ಇಂದಿನ ಇತಿಹಾಸ
ಫೆಬ್ರುವರಿ 07
ಹೈಟಿಯ ಮೊತ್ತ ಮೊದಲ ಚುನಾಯಿತ ಅಧ್ಯಕ್ಷರಾಗಿ ಜೀನ್ ಬರ್ಟ್ರಾಂಟ್ ಅರಿಸ್ಟೈಡ್ ಅಧಿಕಾರ ಸ್ವೀಕರಿಸಿದರು.
2008: ಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರವನ್ನು ಸಲ್ಲಿಸಿತು. ಈ ಮೂಲಕ ಎರಡು ವರ್ಷಗಳ ಹಿಂದೆ ಕನ್ನಡದ ನಟಿ ಜಯಮಾಲಾ ಅವರು ಮುಂದಿಟ್ಟ ಬಿಕ್ಕಟ್ಟೊಂದನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಂತಾಯಿತು. ಲಿಂಗ ಆಧಾರದಲ್ಲಿ ಶಬರಿಮಲೆ ಪ್ರವೇಶದಲ್ಲಿ ತಾರತಮ್ಯ ಎಸಗುವ ಸಂಪ್ರದಾಯವನ್ನು ತಡೆಗಟ್ಟಲು ಸರ್ಕಾರ ಸಿದ್ಧವಿದೆ. ಆದರೆ ಶಬರಿಮಲೆ ದೇವಸ್ಥಾನದ ಸುತ್ತಮುತ್ತಲಿನ ಇಕ್ಕಟ್ಟಾದ ಸ್ಥಳದ ಹಿನ್ನೆಲೆಯಲ್ಲಿ ಈಗಿನ ವ್ಯವಸ್ಥೆಯನ್ನೇ ಮುಂದುವರೆಬಹುದು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಯಾತ್ರಾ ಸಮಯವನ್ನು ನಿಗದಿಪಡಿಸಬಹುದು ಎಂದು ಸರ್ಕಾರದ ಪ್ರಮಾಣಪತ್ರದಲ್ಲಿ ತಿಳಿಸಲಾಯಿತು.
2008: ಕನ್ನಡ ಸಂಘಟನೆಗಳ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಶಾಸಕಿ ಡಾ. ರಾಜ್ಯಲಕ್ಷ್ಮಿ ಅವರನ್ನು ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ್ದ ಆದೇಶವನ್ನು ಕರ್ನಾಟಕ ರಾಜ್ಯಪಾಲರು ಹಿಂದಕ್ಕೆ ಪಡೆದರು.
2008: ದೇಶದಲ್ಲೇ ಮೊದಲ ಬಾರಿಗೆ ಅಂತರ್ಜಾಲದ ಮೂಲಕವೇ ವೈದ್ಯಕೀಯ ಸಲಹೆ, ತಜ್ಞ ವೈದ್ಯರ ಶಿಫಾರಸು, ವಾಸಸ್ಥಳದ ಆಸುಪಾಸಿನಲ್ಲಿ ಇರುವ ಪರಿಣತ ವೈದ್ಯರ ವಿವರಗಳನ್ನೆಲ್ಲ ಒದಗಿಸುವ `ಹೆಲ್ತ್ ಕೇರ್ ಮ್ಯಾಜಿಕ್' ಹೆಸರಿನ ಅಂತರ್ಜಾಲ ತಾಣಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ವೈದ್ಯರ ಜೊತೆ ಇಲ್ಲಿ ಲಿ ರೋಗಿಗಳು ಉಚಿತವಾಗಿ ಮಾಹಿತಿ ವಿನಿಮಯ (ಚಾಟ್) ಮಾಡಿಕೊಳ್ಳಬಹುದು. ಬೆಳಗಿನ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಲಭ್ಯ ಇರುವ ಅರ್ಹ ವೈದ್ಯರು ರೋಗಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತಾರೆ. ಅಗತ್ಯ ಇರುವ ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗಳಿಗೆ ತೆರಳಲು ಸಲಹೆ ನೀಡುವರು. ವೈದ್ಯರೊಂದಿಗೆ ಸಮಯ ನಿಗದಿ, ವೈದ್ಯಕೀಯ ಸೇವಾ ಶುಲ್ಕದಲ್ಲಿ ಶೇ 5ರಿಂದ 10ರಷ್ಟು ರಿಯಾಯ್ತಿ ಮತ್ತಿತರ ಸೌಲಭ್ಯಗಳನ್ನೂ ಈ ತಾಣದ ಮೂಲಕ ಪಡೆದುಕೊಳ್ಳಬಹುದು. ವಿವರಕ್ಕೆ healthcaremagic.com ತಾಣಕ್ಕೆ ಭೇಟಿ ನೀಡಬಹುದು.
2008: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಶಂತನು ಭಟ್ಟಾಚಾರ್ಯ ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ರಸಾಯನ ಜೀವಶಾಸ್ತ್ರ ಮತ್ತು ಅತಿಸಣ್ಣ ಕಣಗಳ ವಿನ್ಯಾಸ ಕ್ಷೇತ್ರದಲ್ಲಿ ಕೈಗೊಂಡ ವೈಜ್ಞಾನಿಕ ಸಂಶೋಧನೆಗಾಗಿ 49 ವರ್ಷದ ಶಂತನು ಭಟ್ಟಾಚಾರ್ಯ ಅವರನ್ನು ಆರಿಸಲಾಯಿತು. ಶಂತನು ಈ ಪ್ರಶಸ್ತಿಗೆ ಪಾತ್ರರಾದ 17ನೇ ವ್ಯಕ್ತಿ.
2008: ತಪಾಸಣೆ ನಡೆಸುವ ನೆಪದಲ್ಲಿ ಮಹಿಳಾ ರೋಗಿಗಳ ಬೆತ್ತಲೆ ಚಿತ್ರಗಳನ್ನು ಗುಪ್ತವಾಗಿ ಚಿತ್ರೀಕರಿಸಿಕೊಂಡು ಅವುಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದ ಚೆನ್ನೈಯ ಹೆಸರಾಂತ ಕೀಲುಮೂಳೆ ತಜ್ಞ ಡಾ.ಎಲ್. ಪ್ರಕಾಶ್ ಎಂಬಾತನಿಗೆ ತ್ವರಿತ ವಿಲೇವಾರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು.
2008: ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ರಾವಲ್ಪಿಂಡಿಯಲ್ಲಿ ಬಂಧಿಸಿದರು. ವಿಶೇಷ ತನಿಖಾ ತಂಡದಿಂದ ಬಂಧಿತರಾದ ಇವರನ್ನು ಹಸನೈನ್ ಮತ್ತು ರಫಾಖತ್ ಎಂದು ಗುರುತಿಸಲಾಯಿತು.
2007: ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ಭಾರತೀಯರು ಮತ್ತು ಅನಿವಾಸಿ ಭಾರತೀಯರಿಗೆ ನವದೆಹಲಿಯ ಸಿ ಎನ್ ಎನ್ - ಐಬಿಎನ್ ವರ್ಷದ ಭಾರತೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಉದ್ಯಮಿ ರತನ್ ಟಾಟಾ, ಗಾಲ್ಫಿನಲ್ಲಿ ಗಮನಾರ್ಹ ಸಾಧನೆ ಮಾಡಿದ ಜೀವ್ ಮಿಲ್ಕಾ ಸಿಂಗ್, ಪೆಪ್ಸಿ ಸಮೂಹದ ಸಿಇಓ ಇಂದ್ರಾ ನೂಯಿ, ಲಗೇ ರಹೋ ಮುನ್ನಾಭಾಯಿ ಚಿತ್ರದಲ್ಲಿ ಗಾಂಧಿವಾದವನ್ನು ಪ್ರಸ್ತುತಗೊಳಿಸಿದ ನಿರ್ಮಾಪಕ ರಾಜಕುಮಾರ್ ಹಿರಾನಿ, ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಹೋರಾಡಿದ ಅರವಿಂದ ಕ್ರೇಜಿವಾಲ್, ಅನಿವಾಸಿ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರಿಗೂ ಪ್ರಶಸ್ತಿಗಳನ್ನು ನೀಡಲಾಯಿತು.
2007: ವೆಸ್ಟ್ ಇಂಡೀಸಿನ ಮರ್ಲಾನ್ ಸ್ಯಾಮ್ಯುಯಲ್ಸ್ ಅವರು ನಾಗಪುರದಲ್ಲಿ ನಡೆದ ಪಂದ್ಯಕ್ಕೆ ಎರಡು ದಿನ ಮುಂಚೆ ಬುಕ್ಕಿ ಮುಖೇಶ್ ಕೊಚಾರ್ ಎಂಬಾತನಿಗೆ ಪಿಚ್, ತಂಡದ ಬೌಲಿಂಗ್- ಬ್ಯಾಟಿಂಗ್ ಶಕ್ತಿ ಇತ್ಯಾದಿ ಮಾಹಿತಿ ರವಾನಿಸಿ `ಕಳ್ಳಾಟ' (ಮ್ಯಾಚ್ ಫಿಕ್ಸಿಂಗ್) ನಡೆಸಿದ ಬಗ್ಗೆ ನಾಗಪುರ ಪೊಲೀಸರು ಪ್ರಕರಣ ದಾಖಲಿಸಿದರು. ಇದರೊಂದಿಗೆ ಭಾರತೀಯ ಪೊಲೀಸರಿಂದ ಮತ್ತೊಮ್ಮೆ `ಕಳ್ಳಾಟ' ಪ್ರಕರಣ ಬಹಿರಂಗಕ್ಕೆ ಬಂದಿತು.
2007: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಅವರು ತಮ್ಮ ಕುಟುಂಬದ ಒಡೆತನದಲ್ಲಿದ್ದ 310 ಎಕರೆ ಭೂಮಿಯನ್ನು ಪರಿಶಿಷ್ಟ ಮತ್ತು ಹಿಂದುಳಿದ ಜಾತಿಗಳ ಬಡವರಿಗೆ ಹಂಚುವ ಮೂಲಕ ವಿನೂತನ ಜನಪರ ದಾಖಲೆ ಸೃಷ್ಟಿಸಿದರು. ಕಡಪಾ ಜಿಲ್ಲೆಯ ಚಿನ್ನರಾಯ ಸಮುದ್ರಂ ರೆಡ್ಡಿವಾರ ಪಲ್ಲಿ ಮತ್ತು ತಿರನಂಪಲ್ಲಿ ಎಂಬ ಪುಟ್ಟ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ತಮ್ಮ ಸ್ವಂತ ಜಮೀನನ್ನು 108 ಕುಟುಂಬಗಳಿಗೆ ಹಂಚಿದರು.
1999: ಭಾರತದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ನವದೆಹಲಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಎರಡನೇ ಟೆಸ್ಟಿನಲ್ಲಿ 10 ವಿಕೆಟುಗಳನ್ನು ಗಳಿಸಿದರು. (74 ರನ್ನುಗಳಿಗೆ 10 ವಿಕೆಟ್) ಇದರೊಂದಿಗೆ ಒಂದೇ ಇನ್ನಿಂಗ್ಸಿನಲ್ಲಿ ಎಲ್ಲ 10 ವಿಕೆಟುಗಳನ್ನು ಉರುಳಿಸಿದ್ದ ಜಿಮ್ ಲೇಕರ್ ಅವರನ್ನು ಕುಂಬ್ಳೆ ಸರಿಗಟ್ಟಿದರು.
1999: ಜೋರ್ಡಾನ್ ದೊರೆ ಹುಸೇನ್ ತಮ್ಮ 63ನೇ ವಯಸ್ಸಿನಲ್ಲಿ ಕ್ಯಾನ್ಸರಿಗೆ ತುತ್ತಾಗಿ ಅಸು ನೀಗಿದರು. ಹಿರಿಯ ಪುತ್ರ ರಾಜಕುಮಾರ ಅಬ್ದುಲ್ಲ ಹುಸೇನ್ ಉತ್ತರಾಧಿಕಾರಿಯಾದರು.
1992: ಭಾರತದ ಮೊತ್ತ ಮೊದಲ ಜಲಾಂತರ್ಗಾಮಿ `ಐ ಎನ್ ಎಸ್ ಶಲ್ಕಿ' ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು.
1991: ಹೈಟಿಯ ಮೊತ್ತ ಮೊದಲ ಚುನಾಯಿತ ಅಧ್ಯಕ್ಷರಾಗಿ ಜೀನ್ ಬರ್ಟ್ರಾಂಟ್ ಅರಿಸ್ಟೈಡ್ ಅಧಿಕಾರ ಸ್ವೀಕರಿಸಿದರು.
1986: ಹೈಟಿಯ ಅಧ್ಯಕ್ಷ ಜೀನ್ ಕ್ಲಾಡ್ ಡ್ಯುವಲಿಯರ್ ಹೈಟಿ ತ್ಯಜಿಸಿದರು. ಇದರೊಂದಿಗೆ 28 ವರ್ಷಗಳ ಕುಟುಂಬದ ಆಳ್ವಿಕೆ ಅಂತ್ಯಗೊಂಡಿತು.
1984: ಕ್ಯಾಪ್ಟನ್ ಎರಡನೇ ಬ್ರೂಸ್ ಮೆಕ್ ಕ್ಯಾಂಡಲ್ಸ್ ಬಾಹ್ಯಾಕಾಶದಲ್ಲಿ ತೇಲಾಡಿದ ಮೊತ್ತ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಾಹ್ಯಾಕಾಶ ಷಟಲ್ ನೌಕೆ ಚಾಲೆಂಜರಿನ ಹೊರಭಾಗದಲ್ಲಿ, ಭೂಮಿಯಿಂದ 170 ಕಿ.ಮೀ. ಎತ್ತರದಲ್ಲಿ ಅವರು `ಮಾನವ ಚಂದ್ರ'ನಂತೆ ಮುಕ್ತವಾಗಿ ತೇಲಾಡಿದರು.
1856: ಆಡಳಿತಗಾರ ವಾಜಿದ್ ಅಲಿ ಶಹ ಆಳಲು ಅಸಮರ್ಥ ಎಂಬ ನೆಲೆಯಲ್ಲಿ ಲಾರ್ಡ್ ಡಾಲ್ ಹೌಸಿಯು ಅವಧ್ ರಾಜ್ಯವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರ್ಪಡೆ ಮಾಡಿದ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಲಖನೌದಲ್ಲಿ ಈ ಕ್ರಮದ ವಿರುದ್ಧ ವ್ಯಾಪಕ ಅತೃಪ್ತಿ ವ್ಯಕ್ತಗೊಂಡಿತು. (ಈ ಘಟನೆಯ ಹಿನ್ನೆಲೆಯನ್ನು ಆಧರಿಸಿ ಸತ್ಯಜಿತ್ ರೇ ಅವರು `ಶತ್ ರಂಜ್ ಕಿ ಖಿಲಾಡಿ' ಚಿತ್ರವನ್ನು ನಿರ್ಮಿಸಿದರು.)
1477: ಮಾನವತಾವಾದಿ, ರಾಜಕಾರಣಿ, ಇಂಗ್ಲೆಂಡಿನ ಚಾನ್ಸಲರ್ ಸೇಂಟ್ ಥಾಮಸ್ ಮೋರೆ (1477-1535) ಹುಟ್ಟಿದ. ದೊರೆ ಎಂಟನೆಯ ಹೆನ್ರಿಯನ್ನು ಇಂಗ್ಲೆಂಡಿನ ಚರ್ಚ್ ಮುಖ್ಯಸ್ಥ ಎಂಬುದಾಗಿ ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಈತನ ತಲೆ ಕಡಿಯಲಾಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment