ಇಂದಿನ ಇತಿಹಾಸ
ಡಿಸೆಂಬರ್ 14
ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಸಂದರ್ಭದಲ್ಲಿ ಈ ನಾಯಕನ ಕುರಿತಾಗಲಿ, ಅವರ ಜೈ ಜವಾನ್, ಜೈ ಕಿಸಾನ್ ಸಂದೇಶವನ್ನಾಗಲಿ ಪ್ರಚಾರ ಮಾಡಲು ಸರ್ಕಾರ ಕವಡೆ ಕಾಸನ್ನು ಖರ್ಚು ಮಾಡಿಲ್ಲ ಎಂಬ ಸತ್ಯ ಹೊರಬಿದ್ದಿತು. ಸಾಮಾಜಿಕ ಕಾರ್ಯಕರ್ತ ದೇವ್ ಆಶೀಶ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಿರುವ ಅರ್ಜಿಗೆ ಉತ್ತರಿಸಿದ ಕೇಂದ್ರ ಸರ್ಕಾರದ ಜಾಹೀರಾತು ಹಾಗೂ ದೃಶ್ಯ ಪ್ರಸಾರ ನಿರ್ದೇಶನಾಲಯದ (ಡಿಎವಿಪಿ) ಅಧಿಕಾರಿಗಳು ಈ ಮಾಹಿತಿ ನೀಡಿದರು.
2007: ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಸಂದರ್ಭದಲ್ಲಿ ಈ ನಾಯಕನ ಕುರಿತಾಗಲಿ, ಅವರ ಜೈ ಜವಾನ್, ಜೈ ಕಿಸಾನ್ ಸಂದೇಶವನ್ನಾಗಲಿ ಪ್ರಚಾರ ಮಾಡಲು ಸರ್ಕಾರ ಕವಡೆ ಕಾಸನ್ನು ಖರ್ಚು ಮಾಡಿಲ್ಲ ಎಂಬ ಸತ್ಯ ಹೊರಬಿದ್ದಿತು. ಸಾಮಾಜಿಕ ಕಾರ್ಯಕರ್ತ ದೇವ್ ಆಶೀಶ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಿರುವ ಅರ್ಜಿಗೆ ಉತ್ತರಿಸಿದ ಕೇಂದ್ರ ಸರ್ಕಾರದ ಜಾಹೀರಾತು ಹಾಗೂ ದೃಶ್ಯ ಪ್ರಸಾರ ನಿರ್ದೇಶನಾಲಯದ (ಡಿಎವಿಪಿ) ಅಧಿಕಾರಿಗಳು ಈ ಮಾಹಿತಿ ನೀಡಿದರು. ತಮ್ಮ ಜೀವನದುದ್ದಕ್ಕೂ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಶಾಸ್ತ್ರೀಜಿ ಅವರ ಹುಟ್ಟುಹಬ್ಬ ಸರ್ಕಾರದಲ್ಲಿರುವ ಯಾರೊಬ್ಬರಲ್ಲೂ ಉತ್ಸಾಹ ಮೂಡಿಸಿಲ್ಲ ಎಂಬುದು ಈ ಉತ್ತರದಿಂದ ಬೆಳಕಿಗೆ ಬಂತು. ಸರ್ಕಾರದ ಪರವಾಗಿ ಅಧಿಕೃತ ಜಾಹೀರಾತು ನೀಡುವ `ಡಿಎವಿಪಿ' ಅಕ್ಟೋಬರ್ 2ರಂದು ಗಾಂಧಿ ಜಯಂತಿ ಅಂಗವಾಗಿ 2.95 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಅದೇ ದಿನ ಹುಟ್ಟಿದ ಶಾಸ್ತ್ರಿ ಅವರನ್ನು ಸಂಪೂರ್ಣ ಮರೆತುಬಿಟ್ಟಿದೆ ಎಂದು ಭಟ್ಟಾಚಾರ್ಯ ಹೇಳಿದರು. ಶಾಸ್ತ್ರಿ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಮತ್ತೊಂದು ಅರ್ಜಿಗೆ, ಕೇಂದ್ರ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಉತ್ತರಿಸಿದ್ದು, ವಿಜಯ್ ಘಾಟ್ ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಇತರ ಸಚಿವರು ಪಾಲ್ಗೊಂಡ್ದಿದರು ಎಂಬ ಮಾಹಿತಿ ನೀಡಲಾಗಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಸರ್ಕಾರದ ದಾಖಲೆಗಳ ಪ್ರಕಾರ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೇ ಎಂದು ಪ್ರಶ್ನಿಸಿದ್ದರು. ಈ ಅರ್ಜಿಗೆ ಗೃಹ ಸಚಿವಾಲಯದ ನಿರ್ದೇಶಕಿ ರೀತಾ ಆಚಾರ್ಯ ಉತ್ತರಿಸಿ, 'ನಮ್ಮ ದಾಖಲೆಗಳ ಪ್ರಕಾರ 1964ರ ಜೂನ್ 9ರಿಂದ 1966ರ ಜನವರಿ 11ರವರೆಗೆ ಶಾಸ್ತ್ರಿ ಭಾರತದ ಪ್ರಧಾನಿಯಾಗಿದ್ದರು' ಎಂದು ಹೇಳಿದ್ದಾರೆ. ಆದರೆ, ಸ್ವಾತಂತ್ರ್ಯ ಹೋರಾಟದ ವಿಚಾರದ ಕುರಿತು ಇಲಾಖೆ ಮೌನ ವಹಿಸಿದೆ ಎಂದು ಭಟ್ಟಾಚಾರ್ಯ ಹೇಳಿದರು.
2007: ಒರಿಸ್ಸಾದ ಬಾಲಸೋರ್ ಸಮೀಪದ ಚಂಡಿಪುರದ ಪರೀಕ್ಷಾ ಕೇಂದ್ರದಲ್ಲಿ ದೇಶೀಯವಾಗಿ ನಿರ್ಮಿಸಲಾದ ಅಣ್ವಸ್ತ್ರ ಹೊತ್ತೊಯ್ಯಬಲ್ಲ `ಆಕಾಶ್' ಕ್ಷಿಪಣಿಯನ್ನು ಈದಿನ ಪ್ರಾಯೋಗಿಕ ಪರೀಕ್ಷೆಗೆ ಒಡ್ಡಲಾಯಿತು. ವಾಯು ಸೇನೆಯ ರಕ್ಷಣಾ ತಂತ್ರಗಳ ತಾಲೀಮಿನ ಭಾಗವಾಗಿ 25 ಕಿ.ಮೀ. ದೂರದ ಗುರಿ ತಲುಪುವ, 50 ಕೆಜಿ ಸಿಡಿ ತಲೆ ಹೊತ್ತೊಯ್ಯಬಲ್ಲ, ಭೂಮಿಯಿಂದ ಆಗಸಕ್ಕೆ ನೆಗೆಯುವ ಈ ಕ್ಷಿಪಣಿಯನ್ನು ಉಡಾಯಿಸಲಾಯಿತು. ಯುದ್ಧ ವಿಮಾನವೊಂದರಿಂದ ಇಳಿಬಿಟ್ಟಿದ್ದ `ಬ್ಯಾರೆಲ್' ಗುರಿಯಾಗಿಸಿ `ಆಕಾಶ್' ಕ್ಷಿಪಣಿಯನ್ನು ಉಡಾಯಿಸಲಾಗಿತ್ತು. ಈ ಕ್ಷಿಪಣಿ 5.6 ಮೀ ಉದ್ದವಿದ್ದು 700 ಕೆ.ಜಿ. ತೂಗುತ್ತದೆ.
2007: ಪಂಜಾಬಿನ ನು ಚುರ್ ಚಕ್ ಗ್ರಾಮದ ಮಾನವ ಚಾಲಿತ ರೈಲ್ವೆ `ಕ್ರಾಸಿಂಗ್' ಬಳಿ ಫಿರೋಜ್ ಪುರ - ಲೂಧಿಯಾನ ಮಧ್ಯೆ ಚಲಿಸುತ್ತಿದ್ದ ಸಟ್ಲೇಜ್ ಎಕ್ಸ್ ಪ್ರೆಸ್ ರೈಲುಗಾಡಿಗೆ ಬಹುತೇಕ ಶಾಲಾ ಮಕ್ಕಳು ಮತ್ತು ಉಪಾಧ್ಯಾಯರಿದ್ದ ಖಾಸಗಿ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ 17 ಮಂದಿ ಸತ್ತು 14 ಮಂದಿ ತೀವ್ರವಾಗಿ ಗಾಯಗೊಂಡರು. ಮೋಗಾ ಜಿಲ್ಲೆಯ ಜಗ್ರೌನಿಂದ ಬಸ್ಸು ಲೋಪೊ ಗ್ರಾಮದತ್ತ ಹೊರಟಿದ್ದಾಗ ಈ ದುರಂತ ಸಂಭವಿಸಿತು.
2007: ಬೆಂಗಳೂರಿನಲ್ಲಿ ಈದಿನ ಸಂಜೆ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕ ಮತ್ತು ಅನಿಲ್ ಕುಂಬ್ಳೆ ಅಭಿಮಾನಿಗಳ ಬಳಗದ ಅಧ್ಯಕ್ಷ ಹೆಚ್. ರವೀಂದ್ರ ಅವರು ಕುಂಬ್ಳೆಗೆ `ಕರ್ನಾಟಕ ಕ್ರಿಕೆಟ್ ರತ್ನ' ಎಂಬ ಬಿರುದು ನೀಡಿ ಗೌರವಿಸಿದರು.
2006: ಬಾಲ್ಯ ವಿವಾಹ ಮಾಡುವವರಿಗೆ ಸೆರೆಮನೆವಾಸದ ಶಿಕ್ಷೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡುವ ಮಸೂದೆಯನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ರೇಣುಕಾ ಚೌಧರಿ ರಾಜ್ಯಸಭೆಯಲ್ಲಿ ಮಂಡಿಸಿದರು.
2006: ಕೇಂದ್ರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27 ಮೀಸಲಾತಿ ಸೌಲಭ್ಯ ಕಲ್ಪಿಸುವ ಮಹತ್ವದ ಕೇಂದ್ರೀಯ ಶಿಕ್ಷಣಸಂಸ್ಥೆಗಳ ಮಸೂದೆ-2006ಕ್ಕೆ ಲೋಕಸಭೆ ಗುರುವಾರ ಅನುಮೋದನೆ ನೀಡಿತು.
2006: ಶ್ರೀಲಂಕಾ ತಮಿಳು ಉಗ್ರಗಾಮಿಗಳ (ಎಲ್ಟಿಟಿಇ) ಪರ ಮುಖ್ಯ ಸಂಧಾನಕಾರ ಅಂಟೋನ್ ಬಾಲಸಿಂಘಂ ಲಂಡನ್ನಿನಲ್ಲಿ ನಿಧನರಾದರು.
2005: ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಸಿರಿಯಾಕ್ ಜೋಸೆಫ್ ಅವರನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದರು.
2005: ಐಟಿ ಮತ್ತು ಸಂಶೋಧನಾ ಕ್ಷೇತ್ರದ ಅಂತಾರಾಷ್ಟ್ರೀಯ ಮೈಂಡ್ ಟ್ರೀ ಕನ್ಸಲ್ಟಿಂಗ್ ಸೇವಾ ಸಂಸ್ಥೆಯು ಬೆಂಗಳೂರಿನಲ್ಲಿ ಅತ್ಯಂತ ಕಿರಿದಾದ ಅನಲಾಗ್ ಚಿಪ್ ಬಿಡುಗಡೆ ಮಾಡಿತು. ಲಿಥಿಯಮ್ ಅಯಾನ್ ಬ್ಯಾಟರಿ ತಂತ್ರಜ್ಞಾನದಲ್ಲಿ ತಯಾರಿಸಲಾದ ಈ ಇಂಟೆಗ್ರೇಟೆಡ್ ಸರ್ಕಿಟ್ (ಐಸಿ) ಗಾತ್ರ 1.5 ಮಿ.ಗ್ರಾಂ. ಭಾರತೀಯ ವಧುವಿನ ಪೋಷಾಕಿನಲ್ಲಿ ರೂಪದರ್ಶಿ ಅರ್ಚನಾ ತಿಲಕವನ್ನಾಗಿ ಧರಿಸಿ ಈ ಚಿಪ್ ಪ್ರದರ್ಶಿಸಿದರು.
2001: ಕ್ರಿಕೆಟಿನ ಖ್ಯಾತ ಅವಳಿ ಜವಳಿ ಆಟಗಾರರಾದ ಸ್ಟೀವನ್ ಮತ್ತು ಮಾರ್ಕ್ ವಾ ಅವರು ತಮ್ಮ 100ನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಒಟ್ಟಿಗೇ ಆಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಅಡಲೈಡಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವಿದು.
2000: ರಾಜಕೋಟ್ ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಐದನೆಯ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಅಜಿತ್ ಅಗರ್ ಕರ್ 50 ರನ್ನುಗಳನ್ನು ಅತಿವೇಗವಾಗಿ ದಾಖಲಿಸಿದರು. 21 ಬಾಲುಗಳಿಗೆ ಅವರು ಈ ಸಾಧನೆ ಮಾಡಿದರು. ಈ ಹಿಂದೆ ಕಪಿಲ್ ದೇವ್ ಅವರು 22 ಬಾಲುಗಳಿಗೆ ಈ ದಾಖಲೆ ನಿರ್ಮಿಸಿದ್ದರು.
1989: ಸೋವಿಯತ್ತಿನ ಪರಮಾಣು ಭೌತವಿಜ್ಞಾನಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಸಾಹಿತಿ ಅಂದ್ರೇಯಿ ಡಿ. ಸಖರೊವ್ ಅವರು ಮಾಸ್ಕೊದಲ್ಲಿ ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು. ಮಾನವ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ಅವರನ್ನು ಗೊರ್ಬಚೆವ್ ಆಡಳಿತ ಕಾಲದಲ್ಲಿ ವಿದೇಶದಿಂದ ಕರೆಸಿಕೊಳ್ಳಲಾಗಿತ್ತು.
1983: ನವದೆಹಲಿಯ ಗುಡಗಾಂವಿನ ಫ್ಯಾಕ್ಟರಿಯಿಂದ ಮಾರುತಿ ಕಾರುಗಳ ಮೊದಲ ಕಂತು ಬಿಡುಗಡೆಗೊಂಡಿತು.
1955: ಸಾಹಿತಿ ಸುವರ್ಣಾ ಚಂದ್ರಶೇಖರ್ ಜನನ.
1946: ಕಾಂಗ್ರೆಸ್ಸಿನ ಹಿರಿಯ ನಾಯಕ ಸಂಜಯ ಗಾಂಧಿ ಈ ದಿನ ನವದೆಹಲಿಯಲ್ಲಿ ಹುಟ್ಟಿದರು. ಫಿರೋಜ್ ಗಾಂಧಿ ಹಾಗೂ ಇಂದಿರಾ ಗಾಂಧಿ ಅವರ ಕಿರಿಯ ಮಗನಾದ ಸಂಜಯ ಗಾಂಧಿ ರಾಜಕೀಯ ಜೀವನದಲ್ಲಿ ತಾಯಿಗೆ ಸಲಹೆಗಾರರಾಗಿ ಅನೇಕ ವಿವಾದಗಳನ್ನು ಸೃಷ್ಟಿಸಿದ್ದರು. ಇಂದಿರಾ ಪ್ರಧಾನಿಯಾದ ಕೆಲವೇ ಸಮಯದಲ್ಲಿ ಸಂಜಯಗಾಂಧಿ ವಿಮಾನ ಅಪಘಾತದಲ್ಲಿ ನಿಧನರಾದರು. ಇದಕ್ಕೆ ಸ್ವಲ್ಪ ಕಾಲ ಮೊದಲು ಅವರು ಸಂಸತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
1934: ಚಿತ್ರ ನಟ ನಿರ್ದೇಶಕ ಶ್ಯಾಮ್ ಬೆನೆಗಲ್ ಜನ್ಮದಿನ.
1931: ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ, ಸಾಹಿತಿ ಡಾ. ಸಿ.ಎಂ. ಮುನಿರಾಮಪ್ಪ ಅವರು ಚಿಕ್ಕಮೈಲಪ್ಪ- ಪಾಪಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಬೇತಮಂಗಲ ತಾಲ್ಲೂಕಿನ ಅಂಕತಟ್ಟಿ ಹಳ್ಳಿಯಲ್ಲಿ ಜನಿಸಿದರು.
1924: ಭಾರತದ ಖ್ಯಾತ ಚಿತ್ರನಟ ರಾಜ್ ಕಪೂರ್ (1924-1988) ಹುಟ್ಟಿದ ದಿನ.
1900: ಮ್ಯಾಕ್ಸ್ ಪ್ಲಾಂಕ್ ತನ್ನ `ಕ್ವಾಂಟಮ್ ಥಿಯರಿ'ಯನ್ನು ಜರ್ಮನ್ ಫಿಸಿಕ್ಸ್ ಸೊಸೈಟಿಯಲ್ಲಿ ಪ್ರಕಟಿಸಿದರು.
1503: ನಾಸ್ಟ್ರಡಾಮಸ್ ಎಂದೇ ಖ್ಯಾತಿ ಪಡೆದ ಫ್ರೆಂಚ್ ಕಾಲಜ್ಞಾನಿ ಮೈಕೆಲ್ ಡೆ ನಾಟ್ರೆಡೇಮ್ (1503-1566) ಜನಿಸಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment