Monday, January 5, 2009

ಇಂದಿನ ಇತಿಹಾಸ History Today ಜನವರಿ 05

ಇಂದಿನ ಇತಿಹಾಸ

ಜನವರಿ 5

 ಕನ್ನಡದ ಧೀಮಂತ ನಟ ವಜ್ರಮುನಿ (62) ಹೃದಯಾಘಾತದಿಂದ ಈದಿನ ಬೆಳಗ್ಗೆ 5.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಹತ್ತು ವರ್ಷಗಳಿಂದ ತೀವ್ರ ಅನಾರೋಗ್ಯಪೀಡಿತರಾಗಿದ್ದ ವಜ್ರಮುನಿ ಕೆಲ ವರ್ಷಗಳ ಹಿಂದೆ ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗಿದ್ದರು. 1944ರ ಮೇ 10ರಂದು ಬೆಂಗಳೂರಿನ ಕನಕಪಾಳ್ಯದಲ್ಲಿ ಜನಿಸಿದ ವಜ್ರಮುನಿ, ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 

2008: ದಕ್ಕಣದ ವಿಶಾಲ ಪ್ರಸ್ಥಭೂಮಿಯು ಭೂಮಿಗೆ ಬೆದರಿಕೆ ಒಡ್ಡುತ್ತಿರುವ ಜಗತಾಪ ಏರಿಕೆಯ (ಜಾಗತಿಕ ತಾಪಮಾನ) ಪೆಡಂಭೂತಕ್ಕೆ ಕಾರಣವಾಗಿರುವ ಅಂಗಾರಾಮ್ಲ (ಕಾರ್ಬನ್ ಡೈ  ಆಕ್ಸೈಡ್) ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಸಹಕಾರಿ  ಆಗಬಲ್ಲುದು ಎಂಬುದಾಗಿ ಭಾರತೀಯ  ಭೂಗರ್ಭ ತಜ್ಞರು ಬಹಿರಂಗಪಡಿಸಿದರು. ದಕ್ಕಣದ ಪ್ರಸ್ಥಭೂಮಿಯಲ್ಲಿ ಹರಡಿರುವ ಬಸಾಲ್ಟ್ ಶಿಲೆಗಳು ಅಂಗಾರಾಮ್ಲ ಇಲ್ಲವೇ ಇಂಗಾಲದ ಡೈ  ಆಕ್ಸೈಡನ್ನು ಕಾರ್ಬೋನೇಟುಗಳಾಗಿ ಅಥವಾ ಕಾಲಾಂತರದಲ್ಲಿ ವಿವಿಧ ಬಗೆಯ  ಉಪ್ಪಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳುತ್ತವೆ ಎಂಬುದನ್ನು ತಾವು ಪತ್ತೆ ಹಚ್ಚಿರುವುದಾಗಿ ಅವರು ಪ್ರಕಟಿಸಿದರು. ಕಾರ್ಖಾನೆಗಳಿಂದ ಹೊರಬರುವ ಈ ಅಂಗಾರಾಮ್ಲವನ್ನು ಕೇಂದ್ರ ಮತ್ತು  ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ  ಹರಡಿರುವ ಅಂದಾಜು 5 ಲಕ್ಷ ಚದರ ಕಿ.ಮೀ. ವ್ಯಾಪ್ತಿಯ ಪ್ರಸ್ಥಭೂಮಿಯ ಶಿಲಾ ಪದರಗಳ ಎಡೆಗೆ ಸೇರಿಸಿದರೆ ಸಾಕು ಜಗತಾಪ ಏರಿಕೆಯ ಬಹುದೊಡ್ಡ ಸಮಸ್ಯೆಯನ್ನು  ನಿವಾರಿಸಿಕೊಳ್ಳಬಹುದು ಎಂದು ಈ ವಿಜ್ಞಾನಿಗಳು ನಂಬಿಕೆ ವ್ಯಕ್ತ ಪಡಿಸಿದರು. ಹೈದರಾಬಾದ್ ಮೂಲದ ರಾಷ್ಟ್ರೀಯ ಭೂಭೌತ ಸಂಶೋಧನಾ ಸಂಸ್ಥೆಯ (ಎನ್ ಜಿ ಆರ್ ಐ) ನಿರ್ದೇಶಕ ವಿ.ಪಿ. ದಿಮ್ರಿ ಅವರು ವಿಶಾಖಪಟ್ಟಣದಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಈ ವಿಚಾರವನ್ನು  ಪ್ರಕಟಿಸಿದರು. ಎನ್ ಜಿ ಆರ್ ಐ ವಿಜ್ಞಾನಿಗಳು ಗುಜರಾತಿನ ಕಛ್ ಪ್ರದೇಶ,  ಮಧ್ಯಪ್ರದೇಶದಲ್ಲಿನ ಜಬಲ್ ಪುರ, ಕರ್ನಾಟಕದ ಬೆಳಗಾವಿ ಮತ್ತು ಮಹಾರಾಷ್ಟ್ರದ ಇಗತಪುರಿ-ಈ ನಾಲ್ಕು ಸ್ಥಳಗಳಲ್ಲಿ ಬಸಾಲ್ಟ್ ಶಿಲಾ ರಚನೆಯನ್ನು  ಅಧ್ಯಯನ ಮಾಡಿದ್ದರು. `ಈ ಅಧ್ಯಯನದ ಫಲಿತಾಂಶಗಳು ಪ್ರೋತ್ಸಾಹಕರವಾಗಿವೆ. ಮ್ಯಾಗ್ನೇಸಿಯಂ ಮತ್ತು  ಕ್ಯಾಲ್ಸಿಯಂನ ಹಾನಿರಹಿತ ಕಾರ್ಬೋನೇಟುಗಳಾಗಿ  ಅಂಗಾರಾಮ್ಲವು ಪರಿವರ್ತನೆಗೊಂಡ್ದದನ್ನು  ನಾವು ಪತ್ತೆ ಹಚ್ಚಿದ್ದೇವೆ' ಎಂದು ದಿಮ್ರಿ ಹೇಳಿದರು. ಈ ಪ್ರದೇಶವು ಅತ್ಯಂತ ವಿಶಾಲವಾದ್ದರಿಂದ ದಕ್ಕಣದ ಪ್ರಸ್ಥಭೂಮಿಯ ಇನ್ನೂ 20 ಸ್ಥಳಗಳಲ್ಲಿ ವಿಸ್ತೃತ ಸಮೀಕ್ಷೆ ನಡೆಸಲು ತಾವು ಯೋಜಿಸಿರುವುದಾಗಿ ಭೂಗರ್ಭ ತಜ್ಞರು ಹೇಳಿದರು. ಭೂಮಿಗೆ ಅಂಗಾರಾಮ್ಲವನ್ನು  ಸೇರಿಸುವ ಈ ಪ್ರಕ್ರಿಯೆಯನ್ನು `ಅಂಗಾರಾಮ್ಲ ಪೂರಣ' (ಕಾರ್ಬನ್ ಸೆಕ್ಯುಯೆಸ್ಟ್ರೇಷನ್) ಎಂದು ಕರೆಯಲಾಗುತ್ತದೆ. ಅಮೆರಿಕದ ಇಡಾಹೊ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಇಂತಹುದೇ ಅಧ್ಯಯನ ನಡೆಸಲಾಗಿದೆ. ಇಲ್ಲೂ 85,000 ಚದರ ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಬಸಾಲ್ಟ್ ಶಿಲೆಗಳಿದ್ದು ಈ ಪ್ರದೇಶವು 100 ಶತಕೋಟಿ (100 ಬಿಲಿಯನ್) ಟನ್ನುಗಳಷ್ಟು  ಅಂಗಾರಾಮ್ಲವನ್ನು  ದಾಸ್ತಾನು ಮಾಡಬಹುದು ಎಂಬುದು ಬೆಳಕಿಗೆ ಬಂದಿದೆ.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಯ ತನಿಖೆಯನ್ನು ತ್ವರಿತಗೊಳಿಸುವಂತೆ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಹಂಗಾಮೀ  ಪ್ರಧಾನಿ  ಮೊಹಮ್ಮದ್ ಮಿಯಾನ್ ಸೂಮ್ರೋ ಅವರಿಗೆ ನಿರ್ದೇಶಿಸಿದರು. ತನಿಖೆಯನ್ನು  ಆದಷ್ಟೂ ಬೇಗ ಪೂರ್ಣಗೊಳಿಸಲು ಸ್ಕಾಟ್ಲೆಂಡ್ ಯಾರ್ಡ್ ತಂಡಕ್ಕೆ ಪೂರ್ಣ ಸಹಕಾರ ನೀಡುವಂತೆ ಸೂಮ್ರೋ ಅವರಿಗೆ ಪರ್ವೇಜ್ ಮುಷರಫ್ ಸೂಚಿಸಿದ್ದಾರೆ ಎಂದು `ಡಾನ್' ಪತ್ರಿಕೆ ವರದಿ  ಮಾಡಿತು.

2008: ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಮೇಲುಕೋಟೆಯ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ನಸುಕಿನ ಜಾವ ದೇವರನ್ನು ಅಲಂಕರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಯಿತು. ದೇವಸ್ಥಾನದ ಹಿಂಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಅದಕ್ಕೆ ಹಾಕಲಾಗಿದ್ದ ಕಬ್ಬಿಣದ ಸರಪಳಿಯನ್ನು ತೆಗೆದ ದುಷ್ಕರ್ಮಿಗಳು ಉಳಿದ ಮೂರು ದ್ವಾರಗಳಿಗೆ ಹಾಕಿದ್ದ ಅಷ್ಟೇನೂ ಭದ್ರವಲ್ಲದ ಬೀಗಗಳನ್ನೂ ಸುಲಭವಾಗಿ ತೆಗೆದು ಈ ಕಳವು ಕೃತ್ಯ ಎಸಗಿದರು. ದುಷ್ಕರ್ಮಿಗಳು ಗರ್ಭಗುಡಿ ಪ್ರವೇಶಿಸಿ ಶಂಖಚಕ್ರ, ಪೀಠ, ಪಾದುಕೆ, ಅಡ್ಡಪಟ್ಟಿ, ಕಿರೀಟ, ಹಾರಗಳೂ ಸೇರಿ ದೇವರಿಗೆ ಹಾಕಿದ್ದ ಎಲ್ಲ ಆಭರಣಗಳನ್ನು ಹೊತ್ತೊಯ್ದರು. ಕಳುವಾದ ಆಭರಣಗಳ ಮೌಲ್ಯ 6 ರಿಂದ 7 ಲಕ್ಷ ರೂಪಾಯಿಗಳು.

2008: ದೇಶಿ ಮತ್ತು ವಿದೇಶಿ ಬ್ಯಾಂಕುಗಳ ನಕಲಿ ಕ್ರೆಡಿಟ್ ಕಾರ್ಡುಗಳನ್ನು ಬಳಸಿ ಚಿನ್ನ ಖರೀದಿಸಿ ನಂತರ ಅದನ್ನು ಮಾರಾಟ ಮಾಡಿ ಗಳಿಸಿದ ಹಣವನ್ನು ಎಲ್ ಟಿ ಟಿ ಇ ಉಗ್ರಗಾಮಿಗಳಿಗೆ ಪೂರೈಕೆ ಮಾಡುವ ಜಾಲವೊಂದರ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದ ಶ್ರೀಲಂಕಾದ ಉತ್ತರ ಜಾಫ್ನಾ ನಿವಾಸಿಗಳಾದ ಬಾಲರೂಬನ್ (22) ಮತ್ತು ನಲ್ಲತಂಬಿ ಜಯಶೀಲನ್ (25) ಎಂಬ ಇಬ್ಬರು ಯುವಕರನ್ನು ಮಂಗಳೂರಿನ ಬಂದರು ಪೊಲೀಸರು ಬಂಧಿಸಿದರು.

2008: ಕರ್ನಾಟಕ ಸರ್ಕಾರದ `ಭಾಗ್ಯಲಕ್ಷ್ಮಿ' ಯೋಜನೆಯಡಿ ನೋಂದಾಯಿಸಲಾದ ಮಕ್ಕಳಿಗೆ ಉತ್ತಮ ಆರೋಗ್ಯ, ಶಿಕ್ಷಣ, ಪೋಷಣೆ, ಇತರೆ ಸೌಲಭ್ಯ ನೀಡಿ ಆ ಮಕ್ಕಳು ಸಾಗಿ ಬಂದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವ ಆನ್ ಲೈನ್ ವೆಬ್ ಸೈಟ್ ಬೆಂಗಳೂರಿನಲ್ಲಿ ಆರಂಭವಾಯಿತು. ಬನಶಂಕರಿ 3ನೇ ಹಂತದಲ್ಲಿರುವ ಎನ್ ಸಿ ಇ ಆರ್ ಟಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಅವರು ವೆಬ್ ಸೈಟಿಗೆ ಚಾಲನೆ ನೀಡಿದರು. 

2007: ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಸೇರಿದಂತೆ ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವ ಪಾಕಿಸ್ಥಾನಿ ಉಗ್ರರ ಸಂಚು ಸಂಬಂಧ ಇಮ್ರಾನ್ ಯಾನೆ ಬಿಲಾಲ್ (32) ಎಂಬ ಶಂಕಿತ ಭಯೋತ್ಪಾದಕನನ್ನು ಬೆಂಗಳೂರಿನ ಯಶವಂತಪುರದ ಗೊರಗುಂಟೆ ಪಾಳ್ಯದಲ್ಲಿ ಪೊಲೀಸರು ಬಂಧಿಸಿದರು.

2007: ಅಮೆರಿಕ ಕಾಂಗ್ರೆಸ್ಸಿನ ಮೊದಲ ಮಹಿಳಾ ಸ್ಪೀಕರ್ ಆಗಿ ಕ್ಯಾಲಿಫೋರ್ನಿಯಾ ನಿವಾಸಿ ಡೆಮಾಕ್ರಾಟ್ ಪಕ್ಷದ ನ್ಯಾನ್ಸಿ ಪೆಲೋಸಿ ಆಯ್ಕೆಯಾದರು. 435 ಸದಸ್ಯಬಲದ ಸದನದಲ್ಲಿ ನ್ಯಾನ್ಸಿ 223 ಮತಗಳನ್ನು ಪಡೆದು ವಿಜಯ ಸಾಧಿಸುವ ಮೂಲಕ 12 ವರ್ಷಗಳಿಂದ ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಸ್ಪೀಕರ್ ಸ್ಥಾನವನ್ನು ತಮ್ಮ ಪಕ್ಷಕ್ಕೆ ದಕ್ಕಿಸಿಕೊಟ್ಟ ಕೀರ್ತಿಗೆ ಭಾಜನರಾದರು.

2007: ಕನ್ನಡ ರಂಗಭೂಮಿಗೆ ರಾಷ್ಟ್ರೀಯ ರಂಗಭೂಮಿ ಸ್ಥಾನ ನೀಡುವಂತೆ ಆಗ್ರಹಿಸಿ ಅಭಿವ್ಯಕ್ತಿ-ಅಭಿಯಾನ ನಡೆಸಿದ ಚಳವಳಿಯ ಅಂಗವಾಗಿ ಹಿರಿಯ ರಂಗಕರ್ಮಿ ಪ್ರಸನ್ನ ಅವರು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು.

2007: ತೆಹ್ರಿ ಅಧಿಪತ್ಯದ ಆರನೆಯ ಹಾಗೂ ಕೊನೆಯ ದೊರೆ ಹಾಗೂ ಪವಿತ್ರ ಬದರಿನಾಥ ದೇವಾಲಯದ ಸಂರಕ್ಷಕ ಮಹಾರಾಜ ಮನವೇಂದ್ರ ಶಹಾ (86) ಅವರು ಈದಿನ ಸಂಜೆ ನವದೆಹಲಿಯ ಆಸ್ಪತ್ರೆಯೊಂದರಲ್ಲಿ ದೀರ್ಘಕಾಲದ ಅಸ್ವಸ್ಥತೆಯ ಬಳಿಕ ನಿಧನರಾದರು. ಭಾಗೀರಥಿ ಜಲಾಶಯದ ನೀರಿನ ಅಡಿಯಲ್ಲಿ ಹಳೆಯ ತೆಹ್ರಿ ಪಟ್ಟಣ ಮುಳುಗಡೆಯಾದುದಕ್ಕಾಗಿ ಕಳೆದ ಕೆಲ ಕಾಲದಿಂದ ಅವರು ತಲೆ ಕೆಡಿಸಿಕೊಂಡಿದ್ದರು. ಈ ಪಟ್ಟಣವನ್ನು 1815ರಲ್ಲಿ ಶಹಾ ಅವರ ಮುತ್ತಜ್ಜನ ಅಜ್ಜನ ಅಜ್ಜ ನಿರ್ಮಿಸಿದ್ದರು. ಭಗವಾನ್ ವಿಷ್ಣುವಿನ ಅವತಾರ ಎಂಬ ನಂಬಿಕೆಯ ಕಾರಣ `ಬೊಳಂದ ಬದ್ರಿ' ಎಂದೇ ಜನಪ್ರಿಯರಾಗಿದ್ದ ಶಹಾ ಗಢವಾಲ್ ಪ್ರದೇಶದ ಜನತೆಯ ಅಪೂರ್ವ ಪ್ರೀತಿಗೆ ಪಾತ್ರರಾಗಿದ್ದವರು. ಗಢವಾಲ್ ಕ್ಷೇತ್ರದಿಂದ ಅವರು ಲೋಕಸಭೆಗೆ ಎಂಟು ಸಲ ಗೆದ್ದು ದಾಖಲೆ ನಿರ್ಮಿಸಿದ್ದರು. 1957ರ್ಲಲಿ ರಾಜಕೀಯ ಜೀವನಕ್ಕೆ ಅಡಿ ಇಟ್ಟ ಬಳಿಕ ಒಂದೇ ಒಂದು ಸಲ 1971ರಲ್ಲಿ ಅವರು ಸಾಮಾಜಿಕ ಕಾರ್ಯಕರ್ತ ಪರಿಪೂರ್ಣಾನಂದ ಪೈನುಲಿ ಅವರ ಎದುರಲ್ಲಿ ಪರಾಭವ ಅನುಭವಿಸಿದ್ದರು. ಪ್ರತಿಸಲ ಗೆದ್ದಾಗಲೂ ಭಾರೀ ಅಂತರದಿಂದ ವಿಜಯಿಯಾಗುತ್ತಿದ್ದುದು ಅವರ ಜನಪ್ರಿಯತೆಯ ದ್ಯೋತಕವಾಗಿತ್ತು. 1970ರಿಂದ ಅವರು ಬಿಜೆಪಿಯಲ್ಲಿ ಇದ್ದರು.  1948ರಲ್ಲಿ ಗೃಹ ಸಚಿವ ವಲ್ಲಭ ಭಾಯಿ ಪಟೇಲ್ ಅವರು ಭಾರತದೊಂದಿಗೆ ವಿಲೀನಗೊಳ್ಳುವ ಒಪ್ಪಂದಕ್ಕೆ ಸಹಿ ಹಾಕುವಂತೆ ಕರೆ ಕಳುಹಿಸಿದಾಗ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ಹಿಡಿಯಷ್ಟು ಭಾರತೀಯ ದೊರೆಗಳಲ್ಲಿ ಶಹಾ ಮೊದಲಿಗರಾಗಿದ್ದರು. ಈ ಒಪ್ಪಂದದಿಂದ ಶಹಾ ಅವರ ಒಂದೂವರೆ ವರ್ಷಗಳ ಸಂಕ್ಷಿಪ್ತ ರಾಜ್ಯಭಾರ ಕೊನೆಗೊಂಡಿತ್ತು. ಶಹಾ ನಿಧನದ ಕಾರಣ ಅವರ ಪುತ್ರ ಮನುಜೇಂದ್ರ ಶಹಾ ಅವರನ್ನು ಬದರಿನಾಥ ದೇವಾಲಯದ ನೂತನ ಸಂರಕ್ಷಕರನ್ನಾಗಿ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದವು.

2006: ಕನ್ನಡದ ಧೀಮಂತ ನಟ ವಜ್ರಮುನಿ (62) ಹೃದಯಾಘಾತದಿಂದ ಈದಿನ ಬೆಳಗ್ಗೆ 5.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಹತ್ತು ವರ್ಷಗಳಿಂದ ತೀವ್ರ ಅನಾರೋಗ್ಯಪೀಡಿತರಾಗಿದ್ದ ವಜ್ರಮುನಿ ಕೆಲ ವರ್ಷಗಳ ಹಿಂದೆ ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗಿದ್ದರು. 1944ರ ಮೇ 10ರಂದು ಬೆಂಗಳೂರಿನ ಕನಕಪಾಳ್ಯದಲ್ಲಿ ಜನಿಸಿದ ವಜ್ರಮುನಿ, ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ತಮ್ಮದೇ ನಾಟಕ ತಂಡ ರಚಿಸಿಕೊಂಡು ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಆಡುತ್ತಿದ್ದ ವಜ್ರಮುನಿ, ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಚೊಚ್ಚಲ ಹೆಜ್ಜೆ ಇರಿಸಿದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕರಾಗಿ ಮಿಂಚಿದ್ದ ವಜ್ರಮುನಿ, ಚಿತ್ರನಿರ್ಮಾಣಕ್ಕೂ ಇಳಿದಿದ್ದರು. ಗಂಡಭೇರುಂಡ, ತಾಯಿಗಿಂತ ದೇವರಿಲ್ಲ, ಹಸಿದ ಹೆಬ್ಬುಲಿ, ಬ್ರಹ್ಮಾಸ್ತ್ರ, ರಣಭೇರಿ ಇವರು ನಿರ್ಮಿಸಿದ ಚಿತ್ರಗಳು. ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅವರಿಗೆ ಬಂದಿದ್ದವು. 

2006: ಸೌದಿ ಅರೇಬಿಯಾದ ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾದಲ್ಲಿ ಕಟ್ಟಡವೊಂದು ಕುಸಿದ ಪರಿಣಾಮವಾಗಿ 70 ಮಂದಿ ಮೃತರಾದರು. 120ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೆಕ್ಕಾದ ಪ್ರಮುಖ ಮಸೀದಿಗೆ ಅತಿ ಸಮೀಪದಲ್ಲೇ ಈ ಘಟನೆ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲೇ ಆ ಕಟ್ಟಡ ಕುಸಿದು ಬಿತ್ತು.       

2006: ಟಿ.ಕೆ. ರಾವ್ ಎಂದೇ ಪತ್ರಿಕೆ ಹಾಗೂ ಕಲಾ ವಲಯದಲ್ಲಿ ಪರಿಚಿತರಾಗಿದ್ದ ಚಿತ್ರ ಕಲಾವಿದ ತಾಡ ಕೃಷ್ಣರಾವ್ (72) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಪ್ರಭ, ಉದಯವಾಣಿ, ತರಂಗ, ತುಷಾರ, ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ, ಕಾಮಧೇನು ಮುಂತಾದ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದಿದ್ದ ರಾವ್ ಬರಹಗಾರ, ರಂಗನಟರೂ ಆಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿತ್ತು.

2006: ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಟೈಪಿಂಗ್ ದೋಷದಿಂದಾಗಿ 185 ರೂಪಾಯಿಗಳ ಷೇರಿನ ಬೆಲೆ 25 ಪೈಸೆ ಎಂದು ನಮೂದಾಗಿ, ಈ ಕ್ಷಣದಲ್ಲೇ 4.04 ಲಕ್ಷ ಷೇರುಗಳು ವಿಕ್ರಯವಾಗಿ ಬಿಟ್ಟ ಪರಿಣಾಮವಾಗಿ 12 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಹೂಡಿಕೆದಾರರು ಕಳೆದುಕೊಂಡರು. ಮಧ್ಯಾಹ್ನ 2.24ಕ್ಕೆ ಈ ಘಟನೆ ಘಟಿಸಿತು.

1999: ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟಿನ 4ನೇ ದಿನದ ಪಂದ್ಯದಲ್ಲಿ ತನ್ನ 157ನೇ ಕ್ಯಾಚ್ ಮೂಲಕ ಆಸ್ಟ್ರೇಲಿಯಾದ ಕ್ಯಾಪ್ಟನ್ ಮಾರ್ಕ್ ಟೇಲರ್ ಅವರು ಆಲನ್ ಬಾರ್ಡರ್ ಅವರ `ಕ್ಯಾಚ್ ದಾಖಲೆ'ಯನ್ನು ಮುರಿದರು.

1974: ಹಿಂದೂಸ್ಥಾನಿ ಸಂಗೀತಗಾರ್ತಿ ಗೀತಾ ಎಸ್. ಹೆಬ್ಳೀಕರ್ ಅವರು ದತ್ತಾತ್ರೇಯ ಮಂಡಿಗೇರಿ- ಕಲಾವತಿ ಮಂಡಿಗೇರಿ ದಂಪತಿಯ ಮಗಳಾಗಿ ಧಾರವಾಡ ಜಿಲ್ಲೆ ರೋಣ ತಾಲ್ಲೂಕಿನ ಅಸೂಟಿ ಗ್ರಾಮದಲ್ಲಿ ಜನಿಸಿದರು.

1971: ಮೆಲ್ಬೋರ್ನಿನಲ್ಲಿ ನಡೆದ ಮೊತ್ತ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡನ್ನು 5 ವಿಕೆಟ್ ಅಂತರದಲ್ಲಿ ಸೋಲಿಸಿತು.

1966: ಭಾರತೀಯ ಸಂಗೀತ ಸಂಯೋಜಕ ಎ.ಆರ್. ರಹಮಾನ್ ಹುಟ್ಟಿದ ದಿನ.

1963: ಕಲಾವಿದೆ ರಂಗಶ್ರೀ ರಂಗಸ್ವಾಮಿ ಜನನ.

1955: ತೃಣಮೂಲ ಕಾಂಗ್ರೆಸ್ ಸ್ಥಾಪಕಿ ಮಮತಾ ಬ್ಯಾನರ್ಜಿ ಹುಟ್ಟದ ದಿನ.

1941: ಭಾರತದ ಅತ್ಯಂತ ಕಿರಿಯ ಕ್ರಿಕೆಟ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮನ್ಸೂರ್ ಅಲಿಖಾನ್ ನವಾಬ್ ಆಫ್ ಪಟೌಡಿ ಜ್ಯೂನಿಯರ್ ಹುಟ್ಟಿದರು. 1952ರಲ್ಲಿ ಇದೇ ದಿನ ಅವರ ತಂದೆ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ಇಫ್ತಿಖರ್ ಅಲಿ ಖಾನ್ ನವಾಬ್ ಆಫ್ ಪಟೌಡಿ ಸೀನಿಯರ್ ಪೊಲೋ ಆಡುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು.

1928: ಕಲಾವಿದ ಶಿವಸ್ವಾಮಿ ಮಂದೇನಹಳ್ಳಿ ಜನನ.

1920: ಕಲಾವಿದ ಎಂ.ಎಸ್. ನಟರಾಜ್ ಜನನ.

1919: `ನಾಝಿ ಪಾರ್ಟಿ' ಎಂದೇ ಖ್ಯಾತಿ ಪಡೆದ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯನ್ನು ಆಂಟನ್ ಡ್ರೆಕ್ಸ್ಲರ್ ಎಂಬ ವ್ಯಕ್ತಿ ಸ್ಥಾಪಿಸಿದ. ಆಗ ಪಕ್ಷಕ್ಕೆ ಇಡಲಾಗಿದ್ದ ಹೆಸರು: ಜರ್ಮನ್ ವರ್ಕರ್ಸ್ ಪಾರ್ಟಿ. ಆ ವರ್ಷ ನಡೆದ ಪಕ್ಷದ ಒಂದು ಸಭೆಗೆ ಹಾಜರಾದ ಅಡಾಲ್ಫ್ ಹಿಟ್ಲರ್ ತನ್ನ ವಾಕ್ ಚತುರತೆಯಿಂದ ಪಕ್ಷದ ಮೇಲೆ ಹಿಡಿತ ಸಾಧಿಸಿದ. 1920-21ರ ವೇಳೆಗೆ ಪಕ್ಷದ ಎಲ್ಲನಾಯಕರನ್ನು ಉಚ್ಚಾಟಿಸಿದ ಆತ ಪಕ್ಷಕ್ಕೆ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ಸ್ ಪಾರ್ಟಿ ಎಂಬುದಾಗಿ ಪುನರ್ ನಾಮಕರಣ ಮಾಡಿದ.

1893: ಅಮೆರಿಕದಲ್ಲಿ `ಕ್ರಿಯಾ ಯೋಗ'ವನ್ನು ಪ್ರಚುರ ಪಡಿಸಿದ ಭಾರತೀಯ ಆಧ್ಯಾತ್ಮಿಕ ಧುರೀಣ ಪರಮಹಂಸ ಯೋಗಾನಂದ (1893-1952) ಜನ್ಮದಿನ.

1869: ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥರು (5-1-1869ರಿಂದ 22-4-1942) ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಗಳಗನಾಥ ಎಂಬ ಹಳ್ಳಿಯಲ್ಲಿ ಹುಟ್ಟಿದರು. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆ. ಕಮಲ ಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ ಮುಂತಾದ ಕಾದಂಬರಿ, ಗಿರಿಜಾ ಕಲ್ಯಾಣ, ಉತ್ತರ ರಾಮ ಚರಿತ್ರೆ, ಚಿದಂಬರ ಚರಿತ್ರೆ, ಸತ್ಪುರುಷರ ಚರಿತ್ರೆಗಳು, ನಿಬಂಧ- ಪ್ರಬಂಧಗಳ ರಚನೆ - ಪ್ರಕಟಣೆ. 74ನೇ ವಯಸ್ಸಿನಲ್ಲಿ ಕ್ಯಾನ್ಸರಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement