Monday, February 2, 2009

ಇಂದಿನ ಇತಿಹಾಸ History Today ಫೆಬ್ರುವರಿ 02


ಇಂದಿನ ಇತಿಹಾಸ

ಫೆಬ್ರುವರಿ 2

ವಿವಾದಾತ್ಮಕ ಕಲಾವಿದ ಎಂ.ಎಫ್. ಹುಸೇನ್ ಅವರ ವುಮನ್ ಅಂಡ್ ಹಾರ್ಸಸ್ (ಮಹಿಳೆ ಮತ್ತು ಕುದುರೆಗಳು) ಕಲಾಕೃತಿಯು ದುಬೈಯಲ್ಲಿ ನಡೆದ ಹರಾಜಿನಲ್ಲಿ 4,41,600 ಡಾಲರುಗಳ ದಾಖಲೆ ಮೊತ್ತಕ್ಕೆ ಮಾರಾಟವಾಯಿತು.

2008: ಬೆಂಗಳೂರಿನಲ್ಲಿ ಒಂದೇ ದಿನ ಬಹುದಿನಗಳ ಕನಸು ನನಸಾಯಿತು. ಒಂದು ಕಡೆ ಐಷಾರಾಮಿ `ಸುವರ್ಣ ರಥ' ರೈಲು ಮತ್ತು ಮತ್ತೊಂದು ಕಡೆ ಬಡವರ, ಮಧ್ಯಮ ವರ್ಗದವರ `ಗರೀಬ್ ರಥ' ರೈಲು- ಎರಡೂ ಒಂದೇ ದಿನ ಹಳಿ ಮೇಲೆ ಬಂದವು. ಸುವರ್ಣ ರಥ ರೈಲು ಶ್ರೀಮಂತ ಪ್ರವಾಸಿಗರನ್ನು ಹೊತ್ತು ಸಾಗಿದರೆ, ಗರೀಬ್ ರಥ ರೈಲು ಬಡ/ಮಧ್ಯಮ ವರ್ಗದ ಪ್ರಯಾಣಿಕರನ್ನು ಬೆಂಗಳೂರಿನಿಂದ ಸಿಕಂದರಾಬಾದಿಗೆ ಹೊತ್ತೊಯ್ಯುವುದು. ಯಶವಂತಪುರ ರೈಲು ನಿಲ್ದಾಣದಲ್ಲಿ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸುವರ್ಣ ರಥ (ಗೋಲ್ಡನ್ ಚಾರಿಯಟ್) ರೈಲಿಗೆ ಚಾಲನೆ ನೀಡಿದರು. ರೈಲ್ವೆ ಇಲಾಖೆ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಆರಂಭಿಸಿದ ಈ ಐಷಾರಾಮಿ ರೈಲು ಪ್ರವಾಸಿಗರನ್ನೇ ನೆಚ್ಚಿಕೊಂಡಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದ ನಂತರ ಇದು ದಕ್ಷಿಣ ಭಾರತದ ಮೊದಲ ಪ್ರವಾಸಿ ರೈಲು. 2002ರಲ್ಲೇ ಈ ಯೋಜನೆಗೆ ಚಾಲನೆ ಸಿಕ್ಕರೂ ಅದು ಜಾರಿಗೆ ಬರಲು ಇಷ್ಟು ವರ್ಷ ಬೇಕಾಯಿತು. ಬೆಂಗಳೂರಿನಿಂದ ಮೈಸೂರು, ಹಾಸನ, ಹಂಪಿ ಮಾರ್ಗವಾಗಿ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕುಸುವ ಈ ರೈಲು ಗದಗ ಮೂಲಕ ಗೋವಾ ತಲುಪುವುದು. ಒಮ್ಮೆಗೆ ಏಳು ದಿನ ಸಂಚರಿಸುವ ಈ ರೈಲಿನಲ್ಲೇ ಪ್ರವಾಸಿಗರಿಗೆ ತಂಗುವ ವ್ಯವಸ್ಥೆ ಮಾಡಲಾಗಿದ್ದು, ತಾರಾ ಹೋಟೆಲ್ ಸೌಕರ್ಯ ನೀಡಲಾಗುತ್ತದೆ. ಸುವರ್ಣರಥ ರೈಲಿಗೆ ಚಾಲನೆ ಕೊಟ್ಟ ವೇದಿಕೆಯಲ್ಲೇ ಸ್ವಲ್ಪ ಹೊತ್ತಿನ ನಂತರ ಬಡವರ ರೈಲು ಎಂದೇ ಖ್ಯಾತಿ ಪಡೆದಿರುವ ಸಂಪೂರ್ಣ ಹವಾನಿಯಂತ್ರಿತ ಗರೀಬ್ ರಥ ರೈಲಿಗೆ ಸಚಿವ ವೇಲು ಚಾಲನೆ ನೀಡಿದರು.

2008: ಆಸ್ಟ್ರೇಲಿಯಾ ಕ್ರಿಕೆಟ್ ಪ್ರಿಯರು ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ವಿರುದ್ಧದ ತಮ್ಮ ಸಮರವನ್ನು ಮತ್ತೆ ಮುಂದುವರೆಸಿ, ಹೋಬರ್ಟಿನಲ್ಲಿ ಸಿಂಹಳೀಯರ ನಾಡಿನ ಕ್ರಿಕೆಟಿಗನ ಮುಖದ ಮೇಲೆ ಮೊಟ್ಟೆ ಎಸೆದರು.  

2008: ಬೆಸ್ಟ್ ಬೇಕರಿ ಪ್ರಕರಣದ ಪ್ರಮುಖ ಸಾಕ್ಷಿ ಜಹೀರಾ ಖಾನ್ ಅವರಿಗೆ 38 ಲಕ್ಷ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿತು. ಬೆಸ್ಟ್ ಬೇಕರಿ ಪ್ರಕರಣದಲ್ಲಿ ಹೇಳಿಕೆ ಬದಲಿಸುವ ಸಲುವಾಗಿ  ಕಾಂಗ್ರೆಸ್ ಪಾಲಿಕೆ  ಸದಸ್ಯ ಚಂದ್ರಕಾಂತ್ ಶ್ರೀವಾತ್ಸವ್ ಅವರಿಂದ ಅಪಾರ ಪ್ರಮಾಣದ ಲಂಚ ಪಡೆದಿರುವ ಆರೋಪ ಜಹೀರಾ ಮೇಲಿತ್ತು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತು. ಜಹೀರಾ 2003-04ರಲ್ಲಿ 24 ಲಕ್ಷರೂ, 2004-05ರಲ್ಲಿ 22- ಲಕ್ಷ ರೂ ಹಾಗೂ 2005-06 ನೇ ಸಾಲಿನಲ್ಲಿ 20 ಲಕ್ಷ ರೂ ಆದಾಯ ಗಳಿಸಿದ್ದಾರೆ ಎಂದು ಶ್ರೀವಾತ್ಸವ್ ಹೇಳಿಕೆ ಆಧರಿಸಿ ಆದಾಯ ತೆರಿಗೆ ಇಲಾಖೆ ಮೌಲ್ಯಮಾಪನ ಮಾಡಿತು. ಬೆಸ್ಟ್ ಬೇಕರಿ ಪ್ರಕರಣದ ವಿಚಾರಣೆ ವೇಳೆ ಹೇಳಿಕೆ ಬದಲಿಸಲು ಜಹೀರಾಗೆ  ತಾವು  18 ಲಕ್ಷ ರೂ ಲಂಚ ನೀಡಿರುವುದಾಗಿ ಶ್ರೀವಾತ್ಸವ್ ನೀಡಿದ ಹೇಳಿಕೆಯನ್ನು `ತೆಹೆಲ್ಕಾ' ಸುದ್ದಿ ತಾಣ, ರಹಸ್ಯ ಕಾರ್ಯಾಚರಣೆ ಮೂಲಕ ಮುದ್ರಿಸಿಕೊಂಡಿತ್ತು.

2008: ಶಾಲೆಗೆ ಗೈರುಹಾಜರಾದ ವಿಚಾರದಲ್ಲಿ ತನ್ನನ್ನು ರೇಗಿಸಿದರು ಎಂದು ಕುಪಿತನಾದ 10ನೇ ತರಗತಿಯ ವಿದ್ಯಾರ್ಥಿ ತನ್ನ, ಇಬ್ಬರು ಸಹಪಾಠಿಗಳ ಮೇಲೆ ಏರ್ ಗನ್ನಿನಿಂದ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಬೆಂಗಳೂರಿನ ಗಿರಿನಗರ ಸಮೀಪದ ನಾಗೇಂದ್ರ ಬ್ಲಾಕಿನಲ್ಲಿ ನಡೆಯಿತು. ಶ್ರೀನಗರದ ಸ್ವಾಮಿ ವಿವೇಕಾನಂದ ವಿದ್ಯಾಶಾಲಾ ಪ್ರೌಢಶಾಲೆಯ 10ನೇ ತರಗತಿಯ ಆದರ್ಶ ಗುಜ್ಜಾರ್ (16) ಗುಂಡು ಹಾರಿಸಿದ ವಿದ್ಯಾರ್ಥಿ. ಇದೇ ಶಾಲೆಯ ವಿದ್ಯಾರ್ಥಿಗಳಾದ ಎಂ. ಚರಣ್ (16) ಮತ್ತು ಆರ್. ಅರುಣ್ ಕುಮಾರ್ (16) ಗಾಯಗೊಂಡವರು. 

2008: ಸಂದೇಶ ಪ್ರತಿಷ್ಠಾನದ ಪ್ರಸಕ್ತ ಸಾಲಿನ ಸಂದೇಶ ಪ್ರಶಸ್ತಿಯನ್ನು 8 ಮಂದಿ ಸಾಧಕರಿಗೆ ಮಂಗಳೂರಿನ ಬಜ್ಜೋಡಿಯ ಸಂದೇಶದ ಹೊರಾಂಗಣದಲ್ಲಿ ಪ್ರದಾನಮಾಡಲಾಯಿತು. ಕನ್ನಡ ಸಾಹಿತ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಾಯ ಚೊಕ್ಕಾಡಿ, ಸಂದೇಶ ಪತ್ರಿಕೋದ್ಯಮ ಪ್ರಶಸ್ತಿಯನ್ನು `ಪ್ರಜಾವಾಣಿ'ಯ ಸಹಾಯಕ ಸಂಪಾದಕ  ಲಕ್ಷ್ಮಣ ಕೊಡಸೆ, ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಡೊಲ್ಫಿ ಲೋಬೊ ಕಾಸ್ಸಿಯಾಗೆ, ಸಂದೇಶ ತುಳು ಪ್ರಶಸ್ತಿಯನ್ನು ಪ್ರೊ.ಎ.ವಿ. ನಾವಡ, ಸಂದೇಶ ಕಲಾ ಪ್ರಶಸ್ತಿಯನ್ನು ರಂಗಭೂಮಿಯ ಖ್ಯಾತ ಕಲಾವಿದೆ ಅರುಂಧತಿ ನಾಗ್. ಸಂದೇಶ ಮಾಧ್ಯಮ ಶಿಕ್ಷಣ ಪ್ರಶಸ್ತಿಯನ್ನು ಚಿತ್ರದುರ್ಗದ ಸಾಣೆಹಳ್ಳಿ ಶಿವಸಂಚಾರ ನಾಟಕ ತಂಡ, ಸಂದೇಶ ಶಿಕ್ಷಣ ಪ್ರಶಸ್ತಿಯನ್ನು ಮೂಲ್ಕಿಯ ಫ್ರಾನ್ಸಿಸ್ ಡಿ,ಕುನ್ಹಾ ಹಾಗೂ ಬಿಜೈನ ಹ್ಯಾರಿ ಡಿ'ಸೋಜ ಅವರಿಗೆ ಸಂದೇಶ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2008: ಮಾಧ್ಯಮಗಳಲ್ಲಿ ಇತ್ತೀಚೆಗೆ ಭಾರಿ ಸುದ್ದಿ ಮಾಡಿದ್ದ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಮತ್ತು ಅವರ ಪ್ರೇಯಸಿ ಬ್ರೂನಿ ಪ್ಯಾರಿಸ್ಸಿನಲ್ಲಿ ವಿವಾಹವಾದರು. 53 ವರ್ಷದ ಸರ್ಕೋಜಿ ಮತ್ತು 40 ವರ್ಷದ ಬ್ರೂನಿ ಅವರು ಕುಟುಂಬ ವರ್ಗ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಗಾದರು.  

2008: ಶಾಂತಿ ಪ್ರಕ್ರಿಯೆ ಹಾಗೂ ಮಾನವ ಅಭಿವೃದ್ಧಿಗೆ ಅನುಕೂಲವಾಗುವ ರೀತಿಯಲ್ಲಿ ಬಾಹ್ಯಾಕಾಶ ಯೋಜನೆ ಕೈಗೊಳ್ಳಲು ಪರಸ್ಪರ ಸಹಕರಿಸಲು ಭಾರತ ಹಾಗೂ ಅಮೆರಿಕ ಒಪ್ಪಂದ ಮಾಡಿಕೊಂಡವು. ಇಸ್ರೋ ಹಾಗೂ ನಾಸಾ ಈ ನಿಟ್ಟಿನ ಒಪ್ಪಂದಕ್ಕೆ ಸಹಿಹಾಕಿದವು. ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ನಾಸಾ ಆಡಳಿತಾಧಿಕಾರಿ ಮೈಖೆಲ್ ಗ್ರಿಫ್ಫಿನ್ ಹಾಗೂ ಇಸ್ರೊ ಅಧ್ಯಕ್ಷ ಜಿ. ಮಾಧವನ್ ನಾಯರ್ ಒಪ್ಪಂದಕ್ಕೆ ಸಹಿ ಹಾಕಿದರು. ಚಂದ್ರನ ಮೇಲೆ ಭಾರತ ಕೈಗೊಳ್ಳಲಿರುವ ಮೊಟ್ಟ ಮೊದಲ ಮಾನವರಹಿತ ಪ್ರಯಾಣ `ಚಂದ್ರಯಾನ-1' ಯೋಜನೆಗೂ ಈ ಒಪ್ಪಂದದಡಿ ಅಮೆರಿಕ ಸಹಕಾರ ನೀಡುವುದು.

2008: ದುಬೈನ ಹೊಸ ಯುವರಾಜನಾಗಿ ಶೇಖ್ ಹಮ್ದಾನ್ (26) ನೇಮಕಗೊಂಡರು. ಇವರು ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತಾಮ್ ಪುತ್ರ. 

2007: ಬೃಹನ್ ಮುಂಬಯಿ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಶಿವಸೇನೆ- ಬಿಜೆಪಿ ಮೈತ್ರಿಕೂಟವು ನಿಚ್ಚಳ ಬಹುಮತ ಸಾಧಿಸಿ ಪಾಲಿಕೆಯ ಅಧಿಕಾರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಒಟ್ಟು 227 ಸ್ಥಾನಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ - 111, ಕಾಂಗ್ರೆಸ್ 73, ಎನ್ಸಿಪಿ 14, ಎಂಎನ್ಎಸ್ 7 ಮತ್ತು ಇತರರು 23 ಸ್ಥಾನಗಳನ್ನು ಪಡೆದುಕೊಂಡರು.

2007: ಆರ್ಥಿಕ ಸುಸ್ಥಿತಿಯಲ್ಲಿ ಇರುವ ವ್ಯಕ್ತಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಎ.ಆರ್. ಲಕ್ಷ್ಮಣನ್, ಅಲ್ತಮಸ್ ಕಬೀರ್ ಅವರನ್ನು ಒಳಗೊಂಡ ಪೀಠವು ಈ ತೀರ್ಪು ನೀಡಿತು.

2007: ಧರ್ಮಸ್ಥಳದ ಬಾಹುಬಲಿಗೆ ಎಳನೀರು, ಹಾಲು, ಕಬ್ಬಿನಹಾಲು, ಅರಿಷಿಣಗಳ 1008 ಕಲಶಗಳಿಂದ ಅಭಿಷೇಕ ನಡೆಯಿತು. ಮೊದಲ ಕಲಶ ಪಡೆದ ಹೆಗ್ಗಳಿಕೆ ದೆಹಲಿಯ ಸುರೇಂದ್ರಜೀ ಅವರದಾಯಿತು.

2007: ಜಮೀನು ವಿವಾದದ ಹಿನ್ನೆಲಯಲ್ಲಿ ಬೀದರಿನ ಉದ್ಯಮಿ ಹಾಗೂ ಶಾಸಕ ಗುರಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ವಿಜಯಕುಮಾರ ನಾಗಮಾರಪಳ್ಳಿ (26) ಅವರನ್ನು ಬೀದರಿನಲ್ಲಿ ಹಾಡು ಹಗಲೇ ಚೂರಿಯಿಂದ ಬರ್ಬರವಾಗಿ ಇರಿದು, ಗುಂಡು ಹಾರಿಸಿ ಕೊಲ್ಲಲಾಯಿತು.

2007: ವಿವಾದಾತ್ಮಕ ಕಲಾವಿದ ಎಂ.ಎಫ್. ಹುಸೇನ್ ಅವರ ವುಮನ್ ಅಂಡ್ ಹಾರ್ಸಸ್ (ಮಹಿಳೆ ಮತ್ತು ಕುದುರೆಗಳು) ಕಲಾಕೃತಿಯು ದುಬೈಯಲ್ಲಿ ನಡೆದ ಹರಾಜಿನಲ್ಲಿ 4,41,600 ಡಾಲರುಗಳ ದಾಖಲೆ ಮೊತ್ತಕ್ಕೆ ಮಾರಾಟವಾಯಿತು.

2006: ಜೆಡಿ(ಎಸ್)ನ ಎಚ್. ಡಿ. ಕುಮಾರಸ್ವಾಮಿ ಹಾಗೂ ಅವರ ಬಣದ ಇತರ ಶಾಸಕರು ಯಾವುದೇ ಹುದ್ದೆ ಅಲಂಕರಿಸುವ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿತು. ಇದರಿಂದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕುಮಾರ ಸ್ವಾಮಿ ದಾರಿ ಸುಗಮಗೊಂಡಿತು.

2006: ಬಹುಭಾಷಾ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್ (81) ಈದಿನ ಬೆಳಗ್ಗೆ ಬೆಂಗಳೂರಿನ ಜಯನಗರದ ತಮ್ಮ ಮನೆಯಲ್ಲಿ ನಿಧನರಾದರು. ವೇದ, ವೈದ್ಯಕೀಯ, ಆಯುರ್ವೇದ, ಮನಃಶಾಸ್ತ್ರ, ಸಮಾಜಶಾಸ್ತ್ರ, ಸಾಹಿತ್ಯ, ಸಂಗೀತಕಲೆ, ಜೀವನಚರಿತ್ರೆ, ಅನುವಾದ, ಸಂಪಾದನೆ, ಜೀವನಸಾಧನೆ ಇತ್ಯಾದಿ ಬಹುಮುಖಿ ಕ್ಷೇತ್ರಗಳಲ್ಲಿ ಕೃತಿ ರಚಿಸಿ ತಮ್ಮ ಪ್ರತಿಭೆಯನ್ನು ಅವರು ಮೆರೆದಿದ್ದರು. 1927ರಲ್ಲಿ ಹಾಸನದಲ್ಲಿ ಹುಟ್ಟಿದ ಅವರು ಸಂಸ್ಕತ, ಪಾಳಿ, ಅರ್ಧಮಾಗದಿ ಹಾಗೂ ಅನೇಕ ಆಧುನಿಕ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಟೆಬೆಟಿಯನ್ ಮತ್ತು ಕೆಲವು ಐರೋಪ್ಯ ಭಾಷೆಗಳ ಪರಿಚಯವೂ ಅವರಿಗಿತ್ತು. ಕನ್ನಡ, ಸಂಸ್ಕತ, ಇಂಗ್ಲಿಷ್ ಹಾಗೂ ಪಾಳಿ ಭಾಷೆಗಳಲ್ಲಿ ಅವರು ಕೃತಿಗಳನ್ನು ರಚಿಸಿದ್ದರು. ಕನ್ನಡದಲ್ಲಿ 80ಕ್ಕೂ ಹೆಚ್ಚು, ಇಂಗ್ಲಿಷಿನಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಅವರು ರಚಿಸಿದ್ದರು. ಸಂಸ್ಕತದಲ್ಲಿ ಒಂದು ನಾಟಕ, ಪಾಳಿಯಲ್ಲಿ ಎರಡು ಕೃತಿ ರಚಿಸಿದ್ದರು.

2006: ಸಹಸ್ರಾರು ಪ್ರಯಾಣಿಕರನ್ನು ಒಯ್ಯುತ್ತಿದ್ದ ಈಜಿಪ್ಟಿನ ಸಲಾಂ 98 ಹೆಸರಿನ ಹಡಗು ಕೆಂಪು ಸಮುದ್ರದಲ್ಲಿ ರಾತ್ರಿ 10 ಗಂಟೆಗೆ ಮುಳುಗಿದ್ದು ಸಹಸ್ರಾರು ಮಂದಿ ಜಲಸಮಾಧಿಯಾಗಿದ್ದಾರೆ ಎಂದು ವರದಿಯಾಯಿತು. ಈ ಹಡಗಿನಲ್ಲಿ 1310 ಪ್ರಯಾಣಿಕರು, 104 ಸಿಬ್ಬಂದಿ ಇದ್ದರು. ಹರ್ಮದಾ ಬಂದರಿನಿಂದ 40 ಕಿ.ಮೀ. ದೂರದಲ್ಲಿ ಈ ದುರಂತ ಸಂಭವಿಸಿತು.

1990: ಅಧ್ಯಕ್ಷ ಎಫ್. ಡಬ್ಲ್ಯೂ. ಡಿ ಕ್ಲರ್ಕ್ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮೇಲಿನ ನಿಷೇಧವನ್ನು ರದ್ದು ಪಡಿಸಿದರು. ಮತ್ತು ನೆಲ್ಸನ್ ಮಂಡೇಲಾ ಅವರ ಬಿಡುಗಡೆಯ ಭರವಸೆ ನೀಡಿದರು. ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಇವು ಮಹತ್ವದ ಹೆಜ್ಜೆಗಳಾದವು.

1987: ಸ್ಕಾಟಿಷ್ ಕಾದಂಬರಿಕಾರ ಅಲಿಸ್ಟೈರ್ ಮೆಕ್ ಲೀನ್ಸ್ ಮ್ಯೂನಿಚ್ಚಿನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ಮೃತರಾದರು.

1978: ಕಲಾವಿದ ಜಯಸಿಂಹ ಜನನ.

1963: ಕಲಾವಿದ ಹಿರೇಮಠ ವಿವಿ ಜನನ.

1951: ಕಲಾವಿದ ಸುಂದರರಾಜ್ ಜನನ.

1923: ಖ್ಯಾತ ಹಾಕಿ ಆಟಗಾರ ಕನ್ವರ್ ದಿಗ್ವಿಜಯ್ಸಿಂಗ್ `ಬಾಬು' ಹುಟ್ಟಿದರು. 1970ರಲ್ಲಿ ಈದಿನ ಬ್ರಿಟಿಷ್ ಗಣಿತ ತಜ್ಞ, ತತ್ವಜ್ಞಾನಿ ಬರ್ಟ್ರೆಂಡ್ ರಸ್ಸೆಲ್ ತಮ್ಮ 97ನೇ ವಯಸ್ಸಿನಲ್ಲಿ ನಿಧನರಾದರು. 

1915: ಖ್ಯಾತ ಹಾಸ್ಯ ಲೇಖಕ, ಪತ್ರಕರ್ತ ಖುಷವಂತ್ ಸಿಂಗ್ ಈದಿನ ಪಂಜಾಬಿನ ಹದಾಲಿ (ಈಗ ಪಾಕಿಸ್ಥಾನದಲ್ಲಿ ಇದೆ) ಜನಿಸಿದರು. 

1914: ಕಲಾವಿದ ಶುದ್ಧೋದನ ಎಂ.ಜೆ. ಜನನ.

1892: ಕಲಾವಿದ ಪಂಚಾಕ್ಷರಿ ಗವಾಯಿ ಜನನ.

1889: ಸ್ವಾತಂತ್ರ್ಯ ಯೋಧೆ ರಾಜಕುಮಾರಿ ಅಮೃತಾ ಕೌರ್ (1889-1964) ಹುಟ್ಟಿದರು. ಅವರು ಸ್ವತಂತ್ರ ಭಾರತದ ಆರೋಗ್ಯ ಸಚಿವರಾಗಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದರು. 

1884: ರಾಮಚಂದ್ರ ಶುಕ್ಲ (1884-1941) ಜನ್ಮದಿನ. ಇವರು ಹಿಂದಿ ಸಾಹಿತಿ, ವಿಮರ್ಶಕ, ಪ್ರಬಂಧಕಾರರಾಗಿ ಖ್ಯಾತಿ ಗಳಿಸಿದರು.

1869: ವೃತ್ತಿ ರಂಗಭೂಮಿಗೆ ಕರ್ನಾಟಕದ ಶಾಸ್ತ್ರೀಯ ಸಂಗೀತದ ಮೆರುಗು ಹಾಗೂ ರಂಗಪ್ರದರ್ಶನದ ವೈಭವ ಪಾತ್ರಗಳಿಗೆ ವೇಷಭೂಷಣಗಳ ಸಹಜತೆಯನ್ನು ತಂದುಕೊಟ್ಟ ಕಲಾವಿದ ಎ.ವಿ. ವರದಾಚಾರ್ (2-2-1869ರಿಂದ 4-4-1926) ಅವರು ಅನುಮನಪಲ್ಲಿ ರಂಗಸ್ವಾಮಿ ಅಯ್ಯಂಗಾರರ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1650: ಇಂಗ್ಲಿಷ್ ನಟಿ ಹಾಗೂ 2ನೇ ಚಾರ್ಲ್ಸನ ಪ್ರೇಯಸಿಯಾದ ನೆಲ್ ಗ್ವಿನ್ (1650-1687) ಹುಟ್ಟಿದ ದಿನ.

1649: ಪೋಪ್ 13ನೇ ಬೆನೆಡಿಕ್ಟ್ (1649-1730) ಹುಟ್ಟಿದ ದಿನ. ಇವರು 1724-1730ರ ಅವಧಿಯಲ್ಲಿ ಪೋಪ್ ಆಗಿದ್ದರು.

1536: ಅರ್ಜೆಂಟೀನಾದ ನಗರ ಬ್ಯೂನೋಸ್ ಏರಿಸನ್ನು ಸ್ಪೇನಿನ ಪೆಡ್ರೋ ಡೆ ಮೆಂಡೋಝಾ ಸ್ಥಾಪಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement