ಸಮುದ್ರ ಮಥನ 22:
ಪೌರನ ಪಾತ್ರವೂ, ದೇಶದ ಉನ್ನತಿಯೂ
ಪೌರನ ಪಾತ್ರವೂ, ದೇಶದ ಉನ್ನತಿಯೂ
ಬೆರಳೆಣಿಕೆಯ ಜನರ ನಕಾರಾತ್ಮಕ ಚಿಂತನೆಗಳು ಲಕ್ಷಾಂತರ ಜನಸಾಮಾನ್ಯರ ಜೀವ, ಜೀವನವನ್ನು ಘಾಸಿಗೊಳಿಸಬಲ್ಲದು ಎಂದಾದರೆ ಲಕ್ಷಾಂತರ ಮಂದಿಯ ಸಕಾರಾತ್ಮಕ ನಡೆ ಎಂತಹ ಉನ್ನತ ಮಟ್ಟಕ್ಕೂ ಒಯ್ಯಬಲ್ಲದು. ಅಂತಹ ಒಂದು ಸಣ್ಣ ನಿರ್ಧಾರ ಪ್ರತಿಯೊಬ್ಬರ ಅಂತರಂಗದಲ್ಲಿ ಉದಿಸಬೇಕಿದೆ.
ಮೊನ್ನೆ ನಡೆದ ಮುಂಬಯಿಯ ಹತ್ಯಾಕಾಂಡ ಸೇರಿದಂತೆ ದೇಶದೆಲ್ಲೆಡೆ ನಡೆಯುತ್ತಿರುವ ಬಾಂಬ್ ವಿಸ್ಫೋಟಗಳು ಇಡೀ ದೇಶಕ್ಕೆ ದೇಶವನ್ನೇ ಹಾಗೂ ಮನುಕುಲವನ್ನೇ
ನಡುಗಿಸುತ್ತಿವೆ. ಸಾತ್ವಿಕ ಮನಸ್ಸುಗಳು ತಲ್ಲಣಗೊಳ್ಳುವ ಇಂತಹ ವಿಧ್ವಂಸಕ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತಲಿರುವುದು ಆಧುನಿಕ ಜಗತ್ತಿಗೆ ಒಂದು ಶಾಪವಾಗಿದೆ.
ಮನುಷ್ಯ ವೈಜ್ಞಾನಿಕವಾಗಿ ಬೆಳೆದಂತೆಲ್ಲಾ ಅವನ ಶಕ್ತಿ0ುನ್ನು ಕೆಲವೇ ಕೆಲವು ದುಷ್ಟಶಕ್ತಿಗಳು ಇಂತಹ ಕುಕೃತ್ಯಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀ0ು. ಸಹಜವಾಗಿ ಬದುಕು ಸಾಗಿಸುತ್ತಿರುವ ಹಲವರಲ್ಲಿ ಇಂತಹ ಘಟನೆಗಳಿಂದಾಗಿ ಮುಂದಿನ ಕ್ಷಣದಲ್ಲಿಯೇ ಏನು ಕಾದಿದೆಯೋ ! ಎಂದು ಆತಂಕಿಸುವಷ್ಟು ಅನಿಶ್ಚಿತ, ಆಭದ್ರ ವಾತಾವರಣ ನಿರ್ಮಾಣವಾಗುತ್ತಿದೆ.
ಹೀಗಾದರೆ, ಬದುಕಿನ ಸುಕ್ಷಣಗಳು, ಆನಂದಭರಿತ ಗಳಿಗೆಗಳು ಎಂಬೆಲ್ಲ ಆಸೆಗಳಿಗೆ ತಿಲಾಂಜಲಿ ಎರೆಯಬೇಕೇನೋ ಎಂಬ ವ್ಯಸನ ಜನಸಾಮಾನ್ಯರ ಮನಗಳಲ್ಲಿ ಮನೆಮಾಡಿದೆ.
ಪುರಾಣ ಪುಣ್ಯಕಾಲದಿಂದಲೂ ಇಂಥಹ ದುಷ್ಟ ಶಕ್ತಿಗಳ ಹಾವಳಿ ಅವ್ಯಾಹತವಾಗಿ ನಡೆದುಕೊಂಡೇ ಬಂದಿದೆ. ಮನುಷ್ಯ ತನ್ನ ಮನದ ಮೂಲೆ0ುಲ್ಲಿ ರಾಕ್ಷಸೀ ಗುಣಗಳನ್ನು ಅಡಗಿಸಿಕೊಂಡಿರುತ್ತಾನೆ. ಅದಕ್ಕೆ ನೀರೆರೆದು ಪೋಷಿಸುವವರು ಸಿಕ್ಕಲ್ಲಿ ಅದು ವಿಕಾರ ರೂಪ ತಾಳಿ ಇಂತಹ ಅವಘಡಗಳು ಸಂಭವಿಸುತ್ತವೆ.
ಅಂದು ಇಂತಹ ದುಷ್ಟ ಶಕ್ತಿಗಳ ದಮನ ಕಾರ್ಯಕ್ಕೆ ಸಮಾಜದ ಜವಾಬ್ದಾರಿಯನ್ನು ನಾಯಕರು ನಿಲ್ಲುತ್ತಿದ್ದರು. ಆ ಕಾರಣದಿಂದ ದಮನ ಕಾರ್ಯ ಸುಲಲಿತವಾಗಿ ಸಾಗುತ್ತಿತ್ತು.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಆರಿಸಿ ಕಳುಹಿಸಿದ ನಾಯಕರಲ್ಲಿ ಅಂತಹ ಧೀರೋದಾತ್ತ ನಿರ್ಣಯಗಳು ಜಾರಿಯಾಗುತ್ತಿಲ್ಲ.
ಇನ್ನು ನಾಯಕರನ್ನು ಆರಿಸಿ ಕಳುಹಿಸಿದ ಜನಸಾಮಾನ್ಯ ತನ್ನ ಹತ್ತಿರದವರ ಜೀವಕ್ಕೇ ಆಪತ್ತು ಬಂದಾಗ ಭರಿಸಲಾರದಷ್ಟು ದುಃಖಿಸುವುದು, ಊರಿನ ಸುಖ, ಸಂಪತ್ತಿಗೆ ಸಂಚಕಾರ ಬಂದಾಗ ಎಣೆಯಿಲ್ಲದಷ್ಟು ಆತಂಕಗೊಳ್ಳುವುದು, ಇದನ್ನೆಲ್ಲ ಪರಿಹರಿಸಲು ಏನೂ ಮಾಡಲಾಗದೇ ವಿಲಿವಿಲಿ ಒದ್ದಾಡುವುದು, ಇಷ್ಟೆಲ್ಲಕ್ಕೂ ನಮ್ಮ ನಾಯಕರೇ ಕಾರಣವೆಂದು ಬಾಯಿ ಬಡಿದುಕೊಳ್ಳುವುದು, ಅದೇ ನಾಯಕರನ್ನು ಕೆಳಗಿಳಿಸಿಯೇ ಶತಃಸಿದ್ಧ ಎಂಬ ಉತ್ಸಾಹ ತೋರುವುದು, ಅಕಸ್ಮಾತ್ ಆ ನಾಯಕರನ್ನು ಕೆಳಗಿಳಿಸಲು ಸಾಧ್ಯವಾಗದಲ್ಲಿ ಮುಂದಿನ ಪರ್ಯಾಯದ ಚಿಂತನೆ ಬಂದಾಗ ಏನೊಂದೂ ತೋಚದಿರುವುದು, ನಂತರ ಕೊನೆಯಲ್ಲಿ ನಮ್ಮಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ತೆಪ್ಪಗಾಗುವುದು ಎಂಬ ಹಂತವನ್ನು ತಲುಪಿಬಿಟ್ಟಿದ್ದಾನೆ.
ನೆಮ್ಮದಿ ಕಾಣುವ ಸಲುವಾಗಿ ವಾಸ್ತವ ಸಂಗತಿ ಬದಲಾಗಬೇಕಿದೆ. ದೇಶದ ಪ್ರಜೆಗಳಲ್ಲಿ ದೇಶದ ಬಗ್ಗೆ ತಾನು ಏನು ಮಾಡಬಹುದು? ತನ್ನ ಕರ್ತವ್ಯಗಳೇನು? ಎಂಬಂತಹ ವಿಷ0ುಗಳ ಬಗ್ಗೆ ನಿಖರವಾದ ಅಭಿಪ್ರಾಯಗಳನ್ನು ರೂಢಿಸಿಕೊಳ್ಳುವ ಮಾನಸಿಕ ಸಿದ್ಧತೆಯನ್ನು ಅಭ್ಯಾಸಮಾಡಿಕೊಂಡಲ್ಲಿ ಆತನೇ ಈ ಎಲ್ಲ ಭಯೋತ್ಪಾದನೆಯನ್ನೂ ಮಟ್ಟಹಾಕಿಬಿಡಬಲ್ಲ.
ಒಬ್ಬನಿಂದ ಮನೆಗೆ, ಮನೆಯಿಂದ ಊರಿಗೆ, ಊರಿನಿಂದ ದೇಶಕ್ಕೆ ಸಕಾರಾತ್ಮಕ ಚಿಂತನೆಗಳು ದುಷ್ಟಕೂಟಗಳಿಗೆ ಪ್ರತಿಯಾಗಿ ಪ್ರವಾಹದೋಪಾದಿಯಲ್ಲಿ ಹರಿದರೆ ಅಲ್ಪರ ಕೈಯಲ್ಲಿರುವ ಭಯೋತ್ಪಾದನೆಯ ಬೇರು ಸಂಪೂರ್ಣ ಮಾಯವಾಗಬಲ್ಲದು. ಅದಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಪಣತೊಡಬೇಕಿದೆ.
ಬೆರಳೆಣಿಕೆಯ ಜನರ ನಕಾರಾತ್ಮಕ ಚಿಂತನೆಗಳು ಲಕ್ಷಾಂತರ ಜನಸಾಮಾನ್ಯರ ಜೀವ, ಜೀವನವನ್ನು ಘಾಸಿಗೊಳಿಸಬಲ್ಲದು ಎಂದಾದರೆ ಲಕ್ಷಾಂತರ ಮಂದಿಯ ಸಕಾರಾತ್ಮಕ ನಡೆ ಎಂತಹ ಉನ್ನತ ಮಟ್ಟಕ್ಕೂ ಒಯ್ಯಬಲ್ಲದು. ಅಂತಹ ಒಂದು ಸಣ್ಣ ನಿರ್ಧಾರ ಪ್ರತಿಯೊಬ್ಬರ ಅಂತರಂಗದಲ್ಲಿ ಉದಿಸಬೇಕಿದೆ.
ನದಿ ಹುಟ್ಟುವಾಗ ಸಣ್ಣ ತೊರೆ. ಆದರೆ, ಸಮುದ್ರ ಸೇರುವಲ್ಲಿನ ಪಾತ್ರದ ಗಾತ್ರ ಅಗಲ, ಅತೀವ. 'ಯಥಾ ರಾಜಾ ತಥಾ ಪ್ರಜಾ'. ಇಂದಿನ ದಿನಮಾನದಲ್ಲಿ ಪ್ರಜೆಗಳೇ ರಾಜರು. ಪ್ರಜೆಗಳ ನಿರ್ಧಾರ ಅಂತಿಮ. ಪ್ರತಿಯೊಬ್ಬರಲ್ಲೂ ಸತ್ವಶಕ್ತಿ ಜಾಗೃತವಾಗಿ, ಸದೃಢ ಸಮಾಜದ ಸ್ಥಾಪನೆಗೆ ದೃಢ ಮನಸ್ಕ ಪ್ರಜೆಗಳು ಮುಂದಾದಲ್ಲಿ ಭಯೋತ್ಪಾದನೆಯೆಂಬ ಬರ್ಬರದ ಮೂಲೋತ್ಪಾಟನೆ ಮಾತ್ರವಲ್ಲ ಸರ್ವಶಕ್ತ ದೇಶದ ನಿರ್ಮಾಣವೂ ಸಾಧ್ಯ.
- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ
ಶ್ರೀರಾಮಚಂದ್ರಾಪುರಮಠ
No comments:
Post a Comment