Thursday, January 29, 2009

ಸಮುದ್ರ ಮಥನ 20: ಮಾಹಿತಿ ನಿರ್ವಹಣೆ

ಸಮುದ್ರ ಮಥನ 20: ಮಾಹಿತಿ ನಿರ್ವಹಣೆ

ಶ್ರೀಕೃಷ್ಣ ಸಾಂದೀಪನೀ ಮುನಿಗಳಿಂದ ಅರವತ್ತನಾಲ್ಕು ದಿನಗಳಲ್ಲಿ ಅರವತ್ತನಾಲ್ಕು ವಿದ್ಯೆಗಳನ್ನೂ (ಅಷ್ಟೂ ವಿದ್ಯೆಗಳನ್ನು ಒಳಗೊಂಡಿದೆ) ಕಲಿತ ಎಂಬ ಮಹಾಭಾರತದ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಅದು ಹೇಗೆ ಸಾಧ್ಯ ಎಂಬುದರ ಕುರಿತು ಚಿಂತನೆ ನಡೆಸಿ. ಉತ್ತರಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ.

 ಮನುಷ್ಯ ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು. ಅದಕ್ಕೆ ಸಮರ್ಥ ಗುರುವಿರಬೇಕು. ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾವಂತ ಎಂದು ಎನಿಸಿಕೊಳ್ಳಲು ಹೆಚ್ಹೆಚ್ಚು ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕು ಎಂಬ ಕಲ್ಪನೆ ಗಟ್ಟಿಯಾಗಿದೆ. ಹೀಗೇ ನೋಡಿದರೆ ಎಲ್ಲರೂ ಹೇಳುತ್ತಿರುವುದು ಹೌದು ಎನಿಸುತ್ತದೆ. ಸ್ವಲ್ಪ ಯೋಚನೆ ಮಾಡಿ. ನಮ್ಮ ವಿದ್ಯಾರ್ಜನೆ 
ಕೇವಲ ಮಾಹಿತಿ ಸಂಗ್ರಹಕ್ಕಷ್ಟೇ ಸೀಮಿತ ಎಂದಾದರೆ ಅದಕ್ಕೆ ಕೊನೆ, ಮೊದಲಿದೆಯೇ? ಕ್ಷಣಕ್ಷಣಕ್ಕೂ ಚಿತ್ರವಿಚಿತ್ರ ಸಂಶೋಧನೆಗಳು, ಹೊಸಹೊಸ ಘಟನೆಗಳು, ನವನವೀನ ಹೊಳಹುಗಳು, ಅನಿರೀಕ್ಷಿತ ಅವಘಡಗಳು ಹೀಗೇ ಏನೇನೋ ಜರುಗುತ್ತಿರುತ್ತದೆ. ಅದನ್ನೆಲ್ಲ ನಮ್ಮ ಬುದ್ಧಿಯಲ್ಲಿ ದಾಖಲಿಸಿಕೊಂಡರೆ ಹುಚ್ಚು ಹಿಡಿಯುವುದಂತೂ ಖಂಡಿತ. 

ಒಂದೊಮ್ಮೆ ಹಲವಾರು ಸಂಗತಿಗಳನ್ನು ನಮ್ಮ ಬುದ್ಧಿಯಲ್ಲಿ ದಾಖಲಿಸಿಕೊಳ್ಳಲು ಸಾಧ್ಯವಾಯಿತು ಎಂದೇ ಇಟ್ಟುಕೊಳ್ಳಿ. ದಾಖಲಿಸಿಕೊಂಡವರು, ತಮ್ಮ ಸಂಗ್ರಹವನ್ನು ಇನ್ನೊಬ್ಬರಿಗೆ ಪರಿಚಯಿಸಿ, ತಮ್ಮ ಹಿರಿಮೆಯನ್ನು ಮೆರೆಯಲು, ಸಂಗತಿಗಳ ಪ್ರಸ್ತಾಪಕ್ಕಾಗಿ ಅನಗತ್ಯ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಕ್ರಮೇಣ ಅದು ಅವರ ಚಾಳಿಯಾಗುತ್ತದೆ.

ಒಬ್ಬ ಸಾಮಾನ್ಯನೂ ಯಾರೊಬ್ಬರೂ ಇಂತಹ ಕ್ಷುದ್ರರಾಗಬಾರದು ಎಂದು ಆಶಿಸುತ್ತಾನೆ. ಅದು ಯಾವುದೇ ಪೂರ್ವಾಗ್ರಹಗಳ ನಿಮಿತ್ತವಾಗಿ ತಳೆದ ಆಶಯವಾಗಿರುವುದಿಲ್ಲ. ಕೇವಲ ನೆಮ್ಮದಿಯ ಹಾರೈಕೆಯಿಂದ ಆಶಿಸಿದ್ದಾಗಿರುತ್ತದೆ.

ಸನಾತನ ದೃಷ್ಟಿ ಈ ಮನೋಭಾವದ ಮೇಲೆ ಬೆಳಕು ಚೆಲ್ಲುತ್ತಾ 'ಆಳವಾಗಿ ನೋಡುವುದನ್ನು ಕಲಿಯಬೇಕು. ಆಮೂಲಾಗ್ರವಾಗಿ ಗ್ರಹಿಸಬೇಕು. ಒಮ್ಮೆ ಗ್ರಹಿಸಿದ್ದರ ಬಗೆಗೆ ಸಂದೇಹ ಉಳಿಯದಂತೆ ಗ್ರಹಿಸಬೇಕು. ಹೀಗಾಗಬೇಕಾದರೆ ಬುದ್ಧಿಯಲ್ಲಿ ಸತ್ವ ಗುಣದ ಜಾಗೃತಿ ಆಗಬೇಕು. ಅದರ ಜಾಗೃತಿ ಆದರೆ ತಮೋ ಗುಣದ ಕಗ್ಗತ್ತಲು ಕಳೆಯುತ್ತದೆ. ರಜೋಗುಣದ ಚಾಂಚಲ್ಯ ದೂರಾಗುತ್ತದೆ. ವಿಷಯದಿಂದ ವಿಷಯಕ್ಕೆ ಹಾರುವ ಚಾಪಲ್ಯ ಕಡಿಮೆಯಾಗುತ್ತದೆ. ಕೂಲಂಕಷ ಗ್ರಹಿಕೆಯ ಹವ್ಯಾಸ ಬೆಳೆಯುತ್ತದೆ' ಎಂದು ವಿಸ್ತಾರವಾಗಿ ಎಷ್ಟೆಷ್ಟೋ ಉದಾಹರಣೆಗಳೊಂದಿಗೆ ಸಂದೇಶವನ್ನು ಪ್ರವಹಿಸುತ್ತದೆ.

ಆದ್ದರಿಂದ ಎಗ್ಗಿಲ್ಲದ ಮಾಹಿತಿ ಸಂಗ್ರಹ ಅಷ್ಟೇ ಅಲ್ಲ. ಮಾಹಿತಿ ನಿರ್ವಹಣೆಯೂ ಬೇಕು. ಅದಕ್ಕೆ ಸತ್ವ ಗುಣದ ಜಾಗೃತಿ ಆಗಬೇಕು. ಅದಕ್ಕಾಗಿ, ಗುರುವನ್ನು ಅರಸಿ ಮಾರ್ಗವನ್ನು ಕಂಡುಕೊಳ್ಳಬೇಕು.

ಮಾಹಿತಿಯ ನಾಡಿಯನ್ನು ಹಿಡಿಯಲು ಬಂದರೆ ಮಾಹಿತಿಯ ಒಂದಕ್ಷರ, ಒಂದು ಪದ, ಒಂದು ವಾಕ್ಯ ಎಂಬಂತಹ ಸಣ್ಣಸಣ್ಣ ತುಣುಕುಗಳಿಂದ ಮಾಹಿತಿಯ ಹರವಿನ ಜಾಡನ್ನು ಹಿಡಿಯಬಹುದು.

ಶ್ರೀಕೃಷ್ಣ ಸಾಂದೀಪನೀ ಮುನಿಗಳಿಂದ ಅರವತ್ತನಾಲ್ಕು ದಿನಗಳಲ್ಲಿ ಅರವತ್ತನಾಲ್ಕು ವಿದ್ಯೆಗಳನ್ನೂ (ಅಷ್ಟೂ ವಿದ್ಯೆಗಳನ್ನು ಒಳಗೊಂಡಿದೆ) ಕಲಿತ ಎಂಬ ಮಹಾಭಾರತದ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಅದು ಹೇಗೆ ಸಾಧ್ಯ ಎಂಬುದರ ಕುರಿತು ಚಿಂತನೆ ನಡೆಸಿ. ಉತ್ತರಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ. ಉತ್ತರಗಳ ಹೊಳಹು ಸಿಗಲೆಂದು ಹಾರೈಸುತ್ತೇವೆ. ಎಲ್ಲರಿಗೂ ಒಳ್ಳೆಯದಾಗಲಿ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

ಶ್ರೀರಾಮಚಂದ್ರಾಪುರಮಠ

No comments:

Advertisement