯಾಂಕಿಗೆ ಬೀಗಮುದ್ರೆ ಹಾಕಿಸಿದ ನಾಟಕೀಯ ಪ್ರಕರಣ ಮೈಸೂರು ನಗರದಲ್ಲಿ ನಡೆಯಿತು. ರಮಾವಿಲಾಸ ರಸ್ತೆಯಲ್ಲಿನ ಐಸಿಐಸಿಐ ಬ್ಯಾಂಕಿನ ಮುಂದೆ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆ ರಾತ್ರಿಯೂ ಮುಂದುವರಿಯಿತು. ಹೊಸಹಳ್ಳಿ ಕಸಬಾದ ರೈತ ಎಚ್.ಎಂ. ಮಂಜುನಾಥ್ ಬ್ಯಾಂಕಿನಿಂದ ಟ್ರಾಕ್ಟರ್ ಕೊಳ್ಳಲು ಒಟ್ಟು 4.79 ಲಕ್ಷ ರೂಪಾಯಿಯ ಮೂರು ಸಾಲಗಳನ್ನು ಪಡೆದಿದ್ದರು. ಆರು ತಿಂಗಳಿಗೊಮ್ಮೆ ಕಂತು ಕಟ್ಟಬೇಕಿದ್ದ ಅವರು ಮೊದಲ ಕಂತು 48 ಸಾವಿರ ರೂಪಾಯಿಗಳನ್ನು ಕಟ್ಟಿದ್ದರು. ಎರಡನೆಯ ಕಂತು ಕಟ್ಟಲು ಒತ್ತಡ ಹೇರಿದ್ದ ಬ್ಯಾಂಕಿನವರು ನವೆಂಬರ್ 5ರ ದಿನಾಂಕ ನಮೂದಿಸಿ ಏಳು ದಿನಗಳ ಒಳಗೆ ಹಣ ಕಟ್ಟಬೇಕೆಂದು ಒಟ್ಟು ಮೂರು ನೋಟಿಸ್ ಕಳಿಸಿದ್ದರು. ಮೊದಲ ನೋಟಿಸಿನಲ್ಲಿ 42,194 ರೂಪಾಯಿ, ಎರಡನೆ ನೋಟಿಸಿನಲ್ಲಿ 3,866 ರೂಪಾಯಿ ಹಾಗೂ ಮೂರನೆ ನೋಟಿಸಿನಲ್ಲಿ 7,839 ರೂಪಾಯಿ ಕಟ್ಟಬೇಕೆಂದು ಸೂಚಿಸಲಾಗಿತ್ತು. ಆದರೆ ಮಂಜುನಾಥ್ ಗೆ ಈ ನೋಟಿಸುಗಳು ಡಿಸೆಂಬರ್ 3ರಂದು ತಲುಪಿದವು. ಡಿಸೆಂಬರ್ 4ರಂದೇ ಗ್ರಾಮಕ್ಕೆ ಬಂದ ಬ್ಯಾಂಕಿನ ಖಾಸಗಿ ವಸೂಲಿ ಸಿಬ್ಬಂದಿ ಹೊಲದಿಂದ ಟ್ರಾಕ್ಟರಿನಲ್ಲಿ ಬರುತ್ತಿದ್ದ ಮಂಜುನಾಥ ಅವರನ್ನು ತಡೆದು ಬಲವಂತವಾಗಿ ಟ್ರಾಕ್ಟರನ್ನು ವಶಕ್ಕೆ ತೆಗೆದುಕೊಂಡರು. ವಾರದೊಳಗೆ ಕಂತು ಕಟ್ಟುವುದಾಗಿ ಹೇಳಿದರೂ ಕಿವಿಗೊಡಲಿಲ್ಲ. ಗ್ರಾಮಸ್ಥರ ಎದುರೇ ಆದ ಈ ಅವಮಾನದಿಂದ ತೀವ್ರ ಮನನೊಂದ ಮಂಜುನಾಥ, ಅಂದೇ ಸಂಜೆ ವಿಷ ಸೇವಿಸಿ, ಹೊಲದ ಬದಿಯಲ್ಲಿದ್ದ ನೀರಿನ ಬಂಡ್ ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು.
2007: ಕೈಗಾರಿಕಾಭಿವೃದ್ಧಿಯ ನೆಪದಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕ್ರಮದ ವಿರುದ್ಧ ರೈತರು ಮೈಸೂರಿನಲ್ಲಿ ಹಗಲು ರಾತ್ರಿ ಧರಣಿ ಆರಂಭಿಸಿದರು.
2006: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸೇರಿದಂತೆ 7ಮಂದಿ ಬಾಹ್ಯಾಕಾಶಯಾನಿಗಳನ್ನು ಹೊತ್ತ `ಡಿಸ್ಕವರಿ' ಬಾಹ್ಯಾಕಾಶ ನೌಕೆಯನ್ನು ಅಮೆರಿಕದ ಫ್ಲೋರಿಡಾದಲ್ಲಿ ಇರುವ ಕೇಪ್ ಕೆನವರಾಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 7.17ಕ್ಕೆ ಯಶಸ್ವಿಯಾಗಿ ಹಾರಿಬಿಡಲಾಯಿತು. ನೌಕೆ ಕೇವಲ 9 ನಿಮಿಷಗಳಲ್ಲಿ ಬಾಹ್ಯಾಕಾಶದಲ್ಲಿ ತನ್ನ ಸೂಚಿತ ಕಕ್ಷೆಯನ್ನು ತಲುಪಿತು. `ಡಿಸ್ಕವರಿ' ನೌಕೆಯು 2003ರಲ್ಲಿ ಭಾರತದ ಕಲ್ಪನಾ ಚಾವ್ಲಾ ಸೇರಿದಂತೆ 7 ಮಂದಿ ಗಗನ ಯಾತ್ರಿಗಳು ಇದ್ದ ಕೊಲಂಬಿಯಾ ನೌಕೆ ಸ್ಫೋಟಗೊಂಡ ಘಟನೆ ನಂತರ ಉಡಾವಣೆಗೊಂಡ 4ನೇ ನೌಕೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ ರಾತ್ರಿ ಹೊತ್ತಿನಲ್ಲಿ ನಡೆದ ಮೊದಲ ಉಡಾವಣಾ ಕಾರ್ಯಕ್ರಮ ಇದು. ಬಾಹ್ಯಾಕಾಶದಂಚಿನಲ್ಲಿ `ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ'ದ ಮರುನಿರ್ಮಾಣ ಹಾಗೂ ದುರಸ್ತಿ ಉದ್ದೇಶಕ್ಕಾಗಿ `ಡಿಸ್ಕವರಿ' ನೌಕೆಯನ್ನು ಹಾರಿಬಿಡಲಾಯಿತು. 12ದಿನಗಳ ಕಾಲ ನಡೆಯಲಿರುವ ಈ ಮರುನಿರ್ಮಾಣ ಕಾರ್ಯ ಅಥವಾ ದುರಸ್ತಿ ಕಾರ್ಯ ಅತಿ ಸಂಕೀರ್ಣಮಯವಾಗಿದ್ದು, ಇದಕ್ಕಾಗಿ 11ದಶಕೋಟಿ ಡಾಲರ್ ವೆಚ ್ಚಮಾಡಲಾಗುತ್ತಿದೆ. ಇದು ಸಂಪೂರ್ಣಗೊಳ್ಳಲು ಸುಮಾರು 3ಬಾಹ್ಯಾಕಾಶ ನಡಿಗೆಗಳು ಬೇಕಾಗಬಹುದು ಎಂಬುದು ಅಮೆರಿಕದ ಬಾಹ್ಯಾಕಾಶ ಏಜೆನ್ಸಿಗಳ ಲೆಕ್ಕಾಚಾರ. ಡಿಸ್ಕವರಿ ನೌಕೆಯಲ್ಲಿ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರಲ್ಲದೆ ಪೈಲಟ್ ವಿಲಿಯಮ್ ಓಫೆಲಿನ್, ಜಾನ್ ಹಿಗ್ಗಿನ್ ಬಾಥಮ್, ನಿಕೋಲಾಸ್ ಪ್ಯಾಟ್ರಿಕ್, ಬಾಬ್ ಕರ್ಬೀಮ್ ಹಾಗೂ ಸ್ಟಾಕ್ ಹೋಂ ಭೌತಶಾಸ್ತ್ರಜ್ಞ ಕ್ರಿಸ್ಟೆರ್ ಫ್ಯುಗ್ಲೆಸಾಂಗ್ ಇದ್ದಾರೆ. ಈ 7 ಮಂದಿಯ ತಂಡದ ಕಮಾಂಡರ್ 50 ವರ್ಷ ವಯಸ್ಸಿನ ಜೆಟ್ ಪೈಲಟ್ ಮಾರ್ಕ್ ಪೊಲಾನ್ಸ್ಕಿ. ಸುನೀತಾ ವಿಲಿಯಮ್ಸ್ ಅವರು ತಮ್ಮ ಜೊತೆಗೆ ಪುಟ್ಟ ಗಣಪತಿ ವಿಗ್ರಹ, ಭಗವದ್ಗೀತೆ ಮತ್ತು ಸಮೋಸಾವನ್ನೂ ಬಾಹ್ಯಾಕಾಶಕ್ಕೆ ಒಯ್ದು ತಮ್ಮ ಭಾರತೀಯತೆ ಮೆರೆದರು.
2006: ಶ್ರೀಲಂಕಾ ಪೂರ್ವಭಾಗದಲ್ಲಿ ಸರ್ಕಾರಿ ಪಡೆಗಳು ಮತ್ತು ತಮಿಳು ಉಗ್ರಗಾಮಿಗಳ ನಡುವೆ ಎರಡು ದಿನಗಳಿಂದ ನಡೆದ ಸಮರದಲ್ಲಿ ಸತ್ತವರ ಸಂಖ್ಯೆ 100 ದಾಟಿತು. ಗುಂಡಿನ ಘರ್ಷಣೆಯಿಂದ ಭಯಭೀತರಾದ 3000ಕ್ಕೂ ಹೆಚ್ಚು ನಾಗರಿಕರು ಮನೆ ಮಠ ಬಿಟ್ಟು ಓಡಿ ದೇವಾಲಯ, ಬೌದ್ಧ ಮಂದಿರಗಳಲ್ಲಿ ಆಶ್ರಯ ಪಡೆದರು. ಮೃತರಲ್ಲಿ ಸುಮಾರು 25 ಮಂದಿ ನಾಗರಿಕರು. 30 ಮಂದಿ ಸೈನಿಕರು ಮತ್ತು 40 ಮಂದಿ ತಮಿಳು ಉಗ್ರಗಾಮಿಗಳು.
2006: ಹಿಂದಿನ ವಾರವಷ್ಟೇ `ಡ್ಯೂರಿಯನ್' ಚಂಡಮಾರುತದಿಂದ ತತ್ತರಿಸಿದ್ದ ಫಿಲಿಪ್ಪೀನ್ಸಿನ ಸಹಸ್ರಾರು ಮಂದಿ ಇನ್ನೊಂದು ಚಂಡಮಾರುತ `ಉತೂರ್' ಭಯದಿಂದ ಮನೆಮಠಗಳನ್ನು ಬಿಟ್ಟು ತಾತ್ಕಾಲಿಕ ಆಶ್ರಯಗಳಲ್ಲಿ ಇಡೀ ರಾತ್ರಿಯನ್ನು ಕಳೆದರು. ಕೇಂದ್ರ ಫಿಲಿಪ್ಪೀನ್ಸಿಗೆ ಅಪ್ಪಳಿಸಿದ ಈ `ಉತೂರ್' ಚಂಡಮಾರುತ ಮೂವರನ್ನು ಬಲಿ ತೆಗೆದುಕೊಂಡು ಹಲವಾರು ಪ್ರದೇಶಗಳ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಹಿಂದಿನ ವಾರ ಅಪ್ಪಳಿಸಿದ್ದ `ಡ್ಯೂರಿಯನ್' ಚಂಡಮಾರುತ 1000 ಜನರನ್ನು ಬಲಿ ತೆಗೆದುಕೊಂಡು, ಸಕ್ರಿಯವಾಗಿರುವ `ಮೌಂಟ್ ಮಯೋನ್' ಜ್ವಾಲಾಮುಖಿಯಿಂದ ಹೊರಟ ಲಾವಾರಸದ ಜೊತೆಗೆ ಭಾರಿ ಮಳೆ, ಕೆಸರು ನೀರನ್ನು ಹೊತ್ತು ತಂದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು.
2006: ಹದಿನೇಳು ವರ್ಷಗಳ ಕಾಲ ಚಿಲಿಯಲ್ಲಿ ಸರ್ವಾಧಿಕಾರ ನಡೆಸಿದ್ದ ಆಗಸ್ಟೋ ಪಿನೋಷೆ (91) ಈದಿನ ನಡುರಾತ್ರಿ ನಿಧನರಾದರು. ಆಡಳಿತಾವಧಿಯಲ್ಲಿ ನೂರಾರು ಜನರ ಹತ್ಯೆಗೆ ಪಿನೋಷೆ ಕಾರಣರಾಗಿದ್ದ ಹಿನ್ನೆಲೆಯಲ್ಲಿ ಚಿಲಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿತು. ಕೆಲವರು ಖುಷಿಯಿಂದ ಕುಣಿದು ಕುಪ್ಪಳಿಸಿದರೆ, ಇನ್ನು ಕೆಲವರು ಪಿನೋಷೆ ಚಿಲಿಯನ್ನು ಕಮ್ಯೂನಿಸ್ಟರ ಕಪಿ ಮುಷ್ಟಿಯಿಂದ ಪಾರು ಮಾಡಿದರು ಎಂದು ಹೇಳಿ ಕಣ್ಣೀರಿಟ್ಟರು. ಕೆಲವೆಡೆ ವ್ಯಾಪಕ ಹಿಂಸಾಚಾರವೂ ನಡೆಯಿತು.
2006: ಬಾಂಗ್ಲಾದೇಶದ ಸಹಸ್ರಾರು ಜನರ ಉತ್ತಮ ಬದುಕಿನ ಕನಸನ್ನು ನನಸಾಗಿಸಿದ `ಗ್ರಾಮೀಣ ಬ್ಯಾಂಕ್' ರೂವಾರಿ ಮಹಮ್ಮದ್ ಯೂನಸ್ ಅವರಿಗೆ ಪ್ರಸಕ್ತ ವರ್ಷದ ನೊಬೆಲ್ ಪ್ರಶಸ್ತಿಯನ್ನು ಓಸ್ಲೋದಲ್ಲಿ ಪ್ರದಾನ ಮಾಡಲಾಯಿತು.
2005: ದಕ್ಷಿಣ ಚೀನಾದ ಸಾನ್ಯಾದಲ್ಲಿ ನಡೆದ ವಿಶ್ವ ಸುಂದರಿ (ಮಿಸ್ ವರ್ಲ್ಡ್- 2005) ಸ್ಪರ್ಧೆಯಲ್ಲಿ ಐಸ್ ಲ್ಯಾಂಡಿನ ಬೆಡಗಿ ಉನ್ನೂರ್ ಬಿರ್ನಾ ವಿಲ್ಜಾ ಮ್ಯಾಡಾಟಿರ್ ವಿಶ್ವ ಸುಂದರಿ ಕಿರೀಟ ಧರಿಸಿದರು. ಮಿಸ್ ಮೆಕ್ಸಿಕೊ ಡಾಫ್ಲೆ ಮೊಲಿನಾ ಲೋನಾ ಅವರು ದ್ವಿತೀಯ ಸ್ಥಾನವನ್ನೂ, ಮಿಸ್ ಪೋರ್ಟರಿಕೊ ಇಂಗ್ರಿಡ್ ಮೇರಿ ರಿವೇರಾ ಸ್ಯಾಂಟೊ ಮೂರನೇ ಸ್ಥಾನವನ್ನೂ ಗಳಿಸಿದರು. ಭಾರತದ ಸಿಂಧೂರ ಗದ್ದೆ ಸೇರಿದಂತೆ 102 ಸ್ಪರ್ಧಿಗಳು ಕಣದಲ್ಲಿ ಇದ್ದರು.
2005: ನೈಜೀರಿಯಾದ ಪ್ರಯಾಣಿಕ ವಿಮಾನವೊಂದು ಪೋರ್ಟ್ ಹಾರ್ ಕೋರ್ಟ್ ನಗರದಲ್ಲಿ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ ಕನಿಷ್ಠ 103 ಜನ ಮೃತರಾದರು. ಸೊಸೊಲಿಸೊ ಏರ್ ಲೈನ್ಸಿಗೆ ಸೇರಿದ ಈ ವಿಮಾನ ಅಬುಜಾದಿಂದ ಪ್ರಯಾಣ ಹೊರಟಿತ್ತು.
2005: ಶ್ರೀಲಂಕಾ ವಿರುದ್ಧ ದೆಹಲಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಜೀವನದ 35ನೇ ಶತಕ ಗಳಿಸುವ ಮೂಲಕ ಸಚಿನ್ ರಮೇಶ ತೆಂಡೂಲ್ಕರ್ ಅವರು ವಿಶ್ವದಾಖಲೆ ಸ್ಥಾಪಿಸಿ ಹೊಸ ಎತ್ತರಕ್ಕೆ ಏರಿದರು.
2005: ಈಕ್ವೆಡಾರಿನ 116 ವರ್ಷ ವಯಸ್ಸಿನ ಅಜ್ಜಿ ಮರಿಯಾ ಎಸ್ತರ್ ಕ್ಯಾಪೊವಿಲ್ಲಾ ಅವರು ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಗಿನ್ನೆಸ್ ದಾಖಲೆಗಳ ಸಂಸ್ಥೆ ಮಾನ್ಯ ಮಾಡಿತು. ಈವರೆಗೆ ಅಮೆರಿಕದ ಟೆನ್ನಿಸೀ ಪ್ರಾಂತ್ಯದ ಮೆಂಫಿಸ್ನ ಎಲಿಜಬೆತ್ ಬೋಲ್ಡನ್ ಅವರಿಗೆ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿ ಇತ್ತು. ಮರಿಯಾ ಹುಟ್ಟಿದ್ದು 1889ರ ಸೆಪ್ಟೆಂಬರ್ 14ರಂದು. ಈಕ್ವಡಾರಿನ ಗುಯಾಕಲ್ ಎಂಬಲ್ಲಿ. ಐವರು ಮಕ್ಕಳು, ನಾಲ್ವರು ಮೊಮ್ಮಕ್ಕಳು, ಒಂಭತ್ತು ಮರಿಮಕ್ಕಳು ಮತ್ತು ಮರಿಮಕ್ಕಳ ನಾಲ್ಕು ಮಕ್ಕಳು ಈ ಅಜ್ಜಿಯ ಸಂಸಾರದ ಸದಸ್ಯರು. ಪತಿ 1949ರಲ್ಲಿ ಮೃತರಾಗಿದ್ದಾರೆ.
2005: ಜುಲೈ 7ರ ಲಂಡನ್ ಬಾಂಬ್ ದಾಳಿಯಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾದ ಹುಡುಗಿ ಗಿಲ್ ಹಿಕ್ಸ್ (37) ಜೊ ಕೆರ್ (47) ಅವರನ್ನು ಮದುವೆಯಾದರು. ಲಂಡನ್ನಿನ ರಸೆಲ್ ಚೌಕ ಟ್ಯೂಬ್ ಸ್ಟೇಷನ್ನಿನಿಂದ ಜೀವಂತವಾಗಿ ಕರೆತರಲಾದ ಕೊನೆಯ ವ್ಯಕ್ತಿಯ ಈಕೆಯಾಗಿದ್ದರು. ಆಕೆಯ ಕಾಲುಗಳನ್ನು ಕತ್ತರಿಸಿ ಕೃತಕ ಕಾಲುಗಳನ್ನು ಜೋಡಿಸಲಾಗಿತ್ತು. ಆ ಕೃತಕ ಕಾಲುಗಳಲ್ಲೇ ನಡೆದಾಡಲು ಆಕೆ ಅಭ್ಯಾಸ ಮಾಡಿಕೊಂಡರು.
2005: ವೆಲಿಂಗ್ಟನ್ನಿನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಎರಡು ವಿಕೆಟುಗಳ ಅಂತರದ ವಿಜಯ ಸಾಧಿಸುವ ಮೂಲಕ ನ್ಯೂಜಿಲೆಂಡ್ ತಂಡವು ವಿಶ್ವದಾಖಲೆಯ ಗೌರವ ಪಡೆಯಿತು. ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ಐವತ್ತು ಓವರುಗಳಲ್ಲಿ 331 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ನ್ಯೂಜಿಲೆಂಡ್ 49 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 332 ರನ್ ಪೇರಿಸಿ, ಅತಿ ಹೆಚ್ಚು ಮೊತ್ತದ ಗುರಿಯನ್ನು ಬೆನ್ನಟ್ಟಿ ವಿಜಯಸಾಧಿಸಿದ ವಿಶ್ವ ದಾಖಲೆಯ ಶ್ರೇಯಸ್ಸು ಸಾಧಿಸಿತು. 2002ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ ಕಳೆದುಕೊಂಡು 330 ರನ್ ಪೇರಿಸಿದದ ಆಸ್ಟ್ರೇಲಿಯಾ ಈ ವಿಶ್ವದಾಖಲೆಯ ಶ್ರೇಯಸ್ಸು ಗಳಿಸಿತ್ತು.
1988: ವಿಶಾಖಪಟ್ಟಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ಪಟು ಕೃಷ್ಣಮಾಚಾರಿ ಶ್ರೀಕಾಂತ್ ಅವರು 27 ರನ್ನುಗಳಿಗೆ 5 ವಿಕೆಟುಗಳನ್ನು ಉರುಳಿಸಿದ ಹಾಗೂ ಅರ್ಧ ಶತಕಕ್ಕೂ ಹೆಚ್ಚು (70) ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1961: ಸಾಹಿತಿ ವಾಸಂತಿ ಆದಿಕೇಷ್ ಜನನ.
1952: ಜಗತ್ತಿನಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಕುಟುಂಬ ನಿಯಂತ್ರಣ ಯೋಜನೆ ಜಾರಿಗೊಂಡಿತು.
1948: ಸಾಹಿತಿ ಮಾರ್ಕಂಡಪುರಂ ಜನನ.
1948: ಸಾಹಿತಿ ಶ್ರೀನಿವಾಸ್ ಜನನ.
1942: ಬಾಂಬೆಯ (ಈಗಿನ ಮುಂಬೈ) ವೈದ್ಯ ದ್ವಾರಕಾನಾಥ್ ಶಾಂತಾರಾಮ್ ಕೊಟ್ನಿಸ್ (1910-1942) ತಮ್ಮ 32ನೇ ವಯಸ್ಸಿನಲ್ಲಿ ಮೃತರಾದರು. ಇವರು 1938ರಲ್ಲಿ ಚೀನಾಕ್ಕೆ ತೆರಳಿ ಚೀನೀ-ಜಪಾನ್ ಯುದ್ಧದಲ್ಲಿ ಕಮ್ಯೂನಿಸ್ಟ್ ಸೇನೆಗೆ ನೆರವಾಗಿದ್ದರು. ಭಾರತದ ಖ್ಯಾತ ಚಿತ್ರ ನಿರ್ದೇಶಕ ವಿ. ಶಾಂತಾರಾಮ್ ಅವರು `ಡಾ. ಕೊಟ್ನಿಸ್ ಕಿ ಅಮರ್ ಕಹಾನಿ' ಚಿತ್ರದ ಮೂಲಕ ಕೊಟ್ನಿಸ್ ಅವರನ್ನು ಅಮರರನ್ನಾಗಿ ಮಾಡಿದ್ದಾರೆ.
1939: ಸಾಹಿತಿ ಎಂ.ಕೆ. ರವೀಂದ್ರನಾಥ್ ಜನನ.
1922: ಸಾಹಿತಿ ಶಾಂತಾದೇವಿ ಮಾಳವಾಡ ಜನನ.
1902: ಭಾರತದ ಸ್ವಾತಂತ್ರ್ಯ ಹೋರಾಟಗಾರ ಮೈಸೂರಿನ (ಈಗಿನ ಕರ್ನಾಟಕ) ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪ (1902-2000) ಹುಟ್ಟಿದ ದಿನ.
1896: ಕನ್ನಡದ ಖ್ಯಾತ ವಿದ್ವಾಂಸ, ವಾಗ್ಮಿ ಸಿ.ಕೆ. ವೆಂಕಟರಾಮಯ್ಯ (10-12-1896ರಿಂದ 3-4-1973) ಅವರು ಕೃಷ್ಣಪ್ಪ- ನಂಜಮ್ಮ ದಂಪತಿಯ ಮಗನಾಗಿ ಚನ್ನಪಟ್ಟಣ ತಾಲ್ಲೂಕಿನ ಪೊಟ್ಟು ಗ್ರಾಮದಲ್ಲಿ ಜನಿಸಿದರು.
1878: ಚಕ್ರವರ್ತಿ ರಾಜಗೋಪಾಲಾಚಾರಿ ಅವರು ತಮಿಳುನಾಡಿನ ಹೊಸೂರಿನಲ್ಲಿ ಜನಿಸಿದರು.
1870: ಸರ್ ಜದುನಾಥ ಸರ್ಕಾರ್ (1870-1958) ಹುಟ್ಟಿದ ದಿನ. ಭಾರತೀಯ ಇತಿಹಾಸಕಾರರಾದ ಇವರು ಮೊಘಲ್ ವಂಶಕ್ಕೆ ಸಂಬಂಧಿಸಿದಂತೆ ಇತಿಹಾಸ ಬರೆದವರು.
1768: ಲಂಡನ್ನಿನಲ್ಲಿ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್ ಸ್ಥಾಪನೆಗೊಂಡಿತು. ಸರ್ ಜೊಶುವಾ ರೇನಾಲ್ಡ್ಸ್ ಅದರ ಮೊದಲ ಅಧ್ಯಕ್ಷರಾದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment