ಇಂದಿನ ಇತಿಹಾಸ
ಫೆಬ್ರುವರಿ 10
ವಿವಾದಾತ್ಮಕ ಟೆಲಿವಿಷನ್ ಚಾನೆಲ್ ಫೊರ್ ನ `ಸಿಲೆಬ್ರಿಟಿ ಬಿಗ್ ಬ್ರದರ್' ಪ್ರದರ್ಶನದಲ್ಲಿ ವಿಜೇತರಾದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಇಂಗ್ಲೆಂಡಿನಿಂದ ಭಾರತಕ್ಕೆ ವಾಪಸಾದರು. ಮುಂಬೈಗೆ ಬಂದಿಳಿದ ಶಿಲ್ಪಾಶೆಟ್ಟಿ ಅವರು ಸಿಲೆಬ್ರಿಟಿ ಬಿಗ್ ಬ್ರದರ್ ಪ್ರದರ್ಶನ ಕಾಲದಲ್ಲಿ ಸಹನಟಿ ಜೇಡ್ ಗೂಡಿ ಮತ್ತು ಇತರರಿಂದ ವರ್ಣ ತಾರತಮ್ಮಯ ದೂಷಣೆಗೆ ಗುರಿಯಾಗಿದ್ದರೆಂಬ ಆಪಾದನೆಗಳು ಕೇಳಿಬಂದು, ಇಡೀ ಪ್ರದರ್ಶನ ಕುತೂಹಲಿಗಳು ಹಾಗೂ ಟೀಕಾಕಾರರ ಕೇಂದ್ರವಾಗಿತ್ತು.
2008: ಉತ್ತರ ಕರ್ನಾಟಕದಲ್ಲಿ ಉಗ್ರರ ಜಾಲ ಜಾಲಾಡಿದ ಸಿಓಡಿ ಪೊಲೀಸರು ಮೊಹಮ್ಮದ್ ಆಸೀಫನ `ಗುರು' ಡಾ.ಮಿರ್ಜಾ ಅಹ್ಮದ್ ಬೇಗ್ ಎಂಬಾತನ್ನು ಗುಲ್ಬರ್ಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.
2008: ಗಾಂಧಿವಾದಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಸೇವಕ ಮುರಳೀಧರ ದೇವಿದಾಸ್ ಅಲಿಯಾಸ್ ಬಾಬಾ ಆಮ್ಟೆ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆಯನ್ನು ಮಹಾರಾಷ್ಟ್ರದ ವರೋರದಲ್ಲಿರುವ ಆನಂದವನ ಆಶ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಹಾಗೂ ಅನುಯಾಯಿಗಳ ಸಮ್ಮುಖದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
2008: ಕರ್ನಾಟಕದ ಕ್ರೀಡಾ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಒಲಿಂಪಿಕ್ ಕ್ರೀಡಾಕೂಟವು ಈದಿನ ವರ್ಣರಂಜಿತ ತೆರೆಕಂಡಿತು. `ಇನ್ನೂ ಎತ್ತರ... ಗಗನದೆತ್ತರಕ್ಕೆ....' ಎಂಬ ಘೋಷವಾಕ್ಯದೊಂದಿಗೆ ಮಂಡ್ಯದಲ್ಲಿ ಫೆಬ್ರುವರಿ 5 ರಂದು ಆರಂಭಗೊಂಡ ಕ್ರೀಡಾ ಉತ್ಸವ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಕರ್ನಾಟಕ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರು `ಕ್ರೀಡಾಕೂಟ ಮುಕ್ತಾಯವಾಯಿತು' ಎಂದು ಘೋಷಿಸಿದರು.
2008: ಭಾರತ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಸ್ಥಗಿತಗೊಂಡಿದ್ದ ಇಂಟರ್ನೆಟ್ ಸಂಪರ್ಕ ಪುನರಾರಂಭಗೊಂಡಿತು. ರಿಲಯನ್ಸ್ ಕಮ್ಯುನಿಕೇಷನ್ಸಿನ ಅಂಗಸಂಸ್ಥೆಯಾಗಿರುವ ಫ್ಲ್ಯಾಗ್ ಟೆಲಿಕಾಂ ತನ್ನ ಯುರೋಪ್- ಏಷ್ಯಾ ಕೇಬಲ್ ಹಾಗೂ ಫಾಲ್ಕನ್ ಕೇಬಲ್ ದುರಸ್ತಿಗೊಳಿಸಿರುವುದರಿಂದ ಇಂಟರ್ನೆಟ್ ಸಂಪರ್ಕ ಏರ್ಪಟ್ಟಿತು.
2008: ಕ್ವಾಲಾಲಂಪುರದ ಅಧಿಕಾರಿಗಳು ಇಲಿಗಳ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳೆಲ್ಲ ವಿಫಲವಾದ ಹಿನ್ನೆಲೆಯಲ್ಲಿ ಇಲಿಗಳನ್ನು ಹಿಡಿದರೆ ಅಥವಾ ಕೊಂದರೆ 0.62 ಅಮೆರಿಕ ಡಾಲರ್ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ಸಾಯಿಸಿದ ಅಥವಾ ಜೀವಂತವಾಗಿ ಹಿಡಿದ ಇಲಿಗಳನ್ನು ನಾಗರಿಕರು ತಮ್ಮ ಮನೆಯ ಬಾಗಿಲಿನಲ್ಲಿ ಸಂಗ್ರಹಿಸಿಟ್ಟರೆ ನಗರಪಾಲಿಕೆ ಅವುಗಳನ್ನು ನಾಶಪಡಿಸುತ್ತದೆ ಹಾಗೂ ನಾಗರಿಕರಿಗೆ ಬಹುಮಾನದ ಮೊತ್ತವನ್ನು ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
2008: ಶ್ರೀನಗರ ಜಿಲ್ಲೆಯ ಪುಲ್ವಾಮ ಜಿಲ್ಲೆಯಲ್ಲಿ ಪೊಲೀಸರು ಹಿಜ್ ಬುಲ್ ಮುಜಾಹಿದ್ದೀನಿನ ಸ್ವಯಂಘೋಷಿತ ಉನ್ನತ ಕಮಾಂಡರ್ ಮತ್ತು ಆತನ ಸಹಚರನನ್ನು ಗುಂಡಿಟ್ಟು ಕೊಂದರು. ಇದರಿಂದ ಮುಜಾಹಿದ್ದೀನ್ ಸಂಘಟನೆಗೆ ಹಿನ್ನಡೆಯಾದಂತಾಯಿತು.
2007: ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿ ಜಸ್ಟೀಸ್ ಜಗದೀಶ್ ಭಲ್ಲಾ ಅವರಿಗೆ ಕೇರಳ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ಕೈಗೊಂಡ ನಿರ್ಣಯವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಇದಕ್ಕೆ ಸಂಬಂಧಪಟ್ಟ ಕಡತವನ್ನು ಪ್ರಧಾನಿ ಕಚೇರಿಗೆ ಹಿಂದಕ್ಕೆ ಕಳುಹಿಸಿದರು. ಕೆಲವು ತಿಂಗಳುಗಳ ಹಿಂದೆ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಕಡತವನ್ನೂ ರಾಷ್ಟ್ರಪತಿ ಹಿಂದಕ್ಕೆ ಕಳುಹಿಸಿದ್ದರು. ನೋಯ್ಡಾದಲ್ಲಿ ಅತ್ಯಂತ ಕಡಿಮೆ ಹಣಕ್ಕೆ ಆಸ್ತಿಯೊಂದನ್ನು ಭಲ್ಲಾ ಅವರ ಪತ್ನಿ ರೇಣು ಭಲ್ಲಾ ಹೆಸರಿನಲ್ಲಿ ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾದ ಹಿನ್ನೆಲಯಲ್ಲಿ ರಾಷ್ಟ್ರಪತಿ ಈ ಕ್ರಮ ಕೈಗೊಂಡರು.
2007: ವಿವಾದಾತ್ಮಕ ಟೆಲಿವಿಷನ್ ಚಾನೆಲ್ ಫೊರ್ ನ `ಸಿಲೆಬ್ರಿಟಿ ಬಿಗ್ ಬ್ರದರ್' ಪ್ರದರ್ಶನದಲ್ಲಿ ವಿಜೇತರಾದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಇಂಗ್ಲೆಂಡಿನಿಂದ ಭಾರತಕ್ಕೆ ವಾಪಸಾದರು. ಮುಂಬೈಗೆ ಬಂದಿಳಿದ ಶಿಲ್ಪಾಶೆಟ್ಟಿ ಅವರು ಸಿಲೆಬ್ರಿಟಿ ಬಿಗ್ ಬ್ರದರ್ ಪ್ರದರ್ಶನ ಕಾಲದಲ್ಲಿ ಸಹನಟಿ ಜೇಡ್ ಗೂಡಿ ಮತ್ತು ಇತರರಿಂದ ವರ್ಣ ತಾರತಮ್ಮಯ ದೂಷಣೆಗೆ ಗುರಿಯಾಗಿದ್ದರೆಂಬ ಆಪಾದನೆಗಳು ಕೇಳಿಬಂದು, ಇಡೀ ಪ್ರದರ್ಶನ ಕುತೂಹಲಿಗಳು ಹಾಗೂ ಟೀಕಾಕಾರರ ಕೇಂದ್ರವಾಗಿತ್ತು.
2007: ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾನ್ ಕಿ ಮೂನ್ ಅವರು ಇದೇ ಮೊದಲ ಬಾರಿಗೆ ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳ ನೇಮಕ ಬಗ್ಗೆ ಗಮನ ಹರಿಸಿ, ಜಪಾನಿನ ಕಿಯೋತಕ್ ಅಕಾಸಾಕಾ ಅವರನ್ನು ಆಧೀನ ಮಹಾಕಾರ್ಯದರ್ಶಿಯನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಶಿ ತರೂರ್ ಸ್ಥಾನಕ್ಕೆ ನೇಮಿಸಿದರು.
2007: ಹೆಸರಾಂತ ಪರಿಸರ ತಜ್ಞ ಕೃಷ್ಣ ನಾರಾಯಣ್ (48) ಅವರು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದರು. ಕೆಎನ್ ಎಂದೇ ಪರಿಚಿತರಾಗಿದ್ದ ಅವರು ಬೆಂಗಳೂರು ಮೂಲದ `ವೈಲ್ಡ್ ಲೈಫ್ ಪ್ರಿಸರ್ವೇಶನ್ ಗ್ರೂಪ್' (ಡಬ್ಲ್ಯೂ ಎಲ್ ಪಿಇಜಿ) ಸಹ ಸಂಸ್ಥಾಪಕರಾಗಿದ್ದರು. ಪರಿಸರ ತಜ್ಞ ಉಲ್ಲಾಸ ಕಾರಂತ ಮತ್ತಿತರರ ಜೊತೆಗೆ ವನ್ಯಜೀವಿ ಸಂರಕ್ಷಣೆಯ ಕಾರ್ಯ ನಿರ್ವಹಿಸುತ್ತಿದ್ದರು.
2006: ಬೆಂಗಳೂರು ಆನಂದರಾವ್ ವೃತ್ತದ ಸಂಚಾರ ದಟ್ಟಣೆ ಕುಗ್ಗಿಸುವ ಯತ್ನವಾಗಿ ಆನಂದರಾವ್ ವೃತ್ತ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಚಾರಕ್ಕೆ ಮುಕ್ತಗೊಳಿಸಿದರು. 647 ಮೀಟರ್ ಉದ್ದ, 17.60 ಮೀಟರ್ ಅಗಲದ ಈ ಮೇಲ್ಸೇತುವೆಗೆ ಆದ ವೆಚ್ಚ 27 ಖೋಟಿ ರೂಪಾಯಿ.
2006: ದೇಶದ ಯಾವುದೇ ಭಾಗಕ್ಕೆ ಮಾಡುವ ಸ್ಥಿರ ದೂರವಾಣಿಯ ಮತ್ತು ಮೊಬೈಲ್ ಕರೆಗಳ ದರಗಳು ಮಾರ್ಚ್ 1ರಿಂದ ಕೇವಲ 1 ರೂಪಾಯಿ ಆಗುವುದು. ಹೊಸ ಒನ್ ಇಂಡಿಯಾ ಯೋಜನೆಯ ಅಡಿ ದೇಶಾದ್ಯಂತ ಎಸ್ ಟಿ ಡಿ ಕರೆ ದರ 1 ರೂಪಾಯಿ ಎಂದು ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ ನಿಯಮಿತ (ಎಂ ಟಿ ಎನ್ ಎಲ್) ಜಂಟಿಯಾಗಿ ಪ್ರಕಟಿಸಿದವು.
2006: ವಿಜಾಪುರದಲ್ಲಿರುವ ರಾಷ್ಟ್ರದ ಎರಡನೇ ಅತಿ ಎತ್ತರದ ಶಿವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಈ ದಿನ ಡಾ. ಚಂದ್ರಶೇಖರ ಶಿವಾಚಾರ್ಯರು ನೆರವೇರಿಸಿದರು. ಈ ಮೂರ್ತಿ 2007 ಫೆಬ್ರವರಿ 26ರ ಶಿವರಾತ್ರಿಯಂದು ಅನಾವರಣಗೊಂಡಿತು. ಉದ್ಯಮಿ ಬಸಂತಕುಮಾರ ಪಾಟೀಲ ಮತ್ತು ಸಹೋದರರು ವಿಜಾಪುರ ಹೊರವಲಯದ ಉಕ್ಕಲಿ ರಸ್ತೆಯ ಬಸಂತವನದಲ್ಲಿ 85 ಅಡಿ ಎತ್ತರದ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ. ಮುರ್ಡೇಶ್ವರಲ್ಲಿ ಇರುವ 120 ಅಡಿಯ ಮೂರ್ತಿ ಭಾರತದ ಅತೀ ಎತ್ತರದ ಶಿವಮೂರ್ತಿ ಎಂಬ ಕೀರ್ತಿ ಹೊಂದಿದೆ.
2006: ಲಖನೌನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಕನ್ನಡಿಗ ಇಸ್ರೊ ಮಾಜಿ ಅಧ್ಯಕ್ಷ ಪ್ರೊ. ಯು.ಆರ್. ರಾವ್ ನೇಮಕಗೊಂಡರು.
1963: ಕಲಾವಿದ ಮಂಜುನಾಥ ಬಿ.ಟಿ. ಜನನ.
1952: ಮದ್ರಾಸಿನಲ್ಲಿ (ಈಗಿನ ಚೆನ್ನೈ) ಇಂಗ್ಲೆಂಡನ್ನು ಸೋಲಿಸುವ ಮೂಲಕ ಭಾರತವು ತನ್ನ ಮೊತ್ತ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿತು. ವಿಜಯ ಹಜಾರೆ ನೇತೃತ್ವದಲ್ಲಿ ಭಾರತ ತಂಡವು ಒಂದು ಇನ್ನಿಂಗ್ಸ್ ಮತ್ತು 8 ರನ್ನುಗಳ ಜಯ ಸಾಧಿಸಿತು. 55 ರನ್ನುಗಳಿಗೆ 8 ವಿಕೆಟ್ ಪಡೆದ ವಿನೂ ಮಂಕಡ್ ಅತ್ಯುತ್ತಮ ಬೌಲಿಂಗ್ ಸಾಧನೆ ಮಾಡಿದರು.
1950: ಅಮೆರಿಕಾದ ಈಜುಗಾರ ಮಾರ್ಕ್ ಸ್ಪಿಟ್ಜ್ ಹುಟ್ಟಿದರು. ಇವರು ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 7 ಸ್ವರ್ಣಪದಕಗಳನ್ನು ಗಿದ್ದುಕೊಂಡ ಮೊದಲ ಅಥ್ಲೆಟಿಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1950: ಕಲಾವಿದ ನಂಜುಂಡಸ್ವಾಮಿ ತೊಟ್ಟವಾಡಿ ಜನನ.
1932: ಬ್ರಿಟಿಷ್ ಥ್ರಿಲ್ಲರ್ ಬರಹಗಾರ ಎಡ್ಗರ್ ವಾಲೇಸ್ (1875-1932) ತಮ್ಮ 56ನೇ ವಯಸ್ಸಿನಲ್ಲಿ ನಿಧನರಾದರು.
1931: ನವದೆಹಲಿಯು ಭಾರತದ ರಾಜಧಾನಿಯಾಗಿ ಔಪಚಾರಿಕವಾಗಿ ಉದ್ಘಾಟನೆಗೊಂಡಿತು. 1912ರಲ್ಲಿ ರಾಜಧಾನಿಯು ಕಲ್ಕತ್ತಾದಿಂದ (ಈಗಿನ ಕೋಲ್ಕತ) ದೆಹಲಿಗೆ ಸ್ಥಳಾಂತರಗೊಂಡಿತ್ತು.
1929: ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಜೆ. ಆರ್. ಡಿ. ಟಾಟಾ ಅವರಿಗೆ `ಪೈಲೆಟ್ಸ್ ನಂಬರ್ ಒನ್' ನೀಡಲಾಯಿತು. ಭಾರತ ಮತ್ತು ಬರ್ಮಾದ ಏರೋಕ್ಲಬ್ ಪರವಾಗಿ ಸರ್ ವಿಕ್ಟರ್ ಸಸೂನ್ ಸಹಿ ಮಾಡಿದ ಈ ದಾಖಲೆಯನ್ನು ಫೆಡರೇಷನ್ ಏರೋನಾಟಿಕ್ ಇಂಟರ್ ನ್ಯಾಷನಲ್ ನೀಡಿತು. ಜೆ. ಆರ್. ಡಿ. ಟಾಟಾ ಅವರ ಸಹೋದರಿ ಸ್ಲಿಲಾ (ಮುಂದೆ ಲೇಡಿ ದಿನ್ಶಾ ಪೆಟಿಟ್) ಭಾರತದಲ್ಲಿ ವಿಮಾನಯಾನದ ಲೈಸೆನ್ಸ್ ಪಡೆದ ಮೊತ್ತ ಮೊದಲ ಮಹಿಳೆಯಾಗಿದ್ದಾರೆ. ಅವರ ಕಿರಿಯ ಸಹೋದರಿ ರೋಡಾಬೆಹ್ ಸಾಹನಿ ಭಾರತದಲ್ಲಿ ವಿಮಾನಯಾನ ಲೈಸೆನ್ಸ್ ಪಡೆದ ಎರಡನೇ ಮಹಿಳೆ.
1925: ರಂಗಭೂಮಿ ನಾಟಕನಟರಷ್ಟೇ ಖಳನಾಯಕರಿಗೂ ಪ್ರಾಮುಖ್ಯತೆ ತಂದುಕೊಟ್ಟ ವೃತ್ತಿ ರಂಗಭೂಮಿ ಕಲಾವಿದ ಎಚ್.ಟಿ. ಅರಸ್ ಅವರು ಯಮನಯ್ಯ- ನಾಗಮ್ಮ ದಂಪತಿಯ ಮಗನಾಗಿ ರಾಯಚೂರು ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಬಡ ನೇಕಾರರ ಕುಟುಂಬದಲ್ಲಿ ಜನಿಸಿದರು. ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘ, ಗೋಕಾಕ್ ಕಂಪೆನಿ, ಶಾರದಾ ನಾಟಕ ಮಂಡಳಿ, ಹಲಗೇರಿ ಜಟ್ಟಪ್ಪ ಕಂಪೆನಿ, ತಾವೇ ಸ್ಥಾಪಿಸಿದ್ದ ನಾಟಕ ಕಂಪೆನಿಗಳಲ್ಲಿ ದುಡಿದ ಅರಸ್ ಮುಂದೆ ಚಿನ್ನದ ಗೊಂಬೆ, ಶ್ರೀಕೃಷ್ಣ ದೇವರಾಯ, ಮಾರ್ಗದರ್ಶಿ, ಮೇಯರ್ ಮುತ್ತಣ್ಣ, ಮಯೂರ ಸೇರಿದಂತೆ 55 ಚಲನಚಿತ್ರಗಳಲ್ಲಿ ನಟಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಿಗೆ ಪಾತ್ರರಾದರು.
1921: ಕನ್ನಾಟ್ನ ಡ್ಯೂಕ್ ನವದೆಹಲಿಯಲ್ಲಿ `ಇಂಡಿಯಾಗೇಟ್' ಗೆ ಅಡಿಗಲ್ಲು ಹಾಕಿದರು.
1840: ರಾಣಿ ವಿಕ್ಟೋರಿಯಾ ಮತ್ತು ಪ್ರಿನ್ಸ್ ಆಲ್ಬರ್ಟ್ ಅವರ ಮದುವೆ ಸೇಂಟ್ ಜೇಮ್ಸ್ ಪ್ಯಾಲೇಸಿನಲ್ಲಿ ನಡೆಯಿತು.
1775: ಇಂಗ್ಲಿಷ್ ಪ್ರಬಂಧಕಾರ ಮತ್ತು ವಿಮರ್ಶಕ ಚಾರ್ಲ್ಸ್ ಲ್ಯಾಂಬ್ (1775-1834) ಹುಟ್ಟಿದ ದಿನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment