Friday, February 6, 2009

ಇಂದಿನ ಇತಿಹಾಸ History Today ಫೆಬ್ರುವರಿ 06

ಇಂದಿನ ಇತಿಹಾಸ

ಫೆಬ್ರುವರಿ 6

ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಖ್ಯಾತ ಕಾದಂಬರಿಕಾರ ಯಶವಂತ ಚಿತ್ತಾಲ ಅವರ ಹೆಸರನ್ನು ಆಯ್ಕೆ ಮಾಡಲಾಯಿತು. `ಶಿಕಾರಿ', `ಮೂರು ದಾರಿಗಳು', `ಕಥೆಯಾದಳು ಹುಡುಗಿ' ಸೇರಿದಂತೆ ಒಟ್ಟು ಆರು ಕಾದಂಬರಿಗಳು ಹಾಗೂ ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಅವರಿಗೆ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

2008: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಖ್ಯಾತ ಕಾದಂಬರಿಕಾರ ಯಶವಂತ ಚಿತ್ತಾಲ ಅವರ ಹೆಸರನ್ನು ಆಯ್ಕೆ ಮಾಡಲಾಯಿತು. `ಶಿಕಾರಿ', `ಮೂರು ದಾರಿಗಳು', `ಕಥೆಯಾದಳು ಹುಡುಗಿ' ಸೇರಿದಂತೆ ಒಟ್ಟು ಆರು ಕಾದಂಬರಿಗಳು ಹಾಗೂ ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಅವರಿಗೆ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಮುಂಬೈ ನಗರವಾಸಿ ಚಿತ್ತಾಲರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯವರು. ಹಿರಿಯ ಸಾಹಿತಿ ಜಿ.ಎಸ್. ಆಮೂರ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಚಿತ್ತಾಲರ ಹೆಸರನ್ನು ಶಿಫಾರಸು ಮಾಡಿತು.

2008: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಉಡುಪಿ ಮೂಲದ ಸುಧಾಕರ ರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಯಿತು. ಇದುವರೆಗೂ ಆ ಹುದ್ದೆಯಲ್ಲಿದ್ದ ಪಿ.ಬಿ.ಮಹಿಷಿ ಅವರನ್ನು ಸ್ಥಾನ ಪಲ್ಲಟ ಮಾಡಿ, ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

2008: ಹೊನ್ನಾಳಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರ ಪೈಕಿ ರಿಯಾಜ್ದುದೀನ್ ಅಲಿಯಾಸ್ ಮೊಹಮ್ಮದ್ ಗೌಸನನ್ನು ಬೆಂಗಳೂರಿನ ಮಡಿವಾಳದಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ  ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಯಿತು. ಜನವರಿ ತಿಂಗಳ ಅಂತ್ಯದ ವೇಳೆ ಹುಬ್ಬಳ್ಳಿಯ ವಿಮಾನ ನಿಲ್ದಾಣ ಸೇರಿದಂತೆ ಎರಡು ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆಸಲು ಅಂತಿಮ ಸಿದ್ಧತೆ ನಡೆಸಿದ್ದ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ರಿಯಾಜುದ್ದೀನ್ ಒಪ್ಪಿಕೊಂಡ.

2008: ಪಾಶ್ಚಾತ್ಯ ದೇಶಗಳಲ್ಲಿ ಬಹಳ ಜನಪ್ರಿಯತೆ ಗಳಿಸಿದ್ದ ಆಧ್ಯಾತ್ಮಿಕ ಗುರು ಮಹರ್ಷಿ ಮಹೇಶ ಯೋಗಿ (91) ಅವರು ಹಾಲೆಂಡಿನ ಲೊಡ್ರೊಪ್ ಪಟ್ಟಣದಲ್ಲಿ ನಿಧನರಾದರು. ಮೂಲತಃ ಮಧ್ಯಪ್ರದೇಶದವರಾದ ಮಹೇಶ ಪ್ರಸಾದ್ ವರ್ಮಾ ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದು ನಂತರ ಆಧ್ಯಾತ್ಮಿಕ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡವರು. 1959ರಷ್ಟು ಹಿಂದೆಯೇ ಇವರು ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಧ್ಯಾನದ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದರು. ಚಲನಚಿತ್ರ ರಂಗದ ಕ್ಲಿಂಟ್ ಈಸ್ಟ್ ವುಡ್ ಸೇರಿದಂತೆ ಜಗತ್ತಿನ ಅನೇಕ ಗಣ್ಯರು ಇವರ ಶಿಷ್ಯವರ್ಗಕ್ಕೆ ಸೇರಿದವರು. `ಕತ್ತಲೆಯ ವಿರುದ್ಧ ಹೋರಾಡಬೇಕೆಂದೇನಿಲ್ಲ. ಆದರೆ ಬೆಳಕನ್ನು ತನ್ನಿ. ತನ್ನಷ್ಟಕ್ಕೆ ತಾನೇ ಕತ್ತಲು ಸರಿಯುತ್ತದೆ' ಎಂದೂ ಅವರು ಹೇಳುತ್ತಿದ್ದರು.

2008: ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖಂಡ ರಾಜ್ ಠಾಕ್ರೆ ನಿಲುವಿಗೆ ಬೇಸತ್ತ ಸುಮಾರು 200 ಕಾರ್ಯಕರ್ತರು ಮುಂಬೈಯಲ್ಲಿ ಎಂ ಎನ್ ಎಸ್ ತೊರೆದು ಶಿವಸೇನೆಗೆ  ಸೇರ್ಪಡೆಯಾದರು. ಬಾಳಾ ಠಾಕ್ರೆಯವರ ನಿವಾಸ `ಮಾತೋಶ್ರಿ'ಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭ ಒಂದರಲ್ಲಿ ಈ ಕಾರ್ಯಕರ್ತರು ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಶಿವಸೇನೆ ಸೇರಿದರು.

2008: ಪಶ್ಚಿಮಬಂಗಾಳದ ದಿನ್ಹಾಟದಲ್ಲಿ ನಡೆದ ಪೊಲೀಸ್ ಗೋಲಿಬಾರ್ ಖಂಡಿಸಿ ರಾಜ್ಯದ ಆಡಳಿತಾರೂಢ ಎಡರಂಗದ ಅಂಗಪಕ್ಷವಾದ ಫಾರ್ವರ್ಡ್ ಬ್ಲಾಕ್ ಪಕ್ಷವು ನೀಡಿದ 24 ಗಂಟೆಗಳ `ಬಾಂಗ್ಲಾ ಬಂದ್' ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ, ಹಲವೆಡೆ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು.

2008: ಲೋಕಸಭೆಯಲ್ಲಿ ಮೊತ್ತಮೊದಲ ಬಾರಿಗೆ ಕನ್ನಡದ ಕಹಳೆಯನ್ನು ಮೊಳಗಿಸಿ, ಆ ಮೂಲಕ ಸಂಸತ್ ಕಲಾಪದಲ್ಲಿ ಭಾಷಾಂತರ ವ್ಯವಸ್ಥೆಯ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ಅಪರೂಪದ ರಾಜಕೀಯ ಮುತ್ಸದ್ಧಿ ದಿವಂಗತ ಜೆ.ಎಚ್. ಪಟೇಲ್ ಅವರ ಕಂಚಿನ ಪ್ರತಿಮೆಯಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ಆವರಣದಲ್ಲಿ ಕೇಂದ್ರ ಯೋಜನಾ ಖಾತೆ ರಾಜ್ಯ ಸಚಿವ ಎಂ.ವಿ. ರಾಜಶೇಖರನ್ ಅನಾವರಣಗೊಳಿಸಿದರು.

2008: ವಿವಿಧ ಕಾರಣಗಳಿಗೆ ತಲೆಗೂದಲು ಉದುರಿ ಉಂಟಾಗುವ ಬೋಳು ತಲೆ ಸಮಸ್ಯೆಗೆ `ತದ್ರೂಪಿ ಕೇಶ' ತಂತ್ರಜ್ಞಾನದ ಮೂಲಕ  ಪರಿಣಾಮಕಾರಿ ಚಿಕಿತ್ಸೆ ನೀಡಲು ಡಾ. ಬಾತ್ರಾಸ್ ಕ್ಲಿನಿಕ್, ಜರ್ಮನಿಯ ಕೇಶ ಸಂಶೋಧನಾ ಸಂಸ್ಥೆಯ (ಇ ಎಚ್ ಆರ್ ಎಸ್) ಜೊತೆ ಕೈಜೋಡಿಸಿದೆ ಎಂದು ಕೇಶ ತಜ್ಞ ಸಂಸ್ಥೆಯ ಅಧ್ಯಕ್ಷ ಪ್ರೊ. ರಾಲ್ಫ್ ಹಾಫ್ಮನ್ ಪ್ರಕಟಿಸಿದರು. ವಿಶ್ವದಾದ್ಯಂತ ಬೋಳು ತಲೆ ಸಮಸ್ಯೆಯಿಂದ ಬಳಲುವ ಲಕ್ಷಾಂತರ ಜನರ ಸಮಸ್ಯೆಗೆ `ತದ್ರೂಪಿ ಕೇಶ'ದಿಂದ ಪರಿಹಾರ ನೀಡಲು ಸಾಧ್ಯ. ಅದರಲ್ಲೂ ಮಹಿಳೆಯರಿಗೆ ಇದು ಗಮನಾರ್ಹವಾಗಿ ನೆರವಾಗಲಿದೆ ಎಂದು ಹಾಫ್ಮನ್ ಹೇಳಿದರು. ವ್ಯಕ್ತಿಯ ನೆತ್ತಿಯ ಭಾಗದಿಂದ ಅಲ್ಪ ಪ್ರಮಾಣದಲ್ಲಿ ಕೇಶ ತೆಗೆದುಕೊಂಡು ಅದನ್ನು 2 ಗಂಟೆಗಳ ಕಾಲ ಪ್ರಯೋಗಾಲಯದಲ್ಲಿ ಇರಿಸಲಾಗುವುದು. ಅನಂತರ ಅದನ್ನು ಯೂರೋಪಿನ ಸಂಶೋಧನಾ ಕೇಂದ್ರಗಳಿಗೆ ಸಾಗಿಸಿ ಅವುಗಳ ಸಂಖ್ಯೆ ದ್ವಿಗುಣಗೊಳಿಸಲಾಗುವುದು. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಎರಡು ವರ್ಷಗಳಲ್ಲಿ ತಲೆಗೂದಲು ಗಮನಾರ್ಹ ಪ್ರಮಾಣದಲ್ಲಿ ಬೆಳೆಯುತ್ತವೆ. `ತದ್ರೂಪಿ ಕೇಶ' ತಂತ್ರಜ್ಞಾನವನ್ನು ಡಾ. ಬಾತ್ರಾಸ್ ಕ್ಲಿನಿಕ್ಕುಗಳ ಮೂಲಕ ಭಾರತದಲ್ಲಿ ಜನಪ್ರಿಯಗೊಳಿಸಲಾಗುವುದು ಎಂದು ಅವರು ಹೇಳಿದರು. 

2007: ಅನಾರೋಗ್ಯದಿಂದ ಬಳಲುತ್ತಿದ್ದ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಫರೀದ್ (69) ಈದಿನ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದರು. ವಕೀಲರಾಗಿದ್ದ ಫರೀದ್ ಅವರು 1972, 1978, 1999 ಮತ್ತು 2004 ಸೇರಿದಂತೆ ಒಟ್ಟು ನಾಲ್ಕು ಬಾರಿ ವಿಧಾನಸಭೆಯನ್ನು ಉಳ್ಳಾಲ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. 1972ರಲ್ಲಿ ಮೊದಲ ಬಾರಿಗೆ ಶಾಸನ ಸಭೆ ಪ್ರವೇಶಿದ ಸಂದರ್ಭದಲ್ಲಿ ಅವರು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಲಿಡ್ಕರ್ ಅಧ್ಯಕ್ಷರಾಗಿ, ರಾಜ್ಯ ಎಂಜಿನಿಯರ್ಸ್ ಆಯ್ಕೆ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2007: ಬೊಫೋರ್ಸ್ ಲಂಚ ಹಗರಣದ ಪ್ರಮುಖ ಆರೋಪಿ ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಅವರನ್ನು ಅಜೆಂಟೀನಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

2007: ಅಯೋಡಿನ್ ರಹಿತ ಉಪ್ಪಿನ ಉತ್ಪಾದನೆ, ಮಾರಾಟ ಹಾಗೂ ನೇರ ಬಳಕೆಯ ಮೇಲೆ ವ್ಯಾಪಕ ನಿಷೇಧ ಹೇರಿ ಸರ್ಕಾರ 7 ನವೆಂಬರ್ 2005ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ವಿಚಾರಣೆಗೆ ಅಂಗೀಕರಿಸಿತು. ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಪೌಷ್ಟಿಕಾಂಶ ಅಭಿವೃದ್ಧಿ ಅಕಾಡೆಮಿ ಮತ್ತು ಇತರ ಸ್ವಯಂ ಸೇವಾಸಂಘಗಳ ವಕೀಲರು ಮಂಡಿಸಿದ ವಾದವನ್ನು ಅಲಿಸಿದ ನ್ಯಾಯಮೂರ್ತಿ ಬಿ.ಎನ್. ಅಗರ್ ವಾಲ, ಪಿ.ಪಿ. ನಾವ್ಲೇಕರ್ ಮತ್ತು ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠ ಈ ಕ್ರಮ ಕೈಗೊಂಡಿತು. ಅಯೋಡಿನ್ ಹೊಂದಿರುವ ಉಪ್ಪಿನ ಬಳಕೆಯನ್ನು ಕಡ್ಡಾಯ ಮಾಡುವ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ ಮತ್ತು ಸಂವಿಧಾನಬಾಹಿರವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಅಮೆರಿಕ, ಸ್ವಿಟ್ಜರ್ ಲ್ಯಾಂಡ್, ಇಂಗ್ಲೆಂಡ್, ಜಪಾನ್ ಮತ್ತು ಇಟಲಿ ರಾಷ್ಟ್ರಗಳಲ್ಲಿಯೂ ಈ ಮೊದಲು ಅಯೋಡಿನ್ ಹೊಂದಿದ ಉಪ್ಪನ್ನೇ ಬಳಸಬೇಕೆಂದು ಆದೇಶ ಹೊರಡಿಸಿದ್ದವು. ಆದರೆ, ಈ ಉಪ್ಪಿನ ಬಳಕೆಯಿಂದ ಗಂಟಲಿಗೆ ಸಂಬಂಧಿಸಿದ ರೋಗ, ಅತಿಸಾರ, ಕಾಲರಾ ಹಾಗೂ ಕರುಳುಬೇನೆ ರೋಗಗಳಿಗೆ ಹೆಚ್ಚು  ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ರಾಷ್ಟ್ರಗಳಲ್ಲಿ ಆದೇಶವನ್ನು ರದ್ದುಪಡಿಸಿದವು ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು.

2007: ಭಾರತದ ಜವಳಿ ಉದ್ಯಮಗಳಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸುವಂತೆ ಪ್ರೋತ್ಸಾಹಿಸಿದ ದಿ ಇಂಡಿಯಾ - ಕೆನಡಾ ಎನ್ವಿರಾನ್ಮೆಂಟ್ ಫೆಸಿಲಿಟಿ (ಐಸಿಇಎಫ್) ಸಂಸ್ಥೆಗೆ ಪ್ರತಿಷ್ಠಿತ ವಿಶ್ವಸಂಸ್ಥೆಯ `ಸೀಡ್' ಪ್ರಶಸ್ತಿ ಲಭಿಸಿತು.

2006: ವಿಶ್ವ ವಿಖ್ಯಾತ ಬಾಹುಬಲಿಯ ಕ್ಷೇತ್ರವಾದ ಹಾಸನ ಜಿಲ್ಲೆಯ ಶ್ರವಣಬೆಳಗೊಳಕ್ಕೆ ರೈಲು ಸಂಚಾರದ ಕನಸು ನನಸಾಯಿತು. ಸಹಸ್ರಮಾನದ ಮೊದಲ ಮಹಾಮಸ್ತಕಾಭಿಷೇಕದ ಮುನ್ನಾದಿನ ಕೇಂದ್ರ ರೈಲ್ವೆ ಸಚಿವ ಆರ್. ವೇಲು ಹೊಸ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡುವ ಮೂಲಕ ಈ ಹೊಸ ರೈಲು ಸೇವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

2006: ಕಂಪ್ಯೂಟರ್ ಬಳಸುವ ಕೋಟ್ಯಂತರ ಜನರನ್ನು ಕಾಡುತ್ತಿರುವ ಕಾಮಸೂತ್ರ ಹೆಸರಿನ ವೈರಸ್ ತಡೆಗಟ್ಟುವ ರುದ್ರ ಹೆಸರಿನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ತಮಿಳುನಾಡಿನ ಚೆನ್ನೈ ಮೂಲದ ಸನ್ರಾಸಾಫ್ಟ್ ಕಂಪೆನಿ ಪ್ರಕಟಿಸಿತು.

2006:  ಭಾರತೀಯ ಹಾಕಿ ತಂಡದ ನಾಯಕ ದಿಲೀಪ್ ಟರ್ಕೆ ಹಮೀರಪುರದ ಕ್ಯಾಥೋಲಿಕ್ ಚರ್ಚ್ ಒಂದರಲ್ಲಿ ಮೀರಾ ಎಂಬ ಯುವತಿಯನ್ನು ಮದುವೆಯಾದರು.

2006: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಕರೀಂ ಲಾಲಾ ತೆಲಗಿ ಪುಣೆಯ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ರಹಸ್ಯವಾಗಿ 1995ರ ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ.

2006: ಏಷ್ಯದ ಅತ್ಯಂತ ಹಳೆಯ ಷೇರು ವಿನಿಮಯ ಕೇಂದ್ರವಾದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 130 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 10,000ದ ಗಡಿ ದಾಟಿತು.

1993: ಕರಿಯ ಅಮೆರಿಕನ್ ಟೆನಿಸ್ ಆಟಗಾರ ಆರ್ಥರ್ ಆಷ್ ಸರ್ಜರಿ ಕಾಲದಲ್ಲಿ ರಕ್ತದ ಮೂಲಕ ತಗುಲಿದ ಏಡ್ಸ್ ಗೆ ಬಲಿಯಾಗಿ ಅಸು ನೀಗಿದರು.

1964: ಸ್ವಾತಂತ್ರ್ಯಯೋಧೆ ರಾಜಕುಮಾರಿ ಅಮೃತಾ ಕೌರ್ ತಮ್ಮ 75ನೇ ವಯಸ್ಸಿನಲ್ಲಿ ಮೃತರಾದರು. ಇವರು ಕೇಂದ್ರ ಸಂಪುಟವನ್ನು ಸೇರಿದ ಮೊದಲ ಮಹಿಳೆ.

1958: ಬೆಲ್ ಗ್ರೇಡ್ನಿಂದ ತಾಯ್ನಾಡಿಗೆ ಹೊರಟಿದ್ದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ 8 ಜನ ಆಟಗಾರರು ಮ್ಯೂನಿಚ್ ವಿಮಾನನಿಲ್ದಾಣದ ಬಳಿ ವಿಮಾನ ಅಪಘಾತದಲ್ಲಿ ಮೃತರಾದರು. ಮೂವರು ಕ್ಲಬ್ ಅಧಿಕಾರಿಗಳು, 8 ಮಂದಿ ಕ್ರೀಡಾ ಪತ್ರಕರ್ತರೂ ಮೃತರಾದರು. ಅಪಘಾತದಲ್ಲಿ ಬದುಕಿ ಉಳಿದ ಬಾಬ್ಬಿ ಚಾರ್ಲ್ಟನ್ ನಂತರ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಅತ್ಯಂತ ಹೆಚ್ಚು ಗೋಲುಗಳನ್ನು ತಂದುಕೊಟ್ಟ ಇಂಗ್ಲೆಂಡಿನ ಖ್ಯಾತ ಆಟಗಾರರಾದರು.

1952: ದೊರೆ 6ನೇ ಜಾರ್ಜ್ ನಿಧನರಾದರು. ಅವರ ಪುತ್ರಿ 2ನೇ ಎಲಿಜಬೆತ್ ಅವರ ಉತ್ತರಾಧಿಕಾರಿಯಾದರು.

1951: ರಂಗಭೂಮಿಯ ಪ್ರಯೋಗಶೀಲ ನಾಟಕಗಳಿಗೆ ಹೊಸ ಆಯಾಮ ನೀಡಿದ ಅಶೋಕ ಬಾದರದಿನ್ನಿ  ಅವರು ರುದ್ರಗೌಡ ಬಾದರದಿನ್ನಿ- ಗೌರಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಅಚನೂರಿನಲ್ಲಿ ಜನಿಸಿದರು.

1950: ಕಲಾವಿದ ಕೃಷ್ಣಮೂರ್ತಿ ಎಸ್. ಜನನ.

1923: ಹ.ವೇ. ಲಕ್ಷ್ಮೀನಾರಾಯಣ ಜನನ.

1912: ಹಿಟ್ಲರನ ಪತ್ನಿ ಇವಾ ಬ್ರೌನ್ (1912-45) ಹುಟ್ಟಿದ ದಿನ. 

1911: ರೊನಾಲ್ಡ್ ಡಬ್ಲ್ಯೂ ರೇಗನ್ ಹುಟ್ಟಿದ ದಿನ. ನಟನಾದ ಇವರು 1981-89ರ ಅವಧಿಯಲ್ಲಿ ಅಮೆರಿಕಾದ 40ನೇ ಅಧ್ಯಕ್ಷರಾದರು.

1879: ಎಡ್ವಿನ್ ಸ್ಯಾಮ್ಯುಯೆಲ್ ಮಾಂಟೆಗು (1879-1924) ಹುಟ್ಟಿದ ದಿನ. ಬ್ರಿಟಿಷ್ ರಾಜಕಾರಣಿಯಾದ ಈತ 1919ರಲ್ಲಿ `ಗವರ್ನ್ ಮೆಂಟ್ ಆಫ್ ಇಂಡಿಯಾ ಆಕ್ಟ್' ಜಾರಿಗೆ ನೆರವು ನೀಡಿದ ವ್ಯಕ್ತಿ.

1756: ಅಮೆರಿಕಾದ ಮೂರನೇ ಉಪಾಧ್ಯಕ್ಷ ಅರೋನ್ ಬರ್ (156-1836) ಹುಟ್ಟಿದ ದಿನ. ಈತ ತನ್ನ ರಾಜಕೀಯ ಪ್ರತಿಸ್ಪರ್ಧಿ ಅಲೆಗ್ಸಾಂಡರ್ ಹ್ಯಾಮಿಲ್ಟನನ್ನು ಚಕಮಕಿಯಲ್ಲಿ ಕೊಂದುಹಾಕಿ ತನ್ನ ರಾಜಕೀಯ ಜೀವನವನ್ನು ಹಾಳು ಮಾಡಿಕೊಂಡ. 1807ರಲ್ಲಿ ಈತನನ್ನು ರಾಜದ್ರೋಹದ ಆಪಾದನೆಯಲ್ಲಿ ಬಂಧಿಸಲಾಯಿತು.

1685: `ಮೆರ್ರಿ ಮೊನಾರ್ಕ್' ಎಂದೇ ಖ್ಯಾತರಾಗಿದ್ದ ಎರಡನೇ ಚಾರ್ಲ್ಸ್ ತನ್ನ 54ನೇ ವಯಸ್ಸಿನಲ್ಲಿ ಮೃತನಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement