ಇಂದಿನ ಇತಿಹಾಸ
ಜನವರಿ 27
ಸಹಸ್ರಮಾನದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಲೀಜನ್ ಡಿ' ಆನರ್'ನ್ನು ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
2008: ಪ್ರಸ್ತುತ ಸಾಲಿನ ಪದ್ಮಶ್ರೀ ವಿಜೇತರಲ್ಲಿ ಉತ್ತರ ಪ್ರದೇಶದ ಮಾವು ಬೆಳೆಗಾರರೊಬ್ಬರು ಸೇರಿದ್ದು ವಿಶೇಷವಾಗಿ ಗಮನ ಸೆಳೆಯಿತು. ಉತ್ತರ ಪ್ರದೇಶದ
2008: ಪ್ರಸ್ತುತ ಸಾಲಿನ ಪದ್ಮಶ್ರೀ ವಿಜೇತರಲ್ಲಿ ಉತ್ತರ ಪ್ರದೇಶದ ಮಾವು ಬೆಳೆಗಾರರೊಬ್ಬರು ಸೇರಿದ್ದು ವಿಶೇಷವಾಗಿ ಗಮನ ಸೆಳೆಯಿತು. ಉತ್ತರ ಪ್ರದೇಶದ
ಮಲಿಹಾಬಾದ್ ಪಟ್ಟಣದಲ್ಲಿ ವಾಸಿಸುವ ಮಾವು ಬೆಳೆಗಾರ ಕಲೀಮುಲ್ಲಾ ಖಾನ್ ಅವರಿಗೆ ಪದ್ಮಶ್ರೀ ಬಂದಿತು. ಇವರು ಒಂದೇ ಮಾವಿನ ಮರದಿಂದ 300 ಕ್ಕೂ ಹೆಚ್ಚು ಹೊಸ ತಳಿಗಳನ್ನು ಉತ್ಪಾದಿಸಿದ್ದಾರೆ. ಆರಂಭದಲ್ಲಿ ತಮ್ಮ ತಂದೆಯಿಂದ ಕಲಿತ ಈ ವಿದ್ಯೆಯನ್ನು ಹಾಗೇ ಬೆಳೆಸಿಕೊಂಡಿದ್ದಾರೆ. ಮೊದ ಮೊದಲು ನಾಟಿ ತಳಿಗಳನ್ನು ಬೆಳೆಸುತ್ತಿದ್ದರು. ನಂತರ ಹೈಬ್ರಿಡ್ ತಳಿಗಳನ್ನು ಪ್ರಯೋಗಗಳ ಮೂಲಕ ಬೆಳೆಯಲಾರಂಭಿಸಿದರು. ಕಲಿಮುಲ್ಲಾ ಪರಿಣತಿ ಅರಿತ ಇರಾನ್ ಸರ್ಕಾರ ತಮ್ಮಲ್ಲೇ ಬಂದು ನೆಲಸುವಂತೆ ಆಹ್ವಾನ ನೀಡಿತು. ಈ ಆಹ್ವಾನವನ್ನು ತಿರಸ್ಕರಿಸಿದ ಖಾನ್, ತಮ್ಮ ಕುಟುಂಬದವರು ಮಾವು ಬೆಳೆಸುತ್ತಿದ್ದ ಮಲಿಹಾಬಾದ್ ಪ್ರದೇಶದಲ್ಲಿಯೇ ಇರಲು ಬಯಸಿದರು.
2008: ಮೂರು ದಶಕಗಳ ಕಾಲ ಇಂಡೋನೇಷ್ಯಾವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಆಡಳಿತ ನಡೆಸಿದ್ದ, ದಶಲಕ್ಷಕ್ಕೂ ಅಧಿಕ ವಿರೋಧಿಗಳನ್ನು ಸಾಯಿಸಿದ್ದ ಆರೋಪ ಹೊತ್ತ ಸರ್ವಾಧಿಕಾರಿ ಎಚ್.ಎಂ.ಸುಹಾರ್ತೋ (86) ಈದಿನ ಜಕಾರ್ತದ ಆಸ್ಪತ್ರೆಯಲ್ಲಿ ನಿಧನರಾದರು. ಸುಹಾರ್ತೋ ಅವರ ನಿಧನವನ್ನು ಪೊಲೀಸ್ ಮುಖ್ಯಸ್ಥರು ಅಧಿಕೃತವಾಗಿ ಘೋಷಿಸಿದರು. ಹೃದಯ, ಮೂತ್ರಪಿಂಡ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮೂರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1967ರಲ್ಲಿ ಇಂಡೋನೇಷ್ಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಹಾರ್ತೋ, ನಿರ್ದಯಿ ಸರ್ವಾಧಿಕಾರಿಯಾಗಿದ್ದರು. ಕಮ್ಯೂನಿಸ್ಟ್ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಅವರ ಮೇಲೆ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದಾರೆಂಬ ಆರೋಪವಿತ್ತು. ಕಮ್ಯುನಿಸ್ಟ್ ವಿರೋಧಿ ನೀತಿ ಹಾಗೂ ಆಡಳಿತದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಸಮರ ಸಾರಿದ್ದವು. ಜೊತೆಗೆ 1997ರಲ್ಲಿ ಏಷ್ಯಾದ ಆರ್ಥಿಕ ಬಿಕ್ಕಟ್ಟು ಅವರು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು.
2008: ಸೇತು ಸಮುದ್ರಂ ಯೋಜನೆಯಿಂದ ನೌಕಾದಳಕ್ಕಾಗಲೀ ಅಥವಾ ಅಂತಾರಾಷ್ಟ್ರೀಯ ನೌಕಾಯಾನ ಸಂಸ್ಥೆಗಳಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಈ ಯೋಜನೆಯನ್ನು ತತ್ ಕ್ಷಣವೇ ಕೈಬಿಡಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಚೆನ್ನೈಯಲ್ಲಿ ಆಗ್ರಹಿಸಿದರು.
2008: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಸೊಸೆ ಐಶ್ವರ್ಯ ರೈ ಬಚ್ಚನ್ ಹೆಸರಿನ ಮಹಿಳಾ ಕಾಲೇಜಿಗೆ ಬಚ್ಚನ್ ಕುಟುಂಬ ಅಡಿಗಲ್ಲು ಹಾಕಿತು. ಭೂ ವಿವಾದ ಕುರಿತು ಅಮಿತಾಬ್ ಬಚ್ಚನ್ ಮೇಲಿದ್ದ ಪ್ರಕರಣವನ್ನು ಎರಡು ತಿಂಗಳ ಹಿಂದೆಯೇ ಅಲ್ಲಿನ ಹೈಕೋರ್ಟ್ ಇತ್ಯರ್ಥ ಪಡಿಸಿತ್ತು.
2008: ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ ಗುಡಗಾಂವ್ ಅಕ್ರಮ ಮೂತ್ರಪಿಂಡ (ಕಿಡ್ನಿ) ಕಸಿ ಹಗರಣ ತಡೆಗಟ್ಟುವಲ್ಲಿ ರಾಜ್ಯ ಪೊಲೀಸರು ವಿಫಲವಾದುದನ್ನು ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಒಪ್ಪಿಕೊಂಡರು. ಇದು ರಾಜ್ಯ ಸರ್ಕಾರದ ದೊಡ್ಡ ವೈಫಲ್ಯ ಎಂದು ಹೂಡಾ ಹೇಳಿದರು. ಕಿಡ್ನಿ ಹಗರಣದ ಪ್ರಮುಖ ಆರೋಪಿಯ ಹೆಸರು ಡಾ. ಅಮಿತ್ ಕುಮಾರ್ ಹೌದೇ ಅಥವಾ ಡಾ. ಸಂತೋಷ್ ರಾವುತ್ ಎಂದೇ? ಎಂಬ ಗುಮಾನಿ ಪೊಲೀಸ್ ವಲಯದಲ್ಲಿ ಮನೆ ಮಾಡಿತು. ಮುಂಬೈ ವಿಮಾನ ನಿಲ್ದಾಣದಲ್ಲಿ 14 ವರ್ಷಗಳ ಹಿಂದೆ ಕೆಲವು ಶ್ರೀಮಂತ ಪ್ರಯಾಣಿಕರನ್ನು ಕರೆದೊಯ್ಯುವ ಸಲುವಾಗಿ ಟ್ಯಾಕ್ಸಿ ಚಾಲಕರು ಹಿಡಿದುಕೊಂಡಿದ್ದ ಫಲಕಗಳಲ್ಲಿ ಡಾ. ರಾವುತ್ ಹೆಸರು ಇತ್ತು. 1994ರಲ್ಲಿ ಡಾ. ರಾವುತ್ ನನ್ನು ಬಂಧಿಸಿ ಹಗರಣ ಬಯಲಿಗೆಳೆಯಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಆತ ಮುಂಬೈಯಿಂದ ದೂರ ಹೋಗಿದ್ದರೂ, ಆತನ ಕುಟುಂಬ ಇನ್ನೂ ಮುಂಬೈಯಲ್ಲೇ ಇತ್ತು. ದೇಶದಲ್ಲೇ ಅತಿ ದೊಡ್ಡ ಕಿಡ್ನಿ ಹಗರಣ ನಡೆದದ್ದು ಡಾ. ರಾವುತ್ ನ ಕೌಶಲ್ಯ ನರ್ಸಿಂಗ್ ಹೋಮ್ ನಲ್ಲಿ. ಅದೊಂದು ಆಯುರ್ವೇದ ಆಸ್ಪತ್ರೆಯಾದರೂ ಭಾರಿ ಪ್ರಮಾಣದ ಅಕ್ರಮ ಕಿಡ್ನಿ ಕಸಿ ಅಲ್ಲಿ ನಡೆದಿತ್ತು. ಬಳಿಕ ಮಹಾರಾಷ್ಟ್ರ ರಾಜ್ಯ ಮಾನವ ಅಂಗಾಂಗ ದಾನಕ್ಕೆ ಕಠಿಣ ಶಾಸನ ರೂಪಿಸಿತು. ಆದರೂ ಡಾ. ರಾವುತನ ಜಾಲ ದೇಶದ ಇತರ 5 ಕಡೆಗಳಿಗೆ ವ್ಯಾಪಿಸಿತ್ತು.
2008: ಮಂಗಳೂರಿನ ಮಂಗಳಾ ಮ್ಯಾಜಿಕ್ ಸರ್ಕಲ್ ಆಶ್ರಯದಲ್ಲಿ ನಗರದ ಕದ್ರಿ ಶ್ರೀಗೋರಕ್ಷನಾಥ ಸಭಾಭವನದ ಸಂಸ್ಥಾಪಕ ದಿವಂಗತ ಪ್ರೊ. ಬಾಸ್ ವೇದಿಕೆಯಲ್ಲಿ ನಡೆದ `ಕಣ್ಕಟ್-2008' ಸಮ್ಮೇಳನವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಕಾಸರಗೋಡಿನ ವಾಸುದೇವ ಕೋಟೂರು (ವಾಕೋ), ಉಡುಪಿ ಪ್ರಹ್ಲಾದ ಆಚಾರ್ಯ ಹಾಗೂ ಮಂಗಳೂರಿನ ಪ್ರದೀಪ್ ಸೂರಿ ಜಾದೂತಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ರಾಜ್ಯಮಟ್ಟದ ಜಾದೂ ಸ್ಪರ್ಧೆಯಲ್ಲಿ ಬೆಂಗಳೂರಿನ ಕರುಣ್ ಕೃಷ್ಣ ಹಾಗೂ ಮಂಗಳೂರಿನ ಮಹೇಶ್ ಜಿ.ಎಸ್. ಪ್ರಶಸ್ತಿ ಗಳಿಸಿದರು.
2008: ಗುಲ್ಬರ್ಗ ಜಿಲ್ಲೆ ಶಹಬಾದಿನಿಂದ ಮಹಾರಾಷ್ಟ್ರದ ಕರಾಡ ಪಟ್ಟಣಕ್ಕೆ ಪರಸಿ ಕಲ್ಲು ತುಂಬಿಕೊಂಡು ಹೊರಟಿದ್ದ ಲಾರಿ ನಗರದ ಹೊರವಲಯದ ಡೋಣಿ ನದಿ ಸೇತುವೆ ಬಳಿ ಮಗುಚಿ ಬಿದ್ದು 10 ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, 13 ಜನರು ಗಾಯಗೊಂಡರು.
2008: ಜಾಮೀನಿನ ಮೇಲೆ ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆಯಾಗಿದ್ದ ರೌಡಿ ಕೊರಂಗು ಕೃಷ್ಣ (46) ಕಾರಿನಲ್ಲಿ ಆಂಧ್ರಪ್ರದೇಶದ ಚಿತ್ತೂರು ಬಳಿ ಪ್ರಯಾಣಿಸುತ್ತಿದ್ದಾಗ ಬಾಂಬ್ ಸ್ಫೋಟಿಸಿ ಗಾಯಗೊಂಡ.
2007: ಖ್ಯಾತ ಮಲಯಾಳಿ ಬರಹಗಾರ, ಸಾಹಿತ್ಯ ವಿಮರ್ಶಕ ಡಾ. ಸುಕುಮಾರ ಅಯಿಕ್ಕೋಡ್ ಅವರು ಗಣರಾಜ್ಯೋತ್ಸವ ಮುನ್ನಾದಿನ ತಮಗೆ ಘೋಷಿಸಲಾದ `ಪದ್ಮಶ್ರೀ' ಪ್ರಶಸ್ತಿಯನ್ನು ತಿರಸ್ಕರಿಸಿದರು. ಇಂತಹ ಪ್ರಶಸ್ತಿಗಳು, ಸಂವಿಧಾನವು ನೀಡಿರುವ ಎಲ್ಲ ನಾಗರಿಕರ ಸಮಾನತೆಯ ತತ್ವಕ್ಕೆ ವಿರುದ್ಧವಾದವುಗಳು ಎಂದು ಅಯಿಕ್ಕೋಡ್ ಹೇಳಿದರು. ಸರ್ಕಾರಗಳು ಆಯ್ದ ವ್ಯಕ್ತಿಗಳಿಗೆ ಈ ರೀತಿ ಪ್ರಶಸ್ತಿ ಪ್ರದಾನ ಮಾಡುವುದು ಸಂವಿಧಾನವು ಖಾತರಿ ಪಡಿಸಿರುವ ಎಲ್ಲ ನಾಗರಿಕರ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಎಂದು ತಾವು ಸ್ಪಷ್ಟವಾಗಿ ಪರಿಗಣಿಸುವುದಾಗಿ ಅಯಿಕೋಡ್ ದೃಢಪಡಿಸಿದರು. ಕೇರಳದ ಸಾಂಸ್ಕೃತಿಕ ಪ್ರಪಂಚದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಅಯಿಕ್ಕೋಡ್ ಖ್ಯಾತ ಸಾಹಿತ್ಯ ವಿಮರ್ಶಕ, ಭಾಷಣಕಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದು, ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿದಂತೆ ನೇರ ಅಭಿಪ್ರಾಯ ವ್ಯಕ್ತ ಪಡಿಸುವುದಕ್ಕೆ ಹೆಸರಾಗಿದ್ದಾರೆ.
2007: ಭವಿಷ್ಯನಿಧಿಯ ಬಡ್ಡಿ ದರವನ್ನು ಪ್ರಸ್ತುತ ಹಣಕಾಸು ವರ್ಷದಲ್ಲಿ ಇಳಿಸುವುದಕ್ಕೆ ಸಂಬಂಧಿಸಿದ ವಿವಾದಾತ್ಮಕ ವಿಷಯ ಕುರಿತ ನಿರ್ಧಾರ ಕೈಗೊಳ್ಳಲು ನೌಕರರ ಭವಿಷ್ಯನಿಧಿ ಮಂಡಳಿಯ ಸಭೆ ವಿಫಲಗೊಂಡಿದ್ದು, ಇ ಪಿ ಎಫ್ ನಿಧಿಯ ಶೇಕಡಾ 5ರಷ್ಟು ಹಣವನ್ನು ಈಕ್ವಿಟಿ ಮಾರುಕಟ್ಟೆಯಲ್ಲಿ ತೊಡಗಿಸುವ ಹಣಕಾಸು ಸಚಿವಾಲಯದ ಪ್ರಸ್ತಾವವನ್ನೂ ತಿರಸ್ಕರಿಸಿತು.
2007: ಸಹಸ್ರಮಾನದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಲೀಜನ್ ಡಿ' ಆನರ್'ನ್ನು ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮಿತಾಭ್ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಫ್ರೆಂಚ್ ರಾಯಭಾರಿ ಡೊಮಿನಿಕ್ ಗಿರಾರ್ಡ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ಅಮಿತಾಭ್ ಅವರ ಭಾವಿ ಸೊಸೆ ಐಶ್ವರ್ಯ ರೈ ಸೇರಿದಂತೆ ಅವರು ಕುಟುಂಬದ ಸದಸ್ಯರು ಭಾಗವಹಿಸಿದ್ದರು.
2007: ಬಾಲಿವುಡ್ ನಟ ರಾಹುಲ್ ರಾಯ್ ಭಾರತದ ರಿಯಾಲಿಟಿ ಟಿವಿ ಶೋ `ಬಿಗ್ ಬಾಸ್' ಆಗಿ ಆಯ್ಕೆಯಾದರು.
2007: ಹಿರಿಯ ನೃತ್ಯ ಕಲಾವಿದೆ ಪದ್ಮಿನಿ ರಾವ್ (50) ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಟುವಾಂಗ ನಡೆಸಿಕೊಡುತ್ತಿರುವಾಗಲೇ ತೀವ್ರ ಅಸ್ವಸ್ಥರಾಗಿ ನಿಧನರಾದರು. ತಮ್ಮ ಸಂಸ್ಥೆ ಪೊನ್ನಯ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಇಡೀ ದಿನ `ಕರುನಾಡ ಪರಂಪರೆ' ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಈ ಘಟನೆ ನಡೆಯಿತು.
2007: ದಕ್ಷಿಣ ಆಫ್ರಿಕಾದ ಇತಿಹಾಸ ತಜ್ಞ ಹಾಗೂ ಆಂಗ್ಲೊ-ಜುಲು ಯುದ್ಧದ ವಿವರ ನೀಡುವ ಪರಿಣತ ಡೇವಿಡ್ ರಾತ್ರೆ ಅವರು ತಮ್ಮ ವಸತಿ ಗೃಹದಲ್ಲೇ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು.
2007; ಮೆಲ್ಬೋರ್ನಿನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ರಷ್ಯಾದ ಮಾರಿಯಾ ಶರಪೋವಾ ಅವರನ್ನು ಅಮೆರಿಕದ ಸೆರೆನಾ ಅವರು ಪರಾಭವಗೊಳಿಸಿದರು. ಈ ಮೂಲಕ 28 ವರ್ಷಗಳ ನಂತರ ಗೆದ್ದ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1978ರಲ್ಲಿ ವಿಶ್ವದ 111ನೇ ರ್ಯಾಂಕ್ ಹೊಂದಿದ್ದ ಕ್ರಿಸ್ ಓನೆಲ್ ಈ ಸಾಧನೆ ಮಾಡಿದ್ದರು.
2006: ಕನ್ನಡದ ಪ್ರಪ್ರಥಮ ಹಾಸ್ಯ ಬರಹಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಟಿ. ಸುನಂದಮ್ಮ (89) ಬೆಂಗಳೂರಿನ ತಮ್ಮ ವೈಯಾಲಿಕಾವಲ್ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಹಾಸ್ಯ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದ ಸುನಂದಮ್ಮ `ಕೊರವಂಜಿ' ಹಾಸ್ಯಪತ್ರಿಕೆಯ ಮೂಲಕ ಹೆಸರಾದರು. ಇವರ ಸಮಗ್ರ ಹಾಸ್ಯ ಕೃತಿ 1993ರಲ್ಲಿಪ್ರಕಟವಾಗಿತ್ತು. `ಭಂಜದ ಚೀಲ', `ಬಣ್ಣದ ಚಿಟ್ಟೆ' ಹಾಗೂ `ಪೆಪ್ಪರ್ ಮೆಂಟ್' ಇವರ ಇನ್ನಿತರ ಕೆಲವು ಕೃತಿಗಳು. `ರಾಜ್ಯೋತ್ಸವ ಪ್ರಶಸ್ತಿ', `ಕರ್ನಾಟಕ ಸಾಹಿತ್ಯ ಅಕಾಡೆಮಿ' ಪುರಸ್ಕಾರ, `ದಾನಚಿಂತಾಮಣಿ' ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಸುನಂದಮ್ಮ ಭಾಜನರಾಗಿದ್ದರು. ಕರ್ನಾಟಕದಲ್ಲಿ `ಲೇಖಕಿಯರ ಸಂಘ' ಕಟ್ಟುವುದಕ್ಕೆ ಕಾರಣಕರ್ತರಾಗಿದ್ದ ಸುನಂದಮ್ಮ, ಸಂಘದ ಸಂಘಟನೆಯಲ್ಲಿ ಕೊನೆಯವರೆಗೆ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
2006: ರಾಜ್ಯಪಾಲರ ಸೂಚನೆಯ ಪ್ರಕಾರ ಈದಿನ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಸದನದಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಲು ಮುಂದಾಗದೇ ಇದ್ದುದರಿಂದ ಲೋಕಸಭಾಧ್ಯಕ್ಷ ಕೃಷ್ಣ ಅವರು ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ರಾಜ್ಯಪಾಲರಿಗೆ ದಿನದ ಬೆಳವಣಿಗಳ ಬಗ್ಗೆ ವರದಿ ಸಲ್ಲಿಸಿದರು.
2006: ಖ್ಯಾತ ಸಂಗೀತ ನಿರ್ದೇಶಕ ಸರ್ದಾರ್ ಮಲ್ಲಿಕ್ (81) ಹೃದಯಾಘಾತದಿಂದ ನಿಧನರಾದರು. ಖ್ಯಾತ ಸಂಗೀತ ನಿರ್ದೇಶಕ ಅನು ಮಲ್ಲಿಕ್ ಅವರ ತಂದೆಯಾದ ಸರ್ದಾರ್ ಮಲ್ಲಿಕ್ ಕಳೆದ ಹಲವಾರು ವರ್ಷಗಳಿಂದ ಪಾರ್ಕಿನ್ಸನ್ ರೋಗದಿಂದ ಅಸ್ವಸ್ಥರಾಗಿದ್ದರು. ಸಾರಂಗ, ಬಚ್ ಪನ್ ಮುಂತಾದ ಚಿತ್ರಗಳಿಗೆ ಸರ್ದಾರ್ ಅವರು ಮಾಡಿದ್ದ ಸಂಗೀತ ಸಂಯೋಜನೆ ಭಾರಿ ಪ್ರಸಿದ್ಧಿ ಗಳಿಸಿತ್ತು.
2000: ಟೆನಿಸ್ ಆಟಗಾರ ಡೊನಾಲ್ಡ್ ಬಜ್ ಅವರು ತಮ್ಮ 84ನೇ ವಯಸ್ಸಿನಲ್ಲಿ ಮೃತರಾದರು. ಅವರು ಗ್ರ್ಯಾಂಡ್ ಸ್ಲಾಮನ್ನು ಮೊತ್ತ ಮೊದಲ ಬಾರಿಗೆ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1974: ರಾಷ್ಟ್ರಪತಿ ವಿ.ವಿ. ಗಿರಿ ಅವರು ನವದೆಹಲಿಯ ತೀನ್ ಮೂರ್ತಿ ಭವನದಲ್ಲಿನ `ನೆಹರು ಸ್ಮಾರಕ ಮ್ಯೂಸಿಯಂ'ನ್ನು ರಾಷ್ಟ್ರಕ್ಕೆ ಅರ್ಪಿಸಿದರು.
1967: ಫ್ಲಾರಿಡಾದ ಕೇಪ್ ಕೆನಡಿಯಲ್ಲಿ ಅಪೋಲೋ 1 ಬಾಹ್ಯಾಕಾಶ ನೌಕೆಯಲ್ಲಿ ಹಠಾತ್ತನೆ ಅಗ್ನಿ ಅನಾಹುತ ಸಂಭವಿಸಿ ಅದರಲ್ಲಿದ್ದ ಅಮೆರಿಕನ್ ಗಗನಯಾನಿಗಳಾದ ವರ್ಗಿಲ್ ಐ, `ಗಸ್' ಗ್ರಿಸ್ಸೋಮ್, ಎಡ್ವರ್ಡ್ ಎಚ್. ವೈಟ್ ಮತ್ತು ರೋಗರ್ ಬಿ. ಚಾಫೀ ಅವರು ಅಸು ನೀಗಿದರು.
1959: ಕಲಾವಿದ ರಾಮಧ್ಯಾನಿ ಜನನ.
1950: ಚಾರ್ಲ್ಸ್ ಫಿಜರ್ ಮತ್ತು ಕಂಪೆನಿಯು (Charles Pfzer and Company) ಹೊಸ ಆಂಟಿ ಬಯೋಟಿಕ್ ಟೆರ್ರಾಮೈಸಿನನ್ನು ಉತ್ಪಾದಿಸಿರುವುದಾಗಿ ಸೈನ್ಸ್ ಮ್ಯಾಗಜಿನ್ ಪ್ರಕಟಿಸಿತು. ಮಣ್ಣಿನಿಂದ ಅದನ್ನು ಪ್ರತ್ಯೇಕಿಸಲಾಗಿತ್ತು. ನ್ಯೂಮೋನಿಯಾ (pneumonia) ಡೀಸೆಂಟ್ರಿ ಮತ್ತು ಇತರ ಸೋಂಕುಗಳಿಗೆ ಇದು ಪರಿಣಾಮಕಾರಿಯಾಗಿತ್ತು. ಫಿಜರ್ ವಿಜ್ಞಾನಿಗಳಿಂದ ಸಂಶೋಧನೆ ಹಾಗೂ ಅಭಿವೃದ್ಧಿಗೊಂಡ ಮೊತ್ತ ಮೊದಲ ಫಾರ್ಮಸ್ಯೂಟಿಕಲ್ ಇದು.
1945: ಗೀತರಚನೆಕಾರ, ಕವಿ, ಕಥೆಗಾರ, ಕಾದಂಬರಿಕಾರ ಎಂ.ಎನ್ ವ್ಯಾಸರಾವ್ ಅವರು ಈದಿನ ನರಸಿಂಗರಾವ್- ಸುಶೀಲಮ್ಮ ದಂಪತಿಯ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು. ಬೆಂಗಳೂರು ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿನಲ್ಲಿ 34 ವರ್ಷಗಳ ಸೇವೆ ಬಳಿಕ ಸ್ವಯಂ ನಿವೃತ್ತಿ ಪಡೆದು ನಿರಂತರ ಸಾಹಿತ್ಯ ರಚನೆ, ಸಿನಿಮಾ ಸಾಹಿತ್ಯದ ಬರಹದಲ್ಲಿ ತಲ್ಲೀನರಾಗಿದ್ದಾರೆ.
1927: ಖ್ಯಾತ ಹರಿಕಥೆದಾಸ ಬಿ.ಎನ್. ಭೀಮರಾವ್ ಅವರು ನರಸಪ್ಪ-ಲಕ್ಷ್ಮೀದೇವಿ ದಂಪತಿಯ ಮಗನಾಗಿ ಕೊರಟಗೆರೆ ತಾಲ್ಲೂಕಿನ ಸೋಂಪುರದಲ್ಲಿ ಜನಿಸಿದರು.
1926: ಜಾನ್ ಲಾಗೀ ಬೈರ್ಡ್ ಅವರು ತಮ್ಮ `ಹೊಸ ಟೆಲಿವಿಷನ್ ಯಂತ್ರ'ದ ಮೊತ್ತ ಮೊದಲ ಸಾರ್ವಜನಿಕ ಪ್ರದರ್ಶನ ನೀಡಿದರು. ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಷನ್ನಿನ ಸದಸ್ಯರಿಗೆ ಅವರು ಚಲಿಸುವ ವಸ್ತುಗಳನ್ನು ತಮ್ಮ ಯಂತ್ರದಲ್ಲಿ ತೋರಿಸಿದರು.
1880: ಥಾಮಸ್ ಆಲ್ವಾ ಎಡಿಸನ್ ಅವರಿಗೆ `ಇನ್ ಕಾಂಡಿಸೆನ್ಸ್' ನಿಂದ ಬೆಳಕು ನೀಡುವ ಎಲೆಕ್ಟ್ರಿಕ್ ಲೈಟಿಗೆ ಪೇಟೆಂಟ್ (ನಂಬರ್ 223,898) ನೀಡಲಾಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment